M J Akbar Column: ತಿಹಾರ್ ಜೈಲಿನ ಥಾಲಿಯಿಂದ ಬ್ರಿಟನ್‌ನ ಡ್ರೋನ್ ಡ್ರಗ್ಸ್‌ವರೆಗೆ!
ಬೋರಿಸ್ ಜಾನ್ಸನ್ ಸೀರಿಯಸ್ಸಾದ ಜೋಕ್ ಮಾಡುವುದಕ್ಕೆ ಪ್ರಸಿದ್ಧರು. ಆದರೆ ಜೈಲಿನ ಬಗ್ಗೆ ಅವರು ಹೇಳಿದ ಲಾಜಿಕ್ ನಿಜವೇ ಆಗಿತ್ತು. ಬ್ರಿಟನ್ನಿನ ತಣ್ಣನೆಯ ವಾತಾವರಣದಲ್ಲಿ, ಜೋರಾದ ಗಾಳಿಯ ನಡುವೆ, ಮನೆಯಲ್ಲಿ ಬೆಚ್ಚಗೆ ಮಲಗುವ ಸೌಕರ್ಯವಿಲ್ಲದೆ, ಕೆಲವೊಮ್ಮೆ ಮಳೆಯಲ್ಲಿ ನೆನೆಯುತ್ತಾ, ಬೀದಿಯಲ್ಲಿ ಬದುಕುವ ದುರ್ದೈವವು ಜೈಲುಶಿಕ್ಷೆಗಿಂತ ಎಷ್ಟೋ ಪಾಲು ಕ್ರೂರ.
-
ಅಕ್ಬರ್‌ನಾಮಾ
- ಎಂ.ಜೆ ಅಕ್ಬರ್
ತಿಹಾರ್ ಜೈಲಿನಲ್ಲಿ ಖಾರ, ಮಸಾಲೆಯಿಲ್ಲದ ಪಾಸ್ತಾದ ಬಗ್ಗೆ ಭಯಂಕರ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ನಡುವೆಯೇ ಹಿಂದೊಂದು ಕಾಲದಲ್ಲಿ ಕಲ್ಕತ್ತಾವನ್ನು ಉದ್ಧಾರ ಮಾಡುವ ನೆಪದಲ್ಲಿ ಬಂದ ಬಿಳಿಯರು ಬ್ರಿಟನ್ನಿನ ಮೇಲ್ಮೈಯನ್ನು ಎಲ್ಲೆಡೆ ಮೆರೆಸಲು ತಾವು ಕಾಲಿಟ್ಟ ಎಲ್ಲಾ ಜಾಗತಿಕ ನಗರಗಳಲ್ಲೂ ಒಂದೊಂದು ಆಕ್ಸ್ʼಫರ್ಡ್ ಸ್ಟ್ರೀಟ್‌ಗಳನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿ ದ್ದನ್ನೂ ಒಂದು ಕ್ಷಣ ನೆನಪಿಸಿಕೊಳ್ಳೋಣ. ಹಾಗೆಯೇ, ಕಾನೂನು ಮತ್ತು ಸುವ್ಯವಸ್ಥೆಯೇ ಆಧುನಿಕ ನಾಗರಿಕತೆಯ ನಿಜವಾದ ಮಾನದಂಡ ಎಂದು ಅವರು ಉದ್ದಾನುದ್ದ ಲೆಕ್ಚರ್ ಬಿಗಿಯುತ್ತಿದ್ದ ಬಗ್ಗೆಯೂ ಒಮ್ಮೆ ಸ್ಮರಿಸೋಣ.
ಬೋರಿಸ್ ಜಾನ್ಸನ್ ಬ್ರಿಟನ್ನಿನ ಏಳು ವಿಫಲ ಪ್ರಧಾನ ಮಂತ್ರಿಗಳಲ್ಲಿ ಮೂರನೆಯವರು. ಯಾವುದೇ ಒಂದು ದೇಶದಲ್ಲಿ ಸತತವಾಗಿ ಏಳು ಪ್ರಧಾನ ಮಂತ್ರಿಗಳು ಅಧಿಕಾರ ನಡೆಸಲು ಆಗದೆ ರಾಜೀನಾಮೆ ನೀಡಿದ್ದೊಂದು ವಿಶ್ವದಾಖಲೆ. ಅದು ಹಾಗಿರಲಿ; ಈ ಬೋರಿಸ್ ಜಾನ್ಸನ್ ಒಮ್ಮೆ, ‘21ನೇ ಶತಮಾನದ ಇಂಗ್ಲೆಂಡ್‌ನ ಎರಡು ಅತಿದೊಡ್ಡ ಸಾಮಾಜಿಕ ಬಿಕ್ಕಟ್ಟುಗಳೆಂದರೆ ಮನೆಯಿಲ್ಲದಿರುವುದು ಹಾಗೂ ಕಾನೂನು ಪಾಲನೆ ಮಾಡದಿರುವುದು’ ಎಂದಿದ್ದರು. ಅದನ್ನು ಇನ್ನೂ ಸ್ವಲ್ಪ ಕುಚೋದ್ಯದೊಂದಿಗೆ ವಿಸ್ತರಿಸಿ, ‘ಈ ಜನರ ಸಮಸ್ಯೆ ಏನೆಂದರೆ, ಮನೆಯಿಲ್ಲದವರು ಜೈಲಿನಲ್ಲಿರಬೇಕೋ ಅಥವಾ ಜೈಲಿ ನಲ್ಲಿರುವವರು ಮನೆಯಿಲ್ಲದವರೇ ಆಗಿರಬೇಕೋ ಎಂಬುದನ್ನು ಕೆಲವೊಮ್ಮೆ ನೀವು ಹೇಳುವುದಕ್ಕೆ ಆಗುವುದಿಲ್ಲ’ ಎಂದೂ ಅವರು ಹೇಳಿದ್ದರು.
