Rangaswamy Mookanahalli Column: ಅದೇ ಭೂಮಿ, ಆಕಾಶ; ಬದುಕಿನಲ್ಲೆಷ್ಟು ವ್ಯತ್ಯಾಸ !
ಇತಿಹಾಸ ಪುನರಾವರ್ತನೆ ಆಗುತ್ತೆ. ಮೇಲೇರಿದ್ದು ಕೆಳಗೆ ಬರಲೇಬೇಕಲ್ಲವೇ? ಅದು ಪ್ರಕೃತಿ ನಿಯಮ ವಲ್ಲವೇ? ಸ್ಪೇನ್ ನ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಇತ್ತೀಚಿಗೆ ನಮ್ಮ ಶೆಟ್ಟರ ಅಂಗಡಿಯನ್ನ ಹೋಲುವ ಎಲ್ಲವನ್ನೂ ಗೋಣಿಚೀಲದಲ್ಲಿ ತುಂಬಿಡುವ ಅಂಗಡಿಗಳಲ್ಲಿ ಮಾರಾಟ ಹೆಚ್ಚಾಗುತ್ತಿದೆ . ಜನ ನಿಧಾನ ವಾಗಿ ಮಾಲ್‌ಗಳಿಗೆ ಆದಿಯೋಸ್ (ಬಾಯ್ ) ಹೇಳುತ್ತಿದ್ದಾರೆ.


ವಿಶ್ವರಂಗ
mookanahalli@gmail.com
ಯೂರೋಪಿನ ಎಲ್ಲಾ ನಗರ ಪ್ರದೇಶದಲ್ಲಿ ವಾರಕ್ಕೊಂದು ಬಾರಿ ಹಳೆ ಪದಾರ್ಥಗಳ ಮಾರಾಟಕ್ಕೆಂದು ಕೂಡ ಒಂದು ಸಂತೆ ಅಥವಾ ಮಾರುಕಟ್ಟೆ ಏರ್ಪಡಿಸುತ್ತಾರೆ. ಈ ಸಂತೆಯಲ್ಲಿ ಜನ ಸಾಮಾನ್ಯರು ತಮಗೆ ಬೇಡದ ವಸ್ತುಗಳನ್ನ ಮಾರಾಟ ಮಾಡುತ್ತಾರೆ. ಇವರು ಪೂರ್ಣಾವಽ ವ್ಯಾಪಾರಿ ಗಳಾಗಿರಬೇಕು ಎಂದೇನೂ ಇಲ್ಲ.
ನಾವು ಚಿಕ್ಕವರಾಗಿದ್ದಾಗ ಮನೆಗೆ ಬೇಕಾಗುವ ಆಹಾರ ಪದಾರ್ಥಗಳನ್ನು ಶೆಟ್ಟರ ಅಂಗಡಿಯಿಂದ ತರುತ್ತಿದ್ದೆವು. ಇಲ್ಲವೇ ಊರಿನಲ್ಲಿದ್ದ ಇತರ ಅಂಗಡಿಯಲ್ಲಿ ಖರೀದಿ ಮಾಡಿ ತರುತ್ತಿದ್ದೆವು ಅಲ್ಲವೇ ? ಇಂತಹ ಅಂಗಡಿಗಳಲ್ಲಿ ಅಕ್ಕಿ , ಬೇಳೆ, ಬೆಲ್ಲ, ಇನ್ನಿತರೇ ದಿನಸಿ ಪದಾರ್ಥಗಳೆಲ್ಲವನ್ನ ಗೋಣಿಚೀಲ ದಲ್ಲಿ ಇಟ್ಟಿರುತ್ತಿದ್ದರು. ಎಲ್ಲವೂ ಗ್ರಾಹಕನ ಕಣ್ಣಿಗೆ ಕಾಣುತ್ತಿತ್ತು. ಆದರೆ ಯಾರೂ ಅದನ್ನ ಮುಟ್ಟುವ ಆಗಿರಲಿಲ್ಲ. ಎಷ್ಟು ಬೇಕು ಅಂತ ಕೇಳಿ ಶೆಟ್ಟರು ಅಥವಾ ಅವರ ಅಂಗಡಿಯಲ್ಲಿ ಕೆಲಸ ಮಾಡುವ ಸಹಾಯಕ ತೂಗಿ ಕೊಡುತ್ತಿದ್ದರು. ನ್ಯೂಸ್ ಪೇಪರ್ ನಲ್ಲಿ ಕಟ್ಟಿ ಕೊಡುವುದು ಕೂಡ ವಾಡಿಕೆಯಾಗಿತ್ತು.
