ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಹಂಟರ್‌ ಎಸ್.‌ ಥಾಂಪ್ಸನ್‌ ನೆನಪು

ಕಥೆಯ ಕ್ಲೈಮ್ಯಾಕ್ಸ್ ಏನೆಂದರೆ, ಪುಸ್ತಕ ಮುಗಿಯುವ ಹೊತ್ತಿಗೆ ಅದೇ ಗ್ಯಾಂಗ್‌ನವರು ಥಾಂಪ್ಸನ್‌ ನನ್ನು ನಡುರಸ್ತೆಯಲ್ಲಿ ಚೆನ್ನಾಗಿ ಥಳಿಸಿ ಆಸ್ಪತ್ರೆಗೆ ಕಳುಹಿಸಿದರು. ಥಾಂಪ್ಸನ್ ರಕ್ತ ಒರೆಸಿಕೊಳ್ಳುತ್ತಾ, ‘ವರದಿಗಾರಿಕೆಗೆ ಇಷ್ಟಾದರೂ ಡೆಡಿಕೇಷನ್ ಇರಬೇಕು’ ಎಂದು ನಕ್ಕಿರಬೇಕು. ಇವನ ದಿನಚರಿಯನ್ನು ನೆನಪಿಸಿಕೊಂಡರೆ ಇಂದಿನ ಫಿಟ್ನೆಸ್ ಫ್ರೀಕ್‌ಗಳಿಗೆ ತಲೆ ಸುತ್ತಿ ಬೀಳುವುದು ಗ್ಯಾರಂಟಿ. ‌

Vishweshwar Bhat Column: ಹಂಟರ್‌ ಎಸ್.‌ ಥಾಂಪ್ಸನ್‌ ನೆನಪು

-

ಸಂಪಾದಕರ ಸದ್ಯಶೋಧನೆ

ಪತ್ರಿಕೋದ್ಯಮದ ಇತಿಹಾಸದಲ್ಲಿ ಎಲ್ಲರೂ ಸೂಟು-ಬೂಟು ಧರಿಸಿ, ಕೈಯಲ್ಲಿ ನೋಟ್‌ಪ್ಯಾಡ್ ಹಿಡಿದು ‘ಸರ್, ಈ ವಿಷಯಕ್ಕೆ ನಿಮ್ಮ ಹೇಳಿಕೆ ಏನು?’ ಎಂದು ಬಗ್ಗಿ ನಿಲ್ಲುವ ಕಾಲವೊಂದಿತ್ತು. ಆ ಶಾಂತ, ಸಭ್ಯ ನಡತೆಗೆ ಬದಲಾಗಿ ಕೈಯಲ್ಲಿ ವಿಸ್ಕಿ ಗ್ಲಾಸ್, ಬಾಯಲ್ಲಿ ಸಿಗರೇಟ್ ಫಿಲ್ಟರ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಸಿಕ್ಕಿಸಿಕೊಂಡು ಬಾಂಬ್ ಎಸೆದಂತೆ ನುಗ್ಗಿದ ಮಹಾನುಭಾವನೇ ಹಂಟರ್ ಎಸ್. ಥಾಂಪ್ಸನ್. ಸಾಮಾನ್ಯವಾಗಿ ಪತ್ರಕರ್ತರು ಘಟನೆಯನ್ನು ದೂರದಿಂದ ನೋಡುವ ಕನ್ನಡಿಯಾ ದರೆ, ಥಾಂಪ್ಸನ್ ಆ ಕನ್ನಡಿಯನ್ನೇ ಒಡೆದು, ‘ನೋಡಿ, ಸಮಾಜ ಎಷ್ಟು ರಕ್ತಸಿಕ್ತವಾಗಿದೆ’ ಎಂದು ಕಿರುಚಿದ ಅಪ್ಪಟ ಹುಚ್ಚು ಪ್ರತಿಭೆ.

ಅವನ ಪ್ರಕಾರ, ವೃತ್ತಿಪರ ಪತ್ರಿಕೋದ್ಯಮವೆಂದರೆ ಕೇವಲ ಸತ್ಯವನ್ನು ಹೇಳುವುದಲ್ಲ, ಆ ಸತ್ಯಕ್ಕೆ ಮದ್ಯ, ಮಾದಕವಸ್ತು, ಆಕ್ರೋಶ ಮತ್ತು ಒಂದಿಷ್ಟು ಅತಿರೇಕದ ಮಸಾಲೆ ಬೆರೆಸಿ ಓದುಗನ ಮುಖಕ್ಕೆ ರಾಚುವುದು! ಹೀಗೆ ಜನ್ಮತಾಳಿದ್ದೇ ಅವನ ಪ್ರಸಿದ್ಧ ‘ಗೊಂಜೊ ಜರ್ನಲಿಸಂ’ (Gonzo Journalism).

ಸಾಂಪ್ರದಾಯಿಕ ಪತ್ರಕರ್ತರು ‘ವಸ್ತುನಿಷ್ಠತೆ’ ಎಂಬ ಪರಿಕಲ್ಪನೆಯನ್ನು ಪೂಜಿಸುತ್ತಿದ್ದರೆ, ಥಾಂಪ್ಸನ್ ಅದನ್ನು ಕಸದ ಬುಟ್ಟಿಗೆ ಎಸೆದ. ‘ನಾನೇ ಆ ಕಥೆ, ನಾನೇ ಆ ಅಪಘಾತ, ನಾನೇ ಆ ವರದಿ’ ಎಂಬುದು ಅವನ ಸರಳ ಸಿದ್ಧಾಂತವಾಗಿತ್ತು. ಅವನ ಸಾಹಸದ ಮೊದಲ ದೊಡ್ಡ ಕಿಡಿ ಹೊತ್ತಿ‌ ಕೊಂಡಿದ್ದು ‘ಹೆಲ್ಸ್ ಏಂಜಲ್ಸ್’ ಎಂಬ ಕುಖ್ಯಾತ ಬೈಕರ್ ಗ್ಯಾಂಗ್ ಜತೆ. ಸಾಮಾನ್ಯ ಪತ್ರಕರ್ತ ಇಂಥ ಗ್ಯಾಂಗ್ ಕಂಡರೆ ಮೈಲು ದೂರ ಓಡುತ್ತಿದ್ದ. ಆದರೆ ಥಾಂಪ್ಸನ್ ತನ್ನ ಬೈಕ್ ತಗೆದುಕೊಂಡು ಆ ಪುಂಡರ ಗ್ಯಾಂಗ್‌ನ ಒಂದು ವರ್ಷ ಸದಸ್ಯನಾಗಿ ಸೇರಿಕೊಂಡ. ಅವರ ಜತೆ ಕುಡಿದು, ರಸ್ತೆಗಳಲ್ಲಿ ದಾಂಧಲೆ ನಡೆಸಿ ಅದ್ಭುತ ಪುಸ್ತಕ ಬರೆದ.

ಇದನ್ನೂ ಓದಿ: Vishweshwar Bhat Column: ‘ದಿ ನ್ಯೂಯಾರ್ಕರ್’ ಜಾಹೀರಾತು ಪಯಣ

ಕಥೆಯ ಕ್ಲೈಮ್ಯಾಕ್ಸ್ ಏನೆಂದರೆ, ಪುಸ್ತಕ ಮುಗಿಯುವ ಹೊತ್ತಿಗೆ ಅದೇ ಗ್ಯಾಂಗ್‌ನವರು ಥಾಂಪ್ಸನ್‌ ನನ್ನು ನಡುರಸ್ತೆಯಲ್ಲಿ ಚೆನ್ನಾಗಿ ಥಳಿಸಿ ಆಸ್ಪತ್ರೆಗೆ ಕಳುಹಿಸಿದರು. ಥಾಂಪ್ಸನ್ ರಕ್ತ ಒರೆಸಿಕೊಳ್ಳುತ್ತಾ, ‘ವರದಿಗಾರಿಕೆಗೆ ಇಷ್ಟಾದರೂ ಡೆಡಿಕೇಷನ್ ಇರಬೇಕು’ ಎಂದು ನಕ್ಕಿರಬೇಕು. ಇವನ ದಿನಚರಿಯನ್ನು ನೆನಪಿಸಿಕೊಂಡರೆ ಇಂದಿನ ಫಿಟ್ನೆಸ್ ಫ್ರೀಕ್‌ಗಳಿಗೆ ತಲೆ ಸುತ್ತಿ ಬೀಳುವುದು ಗ್ಯಾರಂಟಿ. ‌

