Shashidhara Halady Column: ಒಂದೇ ಓಟೆಯಿಂದ ಹಲವು ಮೊಳಕೆಗಳು ಸಾಧ್ಯವೇ?
ಪ್ರತಿವರ್ಷ ಮಳೆಗಾಲ ಬಂದಾಕ್ಷಣ ನಮ್ಮ ಹಳ್ಳಿಯಲ್ಲಿ ತೆರೆದುಕೊಳ್ಳುತ್ತಿದ್ದ ಒಂದು ಪ್ರಪಂಚ ವಿದೆ; ನಿಜ, ‘ಪ್ರಪಂಚ’! ಮಳೆ ಬಿದ್ದು ಒಂದು ತಿಂಗಳಲ್ಲಿ ಬದಲಾಗುವ ನಮ್ಮೂರಿನ ಪರಿಸರವು ಬೇರೆಯದೇ ಲೋಕವನ್ನು ನೆನಪಿಸಬಲ್ಲದು. ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವು ಕಾಲವಾದರೂ ವಾಸಿಸಿದ್ದವರಿಗೆ ಗೊತ್ತು, ಅಲ್ಲಿ ಹೇಗೆ ಧಬಧಬ ಮಳೆ ಸುರಿಯುತ್ತದೆ ಎಂದು
-
ಶಶಾಂಕಣ
ಅದೇಕೋ, ಈ ವರ್ಷ ಮಳೆಗಾಲ ವಿಳಂಬವಾಗಿದೆ; ಒಟ್ಟಾರೆ, ಮಳೆಯ ಪ್ರಮಾಣ ಕಡಿಮೆ ಎಂಬ ಮುನ್ಸೂಚನೆ ದೊರಕಿದೆ. ‘ಎಲ್ ನಿನೋ’ ಪ್ರಭಾವದಿಂದಾಗಿ, ಜಗತ್ತಿನಲ್ಲೇ ಈ ವರ್ಷ ಮಳೆ ಕಡಿಮೆ ಎನ್ನುತ್ತಿದ್ದಾರೆ; ಹಾಗಿದ್ದ ಮೇಲೆ ನಮ್ಮದೇನು ಮಹಾ ಎನ್ನಬಹುದು. ಆದರೆ, ಮಳೆ ಕಡಿಮೆಯಾದರೆ ಬದುಕೇ ಬಿಕ್ಕಟ್ಟಿನಲ್ಲಿ ಸಿಕ್ಕಿಬೀಳುತ್ತದೆ! ಮಳೆ ಕಡಿಮೆ ಎಂಬ ಮುನ್ಸೂಚನೆ ದೊರಕಿದ ಕೂಡಲೇ, ‘ಈ ವರ್ಷ ನೇರಳೆ ಹಣ್ಣು ಜಾಸ್ತಿಯಾಗಿದೆ, ಆದ್ದರಿಂದ, ಅಂತಹ ವರ್ಷ ಮಳೆ ಕಡಿಮೆ ಎಂಬ ನಂಬಿಕೆಯಿದೆ’ ಎಂದು ಕೆಲವರು ಹೇಳುತ್ತಿದ್ದಾರೆ. ಈಗ ಅರವತ್ತು ವರ್ಷಗಳ ಹಿಂದೆ, ಅಂದರೆ ಹಿಂದಿನ ಆವರ್ತದ ಪರಾಭವ ಸಂವತ್ಸರದಲ್ಲೂ (1967) ಮಳೆ ಕಡಿಮೆಯಾಗಿತ್ತಂತೆ! ಅದೇನೇ ಇರಲಿ, ಈ ವರ್ಷ ಸಾಕಷ್ಟು ಮಳೆಯಾಗಲಿ, ಹವಾಮಾನ ಮುನ್ಸೂಚನೆ ಇದೊಂದು ವಿಚಾರದಲ್ಲಿ ಸುಳ್ಳಾಗಲಿ ಎಂದೇ ಹಾರೈಸೋಣ.