ಆಮೇಲೆ ಬಂದ ಮಲಯಾಳಿ ಕಾಕಾ ಅಂಗಡಿಯವರದ್ದು ಕೂಡ ಹೆಚ್ಚು ಕಡಿಮೆ ಇದೆ ವ್ಯವಸಾಯ. ಬದಲಾವಣೆಯ ಹೆಸರಲ್ಲಿ ಎಷ್ಟು ನೀರು ಹರಿದು ಹೋಯಿತು ನೀವೇ ನೋಡಿ ! ನಾವು ಮಾಲ್ ಗಳನ್ನ ತಂದೆವು. ಇವರುಗಳು ಗೊತ್ತಿಲ್ಲದ ಹಾಗೆ ಮಾಯವಾದರು ಇಲ್ಲವೇ ಅವರೂ ಕೂಡ ಡಿಪಾರ್ಟ್ಮೆಂಟಲ್ ಸ್ಟೋರ್ ಹೆಸರಲ್ಲಿ ಎಲ್ಲವನ್ನೂ ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿರುವ ಯಾವುದೂ ಬ್ರಾಂಡ್ ಹೆಸರಿರುವ ಅದೇ ಪದಾರ್ಥಗಳನ್ನ ಮಾರಲು ತೊಡಗಿದರು.
ಮೊದಲೆಲ್ಲ ಬರುವ ಗ್ರಾಹಕನ ಪೂರ್ಣ ಮಾಹಿತಿ ಶೆಟ್ಟರಿಗೆ ಗೊತ್ತಿರುತ್ತಿತ್ತು. ಆದರೆ ಅವರು ಎಂದೂ ಅದನ್ನ ಸ್ವಂತಕ್ಕೆ ಬಳಸಿ ಕೊಳ್ಳುತ್ತಿರಲಿಲ್ಲ. ಇದೀಗ ಅಂಗಡಿಯ ಮಾಲಿಕನಿಗೆ ಬರುವ ಗ್ರಾಹಕರ ಮುಖ ಪರಿಚಯ ಕೂಡ ಇರುವುದಿಲ್ಲ. ಆದರೆ ವಿಪರ್ಯಾಸ ನೋಡಿ ಕಲೆಕ್ಷನ್ ಹೆಸರಲ್ಲಿ ನಮ್ಮ ಜಾತಕ ಅವರ ಬಳಿ ಸೇರುತ್ತೆ. ಅದು ಮತ್ತೆಲ್ಲೂ ಕಂಡು ಕೇಳದವರಿಗೂ ಸಿಗುತ್ತದೆ. ಮೊದಲೆ ಐದು ಅಥವಾ ಹತ್ತು ರೂಪಾಯಿ ಇರದಿದ್ದರೆ ಅಥವಾ ಕೆಲವೊಮ್ಮೆ ಹಣವನ್ನ ಮರೆತು ಹೋಗಿದ್ದರೆ ಕೂಡ ಅಂಗಡಿಯವರು ಪರವಾಗಿಲ್ಲ ತೆಗೆದುಕೊಂಡು ಹೋಗಿ ಎಂದ ಉದಾಹರಣೆಗಳು ಅನೇಕ.
