ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕಿಬೂತ್: ಇಸ್ರೇಲಿನ ಮರುಭೂಮಿಯಲ್ಲಿ ಹುಟ್ಟಿದ ಸಮಾಜದ ಮಾದರಿ

ಕಿಬೂತ್‌ನ ಎಲ್ಲ ಆಸ್ತಿಗಳು, ಭೂಮಿ, ಕಾರ್ಖಾನೆಗಳು, ಉಪಕರಣಗಳು ಮತ್ತು ಕೃಷಿ ಸಂಪನ್ಮೂಲ ಗಳು ಸಮುದಾಯಕ್ಕೆ ಸಾಮೂಹಿಕವಾಗಿ ಸೇರಿರುತ್ತವೆ. ಯಾರೊಬ್ಬರೂ ವೈಯಕ್ತಿಕವಾಗಿ ಆಸ್ತಿ ಯನ್ನು ಹೊಂದಿರುವುದಿಲ್ಲ. ಕಿಬೂತ್‌ನ ಸದಸ್ಯರೆಲ್ಲರೂ ಸಮಾನತೆಯ ತತ್ವದಲ್ಲಿ ಒಟ್ಟಿಗೆ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ.

ಕಿಬೂತ್: ಇಸ್ರೇಲಿನ ಮರುಭೂಮಿಯಲ್ಲಿ ಹುಟ್ಟಿದ ಸಮಾಜದ ಮಾದರಿ

-

ಇದೇ ಅಂತರಂಗ ಸುದ್ದಿ

ಕಿಬೂತ್‌ನ ಸದಸ್ಯರೆಲ್ಲರೂ ಸಮಾನತೆಯ ತತ್ವದಲ್ಲಿ ಒಟ್ಟಿಗೆ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಸದಸ್ಯರ ಅಗತ್ಯತೆಗಳು ಏನೇ ಇರಲಿ, ಅವರಿಗೆ ಸಮಾನವಾದ ಪಾಲನ್ನು ನೀಡಲಾಗುತ್ತದೆ. ಎಲ್ಲರಿಗೂ ಉಚಿತ ವಸತಿ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತದೆ. ಒಂದು ಅನನ್ಯ ಸಾಮೂಹಿಕ ಸಮುದಾಯದ ನೆಲೆ ಯಾಗಿರುವ ಕಿಬೂತ್‌ನಲ್ಲಿ ಸಾಮಾನ್ಯವಾಗಿ, ಸದಸ್ಯರು ಒಟ್ಟಿಗೆ ಒಂದು ದೊಡ್ಡ ಊಟದ ಕೋಣೆಯಲ್ಲಿ ಊಟ ಮಾಡುತ್ತಾರೆ. ಇದನ್ನು ಚದರ್ ಓಖೆಲ್ ಎಂದು ಕರೆಯ ಲಾಗುತ್ತದೆ. ಇದು ಇಡೀ ಸಮುದಾಯವು ಒಟ್ಟಿಗೆ ಊಟ ಮಾಡುವ ಕೇಂದ್ರಬಿಂದು.

ಇಸ್ರೇಲಿನ ಸಮಾಜ ಜೀವನದ ಬೆನ್ನೆಲುಬು ಅಂದ್ರೆ ಕಿಬೂತ್ ಅಥವಾ ಕಿಬುಟ್ಜ್ (Kibbutz ). ಹೀಬ್ರೂ ಭಾಷೆಯಲ್ಲಿ ಕಿಬೂತ್ ಅಂದ್ರೆ ‘ಒಟ್ಟಿಗೆ ಸೇರುವುದು’ ಎಂದರ್ಥ. ಇದು ಇಸ್ರೇಲ್‌ನ ಒಂದು ವಿಶಿಷ್ಟ ಮತ್ತು ಐತಿಹಾಸಿಕವಾದ ಸಮುದಾಯ ವಸಾಹತು (Communal Settlement) ಎನ್ನಬಹುದು.

ಇದು ಸಾಮೂಹಿಕ ಜೀವನ, ಸಮಾನತೆ ಮತ್ತು ಸಮುದಾಯದ ಸಹಕಾರದ ತತ್ವಗಳ ಮೇಲೆ ರೂಪುಗೊಂಡಿರುವ ಒಂದು ಸಾಂಕ ವ್ಯವಸ್ಥೆ. ಕಿಬೂತ್ ಒಂದು ರೀತಿಯ ಸಾಮಾಜಿಕ-ಆರ್ಥಿಕ ಪ್ರಯೋಗವಾಗಿದ್ದು, ಅದು ಸಾಮೂಹಿಕ ಮಾಲೀಕತ್ವ (Collective Ownership) ದ ಬುನಾದಿಯ ಮೇಲೆ ನಿಂತಿದೆ.