ಪ್ರತಿವರ್ಷ ಮಳೆಗಾಲ ಬಂದಾಕ್ಷಣ ನಮ್ಮ ಹಳ್ಳಿಯಲ್ಲಿ ತೆರೆದುಕೊಳ್ಳುತ್ತಿದ್ದ ಒಂದು ಪ್ರಪಂಚವಿದೆ; ನಿಜ, ‘ಪ್ರಪಂಚ’! ಮಳೆ ಬಿದ್ದು ಒಂದು ತಿಂಗಳಲ್ಲಿ ಬದಲಾಗುವ ನಮ್ಮೂರಿನ ಪರಿಸರವು ಬೇರೆಯದೇ ಲೋಕವನ್ನು ನೆನಪಿಸಬಲ್ಲದು. ಮಲೆನಾಡು ಮತ್ತು ಕರಾವಳಿ ಯಲ್ಲಿ ಕೆಲವು ಕಾಲವಾದರೂ ವಾಸಿಸಿದ್ದವರಿಗೆ ಗೊತ್ತು, ಅಲ್ಲಿ ಹೇಗೆ ಧಬಧಬ ಮಳೆ ಸುರಿಯುತ್ತದೆ ಎಂದು. ಕೆಲವು ವರ್ಷ, ಜೂನ್ ಮೊದಲ ವಾರ ಆರಂಭವಾದ ಮಳೆಯು, ಪ್ರತಿ ದಿನವೆಂಬಂತೆ ಸುರಿದು, ಒಂದು ತಿಂಗಳ ನಂತರವೇ ಸಣ್ಣ ಬಿಡುವು ನೀಡುವುದು; ಕೆಲವು ದಿನಗಳ ವಿರಾಮದ ಬಳಿಕ, ಮತ್ತೆ ಮಳೆ. ಹೀಗೆ ಪ್ರತಿದಿನವೆಂಬಂತೆ ಸುರಿಯುವ ಮಳೆಯು, ಇಡೀ ಇಳೆಯನ್ನು, ಸಕಲ ಜೀವರಾಶಿಯನ್ನು ಬಡಿದೆಬ್ಬಿಸುತ್ತದೆ. ಒಂದೆರಡು ವಾರಗಳ ಕಾಲ, ಪ್ರತಿದಿನ ಮಳೆ ಸುರಿದೊಡನೆ, ಸುತ್ತಲಿನ ಪರಿಸರವೇ ಹೊಸ ಬಣ್ಣವನ್ನು ತಳೆಯುತ್ತದೆ, ಹೊಸ ಆಕಾರವನ್ನು ತಳೆಯುತ್ತದೆ, ಹೊಸ ಸದ್ದುಗಳೊಂದಿಗೆ ಅನುರಣ ನಿಸುತ್ತದೆ. ಇಲ್ಲಿ ಹೊಸ ಬಣ್ಣ, ಹೊಸ ಆಕಾರ ಎಂದಾಕ್ಷಣ, ಮೊದಲಿಗೆ ಕಣ್ಣಮುಂದೆ ಬರುವುದು, ಎಲ್ಲಾಾ ಗಿಡಮರಗಳು ಚಿಗುರಿ, ಹಸಿರಾಗುವ ಪರಿ; ಜತೆಗೆ, ಗದ್ದೆ, ನೆಲ, ಅಂಗಳ ಮೊದಲಾದ ಕಡೆಯೆಲ್ಲವೂ ಮೊಳೆಯುವ ಹಸಿರು ಹುಲ್ಲು. ಅದರ ಜತೆಯಲ್ಲೇ, ಇನ್ನಷ್ಟು ಚೋದ್ಯ ಮತ್ತು ಸೂಕ್ಷ್ಮ ಎನಿಸುವ ದೃಶ್ಯಗಳನ್ನೂ ಮಳೆಯು ಹುಟ್ಟು ಹಾಕುತ್ತದೆ!
ಇದನ್ನೂ ಓದಿ: Shashidhara Halady Column: ಆ ಕಾಲದ ಚಾರಣ ಹೀಗೂ ಇರುತ್ತಿತ್ತು !
