ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranjith H Ashwath Column: ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?

ಅಂದಿನ ಅನಿವಾರ್ಯತೆ ಹಾಗೂ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದ ಮೈತ್ರಿಯು ಸದ್ಯ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ದಕ್ಷಿಣ ಭಾರತ ದಲ್ಲಿ ಬಿಜೆಪಿ ನೆಚ್ಚಿಕೊಳ್ಳಬಹುದಾದ ಏಕೈಕ ರಾಜ್ಯ ಕರ್ನಾಟಕವಾಗಿದ್ದರೂ, ಈವರೆಗೆ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರಿದ್ದಕ್ಕಿಂತ ಮೈತ್ರಿ, ಆಪರೇಷನ್ ಕಮಲದ ಮೂಲಕ ‘ಮ್ಯಾಜಿಕ್ ನಂಬರ್’ ದಾಟಿರುವುದು ವಾಸ್ತವ.

ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?

-

ಅಶ್ವತ್ಥಕಟ್ಟೆ

ರಾಜಕೀಯದಲ್ಲಿ ಗೋಚರ ಶತ್ರುಗಳಿಗಿಂತ, ಅಗೋಚರ ಶತ್ರುಗಳು ಹೆಚ್ಚು ಅಪಾಯಕಾರಿ ಯಂತೆ. ಅದರಲ್ಲಿಯೂ ಜತೆಯಲ್ಲಿದ್ದುಕೊಂಡು ಹಾಕುವ ರಾಜಕೀಯ ಪಟ್ಟುಗಳು ಅನೇಕ ಬಾರಿ ಹೊಡೆತ ಬಿದ್ದ ಬಳಿಕವೇ ತಿಳಿಯುವುದಂತೆ. ಇದೀಗ ಒಳಯೇಟಿನ ಹೊಡೆತ ಬಿಜೆಪಿ ಯ ರಾಜ್ಯ ನಾಯಕರಿಗೆ ಗೋಚರಿಸಲು ಶುರುವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಏಕೆಂದರೆ, ಆರಂಭದಲ್ಲಿ ಕಾಂಗ್ರೆಸ್‌ನ ಬಲ ಕುಗ್ಗಿಸಲು, ಹಳೇ ಮೈಸೂರು ಭಾಗದಲ್ಲಿ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಹಾಗೂ ರಾಜ್ಯದ ಎಲ್ಲ ಕ್ಷೇತ್ರದಲ್ಲಿದ್ದ ಜೆಡಿಎಸ್‌ನ ಸಾಂಪ್ರದಾಯಿಕ ಮತ ಗಳನ್ನು ಪಡೆಯವ ಆಲೋಚನೆಯಲ್ಲಿ ಕೇಂದ್ರ ಬಿಜೆಪಿ ನಾಯಕರು ಮುಂದಿಟ್ಟ ಜೆಡಿಎಸ್‌ ನೊಂದಿಗಿನ ಮೈತ್ರಿಯನ್ನು ಒಪ್ಪಿಕೊಂಡಿದ್ದ ರಾಜ್ಯ ನಾಯಕರಿಗೆ ಈಗ ಅದರ ಒಳಯೇಟು ಬೀಳಲು ಶುರುವಾಗಿದೆ.

ಅಂದಿನ ಅನಿವಾರ್ಯತೆ ಹಾಗೂ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದ ಮೈತ್ರಿಯು ಸದ್ಯ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ದಕ್ಷಿಣ ಭಾರತ ದಲ್ಲಿ ಬಿಜೆಪಿ ನೆಚ್ಚಿಕೊಳ್ಳಬಹುದಾದ ಏಕೈಕ ರಾಜ್ಯ ಕರ್ನಾಟಕವಾಗಿದ್ದರೂ, ಈವರೆಗೆ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರಿದ್ದಕ್ಕಿಂತ ಮೈತ್ರಿ, ಆಪರೇಷನ್ ಕಮಲದ ಮೂಲಕ ‘ಮ್ಯಾಜಿಕ್ ನಂಬರ್’ ದಾಟಿರುವುದು ವಾಸ್ತವ.

