ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಜೆಡಿಎಸ್‌ ರಥ ಹತ್ತಲು ಈಗ ಕುಮಾರಣ್ಣ ರೆಡಿ

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ‘ಆಂಗ್ರಿ ಯಂಗ್‌ಮ್ಯಾನ್’ ತರಹ ಮುಗಿ ಬಿದ್ದ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಮೌನವಾದ ರೀತಿ ಜೆಡಿಎಸ್ ಪಾಳಯ ಮಂಕಾಗುವಂತೆ ಮಾಡಿತ್ತು. ಹೀಗಾಗಿ ಕರ್ನಾಟಕದಿಂದ ದೂರವೇ ಉಳಿದು, ದಿಲ್ಲಿಯಲ್ಲಿ ಸೆಟ್ಲಾಗಿದ್ದ ಕುಮಾರಸ್ವಾಮಿ ಅವರನ್ನು ಕರ್ನಾಟಕದ ನೆಲಕ್ಕೆ ಸೆಳೆಯಲು ಜೆಡಿಎಸ್‌ನ ಕೆಲ ಶಾಸಕರು ಯತ್ನಿಸಿದ್ದಾರೆ.

R T Vittalmurthy Column: ಜೆಡಿಎಸ್‌ ರಥ ಹತ್ತಲು ಈಗ ಕುಮಾರಣ್ಣ ರೆಡಿ

-

ಮೂರ್ತಿಪೂಜೆ

ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧದ ಜೆಡಿಎಸ್‌ನ ಹೋರಾಟ ಹೇಗಿರಬೇಕು ಅಂತ ಬ್ಲೂ ಪ್ರಿಂಟು ಕೊಟ್ಟಿರುವ ಕುಮಾರಸ್ವಾಮಿಯವರು, ಹೋರಾಟದ ಸಲುವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ತಾವೇ ಬರುವುದಾಗಿ ಘೋಷಿಸಿ ಪಕ್ಷದ ಕಾರ್ಯಕರ್ತರು ‘ಖುಷ್’ ಆಗುವಂತೆ ಮಾಡಿದ್ದಾರೆ.

ಕಳೆದ ವಾರ ಬೆಂಗಳೂರಿನ ಜೆಪಿ ಭವನದಲ್ಲಿ ಜಾತ್ಯತೀತ ಜನತಾದಳದ ಕೋರ್ ಕಮಿಟಿ ಸಭೆ ನಡೆದಿದೆ. ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ, ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅಬ್ಬರಿಸಿದ್ದನ್ನು ನೋಡಿ ಅಲ್ಲಿ ಹಾಜರಿದ್ದವರು ಖುಷಿಯಾಗಿzರಂತೆ. ಕಾರಣ? ಕಳೆದ ಕೆಲ ಕಾಲದಿಂದ ಕುಮಾರಸ್ವಾಮಿ ಮೌನವಾಗಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ‘ಆಂಗ್ರಿ ಯಂಗ್‌ಮ್ಯಾನ್’ ತರಹ ಮುಗಿಬಿದ್ದ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಮೌನವಾದ ರೀತಿ ಜೆಡಿಎಸ್ ಪಾಳಯ ಮಂಕಾಗುವಂತೆ ಮಾಡಿತ್ತು. ಹೀಗಾಗಿ ಕರ್ನಾಟಕದಿಂದ ದೂರವೇ ಉಳಿದು, ದಿಲ್ಲಿಯಲ್ಲಿ ಸೆಟ್ಲಾಗಿದ್ದ ಕುಮಾರಸ್ವಾಮಿ ಅವರನ್ನು ಕರ್ನಾಟಕದ ನೆಲಕ್ಕೆ ಸೆಳೆಯಲು ಜೆಡಿಎಸ್‌ನ ಕೆಲ ಶಾಸಕರು ಯತ್ನಿಸಿದ್ದಾರೆ.