ನಮ್ಮ ಹಳ್ಳಿ ಮನೆಯಲ್ಲಿ, ಈ ರೀತಿ ಬಣ್ಣದಿಂದ ಕಂಗೊಳಿಸುವ ಒಂದು ವಿಶಿಷ್ಟ ವಿದ್ಯಮಾನ ವಿದೆ. ಮನೆಯೆದುರು ಪುಟ್ಟ ಅಂಗಳ; ಬೇರೆ ಋತುಗಳಲ್ಲಿ ಅದು ಮಕ್ಕಳ ಆಟದ ಅಂಗಳವೂ ಹೌದು, ಧಾನ್ಯಗಳನ್ನು ಹಸನುಮಾಡುವ ಕಣವೂ ಹೌದು. ಜಡಿಮಳೆಯಿಂದ, ಅಂಗಳದ ಮೇಲ್ಮೈಯನ್ನು ರಕ್ಷಿಸಲೆಂದು, ಮಳೆಗಾಲ ಆರಂಭವಾಗುವ ನಾಲ್ಕಾರು ದಿನಗಳ ಮುಂಚೆ, ಅದರ ಮೇಲೆ ಹಳೆಯ ಹುಲ್ಲು, ತರಗಲೆಯನ್ನು ಹಾಸುವು ದುಂಟು. ಈ ಒಣತರಗಲೆಗಳ ಹಾಸು, ಹೊಸದಾಗಿ ಜನ್ಮತಾಳಲಿರುವ ಜೀವಲೋಕಕ್ಕೆ ಇನ್ನಷ್ಟು ಇಂಬು, ಪ್ರೋತ್ಸಾಹ ಕೊಡುವುದಂತೂ ನಿಜ! ಮಳೆ ಬಿದ್ದಕೂಡಲೇ, ಆ ಅಂಗಳದ ಮೇಲೆಲ್ಲಾ ಹುಲ್ಲು ಮತ್ತು ನಾನಾ ರೀತಿಯ ಸಸ್ಯಗಳು ಹುಟ್ಟಿ, ಇಡೀ ಅಂಗಳವೇ ಹಸಿರಿನ ವೈವಿಧ್ಯ ದಿಂದ ತುಂಬಿ ಹೋಗುತ್ತದೆ. ಅವುಗಳ ಮಧ್ಯೆ, ಎದ್ದು ಕಾಣುವ ಹೊಸ ಸಸ್ಯಗಳೆಂದರೆ, ಮಾವಿನ ಪುಟಾಣಿ ಗಿಡಗಳು, ಅವುಗಳ ಎಲೆಯ ಹೊಳೆವ ಹಸಿರು! ಬೇಸಗೆಯ ಸಮಯ ದಲ್ಲಿ, ನಾವೆಲ್ಲಾ ತಿಂದು ಎಸೆದ ಮಾವಿನ ಗೊರಟುಗಳು (ಓಟೆ), ಅಂಗಳದ ಮೂಲೆ ಮೂಲೆಗಳಲ್ಲಿ ಬಿದ್ದಿದ್ದು, ಮಳೆ ಬಂದ ಕೂಡಲೇ, ಅವು ಮೊಳೆಯುತ್ತವೆ ಮಾತ್ರವಲ್ಲ, ಬಹು ಬೇಗನೆ ಆರೇಳು ಇಂಚು ಎತ್ತರ ಬೆಳೆಯುತ್ತವೆ. ಎಳೆಯ ಮಾವಿನ ಗಿಡದ ಹಸಿರಿನ ಕಳೆಯೇ ವಿಭಿನ್ನ, ವಿಶಿಷ್ಟ. ಅಂಗಳದ ಮೂಲೆಯಲ್ಲೋ, ಮಧ್ಯದಲ್ಲೇ ಹೀಗೆ ಅಲ್ಲಲ್ಲಿ ತಲೆ ಎತ್ತಿ, ಮಳೆಗೆ ತೋಯುವ ಮಾವಿನ ಪುಟ್ಟಗಿಡಗಳ ನೋಟ ರಮ್ಯ.
ಈ ಪುಟಾಣಿ ಮಾವಿನ ಗಿಡಗಳ ನಡುವೆ, ನಾಲ್ಕಾರು ಗಿಡಗಳು ಒಟ್ಟಿಗೇ ಜನ್ಮ ತಾಳುವ ಇನ್ನೊಂದು ವಿಸ್ಮಯವನ್ನೂ ನಮ್ಮ ಅಂಗಳದಲ್ಲಿ ನೋಡಬಹುದು. ಅದೇನೆಂದರೆ, ಒಂದೇ ಓಟೆಯಲ್ಲಿ ನಾಲ್ಕಾರು ಗಿಡಗಳು ಮೊಳಕೆಯೊಡೆದು, ಕೆಂಪು ಮಿಶ್ರಿತ ಹಸಿರು ಎಲೆಗಳನ್ನು ಬಿಟ್ಟುಕೊಂಡು, ಮೇಲೇಳುವ ಪ್ರಕ್ರಿಯೆ. ನಮ್ಮ ಸೀಮೆಯಲ್ಲಿ ‘ಗೊರಟು ಕಸೆ’ ಅಥವಾ ‘ಮರೂರು ಭಟ್ಕಳ’ ಎಂಬ ಮಾವಿನ ತಳಿ ಇದೆ. ಗಾತ್ರ, ಆಕಾರದಲ್ಲಿ ಕಸಿ ಮಾವನ್ನೇ ಹೋಲುವ ಮರೂರು ಭಟ್ಕಳ ಮಾವಿನ ಹಣ್ಣುಗಳು ರುಚಿಯಲ್ಲಿ ಸಾಧಾರಣ, ಒಳಗೆ ನಾರಿನ ಅಂಶ ಜಾಸ್ತಿ. ಆದರೂ, ಒಂದು ಮರವಿದ್ದರೆ ಹೇರಳ ಹಣ್ಣುಗಳು ಖಚಿತ. ಆ ಹಣ್ಣನ್ನು ನಾವೆಲ್ಲಾ ಇಷ್ಟಪಟ್ಟು ತಿನ್ನುತ್ತಿದ್ದೆವು; ಅವುಗಳ ಗೊರಟಿನ ವಿಶೇಷವೆಂದರೆ, ಒಂದೇ ಗೊರಟಿನಿಂದ ನಾಲ್ಕಾರು ಮೊಳಕೆಗಳು ಒಮ್ಮೆಗೇ ಹೊರಬರುತ್ತವೆ!