ಕಿಬೂತ್‌ನ ಎಲ್ಲ ಆಸ್ತಿಗಳು, ಭೂಮಿ, ಕಾರ್ಖಾನೆಗಳು, ಉಪಕರಣಗಳು ಮತ್ತು ಕೃಷಿ ಸಂಪನ್ಮೂಲಗಳು ಸಮುದಾಯಕ್ಕೆ ಸಾಮೂಹಿಕವಾಗಿ ಸೇರಿರುತ್ತವೆ. ಯಾರೊಬ್ಬರೂ ವೈಯಕ್ತಿಕವಾಗಿ ಆಸ್ತಿಯನ್ನು ಹೊಂದಿರುವುದಿಲ್ಲ. ಕಿಬೂತ್‌ನ ಸದಸ್ಯರೆಲ್ಲರೂ ಸಮಾನತೆ ಯ ತತ್ವದಲ್ಲಿ ಒಟ್ಟಿಗೆ ವಾಸಿಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ.

ಸದಸ್ಯರ ಅಗತ್ಯತೆಗಳು ಏನೇ ಇರಲಿ, ಅವರಿಗೆ ಸಮಾನವಾದ ಪಾಲನ್ನು ನೀಡಲಾಗುತ್ತದೆ. ಎಲ್ಲರಿಗೂ ಉಚಿತ ವಸತಿ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸ ಲಾಗುತ್ತದೆ.

ಇದನ್ನೂ ಓದಿ: Vishweshwar Bhat Column: ಒಂದು ಕಾಲಕ್ಕೆ ಸತ್ತು ಹೋದ ಭಾಷೆಗೆ ಮರುಜೀವ ನೀಡಿದ ಇಸ್ರೇಲಿಗರು !

ಒಂದು ಅನನ್ಯ ಸಾಮೂಹಿಕ ಸಮುದಾಯದ ನೆಲೆಯಾಗಿರುವ ಕಿಬೂತ್‌ನಲ್ಲಿ ಸಾಮಾನ್ಯ ವಾಗಿ, ಸದಸ್ಯರು ಒಟ್ಟಿಗೆ ಒಂದು ದೊಡ್ಡ ಊಟದ ಕೋಣೆಯಲ್ಲಿ (Dining Hall) ಊಟ ಮಾಡುತ್ತಾರೆ. ಇದನ್ನು ಚದರ್ ಓಖೆಲ್ ಎಂದು ಕರೆಯಲಾಗುತ್ತದೆ. ಇದು ಇಡೀ ಸಮುದಾಯವು ಒಟ್ಟಿಗೆ ಊಟ ಮಾಡುವ ಕೇಂದ್ರಬಿಂದು.

ಸುಮಾರು ಮೂವತ್ತು-ನಲವತ್ತು ವರ್ಷಗಳ ಹಿಂದಿನ ತನಕ, ಎಲ್ಲರ ಬಟ್ಟೆಗಳನ್ನು ಒಟ್ಟಿಗೆ ಒಂದೇ ದೊಡ್ಡ ಲಾಂಡ್ರಿಯಲ್ಲಿ ತೊಳೆದು, ಇಸಿ ಮಾಡಿ, ವಿತರಿಸುವ ಒಂದು ಕೇಂದ್ರೀಕೃತ ವ್ಯವಸ್ಥೆ ಇತ್ತು. ಸದಸ್ಯರು ಕೃಷಿ, ಕೈಗಾರಿಕೆ, ಅಡುಗೆಮನೆ ಅಥವಾ ಮಕ್ಕಳ ಆರೈಕೆ ಸೇರಿದಂತೆ ಸಮುದಾಯದ ನಿರ್ವಹಣೆಗೆ ಅಗತ್ಯವಾದ ಯಾವುದೇ ಕೆಲಸವನ್ನು ಮಾಡಬೇಕಾಗಿತ್ತು.

ಸಾಮಾಜಿಕ ಸಮಾನತೆ ಮತ್ತು ಪರಸ್ಪರ ಸಹಕಾರದ ತತ್ವಗಳ ಮೇಲೆ ಕೆಲಸ ಮಾಡುವ ಸಾಂಪ್ರದಾಯಿಕ ಕಿಬೂತ್‌ನಲ್ಲಿ, ಸಮುದಾಯದ ಎಲ್ಲ ಆಸ್ತಿಗಳು ಸಾಮೂಹಿಕ ಒಡೆತನ ದಲ್ಲಿರುತ್ತವೆ ಮತ್ತು ಸದಸ್ಯರ ಎಲ್ಲ ಅಗತ್ಯಗಳನ್ನು (ವಸತಿ, ಆಹಾರ, ಶಿಕ್ಷಣ, ಆರೋಗ್ಯ ರಕ್ಷಣೆ) ಸಮುದಾಯವೇ ನೋಡಿಕೊಳ್ಳುತ್ತದೆ.

Img

ಇಸ್ರೇಲ್‌ನ ಸಮಾಜ ಮತ್ತು ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಿಬೂತ್‌ಗಳು, ಆರಂಭದಲ್ಲಿ ಕೃಷಿಯನ್ನು ಅವಲಂಬಿಸಿದ್ದರೂ, ಹೆಚ್ಚಿನ ಆಧುನಿಕ ಕಿಬೂತ್‌ಗಳು ಈಗ ಕೈಗಾರಿಕೆಗಳು ಮತ್ತು ಹೈಟೆಕ್ ಉದ್ಯಮಗಳಲ್ಲಿ ತೊಡಗಿವೆ.