ಈ ಕಾರಣಕ್ಕಾಗಿಯೇ, ಕರ್ನಾಟಕ ರಾಜಕೀಯದ ಮೂರನೇ ಶಕ್ತಿಯಾಗಿದ್ದ ಜೆಡಿಎಸ್‌ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಯ ದೆಹಲಿ ನಾಯಕರು ಮುಂದಾದರು. ಇದೇ ಸಮಯಕ್ಕೆ ಕಾಯುತ್ತಿದ್ದ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಿಜೆಪಿಯೊಂದಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವುದಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಆಯಕಟ್ಟಿನ ಸ್ಥಾನವನ್ನು ಕುಮಾರಸ್ವಾಮಿ ಗಿಟ್ಟಿಸಿಕೊಂಡರು.

ಇದನ್ನೂ ಓದಿ: Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

ಬಿಜೆಪಿಯ ದೆಹಲಿ ಮಟ್ಟದಲ್ಲಿ ಈಗಲೂ ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಸಮಸ್ಯೆ ಇರುವುದೇ ಸ್ಥಳೀಯ ನಾಯಕತ್ವದಲ್ಲಿ. ಬಿಜೆಪಿ-ಜೆಡಿಎಸ್ ನಡುವಿನ ಕಂದಕವನ್ನು ತಗ್ಗಿಸಲು ಸಮನ್ವಯ ಸಮಿತಿ ಮಾಡಿಕೊಂಡು ‘ನಾಮ್ ಕೆ ವಾಸ್ತೆ’ ಒಂದೆರಡು ಸಭೆಗಳನ್ನು ನಡೆಸಿಕೊಂಡು ಬಂದರೂ, ಎರಡೂ ಪಕ್ಷಗಳು ಈಗಲೂ ಒಂದಾಗಿ ಹೋರಾಡುತ್ತಿಲ್ಲ ಎನ್ನುವುದು ಸ್ಪಷ್ಟ.

ಆಡಳಿತಾರೂಢ ಕಾಂಗ್ರೆಸ್ ಸರಕಾರದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದೊಳಗೆ ಹತ್ತಾರು ಸಮಸ್ಯೆ ಗಳಿದ್ದರೂ, ಅವುಗಳನ್ನು ಎತ್ತಿಹಿಡಿಯುವಲ್ಲಿ ಪ್ರತಿಪಕ್ಷಗಳಾಗಿ ಬಿಜೆಪಿ-ಜೆಡಿಎಸ್ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪಗಳು ಪಕ್ಷದೊಳಗೆ ಇವೆ.

ಎರಡೂ ಪಕ್ಷದ ನಾಯಕರು ಸದನದ ಒಳ-ಹೊರಗೆ ಒಂದಾಗಿ ಹೋರಾಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಒಗ್ಗಟ್ಟಿನ ಮಂತ್ರ ಕೇವಲ ಹೇಳಿಕೆಗೆ ಸೀಮಿತವಾಗಿದೆಯೇ ಹೊರತು, ಜಾರಿಗೆ ಬರುತ್ತಿಲ್ಲ. ಸದನದೊಳಗೆ ಬಿಜೆಪಿ ಎತ್ತಿಕೊಂಡ ವಿಷಯದಲ್ಲಿ ಜೆಡಿಎಸ್ ನಿರ್ಲಕ್ಷ್ಯ ತೋರಿದರೆ, ಜೆಡಿಎಸ್ ಎತ್ತುವ ವಿಷಯಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಬಿಜೆಪಿಗರು ಇರುತ್ತಾರೆ.

ಕಳೆದ ಜನವರಿಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಬಿಜೆಪಿ ಕರೆ ನೀಡಿದ ಅಹೋರಾತ್ರಿ ಧರಣಿಗೂ ಮೊದಲು ನಮ್ಮನ್ನು ಸಂಪರ್ಕಿಸಿಲ್ಲವೆಂದು ಜೆಡಿಎಸ್ ಧರಣಿಯಿಂದ ದೂರ ಉಳಿಯಿತು. ಇದಿಷ್ಟೇ ಅಲ್ಲದೇ, ಸರಕಾರದ ವಿರುದ್ಧ ಕೇಳಿ ಬಂದ ಹಲವು ಆರೋಪಗಳ ವಿಷಯದಲ್ಲಿ ಎರಡೂ ಪಕ್ಷಗಳೂ ಒಂದಾಗಿ ಹೋರಾಟ ಮಾಡಿದ ಉದಾಹರಣೆಗಳಿಲ್ಲ.

