#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Roopa Gururaj Column: ಸ್ವಾತಂತ್ರ್ಯದ ಬದುಕಿಗಿಂತ ಬೇರೆ ಯಾವುದೂ ಮುಖ್ಯವಲ್ಲ

ನಾಯಿಗೆ ಮರುಕ ಉಂಟಾಗಿ ‘ನೋಡಣ್ಣಾ, ನೀನೂ ಕೂಡ ನನ್ನ ಹಾಗೆ ನಡೆದುಕೊಂಡರೆ ನನ್ನಂ ತೆಯೇ ನೀನೂ ಸುಖವಾಗಿ ನೆಮ್ಮದಿಯಾಗಿ ಇರಬಹುದು’ ಎಂದಿತು. ಆಗ ತೋಳ,‘ಅದು ಹೇಗೆ? ಹೇಳು ನೋಡೋ ಣ?’ ಎಂದಿತು. ‘ಅದು ಹೇಗೆಂದರೆ ನೀನು ಮೊದಲು ಕಾಡು ಬಿಟ್ಟು ಊರಿಗೆ ಬರಬೇಕು’ ಎಂದಿತು ನಾಯಿ

ಸ್ವಾತಂತ್ರ್ಯದ ಬದುಕಿಗಿಂತ ಬೇರೆ ಯಾವುದೂ ಮುಖ್ಯವಲ್ಲ

ಒಂದೊಳ್ಳೆ ಮಾತು

ಕಾಡಿನಲ್ಲಿದ್ದ ಒಂದು ತೋಳ ಹಾಗೂ ಊರಿನಲ್ಲಿದ್ದ ನಾಯಿ ಒಮ್ಮೆ ಭೇಟಿಯಾದವು. ತೋಳಕ್ಕೆ ಸರಿಯಾಗಿ ಆಹಾರ ಸಿಗದೆ ಬಡಕಲಾಗಿತ್ತು. ನಾಯಿ ಒಬ್ಬ ಸಾಹುಕಾರನ ಮನೆಯ ಕಾವಲು ಕಾಯು ತ್ತಿತ್ತು, ಹಾಗಾಗಿ ಚೆನ್ನಾಗಿ ತಿಂದುಂಡು ನೋಡಲು ದಷ್ಟಪುಷ್ಟವಾಗಿ ಬೆಳೆದಿತ್ತು. ‌ನಾಯಿಯನ್ನು ನೋಡಿದ ತೋಳವು ‘ಗೆಳೆಯ, ನಿನ್ನ ಮೈ ಅದೆಷ್ಟು ನುಣುಪಾಗಿ ತುಂಬಿಕೊಂಡಿದೆ, ಪ್ರತಿದಿನ ನಿನಗೆ ಒಳ್ಳೆಯ ಊಟ ಸಿಗುತ್ತಿರುವ ಹಾಗೆ ಕಾಣುತ್ತಿದೆ, ಆದರೆ ನನ್ನ ಪಾಡು ನೋಡು, ಹಗಲು-ರಾತ್ರಿ ಬಿಡುವಿಲ್ಲದೆ ಅಲೆದರೂ ನನಗೆ ಹೊಟ್ಟೆ ತುಂಬಾ ಊಟ ಸಿಗುತ್ತಿಲ್ಲ ಎಂಥಾ ಅದೃಷ್ಟ ನನ್ನದು’ ಎಂದು ತನ್ನ ದುಃಖವನ್ನು ತೋಡಿಕೊಂಡಿತು.

ನಾಯಿಗೆ ಮರುಕ ಉಂಟಾಗಿ ‘ನೋಡಣ್ಣಾ, ನೀನೂ ಕೂಡ ನನ್ನ ಹಾಗೆ ನಡೆದುಕೊಂಡರೆ ನನ್ನಂ ತೆಯೇ ನೀನೂ ಸುಖವಾಗಿ ನೆಮ್ಮದಿಯಾಗಿ ಇರಬಹುದು’ ಎಂದಿತು. ಆಗ ತೋಳ,‘ಅದು ಹೇಗೆ? ಹೇಳು ನೋಡೋಣ?’ ಎಂದಿತು. ‘ಅದು ಹೇಗೆಂದರೆ ನೀನು ಮೊದಲು ಕಾಡು ಬಿಟ್ಟು ಊರಿಗೆ ಬರಬೇಕು’ ಎಂದಿತು ನಾಯಿ.

