Dr Sadhanashree Column: ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ ಬೆರೆತರೆ ಕೆಂಪು, ಆದರೆ..
ಸ್ಕಂದ ಪುರಾಣದಲ್ಲಿ ಹೇಳಿರುವಂತೆ, ಶಿವ ಮತ್ತು ಪಾರ್ವತಿಯರು ಮೊದಲಿಗೆ ಕೈಲಾಸದಲ್ಲಿ ಈ ನಾಗವಲ್ಲಿ ಎಲೆಯನ್ನು ಬೆಳೆಸಿ, ನಂತರ ಅದನ್ನು ಶಿವನಿಗೆ ಅತ್ಯಂತ ಪ್ರಿಯವಾದ ಕಾಶಿಗೆ ತಂದರಂತೆ. ಇದೇ ಪುರಾಣದ ಇನ್ನೊಂದು ಪ್ರಕರಣದಲ್ಲಿ ಉಲ್ಲೇಖಿಸಿರುವಂತೆ ಈ ವೀಳ್ಯದೆಲೆಯೊಳಗೆ ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗಿದೆ. ಈ ಎಲೆಯ ಹೊರಮುಖದಲ್ಲಿ ಶಿವ ಮತ್ತು ಕಾಮದೇವರು ನೆಲೆಸಿದ್ದರೆ, ಇದರ ಎಡಭಾಗದಲ್ಲಿ ಪಾರ್ವತಿ ಮತ್ತು ಮಾಂಗಲ್ಯ ದೇವಿಯರು ವಾಸಿಸುತ್ತಾರಂತೆ.

-

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಮನೆಯಲ್ಲಿ ನವರಾತ್ರಿಯ ಹಬ್ಬದ ವಾತಾವರಣ. ಊಟದ ತಟ್ಟೆಗಳು ತೆರವುಗೊಳ್ಳುತ್ತಿದ್ದಂತೆಯೇ ಅಜ್ಜಿಯ ತಾಂಬೂಲ ತಟ್ಟೆ ಪ್ರತ್ಯಕ್ಷ. ಹಸಿರು ವೀಳ್ಯದೆಲೆ ಮೇಲೆ ಅಡಿಕೆ, ಏಲಕ್ಕಿ, ಜಾಯಿಕಾಯಿ, ಲವಂಗ ಇಟ್ಟು, ಮನೆಯ ಪ್ರತಿಯೊಬ್ಬರಿಗೂ ತಾಂಬೂಲವನ್ನು ಹಂಚುವ ಸಂತಸದ ಸಮಯ. ಬಾಯಿಗೆ ಸುಗಂಧವನ್ನಿತ್ತು ಮನಸ್ಸಿಗೆ ಆಹ್ಲಾದವನ್ನು ನೀಡುವ ಈ ಸಂಪ್ರದಾಯವು ಅಜ್ಜಿಗೆ ಬಹಳ ಪ್ರಿಯ.
ಮನೆಯ ಮಗುವೊಂದು ಕುತೂಹಲದಿಂದ ಕೇಳುತ್ತದೆ- “ಅಜ್ಜಿ, ಈ ಎಲೆ ಏಕೆ ತಿನ್ನಬೇಕು?". ಅಜ್ಜಿ ನಗುತ್ತಾ ಹೇಳುತ್ತಾರೆ- “ಇದು ಕೇವಲ ಸಂಪ್ರದಾಯವಲ್ಲ, ಇದು ಆರೋಗ್ಯದ ರಹಸ್ಯ. ಬಾಯಿ ಶುದ್ಧವಾಗಿ, ಜೀರ್ಣಶಕ್ತಿ ಹೆಚ್ಚಾಗಿ, ಬುದ್ಧಿ ಚುರುಕಾಗಿ, ಮಾತು ಸಿಹಿಯಾಗುವುದು. ಇವೆಲ್ಲವೂ ಈ ತಾಂಬೂಲದ ಕರುಣೆ".