ಆದರೆ ಅಂಥ ಯತ್ನಗಳಿಗೆ ಸ್ವತಃ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು ಬ್ರೇಕ್ ಹಾಕಿದ್ದಲ್ಲದೆ “ಅಕ್ಟೋಬರ್ ಅಂತ್ಯದವರೆಗೆ ಕುಮಾರಣ್ಣನವರು ವಿಶ್ರಾಂತಿ ಪಡೆಯಲಿ. ಅಲ್ಲಿಯವರೆಗೆ ಸುಮ್ಮನಿರಿ" ಎಂದಿದ್ದಾರೆ. ಅಲ್ಲಿಗೆ ಜೆಡಿಎಸ್ ಪಾಳಯ ಇನ್ನಷ್ಟು ಮಂಕಾಗಿದೆಯಲ್ಲದೆ ಮುಂದೇನು? ಎಂಬ ಚಿಂತೆಯಲ್ಲಿ ಮುಳುಗಿದೆ. ಆದರೆ ಕಳೆದ ವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಗೆ ಹಾಜರಾದ ಕುಮಾರಸ್ವಾಮಿ ಅವರು, ತಮ್ಮ ದೀರ್ಘಕಾಲದ ವಿಶ್ರಾಂತಿಗೆ ಕಾರಣ ವಿವರಿಸಿದ್ದಲ್ಲದೆ, “ನನ್ನ ದೇಹದ ತೂಕವನ್ನು ಇಳಿಸಲು ಹೋದಾಗ ಅನಿಮಲ್ ವೈರಸ್ ಅಟ್ಯಾಕ್ ಆಗಿದೆ. ಆದರೆ ಅದನ್ನು ಡಯಾಗ್ನೈಸ್ ಮಾಡಲು ವಿಳಂಬವಾಗಿದ್ದರಿಂದ ಸಮಸ್ಯೆ ಆಗಿದೆ. ಯಾವಾಗ ಹೀಗಾಯಿತೋ, ಟ್ರೀಟ್‌ಮೆಂಟ್ ಶುರು ಮಾಡಿದ ವೈದ್ಯರು ಕೆಲ ತಿಂಗಳ ಕಾಲ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: R T Vittalmurthy Column: ರಾಹುಲ್‌ ಗಾಂಧಿಯವರಿಗೆ ಸಿದ್ದು ಹೇಳಿದ್ದೇನು ?

ಅವರು ನೀಡಿದ ಸಲಹೆಯಂತೆ ನಡೆದುಕೊಂಡಿದ್ದರಿಂದ ನಾನೀಗ ಫುಲ್ಲು ಗುಣಮುಖನಾಗಿದ್ದೇನೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಅಥವಾ ನನಗೇನೋ ಆಗುತ್ತದೆ ಅಂತ ಯೋಚಿಸ ಬೇಕಾದ ಅಗತ್ಯವಿಲ್ಲ" ಎಂದಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ವಿರುದ್ಧದ ಹೋರಾಟ ಹೇಗಿರಬೇಕು ಅಂತ ಬ್ಲೂ ಪ್ರಿಂಟು ಕೊಟ್ಟಿದ್ದಾರೆ. ಆದೇ ರೀತಿ, ಈ ಹೋರಾ ಟದ ಸಲುವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ತಾವೇ ಬರುವುದಾಗಿ ಘೋಷಿಸಿ ಸಭೆಯಲ್ಲಿದ್ದ ವರು ಖುಷ್ ಆಗುವಂತೆ ಮಾಡಿದ್ದಾರೆ.

ಮೂಲಗಳ ಪ್ರಕಾರ, ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಹಲವರು ಬಿಜೆಪಿಯ ಗುಂಪು ರಾಜಕಾರಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಇವತ್ತು ನಾವು ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಆ ಪಕ್ಷದ ರಾಜ್ಯ ನಾಯಕರ ವರಸೆ ಬೇರೆ ಇದ್ದಂತಿದೆ. ಯಾಕೆಂದರೆ ತಾವೇ ಭವಿಷ್ಯದ ನಾಯಕರಾಗಬೇಕು ಎಂಬ ಹಪಹಪಿಯಲ್ಲಿರುವ ಬಿಜೆಪಿ ನಾಯಕರು ನಾಲ್ಕು ಗುಂಪುಗಳಾಗಿ ಒಡೆದು ಹೋಗಿದ್ದಾರೆ.

