ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಂತ್ರವೆಂಬ ಮನದ ರಕ್ಷಾಕವಚ

ಮಂತ್ರೋಚ್ಚಾರಣೆಯ ಬಳಿಕ ನಿನಗೊಂದು ರೀತಿಯ ಆಹ್ಲಾದತೆ ಮತ್ತು ಪರವಶತೆ ಅನುಭವಕ್ಕೆ ಬರುತ್ತವೆ. ಇದು ನಿನ್ನ ಮನಸ್ಸನ್ನು ನಿರಾಳವಾಗಿಸಿ, ಒಂದು ಅದ್ಭುತ ಶಮನಕಾರಿಯಂತೆ ಕೆಲಸ ಮಾಡುತ್ತದೆ. ನಿನ್ನ ಮನಸ್ಸು ಉದ್ವೇಗಗೊಂಡಿದ್ದಾಗ, ಮಂತ್ರಪಠಣವು ಚಿತ್ತವನ್ನು ಬೇರೆಡೆಗೆ ಹರಿಸಿ, ಸಮಸ್ಯೆಯನ್ನು ತಣ್ಣಗಿನ ಮನಸ್ಸಿನಿಂದ ಅವಲೋಕಿಸಿ ಸರಿಯಾದ ನಿರ್ಧಾರ ತೆಗೆದು ಕೊಳ್ಳಲು ನೆರವಾಗುತ್ತದೆ

ಆತ್ಮವಿಶ್ವಾಸವನ್ನು ಹೆಚ್ಚಿಸುವ ಮಂತ್ರವೆಂಬ ಮನದ ರಕ್ಷಾಕವಚ

-

ಒಂದೊಳ್ಳೆ ಮಾತು

ಒಬ್ಬ ಯುವ ಶಿಷ್ಯ, ಮಾನಸಿಕ ಒತ್ತಡ ಮತ್ತು ಉದ್ವೇಗದಿಂದ ಬಳಲುತ್ತಿದ್ದನು. ಅವನಿಗೆ ಕಲಿಯುವಿಕೆಯಲ್ಲಿ ಏಕಾಗ್ರತೆ ಸಿದ್ಧಿಸುತ್ತಿರಲಿಲ್ಲ, ಸಣ್ಣ ಪುಟ್ಟ ಸೋಲುಗಳಿಗೂ ಖಿನ್ನತೆ ಮೂಡುತ್ತಿತ್ತು. ಇದರಿಂದ ದೈಹಿಕವಾಗಿಯೂ ಆತ ಬಳಲಿದ್ದನು. ಈ ಎಲ್ಲ ಸಂಕಷ್ಟಗಳಿಗೆ ಪರಿಹಾರ ಹುಡುಕುತ್ತಾ ತನ್ನ ಆಶ್ರಮದ ಗುರುಗಳ ಬಳಿ ಬಂದು ಅಳಲು ತೋಡಿಕೊಂಡ.

“ಗುರುಗಳೇ, ನನಗೆ ಏಕಾಗ್ರತೆಯೇ ಇಲ್ಲ, ಸದಾ ಆತಂಕ. ನನ್ನ ಶರೀರದ ತೇಜಸ್ಸೇ ಮಾಸಿ ಹೋಗಿದೆ. ನೀವು ಮಂತ್ರ ಜಪಿಸಲು ಹೇಳುತ್ತೀರಿ. ಆದರೆ ಕೇವಲ ಶಬ್ದಗಳ ಪಠಣದಿಂದ ಇಷ್ಟೆ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ?" ಎಂದು ಕೇಳಿದ.

ಗುರುಗಳು ನಸುನಕ್ಕು, ಅವನಿಗೆ ಒಂದು ಲೋಟದಲ್ಲಿ ನೀರನ್ನು ತರಲು ಹೇಳಿದರು. ನಂತರ ಆ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ, “ಈಗ ಇದನ್ನು ಕುಡಿ" ಎಂದರು. ಶಿಷ್ಯ ಕುಡಿದು ಮುಖ ಸಿಂಡರಿಸಿದ. ಗುರುಗಳು ಹೇಳಿದರು, “ನೋಡು, ನೀರಿನಲ್ಲಿ ಕರಗಿದ ಉಪ್ಪು ಕಣ್ಣಿಗೆ ಕಾಣು ತ್ತಿಲ್ಲ, ಆದರೆ ಅದರ ಪ್ರಭಾವ ನೀರಿನ ರುಚಿಯ ಮೇಲೆ ಆಗಿದೆ. ಹಾಗೆಯೇ ಮಂತ್ರದ ಶಬ್ದಗಳು ಕಣ್ಣಿಗೆ ಕಾಣದಿದ್ದರೂ, ಅದರ ಧ್ವನಿ, ಶ್ವಾಸ ಮತ್ತು ಲಯಬದ್ಧವಾದ ಕಂಪನಗಳು ನಮ್ಮ ದೇಹದ ಚೈತನ್ಯ ಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುವ ಶಕ್ತಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ".

