Lokesh Kaayaraga Column: ನಮ್ಮ ರೈತರೆಲ್ಲರೂ ‘ಕೃಷ್ಣ’ ನಾಮ ಜಪಿಸುವಂತಾಗಲಿ !
ಹೆಣ್ಣು, ಹೊನ್ನು, ಮಣ್ಣು ಕಲಹದ ಮೂರು ಕಾರಣಗಳೆಂದು ನಮ್ಮ ಹಿರಿಯರ ಮಾತು. ಇನ್ನಿತರ ಕಾರಣಗಳಿದ್ದರೂ ಹೆಣ್ಣು ಮತ್ತು ಮಣ್ಣಿನ ವಿಚಾರಕ್ಕೆ ಸಂಬಂಧಿಸಿ ಹೆಚ್ಚಿನ ಸಂಘರ್ಷಗಳಾಗಿರುವುದು ಇತಿಹಾಸದಲ್ಲಿ ದಾಖಲಾದ ಸತ್ಯ. ನಮ್ಮ ಕೆಳ ನ್ಯಾಯಾಲಯಗಳಲ್ಲಿ ಈಗಲೂ ಶೇ. 60ಕ್ಕಿಂತ ಹೆಚ್ಚಿನ ಪ್ರಕರಣಗಳು ಭೂ ವ್ಯಾಜ್ಯಕ್ಕೆ ಸಂಬಂಧಿಸಿವೆ. ಕಂದಾಯ ಸಚಿವ ಕೃಷ್ಣಬೈರೇಗೌಡ ತಮ್ಮ ಇಲಾಖೆಯಲ್ಲಿ ಆರಂಭಿಸಿರುವ ಸುಧಾರಣಾ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ರಾಜ್ಯದಲ್ಲಿ ಭೂ ವ್ಯಾಜ್ಯಗಳನ್ನು ಗಣನೀಯವಾಗಿ ಇಳಿಸಬಹುದು. ಭೂ ಒಡೆತನದ ಸಮರ್ಪಕ ದಾಖಲೆ ಪಡೆದ ಲಕ್ಷಾಂತರ ರೈತರ ಬಾಳು ಹಸನಾಗಬಹುದು.


ಲೋಕಮತ
kaayarga@gmail.com
ದೇಶದಲ್ಲಿ 50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯ ಬಗ್ಗೆ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಅಂದಿನ ಅತಿರೇಕಗಳ ಬಗ್ಗೆ ಜೈಲು ಅನುಭವಿಸಿದವರೂ ಸೇರಿದಂತೆ ಅನೇಕರು ಮಾತನಾಡಿದ್ದಾರೆ. ಬಿಜೆಪಿ ನಾಯಕರು ‘ಸಂವಿಧಾನ ಹತ್ಯಾ ದಿವಸ’ ಹೆಸರಿನಲ್ಲಿ ವರ್ಷವಿಡೀ ಕಾರ್ಯಕ್ರಮ ಹಮ್ಮಿ ಕೊಂಡಿದ್ದಾರೆ. ಆದರೆ ಕರ್ನಾಟಕದ ಮಟ್ಟಿಗೆ ತುರ್ತು ಪರಿಸ್ಥಿತಿಯ ಒಂದಷ್ಟು ಧನಾತ್ಮಕ ಪರಿಣಾಮ ಗಳ ಬಗ್ಗೆ ಎಲ್ಲೂ ಚರ್ಚೆಯಾಗುತ್ತಿಲ್ಲ. ಮುಖ್ಯಮಂತ್ರಿ ದೇವರಾಜ ಅರಸು ಅವರು ‘ಉಳುವವನೇ ಹೊಲದೊಡೆಯ’ ಹೆಸರಿನಲ್ಲಿ ಜಾರಿಗೆ ತಂದ ಭೂ ಸುಧಾರಣೆ ಕಾಯಿದೆಯನ್ನು ಸಮರ್ಥವಾಗಿ ಜಾರಿಗೆ ಬರಲು ‘ತುರ್ತು ಪರಿಸ್ಥಿತಿ’ ವಾತಾವರಣ ಸರಿಯಾದ ಭೂಮಿಕೆ ಒದಗಿಸಿದ್ದನ್ನು ಅಂದಿನ ನಾಯಕರೂ ಒಪ್ಪಿಕೊಂಡಿದ್ದಾರೆ.