ಹೀಗೆ ಒಡೆದುಹೋದ ಗುಂಪುಗಳ ಪೈಕಿ ಯಾವ ಗುಂಪೂ ನಮ್ಮನ್ನು ಸಹಿಸುತ್ತಿಲ್ಲ. ಹೀಗಾದರೆ ಮೈತ್ರಿಯ ಕತೆ ಹೇಗಿರಬಹುದು?" ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮುಂದುವರಿದು, “ಇವತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವೈಫಲ್ಯ ತಮಗೆ ಲಾಭ ತಂದುಕೊಡಲಿದೆ ಅಂತ ರಾಜ್ಯ ಬಿಜೆಪಿಯ ನಾಯಕರು ನಂಬಿದ್ದಾರೆ. ಹೀಗಾಗಿಯೇ ನಮ್ಮ ಜತೆಗೂಡಿ ಮುಂದುವರಿಯುವುದು ಅವರಿಗೆ ಇಷ್ಟವಿದ್ದಂತಿಲ್ಲ" ಎಂದಿದ್ದಾರೆ.

ಹೀಗೆ ಪಕ್ಷದ ನಾಯಕರು ವ್ಯಕ್ತಪಡಿಸಿದ ಆತಂಕವನ್ನು ಕೇಳಿದ ಕುಮಾರಸ್ವಾಮಿಯವರು, “ಈಗ ಕಾಂಗ್ರೆಸ್‌ನವರಿಗೆ ಒಂದು ನಂಬಿಕೆ ಇದೆ. ಅದೇ ರೀತಿ ಬಿಜೆಪಿಯವರಿಗೂ ಒಂದು ನಂಬಿಕೆ ಇದೆ. ಕಾಂಗ್ರೆಸ್‌ನವರ ನಂಬಿಕೆ ಎಂದರೆ ನಾವು ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಇವು ಮುಂದುವರಿಯಬೇಕು ಎಂದರೆ ಕಾಂಗ್ರೆಸ್ ಪಕ್ಷವೇ ಮರಳಿ ಅಧಿಕಾರಕ್ಕೆ ಬರಬೇಕು ಅಂತ ಜನ ಯೋಚಿಸುತ್ತಾರೆ ಎಂಬುದು. ಇದೇ ರೀತಿ ಬಿಜೆಪಿಯವರು, ಕಾಂಗ್ರೆಸ್ ಸರಕಾರ ಹಗರಣಗಳಲ್ಲಿ ಮುಳುಗಿ ಜನಜೀವನವನ್ನು ದುಸ್ತರಗೊಳಿಸಿದೆ. ಹೀಗಾಗಿ ರೋಸತ್ತು ಹೋಗಿರುವ ಜನ ಬಿಜೆಪಿಯ ಕಡೆ ತಿರುಗುತ್ತಾರೆ ಅಂತ ನಂಬಿದ್ದಾರೆ. ಇಂಥ ಟೈಮಿನಲ್ಲಿ ನಾವು ಆ ಪಕ್ಷಗಳ ಲೆಕ್ಕಾಚಾರಗಳ ಬಗ್ಗೆ ಯೋಚಿಸುತ್ತಾ ಕೂರುವುದಲ್ಲ. ಬದಲಿಗೆ ಪಕ್ಷ ಸಂಘಟನೆಗೆ ಆದ್ಯತೆ ಕೊಡೋಣ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ಭಾಷಿಕರಿಗೆ ರಾಜ್ಯ ಸರಕಾರದ ಹಗರಣಗಳ ಬಗ್ಗೆ ವಿವರಿಸೋಣ. ಅದಕ್ಕೆ ಅಗತ್ಯವಾದ ಹ್ಯಾಂಡ್ ಬಿಲ್ಲುಗಳನ್ನು ರೆಡಿ ಮಾಡೋಣ.

