Roopa Gururaj Column: ದೇವಿ ಲಕ್ಷ್ಮೀಯ ಸ್ವಯಂವರ ಸಾರುವ ಜೀವನ ಮೌಲ್ಯಗಳು
ಅವಳ ದೃಷ್ಟಿ, ಆದಿಶೇಷನ ಮೇಲೆ ಧ್ಯಾನಸ್ಥನಾಗಿ ಕುಳಿತಿದ್ದ, ಶಾಂತಿ ಮತ್ತು ಜ್ಞಾನವನ್ನು ಹೊಮ್ಮಿ ಸುತ್ತಿದ್ದ ಸೃಷ್ಟಿಯ ಸಂರಕ್ಷಕನಾದ ಶ್ರೀವಿಷ್ಣುವಿನ ಮೇಲೆ ನೆಟ್ಟಿತು. ಅವನಲ್ಲಿ ಅವಳು ಧರ್ಮದ ರಕ್ಷಕ ನನ್ನೂ, ಜೀವನದ ಪಾಲಕನನ್ನೂ, ಸ್ಥಿರತೆಯ ಮೂಲವನ್ನೂ ಕಂಡಳು. ವಿಷ್ಣುವಿನ ಕಂಠಕ್ಕೆ ವರಮಾಲೆ ಹಾಕಿ, ಅವನನ್ನೇ ತನ್ನ ಸಂಗಾತಿ ಎಂದು ಘೋಷಿಸಿದಳು.
-
ಒಂದೊಳ್ಳೆ ಮಾತು
ಕೃತಯುಗದಲ್ಲಿ ಋಷಿ ದೂರ್ವಾಸರ ಶಾಪದಿಂದ ದೇವತೆಗಳು ತಮ್ಮ ಶಕ್ತಿ ಮತ್ತು ಅಮರತ್ವವನ್ನು ಕಳೆದುಕೊಂಡರು. ಇದರಿಂದ ಅವರು ಅಸುರರ ದಾಳಿಗೆ ಒಳಗಾಗುವ ಸ್ಥಿತಿಗೆ ಬಂದರು. ಪರಿಹಾರ ಕ್ಕಾಗಿ ದೇವತೆಗಳು ಶ್ರೀವಿಷ್ಣುವಿಗೆ ಶರಣಾದಾಗ, ಕ್ಷೀರಸಾಗರದಲ್ಲಿ ಅಡಗಿರುವ ಅಮೃತವನ್ನು ಪಡೆಯುವಂತೆ ವಿಷ್ಣು ಸಲಹೆ ನೀಡಿದ. ಆದರೆ ಸಮುದ್ರವನ್ನು ಮಥಿಸುವುದು ದೇವತೆಗಳಿಗೆ ಅಸಾಧ್ಯವಾಗಿತ್ತು. ಅಂತೆಯೇ ದೇವತೆಗಳು ಅನಿವಾರ್ಯವಾಗಿ ತಮ್ಮ ಶತ್ರುಗಳಾದ ಅಸುರರೊಂದಿಗೆ ಕೈಜೋಡಿಸಿದರು.
ಅಮೃತದಲ್ಲಿ ಪಾಲು ನೀಡುವುದಾಗಿ ವಾಗ್ದಾನ ಮಾಡಿದರು. ಮಂದರ ಪರ್ವತವನ್ನು ಮಥನದ ದಂಡವಾಗಿ, ವಾಸುಕಿಯನ್ನು ಹಗ್ಗವಾಗಿಸಿಕೊಂಡು ಮಹಾಸಮುದ್ರಮಥನ ಆರಂಭವಾಯಿತು. ಮಥನದಿಂದ ಅದ್ಭುತಗಳ ಜತೆಗೆ ಅಪಾಯಗಳೂ ಹೊರ ಬಂದವು.
ಮೊದಲಿಗೆ, ‘ಹಾಲಾಹಲ’ ಎಂಬ ಹೆಸರಿನ ಮಾರಣಾಂತಿಕ ಮಹಾವಿಷವು ಉದ್ಭವಿಸಿ ಸೃಷ್ಟಿಯನ್ನೇ ನಾಶ ಮಾಡುವ ಭೀತಿಯನ್ನುಂಟುಮಾಡಿತು. ಸೃಷ್ಟಿಯನ್ನು ರಕ್ಷಿಸಲು ಪರಶಿವನು ಆ ವಿಷವನ್ನು ಸೇವಿಸಿ ತನ್ನ ಕಂಠದಲ್ಲಿ ಧರಿಸಿದನು; ಅದರಿಂದ ಅವನ ಕಂಠ ನೀಲವರ್ಣವಾಯಿತು. ನಂತರ ಕಾಮಧೇನು (ಕಾಮನೆಗಳನ್ನು ಪೂರೈಸುವ ಹಸು), ಉಚ್ಬೈಶ್ರವ (ದಿವ್ಯ ಕುದುರೆ), ಐರಾವತ (ಇಂದ್ರನ ಶ್ವೇತ ಗಜ) ಉದ್ಭವಿಸಿದವು.
