Roopa Gururaj Column: ಬೇಟೆಗಾರನ ಅಚಲ ವಿಶ್ವಾಸಕ್ಕೆ ಒಲಿದ ಶ್ರೀ ಕೃಷ್ಣ
ಭಗವಂತನನ್ನು ಒಲಿಸಿಕೊಳ್ಳಲು ಅವನೊಂದಿಗಿನ ಅನುಸಂಧಾನಕ್ಕೆ ನಮಗೆ ನೂರು ಮಂತ್ರಗಳ, ಜಪ ತಪ ಧ್ಯಾನಗಳ ಆಚರಣೆಗಿಂತ ಮೊದಲು ಅವನಲ್ಲಿ ದೃಢವಾದ ನಂಬಿಕೆ ಇರಬೇಕು. ಅವನನ್ನು ಯಾವ ರೀತಿ ನಾವು ಆರಾಽಸುತ್ತೇವೆ ಎನ್ನುವುದಕ್ಕಿಂತ ನಮ್ಮ ಭಕ್ತಿಯಲ್ಲಿರುವ ಪ್ರಾಮಾಣಿಕತೆ ಅವನನ್ನು ಬಹು ಬೇಗ ತಲುಪುತ್ತದೆ. ನಂಬಿದವರಿಗೆ ಪ್ರತಿ ಪ್ರಾಣಿ, ಪಕ್ಷಿ, ಜೀವದಲ್ಲೂ ಭಗವಂತ ಕಾಣುತ್ತಾನೆ.


ಒಂದೊಳ್ಳೆ ಮಾತು
rgururaj628@gmail.com
ಒಂದು ಅರಣ್ಯದಲ್ಲಿ ಓರ್ವ ಸಂತರು ಒಂದು ಗುಡಿಸಲನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಓರ್ವ ಬೇಟೆಗಾರನು ಅಲ್ಲಿಂದ ಹೋಗುತ್ತಿದ್ದಾಗಲೆಲ್ಲ, ಆ ಸಂತರಿಗೆ ನಮಸ್ಕಾರ ಮಾಡಿ ಹೋಗುತ್ತಿದ್ದನು. ಒಂದು ದಿನ ಆ ಬೇಟೆಗಾರನು ಸಂತರಿಗೆ, ‘ಸಂತರೇ, ನಾನು ಜಿಂಕೆಯ ಬೇಟೆಯಾಡುತ್ತೇನೆ. ನೀವು ಯಾರ ಬೇಟೆಯಾಡಲು ಇಲ್ಲಿ ವಾಸಿಸುತ್ತಿದ್ದೀರಿ? ಇನ್ನು ಎಷ್ಟು ದಿನ ನಿಮ್ಮ ವಾಸ್ತವ್ಯ ಇಲ್ಲಿ ಮುಂದುವರೆಯುತ್ತದೆ’ ಎಂದು ಕುತೂಹಲದಿಂದ ಕೇಳಿದನು.
ಆಗ ಸಂತರು ಅವನ ಮಕ್ಕಳಂತಹ ಮನಸ್ಸಿಗೆ ಮುಗುಳ್ನಗುತ್ತಾ ‘ಮಗನೇ, ನಾನು ಶ್ರೀಕೃಷ್ಣನ ಬೇಟೆ ಮಾಡಲು ಇಲ್ಲಿ ವಾಸಿಸುತ್ತಿದ್ದೇನೆ. ಅವನು ಸಿಕ್ಕಾಗ ನನ್ನ ಜನ್ಮ ಸಾರ್ಥಕ’ ಎಂದರು. ಅಷ್ಟರಲ್ಲೇ ಅವರ ಕಣ್ಣುಗಳಿಂದ ಕಣ್ಣೀರು ಹರಿಯತೊಡಗಿತು. ಆಗ ಬೇಟೆಗಾರನು, ‘ಸಂತರೇ ನೀವೇಕೆ ಅಳುತ್ತಿರುವಿರಿ? ಶ್ರೀಕೃಷ್ಣನೇ! ಅವನು ಹೇಗೆ ಕಾಣಿಸುತ್ತಾನೆ ನನಗೆ ಹೇಳಿ? ನಾನು ಅವನನ್ನು ಹೇಗಾದರೂ ಹಿಡಿದುಕೊಂಡು ಬರುತ್ತೇನೆ’ ಎಂದು ಹೇಳಿದನು.
