Dr Sadhanashree Column: ಬಿಸಿಲಿನ ಬೇಗೆಯಿಂದ ಬಚಾವಾಗುವ ಬಗೆ
ಆಯುರ್ವೇದ ಸಮ್ಮತವಾದ ಕೆಲವು ವಿಶಿಷ್ಟ ಖಾದ್ಯಗಳನ್ನು ಇಂದು ನಿಮ್ಮ ಜತೆ ಹಂಚಿ ಕೊಳ್ಳಲು ಇಷ್ಟಪಡುತ್ತೇನೆ. ಈ ಖಾದ್ಯಗಳು ಶಿವಮೊಗ್ಗದ ಹಿರಿಯ ಆಯುರ್ವೇದ ವೈದ್ಯೆ ಡಾ. ನಿರ್ಮಲಾ ರವಿರಾಜ್‌ರವರ ಪಾಕಶಾಲೆಯಲ್ಲಿ ತಯಾರಾದ ಔಷಧಿಯ ಆಹಾರಗಳು. ಇವು ಈ ಬಿಸಿಲಿನಲ್ಲಿ ತಂಪಾಗಿಸಿ ಕೊಳ್ಳಲು ಹಾಗೂ ಹಮಾನದ ವ್ಯತ್ಯಾಸದಿಂದ ಆಗುವ ತೊಂದರೆ ಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕ. ಆದರೆ, ನೆನಪಿಡಿ!


ಸ್ವಾಸ್ಥ್ಯ ಸಂಪದ
ಸ್ನೇಹಿತರೇ, ಇದು ವಸಂತಕಾಲ, ಎಲ್ಲೆಡೆಯೂ ಚಿಗುರೊಡೆಯುವ ಕಾಲ! ಪ್ರಕೃತಿಯು ಹೊಸತನದೊಂದಿಗೆ ಸಂಭ್ರಮಿಸುವ ಕಾಲ. ಅದರ ಜತೆಗೆ ಬಿಸಿಲಿನ ಬೇಗೆಯೂ ತುಸು ಹೆಚ್ಚಾಗುವ ಕಾಲ! ಸೂರ್ಯನ ಬಿಸಿಲಿಗೆ, ಹಿಂದಿನ ಚಳಿಗಾಲದಲ್ಲಿ, ದೇಹದಲ್ಲಿ ಸಂಚಿತ ವಾದ ಕಫವು ಕರಗಿ ಕಫಜನ್ಯವಾದ ರೋಗಗಳು ಹೆಚ್ಚಾಗುವ ಕಾಲ! ವಿಶೇಷವಾಗಿ ನೆಗಡಿ, ಕೆಮ್ಮು, ಕಾಮಲ, ಮಧುಮೇಹ, ತಲೆನೋವು, ಉಬ್ಬಸ, ಅಮ್ಲಪಿತ್ತ ಮತ್ತು ಅಜೀರ್ಣದಂಥ ವ್ಯಾಧಿಗಳು ಅಧಿಕವಾಗುವ ಕಾಲ! ಆದ್ದರಿಂದಲೇ, ಚಳಿಗಾಲದಲ್ಲಿ ನಾವು ಪಾಲಿಸಿಕೊಂಡ ಬಂದ ದಿನಚರಿಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಂಡು, ನಮ್ಮ ಆಹಾರ-ವಿಹಾರಗಳಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಳ್ಳುವ ಕಾಲ!
