Vishweshwar Bhat Column: ಹುಡುಗಿ ಆಂಡ್ರಾಯ್ಡ್-ಹುಡುಗ Apple ಆದ್ರೆ ಅವರ ಜೀವನ ಹೇಗೆ ?
ಮದುವೆಯಾದ ಮೊದಲ ದಿನದಿಂದಲೇ ಇವರ ಮನೆಯಲ್ಲಿ ಶುರುವಾಗುವ ಅತಿ ದೊಡ್ಡ ಯುದ್ಧವೆಂದರೆ, ಅದು ‘ಚಾರ್ಜರ್ ಕೇಬಲ್’ ಸಮರ. ಈಗೇನೋ ಹೊಸ ಐಫೋನ್ಗಳಲ್ಲಿ ಟೈಪ್-ಸಿ ಬಂದಿದೆ, ಆದರೂ ಹಳೆಯ ಐಫೋನ್ ಇಟ್ಟುಕೊಂಡಿರುವ ಗಂಡನಿಗೆ ತನ್ನ ಲೈಟ್ನಿಂಗ್ ಕೇಬಲ್ ಪ್ರಾಣಕ್ಕಿಂತ ಹೆಚ್ಚು. ಹೆಂಡತಿ ತನ್ನ ಆಂಡ್ರಾಯ್ಡ್ ಫೋನ್ಗೆ ಸಿಗುವ ಸೂಪರ್ - ಚಾರ್ಜರ್ ಮೂಲಕ ಕೇವಲ ಇಪ್ಪತ್ತು ನಿಮಿಷಗಳಲ್ಲಿ ನೂರಕ್ಕೆ ನೂರು ಚಾರ್ಜ್ ಮಾಡಿಕೊಂಡು ಬೀಗುತ್ತಿದ್ದರೆ, ಗಂಡ ತನ್ನ ಐಫೋನ್ಗೆ ನಿಧಾನವಾಗಿ ಚಾರ್ಜ್ ಆಗುವುದನ್ನು ನೋಡುತ್ತಾ, ‘ನಮ್ಮ ಆಪಲ್ ಬ್ಯಾಟರಿ ಬಾಳಿಕೆ ಗೊತ್ತಾ ನಿನಗೆ?’ ಎಂದು ಸಮರ್ಥಿಸಿಕೊಳ್ಳುತ್ತಾನೆ.
-
ಇದೇ ಅಂತರಂಗ ಸುದ್ದಿ
ಹುಡುಗಿ ಆಂಡ್ರಾಯ್ಡ್ ಮತ್ತು ಹುಡುಗ ಆಪಲ್. ಇಬ್ಬರೂ ಮದುವೆಯಾದರೆ ಯಾವ ರೀತಿಯ ಸಮಸ್ಯೆಗಳಾಗಬಹುದು? ಇಬ್ಬರ ಮಧ್ಯೆ ಸಾಮರಸ್ಯ ಕುದುರಬಹುದಾ? ಜೀವನದಲ್ಲಿ ಏನೆಲ್ಲ ಅವಾಂತರಗಳು ಜರುಗಬಹುದು? ಹಾಗೆಂದು ಇತ್ತೀಚೆಗೆ ‘ವಿಶ್ವವಾಣಿ’ ಓದುಗರಾದ ವಿಜಯ್ ಉಪಾಧ್ಯ ಅವರು ಒಂದು ಪ್ರಶ್ನೆಯನ್ನು ಕಳಿಸಿ, ‘ಇದಕ್ಕೆ ನಿಮ್ಮ ಉತ್ತರ ಏನು?’ ಎಂದು ಕೇಳಿದ್ದರು. ಆಧುನಿಕ ಪ್ರೇಮಕಥೆಗಳಲ್ಲಿ ಜಾತಿ, ಧರ್ಮ, ಗೋತ್ರ ಅಥವಾ ರಾಶಿ-ನಕ್ಷತ್ರಗಳಿಗಿಂತಲೂ ಈಗ ಅತ್ಯಂತ ನಿರ್ಣಾಯಕವಾಗಿರುವುದು ತಂತ್ರಜ್ಞಾನದ ಗೋತ್ರ! ಹುಡುಗಿ ಆಂಡ್ರಾಯ್ಡ್ ಪ್ರಪಂಚದ ರಾಣಿಯಾಗಿದ್ದು, ಹುಡುಗ ಆಪಲ್ ಸಾಮ್ರಾಜ್ಯದ ರಾಜನಾಗಿದ್ದರೆ, ಇವರ ಮದುವೆ ಕೇವಲ ಎರಡು ಮನಸ್ಸುಗಳ ಮಿಲನವಲ್ಲ, ಅದು ಗೂಗಲ್ ಮತ್ತು ಆಪಲ್ ನಡುವಿನ ಐತಿಹಾಸಿಕ ಶೀತಲ ಸಮರದ ಮುಂದುವರಿದ ಭಾಗವೇ ಸರಿ.
ಮದುವೆಯ ಮಂಟಪದಲ್ಲಿ ಅಕ್ಷತೆ ಬೀಳುವ ಮೊದಲೇ, ‘ನನ್ನ ಐಫೋನ್ ಪೋರ್ಟ್ರೇಟ್ ಮೋಡ್ ನಲ್ಲಿ ಫೋಟೋ ಚೆನ್ನಾಗಿ ಬರುತ್ತೆ’ ಎಂದು ಹುಡುಗನ ಕಡೆಯವರು, ‘ಇಲ್ಲ, ನನ್ನ ಸ್ಯಾಮ್ಸಂಗ್ ಅಥವಾ ಪಿಕ್ಸೆಲ್ ಫೋನ್ನಲ್ಲಿ ನೈಟ್ ಮೋಡ್ ಹಾಗೂ ಜೂಮ್ ಸೂಪರ್ ಆಗಿರುತ್ತೆ’ ಎಂದು ಹುಡುಗಿಯ ಕಡೆಯವರು ವಾದಕ್ಕಿಳಿದರೆ ಆಶ್ಚರ್ಯವಿಲ್ಲ. ಹೀಗೆ ವಿಭಿನ್ನ ಆಪರೇಟಿಂಗ್ ಸಿಸ್ಟಮ್ಗಳ (OS) ಹಿನ್ನೆಲೆಯಿಂದ ಬಂದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಎದುರಾಗುವ ತಾಂತ್ರಿಕ ತೊಳಲಾಟಗಳು, ಹಾಸ್ಯಮಯ ಪ್ರಸಂಗಗಳು ಮತ್ತು ಕಡೆಗೆ ಪ್ರೀತಿಯ ಸಾಫ್ಟ್ʼವೇರ್ ಮೂಲಕ ಹೇಗೆ ಸಾಮರಸ್ಯ ಸಾಧಿಸುತ್ತಾರೆ ಎಂಬುದು ನಿಜಕ್ಕೂ ಒಂದು ರೋಚಕ ಕಥೆ.