1975ರಲ್ಲಿ ಕರ್ನಾಟಕದ ಲಕ್ಷಾಂತರ ರೈತರು ತಾವು ಉಳುಮೆ ಮಾಡುತ್ತಿದ್ದ ಭೂಮಿಯ ಒಡೆತನಕ್ಕೆ ‘ಡಿಕ್ಲರೇಷನ್ ಅರ್ಜಿ’ ಸಲ್ಲಿಸಿದಾಗ ಜಮೀನ್ದಾರಿ ವರ್ಗದಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಗಿತ್ತು. ಬ್ರಿಟಿಷರ ಜತೆ ಅನ್ಯೋನ್ಯವಾಗಿದ್ದ ಅಂದಿನ ಹೆಚ್ಚಿನ ಜಮೀನ್ದಾರಿ ಕುಟುಂಬಗಳು ಅಧಿಕಾರ ಮತ್ತು ಆಸ್ತಿ ವಿಚಾರದಲ್ಲಿ ಯಾವುದೇ ಸಾಮಂತ ಅರಸರಿಗಿಂತ ಕಡಿಮೆ ಇರಲಿಲ್ಲ. ಇವರ ಇಚ್ಛೆಗೆ ವಿರುದ್ಧವಾಗಿ ಗೇಣಿದಾರ ರೈತರು ಭೂ ಒಡೆತನಕ್ಕೆ ಅರ್ಜಿ ಹಾಕುವ ಅವಕಾಶವೇ ಇರಲಿಲ್ಲ. ನಮ್ಮೂರಿನಲ್ಲಿ ಊರಿನ ಹತ್ತಾರು ರೈತರ ಪರ ಡಿಕ್ಲರೇಷನ್ ಅರ್ಜಿ ಸಲ್ಲಿಸಿದ ಬಳಿಕ ಧಣಿಗಳಿಂದ ಬಂದ ಬೆದರಿಕೆ, ಒತ್ತಡದ ಬಗ್ಗೆ ನನ್ನ ತಂದೆ ಆಗಾಗ ಹೇಳುತ್ತಿದ್ದರು. ಅಂದು ಕರಾವಳಿ ಜಿಲ್ಲೆಗಳ ಶೇ. 90ರಷ್ಟು ಜಮೀನು ಜಮೀನ್ದಾರರ ವಶದಲ್ಲಿತ್ತು. ಆದರೆ ತುರ್ತು ಪರಿಸ್ಥಿತಿ ಜಾರಿಯಾದ ಬಳಿಕ ಧಣಿಗಳ ದರ್ಬಾರು ಒಮ್ಮೆಲೇ ನಿಂತುಹೋಗಿತ್ತು. ಈ ಅವಧಿಯಲ್ಲಿ ಶ್ರೀಮಂತರು ಇಂದಿರಾ ಅವರ ಹೆಸರು ಹೇಳಲೂ ಭಯಪಡುತ್ತಿದ್ದರು. ರಾಜ್ಯದ 10 ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಒಡೆತನ ಪಡೆಯಲು ತುರ್ತು ಪರಿಸ್ಥಿತಿ ರಕ್ಷಾ ಕವಚವಾಗಿ ಒದಗಿ ಬಂದಿದ್ದನ್ನು ಗೇಣಿದಾರರು ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ.
ಇಷ್ಟರ ಹೊರತಾಗಿಯೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೂ ಸುಧಾರಣೆ ಕಾಯಿದೆ ಸಮರ್ಪಕವಾಗಿ ಜಾರಿಗೆ ಬರಲಿಲ್ಲ. ಆ ಬಳಿಕ ರಾಜ್ಯದ ಕಂದಾಯ ಮತ್ತು ಭೂ ಸಂಬಂಧಿ ಕಾಯಿದೆ ಹಲವು ಬಾರಿ ತಿದ್ದುಪಡಿ ಕಂಡಿವೆ. ಆದರೆ ಹೆಚ್ಚಿನ ಕಾನೂನುಗಳು ಕಡತಕ್ಕೆ ಸೀಮಿತವಾಗಿ ಉಳಿದಿವೆ. ರಾಜ್ಯದ ರೈತರಿಗೆ ಆಸರೆಯಾಗಿ ನಿಲ್ಲಬೇಕಾದ ಕಂದಾಯ ಇಲಾಖೆ ಎಷ್ಟರ ಮಟ್ಟಿಗೆ ಜಡ್ಡುಗಟ್ಟು ಹೋಗಿತ್ತು ಎಂದರೆ ಕಾಯಿದೆ, ನಿಯಮಗಳು ಬದಲಾದರೂ ವ್ಯವಸ್ಥೆ ಬದಲಾಗಿರಲಿಲ್ಲ. ಈ ಖಾತೆಯನ್ನು ವಹಿಸಿಕೊಂಡ ಸಚಿವರು ಆರಂಭದಲ್ಲಿ ಅಬ್ಬರಿಸಿ ಬಳಿಕ ತಾವೂ ಈ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದರು. ಕ್ರಿಯಾಶೀಲ ತಹಶೀಲ್ದಾರ್‌ಗಳು, ವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳು ಕೂಡ ಬದಲಾಗದ ಈ ವ್ಯವಸ್ಥೆಯ ಮುಂದೆ ಅಸಹಾಯಕರಾಗುತ್ತಿದ್ದರು.
