ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ನಂಬಿಕೆ, ಗೌರವ, ಸಂಸ್ಕೃತಿ ಬುನಾದಿ ಮೇಲೆ ಕಟ್ಟಿದ ಭಾರತ-ಭೂತಾನ್‌ ಸಂಬಂಧ

ಭಾರತ ಮತ್ತು ಭೂತಾನ್ ನಡುವಿನ ಸಂಬಂಧದ ಬೇರುಗಳು ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಇವೆ. ಎಂಟನೇ ಶತಮಾನದಲ್ಲಿ ಭಾರತದ ಗುರು ಪದ್ಮಸಂಭವ (ಗುರು ರಿಂಪೋಚೆ ಎಂದೂ ಪ್ರಸಿದ್ಧ) ಭೂತಾನಿಗೆ ತಾಂತ್ರಿಕ ಬೌದ್ಧ ಧರ್ಮವನ್ನು ಪರಿಚಯಿಸಿದರು. ಇದು ಎರಡೂ ದೇಶಗಳ ನಡುವಿನ ಆಧ್ಯಾತ್ಮಿಕ ಸಂಬಂಧಕ್ಕೆ ಆಧಾರವಾಯಿತು.

ನಂಬಿಕೆ, ಗೌರವ, ಸಂಸ್ಕೃತಿ ಬುನಾದಿ ಮೇಲೆ ಕಟ್ಟಿದ ಭಾರತ-ಭೂತಾನ್‌ ಸಂಬಂಧ

ಇದೇ ಅಂತರಂಗ ಸುದ್ದಿ

vbhat@me.com

ಭೂತಾನ್, ಭಾರತದ ಗಡಿಗೆ ಹೊಂದಿಕೊಂಡ ದೇಶವಾದರೂ, ನಾನು ಅಲ್ಲಿಗೆ ಏಕೆ ಹೋಗಲಿಲ್ಲ ಎಂಬುದು ನನಗೆ ಇನ್ನೂ ಅರ್ಥವಾಗದ ಪ್ರಶ್ನೆ. ನೂರಾ ಒಂದು ದೇಶ ಸುತ್ತಿದ ನಂತರ ನಮ್ಮ ದೇಶಕ್ಕೆ ತಾಕಿಕೊಂಡ ಭೂತಾನ್‌ಗೆ ಇಷ್ಟು ತಡವಾಗಿ ಹೋಗುತ್ತಿರುವುದಕ್ಕೆ ನನಗೇ ವಿಷಾದವಿದೆ. ಭೂತಾನ್ ಒಂದೆಡೆ ಅಸ್ಸಾಂ ಮತ್ತು ಸಿಕ್ಕಿಂ ಜತೆಗೆ ಗಡಿಯನ್ನು ಹಂಚಿಕೊಂಡಿದೆ. ನೇಪಾಳ ಮತ್ತು ಭೂತಾನ್ ಪ್ರತ್ಯೇಕವಾಗಿರುವುದು ಸಿಕ್ಕಿಂನಿಂದಾಗಿ. ಗುವಾಹಟಿಯಿಂದ ಕೇವಲ ನಲವತ್ತು ನಿಮಿಷ ವಿಮಾನ ಪ್ರಯಾಣದ ಅಂತರದಲ್ಲಿರುವ ಭೂತಾನ್, ಭಾರತದ ಮಿತ್ರದೇಶಗಳಂದು.

ಭಾರತ ಮತ್ತು ಭೂತಾನ್ ನಡುವಿನ ಸಂಬಂಧವು ರಾಜಕೀಯ ಅಥವಾ ಆರ್ಥಿಕ ವಿಷಯಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ದಶಕಗಳ ಕಾಲದ ನಂಬಿಕೆ, ಪರಸ್ಪರ ಗೌರವ ಮತ್ತು ಸಾಂಸ್ಕೃತಿಕ ನಂಟಿನ ಮೇಲೆ ಆಧರಿತವಾದ ಒಂದು ವಿಶಿಷ್ಟ ಮತ್ತು ಬಲವಾದ ಸ್ನೇಹ ಸಂಬಂಧ. ಭೂತಾನ್ ಭಾರತಕ್ಕೆ ಅತ್ಯಂತ ವಿಶ್ವಾಸಾರ್ಹ ನೆರೆಹೊರೆ ದೇಶವಾಗಿದ್ದು, ಈ ಸಂಬಂಧವು ‘ನೆರೆಹೊರೆಗೆ ಮೊದಲ ಆದ್ಯತೆ’ (Neighbourhood Firs) ಎಂಬ ಭಾರತದ ನೀತಿಯ ಪ್ರಮುಖ ಭಾಗವಾಗಿದೆ.

ಭಾರತ ಮತ್ತು ಭೂತಾನ್ ನಡುವಿನ ಸಂಬಂಧದ ಬೇರುಗಳು ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಇವೆ. ಎಂಟನೇ ಶತಮಾನದಲ್ಲಿ ಭಾರತದ ಗುರು ಪದ್ಮಸಂಭವ (ಗುರು ರಿಂಪೋಚೆ ಎಂದೂ ಪ್ರಸಿದ್ಧ) ಭೂತಾನಿಗೆ ತಾಂತ್ರಿಕ ಬೌದ್ಧ ಧರ್ಮವನ್ನು ಪರಿಚಯಿಸಿದರು. ಇದು ಎರಡೂ ದೇಶಗಳ ನಡುವಿನ ಆಧ್ಯಾತ್ಮಿಕ ಸಂಬಂಧಕ್ಕೆ ಆಧಾರವಾಯಿತು.

ಇದನ್ನೂ ಓದಿ: Vishweshwar Bhat Column: ಕೆಲ ಭಾವನೆಯ ವರ್ಣಿಸಲು ಪದಗಳೇ ಸಿಗೋದಿಲ್ಲ !

