ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

T Devidas Column: ಕಸ್ತೂರಿ ರಂಗನ್‌ ವರದಿ: ವಿರೋಧದ ನೆಲೆಗಳೇನು?

ಎಲ್ಲ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು. 20000 ಚಮೀ ದೊಡ್ಡದಾದ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್‌ಎನಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ.

ಕಸ್ತೂರಿ ರಂಗನ್‌ ವರದಿ: ವಿರೋಧದ ನೆಲೆಗಳೇನು?

-

Profile
Ashok Nayak Sep 23, 2026 9:43 AM

ಟಿ.ದೇವಿದಾಸ್‌

ಕಾಡುಪಾಲು

ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಹಬ್ಬಿದ ಒಂದು ಪರ್ವತ ಶ್ರೇಣಿ. ಭಾರತದಷ್ಟೇ ಅಲ್ಲ, ಯುರೋಪ್ ದೇಶಗಳ ಮೇಲೂ ಭೌಗೋಳಿಕ ವಾಗಿ ಇದರ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಭಾವ ಮತ್ತು ಪರಿಣಾಮದ ವಿಸ್ತಾರ ವ್ಯಾಪ್ತಿಯನ್ನು ಇದು ಹೊಂದಿದೆ. ಪಶ್ಚಿಮಘಟ್ಟ ಪರ್ವತಶ್ರೇಣಿ, ಗುಜರಾತಿನ ತಪತಿ ನದಿ ಮೂಲದಿಂದ ಆರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಕನ್ಯಾಕುಮಾರಿ ಯವರೆಗೆ ಹಬ್ಬಿದ ಇದರ ಒಟ್ಟೂ ವಿಸ್ತೀರ್ಣವೇ 1,64,280 ಚಕಿಮೀ. ಪ್ರದೇಶದಲ್ಲಿ ಸುಮಾರು 59,940 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಪರಿಸರ ತಜ್ಞ ಮಾಧವ ಗಾಡ್ಗೀಳರ ಅಧ್ಯಕ್ಷತೆ ಯಲ್ಲಿ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿ ಪಡೆದ ವರದಿಯಲ್ಲಿ ಶೇ 94-97% ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಬೇಕೆಂದೂ ಮತ್ತು ಯಾವುದೇ ಅಭಿವೃದ್ಧಿ ಕೈಗೊಳ್ಳು ವಾಗ ಅಲ್ಲಿಯ ಪರಿಸರ, ಜೀವ ವೈವಿಧ್ಯತೆಯನ್ನು ಕೆಡಿಸದಿರುವ ಷರತ್ತಿನ ಮೇಲೆ ಅನುಮತಿ ನೀಡಬೇಕೆಂದು ಶಿಫಾರಸು ಮಾಡಿತು.

ತದನಂತರದಲ್ಲಿ, ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆ ನೀಗಿಸಲು ಕಸ್ತೂರಿ ರಂಗನ್ ಸಮಿತಿ ನೇಮಿಸಲಾಯಿತು. 10 ಸದಸ್ಯರ ಸಮಿತಿಯ ಜೊತೆ, ಕೆ.ಕಸ್ತೂರಿ ರಂಗನ್ ಸಿದ್ಧಪಡಿಸಿದ ಪಶ್ಚಿಮ ಘಟ್ಟಗಳ ಈ ವರದಿಯನ್ನು 2013ರ ಏಪ್ರಿಲ್ 15ರಂದು ಸರ್ಕಾರ ಸ್ವೀಕರಿಸಿತು. ಆಗಲೂ ಇಲಾಖೆಯ ಅಧಿಕಾರಿಗಳು ಅನುಷ್ಠಾನಕ್ಕೆ ಸಲಹೆ ನೀಡಿದರು. ಆದರೆ ರಾಜಕೀಯ ಕಾರಣಗಳು, ಜನರಿಗೆ ತೊಂದರೆಯಾಗುತ್ತದೆಂದು ಸರ್ಕಾರ ತೀರ್ಮಾನ ಕೈಗೊಳ್ಳಲಿಲ್ಲ.

ಇದನ್ನೂ ಓದಿ: ‌T Devidas Column: ಚುನಾವಣಾ ಆಯೋಗಕ್ಕೆ ಪ್ರಕಾಶ್ ರಾಜ್ ಒಂದು ಹೆಸರು, ಅಷ್ಟೆ!