ಇತ್ತೀಚಿನ ದಶಕಗಳಲ್ಲಿ, ಮೂಲ ಸಾಮೂಹಿಕ ನಿಯಮಗಳಲ್ಲಿ ಅನೇಕ ಬದಲಾವಣೆ ಗಳನ್ನು (ಖಾಸಗೀಕರಣ) ಅಳವಡಿಸಿಕೊಂಡಿದ್ದರೂ, ಇವು ಇಸ್ರೇಲಿನ ಸಮಾಜದ ಅಂತಃಶಕ್ತಿ ಎಂಬುದು ಗಮನಾರ್ಹ. ಯಹೂದಿಗಳಿಗೆ ತಮ್ಮದೇ ಆದ ಒಂದು ಪ್ರತ್ಯೇಕ ನೆಲೆ ಎಂಬುದು ಇರಲಿಲ್ಲ. ಅವರು ಜಗತ್ತಿನ ಹಲವು ದೇಶಗಳಲ್ಲಿ ಹರಿದು ಹಂಚಿ ಹೋಗಿದ್ದರು. ಆಗಿನ್ನೂ ಇಸ್ರೇಲ್ ಎಂಬ ಪ್ರತ್ಯೇಕ ದೇಶ ಅಸ್ತಿತ್ವಕ್ಕೆ ಬಂದಿರಲಿಲ್ಲ.

ಸಮಾನ ಚಿಂತನೆ ಹೊಂದಿದ ಹತ್ತಾರು ಯುವಕರು ಸೇರಿ, ಒಂದು ಸಂಘವನ್ನು ಸ್ಥಾಪಿಸಿ ಕೊಂಡು, ಆ ಮೂಲಕ ಸಾಂಕ ಚಟುವಟಿಕೆ ಮಾಡಲು ನಿರ್ಧರಿಸಿದ ಫಲವೇ ಕಿಬೂತ್. ನಮ್ಮ ಸಹಕಾರ ತತ್ವವೇ ಕಿಬೂತ್ ಚಿಂತನೆಯ ತಳಹದಿ ಎನ್ನಬಹುದು. ಆದರೆ ಕಿಬೂತ್ ಆಚರಣೆಯಲ್ಲಿ ಇನ್ನಷ್ಟು ಬಲವಾದ ಭಾವನಾತ್ಮಕ ನೆಲೆಗಟ್ಟನ್ನು ಹೊಂದಿರುವುದು ಗಮನಾರ್ಹ.

ಮೊದಲ ಕಿಬೂತ್ ಅನ್ನು 1910ರಲ್ಲಿ, ಗ್ಯಾಲಿಲೀ ಸಮುದ್ರದ ಬಳಿ ಡೆಗಾನಿಯಾ ಎಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು. ಮೊದಲಿಗೆ ಇವು ಕೃಷಿಯ ಮೇಲೆ ಹೆಚ್ಚು ಅವಲಂಬಿತ ವಾಗಿದ್ದವು ಮತ್ತು ಸಮಾಜವಾದಿ/ಜಿಯೋನಿಸ್ಟ್ ತತ್ವಗಳ ಪ್ರಬಲ ಪ್ರಭಾವವನ್ನು ಹೊಂದಿ ದ್ದವು.

ಒಂದು ಕಿಬೂತ್‌ನಲ್ಲಿ ನೂರು-ಇನ್ನೂರು ಜನರು ನಿರ್ದಿಷ್ಟ ಪ್ರದೇಶದಲ್ಲಿ ಸೇರಿ ಕೃಷಿ ಚಟುವಟಿಕೆಯನ್ನು ಆರಂಭಿಸುವುದು ಮತ್ತು ಬಂದ ಫಸಲನ್ನು ಮಾರಾಟ ಮಾಡಿ ಎಲ್ಲರೂ ಸಮಾನವಾಗಿ ಹಂಚಿಕೊಂಡು ಸಹಜೀವನ ನಡೆಸುವುದು ಆಶಯವಾಗಿತ್ತು. 1960 ಮತ್ತು 1970ರ ದಶಕದಲ್ಲಿ ಕಿಬೂತ್ ಸುವರ್ಣ ಯುಗವನ್ನು ಕಂಡಿತು. ಅಲ್ಲಿ ಅವುಗಳು ಇಸ್ರೇಲ್‌ನ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.

ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಕಿಬೂತ್ ಸದಸ್ಯರು, ಬಿಡುವಿನ ವೇಳೆಯಲ್ಲಿ ಪರಸ್ಪರರಿಗೆ ನೆರವಾಗುತ್ತಿದ್ದರು, ಕೌಟುಂಬಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಇದು ಪರಸ್ಪರರ ಸಂಬಂಧವನ್ನು ಬಿಗಿಯಾಗಿ ಬೆಸೆಯಲು ಸಹಕಾರಿಯಾಯಿತು. ಇದು ನಿಧಾನವಾಗಿ ಗುಡಿ ಕೈಗಾರಿಕೆಗಳ ಬೆಳವಣಿಗೆಗೂ ನಾಂದಿಯಾಯಿತು. ಕಾಲ ಕ್ರಮೇಣ, ಅನೇಕ ಕಿಬೂತ್‌ಗಳು ತಮ್ಮ ಸಂಪೂರ್ಣ ಕೃಷಿ ಆರ್ಥಿಕತೆಯಿಂದ ಕೈಗಾರಿಕೆ ಮತ್ತು ಉನ್ನತ ತಂತ್ರಜ್ಞಾನದ (Hi-tech) ಉದ್ಯಮಗಳಿಗೆ ಬದಲಾದವು. ಕಿಬೂತ್‌ಗಳು ಹೆಚ್ಚು ವೈಯಕ್ತಿಕ ಮಾಲೀಕತ್ವ ಮತ್ತು ವೇತನ ವಿಭಜನೆಯನ್ನು ಅಳವಡಿಸಿಕೊಂಡು ಸುಧಾರಣೆಗಳಿಗೆ ಒಳಗಾದವು.

