ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ರಸ್ತೆ-ಹೊಂಡಗಳು, ಗುಂಡಿ-ಗಂಡಾಂತರಗಳ ಚಕ್ರವ್ಯೂಹದಲ್ಲಿ

ರಸ್ತೆ ಹೊಂಡಗಳಿಗೆ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಈ ಪರಿಯಲ್ಲಿ ದೊರಕು ತ್ತಿರುವ ‘ಪಬ್ಲಿಸಿಟಿ’ಯನ್ನು (!) ಸ್ಥೂಲವಾಗಿ ನೋಡಿದಾಗ, ಈ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತ ವಾದಂತೆ ಭಾಸವಾಗುತ್ತದೆ. ಈ ಸಮಸ್ಯೆ ಕರ್ನಾಟಕದಲ್ಲಿ ಸ್ವಲ್ಪ ಹೆಚ್ಚು ಎನ್ನುವುದರಲ್ಲಿ ಸತ್ಯವಿದೆ ಮತ್ತು ಅದಕ್ಕೆ ಕಾರಣವೂ ಇದೆ. ಆದರೆ, ಇದೊಂದು ‘ಅಖಿಲ ಭಾರತ ಮಟ್ಟದ ಸಮಸ್ಯೆ’ ಎಂಬುದನ್ನು ಮರೆ ಮಾಚಲಾಗುತ್ತಿದೆ.

ರಸ್ತೆ-ಹೊಂಡಗಳು, ಗುಂಡಿ-ಗಂಡಾಂತರಗಳ ಚಕ್ರವ್ಯೂಹದಲ್ಲಿ

-

Ashok Nayak Ashok Nayak Sep 24, 2025 8:28 AM

ಸಂಚಾರಪರ್ವ

ರಮಾನಂದ ಶರ್ಮಾ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ- ಪ್ರತಿಸುಂಕ, ವೀಸಾ ನಿರ್ಬಂಧ, ಅತಿರೇ ಕದ ಸುಂಕದ ಧಮಕಿ ಅಥವಾ ತಾಕೀತುಗಳು, ಜಾತಿ ಗಣತಿ, ಬಾನು ಮುಷ್ತಾಕ್, ಧರ್ಮಸ್ಥಳ ಬುರುಡೆ ಪುರಾಣ ಇತ್ಯಾದಿ ವಿಷಯಗಳು ಕಳೆದ ಸಾಕಷ್ಟು ದಿನ ಗಳಿಂದ ಸುದ್ದಿ ಮಾಡುತ್ತಿರುವುದು ಗೊತ್ತಿರು ವಂಥದ್ದೇ. ಈ ನಿಟ್ಟಿನಲ್ಲಿ ತಾವೇನೂ ಕಮ್ಮಿಯಿಲ್ಲ ಎನ್ನುವಂತೆ ರಸ್ತೆಹೊಂಡಗಳು ಮತ್ತು ಎಲ್ಲೆಂದರಲ್ಲಿ ಬೇಜವಾಬ್ದಾರಿಯಿಂದ ಚೆಲ್ಲಿದ ತ್ಯಾಜ್ಯಗಳು ಸುದ್ದಿಮಾಡುತ್ತಿವೆ.

ನೆಟ್ಟಿಗರಂತೂ ಸರಕಾರದ, ರಾಜಕಾರಣಿಗಳ ಮತ್ತು ಆಡಳಿತಗಾರರ ಮಾನವನ್ನು ಸ್ವಲ್ಪವೂ ಮುಲಾಜಿಲ್ಲದೆ, ಕರುಣೆಯಿಲ್ಲದೆ ಹರಾಜು ಹಾಕುತ್ತಿದ್ದಾರೆ. ಈ ಕಸರತ್ತಿನಲ್ಲಿ ಜನರು ಆಡಳಿತ ಪಕ್ಷದವರನ್ನು ಸ್ವಲ್ಪ ಹೆಚ್ಚೇ ಝಾಡಿಸುತ್ತಿರುವುದು ಹೌದಾದರೂ, ಒಟ್ಟಾರೆಯಾಗಿ ನೋಡಿದಾಗ ಪಕ್ಷಭೇದವಿಲ್ಲದೆ ಅವರು ರಾಜಕಾರಣಿಗಳ ಜಾತಕವನ್ನು ಜಾಲಾಡುತ್ತಿರುವುದು ಅರಿವಾಗುತ್ತದೆ.