ಹೌದು ಸ್ನೇಹಿತರೇ! ಅಜ್ಜಿಯ ಮಾತು ಅಕ್ಷರಶಃ ಸತ್ಯ. ನಮ್ಮ ಪುರಾತನ ಸಂಪ್ರದಾಯಗಳು ಕೇವಲ ಅಲಂಕಾರವಲ್ಲ, ಅವುಗಳಲ್ಲಿ ಹೆಚ್ಚಿನವು ನಮ್ಮ ಆಯುರ್ವೇದದಲ್ಲಿ ಹೇಳಿರುವ ದಿನಚರ್ಯೆಯ ಶ್ರೇಷ್ಠ ಭಾಗಗಳು. ಇಂದಿನ ಲೇಖನದಲ್ಲಿ ಮದುವೆಯೂಟ, ಹಬ್ಬದ ಹೋಳಿಗೆಯೂಟ, ಭೂರಿ ಭೋಜನಗಳ ನಂತರ ಬೇಕೇಬೇಕೆನಿಸುವ ತಾಂಬೂಲದ ಬಗ್ಗೆ ತಿಳಿಯೋಣ. ಅದರ ಸಕ್ರಮ ಉಪಯೋಗ, ಹಿತಾಹಿತಗಳನ್ನು ಆಯುರ್ವೇದದ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳೋಣ.ಅದಕ್ಕೂ ಮುನ್ನ, ಪುರಾಣದ ಕೆಲವು ಪ್ರಸಂಗಗಳನ್ನು ನಿಮ್ಮ ಜತೆ ಹಂಚಿಕೊಳ್ಳಲು ಇಷ್ಟಪಡುವೆ. ಸ್ಕಂದ ಪುರಾಣದಲ್ಲಿ ಹೇಳಿರುವಂತೆ, ಶಿವ ಮತ್ತು ಪಾರ್ವತಿಯರು ಮೊದಲಿಗೆ ಕೈಲಾಸದಲ್ಲಿ ಈ ನಾಗವಲ್ಲಿ ಎಲೆಯನ್ನು ಬೆಳೆಸಿ, ನಂತರ ಅದನ್ನು ಶಿವನಿಗೆ ಅತ್ಯಂತ ಪ್ರಿಯವಾದ ಕಾಶಿಗೆ ತಂದರಂತೆ. ಇದೇ ಪುರಾಣದ ಇನ್ನೊಂದು ಪ್ರಕರಣದಲ್ಲಿ ಉಲ್ಲೇಖಿಸಿರುವಂತೆ ಈ ವೀಳ್ಯದೆಲೆಯೊಳಗೆ ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗಿದೆ. ಈ ಎಲೆಯ ಹೊರಮುಖದಲ್ಲಿ ಶಿವ ಮತ್ತು ಕಾಮದೇವರು ನೆಲೆಸಿದ್ದರೆ, ಇದರ ಎಡಭಾಗದಲ್ಲಿ ಪಾರ್ವತಿ ಮತ್ತು ಮಾಂಗಲ್ಯ ದೇವಿಯರು ವಾಸಿಸುತ್ತಾರಂತೆ.
ಶಿವನಿಗೆ ವೀಳ್ಯದೆಲೆ ಅರ್ಪಿಸುವುದು- ಅವನನ್ನು ಸಂತುಷ್ಟ ಪಡಿಸಿ, ಆಶೀರ್ವಾದ ಪಡೆಯುವ ಸರಳ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಪೂಜೆಯಲ್ಲಿ ಲವಂಗ, ಏಲಕ್ಕಿ ಮುಂತಾದವುಗಳನ್ನು ತುಂಬಿದ ಎಲೆಯನ್ನು ಶಿವನಿಗೆ ಸಮರ್ಪಿಸಲಾಗುತ್ತದೆ. ಇದರಿಂದ ಮನೋಕಾಮನೆಗಳು ಈಡೇರು ತ್ತವೆ ಎಂಬ ನಂಬಿಕೆ ಇದೆ. ನಾಗವಲ್ಲಿ ಎಲೆಯು ಪಾರ್ವತಿಯ ರೂಪವಾದ ದುರ್ಗಾ ದೇವಿಯ ಪೂಜೆಯಲ್ಲಿಯೂ ಪ್ರಮುಖ ಅರ್ಪಣೆಯಾಗಿದೆ.