ಐತಿಹಾಸಿಕವಾಗಿ, ಕಿಬೂತ್‌ನಲ್ಲಿ ಮಕ್ಕಳು ತಮ್ಮ ಸಮಯವನ್ನು ಹೆತ್ತವರೊಂದಿಗೆ ಕಳೆಯುವ ಬದಲು, ದಿನದ ಬಹುಪಾಲು ವೇಳೆಯನ್ನು ಬೇರೆ ಮನೆಯಲ್ಲಿ, ಸಮುದಾಯದ ಆರೈಕೆದಾರರೊಂದಿಗೆ ಕಳೆಯುತ್ತಿದ್ದರು. ಇದನ್ನು ‘ಸಾಮೂಹಿಕ ಮಕ್ಕಳ ಮನೆಗಳು’ ಎಂದು ಕರೆಯಲಾಗುತ್ತಿತ್ತು. ಇದು ತಾಯಂದಿರಿಗೆ ಕೆಲಸ ಮಾಡಲು, ಹೆಚ್ಚಿನ ಸಮಯವನ್ನು ನೀಡಲು ಮತ್ತು ಸಮಾನತೆಯ ತತ್ವವನ್ನು ಬಲಪಡಿಸುವ ಉದ್ದೇಶ ಹೊಂದಿತ್ತು.

ಇತ್ತೀಚಿನ ದಿನಗಳಲ್ಲಿ ಇದರ ರೂಪರೇಷೆ ಬದಲಾಗಿದ್ದರೂ, ನೂರಾರು ವರ್ಷಗಳವರೆಗೆ ಈ ಪರಂಪರೆಯೇ ಮುಂದುವರಿದುಕೊಂಡು ಬಂದಿತು. ಇಸ್ರೇಲ್ ಸ್ಥಾಪನೆಯಾದ 1948ರಲ್ಲಿ ಕಿಬೂತ್‌ಗಳು ದೇಶದ ಶೇ.ಎಂಟರಷ್ಟು ಜನಸಂಖ್ಯೆಯನ್ನು ಹೊಂದಿದ್ದವು. ಆದರೆ ಅವುಗಳ ಪ್ರಭಾವ ಅಪಾರ. ಕಿಬೂತ್‌ನಲ್ಲಿ ಆಸ್ತಿ ಖಾಸಗಿಯಲ್ಲ- ಎಲ್ಲವೂ ಸಾಮೂಹಿಕ.

ಒಬ್ಬರು ಕೆಲಸ ಮಾಡಿದರೆ, ಎಲ್ಲರಿಗೂ ಲಾಭ. ಮಕ್ಕಳನ್ನು ತಾಯಂದಿರಿಂದ ಪ್ರತ್ಯೇಕವಾಗಿ ಸಾಮೂಹಿಕ ಮನೆಗಳಲ್ಲಿ ಬೆಳೆಸುತ್ತಿದ್ದರು. ಆದರೆ ಈಗ ಇದು ಬದಲಾಗಿದೆ. ಇದು ಕಮ್ಯೂ ನಿಸಂನ ಒಂದು ರೂಪವೇ? ಹೌದು, ಆದರೆ ಯಹೂದಿ ಸಂಸ್ಕೃತಿಯೊಂದಿಗೆ ಮಿಶ್ರಿತ. ಕಾರ್ಲ್ ಮಾರ್ಕ್ಸ್‌ ಮತ್ತು ಮೋಶೆಯ ಧರ್ಮಗ್ರಂಥಗಳ ಸಂಗಮ ಎನ್ನಬಹುದು!

ಆರಂಭಿಕ ಕಿಬೂತ್ ಮಾದರಿಯಲ್ಲಿ, ಸದಸ್ಯರಿಗೆ ವೇತನ ಸಿಗುತ್ತಿರಲಿಲ್ಲ. ಬದಲಾಗಿ, ಸಮುದಾಯವು ಪ್ರತಿಯೊಬ್ಬ ಸದಸ್ಯನಿಗೆ ಅಗತ್ಯವಿರುವ ಎಲ್ಲವನ್ನೂ- ಬಟ್ಟೆ, ದಿನಸಿ, ಶೂ, ಶೌಚಾಲಯ ವಸ್ತುಗಳು, ವೈದ್ಯಕೀಯ ಆರೈಕೆ ಮತ್ತು ಕನಿಷ್ಠ ವಾರ್ಷಿಕ ಭತ್ಯೆ, ಪಾಕೆಟ್ ಮನಿ.. ಹೀಗೆ ಎಲ್ಲವನ್ನೂ ಸದಸ್ಯರಿಗೆ ಒದಗಿಸುತ್ತಿತ್ತು. ಪ್ರತಿಯೊಬ್ಬ ಸದಸ್ಯನು ‘ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡಬೇಕು ಮತ್ತು ಅವನ ಅಗತ್ಯಕ್ಕೆ ಅನುಗುಣ ವಾಗಿ ಸ್ವೀಕರಿಸಬೇಕು’ ಎಂಬ ತತ್ವವನ್ನು ಅನುಸರಿಸುತ್ತಿದ್ದರು.