ದಿನಗಳೆದಂತೆ ಈ ಆಕ್ರೋಶವು ಕಡಿಮೆಯಾಗುವ ಲಕ್ಷಣ ಕಾಣದೆ ಹೆಚ್ಚಾಗುತ್ತಲೇ ಇದೆ. ತಮಗಾಗು ತ್ತಿರುವ ತೊಂದರೆಯನ್ನು ಮುಂದಿಟ್ಟುಕೊಂಡು ಜನರು ಮಾಡುತ್ತಿರುವ ಟೀಕೆ-ಟಿಪ್ಪಣಿ, ವ್ಯಂಗ್ಯ, ಲೇವಡಿ, ಬೈಗುಳ, ಕ್ರೋಧ ಮತ್ತು ಅದಕ್ಕಾಗಿ ಅವರು ಬಳಸುತ್ತಿರುವ ಪದಪುಂಜಗಳು, ಉಪಮೆ-ಅಲಂಕಾರಗಳು, ಶೀರ್ಷಿಕೆಗಳು ಮತ್ತು ನೀಡುವ ಹೋಲಿಕೆಗಳು ಕುಂಭಕರ್ಣನನ್ನೂ ಧಿಗ್ಗನೆ ಎಚ್ಚರಿಸುವಂತಿವೆ.

ಜನರ ಕೋಪ ಅದೆಷ್ಟು ತೀವ್ರಗೊಂಡಿದೆ ಎಂದರೆ, ಜನಪ್ರತಿನಿಧಿಯೊಬ್ಬರು ತಮ್ಮ ಸ್ವಂತ ಉಪಯೋಗಕ್ಕೆ ಹೆಲಿಕಾಪ್ಟರ್ ಅನ್ನು ಖರೀದಿಸಿದಾಗ, “ರಸ್ತೆಯಲ್ಲಿ ಬಿದ್ದಿರುವ ಹೊಂಡಗಳಿಂದಾಗಿ ರಸ್ತೆ ಮುಖೇನ ವಾಹನದಲ್ಲಿ ಸಂಚರಿಸಲಾಗದೆ, ಹೆಲಿಕಾಪ್ಟರ್ ಖರೀದಿಸಿದ್ದಾರೆ" ಎಂದು ಜನರು ಮನಸ್ವೀ ಲೇವಡಿ ಮಾಡಿದ್ದುಂಟು.

ಇದನ್ನೂ ಓದಿ: Ramanand Sharma Column: ಹಳ್ಳ ಹಿಡಿದಿರುವ ನಿವೃತ್ತರ ಬದುಕು: ಕೇಳುವವರು ಯಾರು ?

ಇನ್ನು, ಡಿಜಿಟಲ್ ಮಾಧ್ಯಮವು ತನ್ನ ಮಿತಿಗಿಂತ ಹೆಚ್ಚು ಸಮಯವನ್ನು ‘ರಸ್ತೆಯ ಹೊಂಡಗಳನ್ನು ಹುಡುಕಲು ಮತ್ತು ತುಂಬಲು’ ವಿನಿಯೋಗಿಸಿದರೆ, ಮುದ್ರಣ ಮಾಧ್ಯಮವೂ ಈ ನಿಟ್ಟಿನಲ್ಲಿ ಹಿಂದೆ ಬೀಳದೆ ಸಾಕಷ್ಟು ಇಂಕ್ ಮತ್ತು ನ್ಯೂಸ್ ಪ್ರಿಂಟ್ ಅನ್ನು ವ್ಯಯಿಸಿ, ಸಂಬಂಧಪಟ್ಟವರನ್ನು ಬಡಿದೆಬ್ಬಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಹಾಗೆ ನೋಡಿದರೆ, ಮುದ್ರಣ ಮಾಧ್ಯಮವು ಜವಾಬ್ದಾರಿಯುತವಾಗಿ ಈ ಸಮಸ್ಯೆಯನ್ನು ಅನಾವರಣ ಮಾಡಿ, ಸಂಬಂಧಪಟ್ಟವರ ಕಣ್ಣು ತೆರೆಸಲು ಪ್ರಯತ್ನಿಸುತ್ತಿದೆ ಎನ್ನಬೇಕು.