ಇದನ್ನೂ ಓದಿ: Dr Sadhanashree Column: ನವರಾತ್ರಿಯ ಶಕ್ತಿ, ಆಯುರ್ವೇದದ ಯುಕ್ತಿ
ಅಂತೆಯೇ ಸಮುದ್ರಮಥನದಲ್ಲಿ ದೇವತೆಗಳಿಗೆ ಈ ಎಲೆಯು ದೊರಕಿದ್ದಾದ್ದರಿಂದ ಪವಿತ್ರವಾದ ಈ ವೀಳ್ಯದೆಲೆಯು, ಸನಾತನ ಪರಂಪರೆಯ ಆಚರಣೆಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಇನ್ನು ಇತಿಹಾಸದ ವಿಷಯಕ್ಕೆ ಬರುವುದಾದರೆ, ವಿಜಯನಗರ ಸಾಮ್ರಾಜ್ಯದ ದರ್ಬಾರಿನಲ್ಲಿ ರಾಜನು ಅತಿಥಿಗಳಿಗೆ ನೀಡುತ್ತಿದ್ದ ಅತ್ಯಂತ ಗೌರವದ ಕಾಣಿಕೆಯೆಂದರೆ- ತಾಂಬೂಲಾರ್ಪಣೆ. ಅತಿಥಿಗೆ ತಾಂಬೂಲ ಕೊಡುವುದು ಕೇವಲ ಆತಿಥ್ಯದ ಸೂಚನೆಯಾಗಿರದೆ ಅದು ರಾಜಭವನದ ಸಂಸ್ಕೃತಿ, ಗೌರವ ಮತ್ತು ಸ್ನೇಹದ ಸಂಕೇತವಾಗಿತ್ತಂತೆ.
ಒಟ್ಟಾರೆ ವೀಳ್ಯದೆಲೆಯ ಸುಗಂಧವು ಕೇವಲ ಆಯುರ್ವೇದದ ಶಾಸ್ತ್ರಗಳಿಗಷ್ಟೇ ಸೀಮಿತವಾಗದೆ, ಸಾಮಾನ್ಯ ಮನೆಮನಗಳ ಸಂಪ್ರದಾಯದಿಂದ ಹಿಡಿದು ರಾಜ ಮನೆತನದ ಸಾಂಸ್ಕೃತಿಕ ಆಚರಣೆ ಯವರೆಗೂ ಪಸರಿಸಿದೆ ಎಂದರೆ ತಪ್ಪಾಗಲಾರದು. ಆಯುರ್ವೇದವು “ಹಿತಾಹಿತಂ ಸುಖಂ ದುಃಖ ಮಾಯುಸ್ತಸ್ಯ ಹಿತಾಹಿತಂ| ಮಾನಂ ಚ ತಚ್ಚ ಯೋತ್ರೋಕ್ತಮಾಯುರ್ವೇದಃ ಸ ಉಚ್ಯತೇ||" (ಚ. ಸಂ. ಸೂ. ೧) ಎಂದು ಜೀವನದ ಹಿತ-ಅಹಿತಗಳನ್ನು ವಿವರಿಸುವ ಶಾಶ್ವತ ಶಾಸ್ತ್ರವಾಗಿದೆ. ಈ ಶಾಸ್ತ್ರ ದಲ್ಲಿ ಸ್ವಾಸ್ಥ್ಯವನ್ನು ಸಂರಕ್ಷಿಸಲು ಹಾಗೂ ದೀರ್ಘಾಯುಷ್ಯವನ್ನು ಹೊಂದಲು ದಿನಚರ್ಯೆ (ಪ್ರತಿನಿತ್ಯವೂ ಪಾಲಿಸಬೇಕಾದ ಜೀವನಕ್ರಮ) ಅತ್ಯಂತ ಮಹತ್ವದ್ದಾಗಿವೆ.