ಮದುವೆಯಾದ ಮೊದಲ ದಿನದಿಂದಲೇ ಇವರ ಮನೆಯಲ್ಲಿ ಶುರುವಾಗುವ ಅತಿ ದೊಡ್ಡ ಯುದ್ಧವೆಂದರೆ, ಅದು ‘ಚಾರ್ಜರ್ ಕೇಬಲ್’ ಸಮರ. ಈಗೇನೋ ಹೊಸ ಐಫೋನ್ಗಳಲ್ಲಿ ಟೈಪ್-ಸಿ ಬಂದಿದೆ, ಆದರೂ ಹಳೆಯ ಐಫೋನ್ ಇಟ್ಟುಕೊಂಡಿರುವ ಗಂಡನಿಗೆ ತನ್ನ ಲೈಟ್ನಿಂಗ್ ಕೇಬಲ್ ಪ್ರಾಣಕ್ಕಿಂತ ಹೆಚ್ಚು. ಹೆಂಡತಿ ತನ್ನ ಆಂಡ್ರಾಯ್ಡ್ ಫೋನ್ಗೆ ಸಿಗುವ ಸೂಪರ್ - ಚಾರ್ಜರ್ ಮೂಲಕ ಕೇವಲ ಇಪ್ಪತ್ತು ನಿಮಿಷಗಳಲ್ಲಿ ನೂರಕ್ಕೆ ನೂರು ಚಾರ್ಜ್ ಮಾಡಿಕೊಂಡು ಬೀಗುತ್ತಿದ್ದರೆ, ಗಂಡ ತನ್ನ ಐಫೋನ್ಗೆ ನಿಧಾನವಾಗಿ ಚಾರ್ಜ್ ಆಗುವುದನ್ನು ನೋಡುತ್ತಾ, ‘ನಮ್ಮ ಆಪಲ್ ಬ್ಯಾಟರಿ ಬಾಳಿಕೆ ಗೊತ್ತಾ ನಿನಗೆ?’ ಎಂದು ಸಮರ್ಥಿಸಿಕೊಳ್ಳುತ್ತಾನೆ.
ಇದನ್ನೂ ಓದಿ: Vishweshwar Bhat Column: ಶ್ರದ್ಧಾಂಜಲಿಗೆ ಜೀವಂತಿಕೆ
ಪ್ರವಾಸಕ್ಕೆ ಹೋದಾಗಲಂತೂ ಎರಡು ಬಗೆಯ ಚಾರ್ಜರ್ಗಳು, ಪವರ್ ಬ್ಯಾಂಕ್ಗಳು ಮತ್ತು ಅಡಾಪ್ಟರ್ಗಳನ್ನು ಪ್ಯಾಕ್ ಮಾಡುವುದೇ ಒಂದು ದೊಡ್ಡ ಸಾಹಸ. ‘ನನ್ನ ಚಾರ್ಜರ್ ಎಲ್ಲಿ?’ ಎಂಬ ಪ್ರಶ್ನೆಗಿಂತ ಹೆಚ್ಚಾಗಿ, ‘ನನ್ನ ಕೇಬಲ್ ಮುಟ್ಟಬೇಡ, ಅದು ಒರಿಜಿನಲ್ ಆಪಲ್ ಕೇಬಲ್, ಹಾಳಾದ್ರೆ ಮೂರು ಸಾವಿರ ರೂಪಾಯಿ’ ಎಂಬ ಗಂಡನ ಎಚ್ಚರಿಕೆಯೇ ಮನೆಯಲ್ಲಿ ಹೆಚ್ಚು ಪ್ರತಿಧ್ವನಿಸುತ್ತದೆ. ಇನ್ನು ಇವರಿಬ್ಬರ ನಡುವೆ ನಡೆಯುವ ‘ಫೋಟೋ ಮತ್ತು ಫೈಲ್ ಶೇರಿಂಗ್’ ಪ್ರಸಂಗಗಳಂತೂ ಕೇಳುವುದೇ ಬೇಡ. ಗಂಡ ತನ್ನ ಐಫೋನ್ನಲ್ಲಿ ತೆಗೆದ ಅದ್ಭುತ ಫೋಟೋಗಳನ್ನು ಹೆಂಡತಿಗೆ ಕಳುಹಿಸಬೇಕಾದರೆ ‘ಏರ್ಡ್ರಾಪ್’ ಕೆಲಸ ಮಾಡುವುದಿಲ್ಲ!
ಇತ್ತ ಹೆಂಡತಿ ತನ್ನ ಆಂಡ್ರಾಯ್ಡ್ನ ‘ಕ್ವಿಕ್ ಶೇರ್’ ಆನ್ ಮಾಡಿಕೊಂಡು ಕಾಯುತ್ತಿದ್ದರೆ, ಗಂಡ ವಾಟ್ಸಾಪ್ನಲ್ಲಿ ‘ಡಾಕ್ಯುಮೆಂಟ್’ ಮಾಡಿ ಕಳುಹಿಸಲು ಪರದಾಡುತ್ತಾನೆ. ‘ಅಯ್ಯೋ, ವಾಟ್ಸಾಪ್ನಲ್ಲಿ ಕಳಿಸಿದ್ರೆ ಕ್ವಾಲಿಟಿ ಹಾಳಾಗುತ್ತೆ, ಟೆಲಿಗ್ರಾಮ್ನಲ್ಲಿ ಕಳಿಸಿ’ ಎಂದು ಹೆಂಡತಿ ಗದರಿದರೆ, ನನ್ನ ಫೋನ್ನಲ್ಲಿ ಟೆಲಿಗ್ರಾಮ್ ಇನ್ಸ್ಟಾಲ್ ಮಾಡಲು ಸ್ಟೋರೇಜ್ ಇಲ್ಲ, ಐಕ್ಲೌಡ್ ಫುಲ್ ಆಗಿದೆ’ ಎಂದು ಗಂಡ ಮುಖ ಸಪ್ಪಗೆ ಮಾಡಿಕೊಳ್ಳುತ್ತಾನೆ. ಕಡೆಗೆ ಒಂದು ಫೋಟೋ ವರ್ಗಾವಣೆ ಮಾಡಲು ಇಬ್ಬರೂ ಸೇರಿ ಗೂಗಲ್ ಡ್ರೈವ್ ಲಿಂಕ್ ಕ್ರಿಯೇಟ್ ಮಾಡಿ, ಶೇರ್ ಮಾಡುವಷ್ಟರಲ್ಲಿ ಅವರ ಪ್ರವಾಸದ ಅರ್ಧ ದಿನವೇ ಕಳೆದುಹೋಗಿರುತ್ತದೆ!