ಹಾಗೆ ಮಾಡಿಕೊಂಡಾಗ ರೋಗಬಾರದಂತೆ ಕ್ಷೇಮವಾಗಿರಬಹುದಾದ ಕಾಲವಾಗಬಹುದು. ಮೊನ್ನೆ ಮುಗಿದ ಶಿವರಾತ್ರಿಯಂದು ಉಪವಾಸ ಮಾಡುವುದಾಗಲಿ, ಜಾಗರಣೆ ಆಚರಿಸುವು ದಾಗಲಿ ಅಥವಾ ಮುಂಬರುವ ಯುಗಾದಿಯಂದು ಕಹಿಬೇವನ್ನು ತಿನ್ನುವುದಾಗಲಿ- ಇವು ಈ ಋತುವಿಗೆ ಬೇಕಾದ ಆಹಾರ-ವಿಹಾರಗಳ ಬದಲಾವಣೆಗಳನ್ನು ಬಹಳ ಸೂಚ್ಯವಾಗಿ ಹಬ್ಬಗಳ ಮೂಲಕ ನಮ್ಮ ಹಿರಿಯರು ನಮಗೆ ತಿಳಿಸಿಕೊಟ್ಟ ಬಗೆ.
ಇದನ್ನೂ ಓದಿ: Dr Sadhanashree Column: ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವ ಅಭ್ಯಾಸವಿದೆಯಾ ?
ಇವುಗಳ ಪಾಲನೆಯು ದೇಹದಲ್ಲಿ ತೊಂದರೆ ಕೊಡಬಹುದಾದ ಸಂಚಿತ ಕಫವನ್ನು ಕರಗಿಸಿ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಹಾಯಕ. ಅಂತೆಯೇ, ಆಯುರ್ವೇದ ಸಮ್ಮತವಾದ ಕೆಲವು ವಿಶಿಷ್ಟ ಖಾದ್ಯಗಳನ್ನು ಇಂದು ನಿಮ್ಮ ಜತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈ ಖಾದ್ಯಗಳು ಶಿವಮೊಗ್ಗದ ಹಿರಿಯ ಆಯುರ್ವೇದ ವೈದ್ಯೆ ಡಾ.ನಿರ್ಮಲಾ ರವಿರಾಜ್‌ರವರ ಪಾಕಶಾಲೆಯಲ್ಲಿ ತಯಾರಾದ ಔಷಧಿಯ ಆಹಾರಗಳು. ಇವು ಈ ಬಿಸಿಲಿನಲ್ಲಿ ತಂಪಾಗಿಸಿ ಕೊಳ್ಳಲು ಹಾಗೂ ಹಮಾನದ ವ್ಯತ್ಯಾಸದಿಂದ ಆಗುವ ತೊಂದರೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕ. ಆದರೆ, ನೆನಪಿಡಿ! ಅತಿಯಾದರೆ ಅಮೃತವೂ ವಿಷವಾಗು ವಂತೆ ಈ ಅಡುಗೆಗಳನ್ನು ಹಿತಮಿತವಾಗಿ ಬಳಸು ವುದು ಸದಾ ಕ್ಷೇಮ.
ನಿಂಬೆ ಚಿಗುರಿನ ಚಟ್ನಿ
ಬೇಕಾಗುವ ಪದಾರ್ಥಗಳು: ಎಳೆ ನಿಂಬೆ ಸೊಪ್ಪು- 1/4 ಬಟ್ಟಲು, ಎಳೆ ಕರಿಬೇವಿನ ಸೊಪ್ಪು 1/4 ಬಟ್ಟಲು, ಸಾಸಿವೆ 1 ಚಮಚ, ಉದ್ದಿನಬೇಳೆ 1 ಚಮಚ, ಜೀರಿಗೆ 1 ಚಮಚ, ಒಣಮೆಣಸಿನಕಾಯಿ 3, ತುಪ್ಪ 6 ಚಮಚ, ಹಿಂಗು ಒಗ್ಗರಣೆಗೆ, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆಹಣ್ಣು 1 ಹೋಳು