ಇನ್ನು ಬಿಜೆಪಿ ಜತೆಗಿನ ಮೈತ್ರಿಯ ಬಗ್ಗೆ ಯಾರೂ ಚಕಾರ ಎತ್ತುವುದು ಬೇಡ. ಮೈತ್ರಿ ಧರ್ಮವನ್ನು ಯಾವ ಕಾರಣಕ್ಕೂ ನಾವು ಉಲ್ಲಂಘಿಸಬಾರದು. ಈ ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರಕಾರವಿದ್ದಾಗ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಮೇಲೆ ಬಂದ ಅಪವಾದ ಸಣ್ಣದಲ್ಲ.

ಹೀಗಾಗಿ ಮೈತ್ರಿಧರ್ಮಕ್ಕೆ ನಮ್ಮಿಂದ ಚ್ಯುತಿಯಾಗುವುದು ಬೇಡ. ಅಂದ ಹಾಗೆ, ಜೆಡಿಎಸ್ ಜತೆಗಿನ ಮೈತ್ರಿ ಎಷ್ಟು ಅವಶ್ಯಕ ಅಂತ ಬಿಜೆಪಿಯ ವರಿಷ್ಠರಿಗೇ ಗೊತ್ತಿದೆ. ಹೀಗಾಗಿ ಮುಂಬರುವ ವಿಧಾನ ಸಭಾ ಚುನಾವಣೆಗೆ ನಾವು ಕೇಳಿರುವ ತೊಂಬತ್ತು ಸೀಟುಗಳ ಪೈಕಿ ಮಿನಿಮಮ್ ಎಪ್ಪತ್ತೈದು ಸೀಟುಗಳು ನಮಗೆ ಸಿಕ್ಕೇ ಸಿಗುತ್ತವೆ.

ಹೀಗಾಗಿ ಉಳಿದ ವಿಷಯಗಳ ಬಗ್ಗೆ ಚಿಂತೆ ಮಾಡದೆ ನಮ್ಮ ಪಕ್ಷವನ್ನು ಸಂಘಟಿಸಲು ಕೆಲಸ ಮಾಡಿ. ಮುಂದಿನ ತಿಂಗಳಿಂದ ರಾಜ್ಯ ಪ್ರವಾಸ ಮಾಡಲು ನಾನಂತೂ ರೆಡಿ" ಅಂತ ವಿವರಿಸಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ, ಆಗ ಕೋರ್ ಕಮಿಟಿಯಲ್ಲಿದ್ದವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಜಿ.ಟಿ. ಔಟ್, ಬಂಡೆ ಇನ್?

ಈ ಮಧ್ಯೆ ಕೋರ್ ಕಮಿಟಿ ಸಭೆಯಲ್ಲಿ ಹಿರಿಯ ನಾಯಕ ಜಿ.ಟಿ.ದೇವೇಗೌಡರ ವಿಷಯ ಪ್ರಸ್ತಾಪ ವಾಗಿದೆ. ಕೋರ್ ಕಮಿಟಿಯ ಅಧ್ಯಕ್ಷರಾಗಿದ್ದರೂ ಸಂಘಟನೆಯ ವಿಷಯದಲ್ಲಿ ಅವರು ತೋರಿಸು ತ್ತಿರುವ ನಿರಾಸಕ್ತಿಯ ಬಗ್ಗೆ ಬೇಸರ ವ್ಯಕ್ತವಾಗಿದೆ. ಯಾವಾಗ ಜಿ.ಟಿ.ದೇವೇಗೌಡರ ವಿಷಯ ಪ್ರಸ್ತಾಪವಾಯಿತೋ, ಆಗ ಬೇಸರದಿಂದ ಮಾತನಾಡಿದ ಕುಮಾರಸ್ವಾಮಿ ಅವರು, “ಜಿ.ಟಿ.ದೇವೇ ಗೌಡರ ವಿಷಯದಲ್ಲಿ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ. ಆದರೆ ತಮ್ಮನ್ನು ವಿಧಾನಸಭೆಯಲ್ಲಿ ಪಕ್ಷದ ಶಾಸಕಾಂಗ ನಾಯಕರನ್ನಾಗಿ ಮಾಡಲಿಲ್ಲ ಅಂತ ಅವರು ಮುನಿಸಿಕೊಂಡಿದ್ದಾರೆ. ಆದರೆ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ವಿಧಾನಸಭೆಯಲ್ಲಿ ಪಕ್ಷದ ನಾಯಕರು ಒಂದೇ ಸಮುದಾಯದವರಾದರೆ ಏನು ಮೆಸೇಜು ಹೋಗುತ್ತದೆ? ಸಾಲದು ಎಂಬಂತೆ ಈಗಾಗಲೇ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಒಂದೊಂದು ಕಾಲು ಇಟ್ಟುಬಿಟ್ಟಿದ್ದಾರೆ.

ಹೀಗಾಗಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ನಾವೇನು ಮಾಡಬಹುದು?" ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, “ಮುಂದಿನ ದಿನಗಳಲ್ಲಿ ಕೋರ್ ಕಮಿಟಿಗೆ ಪವರ್ ಇರಬೇಕು ಎಂದರೆ ಜಿ.ಟಿ.ದೇವೇಗೌಡರ ಜಾಗಕ್ಕೆ ಬೇರೆಯವರು ಬರಬೇಕು" ಎಂದಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ, ಆಗ ಕೋರ್ ಕಮಿಟಿಯ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ತರಬಹುದು ಎಂಬ ಬಗ್ಗೆ ಪ್ರಸ್ತಾಪವಾಗಿದೆ.

ಆಗ ಸಭೆಯಲ್ಲಿದ್ದ ಕೆಲವರು ಕೋಲಾರದ ಜೆಡಿಎಸ್ ಸಂಸದರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅದೇ ರೀತಿ ಹಲವರು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರ ಹೆಸರನ್ನು ಪ್ರಸ್ತಾಪಿಸಿ ಜಿ.ಟಿ. ಜಾಗಕ್ಕೆ ಇವರೇ ಸೂಟಬಲ್ಲು ಎಂದಿದ್ದಾರೆ. ಅಲ್ಲಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ. ಇಳಿಯುವುದು ನಿಶ್ಚಿತವಾಗಿದೆ.

ಮಂತ್ರಿ ಮಹದೇವಪ್ಪ ಬಾಂಬು

ಇನ್ನು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರಾಡಿದ ಮಾತು ದಲಿತ ಸಿಎಂ ಕೂಗನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಕಳೆದ ವಾರ ಮೈಸೂರಿನಲ್ಲಿ ನಡೆದ ಐತಿಹಾಸಿಕ ಬೌದ್ಧ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಸಚಿವ ಮಹದೇವಪ್ಪ ಹತ್ತೊಂಬತ್ತು ವರ್ಷಗಳ ಹಿಂದಿನ ಘಟನೆಯನ್ನು ಕೆದಕಿದ್ದಾರೆ. ಅಂದ ಹಾಗೆ 2006ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆದಿತ್ತಲ್ಲ? ಈ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜೆಡಿಎಸ್-ಬಿಜೆಪಿ ಮೈತ್ರಿಕೂಟ ತನ್ನೆ ಶಕ್ತಿಯನ್ನು ಬಳಸಿತ್ತು. ಅದರ ಹೊಡೆತ ಹೇಗಿತ್ತೆಂದರೆ ಸಿದ್ದರಾಮಯ್ಯ ಗೆಲ್ಲುವುದೇ ಕಷ್ಟ ಎಂಬಂತಾಗಿ ಹೋಗಿತ್ತು.