ಸಮಿತಿ ಗುರುತಿಸಿರುವ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಸಾವಿರ ಚ.ಕಿ.ವ್ಯಾಪ್ತಿಯ ಪ್ರದೇಶ (36.49%) ಇಕೋಸೆನ್ಸಿಟಿವ್ ಏರಿಯಾ (ಇಎಸ್‌ಎ) ಕ್ಕೆ ಒಳಪಟ್ಟು ನಿರ್ಬಂಧಿತವಾಗಿರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಎಲ್ಲ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿ ಸಬೇಕು. 20000 ಚಮೀ ದೊಡ್ಡದಾದ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್‌ಎನಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ. ಕೇಂದ್ರ ಸರ್ಕಾರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯವು ಪ್ರಕಟಿಸಿದ ಅಧಿಸೂಚನೆಯಲ್ಲಿ. ಕರ್ನಾಟಕ ರಾಜ್ಯದ 1553ಕ್ಕೂ ಹೆಚ್ಚು ಹಳ್ಳಿಗಳ 20,668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸೇರಿದೆ.

ಮೊದಲ ಎರಡು ಕರಡು ಅಧಿಸೂಚನೆಯಲ್ಲಿ ಕೇರಳ ರಾಜ್ಯವೂ ಇಎಸ್‌ಎ ಪಟ್ಟಿಯಲ್ಲಿತ್ತು. ಆದರೆ ಮೂರನೆಯ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳ ಇಲ್ಲ. ಇದಕ್ಕೆ ಕಾರಣ, ಅಲ್ಲಿನ ಸರ್ಕಾರ ಸಲ್ಲಿಸಿರುವ ಮ್ಯಾಪ್ ಸಹಿತ ವಿಸ್ತೃತ ವರದಿ ಮತ್ತು ರಾಜಕೀಯ ಒತ್ತಡ. ಆದರೆ ಕರ್ನಾಟಕ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಿಲ್ಲ. ಒಂದು ಬಾರಿ ಸೂಕ್ಷ್ಮ ವಲಯವೆಂದು ಘೋಷಿಸಿದರೆ ಅಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ನಡೆಸುವಂತಿಲ್ಲ.

7

ರಾಜ್ಯ ಸರ್ಕಾರ ಸಂಪೂರ್ಣವಾಗಿ ತನ್ನ ಹತೋಟಿಯನ್ನು ಕಳೆದುಕೊಂಡು ಕೇಂದ್ರ ಸರ್ಕಾರದ ಸುಪರ್ದಿಗೆ ನೀಡಬೇಕಾಗುತ್ತದೆ. ಪಶ್ಚಿಮ ಘಟ್ಟದಲ್ಲಿ ಅಪರೂಪದ ಪ್ರಾಣಿಪಕ್ಷಿಗಳು, ಗಿಡಮೂಲಿಕೆ, ವನ್ಯಜೀವಿಗಳ ಸಂರಕ್ಷಣೆ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಡುತ್ತದೆ. ಅರಣ್ಯದ ಆದಿವಾಸಿ ಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ.

ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕಾಗುತ್ತದೆ. ಕಸ್ತೂರಿ ರಂಗನ್ ವರದಿಯ ಇತ್ತೀಚಿನ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯ ಪ್ರಕಾರ, ಕರ್ನಾಟಕದ ಒಟ್ಟು 20668 ಚದರ ಕಿಲೋಮೀಟರ್ (ಸುಮಾರು 20,66,800 ಹೆಕ್ಟೇರ್) ಪ್ರದೇಶವನ್ನು ಪರಿಸರ ಸೂಕ್ಷ ವಲಯ ಎಂದು ಗುರುತಿಸಲಾಗಿದೆ.

ಅಧಿಕೃತ ಕರಡು ಪ್ರತಿಯಲ್ಲಿ ನೇರವಾಗಿ ಜಿಲ್ಲಾವಾರು ಹೆಕ್ಟೇರ್ ವಿಸ್ತೀರ್ಣವನ್ನು ನೀಡುವ ಬದಲು, ಗ್ರಾಮಗಳ ಸಂಖ್ಯೆಯ ಆಧಾರದ ಮೇಲೆ ವಲಯಗಳನ್ನು ವಿಂಗಡಿಸಲಾಗಿದೆ. ಇತ್ತೀಚಿನ ಕರಡು ಅಧಿಸೂಚನೆಯಲ್ಲಿನ ಜಿಲ್ಲಾವಾರು ಪರಿಸರ ಸೂಕ್ಷ್ಮ ಗ್ರಾಮಗಳ ವಿವರ ಹೀಗಿದೆ: ಒಟ್ಟು 1449 ಗ್ರಾಮಗಳು. ಉತ್ತರ ಕನ್ನಡ- 566, ಶಿವಮೊಗ್ಗ- 446, ಚಿಕ್ಕಮಗಳೂರು-137, ಬೆಳಗಾವಿ- 62, ಕೊಡಗು- 53, ಮೈಸೂರು- 48, ದಕ್ಷಿಣ ಕನ್ನಡ- 43, ಉಡುಪಿ-34, ಹಾಸನ -30, ಚಾಮರಾಜ ನಗರ- 20 ಗ್ರಾಮ.