ಅಂದಿನಿಂದ ಇಂದಿನವರೆಗೂ, ಭೂತಾನ್ ದೇಶವು ಭಾರತೀಯ ಸಂಸ್ಕೃತಿ ಮತ್ತು ಬೌದ್ಧ ಧರ್ಮದ ಅನೇಕ ಅಂಶಗಳನ್ನು ಮೈಗೂಡಿಸಿಕೊಂಡಿದೆ. ಭೂತಾನ್ ಭಾರತಕ್ಕೆ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ದೇಶ. ಭಾರತ ಮತ್ತು ಚೀನಾ ನಡುವೆ ಭೂತಾನ್ ಇದೆ. ಯಾವುದೇ ಬಾಹ್ಯ ಶಕ್ತಿಯು ಭೂತಾನ್‌ನ ಪ್ರದೇಶವನ್ನು ಆಕ್ರಮಿಸದಂತೆ ಭಾರತವು ಭದ್ರತೆಯನ್ನು ಖಚಿತಪಡಿಸುತ್ತದೆ.

2017ರ ಡೋಕ್ಲಾಮ್ ಬಿಕ್ಕಟ್ಟು ಇದಕ್ಕೆ ಉತ್ತಮ ಉದಾಹರಣೆ. ಚೀನಾವು ಡೋಕ್ಲಾಮ್ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನಿಸಿದಾಗ, ಭೂತಾನ್‌ನ ಸಾರ್ವಭೌಮತ್ವವನ್ನು ರಕ್ಷಿಸಲು ಭಾರತವು ಚೀನಾವನ್ನು ತಡೆಯಿತು. ಈ ಘಟನೆಯು ಭೂತಾನ್ ನ ಭದ್ರತೆಯ ವಿಷಯದಲ್ಲಿ ಭಾರತಕ್ಕಿರುವ ಬದ್ಧತೆಗೆ ಪ್ರತೀಕವಾಯಿತು.

ಭಾರತೀಯ ಮಿಲಿಟರಿ ತರಬೇತಿ ತಂಡ (IMTRAT) ಭೂತಾನ್ ಸೈನ್ಯಕ್ಕೆ ತರಬೇತಿ ನೀಡುತ್ತದೆ. ಭಾರತವು ಭೂತಾನ್‌ನ ಅತಿದೊಡ್ಡ ಅಭಿವೃದ್ಧಿ ಪಾಲುದಾರ ದೇಶ. ಭಾರತವು ಭೂತಾನ್‌ಗೆ ಆರ್ಥಿಕ ಸಹಾಯ, ಸಾಲಗಳು ಮತ್ತು ಅನುದಾನಗಳ ರೂಪದಲ್ಲಿ ಸದಾ ಸಹಾಯಹಸ್ತ ಚಾಚುತ್ತದೆ. ಈ ಸಹಕಾರವು ಹಲವು ಪ್ರಮುಖ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಭೂತಾನ್‌ನ ಆರ್ಥಿಕತೆಯ ಪ್ರಮುಖ ಆದಾಯದ ಮೂಲ ಜಲವಿದ್ಯುತ್. ಭಾರತವು ಅನೇಕ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಭೂತಾನಿಗೆ ಸಹಾಯ ಮಾಡಿದೆ ಮತ್ತು ಅಲ್ಲಿ ಉತ್ಪಾದನೆಯಾದ ವಿದ್ಯುತ್‌ನ ಮುಖ್ಯ ಖರೀದಿ ದಾರನಾಗಿದೆ. ಇದು ಭೂತಾನ್‌ನ ಆದಾಯಕ್ಕೆ ದೊಡ್ಡ ಕೊಡುಗೆಯನ್ನು ಸಹ ನೀಡಿದೆ.

ಭಾರತವು ಭೂತಾನ್‌ನಲ್ಲಿ ರಸ್ತೆ, ಸೇತುವೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇತ್ತೀಚೆಗೆ, ಎರಡೂ ದೇಶಗಳು ಗಡಿ ವ್ಯಾಪಾರ ಮತ್ತು ಸಂಪರ್ಕವನ್ನು ಸುಧಾರಿಸಲು ಗೆಲೆ-ವಿನಲ್ಲಿ ಪ್ರಾದೇಶಿಕ ಆರ್ಥಿಕ ಕೇಂದ್ರವನ್ನು ಸ್ಥಾಪಿಸಲು ಸಹಕಾರ ನೀಡಿವೆ. ಇತ್ತೀಚಿನ ವರ್ಷಗಳಲ್ಲಿ, ಭಾರತವು ಭೂತಾನ್‌ಗೆ ಡಿಜಿಟಲ್ ತಂತ್ರeನ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಸಹಾಯ ಮಾಡಿದೆ. ಉದಾಹರಣೆಗೆ, ಭೂತಾನ್‌ನ ಉಪಗ್ರಹ ಉಡಾವಣೆ ಮತ್ತು ದಕ್ಷಿಣ ಏಷ್ಯಾ ಉಪಗ್ರಹ ಬಳಕೆಗಾಗಿ ಭಾರತ ಸಹಾಯ ಮಾಡಿದೆ.

ರೂಪೇ ಕಾರ್ಡ್ ಅನ್ನು ಭೂತಾನ್‌ನಲ್ಲಿಯೂ ಬಳಸಲು ಅವಕಾಶ ನೀಡಿ, ಡಿಜಿಟಲ್ ವಹಿವಾಟು ಗಳನ್ನು ಉತ್ತೇಜಿಸಲಾಗಿದೆ. ಭಾರತವು ಭೂತಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ. ಭೂತಾನ್‌ ನ ಒಟ್ಟು ವ್ಯಾಪಾರದ ಸುಮಾರು ಶೇ.80ರಷ್ಟು ಭಾರತದೊಂದಿಗೇ ನಡೆಯುತ್ತದೆ. ಭಾರತವು ಭೂತಾನ್ ಪಾಲಿಗೆ ಸರಕುಗಳನ್ನು ಆಮದು ಮಾಡಿಕೊಳ್ಳುವ ಮುಖ್ಯ ಮೂಲವಾಗಿದೆ ಮತ್ತು ಅಲ್ಲಿನ ಜಲವಿದ್ಯುತ್, ಕೃಷಿ ಉತ್ಪನ್ನಗಳು ಮತ್ತು ಖನಿಜಗಳನ್ನು ರಫ್ತು ಮಾಡುವ ಮುಖ್ಯ ತಾಣವಾಗಿದೆ.