ಸಂತರು ಅವನ ಮುಗ್ಧತೆಗೆ ಮಾರು ಹೋಗಿ ಭಗವಾನ್ ಶ್ರೀಕೃಷ್ಣನ ಮನೋಹರ ವರ್ಣನೆಯನ್ನು ಮಾಡುತ್ತಾ ಅವನ ಬಣ್ಣ ತಿಳಿನೀಲಿ, ಅವನ ತಲೆಯ ಮೇಲೆ ನವಿಲುಗರಿಯಿದೆ, ಅವನು ಕೊಳಲನ್ನು ನುಡಿಸುತ್ತಾನೆ ನೋಡಲು ಅತ್ಯಂತ ಮನಮೋಹಕ ರೂಪ ಉಳ್ಳವನು ಎಂದು ಹೇಳಿದರು.
ಇದನ್ನೂ ಓದಿ: Roopa Gururaj Column: ವಿಗ್ರಹದಲ್ಲಿ ದೇವರು ಇದ್ದಾನೋ ಇಲ್ಲವೋ ?
ಬೇಟೆಗಾರನು, ನನಗೆ ನಿಮ್ಮನ್ನು ನೋಡಿ ಬಹಳ ಗೌರವ ಉಕ್ಕುತ್ತಿದೆ. ಎಲ್ಲಿಯವರೆಗೆ ನಾನು ನಿಮ್ಮ ಶ್ರೀ ಕೃಷ್ಣನನ್ನು ಹಿಡಿದುಕೊಂಡು ಬರುವುದಿಲ್ಲವೋ, ಅಲ್ಲಿಯವರೆಗೆ ನೀರನ್ನೂ ಕುಡಿಯುವುದಿಲ್ಲ ಎಂದು ಖಂಡಿತವಾದ ಧ್ವನಿಯಲ್ಲಿ ಹೇಳಿ ಅಲ್ಲಿಂದ ಅವರ ಉತ್ತರಕ್ಕೂ ಕಾಯದೆ ಹೊರಟು ಬಿಟ್ಟನು. ಅನಂತರ ಅವನು ಒಂದು ಸ್ಥಳದಲ್ಲಿ ಬಲೆಯನ್ನು ಹರಡಿ ಕುಳಿತುಕೊಂಡನು. ದಾರಿ ಯನ್ನು ಕಾಯುತ್ತಾ ಕಾಯುತ್ತಾ 3 ದಿನಗಳು ಉರುಳಿದವು.
ದಯಾಮಯ ಭಗವಂತನಿಗೆ ಬೇಟೆಗಾರನ ಮೇಲೆ ದಯೆ ಬಂದಿತು. ಶ್ರೀಕೃಷ್ಣನು ಕೊಳಲನ್ನು ನುಡಿಸುತ್ತಾ ತಾನಾಗಿಯೇ ಬಂದು ಆ ಬಲೆಯಲ್ಲಿ ಸಿಕ್ಕಿ ಬಿದ್ದನು. ಶ್ರೀಕೃಷ್ಣನನ್ನು ನೋಡಿದಾಕ್ಷಣ ಬೇಟೆಗಾರನು ಅವನ ಮೋಹಕ ರೂಪದಲ್ಲಿ ಸಿಲುಕಿಕೊಂಡನು. ಒಂದೇ ಸಮನೆ ಶ್ಯಾಮಸುಂದ ರನನ್ನು ನೋಡುತ್ತಾ ನೋಡುತ್ತಾ ಅವನ ಕಣ್ಣುಗಳಿಂದ ಭಾವಾಶ್ರುಗಳು ಹರಿಯತೊಡಗಿದವು,
ಅವನು ತನ್ನ ಅಸ್ತಿತ್ವವನ್ನೇ ಮರೆತನು. ಅವನ ಚೇತನ ಜಾಗೃತವಾಯಿತು, ಆಗ ಅವನು, ‘ಬೇಟೆ ಸಿಕ್ಕಿತು, ಬೇಟೆ ಸಿಕ್ಕಿತು’ ಎಂದು ಜೋರಾಗಿ ಕೂಗತೊಡಗಿದನು. ಶ್ರೀಕೃಷ್ಣನು ಅವನ ಕಡೆಗೆ ಮುಗುಳ್ನಗೆ ಬೀರುತ್ತಾ ನೋಡುತ್ತಿದ್ದನು. ಬೇಟೆಗಾರನು ಶ್ರೀಕೃಷ್ಣನನ್ನು ಬೇಟೆಯಂತೆ ಹೆಗಲ ಮೇಲೆ ಹೊತ್ತುಕೊಂಡು ಸಂತರ ಬಳಿಗೆ ಬಂದನು.