ಮಧ್ಯಾಹ್ನ ಮೂರು ಗಂಟೆಗೆ ಎದ್ದೇಳುವುದು, ನೇರವಾಗಿ ವಿಸ್ಕಿ ಬಾಟಲ್ ಮುಟ್ಟುವುದು, ನಂತರ ಡನ್‌ಹಿಲ್ ಸಿಗರೇಟ್‌ಗಳು, ವಿಚಿತ್ರ ಮಾದಕವಸ್ತುಗಳ ಮೆನು, ಬಿಸಿಬಿಸಿ ಕಾಫಿ ಮತ್ತು ಮಧ್ಯರಾತ್ರಿಯ ನಂತರ ಟೈಪ್‌ರೈಟರ್ ಮುಂದೆ ಕುಳಿತು ಬೆಂಕಿಯುಗುಳುವ ಬರಹಗಳನ್ನು ಬರೆಯುವುದು- ಇದಿಷ್ಟೇ ಅವನ ದಿನಚರಿಯಾಗಿತ್ತು.

ಸಾಮಾನ್ಯ ಮನುಷ್ಯ ಈ ದಿನಚರಿಯನ್ನು ಮೂರು ದಿನ ಪಾಲಿಸಿದರೆ ನೇರವಾಗಿ ಪರಲೋಕ ತಲುಪುತ್ತಿದ್ದ. ಆದರೆ ಥಾಂಪ್ಸನ್ ಇದೇ ರೀತಿ ದಶಕಗಳ ಕಾಲ ಬದುಕಿದ. ಅವನ ಅತ್ಯಂತ ಪ್ರಸಿದ್ಧ ಕೃತಿ ‘ಫಿಯರ್ ಆಂಡ್ ಲೋಥಿಂಗ್ ಇನ್ ಲಾಸ್ ವೇಗಾಸ್’ ಹುಟ್ಟಿಕೊಂಡ ಕಥೆಯಂತೂ ಸಂಪೂರ್ಣ ಸರ್ಕಸ್. ಯಾವುದೋ ಮೋಟಾರ್ ಸೈಕಲ್ ರೇಸ್ ಬಗ್ಗೆ 250 ಪದಗಳ ಪುಟ್ಟ ವರದಿ ಬರೆಯಲು ಪತ್ರಿಕೆಯವರು ಇವನನ್ನು ಲಾಸ್ ವೇಗಾಸ್‌ಗೆ ಕಳುಹಿಸಿದ್ದರು. ಆದರೆ ಥಾಂಪ್ಸನ್ ಕಾರಿನ ಡಿಕ್ಕಿಯಲ್ಲಿ ಕೆಮಿಕಲ್ ಲ್ಯಾಬ್‌ಗೆ ಸಾಲುವಷ್ಟು ಮಾದಕವಸ್ತುಗಳನ್ನು ತುಂಬಿಕೊಂಡು, ತನ್ನ ವಕೀಲ ಸ್ನೇಹಿತನ ಜತೆ ಹೊರಟ. ಕೊನೆಗೆ ಕ್ರೀಡಾ ವರದಿ ಹೋಗಿ, ಇಡೀ ಅಮೆರಿಕದ ಬೂಟಾಟಿಕೆಯನ್ನು ಬೆತ್ತಲೆ ಮಾಡುವ, ಭ್ರಮೆ ಮತ್ತು ವಾಸ್ತವದ ನಡುವಿನ ಅತಿ ದೊಡ್ಡ ಕ್ಲಾಸಿಕ್ ಕಾದಂಬರಿ ಜಗತ್ತಿಗೆ ಸಿಕ್ಕಿತು!