ಹಲ್ಲು ತಿಕ್ಕುವುದು (ದಂತಧಾವನ), ನಾಲಿಗೆಯನ್ನು ಸ್ವಚ್ಛಗೊಳಿಸುವುದು(ಜಿಹ್ವಾ ನಿರ್ಲೇಖನ), ಬಾಯಿ ಮುಕ್ಕಳಿಸುವುದು (ಕವಳ- ಗಂಡೂಷ), ಅಭ್ಯಂಗ, ವ್ಯಾಯಾಮ, ನಸ್ಯ, ಧೂಮಪಾನ ಇತ್ಯಾದಿಗಳಂತೆ ‘ತಾಂಬೂಲ ಸೇವನೆ’ಯೂ ಒಂದು ಪ್ರಮುಖ ಅಂಗವಾಗಿದೆ.
ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಈ ಪದ್ಧತಿಗೆ ಆಯುರ್ವೇದವು ಆರೋಗ್ಯದ ಹಿತಕ್ಕಾಗಿ ಇದನ್ನು ಬಳಸುವ ದೃಷ್ಟಿಯನ್ನು ನೀಡಿದೆ.
ತಾಂಬೂಲ ಸೇವನೆ ಎಂದರೇನು?
ಹಲವಾರು ವಸ್ತುಗಳ ಸಂಯೋಜನೆಯಿಂದ ತಯಾರಾಗುವುದೇ ತಾಂಬೂಲ. ವೀಳ್ಯದೆಲೆಯೊಂದಿಗೆ ಅಡಕೆ, ಸುಣ್ಣ, ಏಲಕ್ಕಿ, ಲವಂಗ, ಜಾಯಿಕಾಯಿ, ಪಚ್ಚಕರ್ಪೂರ, ಸೋಂಪುಗಳಂಥ ಸುಗಂಧವುಳ್ಳ- ಜೀರ್ಣಕಾರಿ ದ್ರವ್ಯಗಳನ್ನು ಸೇರಿಸಿ ಸೇವಿಸುವ ಕ್ರಮವೇ ‘ತಾಂಬೂಲ ಸೇವನೆ’.
ಇದು ಸಾಮಾನ್ಯವಾಗಿ ಊಟದ ನಂತರ ಮಾಡಬೇಕಾದ ಕ್ರಮವೆಂದು ಆಯುರ್ವೇದವು ತಿಳಿಸಿದೆ. ತಾಂಬೂಲ ಸೇವನೆಯು ಹಸಿವೆಯನ್ನು ಹೆಚ್ಚಿಸಿ, ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ, ಬಾಯಿಯನ್ನು ಸುವಾಸಿತಗೊಳಿಸುವುದರ ಜತೆಗೆ ಮೂಗು, ಗಂಟಲು, ತಲೆಭಾಗದಲ್ಲಿ ಕಟ್ಟಿಕೊಂಡ ಕಫವನ್ನು ತೆಗೆದು ಮುಖವನ್ನು ಶುದ್ಧಿಗೊಳಿಸುತ್ತದೆ.
ತಾಂಬೂಲದ ಘಟಕಗಳು
ಎಳೆಯ ಹಸುರಿನ, ಮೃದುವಾಗಿರುವ ವೀಳ್ಯದೆಲೆಯು ಎಲ್ಲಾ ಕಾಲದಲ್ಲೂ, ಎಲ್ಲರಿಗೆ/ ತಾಂಬೂಲ ಸೇವಿಸುವವರಿಗೆ ಸೂಕ್ತ. ಎಲೆಯ ತೊಟ್ಟನ್ನು ತೆಗೆಯುವುದರಿಂದ ಅದರ ಒಗರು ಮತ್ತು ತೀಕ್ಷ್ಣತೆ ಕಡಿಮೆಯಾಗುತ್ತದೆ. ಅಂತೆಯೇ, ಇದರ ತುದಿಯನ್ನು ಚಿವುಟಿ ಹಾಕಬೇಕು. ಎಲೆಯ ಹಿಂಬದಿಯ ನಾರನ್ನು ತೆಗೆಯುವುದು ಸೂಕ್ತ.