ಸ್ವಾತಂತ್ರ್ಯ ಮತ್ತು ನಿಯಂತ್ರಣ ಎಂಬ ಎರಡು ವಿರುದ್ಧ ಧ್ರುವಗಳಂತೆ ಇವರ ವ್ಯಕ್ತಿತ್ವವೂ ಇರುತ್ತದೆ. ಆಂಡ್ರಾಯ್ಡ ಬಳಸುವ ಹೆಂಡತಿಗೆ ಪ್ರತಿಯೊಂದರಲ್ಲೂ ಕಸ್ಟಮೈಸೇಶನ್ ಬೇಕು. ಅವಳ ಫೋನ್ನ ರಿಂಗ್ಟೋನ್, ವಾಲ್ಪೇಪರ್, ಐಕಾನ್ಗಳು ದಿನಕ್ಕೊಂದು ಬಣ್ಣ ಬದಲಿಸುತ್ತಿರುತ್ತವೆ. ಅವಳಿಗೆ ಬೇಕಾದ ಥರ್ಡ್ ಪಾರ್ಟಿ ಆಪ್ಗಳನ್ನು ಎಲ್ಲಿಂದ ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಆದರೆ, ಗಂಡನ ಐಫೋನ್ ಒಂದು ಶಿಸ್ತುಬದ್ಧ ಮಿಲಿಟರಿ ಶಾಲೆಯಂತೆ. ಅಲ್ಲಿ ಆಪಲ್ ಕಂಪನಿ ಹೇಳಿದಂತೆಯೇ ಎಲ್ಲವೂ ನಡೆಯಬೇಕು. ಹೆಂಡತಿ ತನ್ನ ಫೊನ್ನಲ್ಲಿ ಯೂಟ್ಯೂಬ್ ಬ್ಯಾಕ್ಗ್ರೌಂಡ್ನಲ್ಲಿ ಪ್ಲೇ ಮಾಡುತ್ತಾ, ಸ್ಪ್ಲಿಟ್ ಸ್ಕ್ರೀನ್ನಲ್ಲಿ ವಾಟ್ಸಾಪ್ ಚಾಟ್ ಮಾಡುತ್ತಾ ಮಲ್ಟಿಟಾಸ್ಕಿಂಗ್ ಮಾಡುತ್ತಿದ್ದರೆ, ಗಂಡ ಕೇವಲ ಒಂದೇ ಸ್ಕ್ರೀನ್ ನೋಡುತ್ತಾ, ‘ನಮ್ಮಲ್ಲಿ ಸೆಕ್ಯುರಿಟಿ ಮತ್ತು ಪ್ರೈವೆಸಿ ಮುಖ್ಯ, ನಿಮ್ಮ ಥರ ವೈರಸ್ ಬರಲ್ಲ’ ಎಂದು ತನ್ನ ಅಸಹಾಯಕತೆ ಯನ್ನು ಪ್ರೈವೆಸಿ ಹೆಸರಿನಲ್ಲಿ ಮುಚ್ಚಿಟ್ಟುಕೊಳ್ಳುತ್ತಾನೆ.
ಇವರ ಮನೆಯ ಸ್ಮಾರ್ಟ್ ಸಾಧನಗಳ ಹೊಂದಾಣಿಕೆಯಂತೂ ಮತ್ತೊಂದು ಹಾಸ್ಯದ ಅಧ್ಯಾಯ. ಹೆಂಡತಿ ‘ಹೇ ಗೂಗಲ್, ಲೈಟ್ ಆಫ್ ಮಾಡು’ ಎಂದರೆ, ಪಕ್ಕದ ಕುಳಿತ ಗಂಡ ‘ಹೇ ಸಿರಿ, ಫ್ಯಾನ್ ಆನ್ ಮಾಡು’ ಎನ್ನುತ್ತಾನೆ. ಕೆಲವೊಮ್ಮೆ ಗಂಡನ ಸಿರಿಯು ಹೆಂಡತಿಯ ಧ್ವನಿಗೆ ಸ್ಪಂದಿಸದೇ ಮುನಿಸಿ ಕೊಂಡರೆ, ಹೆಂಡತಿಯ ಗೂಗಲ್ ಅಸಿಸ್ಟೆಂಟ್ ಗಂಡನ ಪ್ರಶ್ನೆಗಳಿಗೆ ವಿಚಿತ್ರವಾದ ಉತ್ತರಗಳನ್ನು ನೀಡಿ ಗೊಂದಲ ಸೃಷ್ಟಿಸುತ್ತದೆ.
ಗಂಡ ಆಪಲ್ ವಾಚ್ ಕಟ್ಟಿಕೊಂಡು ತನ್ನ ಹೃದಯದ ಬಡಿತ ಮತ್ತು ಸ್ಟೆಪ್ಸ್ ಎಣಿಸುತ್ತಿದ್ದರೆ, ಹೆಂಡತಿ ತನ್ನ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ನಲ್ಲಿ ವಾಚ್-ಫೇಸ್ ಬದಲಾಯಿಸುತ್ತಾ, ‘ನನ್ನ ವಾಚ್ ಚಾರ್ಜ್ ಮಾಡಿದ್ರೆ ಒಂದು ವಾರ ಬರುತ್ತೆ, ನಿಮ್ದು ದಿನಾ ರಾತ್ರಿ ಚಾರ್ಜ್ಗೆ ಹಾಕ್ಬೇಕು’ ಎಂದು ಕಿಚಾಯಿಸುತ್ತಾಳೆ.