ಮಳೆ ಬಿದ್ದಾಕ್ಷಣ, ಅಂಗಳದಲ್ಲಿನ ನಾನಾ ರೀತಿಯ ಸಸ್ಯಪ್ರಭೇದಗಳ ನಡುವೆ, ಒಂದೇ ಹುಟ್ಟಿನಲ್ಲಿ ನಾಲ್ಕು ಗಿಡಗಳನ್ನು ಬಿಟ್ಟುಕೊಂಡು, ಹೊಳೆಯುವ ಎಲೆಗಳ ರಾಶಿಯನ್ನು ಹೊರಸೂಸಿ, ಎಲ್ಲರ ಗಮನ ಸೆಳೆಯುತ್ತವೆ, ಈ ಮರೂರು ಭಟ್ಕಳ ಮಾವಿನ ಗಿಡಗಳು. ಈ ರೀತಿ, ಒಂದೇ ಗೊರಟಿನಿಂದ ಹಲವು ಮೊಳಕೆ ಒಡೆಯುವ ಬೇರೆ ಪ್ರಭೇದದ ಗಿಡಮರಗಳಿ ವೆಯೇ? ನನಗಂತೂ ಗೊತ್ತಿಲ್ಲ; ನಿಮಗೆ ಗೊತ್ತಿದ್ದರೆ ತಿಳಿಸಿ.
ಮಳೆ ಸುರಿಯತೊಡಗಿ, ಸುಮಾರು ಎರಡು ವಾರಗಳ ನಂತರ, ನಮ್ಮ ಹಳ್ಳಯ ಹಲವು ತೊರೆಗಳು ಮರುಜೀವ ಪಡೆಯುತ್ತವೆ ಮಾತ್ರವಲ್ಲ, ರಭಸದಿಂದ ಹರಿಯತೊಡಗಿ, ಮನೆಯ ಸುತ್ತಲೂ ಒಂದು ‘ಜಲಲೋಕ’ವನ್ನೇ ಸೃಷ್ಟಿಸುತ್ತವೆ. ಬೇಸಗೆಯಲ್ಲಿ ಬೋಳಾಗಿ, ಮಣ್ಣಿನ ದರೆಯ ಸ್ವರೂಪದಲ್ಲಿರುವ ಒಂದು ಪುಟ್ಟ ಇಳಿಜಾರು, ಮಳೆಗಾಲದಲ್ಲಿ ಪುಟಾಣಿ ಜಲಪಾತವೇ ಆಗುವ ಪರಿ ಒಂದು ಸೋಜಿಗ. ಇತ್ತ ಮಳೆ ಬರುತ್ತಿದ್ದರೆ, ಅತ್ತ, ನಮ್ಮ ಮನೆಯ ಜಗಲಿಯಿಂದ ಕಾಣುವ ಆ ಒಂದು ಪುಟಾಣಿ ಜಲಪಾತ ಇಂತಹದ್ದೇ ವಿದ್ಯಮಾನ; ಜೋರು ಮಳೆ ಬಂದಾಗ, ಅಲ್ಲಿ ಸುರಿವ ಬಿಳಿನೊರೆಯ ಜಲರಾಶಿಯನ್ನು ನೋಡುತ್ತಾ ನಿಲ್ಲುವು ದೆಂದರೆ, ನನಗಿಷ್ಟವಾದ ಹವ್ಯಾಸ. ಅತ್ತ, ಮನೆ ಎದುರಿನ ಗದ್ದೆಯಾಚೆ ಇರುವ ತೋಡಿ ನಲ್ಲಿ, ಸದಾ ನೀರಿನ ಹರಿವು. ಜಾಸ್ತಿ ಮಳೆ ಬಂದರೆ, ಪುಟ್ಟ ನೆರೆ; ಮಳೆ ಬಿಟ್ಟರೂ, ಉಜುರಿನ ನೀರು ಸದಾಕಾಲ ಹರಿಯುತ್ತಲೇ ಇರುವುದರಿಂದ, ಆ ತೋಡಿನಲ್ಲಿ ಹೊಸದೊಂದು ಜೀವಲೋಕ ಅರಳುತ್ತದೆ, ಬೆಳೆಯುತ್ತದೆ : ಅದೇ ಜಲಚರಗಳ ಲೋಕ.
