Prakash Shesharaghavachar Column: ರಾಹುಲ್ ಗಾಂಧಿ ಮತ್ತೊಮ್ಮೆ ಫೇಲ್!
ಆಡಳಿತ ಪಕ್ಷದ ಈ ಗಂಭೀರ ವೈಫಲ್ಯವು ವಿರೋಧ ಪಕ್ಷಗಳಿಗೆ ರಾಜಕೀಯವಾಗಿ ದೊರೆತ ಅಪರೂಪದ ಅವಕಾಶವಾಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಮೋದಿ ಸರಕಾರವನ್ನು ವಿವಿಧ ವಿಚಾರಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಮಾಡಿದ ಅನೇಕ ಪ್ರಯತ್ನಗಳು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ, ನೀಟ್ ವಿವಾದವು ವಿರೋಧ ಪಕ್ಷಗಳಿಗೆ ಹೊಸ ರಾಜಕೀಯ ಮರುಜನ್ಮದಂತಾಗಿತ್ತು. ಈ ಅವಕಾಶವನ್ನು ಬಳಸಿಕೊಂಡು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಬೃಹತ್ ಜನಾಂದೋಲನ ರೂಪಿಸಿ ಸರಕಾರವನ್ನು ಉತ್ತರದಾಯಿತ್ವಕ್ಕೆ ಒಳಪಡಿಸುವ ಅವಕಾಶ ಅವರ ಮುಂದಿತ್ತು.
-
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಮೇ 15ರಂದು ನೀಟ್-2026 ಪರೀಕ್ಷೆಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸುವಂತೆ ಆದೇಶಿಸ ಲಾಯಿತು. ದೇಶದಾದ್ಯಂತ ನಡೆದ ಈ ಪರೀಕ್ಷೆಗೆ 22,75,011 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿದ್ದರು ಮತ್ತು 22,05,035 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಮ್ಮೆ ಪರೀಕ್ಷೆ ಬರೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಎದುರಾಗಿದ್ದು ಭಾರಿ ಆಘಾತವಾಗಿತ್ತು. ಈಗಾಗಲೇ ಹಲವು ತಿಂಗಳುಗಳ ಕಾಲ ಹಗಲಿರುಳು ಶ್ರಮಿಸಿ, ಸಾವಿರಾರು ರೂಪಾಯಿಗಳನ್ನು ಕೋಚಿಂಗ್ ಕೇಂದ್ರಗಳಿಗೆ ವ್ಯಯಿಸಿ, ಪರೀಕ್ಷೆಯ ಒತ್ತಡದಿಂದ ಹೊರಬಂದಿದ್ದ ವಿದ್ಯಾರ್ಥಿಗಳು ಮತ್ತೆ ಅದೇ ಪ್ರಕ್ರಿಯೆಯನ್ನು ಎದುರಿಸಬೇಕಾಯಿತು. ಇದು ವಿದ್ಯಾರ್ಥಿ ಗಳ ಮೇಲೆ ತೀವ್ರ ಮಾನಸಿಕ ಒತ್ತಡವನ್ನು ಹಾಗೂ ಪೋಷಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಂದಿತು.
ಆಡಳಿತ ಪಕ್ಷದ ಈ ಗಂಭೀರ ವೈಫಲ್ಯವು ವಿರೋಧ ಪಕ್ಷಗಳಿಗೆ ರಾಜಕೀಯವಾಗಿ ದೊರೆತ ಅಪರೂಪದ ಅವಕಾಶವಾಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಮೋದಿ ಸರಕಾರವನ್ನು ವಿವಿಧ ವಿಚಾರಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಮಾಡಿದ ಅನೇಕ ಪ್ರಯತ್ನಗಳು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ, ನೀಟ್ ವಿವಾದವು ವಿರೋಧ ಪಕ್ಷಗಳಿಗೆ ಹೊಸ ರಾಜಕೀಯ ಮರುಜನ್ಮದಂತಾಗಿತ್ತು. ಈ ಅವಕಾಶವನ್ನು ಬಳಸಿಕೊಂಡು ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರ ಪರವಾಗಿ ಬೃಹತ್ ಜನಾಂದೋಲನ ರೂಪಿಸಿ ಸರಕಾರವನ್ನು ಉತ್ತರದಾಯಿತ್ವಕ್ಕೆ ಒಳಪಡಿಸುವ ಅವಕಾಶ ಅವರ ಮುಂದಿತ್ತು.
