Naveen Sagar Column: ಗಾಂಧಿಯ ಬ್ರಹ್ಮಚರ್ಯ ಪ್ರಯೋಗ ಪ್ರಶ್ನಾತೀತವೇ ?
ಗಾಂಧಿಯ ಅಹಿಂಸೆ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬಂತೋ ಅಥವಾ ಗಾಂಧಿಯ ಮಂಚಿವಾಡು ಬುದ್ಧಿಯಿಂದ ಸ್ವಾತಂತ್ರ್ಯ ಬಂತೋ ಎಂಬ ಜಿಜ್ಞಾಸೆಯಲ್ಲಿ ಅವರು ಜೀವಂತ. ಭಾರತವನ್ನು ಹೋಳು ಮಾಡಿ ಪಾಕಿಸ್ತಾನವೆಂಬ ಮುಸ್ಲಿಂ ದೇಶವನ್ನಾಗಿಸಿ, ಮಿಕ್ಕ ಭಾರತವನ್ನು ಸೆಕ್ಯುಲರ್ ದೇಶವಾಗಿಸಿದ ಮಹಾತ್ಮ ಎಂದೆಂದಿಗೂ ನಮ್ಮ ಚರ್ಚೆಯಲ್ಲಿ ಜೀವಂತ.
-
ಪದಸಾಗರ
ಗಾಂಧಿ ಜಯಂತಿಗೆ ಇನ್ನೊಂದು ವಾರವೂ ಬಾಕಿ ಇಲ್ಲ. ಬದುಕಿದ್ದಿದ್ದರೆ ನೂರಾ ಐವತ್ತೇಳು ವರ್ಷ ಆಗಿರುತ್ತಿತ್ತು ಅಂದುಕೊಳ್ಳುತ್ತಿದ್ದೆ. ಹಾಗಾದರೆ ಗಾಂಧಿ ಬದುಕಿಲ್ಲವೇ? ಎಂಬ ಪ್ರಶ್ನೆ ಕೂಡ ಹಾದು ಹೋಯ್ತು. ನೋಟಿನಿಂದ ವೋಟಿನ ತನಕ ಗಾಂಧಿ ಇಂದಿಗೂ ಜೀವಂತ. ಗುಂಡಿನೇಟಿನಿಂದ ಗುಂಡುನಿಷೇಧದ ತನಕ ಗಾಂಧಿ ಇನ್ನೂ ಜೀವಂತ. ಗಾಂಧಿ ನಿಜವಾಗ್ಲೂ ನಾವೆಲ್ಲ ಅಂದು ಕೊಂಡಷ್ಟು ಗಾಂಧಿಯೋ ಅಥವಾ ಅವರನ್ನು ಪಠ್ಯಗಳಲ್ಲಿ, ಭಾಷಣಗಳಲ್ಲಿ ಗಾಂಧಿಯನ್ನಾಗಿಸ ಲಾಯಿತೋ ಎಂಬ ಚರ್ಚೆಯ ತನಕ ಅವರು ಜೀವಂತ.
ಗಾಂಧಿಯ ಅಹಿಂಸೆ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬಂತೋ ಅಥವಾ ಗಾಂಧಿಯ ಮಂಚಿವಾಡು ಬುದ್ಧಿಯಿಂದ ಸ್ವಾತಂತ್ರ್ಯ ಬಂತೋ ಎಂಬ ಜಿಜ್ಞಾಸೆಯಲ್ಲಿ ಅವರು ಜೀವಂತ. ಭಾರತವನ್ನು ಹೋಳು ಮಾಡಿ ಪಾಕಿಸ್ತಾನವೆಂಬ ಮುಸ್ಲಿಂ ದೇಶವನ್ನಾಗಿಸಿ, ಮಿಕ್ಕ ಭಾರತವನ್ನು ಸೆಕ್ಯುಲರ್ ದೇಶವಾಗಿಸಿದ ಮಹಾತ್ಮ ಎಂದೆಂದಿಗೂ ನಮ್ಮ ಚರ್ಚೆಯಲ್ಲಿ ಜೀವಂತ.