ಈ ಹಿಂದೆ ವರದಿಯ ಆರಂಭಿಕ ಹಂತದಲ್ಲಿ 1576 ಗ್ರಾಮಗಳನ್ನು ಗುರುತಿಸಲಾಗಿತ್ತು, ಆದರೆ ಇತ್ತೀಚಿನ ಕರಡು ಅಧಿಸೂಚನೆಯಲ್ಲಿ ಇದನ್ನು 1449 ಗ್ರಾಮಗಳಿಗೆ ಪರಿಷ್ಕರಿಸಲಾಗಿದೆ. ಒಟ್ಟು 20,66,800 ಹೆಕ್ಟೇರ್ ಪ್ರದೇಶದಲ್ಲಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು ಅತಿ ಹೆಚ್ಚು ಅರಣ್ಯ ಮತ್ತು ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದೆ.

ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಕಡಿಮೆ ಹೆಕ್ಟೇರ್ ವ್ಯಾಪ್ತಿಯನ್ನು ಒಳಗೊಂಡಿವೆ. ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿಯ ಕರಡು ಮೊದಲ ಅಧಿಸೂಚನೆ ಹೊರಡಿಸಿದ್ದು 2014ರ ಮಾ.10ರಂದು. ಅನಂತರ ಎರಡರಿಂದ 6ನೆಯ ಕರಡು ಅಧಿಸೂಚನೆಗಳು 2015, 2017, 2018, 2022, 2024ರ ಜುಲೈ 31ರಂದು ಹೊರಡಿಸಿತು.

ಏಳನೆಯ ಕರಡು ಅಧಿಸೂಚನೆಯನ್ನು 2026ರ ಜುಲೈ 27ರಂದು ಹೊರಡಿಸಿದೆ. ಇಷ್ಟಾದರೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿಲ್ಲ. ಜನವಿರೋಧ ಕಟ್ಟಿಕೊಳ್ಳುವ ಬದಲು 545 ದಿನಗಳ ಗಡುವು ಸಮೀಪಿಸುತ್ತಿದ್ದಂತೆ ಹೊಸ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಅಧಿಸೂಚನೆಯ ವಿರುದ್ಧ ಕೇಂದ್ರಕ್ಕೆ ಮತ್ತೆ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ.

ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ, ಸಿಮೆಂಟು ಉತ್ಪಾದನೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆಗಳಿಗೆ ಪೂರ್ಣ ನಿಷೇಧ. ಇರುವ ಗಣಿಗಾರಿಕೆ ಮುಚ್ಚಲು 5 ವರ್ಷ ಕಾಲಾವಕಾಶ. ಕೆಂಪು ವಲಯದ ಕೈಗಾರಿಕೆಗಳಿಗೆ ಪೂರ್ಣ ನಿಷೇಧ. ಕಿತ್ತಳೆ ವಲಯ ಕೈಗಾರಿಕೆ ಗಳಲ್ಲಿ ಆಹಾರ, ಹಣ್ಣು ಸಂಸ್ಕರಣಾ ಕೈಗಾರಿಕೆಗಳಿಗೆ ವಿನಾಯಿತಿ. 20 ಸಾವಿರ ಚದರ ಮೀಟರಿಗಿಂತ ಅಧಿಕ ವಿಸ್ತಾರದ ಬಡಾವಣೆ, ಟೌನ್‌ಶಿಪ್ ಮತ್ತು ಕಟ್ಟಡಗಳಿಗೆ ನಿಷೇಧ. ಉಷ್ಣ ಸ್ಥಾವರಗಳಿಗೆ ಅವಕಾಶವಿಲ್ಲ, ಕೆಲವು ಷರತ್ತುಗಳ ಮೇಲೆ ಜಲವಿದ್ಯುತ್ ಯೋಜನೆಗಳಿಗೆ ಅವಕಾಶ.

ಕಡಿಮೆ ನೀರಿನ ಹರಿವು ಸಮಯದಲ್ಲಿ ಕೂಡ ಶೇ.30 ಜೀವಿ ಪರಿಸರಾತ್ಮಕ ಹರಿವಿರುವಂತೆ ನೋಡಿಕೊಳ್ಳು ವುದು. ನದಿಯ ಹರಿವು, ಅರಣ್ಯ, ಜೀವ ವೈವಿಧ್ಯದ ಮೇಲೆ ಬೀರುವ ಪರಿಣಾಮ, ನಷ್ಟದ ಬಗ್ಗೆ ಅಧ್ಯಯನ ಬಳಿಕವೇ ಯಾವುದೇ ಯೋಜನೆಗೆ ಅವಕಾಶ. ಒಪ್ಪಬಹುದಾದ ವಿಚಾರ ಗಳೂ ಇದರಲ್ಲಿವೆ. ಒಪ್ಪಲಾಗದ ವಿಚಾರಗಳು ಇದರಲ್ಲಿವೆ. ಆದರೂ ವಿರೋಧಕ್ಕೆ ಮುಖ್ಯ ಕಾರಣವೇನು? ಈ ವರದಿ ರೂಪಿಸಿರುವುದರ ದೋಷವಿದೆ. ಇದು ಜನ ಸಮುದಾಯದ ಬೇಡಿಕೆ ಯಲ್ಲ.

ವರದಿ ಸಿದ್ಧಪಡಿಸುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿಲ್ಲ. ಈ ವರದಿ ಅನುಷ್ಠಾನಗೊಂಡರೆ ಪರಿಸರ ಸಂರಕ್ಷಣೆ ಅಸಾಧ್ಯ. ಹಾಗಾಗಿ, ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ವಿರೋಧಿಸ ಬೇಕು. ಇದೊಂದು ಅವೈeನಿಕ ವರದಿ. ಪರಿಸರ ಉಳಿಸುವ ನೆಪದಲ್ಲಿ ಆದಿವಾಸಿಗಳ ಬದುಕನ್ನು ಅತಂತ್ರ ಮಾಡುವ ಹುನ್ನಾರ. ಮುಖ್ಯವಾಗಿ ಲಕ್ಷಾಂತರ ಮಂದಿ ಕಾಡಿನ ಮರಗಳನ್ನು ನಂಬಿ ಬದುಕುವುದಕ್ಕಿಂತ ಕಾಡುಜೇನು, ಅಂಟುವಾಳ, ಸಸ್ಯಜನ್ಯ ಸಂಪತ್ತನ್ನು ಅವಲಂಬಿಸಿದ್ದಾರೆ.

ಆದ್ದರಿಂದ ಇವರ್ಯಾರೂ ಕಾಡನ್ನು ನಾಶಮಾಡ ಲಾರರು. ಇಂಥವರು ಕಾಡಲ್ಲಿ ಇರುವುದ ರಿಂದಲೇ ಅಳಿದುಳಿದ ಕಾಡು ರಕ್ಷಣೆಯಾಗುತ್ತಿದೆ. ಮೇಲಾಗಿ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಕಾನೂನುಗಳ ಮೂಲಕವೇ ಅರಣ್ಯ ಸಂರಕ್ಷಣೆ ಸಾಧ್ಯವಿದೆ. ಪಶ್ಚಿಮ ಘಟ್ಟ ಉಳಿಸಬೇಕೆಂಬ ಕೂಗೆಬ್ಬಿಸಿ, ಅದಕ್ಕಾಗಿ ಹೋರಾಡಿದವರೇ ಮಲೆನಾಡಿಗರು.

ಇಂದಿಗೂ ಅರಣ್ಯ ಉಳಿದಿರುವುದು ಅರಣ್ಯವಾಸಿಗಳಿಂದಲೇ ಹೊರತು ಅಧಿಕಾರಿಗಳು, ಸರ್ಕಾರ ಗಳಿಂದಲ್ಲ ಎಂಬುದು ಜನರ ಭಾವನೆ. ತಪ್ಪೇನಿದೆ ಇದರಲ್ಲಿ? ನಿತ್ಯ ಬದುಕಿಗೆ ಅಡ್ಡಿಯಾಗುವ ಯೋಜನೆಯನ್ನು ವಿರೋಧಿಸುವುದು ಕೂಡ ಪ್ರಜಾಸತ್ತಾತ್ಮಕ ಹಕ್ಕಿನ ಚಲಾವಣೆಯಲ್ಲವೆ? ಈಗ ಕರ್ನಾಟಕ ರಾಜ್ಯದ 1449 ಹಳ್ಳಿಗಳಲ್ಲಿ ಆತಂಕವುಂಟಾಗಿದೆ.

ಪ್ರಾಣಿ, ಪಕ್ಷಿ, ಮರಗಳಂತೆ ಮನುಷ್ಯನಿಗೂ ಜೀವನ ನಡೆಸಲು ಅವಕಾಶವಿರಬೇಕು. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕಾಡಿನ ವಾಸಿಸುವ ಮಲೆನಾಡಿಗರ ಬದುಕನ್ನೇ ಕಸಿದುಕೊಂಡಂತಾಗುತ್ತ ದೆಂಬುದು ಸರ್ಕಾರಕ್ಕೂ ಗೊತ್ತಿಲ್ಲದ ಸಂಗತಿಯೇನಲ್ಲ, ಅಥವಾ ಅರ್ಥವಾಗದ ವಿಚಾರವೇನಲ್ಲ. ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುವ ಕಾಯಕವನ್ನು ಯಾರೂ ಮಾಡಲಾರರು.

ಮಾಡಲೂ ಬಾರದು. ಆದರೆ ವರದಿಯ ಅನುಷ್ಠಾನಕ್ಕೂ ಮೊದಲು ಜನರ ಬದುಕಿಗಾಗುವ ಸಮಸ್ಯೆಯೇನು ಎಂಬುದು ಸರ್ಕಾರದ ಮುಖ್ಯ ಆದ್ಯತೆಯಾಗಬೇಕು. ಇಂದು ಸೂಕ್ಷ್ಮವಿದೆ; ಗಾಡ್ಗೀಳ್ ವರದಿ, ಅದಕ್ಕೆ ಎದುರಾದ ಜನವಿರೋಧ, ಮತ್ತೆ ಅದನ್ನು ಸರಿಪಡಿಸಲು ರಚನೆಯಾದ ವಿಜ್ಞಾನಿ ಕಸ್ತೂರಿ ರಂಗನ್ ವರದಿ, ಇದಕ್ಕೂ ಎದುರಾದ ಜನವಿರೋಧದ ಒಟ್ಟೂ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಸರ್ಕಾರ ಎಡವಿದ್ದು ಮಾತ್ರ ಸತ್ಯ.

ಹಾಗಂತ ಸರ್ಕಾರಕ್ಕೆ ಜನವಿರೋಧದ ಪ್ರಜ್ಞೆಯ ನೆಲೆಗಳು ಅರ್ಥವಾಗಲಿಲ್ಲ ಎಂದೇನಿಲ್ಲ. ಎರಡೂ ವರದಿಗಳು ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕ್ರಮ-ವಿಧಾನಗಳ ಬಗ್ಗೆ ಸವಿವರವಾಗಿ ಹೇಳುತ್ತವೆ. ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಣೆ ಮಾಡಬೇಕು. ಅಭಿವೃದ್ಧಿ ಕಾರ್ಯಗಳಿಗೆ ಜೀವ ವೈವಿಧ್ಯದ ಸಂರಕ್ಷಣೆಯ ಹೊಣೆಗಾರಿಕೆಯ ಷರತ್ತನ್ನು ವಿಧಿಸಿಯೇ ಅನುಮತಿ ನೀಡಬೇಕೆನ್ನುತ್ತದೆ.

ಇಎಸ್‌ಎಯಿಂದ ಹತ್ತು ಕಿಮೀ ವ್ಯಾಪ್ತಿಯಲ್ಲಿ (ಹತ್ತು ಕಿಮೀ ವ್ಯಾಪ್ತಿ ಬೇಡ, ಒಂದು ಒಂದೂವರೆ ಕಿಮೀ ವ್ಯಾಪ್ತಿಗೆ ಅದನ್ನು ಇಳಿಸಿ ಎಂಬುದು ವಿರೋಧದ ಒಟ್ಟೂ ಅಭಿಪ್ರಾಯ) ಯಾವುದೇ ಕಾಮಗಾರಿ ನಡೆಸು ವಂತಿಲ್ಲ. ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು ಅವಕಾಶವಿಲ್ಲ. ಜನವಸತಿ ನಿರ್ಮಿಸಲು ಅವಕಾಶ ವಿಲ್ಲ. ಪರಿಸರಕ್ಕೆ ಮತ್ತು ಜೀವವೈವಿಧ್ಯಕ್ಕೆ ಮಾರಕವಾದ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂಬುದು ಎರಡೂ ವರದಿಯಲ್ಲೂ ಸುಸ್ಪಷ್ಟ.