ಈ ಭಿನ್ನದಾರಿ ಕೇವಲ ಹೋರಾಟಕ್ಕೆ ಸೀಮಿತವಾಗದೇ, ಚುನಾವಣೆಗಳಿಗೆ ಅಭ್ಯರ್ಥಿಗಳ ನೇಮಕದ ವಿಷಯಕ್ಕೂ ಮುಂದುವರಿದಿರುವುದು ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ದೀರ್ಘ ಮೈತ್ರಿಯ ಮಾತುಗಳನ್ನು ದೆಹಲಿ ನಾಯಕರು ಆಡುತ್ತಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಅಶೋಕ್ ಸೇರಿದಂತೆ ಸ್ಥಳೀಯ ನಾಯಕರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ತಗಾದೆಯನ್ನು ಜೆಡಿಎಸ್‌ ನವರು ತೆಗೆದಿದ್ದಾರೆ.

jds-amt

ಇದೇ ವಿಷಯಕ್ಕೆ ಸಂಬಂಧಿಸಿದ ದೂರನ್ನು ಅಮಿತ್ ಶಾ ಅವರಿಗೂ ಮುಟ್ಟಿಸಿದ್ದಾರೆ. ಕಳೆದ ವಾರ ಯುಗಾದಿ ಹಬ್ಬದ ನೆಪದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಭೇಟಿಯಾಗಿದ್ದಾರೆ.

‘ಹಬ್ಬದ ಶುಭಾಶಯ ಕೋರಲು ಭೇಟಿಯಾಗಿದ್ದೆ’ ಎನ್ನುವ ಮಾತನ್ನು ಕುಮಾರಸ್ವಾಮಿ ಹೇಳಿದ್ದರೂ, ಈ ಭೇಟಿಯ ವೇಳೆ ರಾಜ್ಯ ಬಿಜೆಪಿ ನಾಯಕರ ನಡವಳಿಕೆ ಬಗ್ಗೆ ‘ಗಹನ’ವಾದ ಚರ್ಚೆಯಾಗಿದೆ ಎನ್ನುವುದು ವಾಸ್ತವ. ಅಮಿತ್ ಶಾ ಅವರನ್ನು ಭೇಟಿಯಾದ ಕುಮಾರ ಸ್ವಾಮಿ ಅವರು ವಿಧಾನಪರಿಷತ್ ಚುನಾವಣೆ ಹಾಗೂ ರಾಜ್ಯಸಭಾ ಚುನಾವಣೆಯ ವಿಷಯ ದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಮುಂದಿನ ಕೆಲ ತಿಂಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ರಾಜ್ಯಸಭಾ ಅವಧಿ ಪೂರ್ಣಗೊಳ್ಳಲಿದೆ. ಪುನರಾಯ್ಕೆ ಬಯಸುವುದಿಲ್ಲ ಎಂದು ದೇವೇಗೌಡರು ಹೇಳುತ್ತಿದ್ದರೂ, ಮತ್ತೊಮ್ಮೆ ಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಇರಾದೆ ಜೆಡಿಎಸ್‌ನಲ್ಲಿದೆ. ಒಂದು ವೇಳೆ ದೇವೇಗೌಡರು ನಿರಾಕರಿಸಿದರೂ, ಪಕ್ಷದ ಒಬ್ಬರಿಗೆ ರಾಜ್ಯಸಭೆಗೆ ಅವಕಾಶ ನೀಡಬೇಕು ಎನ್ನುವುದು ಜೆಡಿಎಸ್ ನಾಯಕರ ವಾದವಾಗಿದೆ.

ಬಿಜೆಪಿ ತನ್ನ ಕೋರ್ ಕಮಿಟಿ ಸಭೆಯಲ್ಲಿ, ದೇವೇಗೌಡರ ಸ್ಥಾನಕ್ಕೆ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ, ಒಕ್ಕಲಿಗ ನಾಯಕನನ್ನು ಕಳುಹಿಸಬೇಕು ಎನ್ನುವ ಚರ್ಚೆ ನಡೆಸಿದೆ. ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗದಿದ್ದರೂ, ದೇವೇಗೌಡರ ಬದಲಿಗೆ ಇನ್ನೊಬ್ಬರನ್ನು ಕಳುಹಿಸುವ ಚರ್ಚೆಯೇ ಕುಮಾರಸ್ವಾಮಿ ಅವರಿಗೆ ಸಹ್ಯವಾಗಿಲ್ಲ.