ಮಾಡುವ ವಿಧಾನ: ನಿಂಬೆ ಗಿಡದ ಚಿಗುರಿನ ಎಲೆಗಳು ಮತ್ತು ಕರಿಬೇವಿನ ಚಿಗುರಿನ ಎಲೆಗಳನ್ನು ತೊಳೆದು, ಕುದಿಯುವ ನೀರಿನಲ್ಲಿ ಎರಡು ನಿಮಿಷ ಹಾಕಿ ಕುದಿಸಬೇಕು. ಕುದ್ದ ನೀರನ್ನು ಬಸಿಯಬೇಕು, ನಂತರ ಬಾಣಲೆಗೆ ನಾಲಕ್ಕು ಚಮಚ ತುಪ್ಪ ಹಾಕಿ ಬೆಂದ ಸೊಪ್ಪನ್ನು ಬಾಡಿಸಿ ತೆಗೆದು ಇಟ್ಟುಕೊಳ್ಳಬೇಕು. ನಂತರ, ಸಾಸಿವೆ, ಉದ್ದಿನಬೇಳೆ, ಒಣ ಮೆಣಸಿನಕಾಯಿ, ಜೀರಿಗೆಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಎಲ್ಲವನ್ನೂ ಸೇರಿಸಿ ಜತೆಗೆ ಸ್ವಲ್ಪ ಉಪ್ಪನ್ನು ಹಾಕಿ ನುಣ್ಣಗೆ ರುಬ್ಬಬೇಕು. ತುಪ್ಪದೊಂದಿಗೆ ಹಿಂಗು, ಸಾಸಿವೆ ಹಾಕಿ ಒಗ್ಗರಣೆ ಮಾಡಿ ರುಬ್ಬಿದ ಮಿಶ್ರಣಕ್ಕೆ ಸೇರಿಸಬೇಕು. ನಂತರ, ನಿಂಬೆರಸವನ್ನು ಹಿಂಡಿ ಮಿಶ್ರಣವನ್ನು ಚೆನ್ನಾಗಿ ಕಲಸಬೇಕು. ಈ ಚಟ್ನಿಯನ್ನು ರೊಟ್ಟಿ, ಚಪಾತಿ, ದೋಸೆ ಅಥವಾ ಬಿಸಿ ಅನ್ನದೊಂದಿಗೆ ತುಪ್ಪ ಹಾಕಿಕೊಂಡು ತಿಂದರೆ ಬಲು ರುಚಿ.
ಈ ಚಟ್ನಿಯ ಕೆಲವು ಉಪಯೋಗಗಳೆಂದರೆ, ಇದು ಹಸಿವೆಯನ್ನು ಹಾಗೂ ಬಾಯಿರುಚಿ ಯನ್ನು ಹೆಚ್ಚಿಸುತ್ತದೆ, ಕಫದಿಂದ ಉಂಟಾದ ಕೆಮ್ಮು ಮತ್ತು ದಮ್ಮುಗಳನ್ನು ಕಡಿಮೆ ಮಾಡುತ್ತದೆ. ಇದು ಹೊಟ್ಟೆನೋವು ಮತ್ತು ಉಬ್ಬರಕ್ಕೆ ಉಪಕಾರಿ. ಮಲಬದ್ಧತೆಯನ್ನು ನಿವಾರಿಸಿ ಚರ್ಮದ ತುರಿಕೆ ಮತ್ತು ಗಂಧೆಗಳನ್ನು ನಿವಾರಿಸುತ್ತದೆ.
ಬೇವಿನ ಹೂವಿನ ಪಾನಕ ಬೇಕಾಗುವ ಪದಾರ್ಥಗಳು: ಬೇವಿನ ಹೂವು 2 ಚಮಚ, ದ್ರಾಕ್ಷಿ ಹಣ್ಣು ಎಂಟರಿಂದ ಹತ್ತು, ಏಲಕ್ಕಿ ಪುಡಿ 1/4 ಚಮಚ, ಬಾದಾಮಿ ಪುಡಿ 1 ಚಮಚ, ಬಡೇ ಸೋಂಪು 1 ಚಮಚ, ಸಕ್ಕರೆ ರುಚಿಗೆ ತಕ್ಕಷ್ಟು, ನಿಂಬೆಹಣ್ಣು ಅರ್ಧ ಹೋಳು, ನೀರು ನಾಲ್ಕು ಕಪ್.