ಇನ್ನು ಟಿವಿಗೆ ಫೋನ್ ಕನೆಕ್ಟ್ ಮಾಡುವಾಗಲಂತೂ ಆಪಲ್ ಟಿವಿ ಬೇಕೋ ಅಥವಾ ಕ್ರೋಮ್ಕಾಸ್ಟ್ ಬೇಕೋ ಎಂಬ ಚರ್ಚೆ ಸಂಸತ್ತಿನ ಅಧಿವೇಶನಕ್ಕಿಂತಲೂ ಗಂಭೀರವಾಗಿ ನಡೆಯುತ್ತದೆ. ಹಣಕಾಸಿನ ವಿಷಯ ಮತ್ತು ಬಜೆಟ್ ವಿಚಾರಕ್ಕೆ ಬಂದಾಗ ಇಬ್ಬರ ನಡುವೆ ಸಣ್ಣಪುಟ್ಟ ತಿಕ್ಕಾಟಗಳು ಸಹಜ. ಪ್ರತಿ ವರ್ಷ ಸೆಪ್ಟೆಂಬರ್ ಬಂತೆಂದರೆ ಹೆಂಡತಿಯ ಎದೆಯಲ್ಲಿ ಢವಢವ ಶುರುವಾಗುತ್ತದೆ. ಏಕೆಂದರೆ ಆಪಲ್ ಕಂಪನಿ ಹೊಸ ಐಫೋನ್ ಲಾಂಚ್ ಮಾಡುವ ಸಮಯವದು!
ಗಂಡ ಕಿಡ್ನಿ ಮಾರುವ ಜೋಕ್ಗಳನ್ನು ಕೇಳುತ್ತಾ, ತನ್ನ ಹಳೆಯ ಐಫೋನ್ ಎಕ್ಸ್ಚೇಂಜ್ ಮಾಡಿ ಹೊಸ ಪ್ರೊ ಮ್ಯಾಕ್ಸ್ ತೆಗೆದುಕೊಳ್ಳಲು ಇಎಂಐ ಲೆಕ್ಕಾಚಾರ ಹಾಕುತ್ತಿದ್ದರೆ, ಹೆಂಡತಿ ‘ಅಷ್ಟೇ ದುಡ್ಡಿನಲ್ಲಿ ನನಗೊಂದು ಒಳ್ಳೆಯ ರೇಷ್ಮೆ ಸೀರೆ, ನಿಮಗೊಂದು ಹೊಸ ಆಂಡ್ರಾಯ್ಡ ಫ್ಲ್ಯಾಗ್ಶಿಪ್ ಫೋನ್ ತಗೊಂಡು, ಮಿಕ್ಕಿದ ದುಡ್ಡಲ್ಲಿ ಗೋವಾ ಟ್ರಿಪ್ ಹೋಗಿ ಬರಬಹುದು’ ಎಂದು ಆರ್ಥಿಕ ಪಾಠ ಮಾಡುತ್ತಾಳೆ.
ಆಪಲ್ ಆಕ್ಸೆಸರೀಸ್ಗಳಾದ ಏರ್ಪಾಕ್ಸ್ ಅಥವಾ ಒಂದು ಸಣ್ಣ ಕವರ್ ಬೆಲೆಯನ್ನು ಕೇಳಿದಾಗ ಲಂತೂ ಹೆಂಡತಿ ತಲೆ ಮೇಲೆ ಕೈ ಹೊತ್ತು ಕೂರುವುದು ಗ್ಯಾರಂಟಿ. ಅಷ್ಟೇ ಅಲ್ಲ, ಇವರಿಬ್ಬರ ನಡುವೆ ನಡೆಯುವ ‘ಬ್ಲೂ ಬಬಲ್ ವರ್ಸಸ್ ಗ್ರೀನ್ ಬಬಲ್’ ರಾಜಕೀಯವೂ ಬಹಳ ಸ್ವಾರಸ್ಯ ಕರವಾಗಿರುತ್ತದೆ. ಐಮೆಸೇಜ್ ಬಳಸುವ ಗಂಡನಿಗೆ ತನ್ನ ಸ್ನೇಹಿತರ ಗ್ರೂಪ್ನಲ್ಲಿ ಹೆಂಡತಿಯ ಮೆಸೇಜ್ ಹಸಿರು ಬಣ್ಣದಲ್ಲಿ ಕಾಣಿಸುವುದು ಸ್ವಲ್ಪ ಮುಜುಗರ ತಂದರೂ, ಹೆಂಡತಿ ಮಾತ್ರ ವಾಟ್ಸಾಪ್ ಸ್ಟಿಕ್ಕರ್ಗಳು ಮತ್ತು ಜಿಫ್ ಇಮೇಜ್ಗಳ ಮೂಲಕವೇ ಗಂಡನನ್ನು ಸೋಲಿಸಿಬಿಡುತ್ತಾಳೆ.
ದಾರಿ ಹುಡುಕುವಾಗಲೂ ಅಷ್ಟೇ, ಗಂಡ ಆಪಲ್ ಮ್ಯಾಪ್ಸ್ ನಂಬಿಕೊಂಡು ಯಾವುದೋ ಗಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಾಗ, ಹೆಂಡತಿ ತಕ್ಷಣ ತನ್ನ ಆಂಡ್ರಾಯ್ಡ್ನಲ್ಲಿ ಗೂಗಲ್ ಮ್ಯಾಪ್ಸ್ ತೆಗೆದು, ‘ನಾನು ಮೊದಲೇ ಹೇಳಲಿಲ್ಲವಾ, ನಮ್ಮ ಗೂಗಲ್ ಮ್ಯಾಪ್ಸ್ ಮುಂದೆ ಯಾರ ಆಟವೂ ನಡೆಯಲ್ಲ’ ಎಂದು ವಿಜಯದ ನಗೆ ಬೀರುತ್ತಾಳೆ.
ಇಷ್ಟೆಲ್ಲ ಭಿನ್ನಾಭಿಪ್ರಾಯಗಳು, ತಾಂತ್ರಿಕ ತಿಕ್ಕಾಟಗಳು ಮತ್ತು ತಮಾಷೆಯ ಜಗಳಗಳಿದ್ದರೂ, ಈ ಆಂಡ್ರಾಯ್ಡ ಹುಡುಗಿ ಮತ್ತು ಆಪಲ್ ಹುಡುಗನ ಮಧ್ಯೆ ಸಾಮರಸ್ಯ ಕುದುರುವುದಿಲ್ಲವೇ? ಖಂಡಿತ ವಾಗಿಯೂ ಕುದುರುತ್ತದೆ! ಏಕೆಂದರೆ, ದಾಂಪತ್ಯ ಜೀವನಕ್ಕೆ ಬೇಕಾಗಿರುವುದು ಒಂದೇ ಬಗೆಯ ಸಾಫ್ಟ್ʼವೇರ್ ಅಲ್ಲ, ಬದಲಾಗಿ ಪರಸ್ಪರ ಅರ್ಥಮಾಡಿಕೊಳ್ಳುವ ‘ಹ್ಯೂಮನ್ ಹಾರ್ಡ್ವೇರ್’.