ಒಬ್ಬರ ಮನೆಯ ಮಕ್ಕಳನ್ನು ಎಲ್ಲರೂ ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳು ತ್ತಿದ್ದರು. ಹಾಗೆಯೇ ವೃದ್ಧರ ಯೋಗಕ್ಷೇಮ ಎಲ್ಲರ ಹೊಣೆಗಾರಿಕೆಯಾಗಿತ್ತು. ಒಬ್ಬರ ಮನೆ ಯಲ್ಲಿ ಮದುವೆಯಾದರೆ ಎಲ್ಲರೂ ತಮ್ಮದೇ ಮನೆಯ ಕಾರ್ಯಕ್ರಮವೇನೋ ಎಂಬ ರೀತಿಯಲ್ಲಿ ಪಾಲ್ಗೊಳ್ಳುವುದು ಅಲ್ಲಿನ ರೀತಿ-ರಿವಾಜು.

ಇಸ್ರೇಲ್‌ನ ಸ್ಥಾಪನೆಯ ಮೊದಲ ದಶಕಗಳಲ್ಲಿ, ಕಿಬೂತ್‌ಗಳು ಗಡಿ ಪ್ರದೇಶಗಳಲ್ಲಿ ಇದ್ದು, ದೇಶದ ರಕ್ಷಣೆಗೆ ಒಂದು ಪ್ರಮುಖ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇಸ್ರೇಲಿನ ಸೇನೆ ಕಿಬೂತ್ ನೆರವನ್ನು ಅಪೇಕ್ಷಿಸಿದ ಸಾಕಷ್ಟು ನಿದರ್ಶನಗಳಿವೆ. ಇಸ್ರೇಲ್‌ನ ಅನೇಕ ಉನ್ನತ ಮಿಲಿಟರಿ ನಾಯಕರು ಮತ್ತು ಪ್ರಧಾನ ಮಂತ್ರಿಗಳು (ಉದಾಹರಣೆಗೆ, ಡೇವಿಡ್ ಬೆನ್-ಗುರಿಯನ್ ಸ್ವತಃ ನಿವೃತ್ತಿಯ ನಂತರ ಕಿಬೂತ್‌ನಲ್ಲಿ ವಾಸವಾಗಿದ್ದರು) ಕಿಬೂತ್ ಹಿನ್ನೆಲೆ ಯಿಂದ ಬಂದವರು.

ಕಿಬೂತ್‌ನಲ್ಲಿ ಜನಿಸಿದ ಯಹೂದ್ ಬರಾಕ್ ಕೂಡ ಇಸ್ರೇಲಿನ ಪ್ರಧಾನಿಯಾಗಿದ್ದರು. 1950-70ರ ದಶಕಗಳಲ್ಲಿ ಕಿಬೂತ್‌ಗಳು ಇಸ್ರೇಲ್‌ನ ಕೃಷಿ ಉತ್ಪಾದನೆಯ ಶೇ.40ರಷ್ಟು ಕೊಡುಗೆ ಯನ್ನು ನೀಡುತ್ತಿದ್ದವು. ಡ್ರಿಪ್ ಇರಿಗೇಷನ್ (ಹನಿ ನೀರಾವರಿ) ತಂತ್ರವನ್ನು ಸಿಮ್ಚಾ ಬ್ಲಾಸ್ ಎಂಬ ಕಿಬೂತ್ ಸದಸ್ಯ ಕಂಡುಹಿಡಿದ. ಇದು ಇಂದು ವಿಶ್ವದಾದ್ಯಂತ ಬರಡು ಭೂಮಿ ಯನ್ನು ಹಸಿರಾಗಿಸುತ್ತಿದೆ.

ಕಿಬೂತ್‌ಗಳು ಕೇವಲ ಆಹಾರ ಉತ್ಪಾದಿಸಲಿಲ್ಲ- ನೆಟಾಫಿಮ್ ಎಂಬ ಕಂಪನಿಯ ಮೂಲಕ ತಾಂತ್ರಿಕ ಕ್ರಾಂತಿಯನ್ನೂ ತಂದವು. ಇಂದು ‘ನೆಟಾ-ಮ’ ನೂರಾರು ದೇಶಗಳಿಗೆ ಹನಿ ನೀರಾವರಿ ಉಪಕರಣಗಳನ್ನು ಪೂರೈಸುವ ಜಾಗತಿಕ ಸಂಸ್ಥೆಯಾಗಿ ಬೆಳೆದಿದೆ. ಕಿಬೂತ್‌ನಲ್ಲಿ ಸ್ತ್ರೀ-ಪುರುಷ ಸಮಾನರು.