ಬಿರು ಬೇಸಗೆಯಲ್ಲಿ, ರಣ ರಣ ಬಿಸಿಲಿನಲ್ಲಿ ಅವೆಲ್ಲಾ ಎಲ್ಲಿರುತ್ತವೋ ಏನೋ, ಮಳೆ ಬಿದ್ದು, ತೋಡಿನಲ್ಲಿ ನೀರು ಹರಿಯುತೊಡಗಿದ ನಾಲ್ಕರು ದಿನಗಳಲ್ಲೇ, ಅಲ್ಲಿ ಈಜತೊಡಗುತ್ತವೆ, ಹತ್ತಾರು ಮೀನುಗಳು! ಬಿರು ಬೇಸಗೆಯಲ್ಲಿ ‘ಬೇಸಗೆ ನಿದ್ದೆ’ ಮಾಡಬೇಕು, ಮಳೆ ಬಂದಾಕ್ಷಣ ಈ ತೋಡಿನಲ್ಲೇ ಈಜಾಡಬೇಕು ಎಂದು ಆ ಮೀನುಗಳಿಗೆ ಹೇಳಿಕೊಟ್ಟವ ರಾರು? ಅದೇ ತೋಡಿನಲ್ಲಿ ಮತ್ತು ಪಕ್ಕದ ಗದ್ದೆೆಯಲ್ಲಿ ಒಟ ಒಟ ಎಂದು ನಿರಂತರ ಕೂಗುವ ಕಪ್ಪೆೆಗಳು ಸಹ, ಬೇಸಗೆಯಲ್ಲಿ ಅದಾವ ಭೂಗರ್ಭದಲ್ಲಿ ಅಡಗಿರುತ್ತವೆ? ಇವೆಲ್ಲವನ್ನೂ ಯೋಚಿಸುತ್ತಾ ಹೋದರೆ, ಇನ್ನೊಂದು ಸೋಜಿಗದ ಪ್ರಪಂಚವೇ ತೆರೆದುಕೊಂಡೀತು.
ಮಳೆಗಾಲ ಆರಂಭವಾಗುವ ಜೂನ್ ಮೊದಲ ವಾರದಿಂದ, ಸುಮಾರು ನವೆಂಬರ್ ತಿಂಗಳ ತನಕ ಹರಿಯುವ ತೋಡಿನಲ್ಲಿರುವ ಮೀನುಗಳನ್ನು ನೋಡುವುದೆಂದರೆ, ಮಕ್ಕಳಿಗೆ ಕುತೂಹಲ, ಸೋಜಿಗ ಮತ್ತು ಒಂದು ಪರಿಸರ ಪಾಠ ಸಹ. ನಮ್ಮ ಹಳ್ಳಿಯ ಸರಹದ್ದಿನಲ್ಲಿ ನಾಲ್ಕಾರು ಪ್ರಭೇದದ ಮೀನುಗಳು ಸಾಮಾನ್ಯ. ಆ ಮೀನುಗಳಿಗೆ ಗಾಳ ಹಾಕಿ ಹಿಡಿಯುವ ಹವ್ಯಾಸದ ಕೆಲವು ಮಕ್ಕಳು, ತಾವು ಹಿಡಿದ ಮೀನನ್ನು ಮನೆಗೆ ಕೊಂಡೊಯ್ದು ‘ಪದಾರ್ಥ’ ಮಾಡುವುದುಂಟು. ದೊಡ್ಡ ಗಾತ್ರದ ಮೀನುಗಳನ್ನು ಹಿಡಿಯುವುದು ದೊಡ್ಡವರ ಹವ್ಯಾಾಸವೂ ಹೌದು; ಇಪ್ಪತ್ತನೆಯ ಶತಮಾನದಲ್ಲಿ, ಮಳೆಗಾಲದಲ್ಲಿ ಕೆಲಸ ದೊರಕದೇ, ಆಹಾರದ ಕೊರತೆಯಾಗುವ ಸನ್ನಿವೇಶದಲ್ಲಿ, ಇಂತಹ ಮೀನುಗಳನ್ನು ಹಿಡಿಯವುದು ಮನೆಯವರ ಅರೆಕಾಲಿಕ ಕೆಲಸವೂ ಆಗಿತ್ತು; ಅಂದು, ಅದರ ‘ಪದಾರ್ಥ’ವೇ ಅವೆಷ್ಟೋ ಒಡಲಿನ ಆಹಾರ.