ಆದ್ದರಿಂದ ಅಮಿತ್ ಶಾ ಅವರ ಮುಂದೆ ವಿಧಾನಪರಿಷತ್ ಟಿಕೆಟ್ ಆಯ್ಕೆ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ್ದಾರೆ. ಮುಂಬ ರುವ ನವೆಂಬರ್‌ನಲ್ಲಿ ನಡೆಯುವ ನಾಲ್ಕು ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮೂರು ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡು, ಒಂದನ್ನು ಜೆಡಿಎಸ್‌ಗೆ ನೀಡಿದೆ. ಆದರೆ ಬೆಂಗಳೂರು ಶಿಕ್ಷಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಪುಟ್ಟಣ್ಣ ಸ್ಪರ್ಧಿಸುವುದು ಖಚಿತವಾಗಿದೆ.

ಹೀಗಿರುವಾಗ, ‘ಗೆಲುವು ಕಷ್ಟ ಎನ್ನುವ ಸ್ಥಾನವನ್ನು ನಮಗೆ ನೀಡಿ, ಸೇಫ್ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಈ ತೀರ್ಮಾನ ಕೈಗೊಳ್ಳುವ ಮೊದಲು ಒಂದು ಮಾತು ಸಹ ನಮ್ಮನ್ನು ಕೇಳಿಲ್ಲ’ ಎನ್ನುವ ಅಸಮಾಧಾನವನ್ನು ಅಮಿತ್ ಶಾ ಮುಂದೆ ಕುಮಾರಣ್ಣ ಹೊರಹಾಕಿದ್ದಾರೆ. ಅಮಿತ್ ಶಾ ಭೇಟಿಗೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರನ್ನೂ ಭೇಟಿಯಾಗಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ನಾಯಕರೊಂದಿಗೆ ಜೆಡಿಎಸ್‌ನ ಗೊಂದಲ ಕೇವಲ ರಾಜ್ಯಸಭೆ, ವಿಧಾನ ಪರಿಷತ್‌ಗೆ ಸೀಮಿತವಾಗಿಲ್ಲ. ಸ್ಥಳೀಯ ಮಟ್ಟದಲ್ಲಿಯೂ ಗೊಂದಲ ‘ಬೂದಿಮುಚ್ಚಿದ ಕೆಂಡವಾಗಿದೆ’. ಆ ಕಾರಣಕ್ಕಾಗಿಯೇ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರೆ, ದೇವೇಗೌಡರು ಬಿಜೆಪಿ-ಜೆಡಿಎಸ್ ಮೈತ್ರಿಯು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಮುಂದುವರಿಯಲಿದೆ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಈ ಭಿನ್ನ ಹೇಳಿಕೆಗಳು ಎಚ್‌ಡಿಕೆ-ಎಚ್‌ಡಿಡಿ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದಕ್ಕಿಂತ, ಯಾವ ಹೇಳಿಕೆಗೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ನೋಡುವ ಲೆಕ್ಕಾಚಾರಗಳಿವೆ.

ಮೈತ್ರಿ ವಿಷಯದಲ್ಲಿ ಬಿಜೆಪಿ ನಾಯಕರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದೇ ಇದಿದ್ದರಿಂದ, ದೇವೇಗೌಡರು ಕೊನೆಯದಾಗಿ ‘ನಮಗೆ ಮೈತ್ರಿ ಬೇಕಿದೆ; ಬಿಜೆಪಿಯ ದೆಹಲಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ’ ಎನ್ನುವ ಮೂಲಕ ಬಿಜೆಪಿ ವರಿಷ್ಠರ ಮೇಲೆಯೇ ಹೊರೆ ಹೊರಿಸಿ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಂಬಂಧಿಸಿದ ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಮೈತ್ರಿಗಳ ವಿಷಯದಲ್ಲಿ ದೆಹಲಿ ನಾಯಕರು ತಲೆ ಹಾಕುವು ದಿಲ್ಲ. ರಾಜ್ಯ ನಾಯಕರು ಕೂತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ತಾಲೂಕು ಪಂಚಾಯಿತಿ ಹಂತದ ಚುನಾವಣೆಗಳಾದರೆ, ಜಿಲ್ಲಾ ಮಟ್ಟದಲ್ಲಿಯೇ ತೀರ್ಮಾನ ಕೈಗೊಳ್ಳ ಲಾಗುತ್ತದೆ.