1990ರ ದಶಕದ ಮಹಿಳೆಯರು ಟ್ರಾಕ್ಟರ್ ಓಡಿಸುತ್ತಿದ್ದರು, ಆಯುಧ ಹಿಡಿದು ದೇಶವನ್ನು ರಕ್ಷಿಸುತ್ತಿದ್ದರು. ಇಂದಿಗೂ ಇಸ್ರೇಲ್ ಸೈನ್ಯದಲ್ಲಿ ಮಹಿಳಾ ಸೈನಿಕರ ಸಂಖ್ಯೆ ಹೆಚ್ಚಿರುವುದಕ್ಕೆ ಕಿಬೂತ್ ಸಂಸ್ಕೃತಿಯೇ ಕಾರಣ. ಇಸ್ರೇಲ್‌ನ ಮೊದಲ ಮಹಿಳಾ ಪ್ರಧಾನಿ, ಗೋಲ್ಡಾ ಮೇಯಿರ್ ಕೂಡ ಕಿಬೂತ್‌ನಲ್ಲಿ ಬೆಳೆದವಳು. ಅವರು ಹೇಳಿದ್ದು- “ಕಿಬೂತ್ ನನ್ನನ್ನು ರಾಜಕಾರಣಿಯನ್ನಾಗಿ ಮಾಡಿತು, ಏಕೆಂದರೆ ಅಲ್ಲಿ ನಾಯಕತ್ವ ಲಿಂಗಕ್ಕೆ ಸಂಬಂಧಿಸಿ ದ್ದಲ್ಲ".

1948ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿಬೂತ್‌ಗಳು ಮುಂಚೂಣಿಯಲ್ಲಿದ್ದವು. ಪಾಮಾಚ್ (ಕಿಬೂತ್ ಸೈನಿಕ ದಳ) ಇಸ್ರೇಲ್ ರಕ್ಷಣಾ ಪಡೆಯ (ಐಡಿಎಫ್) ಮೂಲವಾಯಿತು. ಇಂದಿಗೂ ಐಡಿಎಫ್ ಅತ್ಯುನ್ನತ ಅಧಿಕಾರಿಗಳಲ್ಲಿ ಅನೇಕರು ಕಿಬೂತ್ ಹಿನ್ನೆಲೆಯವರು. ಕಿಬೂತ್‌ ಗಳಲ್ಲಿ ಹುಟ್ಟಿದ ಹಬೀಮಾ ಥಿಯೇಟರ್, ಇಸ್ರೇಲ್‌ನ ರಾಷ್ಟ್ರೀಯ ನಾಟಕ ಕಂಪನಿ. ಹೀಬ್ರೂ ಭಾಷೆಯ ಪುನರುಜ್ಜೀವನಕ್ಕೆ ಕಿಬೂತ್ ಶಾಲೆಗಳು ಮಹತ್ವದ ಪಾತ್ರ ವಹಿಸಿದವು.

ಕಿಬೂತ್‌ಗಳು ಮರುಭೂಮಿಯನ್ನು ಅರಣ್ಯವನ್ನಾಗಿ ಮಾಡಿದವು. ಯತಿರ್ ಫಾರೆಸ್ಟ್ ಎಂಬ ಮೂವತ್ತು ಲಕ್ಷ ಮರಗಳ ಅರಣ್ಯವನ್ನು ಕಿಬೂತ್ ಸದಸ್ಯರು ನೆಟ್ಟರು. ವೈಜ್‌ಮನ್ ಇನ್ಸ್ಟಿಟ್ಯೂಟ್‌ನ ಸಂಶೋಧಕರಲ್ಲಿ ಅನೇಕರು ಕಿಬೂತ್‌ನಿಂದ ಬಂದವರು.

ಕ್ಯಾನ್ಸರ್ ಸಂಶೋಧನೆಯಲ್ಲಿ ಇವರ ಕೊಡುಗೆ ಅಪಾರ. ಸಾಮೂಹಿಕ ಮಾದರಿ ಯಾಗಿದ್ದರೂ, ಅನೇಕ ಕಿಬೂತ್‌ಗಳು ಕೇವಲ ಕೃಷಿಯಲ್ಲದೇ, ಕೈಗಾರಿಕೆ ಮತ್ತು ತಂತ್ರಜ್ಞಾನ ದಲ್ಲಿ (ಉದಾಹರಣೆಗೆ, ಪ್ಲಾಸ್ಟಿಕ್, ಆಹಾರ ಸಂಸ್ಕರಣೆ ಮತ್ತು ನೀರಾವರಿ ತಂತ್ರಜ್ಞಾನ) ಅಪಾರ ಯಶಸ್ಸನ್ನು ಕಂಡಿವೆ. ಇಸ್ರೇಲ್‌ನ ಒಟ್ಟು ರಫ್ತಿನಲ್ಲಿ ಕಿಬೂತ್‌ಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ.

ಅನೇಕ ಕಿಬೂತ್‌ಗಳು ನೀರಾವರಿ ತಂತ್ರeನ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ರಕ್ಷಣಾ ಉದ್ಯಮ ದಂಥ ಯಶಸ್ವಿ ಹೈಟೆಕ್ ಕೈಗಾರಿಕೆಗಳನ್ನು ಸ್ಥಾಪಿಸಿವೆ. ಪ್ರಪಂಚದಾದ್ಯಂತ ಜನಪ್ರಿಯ ವಾಗಿರುವ ಅನೇಕ ಇಸ್ರೇಲಿ ಉತ್ಪನ್ನಗಳು (ಉದಾಹರಣೆಗೆ, ಟೊಮೆಟೊ ಸಾಸ್, ಡ್ರಿಪ್ ಇರಿಗೇಷನ್ ಸಿಸ್ಟಮ್‌ಗಳು) ಕಿಬೂತ್ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುತ್ತವೆ.

