Keshava Prasad B Column: ಚೇತರಿಸಿದ ಉತ್ಪಾದನೆ, ಐಟಿ: ಎಐ ಆತಂಕ ದೂರ !
ಭಾರತದ 2026ರ ಜೂನ್ ತಿಂಗಳ ಉದ್ಯಮ ವಲಯದ ಉತ್ಪಾದನೆಯು ಕಳೆದ ಎರಡು ವರ್ಷಗಳ ಅತ್ಯಂತ ವೇಗವಾಗಿ ಬೆಳೆದಿದೆ. ಉತ್ಪಾದನಾ ಕ್ಷೇತ್ರದಲ್ಲಿ ಉಂಟಾಗಿರುವ ಗಣನೀಯ ಚೇತರಿಕೆಯೇ ಇದಕ್ಕೆ ಕಾರಣ ಎನ್ನುವುದು ಮತ್ತೊಂದು ವಿಶೇಷ. ಎರಡನೆಯದಾಗಿ ಐಟಿ ಸೆಕ್ಟರ್‌ನಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ಕುರಿತ ಭಯ ಕ್ರಮೇಣ ಕಡಿಮೆಯಾಗು ತ್ತಿರುವ ಲಕ್ಷಣ ಕಾಣಿಸುತ್ತಿದೆ.
-
ಮನಿ ಮೈಂಡೆಡ್
ದೇಶದ ಆರ್ಥಿಕತೆಯ ಎರಡು ಪ್ರಮುಖ ಕ್ಷೇತ್ರಗಳಾದ ಉತ್ಪಾದನಾ ವಲಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಜೂನ್ ತಿಂಗಳಲ್ಲಿ ಗಮನಾರ್ಹ ಚೇತರಿಕೆಯನ್ನು ದಾಖಲಿಸಿದ್ದು, ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಐಟಿ ಸೆಕ್ಟರ್‌ನಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ಕುರಿತ ಭಯ ಕ್ರಮೇಣ ಕಡಿಮೆಯಾಗುತ್ತಿರುವ ಲಕ್ಷಣ ಕಾಣಿಸು ತ್ತಿದೆ.
ಭಾರತದ 2026ರ ಜೂನ್ ತಿಂಗಳ ಉದ್ಯಮ ವಲಯದ ಉತ್ಪಾದನೆಯು ಕಳೆದ ಎರಡು ವರ್ಷಗಳ ಅತ್ಯಂತ ವೇಗವಾಗಿ ಬೆಳೆದಿದೆ. ಉತ್ಪಾದನಾ ಕ್ಷೇತ್ರದಲ್ಲಿ ಉಂಟಾಗಿರುವ ಗಣನೀಯ ಚೇತರಿಕೆಯೇ ಇದಕ್ಕೆ ಕಾರಣ ಎನ್ನುವುದು ಮತ್ತೊಂದು ವಿಶೇಷ. ಎರಡನೆಯದಾಗಿ ಐಟಿ ಸೆಕ್ಟರ್‌ನಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ಕುರಿತ ಭಯ ಕ್ರಮೇಣ ಕಡಿಮೆಯಾಗು ತ್ತಿರುವ ಲಕ್ಷಣ ಕಾಣಿಸುತ್ತಿದೆ.
ಕುಸಿತಕ್ಕೀಡಾಗಿದ್ದ ಐಟಿ ಸ್ಟಾಕ್ಸ್ ಚೇತರಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅಂತೂ ದೇಶದ ಆರ್ಥಿಕತೆಯ ಎರಡು ಪ್ರಮುಖ ಕ್ಷೇತ್ರಗಳಾದ ಉತ್ಪಾದನಾ ವಲಯ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಜೂನ್ ತಿಂಗಳಲ್ಲಿ ಗಮನಾರ್ಹ ಚೇತರಿಕೆಯನ್ನು ದಾಖಲಿಸಿದ್ದು, ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ಮೂಡಿಸಿವೆ.