ಮಾಡುವ ವಿಧಾನ: ಬೇವಿನ ಹೂವಿನ ದಳಗಳನ್ನು ಬಿಡಿಸಿಕೊಂಡು ನೀರಿನಲ್ಲಿ ತೊಳೆದು ಕೊಳ್ಳಬೇಕು. ದ್ರಾಕ್ಷಿ ಹಣ್ಣನ್ನು ತೊಳೆದುಕೊಂಡು ಬೇವಿನ ಹೂವಿನೊಂದಿಗೆ ರುಬ್ಬಿ ಕೊಳ್ಳಬೇಕು. ನಂತರ, ಒಂದು ಪಾತ್ರೆಯಲ್ಲಿ ಕಾಯಿಸಿ ಆರಿಸಿದ ನೀರಿಗೆ ರುಬ್ಬಿದ ಮಿಶ್ರಣ, ಏಲಕ್ಕಿ ಪುಡಿ, ಬಾದಾಮಿ ಪುಡಿ, ಬಡೇ ಸೋಂಪಿನ ಪುಡಿ ಮತ್ತು ಸಕ್ಕರೆಯನ್ನು ಹಾಕಿ, ನಿಂಬೆರಸವನ್ನು ಹಿಂಡಿ, ಚೆನ್ನಾಗಿ ಬೆರೆಸಬೇಕು. ಸಕ್ಕರೆಯು ಕರಗಿದ ನಂತರ ಸೋಸಿಕೊಳ್ಳ ಬೇಕು. ಈಗ ಬೇವಿನ ಹೂವಿನ ಪಾನಕವು ಸಿದ್ಧ. ಇದರ ಕೆಲವು ಉಪಯೋಗಗಳೆಂದರೆ, ಇದು ದೇಹಕ್ಕೆ ತಂಪು ನೀಡುತ್ತದೆ ಹಾಗೂ ಬಾಯಾರಿಕೆಯನ್ನು ಹೋಗಲಾಡಿಸುತ್ತದೆ, ಜಂತುಹುಳಗಳನ್ನು ನಿವಾರಿಸುತ್ತದೆ, ಮೈಮೇಲೆ ಉಂಟಾಗುವ ಪಿತ್ತದ ಗಂಧೆಗಳು ಮತ್ತು ಪಿತ್ತದ ವಾಂತಿಯನ್ನು ಶಮನ ಮಾಡುತ್ತದೆ. ಬಾಯಿರುಚಿಯನ್ನು ಹೆಚ್ಚಿಸಿ ಜೀರ್ಣಶಕ್ತಿ ಯನ್ನು ಉತ್ತಮಗೊಳಿಸುತ್ತದೆ.
ಬೂದುಗುಂಬಳದ ಸೂಪು:
ಬೇಕಾಗುವ ಪದಾರ್ಥಗಳು: ಬೂದುಗುಂಬಳದ ಹೋಳು 2 ಬಟ್ಟಲು, ಜೀರಿಗೆಪುಡಿ೧ ಚಮಚ, ಧನಿಯಾ ಪುಡಿ 1/4 ಚಮಚ, ಅಕ್ಕಿ ಹಿಟ್ಟು 1 ಚಮಚ, ಬೆಣ್ಣೆ 4 ಚಮಚ
ಮಾಡುವ ವಿಧಾನ: ಬೂದುಗುಂಬಳದ ಸಿಪ್ಪೆಯನ್ನು ತೆಗೆದು ಹೋಳುಗಳನ್ನು ಮಾಡಿ ಕೊಂಡು ನೀರಿನಲ್ಲಿ ಬೇಯಿಸಿಕೊಳ್ಳಬೇಕು. ಬೇಯಿಸಿದ ಹೋಳುಗಳ ಜತೆಗೆ ಅಕ್ಕಿ ಹಿಟ್ಟನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಸೂಪ್ ಹದಕ್ಕೆ ನೀರು ಬೆರೆಸಿ ಕುದಿಯಲು ಇಡಬೇಕು. ಈಗ ಜೀರಿಗೆ ಪುಡಿ, ಧನಿಯಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ತಿರುಗಿಸಿ ಚೆನ್ನಾಗಿ ಕುದಿಸಿ ಕೆಳಗಿಳಿಸಿದರೆ ಸೂಪು ಸೇವಿಸಲು ಸಿದ್ಧ. ಬಿಸಿ ಇರುವಾಗಲೇ ಇದನ್ನು ಸ್ವಲ್ಪ ಬೆಣ್ಣೆಯೊಂದಿಗೆ ಸೇವಿಸತಕ್ಕದ್ದು.
