T Devidas Column: ಸಿಬಿಎಸ್‌ಸಿ ಮತ್ತು ಸ್ಟೇಟ್ ಸಿಲಬಸ್: ಯಾವುದು ಉತ್ತಮ ಆಯ್ಕೆ ?
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕಾಲಕ್ಕೆ ತಕ್ಕಂತೆ ರೂಪಿಸಿ ರುವ ಪಠ್ಯಕ್ರಮವನ್ನು ಸಿಬಿಎಸ್‌ಇಯಲ್ಲಿ ಅನುಸರಿಸಲಾಗುತ್ತದೆ. ಈ ಪಠ್ಯಕ್ರಮ ನಿಯತವಾಗಿ ನವೀಕರಣಗೊಳ್ಳುತ್ತದೆ. ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಹಾಗೂ ಐಐಟಿ, ಐಐಐಟಿ, ಎನ್‌ಐಟಿ ಮತ್ತು ಏಮ್ಸಗಳಲ್ಲಿ ಪ್ರವೇಶಾತಿ ದಕ್ಕಿಸಿ ಕೊಳ್ಳುವುದು ಸುಲಭ ಎಂಬ ವಿಚಾರ ಪ್ರಚಾರದಲ್ಲಿದೆ.


ಯಕ್ಷಪ್ರಶ್ನೆ
ಟಿ.ದೇವಿದಾಸ್
ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಗೊಂದಲ ಮತ್ತು ಚರ್ಚೆ ಗಳಲ್ಲಿ ಈ ಸಿಬಿಎಸ್‌ಇ ಮತ್ತು ಸ್ಟೇಟ್ ಸಿಲಬಸ್- ಇದರಲ್ಲಿ ಯಾವುದು ಉತ್ತಮ ಆಯ್ಕೆ ಎಂಬುದು. ಎರಡೂ ಮಂಡಳಿಗಳು ತಮ್ಮದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ, ಆದ್ದರಿಂದ ಯಾವುದು ಉತ್ತಮ ಎಂದು ನಿರ್ಧರಿಸುವುದು ವಿದ್ಯಾರ್ಥಿಯ ಆದ್ಯತೆಗಳು ಮತ್ತು ಗುರಿಗಳನ್ನು ಅವಲಂಬಿಸಿರು ತ್ತದೆ. ಸಿಬಿಎಸ್‌ಇ ಮತ್ತು ರಾಜ್ಯ ಮಂಡಳಿಗಳನ್ನು ಪರಿಶೀಲಿಸುವ ಮೊದಲು, ಎರಡರ ನಡುವಿನ ವ್ಯತ್ಯಾಸ ವನ್ನು ಸಂಕ್ಷಿಪ್ತವಾಗಿ ಅರ್ಥಮಾಡಿಕೊಳ್ಳೋಣ. ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್- ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ. ಇದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವಂಥದ್ದು) ಮತ್ತು ವಿವಿಧ ರಾಜ್ಯ ಶಿಕ್ಷಣ ಮಂಡಳಿಗಳು ಭಾರತದಲ್ಲಿ ಪ್ರಮುಖ ಶಾಲಾ ಮಟ್ಟದ ಪರೀಕ್ಷಾ ಮಂಡಳಿಗಳಾಗಿವೆ.
ಸಿಬಿಎಸ್‌ಇ ಯಲ್ಲಿ ಪ್ರಮಾಣೀಕೃತ ಪಠ್ಯಕ್ರಮ, ಮೌಲ್ಯಮಾಪನ ಮತ್ತು ಪರೀಕ್ಷೆಗಳನ್ನು ರಾಷ್ಟ್ರ ವ್ಯಾಪಿ ನೀಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯ ಮಂಡಳಿಗಳು ಪ್ರತಿ ರಾಜ್ಯ ಶಿಕ್ಷಣ ಇಲಾಖೆಯು ಸ್ವತಂತ್ರವಾಗಿ ನಿಗದಿ ಪಡಿಸಿದ ಪಠ್ಯಕ್ರಮ ಮತ್ತು ಮೌಲ್ಯಮಾಪನ ಮಾದರಿಗಳನ್ನು ಅನುಸರಿಸು ತ್ತವೆ.