ಇದನ್ನೂ ಓದಿ: Rangaswamy Mookanahalli Column: ಈ ದೇಶಗಳು ತೆರೆದುಕೊಂಡ ರೀತಿ ಅಚ್ಚರಿದಾಯಕ
ಇವತ್ತಿನ ಬದಲಾದ ಕಾಲಘಟ್ಟದಲ್ಲಿ ವ್ಯಾಪಾರ ಪ್ರಾಮುಖ್ಯತೆ ಪಡೆದು ಮನುಷ್ಯನ ಸಂಬಂಧಗಳು ಹಿಂಬದಿಗೆ ಸರಿದಿವೆ. ಎರಡು ಅಥವಾ ಮೂರು ದಶಕಗಳ ಹಿಂದೆ ಉಭಯ ಕುಶಲೋಪರಿ ಇಲ್ಲದೆ ಯಾವುದೇ ಕೆಲಸ ಪ್ರಾರಂಭಿಸುತ್ತಿರಲಿಲ್ಲ. ಭಾರತದ ಬದಲಾಗಿದೆ, ಅಭಿವೃದ್ಧಿ ಹೆಸರಿನಲ್ಲಿ ನಾವು ಯಾಂತ್ರಿಕ ಬದುಕಿನತ್ತ ಸಾಗಿದ್ದೇವೆ.
ಇತಿಹಾಸ ಪುನರಾವರ್ತನೆ ಆಗುತ್ತೆ. ಮೇಲೇರಿದ್ದು ಕೆಳಗೆ ಬರಲೇ ಬೇಕಲ್ಲವೇ? ಅದು ಪ್ರಕೃತಿ ನಿಯಮ ವಲ್ಲವೇ? ಸ್ಪೇನ್ ನ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಇತ್ತೀಚಿಗೆ ನಮ್ಮ ಶೆಟ್ಟರ ಅಂಗಡಿಯನ್ನ ಹೋಲುವ ಎಲ್ಲವನ್ನೂ ಗೋಣಿಚೀಲದಲ್ಲಿ ತುಂಬಿಡುವ ಅಂಗಡಿಗಳಲ್ಲಿ ಮಾರಾಟ ಹೆಚ್ಚಾಗುತ್ತಿದೆ . ಜನ ನಿಧಾನವಾಗಿ ಮಾಲ್‌ಗಳಿಗೆ ಆದಿಯೋಸ್ (ಬಾಯ್ ) ಹೇಳುತ್ತಿದ್ದಾರೆ.
ಸ್ಪೇನ್ ಸರಕಾರ ಪ್ಲಾಸ್ಟಿಕ್ ವಿರುದ್ಧ ಸೀರಿಯಸ್ ಆಗಿ ಸಮರ ಸಾರಿರುವುದರ ಫಲಿತಾಂಶವಿದು. ಜನ ತಮಗೆ ಬೇಕಾದ ಪದಾರ್ಥಗಳನ್ನು ಎಷ್ಟು ಬೇಕು ಅಷ್ಟು ತೂಕ ಮಾಡಿಕೊಳ್ಳುವ ಪರಿಪಾಠ ಬೆಳೆಯುತ್ತಿದೆ. ಫ್ರೆಶ್ ಹಾಲು , ಮೊಸರು ಜೊತೆಗೆ ಎಲ್ಲವನ್ನೂ ಸಾವಯವ ಕೊಳ್ಳಬೇಕು ಎನ್ನುವ ಕೂಗು ಕೂಡ ಹೆಚ್ಚಾಗುತ್ತಿದೆ. ಆಹಾರ ಪದಾರ್ಥಗಳ ವಿಷಯದಲ್ಲಿ ಈ ರೀತಿಯ ಬದಲಾವಣೆ ಯನ್ನು ವಿಶ್ವದ ಎಡೆ ಇಂದು ಕಾಣಬಹುದು. ಆದರೆ ಸ್ಪೇನ್ ದೇಶದಲ್ಲಿ ಜನರ ನಡುವಿನ ಬಾಂಧವ್ಯ ಮಾತ್ರ ಇಲ್ಲಿನಷ್ಟು ಹದಗೆಟ್ಟಿಲ್ಲ ಎಂದು ಧೈರ್ಯವಾಗಿ ಹೇಳಬಹುದು.