ಉಪಯೋಗಗಳು: ಇದು ದೇಹಕ್ಕೆ ತಂಪು ಮತ್ತು ಬಲವನ್ನು ಕೊಡುತ್ತದೆ. ಬಾಯಿರುಚಿ ಯನ್ನು ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಉರಿಮೂತ್ರವನ್ನು ಶಮನ ಮಾಡು ತ್ತದೆ. ಹೊಟ್ಟೆಯಲ್ಲಿನ ಗಾಳಿಯನ್ನು ಹೊರಗೆ ಹಾಕಿ ಹೊಟ್ಟೆಯ ನೋವನ್ನು ಶಮನ ಮಾಡುತ್ತದೆ.
ದಾಳಿಂಬೆ ಸಾರು:
ಬೇಕಾಗುವ ಪದಾರ್ಥಗಳು: ಹೆಸರುಬೇಳೆ 100 ಗ್ರಾಮ್, ನೀರು ಬೇಕಾಗುವಷ್ಟು, ದಾಳಿಂಬೆ ರಸ 1 ಬಟ್ಟಲು, ಉಪ್ಪು ರುಚಿಗೆ ತಕ್ಕಷ್ಟು, ಶುಂಠಿ ಪುಡಿ 1/4 ಚಮಚ, ಕೊತ್ತಂಬರಿ ಪುಡಿ 1/2 ಚಮಚ, ಜೀರಿಗೆ ಪುಡಿ 2 ಚಿಟಿಕೆ, ತುಪ್ಪ ೪ ಚಮಚ.
ಮಾಡುವ ವಿಧಾನ: ಹೆಸರುಬೇಳೆಯನ್ನು ನೀರಿನಲ್ಲಿ ಬೇಯಿಸಿ ಕೆಳಗಿಳಿಸಿ, ದಾಳಿಂಬೆ ಬೀಜಗಳನ್ನು ಬೇರ್ಪಡಿಸಿ ಒಂದೆರಡು ಸುತ್ತು ಮಾತ್ರ ರುಬ್ಬಿ ರಸ ಹಿಂಡಿಕೊಳ್ಳಿ. ನಂತರ, ಬೇಯಿಸಿದ ಬೇಳೆಗೆ ಈ ರಸವನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ, ಕೊತ್ತಂಬರಿ, ಜೀರಿಗೆ ಪುಡಿಗಳನ್ನು ಸೇರಿಸಿ, ನಂತರ ಉಪ್ಪು ಹಾಕಿ, ಸಾಸಿವೆ ಕರಿಬೇವು, ಬಿಸಿ ಅನ್ನದೊಂದಿಗೆ ತುಪ್ಪ ಹಾಕಿ ಸವಿದರೆ ಬಲು ರುಚಿ ಉಪಯೋಗಗಳು: ಅಜೀರ್ಣವನ್ನು ಹೋಗಲಾಡಿಸಿ ಬಾಯಿರುಚಿಯನ್ನು ಹೆಚ್ಚಿಸುತ್ತದೆ. ಕಫ ಮತ್ತು ಪಿತ್ತಜ ವಿಕಾರಗಳಲ್ಲಿ ಹಿತಕರ. ಜ್ವರವನ್ನು ಮತ್ತು ರಕ್ತದೋಷವನ್ನು ನಿವಾರಿಸುತ್ತದೆ. ಸುರಿಯುವ ನೆಗಡಿ ಮತ್ತು ದಮ್ಮು ಇರುವವರಿಗೆ ಉತ್ತಮ ಆಹಾರ. ಕ್ರಿಮಿಗಳನ್ನು ಕಡಿಮೆ ಮಾಡುತ್ತದೆ.