ಆದರೆ ಕಾಂಗ್ರೆಸ್ ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಯಿತು. ದೇಶದ ಅತಿದೊಡ್ಡ ವಿದ್ಯಾರ್ಥಿ ಸಮಸ್ಯೆಯನ್ನು ಪಕ್ಷದ ಉನ್ನತ ನಾಯಕತ್ವವೇ ಮುನ್ನಡೆಸ ಬೇಕಾಗಿದ್ದರೂ, ಅದರ ಹೊಣೆಗಾರಿಕೆಯನ್ನು ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐಗೆ ವಹಿಸಲಾಯಿತು.
ಮೇ 15ರಂದು ಮರು ಪರೀಕ್ಷೆಯನ್ನು ಆದೇಶಿಸಿದ ಮರುದಿನವೇ ಕಾಂಗ್ರೆಸ್ ನಾಯಕರು ಬೀದಿಗೆ ಇಳಿಯಬೇಕಿತ್ತು. ಆದರೆ ಸಮಸ್ಯೆಯ ಅಗಾಧತೆ ಮತ್ತು ಅದರಿಂದ ಆಗುವ ರಾಜಕೀಯ ಲಾಭದ ಅಂದಾಜೇ ಇಲ್ಲದ ಇಂದಿನ ಕಾಂಗ್ರೆಸ್ ನಾಯಕತ್ವವು ಕೇವಲ ಗಾಂಧಿ ಕುಟುಂಬದ ಭಟ್ಟಂಗಿತದಲ್ಲಿ ತನ್ನ ಸಮಯ ಕಳೆಯುತ್ತಿರುವುದರಿಂದ ಇಂತಹ ದೈವದತ್ತ ಅವಕಾಶವನ್ನು ಕೈಚೆಲ್ಲಿತು.
ಇದನ್ನೂ ಓದಿ: Prakash Shesharaghavachar Column: ವಿದೇಶಿ ಮಾಧ್ಯಮಗಳ ಶೀರ್ಷಿಕೆಗಳಾಚೆಯ ಭಾರತ
ಹೋರಾಟದ ಜವಾಬ್ದಾರಿ ನೀಡಿದ್ದ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ತನ್ನ ಮೊದಲ ಪ್ರತಿಭಟನೆ ಜೂನ್ 8ರಂದು ಆರಂಭಿಸಿತು. ಹೋರಾಟಕ್ಕೆ ಎದ್ದೇಳಲು 23 ದಿನಗಳನ್ನು ತೆಗೆದು ಕೊಂಡವು. ತದನಂತರ ಕೋಚಿಂಗ್ ಕೇಂದ್ರಗಳ ರಾಜಧಾನಿಯಾದ ರಾಜಸ್ಥಾನದ ಕೋಟಾದಲ್ಲಿ ಜೂನ್ 17ರಂದು ರಾಹುಲ್ ಗಾಂಧಿಯವರು ನಡೆಸಿದ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ‘ಛಾತ್ರೋಂ ಕಿ ಗೂಂಜ್’ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದರು.