ಈಗಲೂ ಕಿಬೂತ್‌ನ ಎಲ್ಲ ಪ್ರಮುಖ ನಿರ್ಧಾರಗಳನ್ನು ಸಾಮಾನ್ಯವಾಗಿ, ವಾರಕ್ಕೊಮ್ಮೆ ನಡೆಯುವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಬಹುಮತದ ಮೂಲಕ ತೆಗೆದುಕೊಳ್ಳ ಲಾಗುತ್ತದೆ. ಜಾಗತೀಕರಣ ಮತ್ತು ಆಧುನೀಕರಣದ ಹೊಡೆತಕ್ಕೆ ಸಿಕ್ಕು ಇತ್ತೀಚಿನ ದಶಕ ಗಳಲ್ಲಿ, ಸುಮಾರು ಶೇ.80ರಷ್ಟು ಕಿಬೂತ್‌ಗಳು ಭಾಗಶಃ ಖಾಸಗೀಕರಣಗೊಂಡಿವೆ.

ಇದರರ್ಥ ಸದಸ್ಯರು ಈಗ ವೇತನವನ್ನು ಪಡೆಯುತ್ತಾರೆ ಹಾಗೂ ತಮ್ಮ ಊಟ ಮತ್ತು ಇತರ ಸೇವೆಗಳಿಗೆ ಪಾವತಿಸಬೇಕಾಗುತ್ತದೆ. ಇಸ್ರೇಲ್‌ನ ಒಟ್ಟು ಜನಸಂಖ್ಯೆಯಲ್ಲಿ ಕಿಬೂತ್‌ನ ಸದಸ್ಯರು ಕೇವಲ ಶೇ.೩ ರಷ್ಟಿದ್ದರೂ, ದೇಶದ ಇತಿಹಾಸ, ಆರ್ಥಿಕತೆ ಮತ್ತು ಸಂಸ್ಕೃತಿಯ ಮೇಲೆ ಅವರ ಪ್ರಭಾವವು ಅತಿ ದೊಡ್ಡದಾಗಿದೆ.

ಇತ್ತೀಚಿನ ಅಂದಾಜಿನ ಪ್ರಕಾರ, ಇಸ್ರೇಲ್‌ನಲ್ಲಿ ಸುಮಾರು 250 ರಿಂದ 270 ಕಿಬೂತ್‌ಗಳಿವೆ. ಈ ಸಮುದಾಯಗಳಲ್ಲಿ ಒಟ್ಟಾಗಿ ಸುಮಾರು ಒಂದೂವರೆ ಲಕ್ಷ ಜನರು ವಾಸಿಸುತ್ತಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಅವುಗಳ ಸ್ವರೂಪ ಬದಲಾಗಿದ್ದರೂ (ಸಾಮೂಹಿಕ ಜೀವನ ಶೈಲಿ ಯಿಂದ ಖಾಸಗೀಕರಣದತ್ತ), ಅವು ಇಸ್ರೇಲ್‌ನ ಸಮಾಜ ಮತ್ತು ಆರ್ಥಿಕತೆಯಲ್ಲಿ ಇಂದಿಗೂ ಪ್ರಮುಖ ಪಾತ್ರ ವಹಿಸುತ್ತಿವೆ.

1980ರ ಆರ್ಥಿಕ ಬಿಕ್ಕಟ್ಟಿನ ನಂತರ ಕಿಬೂತ್‌ಗಳು ಖಾಸಗೀಕರಣಕ್ಕೆ ಒಳಗಾಗಿದ್ದು ನಿಜ. ಈಗ ಬಹುತೇಕ ಕಿಬೂತ್‌ಗಳಲ್ಲಿ ಸದಸ್ಯರು ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ, ಖಾಸಗಿ ಮನೆ ಗಳನ್ನು ಹೊಂದಿದ್ದಾರೆ. ಆದರೆ ಮೂಲ ತತ್ವಗಳು- ಪರಸ್ಪರ ಸಹಾಯ, ಶಿಕ್ಷಣ, ಸಮುದಾಯ- ಹಾಗೇ ಉಳಿದಿವೆ.

ಉದಾಹರಣೆಗೆ ಕಿಬೂತ್ ಸ್ಡೆ ಎಲಿಯಾಹು- ಇದು ಪ್ಲಾಸ್ಟಿಕ್ ಉದ್ಯಮದಲ್ಲಿ ವಿಶ್ವದರ್ಜೆಯ ಕಂಪನಿಯನ್ನು ನಡೆಸುತ್ತದೆ. ಕಿಬೂತ್ ಗನ್ ಶಮುಯೆಲ್ ತನ್ನ ಜ್ಯೂಸ್ ಬ್ರಾಂಡ್‌ನೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿದೆ. ಆದರೆ ಲಾಭದ ಜತೆಗೆ ಸಮಾಜಸೇವೆಯೂ ಮುಂದುವರಿದಿದೆ. ಅನೇಕ ಕಿಬೂತ್‌ಗಳು ಸ್ವಯಂಸೇವಕರಿಗೆ ತೆರೆದಿವೆ, ವಿದೇಶಿ ಪ್ರವಾಸಿಗ ರನ್ನು ಸ್ವಾಗತಿಸುತ್ತವೆ.