ಅದು ಬ್ಯಾಂಕಿರಲಿ ಅಥವಾ ತರಕಾರಿ ಅಂಗಡಿ, ಪದೇ ಪದೇ ಅದೇ ಅಂಗಡಿಗೆ ನಾವು ಭೇಟಿ ಕೊಡಲು ಶುರು ಮಾಡಿದರೆ, ಉಭಯ ಕುಶಲೋಪರಿ ಇಲ್ಲದೆ ವ್ಯಾಪಾರ ಶುರುವಾಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಜನರಲ್ಲಿ ಭೂತ ದಯೆ ಉಳಿದುಕೊಂಡಿದೆ. ಸ್ಪೇನ್ ಎಂದಲ್ಲ. ಯೂರೋಪಿನ ದೇಶಗಳಲ್ಲಿ ಕೂಡ ಕೇವಲ 20/30 ವರ್ಷಗಳ ಹಿಂದೆ ಮಾಲ್ ಪ್ರಾರಂಭವಾದರೆ ಅದೇನೋ ದೊಡ್ಡದು ಎನ್ನುವ ಭಾವನೆಯಿತ್ತು. ಬಡಾವಣೆ ಅಭಿವೃದ್ಧಿ ಹೊಂದುತ್ತಿದೆ ಎನ್ನುವ ಖುಷಿ ಜನರಲ್ಲಿ ಕೂಡ ಇತ್ತು. ಕೇವಲ ಎರಡು ಮೂರು ದಶಕದಲ್ಲಿ ಅದೆಷ್ಟು ಬದಲಾವಣೆ !
ಜನರಿಗೆ ಸರಿ ತಪ್ಪುಗಳ ಪಾಠವನ್ನು ಆರ್ಥಿಕ ಕುಸಿತ ಮತ್ತು ಆ ನಂತರ ಬಂದ ಕರೋನ ಒಂದಷ್ಟು ಕಲಿಸಿದೆ. ಒಂದು ಪದಾರ್ಥದ ಬೆಲೆಯನ್ನು ಸುಖಾಸುಮ್ಮನೆ ಏರಿಸುವುದರಿಂದ ಹೀಗೆ ಏರಿಕೆಯಾದ ಪದಾರ್ಥವನ್ನ ಕೊಂಡು ನಾವೇನೂ ದೊಡ್ಡ ಮನುಷ್ಯರು ಎಂದು ಹಿಗ್ಗುವುದರಲ್ಲಿ ಪ್ರಯೋಜನ ವಿಲ್ಲ ಎನ್ನುವುದನ್ನ ಜನತೆ ಅರ್ಥ ಮಾಡಿಕೊಂಡಿದ್ದಾರೆ.
ಯೂರೋಪು ಇಂದಿಗೂ ತನ್ನತನವನ್ನ ಬಿಟ್ಟು ಕೊಡದ ಪುಟಾಣಿ ಹಳ್ಳಿಗಳ ಒಕ್ಕೂಟ ಎನ್ನಬಹುದು. ಹೀಗೆ ಹೇಳಲು ಪ್ರಮುಖ ಕಾರಣ ಇಂದಿಗೂ ಇಲ್ಲಿ ತಮ್ಮ ಹಳೆಯ ಯಾವುದೇ ಪದ್ದತಿಗಳನ್ನು ಜನರು ಬಿಟ್ಟಿಲ್ಲ. ಬುಧವಾರ, ಶುಕ್ರವಾರ ಮತ್ತು ಭಾನುವಾರ ಸಂತೆ ನಡೆಯುತ್ತದೆ. ಹಲವು ಕಡೆ ದಿನಗಳ ಬದಲಾವಣೆ ಇರುತ್ತದೆ. ಆದರೆ ಸಂತೆಯಂತೂ ಇದ್ದೇ ಇರುತ್ತದೆ.