ಗಾಂಧಿಯ ‘ಮೈ ಎಕ್ಸ್ʼಪೆರಿಮೆಂಟ್ಸ್ ವಿತ್ ಟ್ರೂಥ್’ ಎಂಬ ಪುಸ್ತಕದಲ್ಲಿ ಟ್ರೂಥ್ ಎಂಬುದು ಎಷ್ಟಿತ್ತೋ ಗೊತ್ತಿಲ್ಲ. ‘ಚಿಕ್ಕವನಿದ್ದಾಗ ಏನೋ ಸುಳ್ಳು ಹೇಳಿ ಸಿಕ್ಕಿಕೊಂಡಿದ್ದೆ. ಆಗ ಅಪ್ಪ ಬಯ್ಯಲಿಲ್ಲ. ತುಂಬ ಹೊದ್ದುಕೊಂಡು ಮಲಗಿಬಿಟ್ಟರು. ಅವತ್ತಿಂದ ಸುಳ್ಳು ಹೇಳಲಿಲ್ಲ’ ಎಂಬ ಗಾಂಧಿ ಮಾತನ್ನು ನಾವೆಲ್ಲ ನಂಬಿದ್ದೆವು. ಗಾಂಧಿ ಅಂದಿನಿಂದ ಸುಳ್ಳೇ ಹೇಳಲಿಲ್ಲವೇ? ಬಲ್ಲವರಾರು? ಗಾಂಧಿಯ ಬದುಕು ವಿರೋಧಾಭಾಸಗಳ ಮಿಶ್ರಣ, ವಿವಾದಗಳ ಗೋದಾಮು. ಆದರೆ ಇತಿಹಾಸ ಕಾರರು ಮಹಾತ್ಮನನ್ನಾಗಿಸಿ, ಹುತಾತ್ಮರನ್ನಾಗಿಸಿ ಅವರನ್ನು ಪ್ರಶ್ನಾತೀತರನ್ನಾಗಿಸಿದರು.
ಇದನ್ನೂ ಓದಿ: Naveen Sagar Column: ಇಲ್ಲಿ ವಿಶ್ವಸುಂದರಿಗಿರುವ ಅದೃಷ್ಟ ಮಿ.ಯೂನಿವರ್ಸ್ʼಗಿಲ್ಲ !
ಗಾಂಧಿ ಎಂಬ ಚರ್ಚಾಸ್ಪದ ವ್ಯಕ್ತಿತ್ವದ ಬಗ್ಗೆ ಇತ್ತೀಚೆಗೊಂದು ವಿಡಿಯೋ ನೋಡಿದೆ. ಅದರಲ್ಲಿ ನಿರ್ಮಲ್ ಕುಮಾರ್ ಬೋಸ್ ಬರೆದ (ನಿಷೇಧಿತ ಅಥವಾ ವಿವಾದಿತ?) ಪುಸ್ತಕ ‘ಮೈ ಡೇಸ್ ವಿಥ್ ಗಾಂಧಿ’ಯಲ್ಲಿರುವ ಕೆಲವು ಪುಟಗಳ ಬಗ್ಗೆ ವಿವರಣೆ ಇತ್ತು. ಬ್ರಹ್ಮಚರ್ಯದೊಂದಿಗಿನ ಗಾಂಧಿ ಯವರ ಪ್ರಯೋಗಗಳ ಬಗೆಗಿನ ಆ ವಿಡಿಯೋ ನಿಜಕ್ಕೂ ಕುತೂಹಲ ಕೆರಳಿಸುವಂತಿತ್ತು.