ಭೂತಾನಿಯರು ಭಾರತೀಯರನ್ನು ಸಹೋದರ ಸಂಬಂಧದಂತೆ ನೋಡುವುದನ್ನು ಎಡೆ ಕಾಣಬಹುದು. ಭೂತಾನ್‌ನಲ್ಲಿ ಓಡಾಡುವಾಗ, ನಮ್ಮ ಹಿಮಾಚಲ ಅಥವಾ ಉತ್ತರಾಖಂಡ್‌ನಲ್ಲಿ ಓಡಾಡಿದ ಅನುಭವವಾಗುತ್ತದೆ. ರಸ್ತೆಯಲ್ಲಿ ಓಡಾಡುವಾಗ ಕಟ್ಟಡಗಳನ್ನು ಹೊರತುಪಡಿಸಿದರೆ, ವಾಹನಗಳೆಲ್ಲ ಭಾರತದ ರಸ್ತೆಗಳಲ್ಲಿ ಕಾಣುವಂಥವೇ. ಒಟ್ಟಾರೆಯಾಗಿ, ಭೂತಾನ್ ಮತ್ತು ಭಾರತದ ಸಂಬಂಧವು ಪರಸ್ಪರ ನಂಬಿಕೆ, ಗೌರವ ಮತ್ತು ಸಹಕಾರದ ತತ್ವಗಳ ಮೇಲೆ ನಿಂತಿದೆ.

ಭೂತಾನ್ ತನ್ನ ಸಾರ್ವಭೌಮತ್ವ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಭಾರತದ ಬೆಂಬಲವನ್ನು ನಂಬಿದೆ. ಅದೇ ರೀತಿ, ಭಾರತವು ತನ್ನ ನೆರೆಹೊರೆಯಲ್ಲಿ ಶಾಂತಿ ಮತ್ತು ಸ್ಥಿರತೆ ಯನ್ನು ಖಚಿತಪಡಿಸಿಕೊಳ್ಳಲು ಭೂತಾನ್‌ನೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿದೆ. ಈ ಸ್ನೇಹ ಸಂಬಂಧ ಇಂದಿನವರೆಗೂ ಒಂದು ಆದರ್ಶಪ್ರಾಯ ದ್ವಿಪಕ್ಷೀಯ ಸಂಬಂಧವಾಗಿದೆ.

ತಡವಾಗಿ ಬಂದ ಟಿವಿ

1999ರಲ್ಲಿ ಟೆಲಿವಿಷನ್ ಮತ್ತು ಇಂಟರ್ನೆಟ್ ಅನ್ನು ಪರಿಚಯಿಸಲಾದ ವಿಶ್ವದ ಕೊನೆಯ ದೇಶಗಳಲ್ಲಿ ಭೂತಾನ್ ಒಂದು ಅಂದರೆ ಆಶ್ಚರ್ಯವಾಗಬಹುದು. ಇದಕ್ಕೆ ತಾಂತ್ರಿಕ ಹಿನ್ನಡೆ ಮಾತ್ರ ಕಾರಣವಲ್ಲ. ಇದಕ್ಕೆ ಭೂತಾನ್‌ನ ವಿಶಿಷ್ಟ ನೀತಿಗಳು ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನವೂ ಒಂದು ಕಾರಣ. ಭೂತಾನ್ ಇಷ್ಟು ವರ್ಷಗಳ ಕಾಲ ಟಿವಿ ಮತ್ತು ಇಂಟರ್ನೆಟ್ ನಿಂದ ದೂರ ಉಳಿಯಲು ಕೆಲವು ಪ್ರಮುಖ ಕಾರಣಗಳಿವೆ.

ಭೂತಾನ್‌ನ ರಾಜಮನೆತನ ಮತ್ತು ಸರಕಾರ, ಆಧುನಿಕ ತಂತ್ರಜ್ಞಾನಗಳು ಹೊರಗಿನ ಪ್ರಪಂಚದ ನಕಾರಾತ್ಮಕ ಪ್ರಭಾವಗಳನ್ನು ತಂದು, ದೇಶದ ಅನನ್ಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹಾಳುಮಾಡಬಹುದು ಎಂದು ಆತಂಕಗೊಂಡಿತ್ತು. ತಮ್ಮ ಜನರ ಜೀವನಶೈಲಿ, ಸಂಪ್ರದಾಯ, ಪರಂಪರೆ, ಸಂಸ್ಕಾರ, ಉಡುಗೆ- ತೊಡುಗೆ ಮತ್ತು ಅಧ್ಯಾತ್ಮಿಕ ಮೌಲ್ಯಗಳು ಕಲುಷಿತವಾಗಬಾರದು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು.

ಭೂತಾನ್ ಆರ್ಥಿಕ ಅಭಿವೃದ್ಧಿಗಿಂತ ಹೆಚ್ಚಾಗಿ ಜನರ ಸಂತೋಷ ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡುತಾ ಬಂದಿದೆ. ಟಿವಿ ಮತ್ತು ಇಂಟರ್ನೆಟ್‌ನಂಥ ಮಾಧ್ಯಮಗಳು ಜನರ ಆಸೆಗಳನ್ನು ಹೆಚ್ಚಿಸಿ, ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿ, ಸಂತೋಷವನ್ನು ಕಡಿಮೆ ಮಾಡಬಹುದು ಎಂಬುದು ಇಲ್ಲಿನ ಜನರ ಅಭಿಪ್ರಾಯವಾಗಿತ್ತು.

ಹಿಮಾಲಯದ ಕಠಿಣ ಭೂಪ್ರದೇಶದಿಂದಾಗಿ, ಟಿವಿ ಮತ್ತು ಇಂಟರ್ನೆಟ್‌ಗಾಗಿ ಅಗತ್ಯವಿರುವ ಮೂಲಸೌಕರ್ಯಗಳನ್ನು (ರಸ್ತೆ, ವಿದ್ಯುತ್, ಸಂಪರ್ಕ ತಂತಿಗಳು) ನಿರ್ಮಿಸುವುದು ಕೂಡ ಅತ್ಯಂತ ಕಷ್ಟಕರ ಮತ್ತು ದುಬಾರಿ ಕೆಲಸವಾಗಿತ್ತು. ಇದು ಸಹ ಒಂದು ಕಾರಣವಾಗಿದ್ದಿರಬಹುದು.