ಅರಸು ಅವರ ಭೂಸುಧಾರಣೆ ಕಾಯಿದೆ ಜಾರಿಗೆ ಬಂದ 50 ವರ್ಷಗಳ ಬಳಿಕ ರಾಜ್ಯದ ರೈತಾಪಿ ವರ್ಗದಲ್ಲಿ ಮತ್ತೊಮ್ಮೆ ಸಂಚಲನ ಮೂಡಿದೆ. ಇದಕ್ಕೆ ಕಾರಣವಾಗಿರುವುದು ಕಂದಾಯ ಸಚಿವ ಕೃಷ್ಣ ಬೈರೇಗೌಡ. ಸಿದ್ದರಾಮಯ್ಯಅವರ ಸರಕಾರದಲ್ಲಿ ಮೊದಲು ಕೃಷಿ ಸಚಿವರಾಗಿ ಕೃಷಿ ಭಾಗ್ಯ, ಕೃಷಿ ಹೊಂಡ, ಸಿರಿಧಾನ್ಯ ಉತ್ತೇಜನ ಕ್ರಮಗಳನ್ನು ಕೈಗೊಂಡ ಕೃಷ್ಣ ಬೈರೇಗೌಡ, ಕಂದಾಯ ಸಚಿವರಾದ ಬಳಿಕ ಇನ್ನಷ್ಟು ಕ್ರಿಯಾಶೀಲರಾಗಿ ಕಂಡು ಬರುತ್ತಿದ್ದಾರೆ. ಕಂದಾಯ ಇಲಾಖೆಯ ಆಮೂಲಾಗ್ರ ಬದಲಾವಣೆಗೆ ಅವರು ಕೈಗೊಂಡ ಕ್ರಮಗಳೆಲ್ಲವೂ ಜಾರಿಯಾದರೆ ಲಕ್ಷಾಂತರ ರೈತ ಕುಟುಂಬಗಳು ನೆಮ್ಮದಿ ಕಾಣಲಿವೆ. ಗ್ರಾಮೀಣ ಮಟ್ಟದ ಭ್ರಷ್ಟಾಚಾರಕ್ಕೆ ಒಂದಷ್ಟು ಅಂಕುಶ ಬೀಳಲಿದೆ. ಮುಖ್ಯವಾಗಿ ಭೂ ದಾಖಲೆಗಳ ಡಿಜಿಟಲೀಕರಣ, ಭೂ ಮಾಪನ, ಭೂ ಕಂದಾಯ ಸಂಗ್ರಹ ಸುಧಾರಣೆ ಮತ್ತು ಪಾರದರ್ಶಕತೆ ವಿಚಾರದಲ್ಲಿ ಅವರ ಇಲಾಖೆ ಆರಂಭಿಸಿರುವ ಯೋಜನೆ ಗಳು ಸಮರ್ಪಕವಾಗಿ ಜಾರಿಯಾದರೆ ಈ ದೇಶದ ಕೋರ್ಟುಗಳಲ್ಲಿ ಕೇಸುಗಳ ಭಾರವೂ ಇಳಿಯಲಿದೆ.