ಗಂಡನ ಆಪಲ್ ಫೋನ್ನಂತೆ ಅವನು ತನ್ನ ಸಂಬಂಧದಲ್ಲಿ ಅತ್ಯಂತ ಸುರಕ್ಷಿತ, ನಂಬಿಕಸ್ಥ ಮತ್ತು ಸದಾ ಕಾಲ ಸ್ಥಿರವಾಗಿರುವ ವ್ಯಕ್ತಿಯಾಗಿರುತ್ತಾನೆ. ಇತ್ತ ಹೆಂಡತಿಯ ಆಂಡ್ರಾಯ್ಡ್ ಫೋನ್ನಂತೆ ಅವಳು ಮನೆಯ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವ, ಹೊಸತನವನ್ನು ತರುವ ಮತ್ತು ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಗುಣವನ್ನು ಹೊಂದಿರುತ್ತಾಳೆ.
ಒಬ್ಬರ ಕೊರತೆಯನ್ನು ಇನ್ನೊಬ್ಬರು ತುಂಬುವಂತೆ ಇವರ ವ್ಯಕ್ತಿತ್ವಗಳು ರೂಪುಗೊಂಡಿರುತ್ತವೆ. ಹೀಗಾಗಿ, ಕಾಲ ಕಳೆದಂತೆ ಇಬ್ಬರೂ ತಮ್ಮದೇ ಆದ ಒಂದು ‘ಕ್ರಾಸ್-ಪ್ಲಾಟ್ʼಫಾರ್ಮ್’ ಜೀವನ ಶೈಲಿಯನ್ನು ರೂಪಿಸಿಕೊಳ್ಳುತ್ತಾರೆ. ಗಂಡ ತನ್ನ ಐಫೋನ್ನಲ್ಲಿ ಗೂಗಲ್ ಫೋಟೋಸ್ ಮತ್ತು ಗೂಗಲ್ ಮ್ಯಾಪ್ಸ್ ಇನ್ಸ್ಟಾಲ್ ಮಾಡಿಕೊಂಡು ಹೆಂಡತಿಯ ಪ್ರಪಂಚಕ್ಕೆ ಹೊಂದಿಕೊಂಡರೆ, ಹೆಂಡತಿ ತನ್ನ ಆಂಡ್ರಾಯ್ಡ್ ಫೋನ್ನಲ್ಲಿ ಆಪಲ್ ಮ್ಯೂಸಿಕ್ ಹಾಕಿಕೊಂಡು ಗಂಡನ ಅಭಿರುಚಿಗೆ ಸಾಥ್ ನೀಡುತ್ತಾಳೆ.
ಮನೆಯಲ್ಲಿ ಯೂನಿವರ್ಸಲ್ ಚಾರ್ಜಿಂಗ್ ಸ್ಟೇಷನ್ ತಲೆ ಎತ್ತುತ್ತದೆ, ಅಲ್ಲಿ ಲೈಟ್ನಿಂಗ್ ಮತ್ತು ಟೈಪ್-ಸಿ ಕೇಬಲ್ಗಳು ಅಕ್ಕಪಕ್ಕದ ಶಾಂತಿಯುತವಾಗಿ ವಿಶ್ರಾಂತಿ ಪಡೆಯುತ್ತವೆ. ‘ನಿನ್ನ ಫೋನ್ ಚೆನ್ನಾಗಿದೆ’ ಎಂದು ಗಂಡ ಒಪ್ಪಿಕೊಳ್ಳದಿದ್ದರೂ, ಕತ್ತಲೆಯಲ್ಲಿ ಫೋಟೋ ತೆಗೆಯಬೇಕಾದಾಗ ಮೆಲ್ಲಗೆ ಹೆಂಡತಿಯ ಫೋನ್ ಕೇಳಿ ಪಡೆಯುತ್ತಾನೆ. ಹಾಗೆಯೇ ಹೆಂಡತಿಗೂ ತನ್ನ ಫೋನ್ ಹ್ಯಾಂಗ್ ಆದಾಗ ಗಂಡನ ಐಫೋನ್ನ ವೇಗದ ಮೇಲೆ ಗುಪ್ತವಾಗಿ ಅಭಿಮಾನ ಮೂಡುತ್ತದೆ.
ಆಂಡ್ರಾಯ್ಡ್ ಮತ್ತು ಆಪಲ್ ನಡುವಿನ ಈ ಮದುವೆ ಒಂದು ಸುಂದರವಾದ ಜುಗಲ್ಬಂದಿಯಂತೆ. ಇಲ್ಲಿ ತಂತ್ರಜ್ಞಾನದ ಜಗಳಗಳೇ ಇವರ ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಮಸಾಲೆಯಂತೆ ಕೆಲಸ ಮಾಡುತ್ತವೆ. ಜೀವನದ ಪ್ರತಿ ಹಂತದಲ್ಲೂ ಎದುರಾಗುವ ಸಣ್ಣಪುಟ್ಟ ತಾಂತ್ರಿಕ ಅಡೆತಡೆ ಗಳನ್ನು ಇಬ್ಬರೂ ನಗುತ್ತಾ, ಒಬ್ಬರನ್ನೊಬ್ಬರು ಕಿಚಾಯಿಸುತ್ತಾ ಬಗೆಹರಿಸಿಕೊಳ್ಳುತ್ತಾರೆ.