ಸರಕಾರದ ಮೇಲೆ ಒತ್ತಡ ಹೇರಲು ಸತತವಾಗಿ ಹೋರಾಟ ಮುಂದುವರೆಯಬೇಕಿತ್ತು. ಆದರೆ ರಾಹುಲ್ ಗಾಂಧಿಯವರಿಗೆ ವಿದೇಶ ಪ್ರವಾಸವು ಆದ್ಯತೆಯಾಗಿತ್ತು. ಆ ಕಾರಣದಿಂದ ಅಲಹಾಬಾದ್, ಪಟ್ನಾ ಮತ್ತು ದೆಹಲಿಯಲ್ಲಿ ಆಯೋಜಿಸಬೇಕಿದ್ದ ಛಾತ್ರೋಂ ಕಿ ಗೂಂಜ್ ಸಮಾವೇಶವನ್ನು ರಾಹುಲ್ ಗಾಂಧಿಯವರ ಅಲಭ್ಯತೆಯಿಂದಾಗಿ ಮುಂದೂಡಬೇಕಾಯಿತು.
ಯುವ ಕಾಂಗ್ರೆಸ್ ಜೂನ್ 26ರಿಂದ 46 ದಿನಗಳ ದೇಶವ್ಯಾಪಿ ಆಂದೋಲನವನ್ನು ಆರಂಭಿಸಿತು. ಬೆಂಗಳೂರಿನಿಂದ ಆರಂಭವಾಗಿ 28 ನಗರಗಳಲ್ಲಿ ಹೋರಾಟ ಕೈಗೊಳ್ಳಲಾಯಿತು. ಈ ಹೋರಾಟಗಳು ಕೇವಲ ಎರಡನೆಯ ಹಂತದ ನಾಯಕತ್ವವು ಮುನ್ನಡೆಸುತ್ತಿದ್ದರಿಂದ ಅವುಗಳು ವಿದ್ಯಾರ್ಥಿಗಳನ್ನು ಸೆಳೆಯಲು ವಿಫಲವಾದವು. ಮಾಧ್ಯಮಗಳು ಇವರನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.
ರಾಹುಲ್ ಗಾಂಧಿ ಜೂನ್ 22ರಂದು ವಿದೇಶಕ್ಕೆ ಹಾರಿಬಿಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಆರಂಭಿಸಿದ್ದ ಹೋರಾಟ ತನ್ನ ತೀಕ್ಷ್ಣತೆಯನ್ನು ಕಾಪಾಡಿಕೊಳ್ಳುವಲ್ಲಿ ಸೋಲುತ್ತದೆ. ರಾಹುಲ್ ಗಾಂಧಿ ಸ್ವದೇಶಕ್ಕೆ ಮರಳಿದ್ದು ಜುಲೈ 15ರಂದು. ಆ ವೇಳೆಗೆ ಗಂಗಾನದಿಯಲ್ಲಿ ಪ್ರವಾಹದ ಹಾಗೆ ನೀರು ಹರಿದು ಹೋಗಿರುತ್ತದೆ.
ಆನ್‌ಲೈನ್‌ನಲ್ಲಿ ಹುಟ್ಟಿದ್ದ ಕಾಕ್ರೋಚ್ ಜನತಾ ಪಾರ್ಟಿಯು ನೀಟ್ ಪೇಪರ್ ಸೋರಿಕೆಯ ವಿರುದ್ಧ ತನ್ನ ಹೋರಾಟವನ್ನು ಜೂನ್ 6ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಆರಂಭಿಸುತ್ತದೆ. ಧರ್ಮೇಂದ್ರ ಪ್ರಧಾನ್ ರಾಜಿನಾಮೆಗಾಗಿ ಒತ್ತಾಯಿಸಿ ನಿರಂತರ ಧರಣಿ ನಡೆಸುತ್ತಾರೆ.