ಒಂದು ಅಡಕೆಯ ಕಾಲುಭಾಗ ಅಥವಾ ಸಣ್ಣ ಅಡಕೆಯ ಹೋಳುಗಳು ಸಾಕು. ಜತೆಗೆ ಉದ್ದಿನ ಕಾಳಿನಷ್ಟು ಗಾತ್ರದ ಸುಣ್ಣ ತೊಂದರೆ ಮಾಡದು. ಚಿಟಿಕೆ ಪಚ್ಚ ಕರ್ಪೂರ, ಜಾಯಿಕಾಯಿಯ ಸಣ್ಣ ತುಂಡು (ಕಡಲೆಬೇಳೆ ಗಾತ್ರದಷ್ಟು) ಅಥವಾ ಒಂದು ಸಣ್ಣ ಎಸಳು ಜಾಯಿಪತ್ರೆ, ಒಂದು ಲವಂಗ, ಉದ್ದಿನ ಕಾಳಿನಷ್ಟು ಕಾಚು- ಇವಿಷ್ಟು ಸುಗಂಧಿತ ದ್ರವ್ಯಗಳು.
ಇದರ ಜತೆಗೆ ಸೋಂಪು, ಕಲ್ಲು ಸಕ್ಕರೆ, ಕೊಬ್ಬರಿ ತುರಿ, ಗುಲ್ಕಂದ್, ಒಣಖರ್ಜೂರ, ಒಣದ್ರಾಕ್ಷಿ, ಬಾದಾಮಿ ಹೋಳುಗಳನ್ನು ಸಹ ಸೇರಿಸಿಕೊಂಡು ತಿನ್ನುವವರಿದ್ದಾರೆ. ಈ ರೀತಿಯ ಸಿಹಿ ತಾಂಬೂಲ ಗಳು ಸಹ ಒಳ್ಳೆಯದೇ.
ಸೂಕ್ತವಾದ ಎಲೆಯನ್ನು ಸಿದ್ಧ ಮಾಡಿದ ನಂತರ ಹಿಂಭಾಗದಲ್ಲಿ ತೆಳುವಾಗಿ ಸುಣ್ಣವನ್ನು ಸವರಿ ಸುಗಂಧಿತ ದ್ರವ್ಯಗಳನ್ನು, ಅಡಕೆ ಹೋಳುಗಳನ್ನು ಇಟ್ಟು, ಎಲೆಯನ್ನು ಮಡಚಿ, ಲವಂಗವನ್ನು ಚುಚ್ಚಿ ಬಂಧಿಸಿದರೆ ತಾಂಬೂಲವು ಸವಿಯಲು ಸಿದ್ಧ.
ಹೀಗೆ ಮೇಲೆ ಹೇಳಿದ ಎಲ್ಲಾ ದ್ರವ್ಯಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿ ಕಾಲಕ್ಕೆ ತಕ್ಕಂತೆ ಸೇವಿಸುವುದು ಹಿತಕರ. ಆದರೆ ತಂಬಾಕು/ಜರ್ದಾ/ಗುಟ್ಕಾ ಇತ್ಯಾದಿಗಳನ್ನು ಸೇರಿಸಿ ತಿನ್ನುವುದು ಅತ್ಯಂತ ಹಾನಿಕರ. ಅಂತೆಯೇ ಚಟದ ರೂಪದಲ್ಲಿ ನಿರಂತರವಾಗಿ ತಾಂಬೂಲ ಸೇವನೆಯಲ್ಲಿ ತೊಡಗಿರುವುದು ಅನಾರೋಗ್ಯಕರ.