ಬೋರಿಸ್ ಜಾನ್ಸನ್ ಸೀರಿಯಸ್ಸಾದ ಜೋಕ್ ಮಾಡುವುದಕ್ಕೆ ಪ್ರಸಿದ್ಧರು. ಆದರೆ ಜೈಲಿನ ಬಗ್ಗೆ ಅವರು ಹೇಳಿದ ಲಾಜಿಕ್ ನಿಜವೇ ಆಗಿತ್ತು. ಬ್ರಿಟನ್ನಿನ ತಣ್ಣನೆಯ ವಾತಾವರಣದಲ್ಲಿ, ಜೋರಾದ ಗಾಳಿಯ ನಡುವೆ, ಮನೆಯಲ್ಲಿ ಬೆಚ್ಚಗೆ ಮಲಗುವ ಸೌಕರ್ಯವಿಲ್ಲದೆ, ಕೆಲವೊಮ್ಮೆ ಮಳೆಯಲ್ಲಿ ನೆನೆಯುತ್ತಾ, ಬೀದಿಯಲ್ಲಿ ಬದುಕುವ ದುರ್ದೈವವು ಜೈಲುಶಿಕ್ಷೆಗಿಂತ ಎಷ್ಟೋ ಪಾಲು ಕ್ರೂರ.
ಇದನ್ನೂ ಓದಿ: MJ Akbar: ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂಜೆ ಅಕ್ಬರ್ ನೂತನ ಕೃತಿ ಬಿಡುಗಡೆ
ಏಕೆಂದರೆ ಬ್ರಿಟನ್ನಿನ ಜೈಲುಗಳು ಬೆಚ್ಚಗಿರುತ್ತವೆ. ಅಲ್ಲಿ ಒಳ್ಳೆಯ ಊಟ ಸಿಗುತ್ತದೆ. ಅದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರದ ಎಲ್ಲಾ ಐಷಾರಾಮಿ ಫಲಗಳನ್ನೂ ಅಲ್ಲಿ ಕೈದಿಗಳು ಅನುಭವಿಸಬಹುದು. ಉದಾಹರಣೆಗೆ, ನಿಮ್ಮ ಸೆಲ್‌ನ ಬಾಗಿಲಿಗೇ ಅತ್ಯಾಧುನಿಕ ಡ್ರೋನ್ ಮೂಲಕ ಮಾದಕದ್ರವ್ಯ ಡೆಲಿವರಿ ಆಗುತ್ತದೆ! ಅದಕ್ಕೆ ಸೆಲ್‌ನ ಕಿಟಕಿಯ ಮೂಲಕವೇ ಕಾರ್ಡ್ ಸ್ವೈಪ್ ಮಾಡಿ ಹಣ ಪಾವತಿ ಮಾಡಬಹುದು.
ಹೊಸ ಯುಗದ ಸಾಮಾಜಿಕ ಬಿಕ್ಕಟ್ಟಿಗೆ ಬ್ರಿಟನ್ ಕಂಡುಕೊಂಡ ಪರಿಹಾರ ಕೂಡ ಬೋರಿಸ್ ಜಾನ್ಸನ್‌ರ ಕಲ್ಪನೆಯಷ್ಟೇ ಹೊಸತಾಗಿದೆ. ಅದನ್ನು ಆ ದೇಶ ಮೊದಲು ಜಾರಿಗೊಳಿಸಿದ್ದು ಐದನೇ ವಿಫಲ ಪ್ರಧಾನ ಮಂತ್ರಿಯ ಕಾಲದಲ್ಲಿ. ಆಗ ಬ್ರಿಟನ್ನಿನಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿತ್ತು ಅಂದರೆ, ಜೈಲುಗಳೆಲ್ಲ ತುಂಬಿಹೋಗಿದ್ದವು. ಪರಿಹಾರವೇನು? ಸ್ವಲ್ಪವೂ ತಲೆಕೆಡಿಸಿ ಕೊಳ್ಳದೆ ಐದನೇ ವಿಫಲ ಪ್ರಧಾನಿಯು ಹಳೆಯ ಕೈದಿಗಳನ್ನೆಲ್ಲ ಬಿಡುಗಡೆ ಮಾಡಿ ಹೊಸ ಕೈದಿಗಳಿಗೆ ಜೈಲಿನಲ್ಲಿ ಜಾಗ ಮಾಡಿಕೊಟ್ಟರು. ಹೊಸ ಜೈಲುಗಳನ್ನು ನಿರ್ಮಿಸುವ ಬಗ್ಗೆ ಅವರು ಯೋಚನೆ ಕೂಡ ಮಾಡಲಿಲ್ಲ. ಏಕೆಂದರೆ ಬ್ರಿಟನ್ ಸರಕಾರ ದಿವಾಳಿಯಾಗಿತ್ತು. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಹಣ ಒದಗಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರು ಕಳ್ಳತನವನ್ನು ಅಪರಾಧ ಮುಕ್ತಗೊಳಿಸಿದರು.
ಲಂಡನ್ನಿನಲ್ಲಿ ಹಾಡಹಗಲೇ ನಿಮ್ಮ ದುಬಾರಿ ವಾಚು ಅಥವಾ ಮೊಬೈಲ್ ಫೋನ್ ಕಳ್ಳತನ ವಾಯಿತು ಅಂತಿಟ್ಟುಕೊಳ್ಳಿ. ದೂರು ನೀಡಲು ನೀವು ಆಕ್ಸ್ʼಫರ್ಡ್ ಸ್ಟ್ರೀಟ್ ಅಥವಾ ಇನ್ನಾವುದೇ ಪ್ರವಾಸಿ-ಸ್ವರ್ಗದ ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ಸಮವಸ್ತ್ರದಲ್ಲಿರುವ ವ್ಯಕ್ತಿ ಪ್ರಾಮಾಣಿಕ ನಾಗಿದ್ದರೆ ಜೋರಾಗಿ ನಕ್ಕುಬಿಡುತ್ತಾನೆ. ಸ್ವಲ್ಪ ಮೃದು ಸ್ವಭಾವದವನಾಗಿದ್ದರೆ ಮುಖ ತಿರುಗಿಸಿ ಕೊಂಡು ದೂರ ಹೋಗಿ ಬಿಡುತ್ತಾನೆ. ಎಂಬಲ್ಲಿಗೆ, ಮುಂದಿನ ವಿಫಲ ಪ್ರಧಾನಿ ಬರುವವರೆಗೆ ಸಮಸ್ಯೆ ಬಗೆಹರಿಯಿತು!
ಸದಾ ಸಾಮಾಜಿಕ ನ್ಯಾಯದ ಬಗ್ಗೆ ಯೋಚಿಸುವ ಬ್ರಿಟನ್ ಸರಕಾರವು ಶ್ರೀಮಂತರಿಗೆ ಲಭಿಸುವ ಸೌಲಭ್ಯಗಳು ದುರದೃಷ್ಟವಶಾತ್ ಜೈಲು ಶಿಕ್ಷೆಗೆ ಗುರಿಯಾಗಿರುವ ಕೈದಿಗಳಿಗೂ ಸಿಗಬೇಕು, ಅದು ಅವರ ಮೂಲಭೂತ ಹಕ್ಕು ಎಂದು ಯೋಚಿಸಿ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿತು. ಹೊರಗೆ ಲಕ್ಷಾಂತರ ಜನರು ನಿರ್ಭೀತಿಯಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡು ಹಣ ಸಂಪಾ ದನೆ ಮಾಡುವಲ್ಲಿ ಬ್ಯುಸಿಯಾಗಿರುವಾಗ ಜೈಲಿನಲ್ಲಿರುವವರು ಮಾತ್ರ ಕಷ್ಟದಲ್ಲಿ ಕೈತೊಳೆಯಬೇಕು ಅಂದರೆ ಹೇಗೆ? ಬ್ರಿಟಿಷರು ತಾರತಮ್ಯವನ್ನು ಇಷ್ಟಪಡುವುದಿಲ್ಲ. ಹೊರಗೆ ಸುಲಭವಾಗಿ ಡ್ರಗ್ಸ್ ಸಿಗುತ್ತದೆ ಅಂತಾದರೆ ಜೈಲಿನೊಳಗೂ ಅದು ಸುಲಭವಾಗಿ ಸಿಗಬೇಕು.
ಲಂಡನ್ನಿನ ‘ಸಂಡೇ ಟೈಮ್ಸ್’ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ ವರದಿ ಪ್ರಕಾರ ಬ್ರಿಟಿಷ್ ಡ್ರಗ್ಸ್ ಸಿಂಡಿಕೇಟ್‌ಗಳು ಕೆಲ ಜೈಲುಗಳಿಗೆ ಡ್ರೋನ್ ಮೂಲಕ ಡ್ರಗ್ಸ್ ಪೂರೈಸುತ್ತಿವೆ. ಕೈದಿಗಳು ತಮಗೆ ಯಾವ ಡ್ರಗ್ಸ್ ಬೇಕೋ ಅದನ್ನು ಆರ್ಡರ್ ಮಾಡಬಹುದಂತೆ. ಕಾರ್ಪೊರೇಟ್ ಕಂಪನಿಗಳೂ ನಾಚು ವಂತೆ ಬಹಳ ಯಶಸ್ವಿಯಾಗಿ ಈ ಡ್ರಗ್ಸ್ ಡೆಲಿವರಿ ಬಿಸಿನೆಸ್ ನಡೆಯುತ್ತಿದೆಯಂತೆ.
ಮೊದಲಿಗೆ ಜೈಲಿನ ಕೋಣೆಗಳಿಗೆ ಅಲ್ಲಿನ ಕಿಟಕಿಯ ಬಾಗಿಲು ತೆಗೆಯುವ ಕೀಗಳನ್ನು ಸ್ಮಗಲ್ ಮಾಡಲಾಗುತ್ತದೆ. ಆ ಕೀ ಬಳಸಿ ಕೈದಿಗಳು ಕಿಟಕಿ ಓಪನ್ ಮಾಡಿಕೊಳ್ಳುತ್ತಾರೆ. ಅಲ್ಲಿಗೆ ಡ್ರೋನ್ ಮೂಲಕ ಡ್ರಗ್ಸ್ ಜೊತೆಗೆ ಇನ್ನಿತರ ಸಾಮಾಜಿಕ ಅಗತ್ಯಗಳಾದ ಟ್ರೇನರ್ ಶೂಗಳು ಹಾಗೂ ಬಟ್ಟೆಗಳೂ ಡೆಲಿವರಿ ಯಾಗುತ್ತವೆ. ಈ ಕುರಿತ ತನಿಖಾ ವರದಿಯಲ್ಲಿ ಫೋಟೋಗಳೂ ಇದ್ದವು. ಕಳ್ಳಮಾಲನ್ನು ಪ್ಯಾಕೇಜ್‌ಗಳಲ್ಲಿ ಅಡಗಿಸಿ, ಕೆಲವೊಮ್ಮೆ ಬಿನ್ ಬ್ಯಾಗ್‌ನಲ್ಲಿ ಬಚ್ಚಿಟ್ಟು ಡೆಲಿವರಿ ಮಾಡುವುದು ಫೋಟೋಗಳಲ್ಲಿ ಕಾಣಿಸುತ್ತದೆ. ಬಹಳ ಚಾಣಾಕ್ಷತೆಯಿಂದ ಈ ಕಳ್ಳಸಾಗಣೆ ದಂಧೆ ನಡೆಯುತ್ತದೆ. ಪಾಪ, ಇರಾನ್ ಮತ್ತು ಉಕ್ರೇನ್ ದೇಶಗಳು ತಮ್ಮ ಡ್ರೋನ್‌ಗಳನ್ನು ಯುದ್ಧದಲ್ಲಿ ಉಡಾಯಿಸಿ ವ್ಯರ್ಥ ಮಾಡುತ್ತಿವೆ. ಬ್ರಿಟಿಷರು ಬಹಳ ಒಳ್ಳೆಯ ವ್ಯಾಪಾರಿಗಳು. ಅವರು ಡ್ರೋನ್ ಬಳಸಿ ಚೆನ್ನಾಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ.