ಭಾರತದ ಕೈಗಾರಿಕಾ ಉತ್ಪಾದನೆಯು ಜೂನ್‌ನಲ್ಲಿ ಶೇಕಡಾ 7.3ರಷ್ಟು ಬೆಳವಣಿಗೆಯನ್ನು ದಾಖಲಿ ಸಿದೆ. ಇದು 2024ರ ಜುಲೈನ ನಂತರದ ಅತ್ಯಂತ ವೇಗದ ಬೆಳವಣಿಗೆಯಾಗಿದೆ. ಸರಕಾರದ ಬಂಡವಾಳ ವೆಚ್ಚ ಹೆಚ್ಚಳವಾಗಿರುವುದು ಮತ್ತು ವಿದ್ಯುತ್ ಉತ್ಪಾದನೆಯ ನಿರಂತರ ವಿಸ್ತರಣೆ ಯಿಂದಾಗಿ ಉತ್ಪಾದನಾ ಕ್ಷೇತ್ರದ ಚಟುವಟಿಕೆಗಳಿಗೆ ಪುಷ್ಟಿ ನೀಡಿದೆ.
ಇದನ್ನೂ ಓದಿ: Keshava Prasad B Column: ಎನ್‌ಜಿಒಗಳ ನಿಧಿಯ ಮೂಲ-ಬಳಕೆ ಮೇಲೆ ನಿಗಾ ಏಕೆ ?
ರಾಯಿಟರ್ಸ್ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅರ್ಥಶಾಸ್ತ್ರಜ್ಞರು, ಮೇ ತಿಂಗಳ ಶೇಕಡಾ 5.0ರ (ಪರಿಷ್ಕೃತ) ಬೆಳವಣಿಗೆಯ ಬಳಿಕ ಜೂನ್‌ನಲ್ಲಿ ಕೈಗಾರಿಕಾ ಉತ್ಪಾದನೆ ಶೇಕಡಾ 5.7ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆಯನ್ನೂ ಮೀರಿ ಇದೀಗ ಪ್ರಗತಿ ದಾಖಲಾ ಗಿರುವುದು ಗಮನಾರ್ಹ. ಅರ್ಥಶಾಸ್ತ್ರಜ್ಞರಾದ ಗೌರವ್ ಸೇನ್ ಗುಪ್ತಾ ಪ್ರಕಾರ, ಇದು ನಿರೀಕ್ಷೆಗಿಂತ ಉತ್ತಮವಾದ ಫಲಿತಾಂಶವಾಗಿದೆ.
ವ್ಯವಸ್ಥೆಯಲ್ಲಿ ಸುಸ್ಥಿರ ಬಳಕೆಯ (consumption) ಆಧಾರದ ಮೇಲೆ ಮುಂದೆಯೂ ಆರ್ಥಿಕ ಚಟುವಟಿಕೆಗಳು ಇದೇ ರೀತಿ ಮುಂದುವರಿಯುವ ವಿಶ್ವಾಸ ಇದೆ ಎಂದಿದ್ದಾರೆ. ಇಕನಾಮಿನಲ್ಲಿ ಕನ್ಸಂಪ್ಷನ್‌ಗೆ ಪ್ರಾಮುಖ್ಯತೆ ಇದೆ. ಹಾಗಂದರೇನು? ಸರಳ. ನಾವೆಲ್ಲರೂ, ನಮ್ಮ ಕುಟುಂಬಗಳೂ, ಸಮಾಜವೂ ಅಂತಿಮವಾಗಿ ಬಳಸುವ ಉತ್ಪನ್ನಗಳು ಮತ್ತು ಸೇವೆಗಳ ವಿಷಯವೇ ಕನ್ಸಂಪ್ಷನ್ ಅಥವಾ ಬಳಕೆಗಳು. ಇದು ಹೂಡಿಕೆಗಿಂತ ಭಿನ್ನವಾದದ್ದು.