ನಿಮಗೆ ಗೊತ್ತೇ ? ನಮ್ಮ ದೇಶದ ಕೆಳ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಉಳಿದಿರುವ ಒಟ್ಟು ಪ್ರಕರಣಗಳಲ್ಲಿ ಶೇ. 66 ಆಸ್ತಿ ವಿವಾದಕ್ಕೆ ಸಂಬಂಧಿಸಿವೆ. ಸುಪ್ರೀಂ ಕೋರ್ಟ್‌ನಲ್ಲೂ ಶೇ.30ರಷ್ಟು ಪ್ರಕರಣಗಳು ಆಸ್ತಿ ವಿವಾದಗಳಿಗೆ ಸಂಬಂಧಿಸಿವೆ. ಒಟ್ಟಾರೆಯಾಗಿ, ದೇಶದ ವಿವಿಧ ನ್ಯಾಯಾಲಯ ಗಳಲ್ಲಿ 4.4 ಕೋಟಿಗೂ ಹೆಚ್ಚು ಆಸ್ತಿ ಪ್ರಕರಣಗಳು ಬಾಕಿ ಉಳಿದಿವೆ. ಇದರಲ್ಲಿ ಸಿವಿಲ್ ಪ್ರಕರಣಗಳು (ಆಸ್ತಿ ವ್ಯಾಜ್ಯಗಳು) ಮತ್ತು ಕ್ರಿಮಿನಲ್ ಪ್ರಕರಣಗಳು ಸೇರಿವೆ. ಕೆಲವು ಪ್ರಕರಣಗಳು ಆರೇಳು ದಶಕಗಳಿಂದ ನ್ಯಾಯಕ್ಕಾಗಿ ಕಾದು ಕುಳಿತಿವೆ. ಈ ವ್ಯಾಜ್ಯಗಳ ಹೆಸರಿನಲ್ಲಿ ಅದೆಷ್ಟು ಮಂದಿ ಹೊಡೆದಾಟ, ಬಡಿದಾಟ ಮಾಡಿ ಸತ್ತಿರಬಹುದು?, ಅದೆಷ್ಟು ಜನರು ಜೈಲು ಸೇರಿರಬಹುದು ? ಅದೆಷ್ಟು ಕುಟುಂಬಗಳು ಒಡೆದು ಸಂಸಾರದ ಸಾಮರಸ್ಯ ಕಳೆದುಕೊಂಡು ಪರಿತಪಿಸಿರಬಹುದು ? ಅದೆಷ್ಟು ಲಕ್ಷ ಹೆಕ್ಟೇರ್ ಭೂಮಿ ಉಳುಮೆ ಮಾಡಲಾಗದೆ ಪಾಳು ಬಿದ್ದಿರಬಹುದು ?, ವ್ಯಾಜ್ಯದ ಕಾರಣದಿಂದ ಸರಕಾರದ ಸವಲತ್ತು, ಸೌಲಭ್ಯ ಪಡೆಯಲಾಗದೆ ಅದೆಷ್ಟು ಕುಟುಂಬಗಳು ದಿಕ್ಕುಗೆಟ್ಟಿರ ಬಹುದು ? ಇವೆಲ್ಲವನ್ನೂ ಯೋಚಿಸಿದರೆ ಇದಕ್ಕೆ ಮೂಲ ಕಾರಣವಾಗಿ ನಿಲ್ಲುವುದು ನಮ್ಮ ಕಂದಾಯ ಇಲಾಖೆಯ ಕಾನೂನು ಕಟ್ಟಳೆ ಮತ್ತು ಇದನ್ನೇ ವಸೂಲಿ ದಂಧೆಯನ್ನಾಗಿ ಮಾಡಿಕೊಂಡ ವ್ಯವಸ್ಥೆಯ ಭ್ರಷ್ಟತೆ.