ಬ್ರಿಟನ್ನಿನ ಕಾನೂನು ಈಗ ಕೈದಿಗಳಿಗೆ ಸಾವಿನ ಭಯ ಹೋಗಲಾಡಿಸಿದೆ. ಅಲ್ಲೀಗ ಯಾವುದೇ ಘೋರ ಅಪರಾಧಕ್ಕೂ ಜೈಲೇ ಪರಮೋಚ್ಛ ಶಿಕ್ಷೆ. ಹಿಂದೆ ನೀವು ಬ್ರಿಟನ್ನಿನ ಜೈಲಿನಲ್ಲಿದ್ದಿದ್ದರೆ ಅಲ್ಲಿಂದ ನಿಮ್ಮನ್ನು ನೇಣುಗಂಬಕ್ಕೂ ಒಯ್ಯಬಹುದಿತ್ತು ಅಥವಾ ತಲೆ ಕತ್ತರಿಸಿ ಮರಣದಂಡನೆ ನೀಡುವ ಕಟುಕರ ಕೋಣೆಗೂ ಒಯ್ಯಬಹುದಿತ್ತು. 1988ರ ವರೆಗೂ ಅಲ್ಲಿ ದೇಶದ್ರೋಹಕ್ಕೆ ಮರಣದಂಡನೆಯ ಶಿಕ್ಷೆಯಿತ್ತು. ಆದರೆ ನೀವು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಓದಿ, ದೇಶದ್ರೋಹ ಎಸಗಿ ಸಿಕ್ಕಿಬಿದ್ದರೆ ನಿಮಗೆ ಮಾಸ್ಕೋದಲ್ಲಿ ಕೆಲಸ ಮಾಡಿ ನಿವೃತ್ತಿಯಾಗುವ ಅವಕಾಶ ನೀಡಲಾಗುತ್ತಿತ್ತು ಅಥವಾ ನಿಮ್ಮ ಮೇಲಿನ ಸಂಶಯ ಸಾಬೀತಾಗದೆ ಇದ್ದಿದ್ದರೆ ಕ್ವೀನ್ಸ್ ಗ್ಯಾಲರಿಯಲ್ಲಿ ಕ್ಯುರೇಟರ್ ಆಗಿ ಕೆಲಸ ಮಾಡುವ ಅವಕಾಶ ಸಿಗುತ್ತಿತ್ತು.
ರಾಜಮನೆತನಕ್ಕೆ ಹತ್ತಿರದಲ್ಲಿರುವ ಕಾರಣದಿಂದ ಸಿಗುತ್ತಿದ್ದ ಅನುಕೂಲವಿದು. ರಾಜಮನೆತನಕ್ಕೆ ಹತ್ತಿರದಲ್ಲಿದ್ದವರಿಗೆ ಮರಣ ದಂಡನೆಯ ಶಿಕ್ಷೆ ಯಾವಾಗ ನೀಡಲಾಗುತ್ತಿತ್ತು ಗೊತ್ತಾ? ಅವರೇನಾ ದರೂ ದಂಗೆಯೆದ್ದು ಸಿಂಹಾಸನವನ್ನೇ ಕಬಳಿಸಲು ಪ್ರಯತ್ನಿಸುವ ಸಾಧ್ಯತೆಯಿದ್ದರೆ ಮಾತ್ರ ಬಹಿರಂಗವಾಗಿ ಗಲ್ಲಿಗೇರಿಸಲಾಗುತ್ತಿತ್ತು. ಆ ಪ್ರಕ್ರಿಯೆ ಅತ್ಯಂತ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿತ್ತು. ಗಲ್ಲಿಗೇರುವವನ ಸುತ್ತಲೂ ನಿಂತು ಜನರು ಹುರಿದುಂಬಿಸುತ್ತಿದ್ದರು. ಇದೆಲ್ಲವೂ ಸಿನಿಮಾ ಯುಗ ಆರಂಭವಾಗುವವರೆಗೆ ಮಾತ್ರ. ಸಿನಿಮಾ ಬಂದ ಮೇಲೆ ಜನರಿಗೆ ರಜೆ ಕಳೆಯಲು ಇನ್ನೂ ಮನಮೋಹಕ ಅವಕಾಶಗಳು ಸಿಕ್ಕವು. ಬ್ರಿಟನ್ನಿನಲ್ಲಿ ಕೊನೆಯ ಗಲ್ಲುಶಿಕ್ಷೆ ವಿಧಿಸಿದ್ದು 1964ರಲ್ಲಿ. 1969ರಲ್ಲಿ ಮರಣದಂಡನೆ ರದ್ದುಪಡಿಸಲಾಯಿತು. ಎಂತಹುದೇ ಅಪರಾಧಕ್ಕೂ ಜೈಲುಶಿಕ್ಷೆ ಮಾಮೂಲಾಯಿತು.