ಎರಡೂ ಮಂಡಳಿಗಳು ಭಾರತ ದೊಳಗೆ ಗುರುತಿಸಲ್ಪಟ್ಟಿವೆ. ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತವೆ. ಆದಾಗ್ಯೂ, ಸಿಬಿಎಸ್‌ಇ ತನ್ನ ಏಕೀಕೃತ ವಿಧಾನದಿಂದಾಗಿ ವ್ಯಾಪಕವಾದ ಅಂತಾ ರಾಷ್ಟ್ರೀಯ ಮನ್ನಣೆ ಮತ್ತು ಸ್ವೀಕಾರವನ್ನು ಹೊಂದಿದೆ. ಸಿಬಿಎಸ್ ಇಯ ಪದ್ಧತಿಯು ವಿದೇಶದಲ್ಲಿ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆಯುವುದಕ್ಕೆ ಮತ್ತು JEE/NEET ಅಂಥ ಸ್ಪರ್ಧಾ ತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ಸಾಕಷ್ಟು ರೀತಿಯಲ್ಲಿ ಅನುಕೂಲಕರ ವಾಗಿದೆ.
ಪಠ್ಯಕ್ರಮ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಕಾಲಕ್ಕೆ ತಕ್ಕಂತೆ ರೂಪಿಸಿರುವ ಪಠ್ಯಕ್ರಮವನ್ನು ಸಿಬಿಎಸ್‌ಇಯಲ್ಲಿ ಅನುಸರಿಸಲಾಗುತ್ತದೆ ಮತ್ತು ಹೆಚ್ಚು ಪ್ರಮಾಣೀಕರಿಸಲಾಗುತ್ತದೆ. ಈ ಪಠ್ಯಕ್ರಮ ನಿಯತವಾಗಿ ನವೀಕರಣಗೊಳ್ಳುತ್ತದೆ. ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸುವ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ನಡೆಸುತ್ತಿದೆ.
ಐಐಟಿ, ಐಐಐಟಿ, ಎನ್ ಐಟಿ ಮತ್ತು ಏಮ್ಸ್ ಗಳಲ್ಲಿ ಪ್ರವೇಶಾತಿ ದೊರೆಯಲು ಈ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ನೆರವಾಗುತ್ತವೆ. ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಸುಲಭ ಎಂಬ ವಿಚಾರ ಪ್ರಚಾರದಲ್ಲಿದೆ. ವಿದ್ಯಾರ್ಥಿಗಳ ಅಪ್ಲಿಕೇಶನ್ ಸ್ಕಿಲ್ಸ್ (ಅನ್ವಯಿಕ ಕೌಶಲ), ಪ್ರಾಬ್ಲಮ್ ಸಾಲ್ವಿಂಗ್ (ಸಮಸ್ಯೆ ಬಿಡಿಸುವ) ಸಾಮರ್ಥ್ಯ ಗಳನ್ನು ಹೆಚ್ಚಿಸಲು ಅನುವಾಗುವಂತೆ ಸಿಬಿಎಸ್‌ಇ ಪಠ್ಯಕ್ರಮವನ್ನು ರೂಪಿಸಲಾಗಿದೆ.
ಒಂದು ನಿರ್ದಿಷ್ಟ ಪರಿಕಲ್ಪನೆಯನ್ನು ಕಲಿಸಿದ ಅನಂತರ ಅದನ್ನು ಅಳವಡಿಸಿ ತೋರುವಂತೆ ಹಲವು ವಿಧಾನಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಇದು ಜೆಇಇ, ನೀಟ್ ಪರೀಕ್ಷೆ ಎದುರಿಸಲು ನೆರವಾಗಲಿದೆ. ಪಠ್ಯಕ್ರಮ ತುಸು ಕಠಿಣವಾಗಿದ್ದು, ಉತ್ತಮ ಫಲಿತಾಂಶಕ್ಕಾಗಿ ಹೆಚ್ಚಿನ ಶ್ರಮ ಅಗತ್ಯ. ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಇಂಗ್ಲಿಷ್, ದ್ವಿತೀಯ ಭಾಷೆ, ತೃತೀಯ ಭಾಷೆ (6-8ನೆಯ ತರಗತಿಯವರೆಗೆ), ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ (9 ಮತ್ತು 10ನೆಯ ತರಗತಿಗೆ ಮಾತ್ರ) ವಿಷಯಗಳನ್ನು ಕಲಿಸಲಾಗುತ್ತದೆ.
ಪ್ರವೇಶ ಪರೀಕ್ಷೆಗಳಲ್ಲಿ ಪಾಸಾಗುವುದಕ್ಕಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಸಲುವಾಗಿ ಗಣಿತ ಮತ್ತು ವಿeನ ವಿಷಯಗಳಲ್ಲಿ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ಇಂಗ್ಲಿಷ್ ಕಲಿಕೆಗೂ ಒತ್ತುನೀಡಲಾಗುತ್ತದೆ. ಪಠ್ಯಕ್ರಮ ತುಸು ಕಠಿಣವಾಗಿರುವುದರಿಂದ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉತ್ತರ ಅಮೆರಿಕ, ಬ್ರಿಟನ್, ಸಿಂಗಾಪುರದಂಥ ದೇಶಗಳಲ್ಲಿನ ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಲಾರದು ಎಂಬುದು ತಜ್ಞರ ಅಂಬೋಣ.