1999ರಲ್ಲಿ, ಆಗಿನ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ ಅವರು ತಮ್ಮ ಪಟ್ಟಾಭಿಷೇಕದ 25ನೇ ವಾರ್ಷಿಕೋತ್ಸವದಂದು ಟಿವಿ ಮತ್ತು ಇಂಟರ್ನೆಟ್ ಅನ್ನು ಅಧಿಕೃತವಾಗಿ ಆರಂಭಿಸಲು ಸಮ್ಮತಿ ಸಿದರು. ಜಗತ್ತು ತಂತ್ರಜ್ಞಾನದಲ್ಲಿ ವೇಗವಾಗಿ ಮುನ್ನಡೆಯುತ್ತಿರುವುದರಿಂದ, ಭೂತಾನ್ ಸಂಪೂರ್ಣವಾಗಿ ಅದರಿಂದ ದೂರ ಉಳಿದರೆ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತದೆ ಎಂದು ವಾಂಗ್ಚುಕ್ ಭಾವಿಸಿದ್ದರು.

ಟಿವಿ ಮತ್ತು ಇಂಟರ್ನೆಟ್ ಮೂಲಕ ಜನರು ಜಗತ್ತಿನ ವಿದ್ಯಮಾನಗಳನ್ನು, ಹೊಸ ಜ್ಞಾನವನ್ನು ಮತ್ತು ಮಾಹಿತಿಗಳನ್ನು ಪಡೆಯಬಹುದು ಎಂದು ಅವರು ನಂಬಿದ್ದರು. ಇದು ದೇಶದ ಪ್ರಗತಿಗೆ ಸಹಾಯ ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದರು.

ಟಿವಿ ಮತ್ತು ಇಂಟರ್ನೆಟ್ ಪ್ರಾರಂಭಿಸುವಾಗ, ವಾಂಗ್ಚುಕ್ ತಮ್ಮ ಭಾಷಣದಲ್ಲಿ, ‘ಈ ತಂತ್ರಜ್ಞಾನ ಗಳು ಒಳ್ಳೆಯದನ್ನೂ, ಕೆಟ್ಟದನ್ನೂ ತರುತ್ತವೆ’ ಎಂದು ಜನರಿಗೆ ಎಚ್ಚರಿಕೆ ನೀಡಿ, ‘ಜನರು ಜಾಗರೂಕ ರಾಗಿ ಮತ್ತು ವಿವೇಚನೆಯಿಂದ ಅವುಗಳನ್ನು ಬಳಸಬೇಕು’ ಎಂದು ಕಿವಿಮಾತು ಹೇಳಿದ್ದರು.

ಟಿವಿ ಮತ್ತು ಇಂಟರ್ನೆಟ್ ಬಂದ ನಂತರ, ಭೂತಾನ್‌ನಲ್ಲಿ ತ್ವರಿತ ಬದಲಾವಣೆಗಳು ಆದವು. ಜನರು ಜಾಗತಿಕ ಸುದ್ದಿ, ಶಿಕ್ಷಣ ಮತ್ತು ಹೊಸ ಕಲ್ಪನೆಗಳನ್ನು ತಿಳಿದುಕೊಳ್ಳಲು ಪ್ರಾರಂಭಿಸಿದರು. ಇದು ಭೂತಾನ್‌ನ ಡಿಜಿಟಲ್ ಬೆಳವಣಿಗೆಗೆ ದಾರಿಯಾಯಿತು. ಇಂದು, ಭೂತಾನ್‌ನ ಬಹುತೇಕ ಜನರು ಇಂಟರ್ನೆಟ್ ಮತ್ತು ಮೊಬೈಲ್ ಫೊನ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇದರಿಂದ ನಕಾರಾತ್ಮಕ ಪರಿಣಾಮಗಳೂ ಆಗಿವೆ ಎಂಬುದನ್ನು ಭೂತಾನಿಯರು ಒಪ್ಪುತ್ತಾರೆ. ವಾಂಗ್ಚುಕ್ ಮೊದಲೇ ಎಚ್ಚರಿಕೆ ನೀಡಿದಂತೆ, ಕೆಲವು ನಕಾರಾತ್ಮಕ ಪರಿಣಾಮಗಳೂ ಕಾಣಿಸಿಕೊಂಡವು.

ಹೊರಗಿನ ಪ್ರಭಾವದಿಂದ ಪಾಶ್ಚಾತ್ಯ ಉಡುಗೆ-ತೊಡುಗೆ, ಸಂಗೀತ ಮತ್ತು ಜೀವನಶೈಲಿ ಯುವಕರ ಮೇಲೆ ಪ್ರಭಾವ ಬೀರಲು ಶುರುವಾಯಿತು. 1999ರ ನಂತರ ಅಪರಾಧ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವಾಯಿತು. ಒಟ್ಟಾರೆಯಾಗಿ, ಭೂತಾನ್‌ನ ಈ ನಿರ್ಧಾರವು ಆಧುನಿಕತೆ ಮತ್ತು ಸಂಪ್ರದಾ ಯದ ನಡುವೆ ಸಮತೋಲನವನ್ನು ಸಾಧಿಸುವ ಒಂದು ಪ್ರಯತ್ನವಾಗಿತ್ತು. ಭೂತಾನ್ ತನ್ನ ಅನನ್ಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳುತ್ತಲೇ, ಜಾಗತಿಕ ಸಮುದಾಯದೊಂದಿಗೆ ಸೇರಿಕೊಳ್ಳಲು ನಿರ್ಧರಿಸಿದ್ದು ಒಂದು ಕ್ರಾಂತಿಕಾರಿ ಹೆಜ್ಜೆಯೇ.