ಇಂದು ಕಿಬೂತ್‌ಗಳ ಸಂಖ್ಯೆ ಹೆಚ್ಚು-ಕಮ್ಮಿ ಸ್ಥಿರವಾಗಿದೆ. ಗಮನಾರ್ಹ ಸಂಗತಿ ಅಂದ್ರೆ ಅವು ಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಯುವಜನರು ನಗರಗಳತ್ತ ಒಲವು ತೋರುತ್ತಾರೆ. ಆದರೆ ಕೋವಿಡ್ ಸಮಯದಲ್ಲಿ ಕಿಬೂತ್‌ಗಳು ಸಾಮೂಹಿಕ ಪರೀಕ್ಷೆ, ಆಹಾರ ವಿತರಣೆ, ವೃದ್ಧರ ಆರೈಕೆಗೆ ಮಾದರಿಯಾದವು. ಇದು ಕಿಬೂತ್ ಮಾದರಿ ಇನ್ನೂ ಪ್ರಸ್ತುತ ಎಂಬುದನ್ನು ತೋರಿಸುತ್ತದೆ.

ಭವಿಷ್ಯದಲ್ಲಿ ಕಿಬೂತ್‌ಗಳು ‘ಎಕೋ-ವಿಲೇಜ್’ಗಳಾಗಿ ಬದಲಾಗಬಹುದು ಎನ್ನಲಾಗುತ್ತಿದೆ. ಕಿಬೂತ್ ಕೇಟುರಾ ಈಗಾಗಲೇ ಸೌರಶಕ್ತಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿ ಯಲ್ಲಿದೆ. ಅರಬ್-ಯಹೂದಿ ಸಹಬಾಳ್ವೆಯ ಪ್ರಯೋಗಗಳೂ ನಡೆಯುತ್ತಿವೆ. ಕಿಬೂತ್ ಇಸ್ರೇಲ್‌ನ ಸಮಾಜ ವ್ಯವಸ್ಥೆಯಲ್ಲಿ ಕೇವಲ ಒಂದು ಭಾಗವಲ್ಲ. ಅದು ನಿಸ್ಸಂದೇಹವಾಗಿ ಆ ದೇಶದ ಆತ್ಮ.

ಇದು ಯಹೂದಿ ಜನತೆಯ ಸಹನಶೀಲತೆ, ಸೃಜನಶೀಲತೆ ಮತ್ತು ಸಾಮೂಹಿಕತೆಯ ಸಂಕೇತ. ಒಬ್ಬ ಕಿಬೂತ್ ಸದಸ್ಯ ಹೇಳಿದಂತೆ, ‘ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ, ಏಕೆಂ ದರೆ ಒಟ್ಟಿಗೆ ಬದುಕುವುದೇ ನಮ್ಮ ಧರ್ಮ’. ಇಸ್ರೇಲಿನ ಅಂತಃಶಕ್ತಿಯಿರುವುದು ಕಿಬೂತ್‌ ನಲ್ಲಿ ಎಂಬುದು ಹಮಾಸ್ ಉಗ್ರರಿಗೂ ಗೊತ್ತಿತ್ತು.

ಹೀಗಾಗಿ ಅವರು ಎರಡು ವರ್ಷಗಳ ಹಿಂದೆ (2023ರ ಅಕ್ಟೋಬರ್ ಏಳರಂದು) ನಾಲ್ಕೈದು ಕಿಬೂತ್ ಮೇಲೆ ಏಕಾಏಕಿ ಆಕ್ರಮಣ ಮಾಡಿದ್ದು. ಒಂದು ಕಿಬೂತ್ ಮೇಲೆ ದಾಳಿ ಮಾಡಿ ದರೆ ಅದು ದೇಶದೆಡೆ ಇರುವ ಕಿಬೂತ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಮೂಲಕ ಅದು ದೇಶದ ಆತ್ಮ ಎಂದು ಕರೆಯಿಸಿಕೊಂಡ ಎಲ್ಲ ಕಿಬೂತ್‌ಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ ಎಂದು ಭಾವಿಸಿಯೇ ಆ ಕ್ರಮಕ್ಕೆ ಮುಂದಾಗಿದ್ದು.

ಇಸ್ರೇಲ್‌ಗೆ ಹೋದಾಗ ನೀವು ಒಂದು ತೋಟಕ್ಕೆ ಹೋದರೆ, ಅಲ್ಲಿ ನಿಮಗೆ ಕಾಣುವುದು ಬರೀ ಕೃಷಿ ಚಟುವಟಿಕೆಯಷ್ಟೇ ಅಲ್ಲ. ಅಲ್ಲಿ ನಿಜವಾಗಿ ಅರಳುವುದು ಸಮಾನತೆ ಮತ್ತು ಸಹ ಜೀವನ.