ಹೂಡಿಕೆ ಎಂದರೆ ಭವಿಷ್ಯದ ಆದಾಯಕ್ಕಾಗಿ ಮಾಡುವ ವೆಚ್ಚ. ಯಾವುದೇ ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (GDP) ‘ಬಳಕೆ ವೆಚ್ಚ’ವೇ (Consumption Expenditure) ಸಿಂಹಪಾಲು ವಹಿಸುತ್ತದೆ. ಇದು ವ್ಯಕ್ತಿಗಳ ವೈಯಕ್ತಿಕ ಬಳಕೆ (Private Consumption) ಮತ್ತು ಸರಕಾರದ ಬಳಕೆ ಎಂಬ ಎರಡು ವಿಭಾಗಗಳನ್ನು ಒಳಗೊಂಡಿದ್ದು, ದೇಶದ ಒಟ್ಟು ಬೇಡಿಕೆಯನ್ನು ನಿರ್ಣಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಮೇ ತಿಂಗಳಲ್ಲಿ, ಸರಕಾರವು ಕಾರ್ಖಾನೆ ಉತ್ಪಾದನೆಯನ್ನು ಲೆಕ್ಕ ಹಾಕಲು ಸಗಟು ಬೆಲೆಗಳ ಬದಲಿಗೆ ಉತ್ಪಾದಕರ ಬೆಲೆಗಳಿಗೆ (producer prices) ಬದಲಾಯಿಸಿಕೊಂಡಿದೆ. ಗುಡ್ ನ್ಯೂಸ್ ಏನೆಂದರೆ, ಜೂನ್‌ನಲ್ಲಿ ಉತ್ಪಾದನಾ ಕ್ಷೇತ್ರದ ಉತ್ಪಾದನೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 7.8ರಷ್ಟು ಬೆಳವಣಿಗೆ ಕಂಡಿದೆ. ಇದು ಮೇ ತಿಂಗಳಲ್ಲಿ ಪರಿಷ್ಕೃತ ಶೇಕಡಾ 5.2ರಷ್ಟಿತ್ತು.
ವಿದ್ಯುತ್ ಉತ್ಪಾದನೆಯು ಜೂನ್‌ನಲ್ಲಿ ವಾರ್ಷಿಕ ಆಧಾರದ ಮೇಲೆ ಶೇಕಡಾ 10.6ರಷ್ಟು ಹೆಚ್ಚಾಗಿದೆ (ಒಂದು ತಿಂಗಳ ಹಿಂದೆ ಪರಿಷ್ಕೃತ ಶೇಕಡಾ 10.3ರಷ್ಟು ಹೆಚ್ಚಳವಾಗಿತ್ತು). ಗಣಿಗಾರಿಕೆ ಚಟುವಟಿಕೆ ಯು ಜೂನ್‌ನಲ್ಲಿ ಶೇಕಡಾ 1ರಷ್ಟು ಏರಿಕೆಯಾಗಿದೆ. ಮೇ ತಿಂಗಳಲ್ಲಿ ಇದು ಪರಿಷ್ಕೃತ ಶೇಕಡಾ 1.4ರಷ್ಟು ಕುಸಿತ ಕಂಡಿತ್ತು.
ಕಾರುಗಳು ಮತ್ತು ಸ್ಮಾರ್ಟ್ ಫೋನ್‌ಗಳು ಸೇರಿದಂತೆ ಗ್ರಾಹಕ ಬಳಕೆಯ ದೀರ್ಘಾವಧಿ ಬಳಕೆಯ ಸರಕುಗಳ (consumer durables) ಉತ್ಪಾದನೆಯು ಜೂನ್‌ನಲ್ಲಿ ಶೇಕಡಾ 7.7ರಷ್ಟು ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ಪರಿಷ್ಕೃತ ಶೇಕಡಾ 8ರಷ್ಟು ಹೆಚ್ಚಳವಾಗಿತ್ತು. ಬಂಡವಾಳ ಸರಕುಗಳ ಉತ್ಪಾದನೆಯು ಜೂನ್‌ನಲ್ಲಿ ಶೇಕಡಾ 14.2ರಷ್ಟು ಹೆಚ್ಚಾಗಿದೆ. ಮೇ ತಿಂಗಳಲ್ಲಿ ಪರಿಷ್ಕೃತ ಶೇಕಡಾ 15.5ರಷ್ಟು ಹೆಚ್ಚಳವಾಗಿತ್ತು.