ಭಾರತದಲ್ಲಿ ನಾವಿನ್ನೂ ಹಳೆಯ ಕಾಲದಲ್ಲೇ ಇದ್ದೇವೆ. ಹಾಗಾಗಿ ನಮಗಿನ್ನೂ ಹಳೆಯ ಸಮಸ್ಯೆಗಳೇ ಗಂಟುಬಿದ್ದಿವೆ. ಅಮೆರಿಕದ ಪ್ರಜೆ ಮ್ಯಾಥ್ಯೂ ಆರೋನ್ ವ್ಯಾನ್‌ಡೈಕ್ ಎಂಬವನನ್ನು ನ್ಯಾಷನಲ್ ಇಂಟೆಲಿಜೆನ್ಸ್ ಏಜೆನ್ಸಿಯವರು ಮಾರ್ಚ್ ತಿಂಗಳಲ್ಲಿ ಬಂಧಿಸಿದ್ದರು. ಅವನ ಜೊತೆಗೆ ಆರು ಮಂದಿ ಉಕ್ರೇನಿಯನ್ನರನ್ನೂ ಬಂಧಿಸಿದ್ದರು.
ಮ್ಯಾನ್ಮಾರ್ ಗಡಿಯ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದರು. ಎಲ್ಲರನ್ನೂ ತಿಹಾರ್ ಜೈಲಿಗೆ ಹಾಕಲಾಗಿತ್ತು. ಇವರ ಪೈಕಿ ಮ್ಯಾಥ್ಯೂ ಈಗ ಪಟಿಯಾಲಾ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾನೆ. ಅವನಿಗೆ ಜೈಲಿನಲ್ಲಿ ಅಡುಗೆ ಮಾಡಿಕೊಳ್ಳಲು ಸ್ಟವ್ ಮತ್ತು ಪಾತ್ರೆ ಬೇಕಂತೆ. ಅದನ್ನು ಕೊಟ್ಟರೆ ಅವನು ಪಾಸ್ತಾ ಮಾಡಿಕೊಳ್ಳುತ್ತಾನಂತೆ. ಏಕೆ ಅವನಿಗೆ ಪಾಸ್ತಾ? ಏಕೆಂದರೆ, ಜೈಲಿನಲ್ಲಿ ಕೊಡುವ ಎಣ್ಣೆಯಲ್ಲಿ ಕರಿದ ಖಾರ ಹಾಗೂ ಮಸಾಲೆಭರಿತ ಊಟ ಉಂಡು ಅವನ ಹೊಟ್ಟೆ ಕೆಟ್ಟು ಹೋಗಿದೆಯಂತೆ. ಬರೀ ರೋಟಿ, ಅನ್ನ, ತರಕಾರಿ ತಿಂದುಕೊಂಡು ತನಗೆ ಬದುಕಲು ಸಾಧ್ಯವಿಲ್ಲ ಎಂಬುದು ಅವನ ಗೋಳು.
ಅವನಿಗೆ ತನ್ನ ಅಡುಗೆ ತಾನೇ ಮಾಡಿಕೊಳ್ಳಬೇಕೆಂದು ಅನ್ನಿಸಿದ್ದೇಕೆ ಎಂಬುದು ಕೂಡ ನನಗೆ ಅರ್ಥ ವಾಗುತ್ತದೆ. ಊಟದ ಬದಲು ಅವನಿಗೆ ಪಾಸ್ತಾ ಕೊಡಬೇಕು ಎಂದು ಜೈಲಧಿಕಾರಿಗಳಿಗೆ ಕೋರ್ಟ್ ಆದೇಶ ನೀಡಿತು ಅಂತಿಟ್ಟುಕೊಳ್ಳಿ. ಆಗ ಭಾರತೀಯ ಅಡುಗೆಯವನೊಬ್ಬ ಅವನ ಪಾಸ್ತಾದಲ್ಲೂ ಚೆನ್ನಾಗಿ ಎಣ್ಣೆ ಸುರಿದು, ಅದನ್ನು ಗರಿಗರಿಯಾಗಿ ಕರಿದು, ಒಂದಷ್ಟು ಖಾರ ಹಾಗೂ ಮಸಾಲೆ ಹಾಕಿ, ಪಕ್ಕದಲ್ಲಿ ತುಪ್ಪವನ್ನೂ ತಟ್ಟೆಗೆ ಹಾಕಿ ಕೊಡುತ್ತಾನೆ! ಅದನ್ನು ಅರಿತೇ ಅವನು ತಾನೇ ಅಡುಗೆ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಕೇಳಿದ್ದಾನೆ.
ಪಾಸ್ತಾ, ಪಾತ್ರೆ ಹಾಗೂ ಸ್ಟವ್‌ಗೆ ಹೆಚ್ಚುವರಿ ಹಣ ಕೊಡುವುದಕ್ಕೆ ಅವನು ಸಿದ್ಧನಿದ್ದಾನೆ. ಮಿತ್ರ ರಾಷ್ಟ್ರಗಳು ರಷ್ಯಾ ವಿರುದ್ಧ ಹೋರಾಡಲು ಉಕ್ರೇನಿಯನ್ನರಿಗೆ ನೀಡಿದ ಗನ್‌ಗಳು ಏನಾದವು ಎಂಬುದು ನಮಗೀಗ ಗೊತ್ತಾಯಿತು ಅಲ್ಲವೇ? ಅವರು ಜಗತ್ತಿನ ನಾನಾ ಮಾರುಕಟ್ಟೆಗಳಲ್ಲಿ ಅವುಗಳನ್ನು ಮಾರುತ್ತಿದ್ದಾರೆ. ಅದರಿಂದ ಬಂದ ಹಣದಲ್ಲಿ ಖಂಡಿತ ಪಾಸ್ತಾ ಹಾಗೂ ಸ್ಟವ್ ಕೊಳ್ಳಬಹುದು.
ಭಾರತಕ್ಕೆ ಟೂರಿಸ್ಟ್ ವೀಸಾದಲ್ಲಿ ಬಂದಾಗಿನಿಂದ ಮ್ಯಾಥ್ಯೂ ಬಹುಶಃ ಪಾಸ್ತಾವನ್ನೇ ತಿಂದಿರುತ್ತಾನೆ. ಇಲ್ಲಿಂದ ಅವನು ಗುವಾಹಟಿ ಮೂಲಕ ಮಿಜೋರಮ್‌ಗೆ ಪರ್ಮಿಟ್ ಇಲ್ಲದೆ ಹೋಗಿದ್ದಾನೆ. ಅಲ್ಲಿಂದ ವೀಸಾ ಇಲ್ಲದೆ ಮ್ಯಾನ್ಮಾರ್‌ಗೆ ತೆರಳಿದ್ದಾನೆ. ಅಲ್ಲಿ ಬಂಡುಕೋರರಿಗೆ ತರಬೇತಿ ನೀಡುವ ಮತ್ತು ಯುರೋಪ್‌ನಿಂದ ಸರಕು ತರಿಸಿಕೊಳ್ಳುವ ಕೆಲಸ ಮಾಡಿದ್ದಾನೆ. ಧುರಂಧರ್‌ನ ಮುಂದಿನ ಭಾಗಕ್ಕೆ ಕತೆ ಅಲ್ಲೇ ಇದೆ. ಕ್ಲೈಮ್ಯಾಕ್ಸ್‌ನಲ್ಲಿ ಉಪವಾಸ ಸತ್ಯಾಗ್ರಹ ಇರಬಹುದು!
ತಿಹಾರ್ ಜೈಲಿನಲ್ಲಿ ಎಣ್ಣೆ ಸುರಿಯುವ ಥಾಲಿ ವಿರುದ್ಧ ಮ್ಯಾಥ್ಯೂ ಉಪವಾಸ ಸತ್ಯಾಗ್ರಹ ಮಾಡಿ 14 ಕೆ.ಜಿ. ತೂಕ ಕಳೆದುಕೊಂಡಿದ್ದಾನಂತೆ. ನನ್ನ ಅಂದಾಜು ಲೆಕ್ಕಾಚಾರ ಸರಿಯಾಗಿದ್ದರೆ ಬಹುಶಃ ಅವನು ಮಹಾತ್ಮ ಗಾಂಧೀಜಿಯವರ ಯಾವುದೇ ಉಪವಾಸ ಸತ್ಯಾಗ್ರಹಕ್ಕಿಂತ ದೀರ್ಘಕಾಲ ಉಪವಾಸ ಮಾಡಿರಬೇಕು. ಪಾಪ ಮ್ಯಾಥ್ಯೂ! ನಮ್ಮಲ್ಲಿ ಭಯೋತ್ಪಾದಕರಾಗಿ ಇರುವುದು ಬಹಳ ಕಷ್ಟ. ಅವನು ತಿಹಾರ್ ಜೈಲಿನಲ್ಲಿ ಅಮೆರಿಕನ್ ಡಯೆಟ್‌ನ ಊಟ ನಿರೀಕ್ಷಿಸಿದ್ದ.
ಟೆಕ್ಸಾಸ್‌ನಲ್ಲೇ ನಾದರೂ ಅವನು ಭಯೋತ್ಪಾದಕರಿಗೆ ತರಬೇತಿ ನೀಡುವಾಗ ಸಿಕ್ಕಿಬಿದ್ದಿದ್ದರೆ ಜೈಲಿನಲ್ಲಿ ಅವನ ಬ್ರೇಕ್ ಫಾಸ್ಟ್‌ಗೆ ಬೇಯಿಸಿದ ಮೊಟ್ಟೆ, ಚೀಸ್, ಪೊಟಾಟೋ ಬರಿಟೋ, ಸೀರಿಯಲ್, ಹಣ್ಣು ಹಾಗೂ ಕಾಫಿ ನೀಡುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ಹಂದಿ ಮಾಂಸ, ಬೀನ್ಸ್, ಬ್ರೆಡ್ ಮತ್ತು ಹಾಲು ಕೊಡುತ್ತಿದ್ದರು. ರಾತ್ರಿಯೂಟಕ್ಕೆ ಬೀಫ್, ಡರ್ಟಿ ರೈಸ್, ಬೀನ್ಸ್, ತರಕಾರಿ, ಬ್ರೆಡ್ ಮತ್ತು ಹಾಲು ನೀಡುತ್ತಿದ್ದರು. ಮ್ಯಾಥ್ಯೂನ ತೂಕ ಹೆಚ್ಚುತ್ತಿತ್ತು.
ಅವನನ್ನೇನಾದೂ ಲಂಡನ್ನಿನ ಜೈಲಿಗೆ ಹಾಕಿದ್ದರೆ ಅಲ್ಲಿ ಡ್ರಗ್ಸ್ ಸಿಗುತ್ತಿತ್ತು. ಮ್ಯಾಥ್ಯೂ ತೂಕ ಕಳೆದು ಕೊಳ್ಳುತ್ತಿದ್ದ. ಹೀಗೆ ಕಲ್ಪಿಸಿಕೊಂಡು ನೋಡಿ; ಲಂಡನ್ನಿನಲ್ಲಿ ನಡೆಯುತ್ತಿರುವಂತೆ ತಿಹಾರ್ ಜೈಲಿ ನಲ್ಲೂ ಕೈದಿಗಳಿಗೆ ಡ್ರೋನ್‌ನಲ್ಲಿ ಡ್ರಗ್ಸ್ ಪೂರೈಸುತ್ತಿದ್ದರೆ ಜಾಗತಿಕ ಮಾಧ್ಯಮಗಳು ಹೇಗೆ ಬೊಬ್ಬೆ ಹೊಡೆಯುತ್ತಿದ್ದವು? ಜಗತ್ತಿನ ಮೂಲೆಮೂಲೆಯ ನ್ಯೂಸ್ ಚಾನಲ್‌ಗಳ ಕ್ಯಾಮೆರಾಗಳು ಜೈಲಿನ ಹೊರಗಿನ ಗೇಟ್ ಬಳಿ ಕಾಯುತ್ತಿದ್ದವು.