ಹೌದು.. ಇತಿಹಾಸದಲ್ಲಿ ಕೆಲವು ವ್ಯಕ್ತಿಗಳಿರುತ್ತಾರೆ. ಅವರನ್ನು ನಾವು ಕೇವಲ ವ್ಯಕ್ತಿಗಳಾಗಿ ನೋಡುವುದಿಲ್ಲ; ಯುಗಪುರುಷರಂತೆ ನೋಡುತ್ತೇವೆ. ಗಾಂಧಿಯೂ ಅಂಥವರಬ್ಬರು. ಸ್ವಾತಂತ್ರ್ಯ ಹೋರಾಟ, ಅಹಿಂಸೆ, ಸತ್ಯಾಗ್ರಹ, ಸರಳತೆ, ಸ್ವಾವಲಂಬನೆ, ನೈತಿಕತೆ- ಇವೆಲ್ಲವನ್ನೂ ನೆನಪಿಸಿದಾಗ ಗಾಂಧಿಯ ಮುಖ ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಇತಿಹಾಸದ ದೊಡ್ಡ ವ್ಯಕ್ತಿಗಳ ಬದುಕು ಅಷ್ಟು ಸಿಂಪಗಿ ಇರೋದಿಲ್ಲ ಎಂಬುದಕ್ಕೆ ಎನ್.ಕೆ ಬೋಸ್ ಅವರ ಪುಸ್ತಕದ ಆ ಪುಟಗಳು ಸಾಕ್ಷಿ. ಹಾಗಂತ ಎನ್. ಕೆ ಬೋಸ್ ಅವರ ಪುಸ್ತಕದ ಉದ್ದೇಶ ಗಾಂಧಿಯ ಮಾನಹಾನಿ ಮಾಡುವುದಾಗಲೀ, ಅವರ ಸಾಧನೆ ಮತ್ತು ಕೊಡುಗೆಗಳನ್ನು ಅಳಿಸುವುದಾಗಲೀ ಅಲ್ಲ.
ಅವರ ಇನ್ನೊಂದು ಮುಖವನ್ನು ಪರಿಚಯಿಸುವ ಪ್ರಯತ್ನ. ಪ್ರತ್ಯಕ್ಷವಾಗಿ ಕಂಡದ್ದನ್ನು ದಾಖಲಿ ಸುವ ಪ್ರಾಮಾಣಿಕ ಕೆಲಸ. ಎನ್. ಕೆ ಬೋಸ್ ಅಲ್ಲದೆ ಇನ್ಯಾರೂ ಅದನ್ನು ಬರೆಯಲು ಸಾಧ್ಯವಿರ ಲಿಲ್ಲ. ಏಕೆಂದರೆ ಅವರು ಗಾಂಧಿಯನ್ನು ಹತ್ತಿರದಿಂದ ಕಂಡಿದ್ದ ಆಪ್ತ ಕಾರ್ಯದರ್ಶಿ. ಗಾಂಧಿಯ ಜೀವನದ ಅಂತಿಮ ವರ್ಷಗಳಲ್ಲಿ ನಡೆದ ‘ಬ್ರಹ್ಮಚರ್ಯ ಪ್ರಯೋಗಗಳು’ ಅಂಥ ಒಂದು ಸಂಕೀರ್ಣ ಅಧ್ಯಾಯ ಎನ್ನುತ್ತದೆ ಈ ಪುಸ್ತಕ. ಬ್ರಹ್ಮಚರ್ಯದ ಪ್ರಯೋಗ ಹೇಗಿರುತ್ತದೆ? ಯೋಗ, ಧ್ಯಾನ, ತಪಸ್ಸು ಇಂಥವುಗಳಿಂದ ಕೂಡಿರುತ್ತದೆ. ಆದರೆ ಗಾಂಧಿಯ ಬ್ರಹ್ಮಚರ್ಯ ಪ್ರಯೋಗ ಹೇಗಿತ್ತು? 1940ರ ದಶಕದಲ್ಲಿ ಗಾಂಧಿ ತಮ್ಮ ಬ್ರಹ್ಮಚರ್ಯವನ್ನು ಪರೀಕ್ಷಿಸಿದ್ದು ಕೆಲವು ಮಹಿಳೆಯರೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗುವ ಮೂಲಕ.
ಕೆಲವು ದಾಖಲೆಗಳ ಪ್ರಕಾರ, ಸುಮಾರು ಸಂದರ್ಭಗಳಲ್ಲಿ ಗಾಂಧಿ ಬಟ್ಟೆಯಿಲ್ಲದೆ ಮಲಗುತ್ತಿದ್ದರು. ಹಾಗಂತ ಗಾಂಧಿ ತಾವು ಜತೆಗೆ ಮಲಗುತ್ತಿದ್ದ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರೇ? ಉಹುಂ. ಅದಕ್ಕೆ ದೃಢವಾದ ಪುರಾವೆ ಇಲ್ಲ. ಅವರ ಉದ್ದೇಶ ಲೈಂಗಿಕತೆಯನ್ನು ಅನುಭವಿಸುವುದಲ್ಲ, ಬದಲಾಗಿ ತಮ್ಮೊಳಗಿನ ಲೈಂಗಿಕ ಆಸೆ ಸಂಪೂರ್ಣವಾಗಿ ನಾಶವಾಗಿದೆಯೇ ಎಂಬುದನ್ನು ಪರೀಕ್ಷಿಸುವುದೆಂದು ಅವರು ಹೇಳಿಕೊಂಡಿದ್ದರು.