ಇದನ್ನೂ ಓದಿ: ‌Roopa Gururaj Column: ಗೋಕುಲದ ಕೃಷ್ಣ ಮತ್ತು ದ್ವಾರಕಾಧೀಶ

‘ಅಲ್ಲಿ ಚೆನ್ನಾಗಿ ಬೇಟೆಯಾಡಲು ಸಾಧ್ಯವೇ?’ ಕೇಳಿತು ತೋಳ. ‘ಛೆ ,ಛೇ, ಕಾಡಿನ ಹಾಗೆ ಅಲ್ಲೆಲ್ಲಾ ಬೇಟೆ ಗೀಟೆ ಆಡಬಾರದು’ ಎಂದಿತು ನಾಯಿ. ‘ಹಾಗಾದರೆ ಮತ್ತೇನು ಮಾಡಬೇಕು? ಅಲ್ಲೂ ಕಷ್ಟ ತಾನೇ?’ ಎಂದಿತು ತೋಳ. ‘ಹಾಗೆಲ್ಲಾ ಕಷ್ಟವೇನಿಲ್ಲ.. ನೋಡು, ನಾನೀಗ ಸಾಹುಕಾರನ ಮನೆ ಕಾವಲುಗಾರ. ನನ್ನ ಕೆಲಸ ಮುಖ್ಯವಾಗಿ ರಾತ್ರಿ ಹೊತ್ತು. ಆ ಸಮಯದಲ್ಲಿ ಕಳ್ಳಕಾಕರು ಮನೆಗೆ ಬರದಂತೆ ಎಚ್ಚರಿಕೆಯಿಂದ ನಾನು ಕಾವಲು ಕಾಯಬೇಕಷ್ಟೆ.

ನಾನೊಬ್ಬನೇ ಕಾವಲು ಕಾಯುವುದು ನನಗೂ ಬೇಸರ, ನೀನು ಕೂಡಾ ನನ್ನ ಜೊತೆ ಇದ್ದರೆ ಇಬ್ಬರೂ ಸುಖವಾಗಿ, ಮಾತನಾಡುತ್ತಾ ತಿಂದು ತೇಗಿ ಹಾಯಾಗಿರಬಹುದು ಬೇಕಾದರೆ, ನೀನೂ ನನ್ನ ಜೊತೆ ಬಾ’ ಎಂದಿತು. ’ಅಯ್ಯೋ ಇಷ್ಟೇ ತಾನೇ? ಹಾಗಾದರೆ ನಾನು ಹಿಂದೂ ಮುಂದು ನೋಡದೆ, ನಿನ್ನ ಜೊತೆ ಬಂದುಬಿಡುತ್ತೇನೆ, ಸದ್ಯ ಈ ಚಳಿಯಲ್ಲಿ, ಅಲ್ಲಿ ಇಲ್ಲಿ ಅಲೆಯೋದು ತಪ್ಪಿದರೆ ಸಾಕೆನಿಸಿದೆ, ಇರಲು ಬೆಚ್ಚಗೆ ಮನೆ, ರುಚಿ ರುಚಿಯಾದ ಊಟ ಇದ್ದರೆ, ಇನ್ನೇನು ತಾನೇ ಬೇಕು? ಅದೇ ಸ್ವರ್ಗ ಸುಖ’ ಎಂದು ನಾಯಿಯೊಡನೆ ಹೊರಟಿತು ತೋಳ.