ಇದನ್ನೂ ಓದಿ: Roopa Gururaj Column: ನಾವು ನಿಜವಾಗಿಯೂ ಶ್ರೀಮಂತರೇ ?
ಅಂತಿಮವಾಗಿ, ಸುವರ್ಣ ಪದ್ಮದಿಂದ ಕಂಗೊಳಿಸುತ್ತ, ಶಾಂತಸ್ವರೂಪಿಣಿಯಾದ ದೇವಿ ಲಕ್ಷ್ಮಿ ಅವತರಿಸಿ ಐಶ್ವರ್ಯ, ಸೌಂದರ್ಯ ಮತ್ತು ಮಂಗಳತೆಯನ್ನು ಪ್ರತಿನಿಧಿಸಿದಳು. ಸಭೆಯಲ್ಲಿದ್ದ ದೇವತೆಗಳು ಮತ್ತು ಅಸುರರನ್ನು ಗಮನಿಸಿದ ದೇವಿ ಲಕ್ಷ್ಮಿ, ಶಾಶ್ವತ ಗುಣಗಳನ್ನು ಹೊಂದಿದವ ರನ್ನೇ ವರನಾಗಿ ಆರಿಸಬೇಕೆಂದು ನಿರ್ಧರಿಸಿದಳು.
ಭವ್ಯವಾದ ಸ್ವಯಂವರವನ್ನು ಆಯೋಜಿಸಲಾಯಿತು. ಲಾಭಾಸಕ್ತಿಯಿಂದ ಅಸುರರು ಅವಳ ಕೈಗಾಗಿ ಗಲಾಟೆ ಮಾಡಿದರೆ, ದೇವತೆಗಳು ಅವಳ ಆಯ್ಕೆಯಿಂದ ಬ್ರಹ್ಮಾಂಡದ ಸಮತೋಲನ ಪುನಃ ಸ್ಥಾಪನೆಯಾಗಲಿ ಎಂದು ಆಶಿಸಿದರು. ಪವಿತ್ರತೆ ಮತ್ತು ಆಧ್ಯಾತ್ಮಿಕ ಸಂಪತ್ತಿನ ಸಂಕೇತವಾದ ಪದ್ಮ ವನ್ನು ಹಿಡಿದುಕೊಂಡು ಲಕ್ಷ್ಮಿಯು ದೇವತೆಗಳನ್ನೂ ಅಸುರರನ್ನೂ ದಾಟಿ ಮುಂದೆ ಸಾಗಿದಳು.
ಅವಳ ದೃಷ್ಟಿ, ಆದಿಶೇಷನ ಮೇಲೆ ಧ್ಯಾನಸ್ಥನಾಗಿ ಕುಳಿತಿದ್ದ, ಶಾಂತಿ ಮತ್ತು ಜ್ಞಾನವನ್ನು ಹೊಮ್ಮಿ ಸುತ್ತಿದ್ದ ಸೃಷ್ಟಿಯ ಸಂರಕ್ಷಕನಾದ ಶ್ರೀವಿಷ್ಣುವಿನ ಮೇಲೆ ನೆಟ್ಟಿತು. ಅವನಲ್ಲಿ ಅವಳು ಧರ್ಮದ ರಕ್ಷಕನನ್ನೂ, ಜೀವನದ ಪಾಲಕನನ್ನೂ, ಸ್ಥಿರತೆಯ ಮೂಲವನ್ನೂ ಕಂಡಳು.
ವಿಷ್ಣುವಿನ ಕಂಠಕ್ಕೆ ವರಮಾಲೆ ಹಾಕಿ, ಅವನನ್ನೇ ತನ್ನ ಸಂಗಾತಿ ಎಂದು ಘೋಷಿಸಿದಳು. ಈ ಆಯ್ಕೆ ಯಿಂದ ಮೂರು ಲೋಕಗಳಲ್ಲೂ ಹರ್ಷೋದ್ಗಾರಗಳು ತುಂಬಿದವು. ಮಥನ ಮುಂದುವರಿದು ದೇವತೆಗಳ ವೈದ್ಯನಾದ ಧನ್ವಂತರಿಯು ಅಮೃತದೊಂದಿಗೆ ಹೊರಬಂದನು. ವಿಷ್ಣುವು ಮೋಹಿನಿ ರೂಪವನ್ನು ಧರಿಸಿ ದೇವತೆಗಳಿಗಷ್ಟೇ ಅಮೃತವನ್ನು ನೀಡುವಂತೆ ಮಾಡಿ ಬ್ರಹ್ಮಾಂಡದ ಕ್ರಮ ವನ್ನು ಪುನಃ ಸ್ಥಾಪಿಸಿದನು.