ಆದರೆ, ಪಠ್ಯ ವಿಷಯದ ಬಗ್ಗೆ ಹೆಚ್ಚಿನ ವಿವರದ ಕಲಿಕೆ ಅಗತ್ಯವಿzಗ ಹೆಚ್ಚುವರಿ ಟ್ಯೂಷನ್ ಲಭ್ಯತೆಯ ಸಮಸ್ಯೆಯಾಗಬಹುದು. ಬೆಂಗಳೂರಿನಂಥ ನಗರಗಳಿಗೆ ಇದು ಸಮಸ್ಯೆಯಾಗುವುದಿಲ್ಲ. ಸಣ್ಣ ನಗರಗಳಲ್ಲಿ ಸಮಸ್ಯೆಯ ಸಾಧ್ಯತೆ ಹೆಚ್ಚು. ಸ್ಟೇಟ್ ಸಿಲಬಸ್‌ಗೆ ಟ್ಯೂಷನ್ ಸಿಕ್ಕಿದಂತೆ ಸಿಬಿಎಸ್ ಇಗೆ ಸಿಗೋದು ಕಷ್ಟವಾಗಬಹುದು.
ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಎಂಬುದು ಶಾಲೆಯಿಂದ ಶಾಲೆಗೆ ವ್ಯತ್ಯಾಸ ಇರುತ್ತದೆ. ಕೆಲವು ಶಾಲೆಗಳು ಪಠ್ಯವನ್ನೇ ಕೇಂದ್ರೀಕರಿಸುತ್ತದೆ. ಎಲೈಟ್ ಶಾಲೆಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶ ಇರುತ್ತದೆ. ಗುಣಮಟ್ಟದ ಶಿಕ್ಷಕರ ಕೊರತೆ ಈಗ ಎಲ್ಲೂ ಇರುವ ದೊಡ್ಡ ಸಮಸ್ಯೆ.
ಕಾರಣ, ಯುವಜನಾಂಗಕ್ಕೆ ವೈದ್ಯಕೀಯ ಮತ್ತು ಮಾಹಿತಿ ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳ ಆಕರ್ಷಣೆ. ಆದಾಗ್ಯೂ ದುಬಾರಿ ಶುಲ್ಕ ಇರುವುದರಿಂದ ಉತ್ತಮ ವೇತನವನ್ನು ನೀಡಿ ಉತ್ತಮ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಆಲ್ಫಾ ಬೆಟಿಕಲ್ ಆಧಾರದಲ್ಲಿ ಶ್ರೇಣಿಗಳನ್ನು ನೀಡಲಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಇರುತ್ತದೆ.
ಆದರೆ, ರಾಜ್ಯ ಮಂಡಳಿಯ ಪಠ್ಯಕ್ರಮವು ರಾಜ್ಯ ರಾಜ್ಯಗಳಲ್ಲಿ ಬದಲಾಗುತ್ತದೆ. ಅದನ್ನು ನಿಯತ ವಾಗಿ ನವೀಕರಿಸುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಶಿಕ್ಷಣ ಪದ್ಧತಿಯಲ್ಲಿ ಅನೇಕ ಸಾಮ್ಯತೆ ಗಳಿದ್ದರೂ ವ್ಯತ್ಯಾಸ ಗಳೂ ಇರುತ್ತವೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆಯನ್ನು ನೀಡಲಾಗು ತ್ತದೆ. ಸ್ಟೇಟ್ ಪಠ್ಯಕ್ರಮವನ್ನು ಗುಣಮಟ್ಟದ ಆಧಾರದಲ್ಲಿ ಹೋಲಿಸಿದರೆ ಸಿಬಿಎಸ್‌ಇ ಯಷ್ಟು ಪ್ರಭಾವಿ ಎಂದೇನೂ ಪ್ರಚಾರದಲ್ಲಿಲ್ಲ.