1970ರಲ್ಲಿ ಕೊಲೊರಾಡೋದ ಪಿಟ್ಕಿನ್ ಕೌಂಟಿಗೆ ಶರೀಫ್(ಪೊಲೀಸ್ ಮುಖ್ಯಸ್ಥ) ಚುನಾವಣೆಗೆ ನಿಂತದ್ದು ಇವನ ಜೀವನದ ಮತ್ತೊಂದು ಮಹಾ ಪ್ರಹಸನ. ಅವನ ಚುನಾವಣಾ ಭರವಸೆಗಳೇನು ಗೊತ್ತೇ? ‘ಪಾದಚಾರಿ ರಸ್ತೆಗಳನ್ನು ಅಗೆದು ಹಸಿರು ಹುಲ್ಲು ಬೆಳೆಸುವುದು’, ‘ನಗರದ ಹೆಸರನ್ನು ‘ಫ್ಯಾಟ್ ಸಿಟಿ’ ಎಂದು ಬದಲಾಯಿಸುವುದು’ ಮತ್ತು ಮುಖ್ಯವಾಗಿ, ‘ಯಾವುದೇ ಡ್ರಗ್ಸ್ ಡೀಲರ್ ಅಸಲಿ ಸರಕನ್ನು ಬಿಟ್ಟು ಕಲಬೆರಕೆ ಮಾರಿದರೆ ಜೈಲಿಗೆ ಹಾಕುವುದು’. ‌

ತನ್ನ ಎದುರಾಳಿ ಪೊಲೀಸ್ ಅಧಿಕಾರಿಯನ್ನು ರ್ಯಾಗಿಂಗ್ ಮಾಡಲು ಥಾಂಪ್ಸನ್ ತನ್ನ ತಲೆಯ ಕೂದಲನ್ನೆಲ್ಲ ಬೋಳಿಸಿಕೊಂಡು, ‘ನನ್ನ ಎದುರಾಳಿ ಉದ್ದ ಕೂದಲು ಬಿಟ್ಟಿದ್ದಾನೆ’ ಎಂದು ಗೇಲಿ ಮಾಡಿದ್ದ. ಸ್ವಲ್ಪದರ ಆತ ಗೆಲ್ಲುವುದು ತಪ್ಪಿತು, ಇಲ್ಲದಿದ್ದರೆ ಅಲ್ಲಿನ ವ್ಯವಸ್ಥೆ ಹೇಗಿರುತ್ತಿತ್ತೋ ದೇವರಿಗೇ ಗೊತ್ತು.

2005ರಲ್ಲಿ ತನ್ನ 67ನೇ ವಯಸ್ಸಿನಲ್ಲಿ, ವೃದ್ಧಾಪ್ಯದ ಬೇಸರದಿಂದ ಗುಂಡು ಹಾರಿಸಿಕೊಂಡು ಇಹಲೋಕ ತ್ಯಜಿಸಿದ. ಆದರೆ ಸಾಯುವ ಮುನ್ನವೂ ತನ್ನ ಹುಚ್ಚುತನವನ್ನು ಬಿಡಲಿಲ್ಲ. ಅವನ ಅಂತಿಮ ಆಸೆಯಂತೆ, ಅವನ ಆಪ್ತ ಸ್ನೇಹಿತ ಹಾಗೂ ನಟ ಜಾನಿ ಡೆಪ್ ಲಕ್ಷಾಂತರ ಡಾಲರ್ ಖರ್ಚು ಮಾಡಿ 153 ಅಡಿ ಎತ್ತರದ ಫಿರಂಗಿ ಗೋಪುರ ನಿರ್ಮಿಸಿದ. ಅದರಲ್ಲಿ ಥಾಂಪ್ಸನ್ ಚಿತಾಭಸ್ಮವನ್ನು ತುಂಬಿ, ಬಾಣಬಿರುಸುಗಳ ಜತೆ ಆಕಾಶಕ್ಕೆ ಸಿಡಿಸಲಾಯಿತು !