ರಾಜರ ಸರಳ ಜೀವನ

ಭೂತಾನ್‌ನ ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ನಡುವಿನ ಸಂಬಂಧ ಜಗತ್ತಿನಲ್ಲಿಯೇ ವಿಶಿಷ್ಟ ವಾದದ್ದು. ಸಾಮಾನ್ಯವಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗ್ರಹಿಸಿ, ಜನರು ರಾಜರ ವಿರುದ್ಧ ಬೀದಿಗಿಳಿದು ಹೋರಾಡಿದ್ದನ್ನು ಜಗತ್ತಿನ ಅನೇಕ ಕಡೆಗಳಲ್ಲಿ ನೋಡಿದ್ದೇವೆ. ಆದರೆ, ಭೂತಾನ್‌ನಲ್ಲಿ ಸ್ವತಃ ರಾಜರೇ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಮುಂದಾದರು.

ಭೂತಾನ್‌ನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಪ್ರಕ್ರಿಯೆ ದಿಢೀರನೆ ನಡೆದದ್ದಲ್ಲ. ಇದು ದಶಕಗಳ ಕಾಲ ನಡೆದ ಒಂದು ಯೋಜಿತ ಪ್ರಕ್ರಿಯೆ. ಮೂರನೇ ರಾಜ ಜಿಗ್ಮೆ ದೋರ್ಜಿ ವಾಂಗ್ಚುಕ್ ಅವರನ್ನು ‘ಆಧುನಿಕ ಭೂತಾನ್‌ನ ಜನಕ’ ಎಂದು ಕರೆಯಲಾಗುತ್ತದೆ. 1953ರಲ್ಲಿ ಇವರು ‘ರಾಷ್ಟ್ರೀಯ ಸಭೆ’ ಯನ್ನು ( National Assembly ) ಸ್ಥಾಪಿಸಿ, ತಮ್ಮ ಪರಮಾಧಿಕಾರ (veto)ವನ್ನು ಕಡಿಮೆ ಮಾಡಿಕೊಂಡರು.

ಇದು ಪ್ರಜಾಪ್ರಭುತ್ವದತ್ತ ಇಟ್ಟ ಮೊದಲ ಹೆಜ್ಜೆ. ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ 1998 ರಲ್ಲಿ ತಮ್ಮ ಬಹುತೇಕ ಆಡಳಿತ ಅಧಿಕಾರವನ್ನು ಸಚಿವರ ಮಂಡಳಿಗೆ ವರ್ಗಾಯಿಸಿದರು. ಅದರ ಜತೆಗೆ, ‘ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರು ಬೇಡ ಎಂದಲ್ಲಿ ರಾಜನು ಅಧಿಕಾರ ವನ್ನು ಬಿಟ್ಟುಕೊಡಬೇಕಾಗುತ್ತದೆ’ ಎಂಬ ಕಾನೂನನ್ನು ಜಾರಿಗೆ ತಂದರು.

ಈ ನಿರ್ಧಾರ ಪ್ರಪಂಚದಲ್ಲಿಯೇ ಒಂದು ಅಚ್ಚರಿಯ ನಡೆ ಯಾಗಿತ್ತು. 2008ರಲ್ಲಿ ನಾಲ್ಕನೇ ರಾಜರು ತಮ್ಮ ಮಗ ಜಿಗ್ಮೆ ಖೇಸರ್ ನಾಮ್ಗ್ಯಾಲ್ ವಾಂಗ್ಚುಕ್‌ಗೆ ಸಿಂಹಾಸನವನ್ನು ಬಿಟ್ಟುಕೊಟ್ಟರು. ಈ ಸಂದರ್ಭದಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು ಭೂತಾನ್ ಒಂದು ಸಾಂವಿಧಾನಿಕ ರಾಜ ಪ್ರಭುತ್ವಕ್ಕೆ ಬದಲಾಯಿತು. ಇದು ಭೂತಾನ್‌ನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ವಾಗಿತ್ತು.

ಭೂತಾನ್ ರಾಜರನ್ನು ಅವರ ಜನಪ್ರಿಯತೆ ಮತ್ತು ಸರಳತೆಯಿಂದ ಗುರುತಿಸಲಾಗುತ್ತದೆ. ಈಗಿನ ರಾಜ ಜಿಗ್ಮೆ ಖೇಸರ್ ಮತ್ತು ರಾಣಿ ಜೆಟ್ಸನ್ ಪೆಮಾ ಅವರು ಆಗಾಗ ಹಳ್ಳಿಗಳಿಗೆ ಭೇಟಿ ನೀಡಿ ಜನರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ಜನರ ಸಮಸ್ಯೆಗಳನ್ನು ನೇರವಾಗಿ ಕೇಳಿ ತಿಳಿದುಕೊಳ್ಳುತ್ತಾರೆ. ಈ ಕಾರಣದಿಂದಾಗಿ, ಭೂತಾನಿ ಜನರು ಅವರನ್ನು ಕೇವಲ ರಾಜರಂತೆ ನೋಡದೇ, ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಾರೆ. ಥಿಂಫುವಿನ ಜನಪ್ರಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುವಾಗ ನಿಮ್ಮ ಮುಂದೆ ಅಥವಾ ಹಿಂದೆ ರಾಜ ಮತ್ತು ರಾಣಿ ಇದ್ದರೆ, ದಾರಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದರೆ ಆಶ್ಚರ್ಯ ಪಡಬೇಕಿಲ್ಲ!

ಈಗಿನ ರಾಜ ಮತ್ತು ರಾಣಿ, ಸಾರ್ವಜನಿಕ ಜೀವನದಲ್ಲಿ ಬಹಳ ಸರಳವಾಗಿ ಮತ್ತು ಸಾಮಾನ್ಯರಂತೆ ಕಾಣಿಸಿಕೊಳ್ಳುತ್ತಾರೆ. ಅಲ್ಲಿನ ರಾಜಮನೆತನ ತಮ್ಮನ್ನು ದೇಶದ ಜನರ ಸೇವಕರೆಂದು ಪರಿಗಣಿಸು ತ್ತದೆ. ಅವರು ಜನರಿಂದ ದೂರವಿರಲು ಬಯಸುವುದಿಲ್ಲ, ಬದಲಾಗಿ ಅವರೊಂದಿಗೆ ಬೆರೆಯಲು, ಅವರ ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಸಮಸ್ಯೆಗಳನ್ನು ನೇರವಾಗಿ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ರಾಜ ಮತ್ತು ರಾಣಿಯ ಸರಳ ಜೀವನಶೈಲಿ ಈ ತತ್ವಕ್ಕೆ ಒಂದು ಉತ್ತಮ ಉದಾಹರಣೆ. ಆಡಂಬರ ಮತ್ತು ಐಷಾರಾಮಿ ಜೀವನದಿಂದ ದೂರವಿದ್ದು, ತಮ್ಮ ಸಂತೋಷ ಮತ್ತು ಜನರ ಸಂತೋಷಕ್ಕಾಗಿ ಸರಳ ಜೀವನ ನಡೆಸುತ್ತಾರೆ.