ಪ್ರಾದೇಶಿಕತೆಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಈ ಶಾಲೆಗಳಲ್ಲಿ ರಾಜ್ಯ ಭಾಷೆಯ ಜತೆಯಲ್ಲಿ ರಾಜ್ಯ ಭಾಷಾ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಕಲಿಕೆಗೆ ಅವಕಾಶಗಳಿವೆ. ಆಯಾ ರಾಜ್ಯದ ವಿಶ್ವವಿದ್ಯಾಲಯಗಳ, ಉನ್ನತ ಶಿಕ್ಷಣ ಸಂಸ್ಥೆಗಳ ಸಿಲಬಸ್‌ಗೆ ಅನುಗುಣವಾಗಿ ಇತರ ವಿಷಯಗಳು ನಿಗದಿಯಾಗಿರುತ್ತವೆ. ರಾಜ್ಯ ಭಾಷೆಯನ್ನು ಕಲಿಯ ಲೇಬೇಕೆಂಬ ನಿಬಂಧನೆಯಿರುತ್ತದೆ.
ಕಲಿಕಾ ವಿಧಾನ: ಸಿಬಿಎಸ್‌ಇ ಪರಿಕಲ್ಪನಾತ್ಮಕ ತಿಳಿವಳಿಕೆ ಮತ್ತು ಜ್ಞಾನದ ಅನ್ವಯವನ್ನು ಉತ್ತೇಜಿಸುತ್ತದೆ. ರಾಜ್ಯ ಮಂಡಳಿಗಳು ಮಾಹಿತಿಗಳನ್ನು ಕಂಠಪಾಠ ಮಾಡುವುದರ ಮೇಲೆ ಹೆಚ್ಚು ಅವಲಂಬಿತವಾಗಿವೆ.
ಪರೀಕ್ಷೆಗಳು: ಸಿಬಿಎಸ್‌ಇ 10 ಮತ್ತು 12ನೆಯ ತರಗತಿಗಳಿಗೆ ರಾಷ್ಟ್ರೀಯ ಮಟ್ಟದ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತದೆ. ರಾಜ್ಯ ಮಂಡಳಿಗಳು ರಾಜ್ಯ ಮಟ್ಟದ ಪರೀಕ್ಷೆಗಳನ್ನು ನಡೆಸುತ್ತವೆ.
ಶ್ರೇಣೀಕರಣ ವ್ಯವಸ್ಥೆ: ಸಿಬಿಎಸ್‌ಇ ಭಾರತ ಮತ್ತು ವಿದೇಶಗಳಲ್ಲಿರುವ ತನ್ನೆಲ್ಲ ಶಾಲೆಗಳಲ್ಲಿ ಏಕರೂಪದ ಶ್ರೇಣೀಕರಣ ಮಾದರಿಯನ್ನು ಅನುಸರಿಸುತ್ತದೆ. ಪಡೆದ ಅಂಕಗಳ ಶೇಕಡಾವಾರು ಆಧಾರದ ಮೇಲೆ A-1 ರಿಂದ E-2ವರೆಗಿನ ಅಕ್ಷರ ದರ್ಜೆಯ ವ್ಯವಸ್ಥೆಯನ್ನು ಬಳಸುತ್ತದೆ.
ವಸ್ತುನಿಷ್ಠತೆಯನ್ನು ಖಚಿತ ಪಡಿಸಿ ಪ್ರತಿ ದರ್ಜೆಗೆ ನಿಖರವಾದ ಶೇಕಡಾವಾರು ಶ್ರೇಣಿಗಳನ್ನು ಅದು ನಿಗದಿಪಡಿಸಿದೆ. ಸಿಬಿಎಸ್‌ಇಯ ಸಮಾನ ದರ್ಜೆಯ ಅಂಕಗಳು, ಶ್ರೇಣಿಗಳು ದೇಶಾದ್ಯಂತ ಸಮಾನ ಅರ್ಥವನ್ನು ಹೊಂದಿವೆ. ಆದರೆ, ರಾಜ್ಯ ಶಿಕ್ಷಣ ಮಂಡಳಿಗಳಲ್ಲಿ ಶ್ರೇಣೀಕರಣ ಮಾದರಿಗಳು ಭಿನ್ನ ವಾಗಿರುತ್ತವೆ. ಕೆಲವು ರಾಜ್ಯಗಳು ಸಿಬಿಎಸ್‌ಇಗೆ ಹೋಲುವ A+ ನಿಂದ Eವರೆಗಿನ ಅಕ್ಷರ ಶ್ರೇಣಿ ಗಳನ್ನು ಮತ್ತು ಕೆಲವು ರಾಜ್ಯಗಳು GPA ಮತ್ತು CGPA ರೀತಿಯ ಸಂಖ್ಯಾ ವ್ಯವಸ್ಥೆಯನ್ನು ಬಳಸುವು ದರಿಂದ ಸಮಾನತೆಯಿಲ್ಲ ಕೈಗೆಟುಕುವಿಕೆ: ಸಿಬಿಎಸ್‌ಇ ಶಾಲೆಗಳು ಕೌಶಲಗಳು, ಪ್ರಮಾಣೀಕೃತ ಮೌಲ್ಯಮಾಪನ ಮತ್ತು ಜಾಗತೀಕರಣಗೊಂಡ ವೃತ್ತಿ/ಅಧ್ಯಯನಗಳ ಭವಿಷ್ಯದ ಸವಾಲು ಗಳನ್ನು ನಿಭಾಯಿಸಲು ಅವಕಾಶಗಳನ್ನು, ಏಕರೂಪದ ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರದ ಮೂಲಕ ಒದಗಿಸುತ್ತವೆ. ರಾಜ್ಯ ಮಂಡಳಿಯಲ್ಲಿ ಇಂಥ ವಿಶಾಲ ವ್ಯಾಪ್ತಿಯಿರುವುದಿಲ್ಲ. ಸಿಬಿಎಸ್‌ಇಯ ಅನುಕೂಲಗಳ ಕಡೆಗೆ ಗಮನಹರಿಸುವುದಾದರೆ, ಈ ಸಿಬಿಎಸ್‌ಇ ಪಠ್ಯಕ್ರಮವು ಭಾರತದ ಹಲವಾರು ಸಂಸ್ಥೆಗಳು ಮತ್ತು ಕಾಲೇಜುಗಳಿಂದ ಗುರುತಿಸಲ್ಪಟ್ಟಿದೆ.
ಇದರ ಪರಿಣಾಮವಾಗಿ, ಸಿಬಿಎಸ್‌ಇ ವಿದ್ಯಾರ್ಥಿಗಳು ಯಾವ ಸಮಸ್ಯೆಯೂ ಇಲ್ಲದೆ ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸಿಬಿಎಸ್‌ಇ ಮಂಡಳಿಯು ವಿದ್ಯಾರ್ಥಿಗಳಿಗೆ ಸುಸಂಘಟಿತ ಮತ್ತು ಆಧುನಿಕ ಪಠ್ಯಕ್ರಮವನ್ನು ಒದಗಿಸುವುದರಿಂದ ಬೌದ್ಧಿಕ ಮತ್ತು ಪ್ರಾಯೋಗಿಕ ಕೌಶಲಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ.
ಸಿಬಿಎಸ್‌ಇ ಶಾಲೆಗಳು ಒಂದೇ ಪಠ್ಯಕ್ರಮವನ್ನು ಅನುಸರಿಸುವುದರಿಂದ ಶೈಕ್ಷಣಿಕ ಸ್ಥಿರತೆಯನ್ನು ಖಚಿತ ಪಡಿಸುತ್ತದೆ. ಇನ್ನು ಅನನುಕೂಲಗಳನ್ನು ನೋಡುವುದಾದರೆ, ಹೆಚ್ಚಿನ ಸಿಬಿಎಸ್‌ಇ ಶಾಲೆ ಗಳು ಖಾಸಗಿ ಶಾಲೆಗಳಾಗಿವೆ, ಅಂದರೆ ಅಧ್ಯಯನ ವೆಚ್ಚವು ಇತರ ಶಾಲೆಗಳಿಗಿಂತ ಹೆಚ್ಚು ದುಬಾರಿ ಯಾಗಿದೆ. ಆರ್ಥಿಕ ವಾಗಿ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನನುಕೂಲವಾಗಬಹುದು. ಇದರ ಪಠ್ಯಕ್ರಮವು ಪ್ರಾಯೋಗಿಕ eನಕ್ಕಿಂತ ಹೆಚ್ಚಾಗಿ ಸಿದ್ಧಾಂತದ ಮೇಲೆ ಕೇಂದ್ರೀಕರಿಸುತ್ತದೆ ಎಂಬ ಟೀಕೆಯಿದೆ.
ಇದು ವಿದ್ಯಾರ್ಥಿಗಳ ಪ್ರತಿಭೆಯನ್ನು ಮಿತಿಗೊಳಿಸುತ್ತದೆ. ಇನ್ನು ಸ್ಟೇಟ್ ಪಠ್ಯಕ್ರಮದ ಅನುಕೂಲ ಗಳನ್ನು ನೋಡೋಣ. ಇಲ್ಲಿ ಶಾಲಾ ಶಿಕ್ಷಣ ದುಬಾರಿಯಲ್ಲ. ರಾಜ್ಯ ಮಂಡಳಿಗಳು ತಮ್ಮ ಪಠ್ಯಕ್ರಮ ವನ್ನು ಪ್ರತಿ ರಾಜ್ಯದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಭೂದೃಶ್ಯಕ್ಕೆ ತಕ್ಕಂತೆ ರಚಿಸುತ್ತವೆ, ಪ್ರಸ್ತುತ ಕರ್ನಾಟಕದಲ್ಲಿ ಸಿಬಿಎಸ್‌ಇ ಅನುಸರಿಸುವ ಎನ್ ಸಿಇಆರ್‌ಟಿ ಪಠ್ಯಕ್ರಮಕ್ಕೆ ಅಪಗ್ರೇಡ್ ಆಗಿದೆ ಎಂಬುದು ಗಮನಾರ್ಹ.
ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಪರಿಸರದೊಂದಿಗೆ ತೊಡಗಿಸಿಕೊಳ್ಳುವುದನ್ನು ಖಚಿತಪಡಿಸಿ ಕೊಳ್ಳುತ್ತವೆ. ತಾತ್ವಿಕ ನೆಲೆಯಲ್ಲಿ ಸ್ಥಳೀಯ ಪ್ರಜ್ಞೆಯು ರಾಷ್ಟ್ರೀಯ ಪ್ರeಯನ್ನು ವಿಕಸನಗೊಳಿಸು ತ್ತದೆ. ಇದು ರಾಷ್ಟ್ರೀಯ ಭಾವೈಕ್ಯಕ್ಕೆ ಆರೋಗ್ಯಯುತವಾದುದು. ವೈವಿಧ್ಯದ ಹಿನ್ನೆಲೆಯಲ್ಲಿಯೇ ಏಕತೆಯ ಅಸ್ಮಿತೆಯಿರುವುದು. ಇನ್ನು ಅನನುಕೂಲಗಳನ್ನು ನೋಡುವುದಾದರೆ, ಸ್ಟೇಟ್ ಪಠ್ಯಕ್ರಮ ಪರೀಕ್ಷೆಗಳು ಸಿಬಿಎಸ್‌ಇಯಂತೆ ರಾಷ್ಟ್ರೀಯ ಮನ್ನಣೆಯನ್ನು ಹೊಂದಿಲ್ಲ.
ಉನ್ನತ ಶಿಕ್ಷಣವನ್ನು ಪಡೆಯಲು ಅಥವಾ ಉದ್ಯೋಗಾವಕಾಶಗಳನ್ನು ಹುಡುಕಲು ಕಷ್ಟವಾಗ ಬಹುದು. ಸಿಬಿಎಸ್‌ಇಗೆ ಹೋಲಿಸಿದರೆ, ರಾಜ್ಯ ಪಠ್ಯಕ್ರಮದಲ್ಲಿ ಐಚ್ಛಿಕ ವಿಷಯಗಳು ಮತ್ತು ಶೈಕ್ಷಣಿಕ ಸ್ಟ್ರೀಮ್‌ಗಳ ಸೀಮಿತ ಆಯ್ಕೆಯನ್ನು ಒದಗಿಸುತ್ತವೆ. ಎನ್‌ಸಿಇಆರ್‌ಟಿ ಸಿಲಬಸ್‌ಗೆ ಅಪ್‌ಡೇಟ್ ಆಗಿ ಬಲವಾದ ಸ್ಟೇಟ್ ಪಠ್ಯಕ್ರಮವನ್ನು ಹೊಂದಿದ್ದರೂ, ಕೆಲವು ರಾಜ್ಯ ಮಂಡಳಿಯ ಪಠ್ಯಕ್ರಮಗಳು ಹಳತಾದ ಬೋಧನಾ ವಿಧಾನಗಳನ್ನು ಬಳಸುತ್ತವೆ.
ಅಂತಾರಾಷ್ಟ್ರೀಯ ವ್ಯಾಪ್ತಿ: ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಸಿಬಿಎಸ್‌ಇ ಮತ್ತು ರಾಜ್ಯ ಮಂಡಳಿಯ ವಿದ್ಯಾರ್ಥಿ ಗಳು ಇಬ್ಬರೂ ವಿದೇಶದ ಅವಕಾಶಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಆದಾಗ್ಯೂ, ಹೆಚ್ಚಿನ ಸಂದರ್ಭದಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಾರೆ. ರಾಜ್ಯ ಮಂಡಳಿಯು ಇಂಗ್ಲಿಷ್ ಭಾಷೆ ಮತ್ತು ಪ್ರಾದೇಶಿಕ ಮಟ್ಟಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ. ಈ ಹಿನ್ನೆಲೆಯಲ್ಲಿ ಸಿಬಿಎಸ್‌ಇ ವಿಶಾಲ ವಾದ ಅಂತಾರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿದೆ.