ಟೀವಿ ಸ್ಟುಡಿಯೋಗಳಲ್ಲಿ ಆ ಕ್ಯಾಮೆರಾದ ಇನ್ನೊಂದು ತುದಿಗೆ ಆಂಕರ್‌ಗಳು ಲೈವ್ ಚಾಟ್‌ಗೆ ಸಿದ್ಧರಾಗಿ ಕುಳಿತಿರುತ್ತಿದ್ದರು. ಅವರ ಜೊತೆಗೆ ಮಾತನಾಡಲು ಭಾರತದ ವಿಷಯ ತಜ್ಞರು ಲೈನ್-ಅಪ್ ಆಗಿರುತ್ತಿದ್ದರು. ಎಲ್ಲರೂ ಸೇರಿಕೊಂಡು, ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಭರ್ಜರಿ ಚರ್ಚೆ ಮಾಡುತ್ತಿದ್ದರು. ಆದರೆ ಇಂಗ್ಲೆಂಡ್‌ನಲ್ಲಿ ಹೀಗಾದರೆ? ಹಮ್.. ಮುಂದಿನ ಸುದ್ದಿ ಹೇಳಿ ಪ್ಲೀಸ್. ಬಹುಶಃ ಇನ್ನೊಬ್ಬ ವಿಫಲ ಪ್ರಧಾನ ಮಂತ್ರಿಯ ಸುದ್ದಿಯೇನಾ ದರೂ ಬಂದಿರಬಹುದು ನೋಡಿ.
*
ಇತ್ತೀಚೆಗೆ ಬಂದ ಪುಸ್ತಕವೊಂದು ಎರಡನೇ ವಿಶ್ವ ಮಹಾಯುದ್ಧದ ಕುರಿತಾದ ತಪ್ಪು ಗ್ರಹಿಕೆ ಯೊಂದನ್ನು ಸರಿಪಡಿಸಿದೆ. ಈ ಪುಸ್ತಕದ ಪ್ರಕಾರ ಎರಡನೇ ವಿಶ್ವ ಮಹಾಯುದ್ಧ ಆರಂಭವಾಗಿದ್ದು 1939ರಲ್ಲಿ ಪೋಲೆಂಡ್ ಮೇಲೆ ಜರ್ಮನಿ ದಾಳಿ ನಡೆಸಿದಾಗ ಅಲ್ಲ, ಬದಲಿಗೆ 1931ರಲ್ಲಿ ಚೀನಾ ಮೇಲೆ ಜಪಾನ್ ದಾಳಿ ನಡೆಸಿದಾಗ. ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ನಲ್ಲಿ ಸಾಮ್ರಾಜ್ಯಶಾಹಿಗಳ ನಡುವೆ ಎದ್ದ ಸಂಘರ್ಷದಿಂದ ಹದಿನೈದು ವರ್ಷಗಳ ಮಹಾಯುದ್ಧ ನಡೆಯಿತು. ನಾನು ಈ ಪುಸ್ತಕವನ್ನು ಪೂರ್ತಿ ಓದಿಲ್ಲ. ಆದರೆ, 1931ರಿಂದ 1941ರ ನಡುವಿನ ವಿಧ್ವಂಸಕ ದಶಕದ ಕುರಿತು ಇರುವ ಈ ಪುಸ್ತಕವನ್ನು ಹಾಗೇ ತಿರುವಿ ಹಾಕಿದಾಗ ಕಣ್ಣಿಗೆ ಬಿದ್ದ ಮಾಹಿತಿಗಳನ್ನು ಆಧರಿಸಿ ಹೇಳುವುದಾದರೆ, ಬುದ್ಧಿವಂತ ಪ್ರಜಾಪ್ರಭುತ್ವವಾದಿ ಗಳು ಹೇಗೆ ಇತಿಹಾಸವನ್ನು ನಿರ್ಧರಿಸುತ್ತಾರೋ ಹಾಗೆಯೇ ಚಾಣಾಕ್ಷ ಕಟುಕರು ಮತ್ತು ದುಷ್ಟ ಸರ್ವಾಧಿಕಾರಿಗಳು ಕೂಡ ಇತಿಹಾಸ ಹೇಗಿರಬೇಕೆಂಬುದನ್ನು ನಿರ್ಧರಿಸುತ್ತಾರೆ. ಉದಾಹರಣೆಗೆ:
1931ರಲ್ಲಿ ಜಪಾನೀಯರು ನಡೆಸಿದ ದಾಳಿಯಿಂದಾಗಿ ಚೀನಾದವರು ಅನುಭವಿಸಿದ ನೋವನ್ನು ಶ್ರೇಷ್ಠತೆಯ ಹುಚ್ಚಿಗೆ ಬಿದ್ದು ಮನುಷ್ಯತ್ವವನ್ನು ಕಳೆದುಕೊಂಡ ನಾಚಿಕೆಗೇಡು ಮನಸ್ಥಿತಿಯನ್ನು ಅರಿತುಕೊಳ್ಳದೆ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಉಕ್ರೇನ್‌ನಲ್ಲಿ 1933ರಲ್ಲಿ 33 ಲಕ್ಷ ಜನರು ಹಸಿವಿನಿಂದ ಸಾಯುವ ಪರಿಸ್ಥಿತಿ ಬಂದಾಗ ಮನುಷ್ಯರ ಮಾಂಸ ತಿನ್ನುವವರ ಸಂಖ್ಯೆ ಜಾಸ್ತಿ ಯಾಗಿತ್ತು.