ಸಂತೆಯಲ್ಲಿ ತರಕಾರಿ ಹಣ್ಣು, ಬಟ್ಟೆ, ಲೆದರ್ ಬ್ಯಾಗ್, ಜಾಕೆಟ್, ಪಾದರಕ್ಷೆಯಿಂದ, ತಿನ್ನಲು ಖಾದ್ಯ ಗಳು ಕೂಡ ಸಿಗುತ್ತದೆ. ಬೆಳಿಗ್ಗೆ ಏಳರ ಆಸುಪಾಸಿನಲ್ಲಿ ಶುರುವಾಗುವ ಇಂತಹ ಸಂತೆಗಳು ಮಧ್ಯಾಹ್ನ ಮೂರಕ್ಕೆ ಮುಕ್ತಾಯವಾಗುತ್ತವೆ. ಸಾಯಂಕಾಲ ನಾಲ್ಕರ ವೇಳೆಗೆ ಸಂತೆ ನಡೆದಿತ್ತು ಎನ್ನುವುದರ ಕುರುಹು ಕೂಡ ಕಾಣದಷ್ಟು ಸ್ವಚ್ಛ ಮಾಡುತ್ತಾರೆ.
ಯೂರೋಪಿನ ಎಲ್ಲಾ ನಗರ ಪ್ರದೇಶದಲ್ಲಿ ವಾರಕ್ಕೊಂದು ಬಾರಿ ಹಳೆ ಪದಾರ್ಥಗಳ ಮಾರಾಟ ಕ್ಕೆಂದು ಕೂಡ ಒಂದು ಸಂತೆ ಅಥವಾ ಮಾರುಕಟ್ಟೆ ಏರ್ಪಡಿಸುತ್ತಾರೆ. ಈ ಸಂತೆಯಲ್ಲಿ ಜನ ಸಾಮಾನ್ಯರು ಅಂದರೆ ಅವರು ಪೂರ್ಣಾವಧಿ ವ್ಯಾಪಾರಿಗಳಾಗಿರಬೇಕು ಎಂದೇನೂ ಇಲ್ಲ. ತಮಗೆ ಬೇಡದ ವಸ್ತುಗಳನ್ನ ಮಾರಾಟ ಮಾಡುತ್ತಾರೆ.
ಅಂದರೆ ನಿಮ್ಮ ಬಳಿ ಇರುವ ಪಾದರಕ್ಷೆ ನಿಮಗೆ ಇಷ್ಟವಿಲ್ಲ ಅಥವಾ ನಿಮ್ಮ ಮನೆಯಲ್ಲಿ ಇರುವ ಹಳೆಯ ಟೇಬಲ್ ಅಥವಾ ಛೇರುಗಳನ್ನ ಮಾರಬೇಕಿದೆ. ಇಲ್ಲಿ ಅದನ್ನು ಮಾರಾಟ ಮಾಡಬಹುದು. ಹೀಗೆ ಇಲ್ಲಿ ಸಿಗದ ವಸ್ತುವಿಲ್ಲ ಎನ್ನಬಹುದು. ಇಲ್ಲಿನ ಜನ ಸಾಮಾನ್ಯರು ಅಥವಾ ಮಧ್ಯಮ ವರ್ಗದ ಜನರಲ್ಲಿ ಭಾರತೀಯ ಮಧ್ಯಮ ವರ್ಗದ ಜನರಲ್ಲಿ ಇರುವ ‘ಒಣ ಜಂಬ ಅಥವಾ ಸುಳ್ಳು ಪ್ರತಿಷ್ಠೆ’ ಇಲ್ಲ. ತಮ್ಮ ಬಳಿ ಇಲ್ಲದ ವಿಷಯದ ಬಗ್ಗೆ ಇದೆಯೆಂದು ತೋರಿಸಿಕೊಳ್ಳುವ ಗುಣ ಕೂಡ ಕಡಿಮೆ.