ದಾರಿಯಲ್ಲಿ ತೋಳ ನಾಯಿಯ ಕತ್ತನ್ನು ನೋಡಿತು. ಅದರ ಕತ್ತಿನ ಸುತ್ತಲೂ ಕೂದಲೆಲ್ಲಾ ಉದುರಿ ಚರ್ಮದ ಪಟ್ಟೆ ಕಾಣಿಸಿತು. ‘ಇದೇನು ಹೀಗಾಗಿದೆ, ನಿನ್ನ ಕತ್ತು?’ ಎಂದು ಕುತೂಹಲದಿಂದ ನಾಯಿ ಯನ್ನು ಕೇಳಿತು. ‘ಅದಾ.. ಅದೂ ನನಗೆ, ಸರಪಳಿ ಹಾಕಿ ಕಟ್ಟಿರುತ್ತಾರಲ್ಲಾ, ಅದನ್ನು ನಾನು ಜಗ್ಗಿ ಎಳೆದು, ಎಳೆದು ಗಾಯವಾಗಿ ಹಾಗಾಗಿದೆ’ ಎಂದಿತು ನಾಯಿ.

‘ಸರಪಳಿ ಯಾಕೆ ಹಾಕ್ತಾರೆ?’ ಎಂದು ಕೇಳಿತು ತೋಳ. ‘ಅದು ಹಗಲಿನಲ್ಲಿ ನನಗೆ ಕತ್ತು ಪಟ್ಟಿ ಹಾಕಿ ಕಟ್ಟಿರುತ್ತಾರೆ. ನನಗೇನೂ ಹಗಲಿನಲ್ಲಿ ಕೆಲಸವಿರುವುದಿಲ್ಲ, ರಾತ್ರಿ ಹೊತ್ತು ಮಾತ್ರ ನಾನು ಸ್ವತಂತ್ರ. ನನ್ನ ಸರಪಳಿ ಬಿಚ್ಚಿರುತ್ತಾರೆ. ನಾನು ಆಗ ಎಲ್ಲೆಂದರಲ್ಲಿ,ತಿರುಗಾಡಬಹುದು’ ಇನ್ನೂ ನಾಯಿಯ ಮಾತು ಮುಗಿಯುವ ಮೊದಲೇ ತೋಳ, ‘ನಿನ್ನ ಯಜಮಾನನ ಮನೆಯ ಮಾಂಸದ ಊಟವನ್ನು ನೀನೇ ಅನುಭವಿಸು.

ನಾನು ಹೊಟ್ಟೆಗಿಲ್ಲದೆ, ಕಾಡು, ಕಾಡು ಅಲೆದರೂ ಪರವಾಗಿಲ್ಲ, ನನ್ನ ಮನ ಬಂದಂತೆ ಸ್ವತಂತ್ರ ವಾಗಿರುವುದು ನನಗೆ ಪ್ರಾಣಕ್ಕಿಂತ ಮುಖ್ಯ’ ಎಂದು ಹೇಳುತ್ತಾ ಕಾಡಿನ ಕಡೆಗೆ ಹೊರಟು ಹೋ ಯಿತು. ಅನುಕೂಲ ಸಿಗುತ್ತದೆ ಮತ್ತೊಬ್ಬರ ಹಂಗಿಗೆ ಬಿದ್ದರೆ ಸ್ವಾತಂತ್ರ್ಯ ಕಳೆದುಕೊಂಡು ಅವರ ಅಡಿಯಾಳಾಗಬೇಕಾಗುತ್ತದೆ. ಜೀವನದಲ್ಲಿ ಯಾವುದೂ ಕೂಡ ಉಚಿತವಾಗಿ ಸಿಗುವುದಿಲ್ಲ. ಸಿಗುತ್ತಿದೆ ಎಂದಾದರೆ ಅಲ್ಲಿ ನಾವೇನು ಕಳೆದುಕೊಳ್ಳುತ್ತಿದ್ದೇವೆ ಎಂದು ಮೊದಲು ಗಮನಿಸಬೇಕು. ಅದಕ್ಕೆ ಸರ್ವಜ್ಞರು ಹೇಳಿರುವುದು, ‘ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು’ ಎಂದು.