ನೀರು ತುಂಬಿದ ಗದ್ದೆ, ತೋಡಿನ ಫಾಸಲೆಯಲ್ಲಿ ತನ್ನ ಚಟುವಟಿಕೆಯನ್ನು ಆರಂಭಿಸುವ ಇನ್ನೊಂದು ಸೋಜಿಗದ ಜೀವಿ ಎಂದರೆ ಏಡಿ. ನೆಲದಾಳದಿಂದ ಬಿಲದ ಮೂಲಕ ಮೇಲೆ ಬರುವ ಏಡಿಗಳನ್ನು ಹಿಡಿಯುವ ಮಹಿಳೆಯರು ನಮ್ಮೂರಿನಲ್ಲಿದ್ದಾರೆ; ಅದನ್ನು ‘ಪದಾರ್ಥ’ ಮಾಡಲೆಂದು ಹಸನು ಮಾಡುವಾಗ, ಕಣ್‌ತಪ್ಪಿ ಅದರಿಂದ ಕಚ್ಚಿಸಿಕೊಂಡ ವರೂ ಇದ್ದಾರೆ!
ಮಳೆಗಾಲ ಆರಂಭವಾಗಿ, ಒಂದೆರಡು ತಿಂಗಳುಗಳ ನಂತರ, ನೀರು ತುಂಬಿದ ಬತ್ತದ ಗದ್ದೆಯಲ್ಲೋ, ಬದುವಿನಲ್ಲೋ ಕಾಣಸಿಗುವ ಜಾಗಟೆ (ಒಂದು ಪ್ರಭೇದದ ಬಸವನ ಹುಳು) ಸಹ, ಇದೇ ರೀತಿ, ಹಲವು ಮನೆಗಳಲ್ಲಿ ಆಹಾರವಾಗಿ ಬೇಯುತ್ತದೆ, ಹಸಿದ ಹೊಟ್ಟೆೆಯನ್ನು ತಣಿಸುತ್ತದೆ. ಕೃಷಿ ಕಾರ್ಮಿಕರ ಮತ್ತು ರೈತರ ಮನೆಗಳ ಅಡುಗೆ ಮನೆಯಲ್ಲಿ ಮಳೆಗಾಲವು ತರುವ ಒಂದು ಬದಲಾವಣೆಯೇ ಇಂತಹ ಜೀವಿಗಳ ‘ಪದಾರ್ಥ’ಗಳು.
ಮನೆ ಹಿಂದಿನ ಹಕ್ಕಲು, ಹಾಡಿ, ಗುಡ್ಡಗಳಲ್ಲಿ ಅಡ್ಡಾಡಿದರೆ, ಮಳೆಗಾಲದ ಹೊಸದೇ ಲೋಕವೊಂದನ್ನು ಕಾಣಲು ಸಾಧ್ಯ. ನೆಲವೆಲ್ಲಾ ನಾನಾ ರೀತಿಯ ಹುಲ್ಲು, ಸಸ್ಯಗಳಿಂದ ತುಂಬಿಹೋಗಿರುತ್ತದೆ ನಿಜ; ಅವುಗಳ ಮಧ್ಯೆೆ ಅರಳುವ ಅಣಬೆಗಳದ್ದೇ ಒಂದು ಬೇರೆಯದೇ ಪ್ರಪಂಚ! ಭೂನಕ್ಷತ್ರ ಎಂಬ ಹೆಸರಿನ ಅಣಬೆಯು, ಗುಡ್ಡದ ನೆಲದ ಮೇಲೆ ಜನಿಸಿತು ಎಂದರೆ, ಅಲ್ಲೊಂದು ನಕ್ಷತ್ರಾಕಾರದ ವಿನ್ಯಾಸ ಮೂಡಿತು ಎಂದೇ ಅರ್ಥ. ದಟ್ಟ ಕಾಡಿನಲ್ಲಿ ಕೆಲವು ಪ್ರಭೇದದ ಅಣಬೆಗಳು ಕಾಣಿಸಿದರೆ, ಹಕ್ಕಲು ಹಾಡಿಗಳಲ್ಲಿ ಬಣ್ಣ ಬಣ್ಣದ ಅಣಬೆಗಳನ್ನೂ ಕಾಣಬಹುದು.