ಎಷ್ಟೇ ಅಪ್ಡೇಟ್ಗಳು (Updates) ಬಂದರೂ, ಎಷ್ಟೇ ಹೊಸ ಮಾಡೆಲ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೂ, ಇವರಿಬ್ಬರ ನಡುವಿನ ಪ್ರೀತಿಯ ಬ್ಯಾಟರಿ ಮಾತ್ರ ಎಂದಿಗೂ ಡೌನ್ ಆಗುವುದಿಲ್ಲ. ಪ್ರೀತಿ ಎಂಬ ಯೂನಿವರ್ಸಲ್ ಆಪರೇಟಿಂಗ್ ಸಿಸ್ಟಮ್ ಮುಂದೆ ಆಂಡ್ರಾಯ್ಡ್ ಮತ್ತು ಆಪಲ್ ಎರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಸುಂದರವಾಗಿ ಬಾಳುತ್ತವೆ!
ಪ್ರಧಾನಿಯರ ಪತ್ನಿಯರು
ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್’ (Belonging) ನಲ್ಲಿ ಸ್ವತಂತ್ರ ಭಾರತದ ಆರಂಭಿಕ ದಶಕಗಳ ರಾಜಕೀಯ ಸಂಸ್ಕೃತಿ ಮತ್ತು ಸಾಮಾಜಿಕ ಪರಂಪರೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗುವ ಮುನ್ನ ದೇಶವನ್ನು ಆಳಿದ ಆರು ಮಂದಿ ಪ್ರಧಾನಿಗಳ ವೈಯಕ್ತಿಕ ಬದುಕು ಮತ್ತು ಅವರ ಕುಟುಂಬದ ಸದಸ್ಯರು ಸಾರ್ವಜನಿಕ ಜೀವನದಿಂದ ಹೇಗೆ ದೂರ ಉಳಿದಿದ್ದರು ಎಂಬುದನ್ನು ಸೋನಿಯಾ ಗಾಂಧಿ ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ.
ಆ ಕಾಲಘಟ್ಟದಲ್ಲಿ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಗಳ ಪತ್ನಿಯರು ತಮ್ಮ ಪತಿಯಂದಿ ರೊಂದಿಗೆ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ವಿರಳವಾಗಿತ್ತು. ಇದಕ್ಕೆ ಯಾವುದೇ ಕಟ್ಟುನಿಟ್ಟಾದ ನಿಷೇಧವಿರಲಿಲ್ಲವಾದರೂ, ಅಂದಿನ ಸಾಂಪ್ರದಾಯಿಕ ನಂಬಿಕೆಗಳು ಮತ್ತು ಕೌಟುಂಬಿಕ ಮೌಲ್ಯಗಳು ಅವರನ್ನು ತೆರೆಯ ಮರೆಯ ಉಳಿಯುವಂತೆ ಮಾಡಿದ್ದವು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಪತ್ನಿ ಕಮಲಾ ನೆಹರು ಅವರ ನಿಧನದ ನಂತರ ವಿಧುರರಾಗಿದ್ದರು. ಹೀಗಾಗಿ ನೆಹರು ಅವರ ಅಧಿಕಾರಾವಧಿಯಲ್ಲಿ ‘ಪ್ರಥಮ ಮಹಿಳೆ’ ಎಂಬ ಸ್ಥಾನದಲ್ಲಿ ಅವರ ಪುತ್ರಿ ಇಂದಿರಾ ಗಾಂಧಿ ಅವರು ಅನಧಿಕೃತವಾಗಿ ಆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ವಿದೇಶಿ ಗಣ್ಯರ ಸ್ವಾಗತ ಮತ್ತು ಅಧಿಕೃತ ಔತಣಕೂಟಗಳಲ್ಲಿ ಇಂದಿರಾ ತಮ್ಮ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರಾದರೂ, ಅದು ಒಬ್ಬ ಮಗಳಾಗಿ ತಂದೆಗೆ ನೀಡುತ್ತಿದ್ದ ನೆರವಾಗಿತ್ತು. ನೆಹರು ನಂತರ ಎರಡು ಅಲ್ಪಾವಧಿಗೆ ಹಂಗಾಮಿ ಪ್ರಧಾನಿಯಾಗಿದ್ದ ಗುಲ್ಜಾರಿಲಾಲ್ ನಂದಾ ಕಾಲದಲ್ಲೂ ಸಾರ್ವಜನಿಕವಾಗಿ ಪತ್ನಿಯೊಂದಿಗೆ ಕಾಣಿಸಿಕೊಳ್ಳುವ ಸಂಪ್ರದಾಯವಿರಲಿಲ್ಲ. ಅವರ ಸರಳ ಮತ್ತು ಆಧ್ಯಾತ್ಮಿಕ ಜೀವನಶೈಲಿಯು ಕುಟುಂಬವನ್ನು ರಾಜಕೀಯದ ಪ್ರಭಾವಳಿಯಿಂದ ದೂರವೇ ಇಟ್ಟಿತ್ತು.
ನಂತರ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು. ಅವರ ಪತ್ನಿ ಲಲಿತಾ ದೇವಿ ಅವರು ಭಾರತೀಯ ಸಾಂಪ್ರದಾಯಿಕ ಗೃಹಿಣಿಯ ಪ್ರತೀಕವಾಗಿದ್ದರು. ಆದರೆ, ಸೋನಿಯಾ ಗುರುತಿಸಿದಂತೆ, ಅಂದಿನ ಕಾಲದ ಕೆಲವೇ ಕೆಲವು ಅಪವಾದಗಳಲ್ಲಿ ಲಲಿತಾ ದೇವಿ ಕೂಡ ಒಬ್ಬರಾಗಿದ್ದರು. ಶಾಸ್ತ್ರಿ ಅವರೊಂದಿಗೆ ಕೆಲವು ಪ್ರಮುಖ ಸಂದರ್ಭಗಳಲ್ಲಿ ಮತ್ತು ವಿದೇಶ ಪ್ರವಾಸಗಳ ಸಮಯದಲ್ಲಿ ಲಲಿತಾ ದೇವಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಶಾಸ್ತ್ರಿ ಅವರ ಸರಳ ಬದುಕಿನ ಹಿಂದೆ ಲಲಿತಾ ದೇವಿ ಅವರ ತ್ಯಾಗ ಮತ್ತು ಬೆಂಬಲ ದೊಡ್ಡದಾಗಿತ್ತು. ಆದರೂ, ಅವರು ಎಂದಿಗೂ ರಾಜಕೀಯ ಅಧಿಕಾರದ ಕೇಂದ್ರಬಿಂದುವಾಗಿ ಗುರುತಿಸಿಕೊಳ್ಳಲು ಬಯಸಲಿಲ್ಲ.