ಮೆಂತ್ಯದ ಪಾಯಸ:
ಬೇಕಾಗುವ ಸಾಮಗ್ರಿಗಳು: ಮೆಂತ್ಯಕಾಳು 1 ಚಮಚ, ಅಕ್ಕಿ 4 ಚಮಚ, ತೆಂಗಿನಕಾಯಿ ತುರಿ 4 ಕಪ್, ಬೆಲ್ಲ 1 ಕಪ್, ಉಪ್ಪು 1 ಚಿಟಿಕೆ
ಮಾಡುವ ವಿಧಾನ: ಮೆಂತ್ಯ ಮತ್ತು ಅಕ್ಕಿಯನ್ನು ತೊಳೆದು ಒಂದೂವರೆ ಕಪ್ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಕಾಯಿ ತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ ನಂತರ ಹಾಲನ್ನು ಹಿಂಡಿ ತೆಗೆಯಿರಿ. ಇದು ದಪ್ಪ ಕಾಯಿಹಾಲು. ಪುನಃ ಒಂದು ಕಪ್ ನೀರು ಸೇರಿಸಿ ರುಬ್ಬಿ ಮತ್ತೊಮ್ಮೆ ಕಾಯಿಹಾಲನ್ನು ಹಿಂಡಿ ತೆಗೆಯಿರಿ. ಇದು ತೆಳು ಕಾಯಿಹಾಲು. ಈಗ ಚೆನ್ನಾಗಿ ಬೇಯಿಸಿದ ಮೆಂತ್ಯ ಕಾಳು ಮತ್ತು ಅಕ್ಕಿಗೆ, ಬೆಲ್ಲ, ಉಪ್ಪು ಮತ್ತು ತೆಳು ಕಾಯಿ ಹಾಲನ್ನು ಸೇರಿಸಿ ಕುದಿಸಿ. ಕುದಿ ಬಂದ ನಂತರ ದಪ್ಪ ಕಾಯಿಹಾಲನ್ನು ಸೇರಿಸಿ ಕೆಳಗಿಳಿಸಿ. ಈಗ ಬಿಸಿಬಿಸಿಯಾದ ಮೆಂತ್ಯ ಪಾಯಸ ಸಿದ್ಧ
ಉಪಯೋಗಗಳು: ದೇಹಕ್ಕೆ ತಂಪು ನೀಡಿ ಉಷ್ಣ ಶರೀರದವರಿಗೆ ಉತ್ತಮ ಆಹಾರ ವಾಗುತ್ತದೆ. ಕೀಲುನೋವು, ಕೈಕಾಲುಗಳಲ್ಲಿ ಸೆಳೆತ ಬರುವವರಿಗೆ, ಗರ್ಭಿಣಿಯರಿಗೆ ಹಿತವಾದ ಆಹಾರವಾಗಿದೆ. ಎದೆಹಾಲನ್ನು ಹೆಚ್ಚಿಸುವುದರಿಂದ ಬಾಣಂತಿಯರಿಗೂ ಉತ್ತಮ ಆಹಾರ ವಾಗಿದೆ. ಅಂಗೈ ಅಂಗಾಲುಗಳಲ್ಲಿ ಉರಿ, ಕಣ್ಣು ಉರಿ, ಹೊಟ್ಟೆ ಉರಿ ಮತ್ತು ಎದೆ ಉರಿ ಯನ್ನು ಕಡಿಮೆ ಮಾಡುತ್ತದೆ. ಇದು ಬೇಸಗೆ ಕಾಲದಲ್ಲಿ ಸೇವಿಸಲು ಉತ್ತಮವಾದ ಆಹಾರ ವಾಗಿದೆ.