ರಸ್ತೆ ಹೊಂಡಗಳಿಗೆ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಈ ಪರಿಯಲ್ಲಿ ದೊರಕು ತ್ತಿರುವ ‘ಪಬ್ಲಿಸಿಟಿ’ಯನ್ನು (!) ಸ್ಥೂಲವಾಗಿ ನೋಡಿದಾಗ, ಈ ಸಮಸ್ಯೆ ಕರ್ನಾಟಕಕ್ಕೆ ಮಾತ್ರ ಸೀಮಿತ ವಾದಂತೆ ಭಾಸವಾಗುತ್ತದೆ. ಈ ಸಮಸ್ಯೆ ಕರ್ನಾಟಕದಲ್ಲಿ ಸ್ವಲ್ಪ ಹೆಚ್ಚು ಎನ್ನುವುದರಲ್ಲಿ ಸತ್ಯವಿದೆ ಮತ್ತು ಅದಕ್ಕೆ ಕಾರಣವೂ ಇದೆ. ಆದರೆ, ಇದೊಂದು ‘ಅಖಿಲ ಭಾರತ ಮಟ್ಟದ ಸಮಸ್ಯೆ’ ಎಂಬುದನ್ನು ಮರೆಮಾಚಲಾಗುತ್ತಿದೆ.

ಏಕೆಂದರೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಸ್ಸಾಂ ನಿಂದ ಅಹಮದಾಬಾದ್‌ವರೆಗೆ ಮೈಚೆಲ್ಲಿರುವಂಥ ಸಮಸ್ಯೆಯಿದು. ‘ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು, ಆದರೆ ಹೊಂಡ-ಗುಂಡಿಗಳಿಲ್ಲದ ರಸ್ತೆಗಳನ್ನು ನೋಡಲಾಗದು’ ಎಂಬ ಮಾತು ಕೇವಲ ಜೋಕ್ ಆಗಿ ಉಳಿಯದೆ, ದೇಶಾದ್ಯಂತ ಕಣ್ಣಿಗೆ ರಾಚುವ ಕಠೋರ ವಾಸ್ತವವಾಗಿದೆ.

Screenshot_6 R

ರಾಜಸ್ಥಾನ, ದೆಹಲಿ, ಹರಿಯಾಣ ರಾಜ್ಯಗಳಲ್ಲಿ ಮತ್ತು ಮುಂಬೈನಂಥ ಪ್ರತಿಷ್ಠಿತ ನಗರಿಗಳಲ್ಲಿ ಕಾಣ ಬರುವ ರಸ್ತೆ-ಗುಂಡಿಗಳು ಹಾಗೂ ಹೊಂಡಗಳು, ಕರ್ನಾಟಕದಲ್ಲಿ ಇರುವುದಕ್ಕಿಂತ ಯಾವ ರೀತಿ ಯಲ್ಲೂ ಕಮ್ಮಿಯಿಲ್ಲ, ಅವು ಮಾಡಿದ ಅನಾಹುತಗಳೂ ಅಷ್ಟೇ ಘಾತುಕವಾಗಿವೆ.

ಇನ್ನು, ಆಧುನಿಕ ನಗರವೆಂದು ಹೇಳಲಾಗುವ ಹರಿಯಾಣದ ಗುರುಗಾಂವ್‌ನ ರಸ್ತೆ-ಹೊಂಡಗಳನ್ನು ಮತ್ತು ಅವು ಮಾಡಿದ ಅನಾಹುತಗಳನ್ನು ಸುದ್ದಿವಾಹಿನಿಯೊಂದು ವಿಸ್ತೃತವಾಗಿ ತೋರಿಸಿತ್ತು. ಆದರೆ, ರಸ್ತೆ ಹೊಂಡಗಳನ್ನೇ ನೆಪವಾಗಿ ಇಟ್ಟುಕೊಂಡು ಬೆಂಗಳೂರನ್ನು ಟ್ರೋಲ್ ಮಾಡಿ, ವಿಕೃತ ವಾಗಿ ನಕ್ಕವರು ಆಗ ಎಲ್ಲಿ ಹೋಗಿದ್ದರೋ ಗೊತ್ತಿಲ್ಲ!