ಕೆಲವು ಪುಟಾಣಿ ಗಾತ್ರದವು, ಇನ್ನು ಕೆಲವು ದೊಡ್ಡ ಗಾತ್ರದವು. ಇವುಗಳಲ್ಲಿ ಆಯ್ದ ಕೆಲವು ಅಣಬೆಗಳನ್ನು ಆರಿಸಿ, ಮನೆಗೆ ಕೊಂಡೊಯ್ದು, ಅದರಿಂದಲೂ ‘ಪದಾರ್ಥ’ ಮಾಡುವು ದುಂಟು. ನಾವೆಲ್ಲಾ ನಗರಗಳಿಗೆ ಬಂದು, ‘ಮಶ್‌ರೂಂ ಡಿಶ್’ ಎಂಬ ಹೆಸರನ್ನು ಕೇಳುವು ಮುಂಚೆಯೇ, ನಮ್ಮೂರಿನ ನಿರಕ್ಷರಕುಕ್ಷಿ ಮಹಿಳೆಯರು ಮಶ್‌ರೂಂನಿಂದ ಖಾದ್ಯ ತಯಾರಿಸುತ್ತಿದ್ದರು. ಆದರೆ, ಅದೇಕೋ, ನಮ್ಮ ಮನೆಯಲ್ಲಿ ಅಣಬೆಯನ್ನು ತಿನ್ನಲು ನಿಷೇಧವಿತ್ತು! ಸಾಕಷ್ಟು ಪೌಷ್ಟಿಕಾಂಶ ಇರುವ ಅಣಬೆಯ ಖಾದ್ಯಗಳನ್ನು ನಮ್ಮೂರಿನ ಹಲವರು ತಯಾರಿಸುತಿದ್ದುದು ಸಾಮಾನ್ಯ; ಆದರೆ, ಕಾಡುಪ್ರದೇಶದಲ್ಲಿ ದೊರಕುವ ಎಲ್ಲಾ ಅಣಬೆಗಳನ್ನು ತಿನ್ನುವಂತಿಲ್ಲ, ಕೆಲವು ಅಣಬೆಗಳು ಆರೋಗ್ಯಕ್ಕೆ ಪೂರಕವಲ್ಲ ಎಂಬ ಮಾಹಿತಿ ನಮ್ಮೂರಿನವರಿಗೆ ಗೊತ್ತಿತ್ತು. ಆದ್ದರಿಂದ, ಅಣಬೆ ಆಯುವಾಗ, ಹಿರಿಯರ ಮಾರ್ಗದರ್ಶನ ಅಗತ್ಯ.
ಮಳೆಗಾಲವು ನಮ್ಮ ಅಡುಗೆ ಮನೆಯಲ್ಲಿ ತರುವ ಇನ್ನೊಂದು ಬದಲಾವಣೆ ಎಂದರೆ, ತರಕಾರಿಗಳ ಕೊರತೆ. ಒಂದೇಸಮನೆ ನಾಲ್ಕಾರು ವಾರಗಳ ಕಾಲ, ದಿನ ಬಿಟ್ಟು ದಿನವೋ, ಅಥವಾ ಪ್ರತಿ ದಿನವೋ ಮಳೆ ಸುರಿಯತೊಡಗಿದಾಗ, ಮನೆಯ ಸುತ್ತಮುತ್ತಲೂ ಸಿಗುತ್ತಿದ್ದ ತರಕಾರಿ ಅಥವಾ ಸೊಪ್ಪುಗಳ ತೀವ್ರ ಕೊರತೆ ಎದುರಾಗುತ್ತದೆ. ಆಗಿನ ದಿನಗಳಲ್ಲಿ ನಮ್ಮ ಹಳ್ಳಿಯ ಸುತ್ತಮುತ್ತ ಎಲ್ಲೂ ತರಕಾರಿ ಅಂಗಡಿಗಳಿರಲಿಲ್ಲ. ಮಳೆಗಾಲದ ತರಕಾರಿ ಕೊರತೆ ಯನ್ನು ಎದುರಿಸಲು, ನಮ್ಮೂರಿನ ಮಹಿಳೆಯರು ಬೇಸಗೆಯಿಂದಲೇ ಸಣ್ಣಮಟ್ಟದ ತಯಾರಿ ಮಾಡುತ್ತಿದ್ದರು. ಅವುಗಳಲ್ಲಿ ಒಂದು ವಿಧಾನವೆಂದರೆ, ಉಪ್ಪುನೀರಿಗೆ ಹಾಕಿಟ್ಟ ಹಲಸಿನ ತೊಳೆ ಮತ್ತು ಮಾವಿನ ಕಾಯಿ. ಹಲಸಿನ ಹಣ್ಣು ತಿನ್ನುವುದು ಸಾರ್ವತ್ರಿಕ; ಆದರೆ, ಹಲಸಿನ ಕಾಯಿಯ ತೊಳೆಯನ್ನೇ ತರಕಾರಿಯನ್ನಾಗಿ ಉಪಯೋಗಿಸುವುದು ಮಲೆನಾಡು ಮತ್ತು ಕರಾವಳಿಯಲ್ಲಿ ಜಾಸ್ತಿ. ಹದವಾಗಿ ಬೆಳೆದ ಹಲಸಿನ ತೊಳೆಗಳನ್ನು, ದೊಡ್ಡ ಜಾಡಿ ಯಲ್ಲಿ ತುಂಬಿಸಿ, ಅದರ ಮೇಲೆ ಒಂದೆರಡು ಸೇರು ಉಪ್ಪನ್ನು ಸುರಿದು ಮುಚ್ಚಿಟ್ಟರೆ, ಆ ತೊಳೆಗಳು ಕೆಲವು ತಿಂಗಳುಗಳ ಕಾಲ ಬಾಳಿಕೆ ಬರುತ್ತವೆ. ಉಪ್ಪುನೀರಿನಲ್ಲಿರುವ ತೊಳೆಗಳನ್ನು ಹೊರತೆಗೆದು, ಹೆಚ್ಚಿ, ಪಲ್ಯ ಮಾಡುವುದು ಒಂದು ವಿಧ.