ಬದಲಿಗೆ ಒಬ್ಬ ನಿಷ್ಠಾವಂತ ಪತ್ನಿಯಾಗಿ ಪತಿಯ ನೆರಳಿನಂತೆ ಸಾಗಿದರು. ಶಾಸ್ತ್ರಿ ಅವರ ನಿಧನದ ನಂತರ ಪ್ರಧಾನಿ ಪಟ್ಟಕ್ಕೇರಿದ ಇಂದಿರಾ ಗಾಂಧಿ ವಿಧವೆಯಾಗಿದ್ದರು. ಪತಿ ಫಿರೋಜ್ ಗಾಂಧಿ ಅಕಾಲಿಕ ಮರಣದ ನಂತರ ಇಂದಿರಾ ಅವರು ಏಕಾಂಗಿಯಾಗಿ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರು. ಭಾರತದ ರಾಜಕೀಯ ಇತಿಹಾಸದಲ್ಲಿ ಒಬ್ಬ ಮಹಿಳೆ ಪ್ರಧಾನಿಯಾದದ್ದು ಒಂದು ದೊಡ್ಡ ಕ್ರಾಂತಿಯಾಗಿತ್ತು. ಇಂದಿರಾ ಗಾಂಧಿ ಅಧಿಕಾರಾವಧಿಯಲ್ಲಿ ‘ಪ್ರಧಾನಿಯ ಸಂಗಾತಿ’ ಎಂಬ ಪರಿಕಲ್ಪನೆಯೇ ಇರಲಿಲ್ಲ. ಅವರು ತಮ್ಮ ಸೊಸೆಯಂದಿರಾದ ಸೋನಿಯಾ ಮತ್ತು ಮೇನಕಾ ಅವರನ್ನು ಕುಟುಂಬದ ಚೌಕಟ್ಟಿನೊಳಗೆ ಇರಿಸಿದ್ದರು.
ಸೋನಿಯಾ ಗಾಂಧಿ ಅವರು ವಿದೇಶಿ ಮೂಲದವರಾಗಿದ್ದ ಕಾರಣ ಮತ್ತು ರಾಜಕೀಯದ ಬಗ್ಗೆ ಅವರಿಗೆ ಅಷ್ಟಾಗಿ ಆಸಕ್ತಿ ಇಲ್ಲದಿದ್ದ ಕಾರಣ, ಇಂದಿರಾ ಅವರ ಕಾಲದಲ್ಲಿ ಸೋನಿಯಾ ಅವರು ಸಾರ್ವಜನಿಕ ಸಮಾರಂಭಗಳಿಂದ ಸಾಧ್ಯವಾದಷ್ಟು ದೂರವೇ ಉಳಿದಿದ್ದರು. ತುರ್ತು ಪರಿಸ್ಥಿತಿಯ ನಂತರ 1977ರಲ್ಲಿ ಪ್ರಧಾನಿಯಾದ ಮೊರಾರ್ಜಿ ದೇಸಾಯಿ ಮತ್ತು ಅವರ ನಂತರ ಬಂದ ಚರಣ್ ಸಿಂಗ್ ಅವರ ಕಾಲಘಟ್ಟದಲ್ಲಿ ಸಂಪ್ರದಾಯವಾದಿ ಧೋರಣೆಗಳು ಇನ್ನಷ್ಟು ಗಟ್ಟಿಯಾಗಿದ್ದವು.
ಮೊರಾರ್ಜಿ ದೇಸಾಯಿ ಪತ್ನಿ ಗಜರಾಬೆನ್ ಅವರು ಸಾಂಪ್ರದಾಯಿಕ ಗುಜರಾತಿ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ದೆಹಲಿಯ ರಾಜಕೀಯ ವಲಯದ ಗದ್ದಲಗಳಿಂದ ಸಂಪೂರ್ಣವಾಗಿ ದೂರವಿದ್ದರು. ಅದೇ ರೀತಿ ಚರಣ್ ಸಿಂಗ್ ಅವರ ಪತ್ನಿ ಗಾಯತ್ರಿ ದೇವಿ ಅವರು ಉತ್ತರ ಪ್ರದೇಶದ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದರು.
ಗಾಯತ್ರಿ ದೇವಿ ಅವರು ಸ್ವತಃ ರಾಜಕೀಯ ಪ್ರಜ್ಞೆ ಹೊಂದಿದ್ದರೂ, ಪ್ರಧಾನಿಯ ಪತ್ನಿಯಾಗಿ ಪತಿಯ ಪಕ್ಕದಲ್ಲಿ ನಿಂತು ಸಾರ್ವಜನಿಕ ಪ್ರದರ್ಶನ ನೀಡುವ ಪದ್ಧತಿಯನ್ನು ಅನುಸರಿಸಲಿಲ್ಲ. ಅಂದಿನ ನಾಯಕರಿಗೆ ತಮ್ಮ ಕುಟುಂಬದ ಮಹಿಳೆಯರನ್ನು ಸಾರ್ವಜನಿಕ ಜೀವನಕ್ಕೆ ತರುವುದು ತಮ್ಮ ಸಂಪ್ರದಾಯಗಳಿಗೆ ವಿರುದ್ಧವೆಂದು ಅನಿಸಿರಬಹುದು.
ಪಾಶ್ಚಿಮಾತ್ಯ ದೇಶಗಳಲ್ಲಿ ಅಧ್ಯಕ್ಷರು ಅಥವಾ ಪ್ರಧಾನಿಗಳ ಪತ್ನಿಯರಿಗೆ ‘ಫಸ್ಟ್ ಲೇಡಿ’ (First Lady) ಎಂಬ ವಿಶೇಷ ಸ್ಥಾನಮಾನ ಮತ್ತು ಅಧಿಕೃತ ಜವಾಬ್ದಾರಿಗಳಿರುತ್ತವೆ. ಆದರೆ ಭಾರತದಲ್ಲಿ ಅಂಥ ಯಾವುದೇ ಸಾಂವಿಧಾನಿಕ ಅಥವಾ ಸಾಮಾಜಿಕ ಶಿಷ್ಟಾಚಾರವಿರಲಿಲ್ಲ. ದೆಹಲಿಯ ರಾಜಕೀಯ ವಲಯದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಯಾವುದೇ ಕಾನೂನುಬದ್ಧ ಅಡ್ಡಿ ಇರಲಿಲ್ಲವಾದರೂ, ಭಾರತೀಯ ಸಮಾಜದ ಸಂಕೋಚದ ಸ್ವಭಾವ ಮತ್ತು ಕೌಟುಂಬಿಕ ಗೌಪ್ಯತೆಯ ಸಂಸ್ಕೃತಿ ಇದಕ್ಕೆ ಕಾರಣವಾಗಿತ್ತು.