ಒಣದ್ರಾಕ್ಷಿ ಪಾನಕ:
ಬೇಕಾಗುವ ಸಾಮಗ್ರಿಗಳು: ಒಣದ್ರಾಕ್ಷಿ 1/2 ಕಪ್, ದಾಳಿಂಬೆ ಬೀಜ 1/2 ಕಪ್, ಸಕ್ಕರೆ ರುಚಿಗೆ ತಕ್ಕಷ್ಟು, ನಿಂಬೆರಸ ಒಂದು ಚಮಚ , ಉಪ್ಪು ಎರಡು ಚಿಟಿಕೆ, ನೀರು 4 ಕಪ್ಪು ಮಾಡುವ ವಿಧಾನ: ಒಣದ್ರಾಕ್ಷಿಯನ್ನು ತೊಳೆದು, ನಾಲ್ಕು ಗಂಟೆಯ ಕಾಲ ನೆನೆಸಿಡಬೇಕು. ದಾಳಿಂಬೆ ಬೀಜವನ್ನು ನುಣ್ಣಗೆ ರುಬ್ಬಿ ರಸವನ್ನು ಸೋಸಿಕೊಳ್ಳಬೇಕು. ನೆನೆಸಿದ ದ್ರಾಕ್ಷಿ ಯನ್ನು ರುಬ್ಬಿಕೊಂಡು ನೀರು ಬೆರೆಸಿ ದ್ರಾಕ್ಷಿರಸವನ್ನು ಸೋಸಿಕೊಳ್ಳಬೇಕು. ಈ ದ್ರಾಕ್ಷಿ ರಸಕ್ಕೆ ದಾಳಿಂಬೆ ರಸ, ನಿಂಬೆರಸ, ಉಪ್ಪು ಮತ್ತು ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ ಸರಿಯಾಗಿ ಮಿಶ್ರ ಮಾಡಬೇಕು. ಈಗ ಈ ಪಾನಕ ಸವಿಯಲು ಸಿದ್ಧ
ಉಪಯೋಗಗಳು: ಬೇಸಗೆಯಲ್ಲಿ ದಾಹವನ್ನು ನೀಗಿಸಲು ಉತ್ತಮ ಪಾನೀಯ. ಬಾಯಾ ರಿಕೆಯನ್ನು ಕಡಿಮೆ ಮಾಡಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಮಲ ಮತ್ತು ಮೂತ್ರಗಳ ಸರಾಗವಾದ ಪ್ರವೃತ್ತಿಗೆ ಸಹಕಾರಿ. ಹೃದಯಕ್ಕೆ ಹಿತಕರ. ಸುಸ್ತು ಮತ್ತು ಆಯಾಸವನ್ನು ಕಡಿಮೆ ಮಾಡಿ ಶರೀರಕ್ಕೆ ಬಲವನ್ನು ಮತ್ತು ಪುಷ್ಟಿಯನ್ನು ನೀಡುತ್ತದೆ.
ಮಾವಿನ ಹೂವಿನ ತಂಬುಳಿ:
ಬೇಕಾಗುವ ಸಾಮಗ್ರಿಗಳು: ಮಾವಿನ ಹೂವು 1/4 ಬಟ್ಟಲು, ತೆಂಗಿನತುರಿ 1/2 ಬಟ್ಟಲು, ಸಿಹಿ ಮಜ್ಜಿಗೆ 4 ಬಟ್ಟಲು, ಜೀರಿಗೆ 1/4 ಚಮಚ, ಒಣಮೆಣಸಿನಕಾಯಿ 3, ಉಪ್ಪು ರುಚಿಗೆ ತಕ್ಕಷ್ಟು, ಕೊಬ್ಬರಿ ಎಣ್ಣೆ 8 ಚಮಚ, ಸಾಸಿವೆ ಕರಿಬೇವು ಒಗ್ಗರಣೆ.