ಈ ವಿಷಯ ಗೊತ್ತಿದ್ದರೂ, ದೇವೇಗೌಡರು ರಾಷ್ಟ್ರ ನಾಯಕರೇ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಯಾವ ಸಂದೇಶ ರವಾನಿಸಿದ್ದಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಹಾಗೆ ನೋಡಿದರೆ, ಕಳೆದ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ದಿನದಿಂದಲೂ ಜೆಡಿಎಸ್ ಪಕ್ಷವು ರಾಜ್ಯ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಕೇಂದ್ರ ಬಿಜೆಪಿ ನಾಯಕರನ್ನೇ ನೆಚ್ಚಿಕೊಂಡಿದೆ.

ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಎಷ್ಟು ಸೀಟು ಕೊಡಲಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ, ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಿದರೆ ಆಗಬಹುದಾದ ನಷ್ಟದ ಲೆಕ್ಕಾಚಾರದಲ್ಲಿ ಪಕ್ಷದ ಹೈಕಮಾಂಡ್ ಜೆಡಿಎಸ್ ಅನ್ನು ಪಕ್ಕದಲ್ಲಿಯೇ ಕೂರಿಸಿಕೊಂಡಿದೆ.

ಇನ್ನೊಂದೆಡೆ ಜೆಡಿಎಸ್‌ಗೆ ದಿನದಿಂದ ದಿನಕ್ಕೆ ತನ್ನ ಮತಬ್ಯಾಂಕ್ ಪ್ರಮಾಣ ಸಣ್ಣದಾಗು ತ್ತಿರುವ ಬಗ್ಗೆಯೂ ಅರಿವಿದೆ. ಆದ್ದರಿಂದ ಸ್ವತಂತ್ರವಾಗಿ ಚುನಾವಣೆಗೆ ಹೋಗುವುದಕ್ಕಿಂತ ಬಿಜೆಪಿಯೊಂದಿಗೆ ಹೋದರೆ, ತನ್ನ ಅಸ್ತಿತ್ವವನ್ನು ರಾಜ್ಯದಲ್ಲಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದಲ್ಲಿಯೂ ಉಳಿಸಿಕೊಳ್ಳಬಹುದು ಎನ್ನುವುದಾಗಿದೆ.

ಈ ಮೈತ್ರಿಯಿಂದ ಎರಡೂ ಪಕ್ಷಕ್ಕೂ ಲಾಭವಿದ್ದರೂ, ಹೊಂದಾಣಿಕೆ ವಿಷಯದಲ್ಲಿ ಆಗುತ್ತಿರುವ ಸಮಸ್ಯೆಯೇನು ಎನ್ನುವ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ಉತ್ತರ ವೆಂದರೆ, ಬಿಜೆಪಿ-ಜೆಡಿಎಸ್ ಮೈತ್ರಿಯ ವಿಷಯದಲ್ಲಿ ಜೆಡಿಎಸ್ ನಾಯಕರಿಗಾಗಲೀ, ಬಿಜೆಪಿಯ ದೆಹಲಿ ನಾಯಕರಿಗೆ ಆಗಲೀ ಯಾವುದೇ ಗೊಂದಲ ಅಥವಾ ತಿಕ್ಕಾಟವಿಲ್ಲ. ಅವು ಇರುವುದು ಜೆಡಿಎಸ್ ಹಾಗೂ ರಾಜ್ಯ ಬಿಜೆಪಿ ನಾಯಕತ್ವಕ್ಕೆ.

ಸ್ಥಳೀಯ ನಾಯಕರೊಂದಿಗೆ ಜೆಡಿಎಸ್‌ಗೆ ಭಿನ್ನಾಭಿಪ್ರಾಯವಿದ್ದರೂ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ದೆಹಲಿ ಮಟ್ಟದ ನಾಯಕರೊಂದಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿ ಇಬ್ಬರೂ ಉತ್ತಮ ‘ಕೆಮಿಸ್ಟ್ರಿ’ ಹೊಂದಿದ್ದಾರೆ. ಗೌಡರ ಕುಟುಂಬ ಹಾಗೂ ಬಿಜೆಪಿ ವರಿಷ್ಠರ ಈ ಕೆಮಿಸ್ಟ್ರಿ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಈ ಕೆಮಿಸ್ಟ್ರಿ ಮುಂದಿಟ್ಟುಕೊಂಡು ದೇವೇಗೌಡರು ಹಾಗೂ ಕುಮಾರಸ್ವಾಮಿ ಇನ್ಯಾವೆಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುವರೋ ಎನ್ನುವ ಆತಂಕ ರಾಜ್ಯ ನಾಯಕರಲ್ಲಿ ಮೂಡಿದೆ.