ಕಂದಾಯ ಸಚಿವರು ಈಗ ಆರಂಭಿಸಿರುವ ಬದಲಾವಣೆ ಪರ್ವ ಎಲ್ಲ ದೋಷಗಳನ್ನೂ ನಿವಾಳಿಸಿ ಬಿಡುತ್ತದೆ ಎಂದಲ್ಲ. ಆದರೆ ಈ ಸುಧಾರಣೆ ಕ್ರಮಗಳು ರಾಜ್ಯದ ಎಲ್ಲ ರೈತರ ಬದುಕಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿವೆ. ಇಲಾಖೆ ಆರಂಭಿಸಿರುವ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡರೆ ರೈತರು ಜಮೀನಿನ ದಾಖಲೆಗಳನ್ನು ತಮಗೆ ಬೇಕಾದಾಗ ಪಡೆದು ಕೊಳ್ಳಲು ಸಾಧ್ಯವಿದೆ. ಸರಕಾರಿ, ಖಾಸಗಿ ಉದ್ಯೋಗಿಗಳಂತೆ ನಮ್ಮ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಆನ್‌ಲೈನ್‌ನಲ್ಲಿಯೇ ಪಡೆದು ಬ್ಯಾಂಕ್, ಸಹಕಾರ ಸಂಘಗಳಿಂದ ಸೊಸೈಟಿಯಿಂದ ಕ್ಷಿಪ್ರವಾಗಿ ಸಾಲ ಪಡೆಯಬಹುದು. ಡಿಜಿಟಲೀಕರಣದಿಂದ ಜಮೀನಿನ ದಾಖಲೆ ಫೋರ್ಜರಿ, ವಂಚನೆಗಳನ್ನು ತಡೆಯಲು ಸಾಧ್ಯವಿದೆ. ಸಚಿವರ ಪ್ರಕಾರ 20 ಕೋಟಿ ಪುಟಗಳಷ್ಟು ಭೂ ದಾಖಲೆ ಗಳನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ಇನ್ನೂ 70 ಕೋಟಿ ಪುಟಗಳ ಡಿಜಿಟಲೀಕರಣ ಕಾರ್ಯ ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಕಂದಾಯ ಇಲಾಖೆಯ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ , ಇ-ಖಾತಾ ವ್ಯವಸ್ಥೆ , ಡಿಜಿಟಲ್ ಸಹಿ ಇವೆಲ್ಲವೂ ಜಾರಿಗೆ ಬಂದರೆ ರೈತನಿಗೂ ಪ್ಯಾನ್ ಕಾರ್ಡ್ ಹೊಂದಿರುವ ಒಬ್ಬ ಉದ್ಯೋಗಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಪ್ಯಾನ್ ಕಾರ್ಡ್‌ನಲ್ಲಿ ಉದ್ಯೋಗಿಗಳ ಆದಾಯ, ಸಾಲ, ಮೂಲಗಳು ದಾಖಲಾದಂತೆ ರೈತನ ದಾಖಲೆಗಳಲ್ಲೂ ಆತನ ಜಮೀನಿನ ವಿಸ್ತಾರ, ಬೆಳೆವಿವರ, ಸಾಲ ಮೂಲಗಳನ್ನು ದಾಖಲಿಸಲು ಅವಕಾಶವಿದೆ. ಜಮೀನು ಹೊಂದಿದ್ದರೂ ಸರಿಯಾದ ದಾಖಲೆ ಗಳನ್ನು ಹೊಂದಿಸಲಾಗದೆ ಪರದಾಡುವ ಪರಿಸ್ಥಿತಿ ತಪ್ಪಲಿದೆ. ಹಾಗೆಯೇ ವಾರ್ಷಿಕ ಕಂದಾಯ ಪಾವತಿಯೂ ಸುಲಭವಾಗಲಿದೆ. ಸರಕಾರಕ್ಕೂ ಹೆಚ್ಚಿನ ಕಂದಾಯ ಸಂಗ್ರಹವಾಗಲಿದೆ.