ಲಕ್ಷ್ಮಿ-ವಿಷ್ಣುವಿನ ಸಂಗಮವು, ‘ನಿಜವಾದ ಐಶ್ವರ್ಯವು ಕ್ಷಣಿಕ ಲಾಭಾಸಕ್ತಿಯಿಂದಲ್ಲ, ಧಾರ್ಮಿಕತೆ ಮತ್ತು ನೈತಿಕತೆಯ ಪಾಲನೆಯಿಂದ ಮಾತ್ರ ವೃದ್ಧಿಸುತ್ತದೆ’ ಎಂಬುದನ್ನು ಸಾರುತ್ತದೆ. ಜೀವನದಲ್ಲಿ ಕ್ಷಣಿಕ ಲಾಭಕ್ಕಿಂತ, ಶಾಶ್ವತತೆ ಮತ್ತು ನೈತಿಕತೆಗೆ ಆದ್ಯತೆ ನೀಡುವವರನ್ನು ಆಯ್ಕೆಮಾಡಬೇಕು ಎಂಬುದನ್ನು ಲಕ್ಷ್ಮಿಯ ಸ್ವಯಂವರವು ಬೋಧಿಸುತ್ತದೆ.
ಐಶ್ವರ್ಯವು (ಲಕ್ಷ್ಮಿ) ಜವಾಬ್ದಾರಿಯೊಂದಿಗೆ (ವಿಷ್ಣು) ಸೇರಿದಾಗ ಮಾತ್ರವೇ ವೃದ್ಧಿಸುತ್ತದೆಯೇ ವಿನಾ, ಶೋಷಣೆಯಿಂದಲ್ಲ; ಸಮತೋಲನ ಮತ್ತು ನೈತಿಕ ಆಚರಣೆಯಿಂದಲೇ ವ್ಯಕ್ತಿಗಳು ಹಾಗೂ ಸಮಾಜಗಳು ಅಭಿವೃದ್ಧಿಯಾಗುತ್ತವೆ ಎನ್ನುವ ಮಹತ್ತರವಾದ ಸಂದೇಶವನ್ನು ನಮಗೆಲ್ಲ ನೀಡುವ ಘಟನೆಗಳಿವು.
ಅಷ್ಟೇ ಅಲ್ಲ, ದೇವತೆ-ಅಸುರರ ಮೈತ್ರಿ, ಸಾಮಾನ್ಯ ಗುರಿಗಳಿಗಾಗಿ ಶತ್ರುಗಳೊಂದಿಗೆ ಸಹಕರಿಸಬೇಕಾಗ ಬಹುದು; ಆದರೆ ಉನ್ನತ ಮೌಲ್ಯಗಳನ್ನು ರಕ್ಷಿಸುವ ಎಚ್ಚರಿಕೆ ಸದಾ ಅಗತ್ಯವೆಂಬುದನ್ನು ತೋರಿಸುತ್ತದೆ. ಲಕ್ಷ್ಮಿಯು ಹಿಡಿದಿರುವ ಪದ್ಮವು ನಿಜವಾದ ಸಮೃದ್ಧಿ ಎಂದರೆ ಕೇವಲ ಭೌತಿಕ ಸಂಪತ್ತು ಮಾತ್ರವಲ್ಲ; ಆತ್ಮವಿಕಾಸ, ಕರುಣೆ ಮತ್ತು ಮಾನವೀಯತೆಯೂ ಆಗಿವೆ ಎಂಬುದನ್ನು ನೆನಪಿಸುತ್ತದೆ.
ನಮ್ಮ ಪೌರಾಣಿಕ ಕಥೆಗಳಲ್ಲಿ ಇಂಥ ಅನೇಕ ಜೀವನ ಮೌಲ್ಯಗಳು ನಮಗೆ ದೊರೆಯುತ್ತಾ ಹೋಗು ತ್ತವೆ. ಅವನ್ನು ತಿಳಿದುಕೊಳ್ಳುವ ಆಸಕ್ತಿ ಮತ್ತು ಕುತೂಹಲ ನಮಗಿರಬೇಕು ಅಷ್ಟೇ. ಆದ್ದರಿಂದಲೇ ಇಂಥ ವಿಷಯಗಳನ್ನು ನಾವು ಕೂಡ ಓದಿ ತಿಳಿದು, ನಮ್ಮ ಮಕ್ಕಳಿಗೂ ಈ ಮೌಲ್ಯಗಳನ್ನು ಕಥೆಗಳ ಮೂಲಕ ದಾಟಿಸಬೇಕು. ಅದು ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮರೆಯದಿರೋಣ..