Roopa Gururaj Column: ಸಮೃದ್ಧಿಯ ಸಾಕಾರಮೂರ್ತಿ ಶ್ರೀಲಕ್ಮೀಯ ಹದಿನೆಂಟು ಸದ್ಗುಣ ತತ್ವಗಳು
ಋಗ್ವೇದದ ಅತ್ಯಂತ ಪವಿತ್ರ ಭಾಗವಾದ ಶ್ರೀಸೂಕ್ತದಲ್ಲಿ ಲಕ್ಷ್ಮೀದೇವಿಯ ನಾಲ್ವರು ಪ್ರಮುಖ ಪುತ್ರರ ಅಥವಾ ಋಷಿಗಳ ಉಲ್ಲೇಖ ಬರುತ್ತದೆ: ‘ಆನಂದಃ ಕರ್ದಮಶ್ಬೈವ ಚಿಕ್ಲೀತ ಇತಿ ವಿಶ್ರುತಃ | ಋಷಯಃ ಶ್ರಿಯಃ ಪುತ್ರಾಶ್ಚ ಮಯಿ ಶ್ರೀರ್ದೇವಿ ದೇವತಾ’ ಈ ಮಂತ್ರದಲ್ಲಿ ಉಲ್ಲೇಖಿಸಲಾದ ಆನಂದ, ಕರ್ದಮ, ಚಿಕ್ಲೀತ ಮತ್ತು ಶ್ರೀದ ಕೇವಲ ಪೌರಾಣಿಕ ವ್ಯಕ್ತಿಗಳಲ್ಲ
-
ಒಂದೊಳ್ಳೆ ಮಾತು
ಮನುಷ್ಯನ ಬದುಕು ಸಾರ್ಥಕವಾಗಲು ಕೇವಲ ಭೌತಿಕ ಧನವಷ್ಟೇ ಸಾಲದು, ಅದರೊಂದಿಗೆ ಮಾನಸಿಕ ನೆಮ್ಮದಿ ಮತ್ತು ದೈವಿಕ ಸದ್ಗುಣಗಳ ಸಂಗಮವೂ ಇರಬೇಕು. ಭಾರತೀಯ ಸನಾತನ ಚಿಂತನೆಯಲ್ಲಿ ಮಹಾಲಕ್ಷ್ಮೀಯನ್ನು ಕೇವಲ ಸಂಪತ್ತಿನ ದೇವತೆಯನ್ನಾಗಿ ಮಾತ್ರ ಪರಿಗಣಿ0ಸಿಲ್ಲ. ಆಕೆಯನ್ನು ಸಮೃದ್ಧಿ, ಸೌಂದರ್ಯ, ಜ್ಞಾನ ಮತ್ತು ಸತ್ತ್ವಗುಣಗಳ ಸಾಕಾರ ಮೂರ್ತಿಯಾಗಿ ಆರಾಧಿಸಲಾಗಿದೆ. ಶಾಸ್ತ್ರಗಳು ಮತ್ತು ವೇದ ಪರಂಪರೆಯಲ್ಲಿ ಲಕ್ಷ್ಮೀ ದೇವಿಯ ಕೃಪೆಯನ್ನು ಪಡೆಯಲು ಆಕೆಯ ದಿವ್ಯ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ವಿವರಿಸಲಾಗಿದೆ.
ಋಗ್ವೇದದ ಅತ್ಯಂತ ಪವಿತ್ರ ಭಾಗವಾದ ಶ್ರೀಸೂಕ್ತದಲ್ಲಿ ಲಕ್ಷ್ಮೀದೇವಿಯ ನಾಲ್ವರು ಪ್ರಮುಖ ಪುತ್ರರ ಅಥವಾ ಋಷಿಗಳ ಉಲ್ಲೇಖ ಬರುತ್ತದೆ: ‘ಆನಂದಃ ಕರ್ದಮಶ್ಬೈವ ಚಿಕ್ಲೀತ ಇತಿ ವಿಶ್ರುತಃ | ಋಷಯಃ ಶ್ರಿಯಃ ಪುತ್ರಾಶ್ಚ ಮಯಿ ಶ್ರೀರ್ದೇವಿ ದೇವತಾ’ ಈ ಮಂತ್ರದಲ್ಲಿ ಉಲ್ಲೇಖಿಸಲಾದ ಆನಂದ, ಕರ್ದಮ, ಚಿಕ್ಲೀತ ಮತ್ತು ಶ್ರೀದ ಕೇವಲ ಪೌರಾಣಿಕ ವ್ಯಕ್ತಿಗಳಲ್ಲ. ಇವರು ಬದುಕಿನಲ್ಲಿ ಸಮೃದ್ಧಿ ಯನ್ನು ತರುವ ನಾಲ್ಕು ಮೂಲಭೂತ ಪ್ರೇರಕ ಶಕ್ತಿಗಳು. ‘ಕರ್ದಮ’ ಎಂದರೆ ಫಲವತ್ತಾದ ಮಣ್ಣು ಮತ್ತು ನಿರಂತರ ಪರಿಶ್ರಮ. ‘ಚಿಕ್ಲೀತ’ ಎಂದರೆ ಆರ್ದ್ರತೆ, ಪ್ರೀತಿ ಮತ್ತು ಪರಸ್ಪರ ಸಂಬಂಧಗಳಲ್ಲಿನ ತೇವಾಂಶ.