ಬೇಸಗೆಯಲ್ಲಿ ಆರಿಸಿದ ಮಾವಿನಕಾಯಿಗಳನ್ನು ಸಹ ಉಪ್ಪುನೀರಿಗೆ ಹಾಕಿ ಇಡುವುದುಂಟು; ನಾಲ್ಕೆೆಂಟು ವಾರಗಳ ನಂತರ, ಅದನ್ನು ಉಪ್ಪುುನೀರಿನಿಂದ ಹೊರತೆಗೆದು, ಚಟ್ನಿ, ಗೊಜ್ಜು, ಸಾಂಬಾರು ಮಾಡಬಹುದು. ಮಾವಿನ ಹಣ್ಣಿ ಹಣ್‌ಚಟ್ ಸಹ ಇದೇ ರೀತಿ, ಬಹುದಿನ ಕಾಪಿಡುವಂತಹ ಸಸ್ಯೋತ್ಪನ್ನ; ಇದರಿಂದ, ಸಿಹಿಗೊಜ್ಜು, ಪಾಯಸ ತಯಾರಿಸಬಹುದು. ಇದೇ ರೀತಿ ಬಹುದಿನ ಇಡಬಹುದಾದ ಒಣಗಿಸಿಟ್ಟ ಹಲಸಿನ ಬೀಜಗಳಿಂದ, ರೊಟ್ಟಿ ಮಾಡುವುದುಂಟು; ಜತೆಗೆ, ಬೇರೆ ‘ಪದಾರ್ಥ’ದ ಜತೆ, ಹಲಸಿನ ಬೀಜಗಳನ್ನು ಸೇರಿಸಿ ಬೇಯಿಸಿದಾಗ, ರುಚಿಕರ ವ್ಯಂಜನವಾಗಿಯೂ ಹೊಟ್ಟೆೆ ತುಂಬಿಸೀತು!
ಇಲ್ಲಿ ನೆನಪಿಸಿಕೊಂಡಿರುವುದು, ಮಳೆಗಾಲದ ಕೆಲವು ಮಧುರ ಎನ್ನಬಹುದಾದ ನೆನಪುಗಳನ್ನು ಮಾತ್ರ. ಹಲವು ದಿನಗಳ ಕಾಲ ಸುರಿಯುವ ಮಳೆ, ಅದರಿಂದ ಉಂಟಾಗುವ ಥಂಡಿ, ವಾತಾವರಣದಲ್ಲಿ ತುಂಬುವ ತೇವಾಂಶ ತರುವ ಆರೋಗ್ಯ ಸಮಸ್ಯೆ, ಓಡಾಟಕ್ಕೆ ಅವಕಾಶವಿಲ್ಲದೆ ದುಸ್ತರವಾಗುವ ದಿನಚರಿ ಇವೆಲ್ಲವೂ ಇನ್ನೊಂದೇ ಆಯಾಮದ ವಿದ್ಯಮಾನಗಳು. ನಮ್ಮ ಹಳ್ಳಿಯಲ್ಲಿ ಸುದೀರ್ಘ ಮಳೆಗಾಲ ಸುರಿಯುವ ವರ್ಷಗಳಲ್ಲಿ, ಅದು ತರುವ ಬೇನೆಗಳೂ ಅಧಿಕ! ಅವುಗಳನ್ನು ಬರೆಯುತ್ತಾ ಹೋದರೆ, ಅದೇ ಒಂದು ಅಧ್ಯಾಯವಾದೀತು.