ರಾಹುಲ್ ಗಾಂಧಿ, ಕಾಕ್ರೋಚ್‌ಗಳು ಹೋರಾಟ ಆರಂಭಿಸಿದಾಗ ದೇಶದ ಇದ್ದರು. ಅವರಿಗೆ ತಮ್ಮ ಅಜೆಂಡಾ ಜಿರಲೆಗಳು ಅಪಹರಿಸುತ್ತಿದ್ದಾರೆ ಎಂಬ ಆತಂಕದಿಂದ ತಮ್ಮ ಹೋರಾಟವನ್ನು ಸಮಾವೇಶದಿಂದ ಬೀದಿಯ ಹೋರಾಟದ ಸ್ವರೂಪಕ್ಕೆ ಬದಲಾವಣೆ ಮಾಡಿಕೊಳ್ಳಬೇಕಿತ್ತು. ಆದರೆ ರಾಹುಲ್ ಗಮನ ಬೇರೆಡೆ ಇದ್ದ ಕಾರಣ ಜಿರಲೆಗಳನ್ನು ನಿರ್ಲಕ್ಷಿಸಿ ವಿದೇಶಕ್ಕೆ ಹಾರಿ ಹೋಗುತ್ತಾರೆ.
ಕಾಕ್ರೋಚ್ ಜನತಾ ಪಾರ್ಟಿ ಜಂತರ್ ಮಂತರ್‌ನಲ್ಲಿ ತನ್ನ ಧರಣಿಯನ್ನು ಮುಂದುವರೆಸಿರುತ್ತದೆ. ಲಡಾಖ್ ಪರಿಸರವಾದಿ ಸೋನಮ್ ವಾಂಗ್ಚುಕ್ ವಿದ್ಯಾರ್ಥಿಗಳ ಹೋರಾಟಕ್ಕೆ ಬಲ ನೀಡುತ್ತಾರೆ. ವಿದ್ಯಾರ್ಥಿಗಳ ಬೇಡಿಕೆ ಈಡೇರುವತನಕ ಉಪವಾಸ ಸತ್ಯಾಗ್ರಹವನ್ನು ಜೂನ್ 288ರಿಂದ ಆರಂಭಿಸು ತ್ತಾರೆ. ಪತ್ರಿಕೆಗಳಲ್ಲಿ ಜಿರಲೆಗಳ ಧರಣಿ ಮತ್ತು ವಾಂಗ್ಚುಕ್ ಅವರ ಉಪವಾಸವು ಮುಖಪುಟವನ್ನು ಆಕ್ರಮಿಸುತ್ತದೆ. ದೇಶಾದ್ಯಂತ ವಿದ್ಯಾರ್ಥಿಗಳಿಂದ ಸ್ಪಂದನೆ ದೊರೆಯುತ್ತದೆ. ಇಷ್ಟೆ ವೇಗದಲ್ಲಿ ರಾಜಕೀಯ ತಿರುವು ಪಡೆಯುತ್ತಿದ್ದರೂ ರಾಹುಲ್ ಕಾಣದಂತೆ ಮಾಯವಾಗಿದ್ದರು. ಮತ್ತು ಅವರು ಯಾವ ದೇಶಕ್ಕೆ ತೆರಳಿದ್ದಾರೆ ಎಂಬುದು ಗೌಪ್ಯವಾಗಿಯೇ ಉಳಿದಿತ್ತು.
ಜುಲೈ 15ರಂದು ದೇಶಕ್ಕೆ ಹಿಂದಿರುಗಿದ ರಾಹುಲ್ ಗಾಂಧಿ ಜುಲೈ 17ರಂದು ಡೆಹ್ರಾಡೂನ್‌ನಲ್ಲಿ ಛಾತ್ರೋಂ ಕಿ ಗೂಂಜ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಬದಲಾದ ಪರಿಸ್ಥಿತಿಯು ನಿಚ್ಚಳವಾಗಿ ಗೋಚರಿಸುತ್ತಿದ್ದರೂ ಅವರು ತಮ್ಮ ಹಳೆಯ ವರಸೆಗೆ ಜೋತು ಬಿದ್ದಿರುತ್ತಾರೆ. ರಸ್ತೆಗೆ ಇಳಿದು ಹೋರಾಟದ ಕಾವು ಹೆಚ್ಚಿಸಲು ಮನಸ್ಸು ಮಾಡುವುದಿಲ್ಲ. ವಿದ್ಯಾರ್ಥಿಗಳು ಮತ್ತು ಯುವ ಸಮುದಾಯವು ಬೇಡಿಕೆಯ ಈಡೇರಿಕೆಗೆ ಬೀದಿ ಹೋರಾಟವನ್ನು ಆಯ್ಕೆ ಮಾಡುತ್ತಾರೆಯೇ ವಿನಹ ಒಳಾಂಗಣ ಸಮಾವೇಶವಲ್ಲ ಎಂಬ ಪ್ರಾಥಮಿಕ ಸಂಗತಿಯು ಕಾಂಗ್ರೆಸ್ ನೇತೃತ್ವಕ್ಕೆ ಅರಿವಾಗುವು ದಿಲ್ಲ.