ನಮ್ಮ ರೈತರು ಎದುರಿಸುತ್ತಿರುವ ಮುಖ್ಯ ಸಮಸ್ಯೆ ಖಾತೆ ವರ್ಗಾವಣೆಗೆ ಸಂಬಂಧಿಸಿದ್ದು. ರಾಜ್ಯದ ಸುಮಾರು 52 ಲಕ್ಷ ಕೃಷಿಕರ ಭೂಮಿ ಮೃತಪಟ್ಟವರ ಹೆಸರಿನಲ್ಲಿವೆ ಎಂದು ಸಚಿವರೇ ತಿಳಿಸಿದ್ದಾರೆ. ಅಂದರೆ ಇಷ್ಟು ಕುಟುಂಬಗಳ ಪಾಲಿಗೆ ಜಮೀನು ಇದ್ದೂ ಇಲ್ಲದಂತೆ. ತಂದೆ- ತಾಯಿ, ತಾತ, ಮುತ್ತಾತರ ಹೆಸರಿನಲ್ಲಿದ್ದ ಜಮೀನು ಸಕಾಲಕ್ಕೆ ವರ್ಗಾವಣೆಯಾಗದೆ ಉಳಿದಾಗ, ಉತ್ತರಾಧಿಕಾರಿಗಳ ಮಧ್ಯೆ ವೈಮನಸ್ಸು ಮೂಡಿದಾಗ, ಫಲಾನುಭವಿಗಳ ಸಂಖ್ಯೆ ಹೆಚ್ಚಿದಾಗ ಖಾತೆ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅರ್ಧ ಎಕರೆಯಾಗಲಿ, ನೂರು ಎಕರೆಯಾಗಲಿ ಪಾರಂಪರಿಕ ಆಸ್ತಿ ಹೊಂದಿರುವ ಹಿಂದೂ ಅವಿಭಕ್ತ ಕುಟುಂಬವೊಂದು ಹತ್ತಾರು ಉತ್ತರಾಧಿಕಾರಿಗಳನ್ನು ಒಟ್ಟು ಸೇರಿಸಿ ಆಸ್ತಿ ಹಂಚಿಕೆ ಮಾಡುವುದು, ಸಮರ್ಪಕ ಖಾತೆ ಮಾಡಿಕೊಳ್ಳುವುದು ಬಹುತೇಕ ಆಗದ ಮಾತು. ಈ ಕಾರಣಕ್ಕಾಗಿಯೇ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ನಮ್ಮಲ್ಲಿ ಸಿವಿಲ್ ವ್ಯಾಜ್ಯಗಳೆಂದರೆ ಮುಗಿಯಿತು. ಅಜ್ಜನ ಕಾಲದ ಕೇಸು ಮೊಮ್ಮಕ್ಕಳ ಕಾಲಕ್ಕೂ ಇತ್ಯರ್ಥ ಕಾಣುವು ದಿಲ್ಲ. ಹೀಗಾಗಿ ಜಮೀನು ಇದ್ದರೂ ಖಾತೆ ಹಂಚಿಕೆಯಾಗದ ಕಾರಣ ಅದರ ಒಡೆತನ ಅನುಭವಿಸ ಲಾಗದ ನೂರಾರು ಕುಟುಂಬಗಳಿವೆ. ಸಚಿವ ಕೃಷ್ಣ ಬೈರೇಗೌಡರ ಪೌತಿ ಖಾತೆ ಅಭಿಯಾನದಡಿ ಭೂ ಒಡೆತನ ಪ್ರಶ್ನೆಗಳೆಲ್ಲವೂ ಇತ್ಯರ್ಥವಾದರೆ ನಮ್ಮ ರೈತರೆಲ್ಲರೂ ಪ್ರತಿದಿನ ಕೃಷ್ಣನಾಮ ಜಪಿಸುವು ದರಲ್ಲಿ ಸಂಶಯವಿಲ್ಲ !
ತಾಲ್ಲೂಕು ಮಟ್ಟದಲ್ಲಿ ಸಹಾಯಕ ಆಯುಕ್ತರ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸುಮಾರು 69,800 ಭೂ ವ್ಯಾಜ್ಯ ಪ್ರಕರಣಗಳನ್ನು 26,000ಕ್ಕೆ ಇಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದೇ ರೀತಿ ಭೂ ಗ್ಯಾರಂಟಿ ಯೋಜನೆ, ಭೂ ಪರಿವರ್ತನೆ ಸುಧಾರಣೆ, ಸರಕಾರಿ ಭೂಮಿ ಒತ್ತುವರಿ ತೆರವು, ನೋಂದಣಿ ಪ್ರಕ್ರಿಯೆ ಸರಳೀಕರಣ ಕ್ರಮಗಳು ಕೃಷ್ಣ ಬೈರೇಗೌಡರ ಆಶಯದಂತೆ ಜಾರಿಯಾದರೆ ದೇವರಾಜ ಅರಸು ಅವರಂತೆ ಅವರ ಹೆಸರೂ ಇತಿಹಾಸದಲ್ಲಿ ದಾಖಲಾಗಲಿದೆ. ಸಚಿವರ ಇಚ್ಛಾಶಕ್ತಿಗೊಂದು ಸಲಾಂ ಹೇಳುತ್ತಲೇ ಅವರ ಉತ್ಸಾಹಕ್ಕೆ ಕುಂದು ಬಾರದಿರಲಿ ಎಂದು ಆಶಿಸೋಣ.