ಇದನ್ನೂ ಓದಿ: Roopa Gururaj Column: ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಧೀಮಂತ ಮಹಿಳೆ: ಡಾ.ಅನಂದಿಬಾಯಿ ಜೋಶಿ

ಶಿಷ್ಯನ ಆಸಕ್ತಿ ಹೆಚ್ಚಿತು. ಗುರುಗಳು ವಿವರಿಸಲು ಶುರುಮಾಡಿದರು: “ನೋಡು, ಪ್ರತಿ ಸ್ತೋತ್ರ, ಮಂತ್ರದ ಉಚ್ಚಾರವೂ ಕೇವಲ ಪದಗಳಲ್ಲ. ಇದನ್ನು ಪಠಿಸಲು ನಾಲಿಗೆಗೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ.

ಇದು ಧ್ವನಿಪೆಟ್ಟಿಗೆ, ತುಟಿಗಳು ಮತ್ತು ಧ್ವನಿ ಹೊರಡಿಸುವ ಅಂಗಗಳನ್ನು ಸಕ್ರಿಯ ಗೊಳಿಸು ತ್ತದೆ. ಈ ಕ್ರಿಯೆಯಿಂದ ಉಂಟಾಗುವ ಕಂಪನವು ಮಿದುಳಿನ ಅಧೋಮಸ್ತಿಷ್ಕ ಗ್ರಂಥಿ ಯನ್ನು (Hypothalamus) ಪ್ರಚೋದಿಸುತ್ತದೆ. ಈ ಗ್ರಂಥಿಯಿಂದ ಬಿಡುಗಡೆಯಾಗುವ ಅಂತಃಸ್ರಾವಗಳು (Hormones) ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಮನಸ್ಸನ್ನು ಸಂತೋಷದಿಂದ ಇಡುತ್ತವೆ.

ಆದ್ದರಿಂದಲೇ ಮಂತ್ರೋಚ್ಚಾರಣೆಯ ಬಳಿಕ ನಿನಗೊಂದು ರೀತಿಯ ಆಹ್ಲಾದತೆ ಮತ್ತು ಪರವಶತೆ ಅನುಭವಕ್ಕೆ ಬರುತ್ತವೆ. ಇದು ನಿನ್ನ ಮನಸ್ಸನ್ನು ನಿರಾಳವಾಗಿಸಿ, ಒಂದು ಅದ್ಭುತ ಶಮನಕಾರಿಯಂತೆ ಕೆಲಸ ಮಾಡುತ್ತದೆ. ನಿನ್ನ ಮನಸ್ಸು ಉದ್ವೇಗಗೊಂಡಿದ್ದಾಗ, ಮಂತ್ರಪಠಣವು ಚಿತ್ತವನ್ನು ಬೇರೆಡೆಗೆ ಹರಿಸಿ, ಸಮಸ್ಯೆಯನ್ನು ತಣ್ಣಗಿನ ಮನಸ್ಸಿನಿಂದ ಅವಲೋಕಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತದೆ".