ಜಿರಲೆಗಳ ಪ್ರತಿರೋಧವನ್ನು ಎಡ ಪಕ್ಷಗಳು ತಮ್ಮ ಕೈವಶ ಪಡಿಸಿಕೊಳ್ಳುತ್ತವೆ. ಎಐಎಸ್‌ಎಫ್, ಎಸ್‌ಎಫ್ಐ, ಎಐಡಿಎಸ್‌ಒ ಮುಂತಾದ ವಿದ್ಯಾರ್ಥಿ ಸಂಘಟನೆಗಳು ತಮ್ಮ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಹೋರಾಟದಲ್ಲಿ ಧುಮುಕಿಸುತ್ತಾರೆ. ಮೂಲೆ ಸೇರಿದ್ದವರೆ ಜೀ ಪ್ಯಾಂಟ್ ಧರಿಸಿ ಜಂತರ್ ಮಂತರ್‌ನಲ್ಲಿ ಬೀಡು ಬಿಡುತ್ತಾರೆ. ತನ್ನ ಎಲ್ಲಾ ರಾಜ್ಯಘಟಕಗಳನ್ನು ಸಕ್ರಿಯವಾಗಿ ತೊಡಗಿಸಿ ಹೋರಾಟವನ್ನು ದೇಶವ್ಯಾಪಿ ಕೊಂಡೊಯ್ಯುತ್ತಾರೆ.
ಜುಲೈ 19ರಂದು ಸೋನಮ್ ವಾಂಗ್ಚುಕ್‌ರನ್ನು ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಸೇರಿಸುತ್ತಾರೆ. ಜುಲೈ 20ರ ಸಂಸದ್ ಭವನ ಚಲೋ ಹಿಂಸಾಚಾರಕ್ಕೆ ತಿರುಗುತ್ತದೆ. ಲಾಠಿ ಚಾರ್ಜ್ ಮತ್ತು ಟಿಯರ್ ಗ್ಯಾಸ್ ಬಳಕೆ ಮಾಡಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಾರೆ. ಪರಿಸ್ಥಿತಿ ಕೈಮೀರಿ ಹೋಗದಿರಲು ಕೇಂದ್ರ ಸರಕಾರ ಸಿಪಿಜೆಯೊಂದಿಗೆ ಎರಡು ಸುತ್ತಿನ ಮಾತುಕತೆಯ ನಂತರ ಶನಿವಾರ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡುತ್ತಾರೆ. ಜಿರಲೆಗಳು ಹೋರಾಟದಲ್ಲಿ ಸಂಪೂರ್ಣ ಮೇಲುಗೈ ಸಾಧಿಸುತ್ತಾರೆ. ಕೇಂದ್ರ ಸರಕಾರ ಜಿರಲೆಗಳೊಂದಿಗೆ ಮಾತುಕತೆಯಾಡಿ ಅವರ ಬೇಡಿಕೆಗಳನ್ನು ಒಪ್ಪಿಕೊಂಡು ಹೋರಾಟವನ್ನು ಅಂತ್ಯಗೊಳಿಸುತ್ತದೆ.