ರಾಜ್ಯ ಬಿಜೆಪಿ ಘಟಕದಲ್ಲಿ ಎಲ್ಲವೂ ಸರಿಯಾಗಿದ್ದರೆ ವರಿಷ್ಠರೊಂದಿಗೆ ಗೌಡರ ಆಪ್ತತೆ ಈ ಪ್ರಮಾಣದಲ್ಲಿ ಆತಂಕಕ್ಕೆ ಕಾರಣವಾಗುತ್ತಿರಲಿಲ್ಲ ಹಾಗೂ ಬಿಜೆಪಿ ವರಿಷ್ಠರು ಈ ಪ್ರಮಾಣ ದಲ್ಲಿ ಜೆಡಿಎಸ್ ಅನ್ನು ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಕರ್ನಾಟಕ ಬಿಜೆಪಿಯಲ್ಲಿ ಹತ್ತಾರು ಗೊಂದಲ, ಭಿನ್ನಾಭಿಪ್ರಾಯ ಹಾಗೂ ಬಂಡಾಯ ಇರುವುದರಿಂದ ಈ ಎಲ್ಲವನ್ನೂ ಮೀರಿ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಉಳಿದಿರುವ ಏಕೈಕ ಮಾರ್ಗವಾಗಿ ಜೆಡಿಎಸ್ ಕಾಣಿಸಿ ಕೊಳ್ಳುತ್ತಿದೆ.

ಸದ್ಯ ಜೆಡಿಎಸ್ ಅಸ್ತಿತ್ವದ ಬಗ್ಗೆ ಆಲೋಚಿಸುವುದಕ್ಕಿಂತ ಹೆಚ್ಚಾಗಿ ಇಡೀ ದೇಶದಲ್ಲಿ ದಿನದಿಂದ ದಿನಕ್ಕೆ ಬಲ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ನ ಬಲ ಕರ್ನಾಟಕದಲ್ಲಿ ಮಾತ್ರ ತಗ್ಗುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಬಲ ತಗ್ಗಿದರೆ, ಇಡೀ ದೇಶದಲ್ಲಿ ಕಾಂಗ್ರೆಸ್‌ನ ಅಸ್ತಿತ್ವದ ಪ್ರಶ್ನೆ ಶುರುವಾಗಲಿದೆ. ಆದ್ದರಿಂದ ಬಿಜೆಪಿಯ ದೆಹಲಿ ನಾಯಕರಿಗೆ 2028ರಲ್ಲಿ ಕಾಂಗ್ರೆಸ್‌ನ ಬಲ ಕುಗ್ಗಿಸುವುದು ಪ್ರಮುಖ ಎನಿಸಿದೆ.

ಆದರೆ ಇಂದಿನ ಪರಿಸ್ಥಿತಿಯಲ್ಲಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಸುಮಾರು ಮೂರು ದಶಕಗಳಿಂದ ಕಟ್ಟಿಕೊಂಡು ಬಂದಿದ್ದ ಪಕ್ಷ ಸಂಘಟನೆ ಸಂಪೂರ್ಣ ನೆಲಕಚ್ಚಿದೆ. ಈ ಸಮಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದರಿಂದ ಬಿಜೆಪಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವು ಅರಿವು ದೆಹಲಿ ನಾಯಕರಿಗೆ ಇದೆ. ಈ ಕಾರಣಕ್ಕಾಗಿಯೇ, ಜೆಡಿಎಸ್‌ ನೊಂದಿಗಿನ ಸ್ನೇಹವನ್ನು ಹೆಚ್ಚಿಸಿಕೊಳ್ಳುವತ್ತ ಬಿಜೆಪಿ ನಾಯಕರ ಚಿಂತನೆಯಿದೆ.