ವಿದ್ಯಾರ್ಥಿಯ ವೈಯಕ್ತಿಕ ಗುರಿಗಳು, ಆದ್ಯತೆಗಳು ಮತ್ತು ಸಾಮರ್ಥ್ಯಗಳನ್ನು ಅವಲಂಬಿಸಿ JEE, NEET, ಅಥವಾ UPSC ಅಂಥ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗು ವುದು ವಿದ್ಯಾರ್ಥಿಯ ಗುರಿಯಾಗಿದ್ದರೆ, ಸಿಬಿಎಸ್‌ಇ ಉತ್ತಮ ಆಯ್ಕೆಯಾಗಿರುತ್ತದೆ. ಏಕೆಂದರೆ ಅದು ವಿದ್ಯಾರ್ಥಿಗಳನ್ನು ಈ ಪರೀಕ್ಷೆಗಳಿಗೆ ಸಿದ್ಧಪಡಿಸಲು ವಿನ್ಯಾಸಗೊಳಿಸಲಾದ ರಚನಾತ್ಮಕ ಪಠ್ಯಕ್ರಮ ವನ್ನು ಅನುಸರಿಸುತ್ತದೆ. ಇದಲ್ಲದೆ, ಸಿಬಿಎಸ್‌ಇ ಮಂಡಳಿಯ ಪಠ್ಯಕ್ರಮದ ಬೆನ್ನೆಲು ಬಾಗಿರುವ ಎನ್ ಸಿಇಆರ್‌ಟಿ ಪುಸ್ತಕಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಪ್ರಮಾಣಿತ ಪರಾಮರ್ಶನ ಪುಸ್ತಕಗಳೆಂದು ಪರಿಗಣಿಸಲಾಗುತ್ತದೆ.
CET, SET ಅಥವಾ ಇತರ ‘ರಾಜ್ಯ-ನಿರ್ದಿಷ್ಟ’ ಪರೀಕ್ಷೆಗಳಂಥ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಹಾಜರಾಗುವುದು ವಿದ್ಯಾರ್ಥಿಯ ಗುರಿಯಾಗಿದ್ದರೆ, ಸ್ಟೇಟ್ ಶಾಲೆಗಳು ಉತ್ತಮ ಆಯ್ಕೆಯಾ ಗಿರುತ್ತವೆ. ಏಕೆಂದರೆ ಅದು ‘ರಾಜ್ಯ-ನಿರ್ದಿಷ್ಟ’ ವಿಷಯಗಳ ವಿಶಾಲ ದೃಷ್ಟಿಕೋನ ಮತ್ತು ತಿಳಿವಳಿಕೆ ಯನ್ನು ಒದಗಿಸುತ್ತದೆ, ಇದು ಈ ಪರೀಕ್ಷೆಗಳಿಗೆ ಸಹಾಯಕವಾಗಬಹುದು.
ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಎರಡೂ ಮಂಡಳಿಗಳು ಸಾಧಕ-ಬಾಧಕಗಳನ್ನು ಹೊಂದಿವೆ. ಪ್ರತಿ ಶೈಕ್ಷಣಿಕ ಮಂಡಳಿಯ ಪ್ರಯೋಜನಗಳು ಮತ್ತು ಅನನುಕೂಲಗಳನ್ನು ಆಧರಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಒಟ್ಟಾಗಿ ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಯಾವುದು ಉತ್ತಮ ಎಂದು ನಿರ್ಧರಿಸಬಹುದು.
ಅಂತಿಮವಾಗಿ, ವಿದ್ಯಾರ್ಥಿಯ ಯಶಸ್ಸು ಅವರು ಆಯ್ಕೆ ಮಾಡಿದ ಮಂಡಳಿಯನ್ನು ಲೆಕ್ಕಿಸದೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವವನ್ನು ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.
ಒಂದು ಸಾರ್ವಕಾಲಿಕ ಅಭಿಪ್ರಾಯವೇನೆಂದರೆ, ದೇಶಕ್ಕೊಂದೇ ಪಠ್ಯಕ್ರಮ ಮತ್ತು ಭಾಷಾ ನೀತಿ ಯನ್ನು ಜಾರಿಗೊಳಿಸಿದರೆ ರಾಜ್ಯ ರಾಜ್ಯಗಳ ನಡುವಿನ ಶಿಕ್ಷಣ ನೀತಿಯಲ್ಲಿನ ವ್ಯತ್ಯಯ/ಗೊಂದಲ ಇಲ್ಲವಾದೀತು. ದೇಶಕ್ಕೊಂದೇ ಸಂವಿಧಾನ, ದೇಶಕ್ಕೊಂದೇ ಕಾನೂನು, ದೇಶಕ್ಕೊಂದೇ ಶಿಕ್ಷಣ ನೀತಿ, ದೇಶಕ್ಕೊಂದೇ ನಾಗರಿಕ ಸಂಹಿತೆ, ದೇಶಕ್ಕೊಂದೇ ಭಾಷೆ-ಇವೆಲ್ಲ ಅಧಿಕಾರದ ರಾಜಕೀಯದ ಸರಕುಗಳಾಗಬಾರದು.