ವಾಸ್ತವವಾಗಿ, ಬೆಂಗಳೂರಿನ ರಸ್ತೆ ಗುಂಡಿಗಳು ದಿಢೀರ್ ಎಂದು ಆಗಿದ್ದಲ್ಲ. ಅವು ಹಿಂದೆ ಇದ್ದವು, ಇಂದೂ ಇವೆ, ಮುಂದೆಯೂ ಇರುತ್ತವೆ! ‘ಅವು ಹಿಂದೆ ಇರಲಿಲ್ಲ, ಈಗ ಇದೆ’ ಎನ್ನುವುದು ರಾಜಕೀಯ ಹೇಳಿಕೆ ಆಗುತ್ತದೆಯೇ ವಿನಾ ಅದರಲ್ಲಿ ಹೊಸತೇನನ್ನೂ ಕಾಣಲು ಸಾಧ್ಯವಿಲ್ಲ. ಈ ವರ್ಷ ಬಿದ್ದಿರುವ ಮಳೆಯ ಪ್ರಮಾಣವು ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸಿದೆ ಎನ್ನುವುದು ಸತ್ಯ.

ಬಹುತೇಕ ರಸ್ತೆಗಳು ಪ್ರಸಕ್ತ ಸರಕಾರದ ಅವಧಿಯಲ್ಲಿ ನಿರ್ಮಿಸಿದಂಥವೇ ಆಗಿರಬೇಕು ಎಂದೇನಿಲ್ಲ; ಅವು ನಿರ್ಮಾಣಗೊಂಡಾಗ ಮತ್ತೊಂದು ರಾಜಕೀಯ ಪಕ್ಷದ ಸರಕಾರವು ಅಸ್ತಿತ್ವದಲ್ಲಿ ಇದ್ದಿರ ಬಹುದು. ಕರ್ನಾಟಕವೇ ಇರಲಿ ಅಥವಾ ಬೇರಾವ ರಾಜ್ಯವೇ ಇರಲಿ, ಹಿಂದಿನ ಸರಕಾರದಿಂದ ಬಳುವಳಿಯಾಗಿ ಬಂದಂಥ ಒಂದಿಷ್ಟು ಸುವ್ಯವಸ್ಥೆಗಳು ಮತ್ತು ಅವ್ಯವಸ್ಥೆಗಳು ಇದ್ದೇ ಇರುತ್ತವೆ.

ಸಾಮಾನ್ಯವಾಗಿ ಗುತ್ತಿಗೆದಾರರು ಅವರೇ ಇರುತ್ತಿದ್ದು, ಕಾಲ ಘಟ್ಟಕ್ಕೆ ತಕ್ಕಂತೆ ಸ್ವಲ್ಪ ಮಟ್ಟಿಗೆ ಬದಲಾವಣೆ ಇರುತ್ತದೆ. ಹೀಗಾಗಿ ರಸ್ತೆ ಹೊಂಡಗಳಿಗೆ ಇಂದಿನ ಸರಕಾರವನ್ನೋ ಅಥವಾ ಹಿಂದಿನ ಸರಕಾರವನ್ನೋ ಟೀಕಿಸುತ್ತಾ ಕೂರುವ ಬದಲು, ಅದರನ್ನು ಸರಿಪಡಿಸುವಂಥ ವಿವೇಕವನ್ನು ತೋರಬೇಕು. ಇನ್ನೊಂದು ವಿಚಿತ್ರವೆಂದರೆ, ‘ಅನಿಷ್ಟಗಳಿಗೆಲ್ಲಾ ಶನೈಶ್ಚರನೇ ಕಾರಣ’ ಎನ್ನುವಂತೆ, ರಸ್ತೆ ಹೊಂಡಗಳ ಸಮಸ್ಯೆಗೆ, ಕರ್ನಾಟಕ ಸರಕಾರ ನೀಡುತ್ತಿರುವ ‘ಪಂಚ ಗ್ಯಾರಂಟಿ’ಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಈ ‘ಬಿಟ್ಟಿ-ಭಾಗ್ಯ’ಗಳಿಂದಾಗಿ ಅನುದಾನದ ಕೊರತೆಯುಂಟಾಗಿ ರಸ್ತೆ ಹೊಂಡಗಳನ್ನು ತುಂಬ ಲಾಗುತ್ತಿಲ್ಲ ಎಂಬುದು ಬಹುತೇಕ ನೆಟ್ಟಿಗರ ಆಕ್ರೋಶ. ಇದನ್ನೇ ಪಟ್ಟಾಗಿ ಹಿಡಿದುಕೊಂಡ ಕೆಲವು ರಾಜಕೀಯ ಪಕ್ಷಗಳು/ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದುಂಟು.