ನಮ್ಮಲ್ಲಿ ಎರಡು ಮೂರು ದಶಕದ ಹಿಂದೆ ನೆಂಟರ ಮಕ್ಕಳ ಬಟ್ಟೆಯನ್ನು ಅವರಿಗೆ ಚಿಕ್ಕದಾಯಿತು ಎಂದು ನಾವು ಹಾಕುತ್ತಿzವು. ಇಂದಿಗೆ ಈ ರೀತಿಯ ವಿಷಯವನ್ನು ಊಹಿಸಿಕೊಳ್ಳುವುದು ಕೂಡ ಅಸಾಧ್ಯ. ಈ ವಿಷಯದಲ್ಲಿ ಯೂರೋಪು ಇಂದಿಗೂ ತನ್ನ ಹಳೆಯತನವನ್ನು ಉಳಿಸಿಕೊಂಡಿದೆ. ಅತಿ ಕಡಿಮೆ ಬೆಲೆಯಲ್ಲಿ ಹೀಗೆ ಬಳಸಿದ ಬಟ್ಟೆ, ಶೂಸ್ ನಿಂದ ದಿನ ನಿತ್ಯದ ಬದುಕಿಗೆ ಬೇಕಾಗುವ ಹಲವಾರು ವಸ್ತುಗಳನ್ನ ಇಲ್ಲಿ ಕೊಳ್ಳಬಹುದು.
ಮೊದಲೇ ಹೇಳಿದಂತೆ ಈ ಸಮಾಜದಲ್ಲಿ ಇದನ್ನ ಪ್ರತಿಷ್ಠೆಗೆ ಕುಂದು ಎನ್ನುವಂತೆ ನೋಡುವುದಿಲ್ಲ. ಬದಲಿಗೆ ಪದಾರ್ಥಗಳ ಪೂರ್ಣ ಬಳಕೆಯಾದಂತೆ ಆಯ್ತು ಎಂದು ನೋಡುತ್ತಾರೆ. ಊಟ ತಿಂಡಿಯ ವಿಷಯದಲ್ಲಿ ಸಹ ಈ ಮಾತು ಅನ್ವಯ, ಅಂದರೆ ಯಾರೋ ತಿಂದು ಬಿಟ್ಟ ಆಹಾರ ಇನ್ನೊಬ್ಬರು ತಿನ್ನುತ್ತಾರೆ ಎಂದಲ್ಲ. ಆದರೆ ನಾವು ಯಾವುದಾದರೂ ಹೋಟೆಲ್ ಗೆ ಹೋಗಿ ನಾವು ಆದೇಶ ನೀಡಿದ್ದ ಆಹಾರ ಹೆಚ್ಚಾದರೆ, ಅದೆಷ್ಟೇ ಉಳಿದಿರಲಿ ಅದನ್ನ ಹೋಟೆಲ್ ನವರು ಪ್ಯಾಕ್ ಮಾಡಿ ಗ್ರಾಹಕರ ಕೈಲಿಡುತ್ತಾರೆ.
ಬಿಸಾಡುವುದನ್ನು ಇಲ್ಲಿ ಅಷ್ಟೇನೂ ಗೌರವಯುತವಾಗಿ ಜನ ಕಾಣುವುದಿಲ್ಲ. ಕೇವಲ ಅರ್ಧ ರೋಟಿ, ಎರಡು ಚಮಚ ದಾಲ್ ಮಿಕ್ಕಿದ್ದರೂ ಕೂಡ ಅದನ್ನು ಪ್ಯಾಕ್ ಮಾಡಿಕೊಡುತ್ತಾರೆ. ಆಹಾರ ಪೋಲು ಮಾಡುವುದನ್ನು ಇಲ್ಲಿನ ಜನ ಮೆಚ್ಚುವುದಿಲ್ಲ. ಭಾರತದಲ್ಲಿ ಆಹಾರದ ಕೊರತೆಯಿಂದ ನಿತ್ಯವೂ ಸಾಕಷ್ಟು ಮರಣವಾಗುತ್ತದೆ. ಅದರ ಜೊತೆ ಜೊತೆಗೆ ನಿತ್ಯವೂ ಟನ್‌ಗಟ್ಟಲೆ ಆಹಾರ ಕೂಡ ಪೋಲಾಗುತ್ತದೆ.