ಭೂತಾನಿ ಜನರು ತಮ್ಮ ರಾಜಮನೆತನವನ್ನು ಅಪಾರವಾಗಿ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ರಾಜ ಮತ್ತು ರಾಣಿ ತಮ್ಮ ಪ್ರಜೆಗಳಿಗೆ ಕುಟುಂಬದ ಸದಸ್ಯರಂತೆ. ಹೀಗಾಗಿ, ಸಾರ್ವಜನಿಕವಾಗಿ ಅವರನ್ನು ಕಂಡಾಗ ಜನರು ಕೂಗಾಡುವುದು, ಸುತ್ತುವರಿಯುವುದು ಅಥವಾ ಸೆಲಿಗಾಗಿ ಮುತ್ತಿ ಕೊಳ್ಳುವುದು ಸಾಮಾನ್ಯವಾಗಿ ನಡೆಯುವುದಿಲ್ಲ. ಬದಲಾಗಿ, ವಿನಯದಿಂದ ನಮಸ್ಕರಿಸಿ ಮುಂದೆ ಹೋಗುತ್ತಾರೆ.

ಭೂತಾನಿ ಸಂಸ್ಕೃತಿಯಲ್ಲಿ ಗೌರವ ಮತ್ತು ವಿನಯಕ್ಕೆ ಹೆಚ್ಚಿನ ಮಹತ್ವವಿದೆ. ರಾಜ ಮತ್ತು ರಾಣಿ ಜನರಲ್ಲಿ ಪ್ರೀತಿ, ಗೌರವ ಮತ್ತು ವಿನಯದ ಭಾವನೆಯನ್ನು ತುಂಬಿದ್ದಾರೆ. ಅದಕ್ಕಾಗಿಯೇ ಅವರು ಯಾವುದೇ ಭದ್ರತಾ ಸಿಬ್ಬಂದಿಯಿಲ್ಲದೆ ಸರಳವಾಗಿ ಓಡಾಡಿದರೂ ಯಾವುದೇ ಸಮಸ್ಯೆ ಉದ್ಭವಿ ಸುವುದಿಲ್ಲ. ಇದು ಭೂತಾನ್‌ನ ವಿಶಿಷ್ಟ ಸಂಸ್ಕೃತಿಯ ಒಂದು ಅಪರೂಪದ ಉದಾಹರಣೆ. ಇಲ್ಲಿ ರಾಜಮನೆತನದ ಸದಸ್ಯರು ಸಾಮಾನ್ಯ ಜನರೊಂದಿಗೆ ಬದುಕುತ್ತಾರೆ ಮತ್ತು ಅವರ ಸುಖ- ದುಃಖ ಗಳಲ್ಲಿ ಭಾಗಿಯಾಗುತ್ತಾರೆ.

ಇದು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಕಾಣ ಸಿಗದ ಒಂದು ವಿಶಿಷ್ಟ ಮತ್ತು ಸುಂದರ ಸಂಬಂಧ. ಭೂತಾನ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ, ರಾಜನು ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಸಂಸತ್ತಿನಲ್ಲಿ ಅಂಗೀಕಾರವಾಗುವ ಕಾನೂನುಗಳಿಗೆ ರಾಜನ ಒಪ್ಪಿಗೆ ಬೇಕಾಗುತ್ತದೆ.

ಒಟ್ಟಾರೆಯಾಗಿ, ಭೂತಾನ್‌ನಲ್ಲಿ ಪ್ರಜಾಪ್ರಭುತ್ವವನ್ನು ಜನರು ರಾಜನಿಂದ ಕೇಳಿಕೊಂಡಿದ್ದಲ್ಲ, ಬದಲಾಗಿ ರಾಜರೇ ಸ್ವತಃ ತಮ್ಮ ಅಧಿಕಾರವನ್ನು ತ್ಯಾಗ ಮಾಡಿ ಜನರಿಗೆ ನೀಡಿದ್ದು. ಇದು ರಾಜ ಮನೆತನಕ್ಕೆ ಜನರ ಮೇಲಿರುವ ನಂಬಿಕೆ ಮತ್ತು ದೇಶದ ಭವಿಷ್ಯದ ಬಗ್ಗೆ ಅವರಿಗಿರುವ ದೂರದೃಷ್ಟಿ ಯನ್ನು ತೋರಿಸುತ್ತದೆ. ಈ ವಿಶಿಷ್ಟ ಮಾದರಿಯು ಭೂತಾನ್‌ನ ವಿಶಿಷ್ಟ ಸಂಸ್ಕೃತಿ ಮತ್ತು ಸಂತೋಷದ ಪರಿಕಲ್ಪನೆಗೆ ನಿಕಟವಾಗಿ ಸಂಬಂಧಿಸಿದೆ.