ಹಾಗೆಂದ ಮಾತ್ರಕ್ಕೆ ಈ ಪ್ರಯೋಗ ವನ್ನು ಒಪ್ಪಿಕೊಳ್ಳಬಹುದೇ? ಈಚಲ ಮರದ ಕೆಳಗೆ ಕೂತು ನಾನು ಕುಡಿದದ್ದು ಎಳನೀರು ಅಂದರೆ ನಂಬುತ್ತಾರೆಯೇ? ವೇಶ್ಯೆಯ ಮನೆಗೆ ಹೋಗಿ ಭಜನೆ ಮಾಡಿಬಂದೆ ಅಂದರೆ ನಂಬುತ್ತಾರೆಯೇ? ಸುಮ್ಮನೆ ಮಲಗಿದ್ದೇ ಆದರೂ ಆ ಮಹಿಳೆಯರ ಬದುಕು ಭವಿಷ್ಯ ಚಾರಿತ್ರ್ಯ ಏನಾಗಿದ್ದಿರಬಹುದು? ಒಬ್ಬ ಮಹಾನ್ ನಾಯಕ ತನ್ನ ಬ್ರಹ್ಮಚರ್ಯ ಪ್ರಯೋಗ ಕ್ಕಾಗಿ ತನ್ನ ಮೇಲೆ ಅವಲಂಬಿತರಾಗಿದ್ದ ಯುವತಿಯರನ್ನು ಇಂಥ ಪರೀಕ್ಷೆಗೆ ಒಳಪಡಿಸುವುದು ನೈತಿಕವಾಗಿ ಸರಿಯೇ? 1906ರಲ್ಲಿ ಗಾಂಧಿ ಬ್ರಹ್ಮಚರ್ಯದ ಪ್ರತಿಜ್ಞೆ ಕೈಗೊಂಡಾಗ ಆಗ ಅವರಿಗೆ 37 ವರ್ಷ.
ಕಸ್ತೂರ್ಬಾ ಅವರೊಂದಿಗೆ ವಿವಾಹವಾಗಿ ಹಲವು ವರ್ಷಗಳಾಗಿದ್ದವು. ಮಕ್ಕಳೂ ಇದ್ದರು. ಆದರೂ ತಮ್ಮ ಮುಂದಿನ ಜೀವನವನ್ನು ಸಂಪೂರ್ಣವಾಗಿ ಬ್ರಹ್ಮಚರ್ಯ ಪ್ರಯೋಗಕ್ಕೆ ಒಡ್ಡಿಕೊಳ್ಳಲು ನಿರ್ಧರಿಸುತ್ತಾರೆ ಗಾಂಧಿ. ಗಾಂಧಿಯ ಪ್ರಕಾರ ಬ್ರಹ್ಮಚರ್ಯ ಎಂದರೆ ಕೇವಲ ದೈಹಿಕ ಸಂಬಂಧ ದಿಂದ ದೂರವಿರುವುದಲ್ಲ. ಮನಸ್ಸು, ಮಾತು, ಆಲೋಚನೆ ಮತ್ತು ಕ್ರಿಯೆ- ಎಲ್ಲದರ ಮೇಲೂ ಸಂಪೂರ್ಣ ನಿಯಂತ್ರಣ ಸಾಧಿಸುವುದು. ಅವರ ದೃಷ್ಟಿಯಲ್ಲಿ ಇದು ರಾಜಕೀಯ ಹೋರಾಟಕ್ಕೂ ಸಂಬಂಧಿಸಿದ ವಿಷಯವಾಗಿತ್ತು.