ಭಾರತೀಯ ಐಟಿ ಷೇರುಗಳು ಜೂನ್‌ನಲ್ಲಿ ಗಮನಾರ್ಹವಾದ ಚೇತರಿಕೆ ಕಂಡಿದ್ದು, ಮಾರುಕಟ್ಟೆ ಮೌಲ್ಯದಲ್ಲಿ ಭಾರಿ ಏರಿಕೆಯನ್ನು ದಾಖಲಿಸಿ ಪ್ರಮುಖ ಐಟಿ ಕಂಪನಿಗಳು ಗಣನೀಯ ಲಾಭ ಗಳಿಸಿವೆ. ಇದು ಈ ಕ್ಷೇತ್ರದ ಒಟ್ಟಾರೆ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಹೆಚ್ಚಿಸಿದೆ. ಇದು ತಾತ್ಕಾಲಿಕ ಏರಿಕೆಯೋ, ಶಾಶ್ವತವೋ ಎಂಬ ಪ್ರಶ್ನೆ ಇದ್ದರೂ, ಐಟಿ ಷೇರುಗಳು ಜುಲೈ ತಿಂಗಳಲ್ಲಿ ಅದ್ಭುತವಾದ ತಿರುವನ್ನು ಪಡೆದುಕೊಂಡು ತಿಂಗಳುಗಳ ಹೂಡಿಕೆದಾರರ ನಿರಾಶೆಯನ್ನು ನಿವಾರಿಸಿದೆ. ಐಟಿ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ರೂ. 3.82 ಲಕ್ಷ ಕೋಟಿಗಳಷ್ಟು ಹೆಚ್ಚಳವಾಗಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಐಟಿ ಉದ್ಯೋಗಗಳಿಗೆ ಮತ್ತು ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಬಹುದು ಎಂಬ ಭೀತಿಯಿಂದ ಹಿಂದೆ ಹೂಡಿಕೆದಾರರು ನಕಾರಾತ್ಮಕ ಮನೋಭಾವ ಹೊಂದಿದ್ದರು. ಆದರೆ ಆ ಭಯ ನಿವಾರಣೆಯಾಗಿ, ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು ಹೂಡಿಕೆದಾರರ ವಿಶ್ವಾಸ ಮರಳಿದೆ. ಉತ್ಪಾದನಾ ವಲಯ ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ ನೇರವಾಗಿ ಕೊಡುಗೆ ನೀಡುತ್ತದೆ. ಕೃಷಿ ಕ್ಷೇತ್ರದಿಂದ ಹೊರ ಬರುವ ಜನರಿಗೆ ಮತ್ತು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುತ್ತದೆ.
ಭಾರತದ ಸೇವಾ ವಲಯ ಮತ್ತು ರಫ್ತು ವಲಯದಲ್ಲಿ ಐಟಿ ಸೆಕ್ಟರ್ ಸಿಂಹಪಾಲು ಹೊಂದಿದೆ. ವಿದೇಶಿ ವಿನಿಮಯವನ್ನು ತರುವ ಮೂಲಕ ದೇಶದ ಆರ್ಥಿಕ ಸ್ಥಿರತೆಯನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಕೌಶಲ್ಯವಿರುವ ಮತ್ತು ಕೌಶಲ್ಯರಹಿತ ಲಕ್ಷಾಂತರ ಯುವಕರಿಗೆ ಕಾರ್ಖಾನೆಗಳು, ಎಂಎಸ್‌ಎಂಇ ಘಟಕಗಳು ಹಾಗೂ ಮೂಲಸೌಕರ್ಯ ವಲಯದಲ್ಲಿ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
ಎಂಜಿನಿಯರಿಂಗ್ ಪದವೀಧರರು ಮತ್ತು ತಂತ್ರಜ್ಞಾನಿಗಳಿಗೆ ಅತ್ಯಂತ ಆಕರ್ಷಕ ಉದ್ಯೋಗಗಳನ್ನು ನೀಡುವುದಲ್ಲದೆ, ದೇಶದ ಯುವ ಸಮುದಾಯದ ಜೀವನಮಟ್ಟವನ್ನು ಸುಧಾರಿಸಲು ಸಹಾಯ ಮಾಡಿದೆ. ಉತ್ಪಾದನಾ ವಲಯವು ದೇಶದ ಒಳಗಿನ ಜನಸಂಖ್ಯೆಯ ದೈನಂದಿನ ಹಾಗೂ ಕೈಗಾರಿಕಾ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಿದರೆ, ಐಟಿ ಸೆಕ್ಟರ್ ಜಾಗತಿಕ ಮಟ್ಟದಲ್ಲಿ ಅಮೆರಿಕ, ಯುರೋಪ್ ಮುಂತಾದ ದೇಶಗಳ ಜೊತೆ ವ್ಯವಹರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪ್ರಾಬಲ್ಯವನ್ನು ಮೆರೆಯುತ್ತದೆ.