1931ರಲ್ಲಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಯಾವ ಮಟ್ಟಕ್ಕೆ ಹೋಗಿತ್ತು ಅಂದರೆ, 1 ಲಕ್ಷ ಅಮೆರಿಕನ್ನರು ಕಂಗೆಟ್ಟು ನೌಕರಿಗಾಗಿ ಕಮ್ಯುನಿಸ್ಟ್ ಸೋವಿಯತ್ ಒಕ್ಕೂಟಕ್ಕೆ ಅರ್ಜಿ ಹಾಕಿದ್ದರು. 1929 ಮತ್ತು 1933ರ ಮಧ್ಯೆ ಜರ್ಮನಿಯಲ್ಲಿ ಉದ್ಯೋಗಾವಕಾಶ ಅರ್ಧಕ್ಕರ್ಧ ಕುಸಿದಿತ್ತು. ಆಗ ಅಧಿಕಾರಕ್ಕೆ ಬಂದ ಹಿಟ್ಲರ್ ಯುವಕರ ನಿರುದ್ಯೋಗದ ಪ್ರಮಾಣವನ್ನು ಒಂದೇ ವರ್ಷದಲ್ಲಿ ಶೇ.63ರಷ್ಟು ಕಡಿಮೆ ಮಾಡಿದ್ದ. ಜರ್ಮನ್ನರಿಗೆ ಆಹಾರದ ಲಭ್ಯತೆ ಹೆಚ್ಚಿಸಲು 2 ರಿಂದ 3 ಕೋಟಿ ಸ್ಲಾವ್‌ಗಳನ್ನು ಯುದ್ಧದಲ್ಲಿ ಕೊಲ್ಲುವುದಕ್ಕೆ ಅವನು ಯೋಚಿಸಿದ್ದ.
1938ರಲ್ಲಿ ಜಪಾನ್ ಸೇನೆ ಚೀನಾದೊಳಗೆ ನುಗ್ಗುವುದನ್ನು ತಪ್ಪಿಸಲು ಚಿಯಾಂಗ್ ಕಾಯ್-ಶೇಕ್ ಹಳದಿ ನದಿಯ ಅಣೆಕಟ್ಟುಗಳನ್ನು ಧ್ವಂಸ ಮಾಡಿ ತನ್ನದೇ 8 ಲಕ್ಷ ಜನರನ್ನು ಹತ್ಯೆಗೈದಿದ್ದ. ಸ್ಟಾಲಿನ್ ಮಾಡಿದ್ದ ಬಹುದೊಡ್ಡ ತಪ್ಪೆಂದರೆ, ಬರ್ಲಿನ್‌ನಲ್ಲಿದ್ದ ಸೋವಿಯತ್ ಗೂಢಚರರು ಸೋವಿಯತ್ ಒಕ್ಕೂಟದ ಮೇಲೆ ದಾಳಿಗೈಯಲು ಜರ್ಮನ್ನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದಾಗ ಅದನ್ನು ನಂಬದೇ ಇದ್ದುದು. ಆ ಸುದ್ದಿ ಕೇಳಿ ಅವನು ಕಡತದಲ್ಲಿ ಬರೆದ ಅಭಿಪ್ರಾಯವನ್ನು ಇಲ್ಲಿ ಪ್ರಿಂಟ್ ಮಾಡುವುದಕ್ಕೆ ಆಗುವುದಿಲ್ಲ, ಅಷ್ಟು ಕೆಟ್ಟದಾಗಿದೆ. 60 ಲಕ್ಷ ಯಹೂದಿಗಳನ್ನು ಕೊಂದು ಹಿಟ್ಲರ್ ನಡೆಸಿದ ನರಮೇಧ ಹಾಗೂ ಬಂಗಾಳದ ಬರಗಾಲದಲ್ಲಿ ಹೊಟ್ಟೆಗೆ ಅನ್ನವಿಲ್ಲದೆ ಹಸಿವಿನಿಂದ 30 ಲಕ್ಷ ಜನರು ಸಾವನ್ನಪ್ಪಿದ್ದು ಇವು 1941ರ ಬಳಿಕ ಸಂಭವಿಸಿದ ದುರಂತಗಳು.
ಕೊನೆಯ ಮಾತನ್ನು ವಿನ್‌ಸ್ಟನ್ ಚರ್ಚಿಲ್‌ರ ಪತ್ನಿ ಕ್ಲೆಮೆಂಟೈನ್ ಚರ್ಚಿಲ್‌ಗೆ ಬಿಡೋಣ. ಚರ್ಚಿಲ್ ಗಿಂತ ಹೆಚ್ಚು ನೈತಿಕ ಸ್ಪಷ್ಟತೆಯನ್ನು ಹೊಂದಿದ್ದ ಬ್ರಿಟಿಷ್ ಹೆಣ್ಣು ಈಕೆ. ಆಗ ವೆಸ್ಟ್ ಇಂಡೀಸ್ ದ್ವೀಪಗಳು ಬ್ರಿಟನ್ನಿನ ವಸಾಹತುವಾಗಿದ್ದವು. ಅಲ್ಲಿನ ಸಾಮಾಜಿಕ ಸ್ಥಿತಿಗತಿಗಳ ಕುರಿತು ವರದಿ ನೀಡಲು ನೇಮಕ ಗೊಂಡಿದ್ದ 1937ರ ರಾಯಲ್ ಕಮಿಷನ್‌ನಲ್ಲಿ ಕ್ಲೆಮೆಂಟೈನ್ ಸದಸ್ಯೆ ಯಾಗಿದ್ದರು. ವೆಸ್ಟ್ ಇಂಡೀಸ್‌ನಿಂದ ಅವರು ತನ್ನ ಪತಿಗೆ ಬರೆದ ಪತ್ರದಲ್ಲಿ ನಿರ್ದಾಕ್ಷಿಣ್ಯವಾಗಿ ಹೀಗೆ ಹೇಳಿದ್ದರು: ‘ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಸ್ಯಾಂಪಲ್ ಇದು!’