ಆತ್ಮಸಂಯಮವಿಲ್ಲದೆ ಸತ್ಯಾಗ್ರಹಿಗೆ ನೈತಿಕ ಶಕ್ತಿ ಸಿಗುವುದಿಲ್ಲ ಎಂದು ಅವರು ನಂಬಿದ್ದರೆಂದು ಎನ್. ಕೆ ಬೋಸ್ ಬರೆಯುತ್ತಾರೆ. 1944ರಲ್ಲಿ ಕಸ್ತೂರ್ಬಾ ನಿಧನರಾದರು. ಅದಾದ ಬಳಿಕ ಗಾಂಧೀಜಿ ಯವರ ಆಂತರಿಕ ಆತ್ಮಪರಿಶೀಲನೆ ಇನ್ನಷ್ಟು ತೀವ್ರವಾಯಿತು. ಇದೇ ಸಮಯದಲ್ಲಿ ದೇಶವೂ ಭೀಕರ ಕೋಮು ಹಿಂಸೆಯಿಂದ ಕಂಗೆಟ್ಟಿತ್ತು. ನೋವಾಖಾಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಗಳು ನಡೆಯುತ್ತಿದ್ದವು. ಗಾಂಧೀಜಿಯ ಅಹಿಂಸೆಯ ಮೇಲಿನ ನಂಬಿಕೆ ಯೇ ಪರೀಕ್ಷೆಗೆ ಒಳಗಾಗಿತ್ತು. ಆಗ ಗಾಂಧಿ ತಮ್ಮೊಳಗೇ ಒಂದು ಪ್ರಶ್ನೆ ಕೇಳಿಕೊ ಳ್ಳುತ್ತಾರೆ; ‘ನಾನು ಅಹಿಂಸೆಯನ್ನು ಬೋಧಿಸುತ್ತಿದ್ದೇನೆ.
ಆದರೆ ನನಗೆ ಅರ್ಹತೆ ಇದೆಯೇ?’ ಈ ಆತ್ಮಪರೀಕ್ಷೆಯ ಭಾಗವಾಗಿಯೇ ಅವರು ಕೆಲವು ಮಹಿಳೆ ಯರೊಂದಿಗೆ ಮಲಗುವ ಪ್ರಯೋಗಗಳನ್ನು ಪ್ರಾರಂಭಿಸಿದರು. ಇವರಲ್ಲಿ ಪ್ರಮುಖವಾಗಿ ಉಲ್ಲೇಖ ವಾಗುವವರು ಮನು ಗಾಂಧಿ ಮತ್ತು ಆಭಾ ಗಾಂಧಿ. ಮನು ಆಗ ಕೇವಲ ಹದಿಹರೆಯದ ಕೊನೆಯ ಹಂತದಲ್ಲಿದ್ದ ಯುವತಿ. ಆಭಾ ಕೂಡ ಯುವತಿಯೇ.
ಡಾ. ಸುಶೀಲಾ ನಯ್ಯರ್ ಸೇರಿದಂತೆ ಇನ್ನೂ ಕೆಲವು ಮಹಿಳೆಯರು ಗಾಂಧೀಜಿಯವರ ಪ್ರಯೋಗ ಗಳೊಂದಿಗೆ ಸಂಬಂಧ ಹೊಂದಿದ್ದರು. ಗಾಂಧೀಜಿಯವರ ದೃಷ್ಟಿಯಲ್ಲಿ ಇದು ‘ಪಾವಿತ್ರ್ಯದ ಪರೀಕ್ಷೆ’. ತಮ್ಮೊಳಗೆ ಯಾವುದೇ ಕಾಮವಾಸನೆ ಉಳಿದಿಲ್ಲವೆಂಬುದನ್ನು ಸಾಬೀತುಪಡಿಸುವ ಆಧ್ಯಾತ್ಮಿಕ ಪ್ರಯೋಗ. ಗಾಂಧಿ ಈ ಪ್ರಯೋಗದ ಬಗ್ಗೆ ಎಷ್ಟು ಹಟಮಾರಿಯಾಗಿದ್ದರು ಅಂದರೆ ಇದಕ್ಕಾಗಿಯೇ ಆತ್ಮೀಯರ ಅಸಮಾಧಾನಕ್ಕೆ ಗುರಿಯಾಗಿದ್ದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಕೆಲವು ಹಿರಿಯ ನಾಯಕರು ಕೂಡ ಗಾಂಧೀಜಿ ಯವರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಗಾಂಧಿ ಇದನ್ನು ಕೈ ಬಿಡುವ ಯೋಚನೆಯನ್ನೇ ಹೊಂದಿರಲಿಲ್ಲ. ಗಾಂಧಿ ಈ ಪ್ರಯೋಗವನ್ನು ಗುಟ್ಟಾಗಿ, ಕಳ್ಳತನದಂತೆ ನಡೆಸಲು ಪ್ರಯತ್ನಿಸಲಿಲ್ಲ. ಅವರು ತಮ್ಮ ಪ್ರಯೋಗಗಳ ಬಗ್ಗೆ ಬರೆಯುತ್ತಿದ್ದರು. ಅವುಗಳ ಬಗ್ಗೆ ಚರ್ಚಿಸು ತ್ತಿದ್ದರು. ತಮ್ಮ ದೃಷ್ಟಿಯಲ್ಲಿ ತಾವು ಮಾಡುತ್ತಿರುವುದು ತಪ್ಪಲ್ಲವೆಂದು ಅವರು ಪ್ರಾಮಾಣಿಕವಾಗಿ ನಂಬಿದ್ದರು.