ರಾಜಕೀಯವನ್ನು ಪುರುಷರ ಕ್ಷೇತ್ರವೆಂದು ಭಾವಿಸಲಾಗುತ್ತಿತ್ತು ಮತ್ತು ಮನೆಯ ಮಹಿಳೆಯರು ಮನೆಯೊಳಗಿನ ಜವಾಬ್ದಾರಿಗಳಿಗೆ ಸೀಮಿತವಾಗಿರುವುದೇ ಗೌರವಯುತ ಎಂಬ ಭಾವನೆ ಅಂದಿನ ನಾಯಕರಲ್ಲಿತ್ತು. ಈ ಸಾಮಾನ್ಯ ನಿಯಮಕ್ಕೆ ಹೊರತಾಗಿದ್ದ ಕೆಲವೇ ಕೆಲವು ಮಹಿಳೆಯರನ್ನು ಸೋನಿಯಾ ಗಾಂಧಿ ವಿಶೇಷವಾಗಿ ಸ್ಮರಿಸಿದ್ದಾರೆ.
ಲಲಿತಾ ಶಾಸ್ತ್ರಿ ಅವರಲ್ಲದೇ, ರಾಷ್ಟ್ರಪತಿ ವಿ.ವಿ.ಗಿರಿ ಪತ್ನಿ ಸರಸ್ವತಿ ಬಾಯಿ ಮತ್ತು ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಪತ್ನಿ ಅಬಿದಾ ಬೇಗಂ ಅವರು ತಮ್ಮ ಪತಿಯಂದಿರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಸರಸ್ವತಿ ಬಾಯಿ ಅವರು ದಕ್ಷಿಣ ಭಾರತದ ಸಂಪ್ರದಾಯದೊಂದಿಗೆ ಸಾರ್ವಜನಿಕ ಜೀವನದಲ್ಲೂ ಸಕ್ರಿಯರಾಗಿದ್ದರು.
ಇನ್ನು ಅಬಿದಾ ಬೇಗಂ ಅವರು ಅತ್ಯಂತ ಸುಶಿಕ್ಷಿತ ಮತ್ತು ಕಲಾತ್ಮಕ ಅಭಿರುಚಿ ಹೊಂದಿದ್ದ ಮಹಿಳೆ ಯಾಗಿದ್ದು, ರಾಷ್ಟ್ರಪತಿ ಭವನದ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಈ ಮಹಿಳೆಯರು ಅಂದಿನ ಕಾಲದ ಸಂಪ್ರದಾಯದ ಚೌಕಟ್ಟನ್ನು ಮೀರಿ ಸಾರ್ವಜನಿಕ ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದರು.
1984ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾದಾಗ ಈ ಹಳೆಯ ಸಂಪ್ರದಾಯದಲ್ಲಿ ದೊಡ್ಡ ಬದಲಾವಣೆಯಾಯಿತು. ಯುವ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಆಧುನಿಕ ದೃಷ್ಟಿಕೋನವನ್ನು ಹೊಂದಿದ್ದರು. ಇಟಲಿ ಮೂಲದವರಾದ ಸೋನಿಯಾ ಗಾಂಧಿ ಅವರಿಗೆ ಪತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಸಹಜವಾಗಿತ್ತು. ಆರಂಭದಲ್ಲಿ ಸಂಕೋಚ ಪಡುತ್ತಿದ್ದ ಸೋನಿಯಾ ಅವರು, ರಾಜೀವ್ ಒತ್ತಾಯ ಮತ್ತು ಪ್ರೋತ್ಸಾಹದಿಂದಾಗಿ ದೇಶ-ವಿದೇಶಗಳ ಪ್ರವಾಸಗಳಲ್ಲಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಅವರ ಪಕ್ಕದಲ್ಲಿ ನಿಲ್ಲಲು ಪ್ರಾರಂಭಿಸಿದರು.
ಇದು ಭಾರತೀಯ ರಾಜಕಾರಣದಲ್ಲಿ ಹೊಸ ಸಂಸ್ಕೃತಿಗೆ ನಾಂದಿ ಹಾಡಿತು ಮತ್ತು ಪ್ರಧಾನಿಯ ಪತ್ನಿಯ ಪಾತ್ರಕ್ಕೆ ಹೊಸ ಆಯಾಮವನ್ನು ನೀಡಿತು. ಸೋನಿಯಾ ಗಾಂಧಿ ಅವರ ಈ ಬರಹವು ಭಾರತೀಯ ರಾಜಕಾರಣದ ಸಾಮಾಜಿಕ ವಿಕಾಸವನ್ನು ದಾಖಲಿಸುತ್ತದೆ. ಸ್ವಾತಂತ್ರ್ಯಾನಂತರದ ಮೊದಲ ಮೂರು ದಶಕಗಳಲ್ಲಿ ದೇಶದ ಅತ್ಯುನ್ನತ ನಾಯಕರ ಪತ್ನಿಯರು ತೆರೆಯ ಮರೆಯಲ್ಲಿದ್ದುಕೊಂಡೇ ತಮ್ಮ ಪತಿಯಂದಿರ ಯಶಸ್ಸಿಗೆ ಶ್ರಮಿಸಿದರು.
ಕಾಲ ಬದಲಾದಂತೆ, ರಾಜಕೀಯ ನಾಯಕತ್ವವು ಯುವ ಪೀಳಿಗೆಗೆ ಹಸ್ತಾಂತರವಾದಾಗ, ಕುಟುಂಬ ಮತ್ತು ಸಾರ್ವಜನಿಕ ಜೀವನದ ನಡುವಿನ ಗೋಡೆಗಳು ಕರಗಲಾರಂಭಿಸಿದವು. ಸೋನಿಯಾ ಗಾಂಧಿ ಅವರು ತಮ್ಮ ಆತ್ಮಕಥೆಯಲ್ಲಿ ಈ ಐತಿಹಾಸಿಕ ಬದಲಾವಣೆಯನ್ನು ಅತ್ಯಂತ ವಸ್ತುನಿಷ್ಠವಾಗಿ ಚಿತ್ರಿಸಿದ್ದಾರೆ.