ಕಾರ್ಬನ್ ನೆಗೆಟಿವ್ ದೇಶ

ಭೂತಾನ್‌ನ ಇನ್ನೊಂದು ವೈಶಿಷ್ಟ್ಯವನ್ನು ಹೇಳಬೇಕು. ಅದು ಜಗತ್ತಿನ ಏಕೈಕ ‘ಕಾರ್ಬನ್ ನೆಗೆಟಿವ್’ ದೇಶ. ಇದರರ್ಥ, ಅದು ವಾತಾವರಣಕ್ಕೆ ಬಿಡುಗಡೆ ಮಾಡುವ ಇಂಗಾಲದ ಡೈಆಕ್ಸೈಡ್ ಗಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಈ ಒಂದು ಸಂಗತಿಯೇ ಭೂತಾನ್‌ನ ಪರಿಸರ ಪ್ರಜ್ಞೆ ಮತ್ತು ಅದರ ನೀತಿ ಗಳನ್ನು ಎತ್ತಿ ತೋರಿಸುತ್ತದೆ. ಇದು ಕೇವಲ ಕಾಕತಾಳೀಯವಲ್ಲ, ಬದಲಾಗಿ ಇದು ಒಂದು ದೀರ್ಘಕಾಲಿಕ ಯೋಜಿತ ಬದ್ಧತೆಯ ಫಲಿತಾಂಶ ವಾಗಿದೆ.

ಭೂತಾನ್ ದೇಶವು ‘ಕಾರ್ಬನ್ ನೆಗೆಟಿವ್’ ಆಗಿರುವುದಕ್ಕೆ ಮುಖ್ಯ ಕಾರಣ ಸಂವಿಧಾನದ ಕಾನೂನು. ಭೂತಾನ್‌ನ ಸಂವಿಧಾನದ ಪ್ರಕಾರ, ದೇಶದ ಒಟ್ಟು ಭೂಪ್ರದೇಶದ ಕನಿಷ್ಠ ಶೇ.60ರಷ್ಟು ಭಾಗವು ಅರಣ್ಯಗಳಿಂದ ಆವೃತವಾಗಿರಬೇಕು. ಪ್ರಸ್ತುತ, ಈ ಪ್ರಮಾಣ ಶೇ.70ಕ್ಕಿಂತಲೂ ಹೆಚ್ಚಿದೆ. ಈ ಕಾನೂನು ಅರಣ್ಯಗಳನ್ನು ರಕ್ಷಿಸಲು ಮತ್ತು ಕಾಡಿನ ಪ್ರಮಾಣವನ್ನು ಹೆಚ್ಚಿಸಲಿಕ್ಕಾಗಿನ ಒಂದು ದೃಢವಾದ ಬದ್ಧತೆಯನ್ನು ತೋರಿಸುತ್ತದೆ. ಹೆಚ್ಚು ಅರಣ್ಯವಿದ್ದರೆ, ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ, ಇದರಿಂದ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ.

ಭೂತಾನ್‌ನ ಬಹುಪಾಲು ವಿದ್ಯುತ್ ಉತ್ಪಾದನೆಯು ಜಲವಿದ್ಯುತ್ ಮೂಲದಿಂದ ಬರುತ್ತದೆ. ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗೆ ಕಾರಣವಾಗುವ ಕಲ್ಲಿದ್ದಲು ಅಥವಾ ಇತರ ಪಳೆಯುಳಿಕೆ ಇಂಧನಗಳನ್ನು ಬಳಸುವುದಿಲ್ಲ. ಈ ಶುದ್ಧ ಇಂಧನ ಮೂಲವು ದೇಶದ ಇಂಗಾಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಭೂತಾನ್ ತನ್ನ ಜಲವಿದ್ಯುತ್ ಅನ್ನು ಭಾರತಕ್ಕೆ ರಫ್ತು ಮಾಡುತ್ತದೆ. ಇದು ಭಾರತದ ಇಂಧನ ಅಗತ್ಯಗಳನ್ನು ಪೂರೈಸುವುದರ ಜತೆಗೆ, ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪರಿಸರವನ್ನು ಸ್ವಚ್ಛವಾಗಿಡಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದೆ. ಭೂತಾನ್ ಸಂಪೂರ್ಣವಾಗಿ ಸಾವಯವ ಕೃಷಿಗೆ ಪರಿವರ್ತನೆಯಾಗಲು ಪ್ರಯತ್ನಿಸುತ್ತಿದೆ. ಇದು ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಣ್ಣಿನ ಗುಣಮಟ್ಟವನ್ನು ಕಾಪಾಡುತ್ತದೆ.

‘ಕಡಿಮೆ ಪ್ರವಾಸಿಗರು, ಹೆಚ್ಚು ಆದಾಯ’ ಎಂಬ ನೀತಿಯನ್ನು ಅನುಸರಿಸುವುದರಿಂದ, ಪ್ರವಾಸೋ ದ್ಯಮದಿಂದಾಗುವ ಪರಿಸರ ಹಾನಿ ಕಡಿಮೆಯಾಗಿದೆ. ಪ್ರವಾಸಿಗರಿಗೆ ನಿರ್ದಿಷ್ಟ ಶುಲ್ಕವನ್ನು ವಿಧಿಸಿ, ಪರಿಸರವನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತದೆ. ಜಗತ್ತಿನಲ್ಲಿ ಹವಾಮಾನ ಬದಲಾವಣೆ ಒಂದು ದೊಡ್ಡ ಸಮಸ್ಯೆಯಾಗಿರುವಾಗ, ಭೂತಾನ್‌ನ ಈ ವೈಶಿಷ್ಟ್ಯವು ಇಡೀ ಜಗತ್ತಿಗೆ ಒಂದು ಆದರ್ಶ ವಾಗಿದೆ, ಮಾದರಿಯಾಗಿದೆ.

ಇದು ಕೇವಲ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಜತೆಗೆ ಜಗತ್ತಿಗೆ ಶುದ್ಧ ಆಮ್ಲಜನಕವನ್ನೂ ಒದಗಿಸುತ್ತದೆ. ಭೂತಾನ್‌ನ ಈ ಬದ್ಧತೆ ಅದರ ‘ಒಟ್ಟು ರಾಷ್ಟ್ರೀಯ ಸಂತೋಷ’ (Gross National Happiness- GNH) ತತ್ವಕ್ಕೆ ಸಂಬಂಧಿಸಿದೆ. ಪ್ರಕೃತಿಯನ್ನು ರಕ್ಷಿಸು ವುದು ಜನರ ಯೋಗಕ್ಷೇಮದ ಪ್ರಮುಖ ಭಾಗ ಎಂದು ಭೂತಾನ್ ನಂಬುತ್ತದೆ. ಹೀಗಾಗಿ, ಭೂತಾನ್‌ ನ ಪರಿಸರ-ಸ್ನೇಹಿ ಜೀವನಶೈಲಿ ಮತ್ತು ನೀತಿಗಳು ಇಡೀ ಜಗತ್ತಿಗೆ ಒಂದು ಪ್ರೇರಣೆಯಾಗಿದೆ.