ಆದರೆ ಈ ಹೋರಾಟದಲ್ಲಿ ಅಂತಿಮವಾಗಿ ಗೆಲುವು ಸಾಧಿಸಿದ ಸಿದ್ದರಾಮಯ್ಯನವರು, “ಈ ಉಪಚುನಾವಣೆಯಲ್ಲಿ ದಲಿತ ಸಮುದಾಯ ನನ್ನ ಕೈ ಹಿಡಿಯಿತು" ಎಂದು ಉದ್ಗರಿಸಿದ್ದರು. ಅವತ್ತು ಸಿದ್ದರಾಮಯ್ಯ ಅವರೇನು ಉದ್ಗರಿಸಿದರೋ, ಕಳೆದ ವಾರ ಅದನ್ನೇ ಎತ್ತಿ ಹಿಡಿದ ಮಹದೇವಪ್ಪ, “ಅವತ್ತು ದಲಿತ ಸಮುದಾಯ ಸಿದ್ದರಾಮಯ್ಯ ಅವರ ಕೈ ಹಿಡಿಯಿತು.

ಈಗ ಸಿದ್ದರಾಮಯ್ಯ ಅವರು ದಲಿತರ ಕೈ ಹಿಡಿಯಬೇಕು" ಅಂತ ಸೂಚ್ಯವಾಗಿ ಹೇಳಿದರು. ಅರ್ಥಾತ್, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸನ್ನಿವೇಶ ಬಂದರೆ ದಲಿತ ನಾಯಕರೊಬ್ಬರನ್ನು ಸಿಎಂ ಹುದ್ದೆಗೆ ತರಲು ಮುಂದಾಗಬೇಕು ಎಂಬುದು ಮಹದೇವಪ್ಪ ಅವರ ಆಗ್ರಹ.

ಹೀಗೆ ಅವರಾಡಿದ ಮಾತು ಸಹಜವಾಗಿಯೇ ದಲಿತ ಸಿಎಂ ಕೂಗನ್ನು ಗಟ್ಟಿಗೊಳಿಸಿದೆಯಷ್ಟೇ ಅಲ್ಲ, ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಮತಬ್ಯಾಂಕ್ ಆಗಿ ನಿಂತ ದಲಿತರ ಹಕ್ಕೊತ್ತಾಯವನ್ನು ಮಂಡಿಸಿದಂತೆ ಆಗಿದೆ. ಅಂದ ಹಾಗೆ, ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್ ಅವರಾಗಲೀ, ಡಾ.ಎಚ್.ಸಿ.ಮಹದೇವಪ್ಪ ಅವರಾಗಲೀ ಸಿದ್ದರಾಮಯ್ಯ ಅವರು ಪದಚ್ಯುತರಾಗುವುದನ್ನು ಬಯಸುತ್ತಿಲ್ಲ. ಆದರೆ ಬಿಹಾರ ವಿಧಾನಸಭೆ ಚುನಾವಣೆಯ ನಂತರ ಅಧಿಕಾರ ಬಿಟ್ಟುಕೊಡುವಂತೆ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರಿಗೆ ಹೇಳಿದರೆ ಮುಲಾಜಿಲ್ಲದೆ ರಂಗ ಪ್ರವೇಶಿಸಲು ನಿರ್ಧರಿಸಿದ್ದಾರೆ. ಮಹದೇವಪ್ಪ ಅವರಾಡಿದ ಮಾತು ಇದನ್ನು ಮತ್ತಷ್ಟು ಸ್ಪಷ್ಟಗೊಳಿಸಿದೆ.

ನಂದೀಶ್ ರೆಡ್ಡಿ ಕಲರವ

ಇದೇ ರೀತಿ, ಇತ್ತೀಚೆಗೆ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ನಂದೀಶ್ ರೆಡ್ಡಿ ದೊಡ್ಡ ಕಲರವ ಎಬ್ಬಿಸಿದ್ದಾರೆ. ಪಕ್ಷದ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಅವರು ಕರೆದಿದ್ದ ಬೆಂಗಳೂರಿನ ಬಿಜೆಪಿ ಶಾಸಕರು ಮತ್ತು ನಾಯಕರ ಸಭೆಯಲ್ಲಿ ಬಿಬಿಎಂಪಿ ಚುನಾವಣೆಯ ಬಗ್ಗೆ ಪ್ರಸ್ತಾಪವಾಯಿತಲ್ಲ? ಈ ಸಂದರ್ಭದಲ್ಲಿ ಕೆರಳಿದ ನಂದೀಶ್ ರೆಡ್ಡಿ ಪಕ್ಷದ ಟಾಪ್ ಲೆವೆಲ್ ನಾಯಕರು ಮಾಡಿದ ಲೋಪಗಳ ಬಗ್ಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.