ಇದೇ ಮಾನದಂಡವನ್ನು ಬಳಸಿದರೆ, ‘ಬಿಟ್ಟಿ-ಭಾಗ್ಯ’ಗಳು ಇಲ್ಲದ ರಾಜ್ಯಗಳಲ್ಲಿ ರಸ್ತೆ ಹೊಂಡಗಳು ಇರಬಾರದಲ್ಲವೇ? ಆದರೆ ಅಲ್ಲಿಯೂ ‘ಅದೇ ರಾಗ, ಅದೇ ಹಾಡು’. ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಕ್ಕಿಂತ, fishing in troubled water ಎನ್ನುವಂತೆ, ಆಡಳಿತಾರೂಢರನ್ನು ಗುರಿಯಾಗಿಸಿ ಕೊಂಡು ರಾಜಕೀಯ ಲಾಭವನ್ನು ಪಡೆಯುವ ಹುನ್ನಾರ ಮತ್ತು ಹುಚ್ಚುಸ್ಪರ್ಧೆ ಎದ್ದು ಕಾಣುತ್ತಿದೆ.

ಕರ್ನಾಟಕದಲ್ಲಿ ರಸ್ತೆಗುಂಡಿಗಳ ಸಮಸ್ಯೆ ದಿಢೀರ್ ಎಂದು ವಕ್ಕರಿಸಿರುವಂಥದ್ದಲ್ಲ, ಅದಕ್ಕೆ ಸುದೀರ್ಘ ಇತಿಹಾಸವಿದೆ. ಬೆಂಗಳೂರಿನಲ್ಲಿ ‘ಗುಂಡಿಮುಕ್ತ’ ರಸ್ತೆಗಳಿಗಾಗಿ ಆಗ್ರಹಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವುದನ್ನು, ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಇಂಥ ಮೊಕದ್ದಮೆಯೊಂದರ ವಿಚಾರಣೆಯ ಸಮಯದಲ್ಲಿ, “ಗುಂಡಿಗಳಿಲ್ಲದ ಉತ್ತಮ ರಸ್ತೆಯು ಸಾರ್ವಜನಿಕರ ಹಕ್ಕು" ಎಂದು ನ್ಯಾಯಾಧೀಶರು ತೀಕ್ಷ್ಣವಾಗಿ ಹೇಳಿದ್ದಲ್ಲದೆ, ಈ ಆಶಯದ ನೆರವೇರಿಕೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಹೇಳಿದ್ದೂ ಉಂಟು. ಮಾತ್ರವಲ್ಲದೆ, ‘ರಸ್ತೆಗಳು ಕಳಪೆಯಾಗಿರುವುದಕ್ಕೆ ಮತ್ತು ಗುಂಡಿಗಳಿಂದಾಗುವ ಅನಾಹುತಗಳಿಗೆ ಎಂಜಿನಿಯರುಗಳೇ ಕಾರಣ; ಗುಂಡಿಗೆ ಬಿದ್ದು ಗಾಯಗೊಂಡವರಿಗೆ ಪರಿಹಾರ ನೀಡಬೇಕು ಮತ್ತು ರಸ್ತೆ ಗುಂಡಿಗೆ ಸಂಬಂಧಿಸಿದ ದೂರುಗಳ ಸಲ್ಲಿಕೆಗೆ ಪ್ರತ್ಯೇಕ ಪೋರ್ಟಲ್ ಆರಂಭಿಸಬೇಕು’ ಎಂಬ ಅಭಿಪ್ರಾಯವೂ ನ್ಯಾಯಪೀಠದಿಂದ ಹೊಮ್ಮಿರುವುದುಂಟು.

ಹೀಗೆ ರಸ್ತೆ ಗುಂಡಿಗಳನ್ನು ಮುಚ್ಚುವ ನಿಟ್ಟಿನಲ್ಲಿ ನ್ಯಾಯಾಲಯಗಳು ನಿರಂತರವಾಗಿ ಆದೇಶ ಗಳನ್ನು ಮತ್ತು ನಿರ್ದೇಶನಗಳನ್ನು ನೀಡುತ್ತಲೇ ಬಂದಿವೆ. ಆದರೂ, ‘ಬಡವಾ ನೀ ಎಲ್ಲಿರುವೆ?’ ಎಂದರೆ, ‘ಇಲ್ಲೇ ಮಡಕ್ಕಂಡಿದ್ದೀನಿ’ ಎಂಬ ಉತ್ತರ ಬರುವಂತೆ ಸಮಸ್ಯೆಗಳು ಪರಿಹಾರದ ಮುಖ ವನ್ನು ಕಾಣದೆ ತಾವಿದ್ದ ಸ್ಥಿತಿಯಲ್ಲೇ ಇವೆ.

