Dr K Sudhakar: ಪೋಷಕರನ್ನು ಕಳೆದುಕೊಂಡ 9 ಮಕ್ಕಳೊಂದಿಗೆ ದೀಪಾವಳಿ ಸಂಭ್ರಮ ಹಂಚಿಕೊಂಡ ಸಂಸದ ಡಾ.ಕೆ. ಸುಧಾಕರ್
ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಂಡಿರುವ ಸಂಸದರು ಮಕ್ಕಳ ಪಾಲಿನ ಪೋಷಕರಾಗಿ ನೆರವಿಗೆ ನಿಂತಿದ್ದಾರೆ. ಪ್ರತಿ ಮಗುವಿನ ಹೆಸರಲ್ಲಿ ಒಂದು ಲಕ್ಷ ಡೆಪಾಸಿಟ್ ಮಾಡಿರುವ ಇವರು ಹಬ್ಬದ ಸಂದರ್ಭದಲ್ಲಿ ಒಂಟಿತನದ ಭಾವನೆ ಮೂಡದಂತೆ ಅವರೊಂದಿಗೆ ಸಮಯ ಕಳೆದು, ಸಂತಸದ ಕ್ಷಣಗಳನ್ನು ಹಂಚಿಕೊಂಡರು.
-
ಚಿಕ್ಕಬಳ್ಳಾಪುರ: ಕೋವಿಡ್(Covid) ಸಂಕಷ್ಟದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ದೀಪಾವಳಿ ಸಂಭ್ರಮದಲ್ಲಿ ಪ್ರೀತಿ, ಆತ್ಮೀಯತೆ ಹಾಗೂ ಭರವಸೆಯ ಸಾಂತ್ವನ ನೀಡುವ ಮೂಲಕ ಸಂಸದ ಡಾ.ಕೆ. ಸುಧಾಕರ್(Dr K Sudhakar) ಮಾನವೀಯತೆ ಮೆರೆದರು.
ತಾಲೂಕಿನ ಪೆರೇಸಂದ್ರದಲ್ಲಿರುವ ತಮ್ಮ ಸ್ವಗೃಹದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಒಂಬತ್ತು ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಕ್ಕಳೊಂದಿಗೆ ಒಂದೇ ಪಂಕ್ತಿಯಲ್ಲಿ ಕುಳಿತು ಭೋಜನ ಸವಿದ ಅವರು, ಅವರೊಂದಿಗೆ ಆತ್ಮೀಯವಾಗಿ ಬೆರೆತು ಹಬ್ಬದ ಸಂತಸ ಹಂಚಿಕೊಂಡರು.
ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಂಡಿ ರುವ ಸಂಸದರು ಮಕ್ಕಳ ಪಾಲಿನ ಪೋಷಕರಾಗಿ ನೆರವಿಗೆ ನಿಂತಿದ್ದಾರೆ. ಪ್ರತಿ ಮಗುವಿನ ಹೆಸರಲ್ಲಿ ಒಂದು ಲಕ್ಷ ಡೆಪಾಸಿಟ್ ಮಾಡಿರುವ ಇವರು ಹಬ್ಬದ ಸಂದರ್ಭದಲ್ಲಿ ಒಂಟಿತನದ ಭಾವನೆ ಮೂಡದಂತೆ ಅವರೊಂದಿಗೆ ಸಮಯ ಕಳೆದು, ಸಂತಸದ ಕ್ಷಣಗಳನ್ನು ಹಂಚಿಕೊಂಡರು.
ಹಬ್ಬದ ಆಚರಣೆಯನ್ನು ಕೇವಲ ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಂಕಷ್ಟದಲ್ಲಿರುವ ಮಕ್ಕಳೊಂದಿಗೆ ಸಂತಸ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಕಾಳಜಿ ಮೆರೆದ ಅವರ ನಡೆ ಗಮನ ಸೆಳೆಯಿತು.
ವಿಜಯೇಂದ್ರ ಬದಲಾವಣೆ ಪ್ರಸ್ತಾಪವೇ ಇಲ್ಲ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸ್ಥಾನ ಬದಲಾವಣೆಯ ಪ್ರಸ್ತಾಪ ಹೈಕಮಾಂಡ್ ಮಟ್ಟದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ ಎರಡು ವರ್ಷಗಳಿಂದ ವಿಜಯೇಂದ್ರ ಅವರು ಕ್ರಿಯಾಶೀಲವಾಗಿ ಪಕ್ಷ ಸಂಘಟಿಸುತ್ತಿದ್ದು, ತಳಮಟ್ಟದಲ್ಲಿ ಪಕ್ಷಕ್ಕೆ ಸದೃಢ ಬುನಾದಿ ಹಾಕಿದ್ದಾರೆ. ಅವರ ನಾಯಕತ್ವದ ಬಗ್ಗೆ ಪಕ್ಷದೊಳಗೆ ಯಾವುದೇ ಅಪಸ್ವರಗಳಿಲ್ಲ. ಸದ್ಯಕ್ಕೆ ಅವರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ: ರಾಜ್ಯದಲ್ಲಿ ಫೆಬ್ರವರಿ ನಂತರ ಚುನಾವಣೆಗಳ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಹಾಲಿನ ದರ, ಬಸ್ ಪ್ರಯಾಣ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರಿಗೆ ತೊಂದರೆ ಕೊಟ್ಟ ಸರ್ಕಾರ ಇತಿಹಾಸದಲ್ಲಿ ಉಳಿದಿಲ್ಲ ಎಂದು ಟೀಕಿಸಿದರು.
ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ದೂರದೃಷ್ಟಿಯ ಗುರಿ: ರಾಜಕಾರಣದಲ್ಲಿ ದೂರದೃಷ್ಟಿ ಮತ್ತು ಕರ್ತವ್ಯದ ಬದ್ಧತೆ ಇದ್ದಾಗ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ಹಾಲಿ ಶಾಸಕ ಪ್ರದೀಪ್ ಈಶ್ವರ್ ಅವರಲ್ಲಿ ಅಭಿವೃದ್ಧಿಗೆ ಅಗತ್ಯವಾದ ದೂರದೃಷ್ಟಿ ಹಾಗೂ ಬದ್ಧತೆಯ ಕೊರತೆಯಿಂದ ಕ್ಷೇತ್ರದ ಪ್ರಗತಿಗೆ ಹಿನ್ನಡೆಯಾಗಿದೆ . ಕೈಗೆ ಬಂದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಜನತೆ ಆಶೀರ್ವಾದ ಮಾಡಿದಲ್ಲಿ ಭವಿಷ್ಯದಲ್ಲಿ ಚಿಕ್ಕಬಳ್ಳಾಪುರವನ್ನು ಬೆಂಗಳೂರಿನ ಉಪನಗರ ವಾಗಿ ರೂಪಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು ಮಾದರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಆಡಳಿತಾತ್ಮಕ ಚಟುವಟಿಕೆಗಳ ಪ್ರಮುಖ ಕೇಂದ್ರ ಚಿಕ್ಕಬಳ್ಳಾಪುರದಲ್ಲಿಯೇ ಇರುವಂತೆ ರೂಪುರೇಷೆ ಸಿದ್ಧಪಡಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಇದೇ ವೇಳೆ ಜಿಲ್ಲೆಯ ಜನತೆಗೆ ದೀಪಾವಳಿ ಹಬ್ಬ ಬೆಳಕಿನಂತೆ ಸಂತೋಷ ಸಂಭ್ರಮವನ್ನು ಹೊತ್ತು ತರಲಿ ಎಂದು ಆಶಿಸಿದರು.