ಇನ್ನೂ ಮೈನೆರೆಯದ ಕನ್ಯೆಯರು, 25 ವರ್ಷಗಳ ಕೆಳಗಿನ ಯುವಕರು ಅಥವಾ ಅರವತ್ತು ದಾಟಿದ ವೃದ್ಧರಿಗೆ ತಾಂಬೂಲದ ನಿತ್ಯ ಸೇವನೆಯು ತೊಂದರೆ ಮಾಡಬಹುದು. ಇದರಿಂದ ಗರ್ಭಾಶಯದ ತೊಂದರೆಗಳು, ವೀರ್ಯದ ತೊಂದರೆಗಳು, ಬಾವುಗಳು ಕಾಣಬಹುದು.
ತಾಂಬೂಲ ಸೇವನೆಯ ಪ್ರಯೋಜನಗಳು
೧. ಮುಖ ಶುದ್ಧಿ: ಬಾಯಿ, ನಾಲಗೆ, ದಂತಮೂಲ, ಗಂಟಲುಗಳಲ್ಲಿನ ಅತಿಯಾದ ಲಾಲಾಸ್ರಾವ, ಕಫ,ದುರ್ಗಂಧ ಇತ್ಯಾದಿಗಳನ್ನು ತಾಂಬೂಲ ಸೇವನೆಯು ಶುದ್ಧಗೊಳಿಸುತ್ತದೆ.
೨. ರಸಗ್ರಹಣ ಶಕ್ತಿ ವೃದ್ಧಿ: ತಾಂಬೂಲ ಸೇವನೆಯು ನಾಲಗೆಯನ್ನು ಸ್ವಚ್ಛಗೊಳಿಸಿ, ಅದರ ರಸನೇಂದ್ರಿಯ ಕಾರ್ಯವನ್ನು ಉತ್ತೇಜಿಸುತ್ತದೆ.
೩. ಜೀರ್ಣಕಾರಿ: ಇದು ಜಠರಾಗ್ನಿಯನ್ನು ಚುರುಕುಗೊಳಿಸಿ ಭೋಜನವನ್ನು ಸುಲಭವಾಗಿ ಜೀರ್ಣಿಸಿ ಕೊಳ್ಳಲು ಸಹಕಾರಿ. ಆಹಾರದಲ್ಲಿನ ಸತ್ತ್ವವನ್ನು ದೇಹಕ್ಕೆ ಪೂರೈಕೆಯಾಗುವಂತೆ ಜೀರ್ಣಾಂಗ ವ್ಯೂಹದ ಕಾರ್ಯೋತ್ತೇಜಕ.
೪. ಅರೋಚಕಹರ: ಆಹಾರಾಸಕ್ತಿಯನ್ನು, ಬಾಯಿರುಚಿಯನ್ನು ಹೆಚ್ಚಿಸಿ ಅಜೀರ್ಣವನ್ನು ನಿವಾರಣೆ ಮಾಡುತ್ತದೆ.
೫. ವಾಕ್‌ಶುದ್ಧಿ: ಮಾತು ಸ್ಪಷ್ಟವಾಗಿ ಹೊಮ್ಮುವಂತೆ ಮಾಡುತ್ತದೆ.
೬. ಇಂದ್ರಿಯ ಪ್ರಾಸಾದನ: ಇಂದ್ರಿಯಳಿಗೆ ಉಸವನ್ನು ಮತ್ತು ಮನಸ್ಸಿಗೆ ಹರ್ಷವನ್ನು ಉಂಟು ಮಾಡುತ್ತದೆ.
೭. ದಂತಬಲ ವೃದ್ಧಿ: ಹಲ್ಲು, ಒಸಡು, ದಂತಮೂಲಗಳಿಗೆ ಬಲ ನೀಡುತ್ತದೆ, ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.