ಶ್ರೀಕೃಷ್ಣನು ಬಲೆಯಲ್ಲಿ ಸಿಕ್ಕಿಕೊಂಡಿರುವುದೂ, ಮುಗುಳ್ನಗು ಬೀರುತ್ತಿರುವ ದೃಶ್ಯವನ್ನು ನೋಡಿ ಸಂತರ ಪ್ರಜ್ಞೆಯೇ ತಪ್ಪಿತು. ಎಚ್ಚರಗೊಂಡಾಗ ಅವರು ಬೇಟೆಗಾರನ ಕಾಲುಗಳನ್ನು ಹಿಡಿದು ನಮಸ್ಕಾರ ಮಾಡಿದರು. ಅವರು ಶ್ರೀಕೃಷ್ಣನಿಗೆ ಅಂಜಿಕೊಂಡೇ ‘ಹೇ ನಾಥಾ, ನಾನು ಚಿಕ್ಕವನಿದ್ದಾಗಿ ನಿಂದ ಎಷ್ಟು ಪ್ರಯತ್ನಿಸಿದೆ!
ನಿಮ್ಮ ಪ್ರಾಪ್ತಿಗಾಗಿ ಮನೆ-ಮಠವನ್ನು ಬಿಟ್ಟೆ, ಧ್ಯಾನ ಭಜನೆಯನ್ನು ಮಾಡಿದೆ. ನಿಮ್ಮ ದರ್ಶನ ವಾಗಲಿಲ್ಲ ; ಆದರೆ ಇವನಿಗೆ ಕೇವಲ 3 ದಿನಗಳಲ್ಲಿ ದರ್ಶನ ನೀಡಿದಿರಿ. ಇದೆಂಥಾ ಸೋಜಿಗ’ ಎಂದರು. ಆಗ ಭಗವಂತನು, ‘ನಿಮ್ಮ ಮೇಲೆ ಇರುವ ಇವನ ಅಪರಿಮಿತ ಪ್ರೇಮ ಮತ್ತು ನೀಡಿದ ವಚನದ ಮೇಲಿನ ದೃಢ ವಿಶ್ವಾಸವನ್ನು ನೋಡಿ ನನಗೆ ಇವನ ಬಳಿ ಬರದೇ ಇರಲು ಸಾಧ್ಯವಾಗ ಲಿಲ್ಲ’ ಎಂದನು.
ಭಗವಂತನನ್ನು ಒಲಿಸಿಕೊಳ್ಳಲು ಅವನೊಂದಿಗಿನ ಅನುಸಂಧಾನಕ್ಕೆ ನಮಗೆ ನೂರು ಮಂತ್ರಗಳ, ಜಪತಪ ಧ್ಯಾನಗಳ ಆಚರಣೆಗಿಂತ ಮೊದಲು ಅವನಲ್ಲಿ ದೃಢವಾದ ನಂಬಿಕೆ ಇರಬೇಕು. ಅವನನ್ನು ಯಾವ ರೀತಿ ನಾವು ಆರಾಽಸುತ್ತೇವೆ ಎನ್ನುವುದಕ್ಕಿಂತ ನಮ್ಮ ಭಕ್ತಿಯಲ್ಲಿರುವ ಪ್ರಾಮಾಣಿಕತೆ ಅವನನ್ನು ಬಹುಬೇಗ ತಲುಪುತ್ತದೆ. ನಂಬಿದವರಿಗೆ ಪ್ರತಿ ಪ್ರಾಣಿ, ಪಕ್ಷಿ , ಜೀವದಲ್ಲೂ ಭಗವಂತ ಕಾಣುತ್ತಾನೆ.