ಹಾಗಾದರೆ ಈ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳುವ ಅನ್ಯಮಾರ್ಗಗಳು ಯಾವುವು ಎಂಬುದು ಸ್ಪಷ್ಟವಾಗಬೇಕಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಬದುಕನ್ನು ಕಟ್ಟಿಕೊಂಡಿರುವ ಜನರಿಗೆ ಪರ್ಯಾಯ ಮಾರ್ಗವೇನು ಎಂಬುದೇ ಜನರ ಪ್ರಶ್ನೆ. ಸರ್ಕಾರದ ನೀತಿಯನ್ನು ವಿರೋಧಿ ಸುವ ಪ್ರತಿ ಅಭಿಯಾನಗಳು, ಹೋರಾಟಗಳು ಜನರಿಗೆ ಯಾವ ಉತ್ತರವನ್ನು ಸಮರ್ಪಕವಾಗಿ, ಸರಿಯಾಗಿ ನೀಡಲು ಸಾಧ್ಯವಿದೆ ಎಂಬುದನ್ನು ಆಲೋಚಿಸಿಯೇ ಸರ್ಕಾರ ಇಂಥ ದೊಡ್ಡಮಟ್ಟದ ಕ್ರಮಗಳನ್ನು ಜರುಗಿಸಬೇಕು.

ವನ್ಯಜೀವಿಗಳು, ಅರಣ್ಯ ಸಂಪತ್ತು ಇರಬೇಕು, ಉಳಿಬೇಕು, ಬೆಳೆಯಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಜನರಲ್ಲಿ ಇಲ್ಲವೆಂದೇ ತಿಳಿಯುವುದು ಸರ್ಕಾರದ ಪೆದ್ದುತನವಾಗುತ್ತದೆ. ವರದಿಯ ಪ್ರಕಾರ ಊರನ್ನು ಬಫರ್‌ ಝೋನ್ ಗಳೆಂದು ಪರಿಗಣಿಸಿದರೆ ಯಾವ ಅಭಿವೃದ್ಧಿಯೂ ಆಗಲಾರದು. ಹಾಗಂತ ಮನುಷ್ಯನ ಇರವಿಗೆ ಅಗತ್ಯವೂ ಅನಿವಾರ್ಯವೂ ಆದ ಕಾಡನ್ನು ನಾಶಮಾಡಿ ಊರಿನ ಅಭಿವೃದ್ಧಿ ಸಾಧ್ಯವೇ ಇಲ್ಲ. ಎಲ್ಲವೂ ಇದ್ದ ಹಾಗೆ ಇರಬೇಕೆನ್ನುವಲ್ಲಿ ಯಾವ ಅರ್ಥವೂ ಇಲ್ಲ. ಕಾರಣ ಆ ಪ್ರದೇಶದ ವಾಸಿಗಳಿಗೆ ಹೊರಗಿನ ಸಂಪರ್ಕ ಕ್ರಮೇಣ ಕಡಿದು ಹೋಗುವ ಭಯ. ಈಗಾಗಲೇ ಹುಲಿಯೋಜನೆ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ.

ಅದರಲ್ಲೂ ಬಫರ್ ಝೋನ್ ಮಾಡುವುದಕ್ಕೆ ಮುಂದಾದರೆ ಈಗಾಗಲೇ ಬದುಕನ್ನು ಕಟ್ಟಿಕೊಂಡ ವರ ಗತಿಯೇನು? ಕಸ್ತೂರಿ ರಂಗನ್ ವರದಿ ಜಾರಿ ವಿರೋಧದ ನೆಲೆಯಲ್ಲಿ ಮಲೆನಾಡಿನಲ್ಲಿ ಒಂದು ಕ್ರಾಂತಿಕಾರಕ ಸಂಚಲನವನ್ನು ಹುಟ್ಟಿಸಿರುವುದಂತೂ ಸತ್ಯ!