ವಸತಿ, ಶಿಕ್ಷಣ, ಆರೋಗ್ಯ, ನೀರು, ಆಹಾರ, ಉದ್ಯೋಗ- ಈ ಮೂಲಭೂತ ಅಗತ್ಯಗಳಿಗೆ ಯಾವ ಸಂದರ್ಭದಲ್ಲೂ ಹೊಲಸು ಅಧಿಕಾರ ರಾಜಕೀಯದ ಸ್ಪರ್ಶ ಆಗದೇ ಇರುವಂಥ ಬಲವಾದ ಕಾನೂನನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಬೇಕಿದೆ, ಅತಿ ತುರ್ತಾಗಿ! ಅಧಿಕಾರಕ್ಕೆ ಬಂದ ಪಕ್ಷಗಳು ತಮ್ಮ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರೂಪಿಸುವ ಶಿಕ್ಷಣನೀತಿಯ ಪಲ್ಲಟಗಳು ಕಲಿಕಾರ್ಥಿ ಗಳಿಗೆ ನಿರಂತರವಾಗಿ ತೊಂದರೆಯನ್ನು ನೀಡುತ್ತದೆ.
ಕೊನೆಯ ಮಾತು: ದೇಶದಲ್ಲಿರುವ ಪ್ರಖ್ಯಾತ ವಿದ್ವಾಂಸರು, ಸಾಹಿತಿಗಳು, ವಿಜ್ಞಾನಿಗಳು, ಚಿಂತಕರು, ವಾಗ್ಮಿಗಳು, ಪ್ರಾಧ್ಯಾಪಕರು, ಉಪನ್ಯಾಸಕರು, ಶಿಕ್ಷಕರು, ವೈದ್ಯರು, ಎಂಜಿನಿಯರುಗಳು, ನ್ಯಾಯಾಧೀಶರು, ಅಧಿಕಾರಿಗಳು, ವಕೀಲರು, ಅರ್ಚಕರು, ಪತ್ರಿಕಾ ಸಂಪಾದಕರು, ಪ್ರವಚನಕಾರರು, ಶಿಕ್ಷಣ ತಜ್ಞರು, ತಂತ್ರಜ್ಞರು ಹಾಗೂ ರಾಜಕಾರಣಿಗಳಲ್ಲಿ ಬಹುತೇಕರು ಆಯಾ ರಾಜ್ಯ ಪಠ್ಯಕ್ರಮ ಗಳಲ್ಲಿ ಅಧ್ಯಯನ ಮಾಡಿದವರು ಎಂಬುದು ವಿಶೇಷವಾಗಿ ಗಮನಾರ್ಹ.
ರಾಜ್ಯ ಪಠ್ಯಕ್ರಮಗಳಲ್ಲಿ ಅಧ್ಯಯನ ಮಾಡಿದವರು ವಿದೇಶದಲ್ಲೂ ಅಧ್ಯಯನ ಮಾಡಿದ್ದಾರೆ. ಕೇವಲ ಸಂಪತ್ತಿನ ಪ್ರತಿಷ್ಠೆ ಮತ್ತು ಸ್ವಪ್ರತಿಷ್ಠೆಯ ಪ್ರಶ್ನೆಯಾಗಿ ಸಿಬಿಎಸ್‌ಇ ಅಥವಾ ಐಸಿಎಸ್‌ಇಯ ಆಯ್ಕೆಯಾಗಬಾರದು. ಬೌದ್ಧಿಕ ಪ್ರತಿಭೆ ಮತ್ತು ಉತ್ತಮ ಸಂವಹನ ಸಾಮರ್ಥ್ಯವು ಕಲಿಕಾರ್ಥಿ ಯಲ್ಲಿದ್ದರೆ, ಉತ್ತಮ ಬೋಧನೆಯಿದ್ದರೆ ಪಠ್ಯಕ್ರಮ ಯಾವುದಾದರೇನು ಎಂಬ ಮಾತೂ ಸಮರ್ಥನೀಯ!
(ಲೇಖಕರು ಹಿರಿಯ ಪತ್ರಕರ್ತರು)