ಕಾಂಗ್ರೆಸ್ ವಿದ್ಯಾರ್ಥಿಗಳ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲವಾಯಿತು. ತಮ್ಮ ಕೈತಪ್ಪಿ ಹೋಗಿರುವ ಹೋರಾಟವನ್ನು ಮತ್ತೊಮ್ಮೆ ಕೈಗೆ ತೆಗೆದುಕೊಳ್ಳಲು ರಾಹುಲ್ ಮತ್ತು ಖರ್ಗೆಯವರು ಪ್ರಧಾನ ಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುವ ನಾಟಕವಾಡುತ್ತಾರೆ. ಪ್ರಧಾನಿ ಸುರಕ್ಷತೆಗೆ ಒಡ್ಡುವ ಅಪಾಯವನ್ನು ಲೆಕ್ಕಿಸದೆ ಕೆಟ್ಟ ನಡೆಗೆ ನಾಂದಿ ಹಾಡಿದರು. ಇವರ ಹೋರಾಟವನ್ನು ವಾಂಗ್ಚುಕ್ ಪತ್ನಿಯೇ ಪ್ರಚಾರಕ್ಕಾಗಿ ರಾಹುಲ್ ನಾಟಕ ಎಂದು ಟೀಕಿಸುತ್ತಾರೆ.
ಧರ್ಮೇಂದ್ರ ಪ್ರಧಾನ್ ರಾಜಿನಾಮೆಯೊಂದಿಗೆ ಜಿರಲೆ ಕದನ ಅಂತ್ಯವಾಗುತ್ತದೆ. ಆದರೆ ಕಾಂಗ್ರೆಸ್ ವಿದ್ಯಾರ್ಥಿಗಳಲ್ಲಿ ತನ್ನ ಪ್ರಸ್ತುತಿಯನ್ನು ಗಳಿಸಲು ಸದನದ ಕಲಾಪಕ್ಕೆ ಅಡ್ಡಿ ಮಾಡಿ ಸಂಸತ್ ಮುತ್ತಿಗೆಯ ಸಮಯದಲ್ಲಿ ನಡೆದ ಲಾಠಿಚಾರ್ಜ್ ತನಿಖೆಯಾಗಬೇಕು ಮತ್ತು ಗೃಹ ಸಚಿವ ಅಮಿತ್ ಶಾ ರಾಜಿನಾಮೆ ನೀಡಬೇಕು ಎಂಬ ಹೊಸ ವರಸೆ ಆರಂಭಿಸುತ್ತದೆ. ಲೋಕಸಭೆಯಲ್ಲಿ ಪ್ರಶ್ನಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕಾನೂನು ತರಲು ಮಂಡಿಸಿದ ತಿದ್ದುಪಡಿ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಮಂದಾಗದೆ ಕಾಂಗ್ರೆಸ್ ಎರಡು ದಿನ ಕಲಾಪಕ್ಕೆ ಅಡ್ಡಿಪಡಿಸುತ್ತದೆ. ತಡವಾಗಿ eನೋದಯವಾದ ನಂತರ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರವಾಗುತ್ತದೆ.
ಮಸೂದೆಯ ಮಂಡನೆಯ ವೇಳೆ ರಾಹುಲ್ ಗಾಂಧಿ ಯಥಾಪ್ರಕಾರ ವಿವಾದಾತ್ಮಕ ಭಾಷಣ ಮಾಡಿ ಸದನದಲ್ಲಿ ಗೊಂದಲವೆಬ್ಬಿಸಿ ತನಗೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ನಾಟಕ ಮುಂದುವರೆಸುತ್ತಾರೆ. ತಮಗೆ ದೊರೆತ ಅವಕಾಶದಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಬವಣೆಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿ ದೇಶದ ಗಮನ ಸೆಳೆಯುವ ಉತ್ತಮ ಅವಕಾಶವನ್ನು ಕಳೆದುಕೊಂಡರು.