ಶಿಷ್ಯ ಎಲ್ಲವನ್ನೂ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದ. ಇದೇ ಸಮಯವೆಂದು ಗುರುಗಳು ಮುಂದುವರಿಸುತ್ತಾ, “ನಮ್ಮ ದೇಹದಲ್ಲಿರುವ, ಚಕ್ರಗಳೆಂದು ಕರೆಯಲ್ಪಡುವ ಶಕ್ತಿಕೇಂದ್ರ ಗಳನ್ನು ಸಮತೋಲನದಲ್ಲಿರಿಸಲು ಮಂತ್ರಗಳು ಸಹಕಾರಿ. ಶಕ್ತಿಯ ಏರು ಪೇರಾದಾಗ ದೇಹದಲ್ಲಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಮಂತ್ರಪಠಣ ಈ ಶಕ್ತಿಗಳನ್ನು ಮೊದಲಿನ ಸ್ಥಿತಿಗೆ ತಂದು, ಹೃದಯದ ಕ್ಷಮತೆ ಹೆಚ್ಚಿಸಿ, ಮಿದುಳನ್ನು ನಿರಾಳವಾಗಿಸುತ್ತದೆ. ಉಸಿರಾಟವನ್ನು ಸರಾಗಗೊಳಿಸುತ್ತದೆ. ಇದು ನಿನ್ನ ಕಲಿಯುವಿಕೆಯನ್ನು ಸಹ ಸುಲಭವಾಗಿಸುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಬದುಕಿನ ಸೋಲಿನಿಂದ ಉಂಟಾದ ಖಿನ್ನತೆ ಮತ್ತು ನಿರುತ್ಸಾಹವನ್ನು ಹೋಗಲಾಡಿಸಲು ಮಿದುಳಿಗೆ ಸಕಾರಾತ್ಮಕ ಭಾವನೆ ಮೂಡಿಸುವ ಕಂಪನಗಳು ಬಿಡುಗಡೆಯಾಗುತ್ತವೆ. ನಿನ್ನ ಮೊಗದಲ್ಲಿ ರಕ್ತಪರಿ ಚಲನೆ ಹೆಚ್ಚಿ, ವಿಷಕಾರಿ ವಸ್ತುಗಳು ನಿವಾರಣೆಯಾಗಿ, ಹೊಸರಕ್ತ ತುಂಬಿಕೊಳ್ಳುವುದರಿಂದ ತೇಜಸ್ಸು ಸಹ ಹೆಚ್ಚುತ್ತದೆ" ಎಂದರು. ಶಿಷ್ಯನಿಗೆ ಅರಿವಾಯಿತು- ಮಂತ್ರ ಕೇವಲ ಶಬ್ದವಲ್ಲ, ಅದು ದೇಹ ಮತ್ತು ಮನಸ್ಸನ್ನು ಬೆಸೆಯುವ ಮಹತ್ವದ ವಿಜ್ಞಾನ ಎಂದು.

“ಮನನಾತ್ ತ್ರಾಯತೇ ಇತಿ ಮಂತ್ರಃ ಅಂದರೆ, ಮನಸ್ಸಿನಿಂದ ಪದೇ ಪದೆ ನೆನೆಯುತ್ತಾ, ಜಪಿಸುವುದರಿಂದ ಯಾವುದು ನಮಗೆ ರಕ್ಷಣೆ ಕೊಡುತ್ತದೆಯೋ ಅದೇ ಮಂತ್ರ" ಎಂದು ಹೇಳಿದ ಗುರುಗಳು ಕಣ್ಣು ಮುಚ್ಚಿ ಮತ್ತೆ ಧ್ಯಾನಕ್ಕೆ ಕುಳಿತರು.

ಈಗ ಶಿಷ್ಯನ ಅನುಮಾನ-ಆತಂಕಗಳೆಲ್ಲವೂ ನಿವಾರಣೆಯಾಗಿ ಗುರುಗಳು ಹೇಳಿದ ಮಂತ್ರ ವನ್ನು ಪಠಿಸಲು ಅವನು ಕೂಡ ಧ್ಯಾನಸ್ಥನಾಗಿ ಏಕಾಗ್ರತೆಯಿಂದ ಕುಳಿತನು. ಅತಿಯಾದ ಒತ್ತಡದ ಈ ಜೀವನದಲ್ಲಿ, ದಿನಕ್ಕೆ ಹತ್ತು ನಿಮಿಷಗಳ ಕಾಲ ಯಾವುದಾದರೊಂದು ಮಂತ್ರ ಅಥವಾ ಸ್ತೋತ್ರವನ್ನು ಏಕಾಗ್ರತೆಯಿಂದ ಪಠಿಸಿ ನೋಡಿ. ಅದು ನಿಮ್ಮ ಮಿದುಳಿಗೆ ವಿಶ್ರಾಂತಿ ನೀಡುವುದಲ್ಲದೆ, ಆತ್ಮವಿಶ್ವಾಸವನ್ನು ಹೆಚ್ಚಿಸಿ ಬದುಕಿನ ಸೋಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ. ನಮ್ಮ ಸನಾತನ ಧರ್ಮ ಮತ್ತು ಹಿರಿಯರು ನೀಡಿದ ಈ ವರವನ್ನು ಉಪಯೋಗಿಸಿ ಕೊಳ್ಳುವ ಜಾಣ್ಮೆ ನಮಗಿರಬೇಕು.