ಇದನ್ನೂ ಓದಿ: Roopa Gururaj Column: 250 ವರ್ಷಗಳ ಅವಿರತ ಭಕ್ತಿ ಪರಂಪರೆ: ಮಹೇಶ್ವರದ ಪಾರ್ಥಿವ ಲಿಂಗಾರ್ಚನೆ
‘ಆನಂದ’ ಎಂದರೆ ಆಂತರಿಕ ತೃಪ್ತಿ ಹಾಗೂ ‘ಶ್ರೀದ’ ಎಂದರೆ ಸಕಲ ಮಂಗಳವನ್ನು ಕರುಣಿಸುವ ಔದಾರ್ಯ. ಶ್ರಮ, ಸ್ನೇಹ ಮತ್ತು ತೃಪ್ತಿ ಇರುವಲ್ಲಿ ಮಾತ್ರ ಲಕ್ಷ್ಮೀ ಸ್ಥಿರವಾಗಿ ನೆಲೆಸುತ್ತಾಳೆ ಎಂಬುದು ಇದರ ಸಂದೇಶ. ನಮ್ಮ ವಿಳಾಸ ಕಾಲಕ್ರಮೇಣ ಆಗಮ ಶಾಸ್ತ್ರಗಳು ಮತ್ತು ಲಕ್ಷ್ಮೀ ಉಪಾಸನಾ ಕಲ್ಪಗಳಲ್ಲಿ ಈ ತತ್ವಗಳು ಹದಿನೆಂಟು ದಿವ್ಯ ಆಯಾಮಗಳಾಗಿ (ಲಕ್ಷ್ಮೀಯ ಪುತ್ರ ವರ್ಗ) ವಿಸ್ತಾರ ಗೊಂಡವು.
ಪ್ರತಿಯೊಂದು ಹೆಸರೂ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಆರ್ಥಿಕ ಸುಭಿಕ್ಷೆಗೆ ಬೇಕಾದ ಒಂದೊಂದು ಅಡಿಪಾಯವನ್ನು ಪ್ರತಿಬಿಂಬಿಸುತ್ತದೆ. ದೇವಸಖ (ದೈವಿಕ ಮೈತ್ರಿ), ಚಿಕ್ಲಿತ (ಸ್ನೇಹ ಪರತೆ), ಆನಂದ (ಸದಾ ಪ್ರಸನ್ನತೆ), ಕರ್ದಮ (ಸ್ಥಿರ ಪರಿಶ್ರಮ), ಶ್ರೀಪ್ರದ (ಉದಾರತೆ), ಜಾತವೇದ (ಜ್ಞಾನಾಗ್ನಿಯ ವಿವೇಕ), ಅನುರಾಗ (ಪ್ರೀತಿ-ಭಕ್ತಿ), ಸಂವಾದ ಮಾತುಗಾರಿಕೆ), (ಅರ್ಥಪೂರ್ಣ ವಿಜಯ (ಸತ್ಕಾರ್ಯದ ಜಯ), ವಲ್ಲಭ (ಗೌರವಯುತ ನಾಯಕತ್ವ), ಮದ (ಆತ್ಮವಿಶ್ವಾಸದ ಉಲ್ಲಾಸ), ಹರ್ಷ (ಸದಾ ನಗುಮುಖ), ಬಲ (ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ), ತೇಜಸ್ಸು (ಆಕರ್ಷಕ ಮುಖ ವರ್ಚಸ್ಸು), ದಮಕ (ಆತ್ಮನಿಯಂತ್ರಣ), ಸಲಿಲ (ಶುದ್ಧ ಹರಿವು), ಗುಲ್ಗುಲ (ಪಾವಿತ್ರ್ಯತೆ) ಹಾಗೂ ಕುರುಂತಕ (ಸೌಂದರ್ಯ ಪ್ರಜ್ಞೆ).