ಉತ್ಪಾದನಾ ವಲಯದಲ್ಲಿ ಯಾಂತ್ರೀಕರಣ, ಸ್ವಯಂಚಾಲಿತ ತಂತ್ರಜ್ಞಾನಗಳು (Automation) ಮತ್ತು ಐಟಿ ಕ್ಷೇತ್ರದಲ್ಲಿ ಕ್ಲೌಡ್ ಕಂಪ್ಯೂಟಿಂಗ್, ಎಐ ಮುಂತಾದ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯು ಇಡೀ ದೇಶದ ತಾಂತ್ರಿಕ ಮೌಲ್ಯವನ್ನು ಹೆಚ್ಚಿಸುತ್ತವೆ.
ಉತ್ಪಾದನಾ ರಂಗ ದೇಶದ ಭೌತಿಕ ಉತ್ಪಾದನೆ ಮತ್ತು ಆಧಾರವಾದರೆ, ಐಟಿ ಸೆಕ್ಟರ್ ದೇಶದ ಬುದ್ಧಿವಂತಿಕೆ ಮತ್ತು ಡಿಜಿಟಲ್ ಶಕ್ತಿಯಾಗಿದೆ. ಈ ಎರಡೂ ಕ್ಷೇತ್ರಗಳು ಕೈಜೋಡಿಸಿದಾಗ ಮಾತ್ರ ದೇಶವು ಸಮತೋಲಿತ ಮತ್ತು ವೇಗದ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ. ಐಟಿ ಸ್ಟಾಕ್ಸ್ ಚೇತರಿಕೆಯು ಕರ್ನಾಟಕ ಮತ್ತು ಬೆಂಗಳೂರಿನ ದೃಷ್ಟಿಯಿಂದಲೂ ಸ್ವಾಗತಾರ್ಹ.
ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಐಟಿ ಇಂಡಸ್ಟ್ರಿಯ ಪಾತ್ರ ಪ್ರಮುಖವಾಗಿದೆ. ಬೆಂಗಳೂರು ಕೇವಲ ದೊಡ್ಡ ಕಂಪನಿಗಳಿಗೆ ಮಾತ್ರವಲ್ಲದೆ, ಹೊಸ ಆಲೋಚನೆ ಗಳೊಂದಿಗೆ ಬರುವ ನೂರಾರು ಯುವ ಉದ್ಯಮಿಗಳ ಸ್ಟಾರ್ಟ್‌ಅಪ್‌ಗಳಿಗೆ ಕಾಶಿಯಾಗಿದೆ. ಫಿನ್‌ಟೆಕ್, ಇ-ಕಾಮರ್ಸ್ ಮತ್ತು ಎಐ ರಂಗದಲ್ಲಿ ಹೊಸ ಆವಿಷ್ಕಾರಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಜಗತ್ತಿನಾದ್ಯಂತ ಇರುವ ಕಂಪನಿಗಳು ತಮ್ಮ ತಾಂತ್ರಿಕ ಮತ್ತು ವ್ಯವಹಾರಿಕ ಅಗತ್ಯಗಳಿಗಾಗಿ ಬೆಂಗಳೂರಿನಲ್ಲಿ ‘ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು’ (Global Capability Centres) ಸ್ಥಾಪಿಸಲು ಹೆಚ್ಚು ಆದ್ಯತೆ ನೀಡುತ್ತಿವೆ.
ಇದು ಭಾರತದ ರಫ್ತು ವಲಯಕ್ಕೆ ಬಲ ತುಂಬಿದೆ. ಲಕ್ಷಾಂತರ ಎಂಜಿನಿಯರ್‌ಗಳು, ತಂತ್ರಜ್ಞಾನಿಗಳು ಮತ್ತು ಡಿಜಿಟಲ್ ತಜ್ಞರಿಗೆ ಬೆಂಗಳೂರು ನೇರ ಉದ್ಯೋಗ ನೀಡಿದೆ. ಇದರೊಂದಿಗೆ ಹೋಟೆಲ, ಸಾರಿಗೆ, ರಿಯಲ್ ಎಸ್ಟೇಟ್ ಮತ್ತು ಇತರೆ ಸೇವಾ ವಲಯಗಳಲ್ಲೂ ಲಕ್ಷಾಂತರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲು ಐಟಿ ಸೆಕ್ಟರ್ ಕಾರಣವಾಗಿದೆ.