೮. ಆಲಸ್ಯ ಮತ್ತು ಜಡತ್ವ ನಿವಾರಣೆ: ಹಬ್ಬದ ಊಟದ ನಂತರದ ಆಲಸ್ಯ, ಮೈಭಾರವನ್ನು ನಿವಾರಿಸಿ ಮನಸ್ಸು-ಇಂದ್ರಿಯಗಳನ್ನು ಚುರುಕು ಮಾಡುತ್ತದೆ.
ತಾಂಬೂಲ ಸೇವನೆ ಯಾರಿಗೆ ಅಹಿತ?
- ಪಿತ್ತಪ್ರಕೃತಿ (ಉಷ್ಣ ದೇಹ ಸ್ವಭಾವ)- ಅತಿಯಾಗಿ ಸೇವಿಸಿದರೆ ಹೊಟ್ಟೆ ಉರಿ, ಜ್ವರ, ಬಾಯಿ ಹುಣ್ಣು ಉಂಟಾಗಬಹುದು. ಉಷ್ಣಕಾಲದಲ್ಲಿ, ಉಷ್ಣಪ್ರದೇಶದಲ್ಲಿ ಇದು ಸೂಕ್ತವಲ್ಲ.
ರಕ್ತಪಿತ್ತ/ರಕ್ತ ದುಷ್ಟಿ ರೋಗ- ನಾಸಾರಕ್ತ, ರಕ್ತ ವಾಂತಿ, ರಕ್ತ ಒಸರುವಿಕೆಯಂಥ ಸಂದರ್ಭಗಳಲ್ಲಿ. ಸದಾ ಒಣಕಲು, ಜಿಡ್ಡುರಹಿತ ಆಹಾರವನ್ನು ಸೇವಿಸುವವರಿಗೆ. ಜ್ವರ, ಬಾಯಿ ಹುಣ್ಣು ಇರುವವರಿಗೆ. ಅಪಘಾತ ಮೊದಲಾದ ಕಾರಣಗಳಿಂದ ಗಾಯವಿರುವವರಿಗೆ.
ಕೃಶ ವ್ಯಕ್ತಿಗಳು, ಬಲವಿಲ್ಲದವರು, ಕಾಯಿಲೆಯಿಂದಬಳಲುತ್ತಿರುವವರಿಗೆ. ಅತಿಯಾಗಿ/ಪದೇ ಪದೆ ಬಾಯಾರಿಕೆಯಿರುವವರಿಗೆ. ಮೂರ್ಛಾ ರೋಗದಿಂದ ಬಳಲುವವರಿಗೆ. ಒಟ್ಟಾರೆ, ತಾಂಬೂಲ ಸೇವನೆಯನ್ನು ದಿನಚರ್ಯೆಯ ಒಂದು ಅಂಶವಾಗಿ ಆಯುರ್ವೇದವು ಉಪದೇಶಿಸಿದೆ.
ಇದರ ಉದ್ದೇಶ- ಮುಖಶುದ್ಧಿ, ಜೀರ್ಣಕ್ರಿಯೆ ಸುಧಾರಣೆ, ಇಂದ್ರಿಯ ಉತ್ತೇಜನ. ಆದರೆ ಇದನ್ನು ಬಳಸುವಾಗ ‘ಅತಿಯಾದ ಯಾವುದೇ ಪದಾರ್ಥವೂ ವಿಷವೇ’ ಎಂಬ ತತ್ವವನ್ನು ನೆನಪಿನಲ್ಲಿ ಇಡಲೇಬೇಕು. ‘ಸ್ವಾಸ್ಥ್ಯ+ ಶೌಚ + ಸಂಸ್ಕೃತಿ’ ಎಂಬ ಮೂರೂ ಅಂಶಗಳನ್ನು ಒಳಗೊಂಡಿರುವ ಈ ತಾಂಬೂಲ ಸೇವನೆಯನ್ನು ಜಾಣ್ಮೆಯಿಂದ ಅನುಸರಿಸೋಣ.