ರಸ್ತೆ ಗುಂಡಿಗಳಿಂದಾಗುವ ಅವಾಂತರದ ಬಗೆಗೆ ಯಾರ ಕಡೆಗಾದರೂ ಬೆರಳುಮಾಡಿ ತೋರಿಸುವುದು ಸುಲಭ. ಆದರೆ, ವಾಸ್ತವದಲ್ಲಿ ಇದು ಪಾಲಿಕೆ, ಗುತ್ತಿಗೆದಾರ, ಎಂಜಿನಿಯರ್ ಮತ್ತು ನೌಕರಶಾಹಿಯ ಜಂಟಿ ಹೊಣೆಗಾರಿಕೆ ಎನ್ನಬಹುದು. ಹಾಗೆಯೇ ಆಗಾಗ ರಸ್ತೆ ಅಗೆಯುವ ಜಲಮಂಡಳಿ, ಬೆಸ್ಕಾಂ, ಟೆಲಿ-ಕೇಬಲ್ ಕಂಪನಿಗಳ ಪಾಲೂ ಇದೆ. ದಿನಗಳೆದಂತೆ ಬೆಳೆಯುತ್ತಲೇ ಇರುವ, ಅಗಾಧ ಜನಸಂಖ್ಯೆ ಯನ್ನು ಹೊಂದಿರುವ ಮಹಾನಗರಿ ಬೆಂಗಳೂರು; ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಐದು ವರ್ಷಗಳೇ ಕಳೆದಿದ್ದು, ನೌಕರಶಾಹಿಯ ದರ್ಬಾರು ಇಲ್ಲಿ ನಡೆಯುತ್ತಲಿದೆ.

ಮೀಸಲಾತಿ ಮತ್ತು ವಾರ್ಡುಗಳ ಮರುವಿಂಗಡಣೆಯ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ನಡೆಯುತ್ತಿರುವ ಚರ್ಚೆಯಿನ್ನೂ ಅಂತ್ಯವಾಗಿಲ್ಲ. ಹಾಗೆಯೇ ಕೋರ್ಟಿನಲ್ಲೂ ಈ ಸಂಬಂಧದ ಪ್ರಕರಣಗಳು ಇವೆ. ವಿಚಿತ್ರವೆಂದರೆ, ವಿರೋಧ ಪಕ್ಷದಲ್ಲಿದ್ದಾಗ ‘ಚುನಾವಣೆ ನಡೆಸಿ’ ಎಂದು ಬೊಬ್ಬೆ ಹೊಡೆಯುವವರು, ತಾವೇ ಆಡಳಿತ ಪಕ್ಷದಲ್ಲಿದ್ದಾಗ ಚುನಾವಣೆಗಾಗಿ ಅವಸರಪಡಿಸುವುದಿಲ್ಲ.

ಅಂತೆಯೇ, ಒಂದು ನಿರ್ದಿಷ್ಟ ವಾಡ್ ನ ಸಮಸ್ಯೆಯನ್ನು ಪಾಲಿಕೆಯ ಗಮನಕ್ಕೆ ತರುವ ಕೆಲಸ ಬದ್ಧತೆಯಿಂದ ನಡೆಯುತ್ತಿಲ್ಲ. ಮತ್ತೊಂದೆಡೆ, ನೌಕರಶಾಹಿಗೆ ಜನಪ್ರತಿನಿಧಿಗಳಷ್ಟು ಬದ್ಧತೆ ಇರುವುದಿಲ್ಲ. ಗುಂಡಿ ಮುಚ್ಚುವ ಕೆಲಸದಲ್ಲಿ ನಗರಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ಸಾರಾ ಸಗಟಾಗಿ ಹೇಳಲಾಗುವುದಿಲ್ಲ; ಆದರೆ ಅದಕ್ಕಾಗಿ ಬಳಸುವ ತಾಂತ್ರಿಕತೆಯು ‘ಔಟ್‌ಡೇಟೆಡ್’ ಆದಂತೆ ಕಾಣುತ್ತದೆ.