ವಿಶ್ವದ ನೂರಾರು ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಪ್ರಮುಖ ಕಚೇರಿಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಿವೆ. ಇನೋಸಿಸ್, ವಿಪ್ರೋದಂತಹ ಭಾರತೀಯ ದಿಗ್ಗಜ ಕಂಪನಿಗಳ ಜೊತೆಗೆ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಆಪಲ್ ನಂತಹ ಜಾಗತಿಕ ದೈತ್ಯ ಸಂಸ್ಥೆಗಳು ಇಲ್ಲಿ ತಮ್ಮ ಕಾರ್ಯಾಚರಣೆ ನಡೆಸುತ್ತಿವೆ.
ಹೀಗಾಗಿ ಎಐ ಆತಂಕವನ್ನು ಐಟಿ ಕ್ಷೇತ್ರ ಜೀರ್ಣಿಸಿಕೊಳ್ಳುತ್ತಿರುವುದು ಅದರ ಪ್ರಬುದ್ಧತೆಯ ದ್ಯೋತಕವಾಗಿದೆ. ಹಾಗಾದರೆ ಇಂಥ ಸಂದರ್ಭದಲ್ಲಿ ಯುವಜನತೆ ಯಾವುದಕ್ಕೆ ಆದ್ಯತೆ ನೀಡಬೇಕು? ಮೊದಲನೆಯದಾಗಿ ತಮ್ಮ ವೃತ್ತಿಪರ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಅದುವೇ ಉದ್ಯೋಗಾವಕಾಶವಾಗಿ, ಸ್ವಂತ ಉದ್ದಿಮೆಯ ಸಾಧ್ಯತೆಯಾಗಿ ಬದಲಾಗುತ್ತದೆ.
ಭಾರತದ ಆರು ಪ್ರಮುಖ ಐಟಿ ಕಂಪನಿಗಳು 2026ರ ಏಪ್ರಿಲ್-ಜೂನ್‌ನಲ್ಲಿ 5400 ಉದ್ಯೋಗಿಗಳನ್ನು ನೇಮಿಸಿದೆ. ಇದೇ ಕಂಪನಿಗಳು 2026ರ ಜನವರಿ-ಮಾರ್ಚ್ ಅವಧಿಯಲ್ಲಿ 7100 ಉದ್ಯೋಗಗಳನ್ನು ಕಡಿತಗೊಳಿಸಿದ್ದವು. ಎಐ, ಕ್ಲೌಡ್ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗದಲ್ಲಿ ಹೆಚ್ಚಿನ ನೇಮಕವಾಗಿದೆ. ಪದವಿಯು ಅರ್ಹತೆಯ ಕನಿಷ್ಠ ಮೆಟ್ಟಿಲಾದರೆ, ಕೌಶಲವೇ ಉದ್ಯೋಗ ಮತ್ತು ಯಶಸ್ಸನ್ನು ಖಾತ್ರಿ ಪಡಿಸುತ್ತಿದೆ.
ಡಿಗ್ರಿ ಯಾವುದೇ ಇರಲಿ, ಅಭ್ಯರ್ಥಿಗೆ ಪ್ರೋಗ್ರಾಮಿಂಗ್ ಭಾಷೆಗಳು ಅಥವಾ ತಾಂತ್ರಿಕ ನೈಪುಣ್ಯ ಇದ್ದರೆ ಸಾಕು, ಐಟಿ ಕಂಪನಿಗಳು ಅವಕಾಶ ನೀಡುತ್ತಿವೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟು, ಜಾಗತಿಕ ಆರ್ಥಿಕತೆ ಯ ಮಂದಗತಿ, ಕಚ್ಚಾ ತೈಲ ದರ ಏರಿಕೆಯ ಸವಾಲಿನ ಹೊರತಾಗಿಯೂ ಭಾರತದ ಇಕಾನಮಿ ಚೇತರಿಸುತ್ತಿದೆ. ಸೇವಾ ವಲಯದ ಚಟುವಟಿಕೆಗಳು, ಇಂಡಸ್ಟ್ರಿಯಲ್ ಗ್ರೋತ್, ರಫ್ತು, ಬ್ಯಾಂಕ್ ಸಾಲ ವಿಸ್ತರಣೆ ಮತ್ತು ಕೇಂದ್ರ ಸರಕಾರದ ಬಂಡವಾಳ ವೆಚ್ಚ ಇದಕ್ಕೆ ಕಾರಣ ಎಂದು ಇವೈ ಸಂಸ್ಥೆಯ ವರದಿ ತಿಳಿಸಿದೆ.