“2020ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಅವಧಿ ಮುಗಿದಾಗ ನಮ್ಮ ಸರಕಾರವೇ ಅಸ್ತಿತ್ವದಲ್ಲಿತ್ತು. ಆ ಸಂದರ್ಭದಲ್ಲಿ ಚುನಾವಣೆ ನಡೆದಿದ್ದರೆ ಸಮಸ್ಯೆಯೇ ಇರಲಿಲ್ಲ. ಆದರೆ ನಮ್ಮ ನಾಯಕರೇ ಇದಕ್ಕೆ ಅಡ್ಡಗಾಲು ಹಾಕಿದರು. ಬಿಬಿಎಂಪಿಗೆ ಚುನಾವಣೆ ನಡೆದು ಕಾರ್ಪೊರೇಟರುಗಳು ಬಂದರೆ ತಮಗೆ ಲಾಸು ಅಂತ ಲೆಕ್ಕ ಹಾಕಿ ಚುನಾವಣೆಗೆ ಅಡ್ಡಗಾಲು ಹಾಕಿದರು. ಅವರು ಬಯಸಿದ್ದರೆ ಯಾವ ಅಡ್ಡಿಗಳನ್ನೂ ನಿವಾರಿಸಬಹುದಿತ್ತು.

ಆದರೆ ಅವರು ತಮ್ಮ ಅನುಕೂಲಕ್ಕಾಗಿ ಅದನ್ನು ಮಾಡಲು ಹೋಗಲಿಲ್ಲ. ಪರಿಣಾಮ ಏನಾಗಿದೆ ಎಂದರೆ ಇವತ್ತು ಬಿಬಿಎಂಪಿಯನ್ನು ಐದು ಭಾಗಗಳನ್ನಾಗಿ ವಿಭಜಿಸಿ ಹೊಸ ವಾರ್ಡುಗಳನ್ನು ಸೃಷ್ಟಿಸಲಾಗಿದೆ. ಹೀಗೆ ರಚನೆಯಾದ ವಾರ್ಡುಗಳ ಕತೆ ಹೇಗಿದೆ ಎಂದರೆ ಎಪ್ಪತ್ತರಿಂದ ಎಂಬತ್ತು ವಾರ್ಡುಗಳಲ್ಲಿ ಮುಸ್ಲಿಮರು ನಿರಾಯಾಸವಾಗಿ ಗೆಲ್ಲುವ ಪರಿಸ್ಥಿತಿ ಇದೆ.

ಹೀಗೆ ಅವತ್ತು ನಮ್ಮ ನಾಯಕರು ಮಾಡಿದ ತಪ್ಪಿಗೆ ಇವತ್ತು ಕಾರ್ಯಕರ್ತರು ಬಡಿದಾಡುವ ಸ್ಥಿತಿ ನಿರ್ಮಾಣವಾಗಿದೆ" ಅಂತ ನಂದೀಶ್ ರೆಡ್ಡಿ ಗುಡುಗಿದಾಗ ಮುಜುಗರಕ್ಕೊಳಗಾದ ರಾಧಾ ಮೋಹನ ದಾಸ್ ಅಗರ್ವಾಲ್ ಅವರು, “ಓಕೆ,ಓಕೆ. ಈ ಸಭೆಯಲ್ಲಿ ನಡೆದಿದ್ದೇನು ಅಂತ ಯಾರೂ ಹೊರಗೆ ಬಾಯಿ ಬಿಡಬೇಡಿ" ಅಂತ ತೇಪೆ ಹಚ್ಚಿದ್ದಾರೆ.