ಜತೆಗೆ, ಗುಂಡಿ ಮುಚ್ಚುತ್ತಿದ್ದಂತೆ ಸುರಿಯುವ ಅಕಾಲಿಕ ಮಳೆಯಿಂದಾಗಿ, ಮಾಡಿದ ಕೆಲಸವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗುವ ನಿದರ್ಶನಗಳೂ ಸಾಕಷ್ಟಿವೆ. ಇದು ನಗರಪಾಲಿಕೆಯವರಿಗೆ ‘ಯಾರಿಗ್ಹೇಳಣಾ ನಮ್ಮಾ ಪ್ರಾಬ್ಲಮ್ಮೂ...’ ಎನ್ನುವಂಥ ಪರಿಸ್ಥಿತಿಯನ್ನು ತಂದೊಡ್ಡಿದೆ. ನಗರದ ಉದ್ದಗಲಕ್ಕೂ ವ್ಯಾಪಿಸಿರುವ ವೈವಿಧ್ಯಮಯ ರಸ್ತೆಗಳಲ್ಲಿ ಬಾಯಿ ತೆರೆದುಕೊಂಡಿರುವ ಗುಂಡಿಗಳ ಪೈಕಿ ಈವರೆಗೆ 7000 ಗುಂಡಿಗಳನ್ನು ಮುಚ್ಚಲಾಗಿದ್ದು ಇನ್ನೂ 4800ಕ್ಕೂ ಹೆಚ್ಚಿನ ಗುಂಡಿಗಳು ಬಾಕಿ ಇವೆ ಎನ್ನಲಾಗುತ್ತಿದೆ.

ಈ ಕೆಲಸಕ್ಕಾಗಿ ಸರಕಾರವು 1100 ಕೋಟಿ ರು.ಗಳನ್ನು ನಿಗದಿಪಡಿಸಿದ್ದು, ಅಗತ್ಯ ಕಾರ್ಯವು ಯುದ್ಧೋಪಾದಿಯಲ್ಲಿ ನಡೆದಿದೆ. ಈ ಚುರುಕುತನವನ್ನು ತಿಂಗಳ ಹಿಂದೆಯೇ ತೋರಿಸಿದ್ದರೆ, ಅನಗತ್ಯ ಟೀಕೆ-ಮುಜುಗರ-ಲೇವಡಿ-ಅವಮಾನಗಳನ್ನು ತಪ್ಪಿಸಿಕೊಳ್ಳಬಹುದಿತ್ತು. ಸಾರಿಗೆ ದಟ್ಟಣೆ ಮತ್ತು ರಸ್ತೆಗುಂಡಿಗಳಿಂದಾಗಿ ತಮ್ಮ ಸಿಬ್ಬಂದಿಗಳ ಅಮೂಲ್ಯ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು, ತಮ್ಮ ಕಂಪನಿಯನ್ನು ಸ್ಥಳಾಂತರ ಮಾಡುವುದಾಗಿ ಉದ್ಯಮಿಯೊಬ್ಬರು ಹೇಳಿದ್ದು ಭಾರಿ ವೈರಲ್ ಆಗಿದೆ.

ಆದರೆ ಇದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ. ‘ಹೋಗುವವರು ಹೋಗಲಿ, ಇಲ್ಲಿ ಉಳಿದವರ ಬದುಕು ಸುಗಮವಾಗುತ್ತದೆ’ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಉದ್ಯಮಿಗಳು ಈ ರೀತಿ ಮಾತನಾಡುವುದು ಹೊಸ ಬೆಳವಣಿಗೆಯಲ್ಲ. ಹಿಂದೆಯೂ ಹೀಗೆ ಕೆಲವರು ಮಾತನಾಡಿದ್ದಿದೆ. ಈ ಉದ್ಯಮಿಗಳು ಉಲ್ಲೇಖಿಸಿದ ಸಮಸ್ಯೆಗಳು ಬೆಂಗ ಳೂರಿಗಷ್ಟೇ ಸೀಮಿತವಾಗಿಲ್ಲ, ಅವು ‘ಪ್ಯಾನ್ ಇಂಡಿಯಾ’ ಸ್ವರೂಪದವು ಎಂಬುದನ್ನು ಮರೆಯದಿರೋಣ, ಅಷ್ಟೇ!

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)