ತಮ್ಮ ಪರಿಣಾಮಕಾರಿ ವಿಚಾರ ಮಂಡನೆಯ ಮೂಲಕ ವಿದ್ಯಾರ್ಥಿಗಳ ಬೆಂಬಲ ಗಳಿಸುವುದಕ್ಕೆ ಗಮನ ನೀಡದೆ, ವಿಷಯಾಂತರ ಮಾಡಿ ನೀಟ್ ದೋಷಗಳ ಕುರಿತು ಪರೀಕ್ಷಾ ವ್ಯವಸ್ಥೆಯ ಕೊರತೆ ಗಳ ಬಗ್ಗೆ ಚಕಾರ ಎತ್ತಲಿಲ್ಲ. ಸದನದ ಭಾಷಣವನ್ನು ಪ್ರತಿಯೊಂದು ವಾಹಿನಿಯು ನೇರಪ್ರಸಾರ ಮಾಡುತ್ತಿದ್ದರಿಂದ ಇಡೀ ದೇಶಕ್ಕೆ ಕಾಂಗ್ರೆಸ್ ಕಾಳಜಿ ಮುಂದಿಡುವ ಅವಕಾಶವನ್ನು ಕೈಚೆಲ್ಲಿದರು.
ಕಾಕ್ರೋಚ್ ಜನತಾ ಪಾರ್ಟಿಯವರು ಪ್ರಶ್ನಪತ್ರಿಕೆಯ ಸೋರಿಕೆಯ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಬೆಂಬಲ ಗಳಿಸಿದರು. ದೇಶದೆಡೆ ಸಂಘಟನೆಯ ಬಲವಿರುವ ಕಾಂಗ್ರೆಸ್, ತನ್ನ ಶಕ್ತಿಯನ್ನು ಬಳಸಿಕೊಳ್ಳಲು ಬೇಕಾದ ದೂರದೃಷ್ಟಿಯುಳ್ಳ ನೇತೃತ್ವದ ಕೊರತೆಯಿಂದ ಹಿನ್ನಡೆ ಅನುಭವಿಸಿತು.
ಜೆನ್ ಜೀಗಳ ಗಂಭೀರ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸದಾವಕಾಶವನ್ನು ಕಳೆದುಕೊಂಡರು. ಮುಳುಗುತ್ತಿರುವವನು ಬದುಕಲು ಹುಲ್ಲುಕಡ್ಡಿಯನ್ನೂ ಆಸರೆ ಪಡೆಯುತ್ತಾನೆ. ಕಾಂಗ್ರೆಸ್ ಪಾರ್ಟಿಗೆ ಮರದ ದಿಮ್ಮಿಯೇ ದೊರೆತರೂ ಅದನ್ನು ಹಿಡಿದುಕೊಳ್ಳಲಿಲ್ಲ. ಇಪ್ಪತ್ತೆರಡು ದಿನ ವಿದೇಶ ಪ್ರವಾಸಕ್ಕೆ ಹಾರಿಹೋಗಿ ಆರಂಭಿಸಿದ್ದ ಹೋರಾಟವನ್ನು ದುರ್ಬಲಗೊಳಿಸಿ ಹೋರಾಟವನ್ನು ಜಿರಲೆಗಳ ಕೈಗೆ ಒಪ್ಪಿಸಿಬಿಟ್ಟರು. ಮೋದಿ ಸರಕಾರವನ್ನು ಬಗ್ಗಿಸುವ ಅವಕಾಶ ವನ್ನು ಕೈಚೆಲ್ಲಿ ಈಗ ಜೆನ್ ಜೀ ಧ್ಯಾನ ಮಾಡುತ್ತಿರುವ ರಾಹುಲ್ ಗಾಂಧಿ ಮತ್ತೊಮ್ಮೆ ಫೇಲ್ ಆಗಿದ್ದಾರಲ್ಲವೆ?