ಗಾಂಧೀಜಿಯವರ ದೃಷ್ಟಿಯಲ್ಲಿ ಇದು ದೇಹದ ಪ್ರಯೋಗವಲ್ಲ; ಆತ್ಮದ ಪ್ರಯೋಗ. ಆದರೆ ಜಗತ್ತು ಅದನ್ನು ಹೇಗೆ ತಾನೇ ಒಪ್ಪಲು ಸಾಧ್ಯ? ಹಾಗೆಯೇ ಗಾಂಧಿಯ ಈ ಒಂದು ಅಧ್ಯಾಯವನ್ನು ಹಿಡಿದು ಅವರ ಸಂಪೂರ್ಣ ಜೀವನವನ್ನೇ ತಳ್ಳಿ ಹಾಕುವುದೂ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಮಾರ್ಗವಲ್ಲ. ಗಾಂಧೀಜಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಕೊಡುಗೆ ಅಪಾರ. ಅಹಿಂಸೆಯನ್ನು ಜಾಗತಿಕ ರಾಜಕೀಯದ ಪ್ರಬಲ ನೈತಿಕ ಆಯುಧವನ್ನಾಗಿ ಮಾಡಿದ ಅವರ ಪಾತ್ರವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
ಅದೇ ಸಮಯದಲ್ಲಿ ಅವರ ವೈಯಕ್ತಿಕ ಜೀವನದ ವಿವಾದಾತ್ಮಕ ನಿರ್ಧಾರಗಳನ್ನು ಪ್ರಶ್ನಿಸುವ ಹಕ್ಕನ್ನೂ ನಾವು ಕಳೆದುಕೊಳ್ಳಬಾರದು. ನಮ್ಮ ಸಂಸ್ಕೃತಿಯಲ್ಲಿ ದೇವರನ್ನೇ ಪ್ರಶ್ನಿಸುವ ಪರಂಪರೆ ಇದೆ. ರಾಮನ ನಿರ್ಧಾರಗಳನ್ನು ಪ್ರಶ್ನಿಸುವವರಿದ್ದಾರೆ. ಮಹಾಭಾರತದ ಪಾತ್ರಗಳನ್ನು ಪ್ರಶ್ನಿಸು ತ್ತೇವೆ. ನಮ್ಮ ಪುರಾಣಗಳ ನಾಯಕರನ್ನೂ ನೈತಿಕ ದೃಷ್ಟಿಯಿಂದ ವಿಶ್ಲೇಷಿಸುತ್ತೇವೆ. ಹಾಗಿದ್ದರೆ ಗಾಂಧೀಜಿ ಮಾತ್ರ ಪ್ರಶ್ನಾತೀತರಾಗ ಬೇಕೇ? ಇಲ್ಲ.