ಮಾಡುವ ವಿಧಾನ: ಮಾವಿನ ಹೂವನ್ನು ಕೊಬ್ಬರಿ ಎಣ್ಣೆ ಅಥವಾ ನಿತ್ಯ ಅಡುಗೆಯಲ್ಲಿ ಬಳಸುವ ಎಣ್ಣೆಯಲ್ಲಿ ಲಘುವಾಗಿ ಬಾಡಿಸಿ. ಜೀರಿಗೆಯನ್ನು ಬಿಸಿ ಮಾಡಿಕೊಂಡು ತೆಂಗಿನ ತುರಿಯೊಂದಿಗೆ ಸೇರಿಸಿ. ಇದರ ಜತೆಗೆ ಹುರಿದ ಮಾವಿನ ಹೂವನ್ನು ಸೇರಿಸಿ ನುಣ್ಣಗೆ ರುಬ್ಬಿ. ನಂತರ, ಸಿಹಿ ಮಜ್ಜಿಗೆಯೊಂದಿಗೆ ಈ ಮಿಶ್ರಣವನ್ನು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಸಾಸಿವೆ, ಒಣಮೆಣಸು, ಕರಿಬೇವಿನಿಂದ ಕೊಟ್ಟ ಒಗ್ಗರಣೆಯನ್ನು ಸೇರಿಸಿದರೆ ರುಚಿಯಾದ ಮಾವಿನ ಹೂವಿನ ತಂಬುಳಿ ಸಿದ್ಧ.
ಉಪಯೋಗಗಳು: ರುಚಿಕರ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ತಂಪು ನೀಡುತ್ತದೆ ಮತ್ತು ಪಿತ್ತದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಬೇಧಿಯನ್ನು ನಿಯಂತ್ರಿ ಸುತ್ತದೆ. ಕಫವನ್ನು ಶಮನ ಮಾಡಿ ರಕ್ತದುಷ್ಟಿಯನ್ನು ನಿವಾರಿಸುತ್ತದೆ. ಅತಿಯಾದ ರಕ್ತಸ್ರಾವವನ್ನು ನಿಲ್ಲಿಸುತ್ತದೆ. ಪ್ರಮೇಹ ಮತ್ತು ಅತಿಯಾದ ಮೂತ್ರ ಪ್ರವೃತ್ತಿಯಲ್ಲಿ ಉಪಕಾರಿ. ಆಮಶಂಕೆಯಲ್ಲಿ ಉತ್ತಮ ಔಷಧವಾಗಿದೆ.
ಹೀಗೆ, ಸ್ನೇಹಿತರೇ ಹೇಳುತ್ತಾ ಹೋದರೆ ನೂರಾರು ಬಗೆಯ ರುಚಿಕರವಾದ, ಆರೋಗ್ಯಕರ ವಾದ ಆಹಾರ ಖಾದ್ಯಗಳನ್ನು ನಿಮ್ಮ ಜತೆ ಹಂಚಿಕೊಳ್ಳಬಹುದು. ಆಯುರ್ವೇದ ಸಮ್ಮತ ವಾದ ಈ ಖಾದ್ಯಗಳನ್ನು ಕಾಲಕ್ಕೆ ತಕ್ಕಂತೆ ನಾವು ಸೇವಿಸಿದರೆ ಬಹಳ ನೈಸರ್ಗಿಕವಾಗಿಯೇ ನಮ್ಮ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿಯೇ ಅಲ್ಲವೇ ನಮ್ಮ ಹಿರಿಯರು ಆಹಾರವನ್ನು ‘ಮಹಾಭೈಷಜ್ಯ’ವೆಂದು ಕರೆದದ್ದು!