ವಿಷ್ಣು ಪುರಾಣ ಮತ್ತು ಭಾಗವತ ಪುರಾಣಗಳು ಮಹಾವಿಷ್ಣು ಮತ್ತು ಲಕ್ಷ್ಮೀಯ ಪುತ್ರನಾಗಿ ‘ಕಾಮ’ ಅಥವಾ ಪ್ರೇಮ ತತ್ವವನ್ನು ಗುರುತಿಸುತ್ತವೆ. ಅಂದರೆ, ಯಾವುದೇ ಸತ್ಕಾರ್ಯಕ್ಕೆ ಶುದ್ಧ ಇಚ್ಛಾ ಶಕ್ತಿಯೇ ಮೂಲ. ಅದೇ ರೀತಿ, ಈ ಹದಿನೆಂಟು ಹೆಸರುಗಳು ಯಾವುದೇ ಪುರಾಣದ ಪಾತ್ರಗಳಲ್ಲ; ಬದಲಿಗೆ ನಮ್ಮ ಜೀವನದಲ್ಲಿ ಸಂಪತ್ತನ್ನು ಸೃಷ್ಟಿ ಸಲು ಮತ್ತು ಉಳಿಸಿಕೊಳ್ಳಲು ಅಗತ್ಯವಿರುವ ನೈತಿಕ ಹಾಗೂ ಮಾನಸಿಕ ಶಕ್ತಿಗಳು.
ಮನುಷ್ಯನಲ್ಲಿ ಜ್ಞಾನ (ಜಾತವೇದ), ಒಳ್ಳೆಯ ಮಾತು (ಸಂವಾದ), ಇಂದ್ರಿಯ ನಿಗ್ರಹ (ದಮಕ), ಉತ್ಸಾಹ (ತೇಜಸ್ಸು) ಮತ್ತು ಪ್ರೀತಿ (ಅನುರಾಗ) ನೆಲೆಸಿದಾಗ ದಾರಿದ್ರ್ಯ ತಾನಾಗಿಯೇ ದೂರವಾಗು ತ್ತದೆ. ಪೂಜೆ ಎಂದರೆ ಕೇವಲ ಮಂತ್ರ ಪಠಣವಲ್ಲ, ಆ ಮಂತ್ರಗಳ ಹಿಂದಿರುವ ಸದ್ಗುಣಗಳನ್ನು ನಿತ್ಯಜೀವನದಲ್ಲಿ ಆಚರಣೆಗೆ ತರುವುದು. ಸಕಲ ಸದ್ಗುಣಗಳ ಸಮನ್ವಯವೇ ಸಾಕ್ಷಾತ್ ಮಹಾ ಲಕ್ಷ್ಮಿ.
ಅಂತಹ ಸದ್ಗುಣಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಶಾಶ್ವತ ವಾಗಿ ನೆಲೆಸುತ್ತವೆ. ಲಕ್ಷ್ಮೀಯ 18 ತತ್ತ್ವಗಳು ಕೇವಲ ಮಂತ್ರಗಳಾಗಿ ಉಳಿಯದೆ, ನಮ್ಮ ನಿತ್ಯದ ಆಲೋ ಚನೆ, ಮಾತು ಮತ್ತು ಕೃತಿಗಳಲ್ಲಿ ಅಳವಡಿಸಿ ಕೊಂಡಾಗ ನಿಜವಾದ ವ್ಯಕ್ತಿತ್ವ ವಿಕಸನವಾಗಿ, ಬದುಕಿನಲ್ಲಿ ನಿಜ ಅರ್ಥದಲ್ಲಿ ಮೌಲ್ಯವರ್ಧನೆಯಾಗುತ್ತದೆ.
ಬದುಕಿನಲ್ಲಿ ಕೇವಲ ಹಣ, ಅಂತಸ್ತು ಅಧಿಕಾರವನ್ನು ಬೆನ್ನಟ್ಟುವ ಬದಲು, ಈ ನೈತಿಕ ಹಾಗೂ ಮಾನಸಿಕ ಮೌಲ್ಯಗಳನ್ನು ನಮ್ಮ ನಡವಳಿಕೆಯಲ್ಲಿ ರೂಢಿಸಿ ಕೊಂಡಾಗ ನಮ್ಮ ವ್ಯಕ್ತಿತ್ವವೂ ಪ್ರಕಾಶಿಸುತ್ತದೆ, ಆರ್ಥಿಕ ಹಾಗೂ ಕೌಟುಂಬಿಕ ಸುಭಿಕ್ಷೆಯೂ ಜೀವನದಲ್ಲಿ ಸಹಜವಾಗಿಯೇ ನೆಲೆಸುತ್ತದೆ. ಶ್ರೀ ಲಕ್ಷ್ಮೀಯ ಕೃಪಾ ಕಟಾಕ್ಷ ಸಕಲರಿಗೂ ಸೌಭಾಗ್ಯ ತರಲಿ.