ಗೌರವ ಮತ್ತು ಆರಾಧನೆ ಎರಡೂ ಒಂದೇ ಅಲ್ಲ. ಒಬ್ಬ ವ್ಯಕ್ತಿಯ ಕೊಡುಗೆಯನ್ನು ಗೌರವಿಸುತ್ತಲೇ ಅವರ ತಪ್ಪುಗಳನ್ನು ಪ್ರಶ್ನಿಸಬಹುದು. ಒಬ್ಬರ ಮಹತ್ವವನ್ನು ಒಪ್ಪಿಕೊಂಡೇ ಅವರ ನಿರ್ಧಾರಗಳ ನೈತಿಕತೆ ಯನ್ನು ಚರ್ಚಿಸಬಹುದು. ವಾಸ್ತವವಾಗಿ ಮಹಾನ್ ವ್ಯಕ್ತಿಯನ್ನು ನಿಜವಾಗಿ ಗೌರವಿಸುವ ಒಂದು ಮಾರ್ಗವೇ ಇದು. ಅವರನ್ನು ಮೂರ್ತಿಯನ್ನಾಗಿ ಮಾಡಿ ಮುಟ್ಟಲೂ ಹೆದರಬಾರದು. ಮನುಷ್ಯನನ್ನಾಗಿ ನೋಡಿ ಅರ್ಥಮಾಡಿಕೊಳ್ಳಬೇಕು.
ಗಾಂಧೀಜಿ ತಮ್ಮ ಜೀವನವನ್ನೇ ‘ಸತ್ಯದ ಪ್ರಯೋಗ’ ಎಂದು ಕರೆದಿದ್ದರು. ಅಂದ ಮೇಲೆ ಅವರ ಜೀವನದ ಈ ಅಧ್ಯಾಯವೂ ಒಂದು ಪ್ರಯೋಗವೇ. ಆದರೆ ಅದನ್ನು ನಾವು ಯಾವ ಕಣ್ಣಿನಿಂದ ನೋಡಬೇಕು ಎಂಬುದು ಮುಖ್ಯ ಗಾಂಧಿ ಇಂದಿನ ಕಾಲಘಟ್ಟದಲ್ಲಿ ಇದ್ದಿದ್ದರೆ ಈ ಪ್ರಯೋಗಕ್ಕೆ ಅವಕಾಶ ಸಿಗುತ್ತಿತ್ತೇ? ಇದು ಸ್ಫೋಟಕ ಸುದ್ದಿಯಾಗಿ ಹೊರ ಬಂದಮೇಲೆ ಗಾಂಧಿಯ ಇಮೇಜ್ ಮಹಾತ್ಮನ ಇಮೇಜಾಗಿ ಉಳಿಯುತ್ತಿತ್ತೇ? ಗಾಂಧಿ ಇಂದಿನ ಕಾಲಘಟ್ಟದಲ್ಲಿ ಅದನ್ನು ಸಮರ್ಥಿಸಿ ಕೊಳ್ಳಲು ಸಾಧ್ಯವಿತ್ತೇ? ಅಸಲಿಗೆ ಅಂಥ ಪ್ರಯೋಗದ ಅಗತ್ಯವಿತ್ತೇ? ಸ್ತ್ರೀವಾದದ ಗಾಂಧಿಗೆ ಬ್ರಹ್ಮಚರ್ಯ ಪರೀಕ್ಷೆಗೆ ಬೇರೆ ಮಾರ್ಗವೇ ಇರಲಿಲ್ಲವೇ? ವೃದ್ಧಾಪ್ಯದಲ್ಲಿ ಬ್ರಹ್ಮಚರ್ಯ ಗೆದ್ದು ಆಗಬೇಕಾಗಿದ್ದಾದರೂ ಏನು? ಇಂಥ ಹಲವು ಪ್ರಶ್ನೆಗಳ ಮಧ್ಯೆ ಆ ಮಹಿಳೆಯರ ಮುಂದಿನ ಬದುಕಿನ ಬಗ್ಗೆ ಯೋಚಿಸಿ ಬೇಸರವಾಗುತ್ತದೆ. ಏನೇ ಇರಲಿ ಇಂಥ ಬದುಕಿನಲ್ಲಿ ಪುಟಗಳನ್ನು ಹೊಂದಿಯೂ ಮಹಾತ್ಮರೆನಿಸಿಕೊಳ್ಳುವುದು ಸುಲಭದ ಮಾತಲ್ಲ. ಅದು ಮಹಾತ್ಮರಿಗೆ ಮಾತ್ರವೇ ಸಾಧ್ಯ.