ಏನಿದು ಕೇಂದ್ರದ ಬಂಡವಾಳ ವೆಚ್ಚ? ಸರಕಾರವು ದೇಶದ ದೀರ್ಘಕಾಲೀನ ಅಭಿವೃದ್ಧಿಗಾಗಿ, ಹೊಸ ಆಸ್ತಿಗಳನ್ನು ಸೃಷ್ಟಿಸಲು ಅಥವಾ ಅಸ್ತಿತ್ವದಲ್ಲಿರುವ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಮಾಡುವ ಖರ್ಚು. ಸರಳವಾಗಿ ಹೇಳುವುದಾದರೆ, ಇದು ಕೇವಲ ದಿನನಿತ್ಯದ ಖರ್ಚುಗಳಲ್ಲ (ಉದಾಹರಣೆಗೆ ಸರಕಾರಿ ನೌಕರರ ಸಂಬಳ ಅಥವಾ ಪಿಂಚಣಿ ನೀಡುವ ಖರ್ಚಲ್ಲ). ಬದಲಿಗೆ, ಇದು ದೇಶದ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು ಮಾಡುವ ದೀರ್ಘಾವಧಿಯ ಹೂಡಿಕೆಯಾಗಿದೆ.
ಉದಾಹರಣೆಗೆ ಹೊಸ ಹೆದ್ದಾರಿಗಳು, ಎಕ್ ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ರಸ್ತೆಗಳನ್ನು ನಿರ್ಮಿಸು ವುದು. ರೈಲ್ವೆ ಹಳಿಗಳ ವಿಸ್ತರಣೆ, ವಂದೇ ಭಾರತ್ ಹೊಸ ರೈಲುಗಳ ಖರೀದಿ ಮತ್ತು ನಿಲ್ದಾಣಗಳ ಆಧುನೀಕರಣ, ಹೊಸ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ನಿರ್ಮಾಣ. ಹೊಸ ವಿದ್ಯುತ್ ಉತ್ಪಾದನಾ ಘಟಕಗಳು, ಸೌರಶಕ್ತಿ ಯೋಜನೆಗಳು ಮತ್ತು ಗ್ರೀನ್ ಹೈಡ್ರೋಜನ್ ಕಾರಿಡಾರ್ಗಳ ನಿರ್ಮಾಣ.
ಸರಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಐಐಟಿ , ಐಐಎಂಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ನಿರ್ಮಾಣ ಬಂಡವಾಳ ವೆಚ್ಚಕ್ಕೆ ಉದಾಹರಣೆಗಳಾಗಿವೆ. ಬಂಡವಾಳ ವೆಚ್ಚ ಯಾಕೆ ಮುಖ್ಯ? ರಸ್ತೆಗಳು ಅಥವಾ ಕಾರ್ಖಾನೆಗಳನ್ನು ನಿರ್ಮಿಸುವಾಗ ಸಿಮೆಂಟ್, ಉಕ್ಕು ಮುಂತಾದ ಕೈಗಾರಿಕೆ ಗಳು ಬೆಳೆಯುವುದಲ್ಲದೆ, ಲಕ್ಷಾಂತರ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸಿಗುತ್ತವೆ.
ಸರಕಾರವು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದಾಗ, ಖಾಸಗಿ ಕಂಪನಿಗಳು ಕೂಡ ಮುಂದೆ ಬಂದು ದೇಶದಲ್ಲಿ ಹೂಡಿಕೆ ಮಾಡಲು ಅನುಕೂಲವಾಗುತ್ತದೆ. ಇದು ದೇಶದ ಉತ್ಪಾದನಾ ಸಾಮರ್ಥ್ಯವನ್ನು ದೀರ್ಘಕಾಲದವರೆಗೆ ಹೆಚ್ಚಿಸುತ್ತದೆ. ವಿದೇಶಿ ಹೂಡಿಕೆಯನ್ನೂ ಆಕರ್ಷಿಸುತ್ತದೆ. ಐಟಿ ಕ್ಷೇತ್ರದ ಪ್ರಗತಿಗೂ ಸಹಕಾರಿಯಾಗುತ್ತದೆ. ಒಂದಕ್ಕೊಂದು ಎಷ್ಟು ಬಲವಾದ ಸಂಬಂಧ ಇದೆಯಲ್ಲವೇ.