ಮಾನವೀಯ ಸಂಬಂಧವೇ ಮುಖ್ಯ

ಭೂತಾನ್‌ನ ವಿಶಿಷ್ಟ ಸಂಸ್ಕೃತಿ ಮತ್ತು ಸರಳ ಜೀವನಶೈಲಿಗೆ ಸಂಬಂಧಿಸಿದಂತೆ ಒಂದು ತಮಾಷೆಯ ಪ್ರಸಂಗವಿದೆ. ಅದು ಎಷ್ಟು ನಿಜವೋ ಗೊತ್ತಿಲ್ಲ. ಒಬ್ಬ ಪ್ರವಾಸಿಗ ಭೂತಾನ್ ರಾಜಧಾನಿ ಥಿಂಪುವಿಗೆ ಬಂದು, ಅಲ್ಲಿ ಟ್ರಾಫಿಕ್ ಲೈಟ್ ಇಲ್ಲದಿರುವುದನ್ನು ನೋಡಿ ಆಶ್ಚರ್ಯಪಟ್ಟ. ಅವನು ಸ್ಥಳೀಯ ಅಧಿಕಾರಿಯನ್ನು ಕೇಳಿದ, “ನಿಮಗೆ ಟ್ರಾಫಿಕ್ ಲೈಟ್ ಹಾಕುವುದಕ್ಕೆ ಹಣದ ಸಮಸ್ಯೆ ಇದೆಯೇ?" ಅದಕ್ಕೆ ಅಧಿಕಾರಿ ನಕ್ಕು, “ಇಲ್ಲ ಸರ್, ನಮಗೆ ಹಣದ ಸಮಸ್ಯೆಯಿಲ್ಲ. ನಾವು ಟ್ರಾಫಿಕ್ ಲೈಟ್‌ಗಳನ್ನು ಅಳವಡಿಸಿದ್ದೆವು. ಆದರೆ ನಮ್ಮ ಜನ ‘ಟ್ರಾಫಿಕ್ ಲೈಟ್‌ಗೆ ಏಕೆ ಗೌರವ ಕೊಡಬೇಕು?’ ಎಂದು ಕೇಳಿದರು.

‘ಅವು ಕೇವಲ ಕೆಂಪು, ಹಳದಿ ಮತ್ತು ಹಸಿರು ಬಣ್ಣಗಳಲ್ಲವೇ? ಅವು ನಮ್ಮ ಯಜಮಾನರಲ್ಲ, ಅವು ನಮ್ಮ ಪೊಲೀಸರು ಮತ್ತು ನಮ್ಮ ರಾಜರಂತೆ ಬುದ್ಧಿವಂತಿಕೆಯಿಂದ ವರ್ತಿಸುವುದಿಲ್ಲ. ಅವುಗಳನ್ನು ನಾವು ಏಕೆ ನಂಬಬೇಕು?’ ಎಂದು ಕೇಳಿದರು. ಹೀಗಾಗಿ ಅವುಗಳನ್ನು ತೆಗೆದು ಹಾಕಬೇಕಾಯಿತು. ನಾವು ಯಂತ್ರಗಳಿಗೆ ನಮ್ಮ ಜೀವನವನ್ನು ನಿಯಂತ್ರಿಸಲು ಬಿಡುವುದಿಲ್ಲ, ನಮ್ಮ ಸಂಸ್ಕೃತಿಯನ್ನು ಕಾಪಾಡುತ್ತೇವೆ!" ಎಂದರಂತೆ.

ಇನ್ನೊಂದು ಪ್ರಸಂಗ. ಒಬ್ಬ ವಿದೇಶಿ ಪ್ರವಾಸಿ ಭೂತಾನ್‌ನ ಕಾಡಿನಲ್ಲಿ ಹೋಗುತ್ತಿದ್ದಾಗ, ಒಂದು ಪುಟ್ಟ ಗಿಡವನ್ನು ಕಿತ್ತು, ಅದರ ಎಲೆಗಳನ್ನು ನೋಡಿ, ಹತ್ತಿರದಲ್ಲಿದ್ದ ಸ್ಥಳೀಯನಿಗೆ ಕೇಳಿದ- “ಈ ಎಲೆಗಳು ತುಂಬಾ ಸುಂದರವಾಗಿವೆ, ಇವುಗಳನ್ನು ಕಿತ್ತರೆ ಏನಾಗುತ್ತದೆ?" ಅದಕ್ಕೆ ಆ ಸ್ಥಳೀಯ ನಗುತ್ತಾ ಉತ್ತರಿಸಿದ- “ನಿಮಗೆ ಏನೂ ಆಗುವುದಿಲ್ಲ. ಆದರೆ, ನೀವು ಆ ಗಿಡವನ್ನು ಕಿತ್ತರೆ, ಅದು ಭೂತಾನ್‌ನ ಸಂವಿಧಾನವನ್ನು ಉಲ್ಲಂಘಿಸಿದಂತೆ.

ನಮ್ಮ ದೇಶದ ಕಾನೂನಿನ ಪ್ರಕಾರ, ಗಿಡಮರಗಳು ನಮ್ಮೆಲ್ಲರ ಕುಟುಂಬದ ಸದಸ್ಯರಿದ್ದಂತೆ. ನೀವು ಅವುಗಳನ್ನು ಹಾಳು ಮಾಡಿದರೆ, ನೀವು ಕುಟುಂಬ ಸದಸ್ಯನಿಗೆ ನೋವುಂಟು ಮಾಡಿದಂತೆ". ಈ ಪ್ರಸಂಗವು ಭೂತಾನ್‌ನ ಪರಿಸರ ಸಂರಕ್ಷಣೆಯ ಬದ್ಧತೆ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಹಾಸ್ಯದ ಮೂಲಕ ಹೇಳುತ್ತದೆ.