ನಮ್ಮಲ್ಲಿ ಸಭೆ , ಸಮಾರಂಭದ ಹೆಸರಿನಲ್ಲಿ ಬಹಳಷ್ಟು ಆಹಾರ ಪದಾರ್ಥವನ್ನ ಪೋಲು ಮಾಡು ತ್ತೇವೆ. ಮದುವೆಗೆ ಅಥವಾ ಇನ್ನಿತರ ಸಮಾರಂಭಕ್ಕೆ ನಾವು ಆಮಂತ್ರಣವನ್ನು ನೀಡುತ್ತೇವೆ. ಆದರೆ ಅವರಲ್ಲಿ ಎಷ್ಟು ಜನ ಬರುತ್ತಾರೆ? ಅಥವಾ ಇಲ್ಲ? ಎನ್ನುವ ನಿಖರತೆ ನಮಗಿರುವುದಿಲ್ಲ. ಸ್ಪ್ಯಾನಿ ಷರು ಈ ವಿಷಯದಲ್ಲಿ ನಮಗಿಂತ ಬಹಳ ಭಿನ್ನ.
ಮದುವೆಯಂತಹ ಸಮಾರಂಭಕ್ಕೆ ನೂರು ಜನರ ಮೇಲೆ ಕರೆಯುವುದಿಲ್ಲ. ಮದುವೆ ಇಂತಹ ದಿನ, ಇಂತಹ ಜಾಗದಲ್ಲಿ ಎನ್ನುವ ಮಾಹಿತಿಯ ಜೊತೆಗೆ ಹೊಸ ದಂಪತಿಗಳಿಗೆ ಯಾವ ವಸ್ತುಗಳ ಅವಶ್ಯಕತೆಯಿದೆ ಎನ್ನುವ ಪಟ್ಟಿಯನ್ನು ಕೂಡ ಹಾಕಿರುತ್ತಾರೆ. ಯಾರನ್ನು ಕರೆಯುತ್ತಾರೆ ಅವರಿಗೆ ಈ ವೆಬ್ ಸೈಟ್ ಲಿಂಕ್ ಕೂಡ ಕಳುಹಿಸುತ್ತಾರೆ. ಉದಾಹರಣೆಗೆ ನವ ದಂಪತಿಗಳಾಗುವರಿಗೆ ವಾಷಿಂಗ್ ಮಷೀನ್ ಅವಶ್ಯಕತೆಯಿದೆ ಎಂದುಕೊಳ್ಳಿ.
ಅದರ ಬೆಲೆ 500 ಯುರೋ ಆದರೆ ನಿಮಗೆ 500 ಕೊಡಲು ಆಗುವುದಿಲ್ಲ. ನೀವು 100 ಯುರೋವನ್ನ ವಾಷಿಂಗ್ ಮಷೀನ್ ಖರೀದಿಗೆ ಎಂದು ನೀಡಬಹುದು. ಅದು ಮುಗಿದ ನಂತರ ಲಿಸ್ಟ್ ನಿಂದ ಆ ವಸ್ತುವನ್ನ ತೆಗೆದು ಹಾಕುತ್ತಾರೆ. ನೀವು ಈ ರೀತಿಯ ಪಟ್ಟಿಯನ್ನು ನೋಡುವ ವೇಳೆ ಎಲ್ಲಾ ಬೇಡಿಕೆ ಗಳು ಮುಗಿದು ಹೋಗಿದ್ದರೆ ನೀವು ಗಿಫ್ಟ್ ಕೂಪನ್ ಖರೀದಿಸಿ ನೀಡಬಹುದು. ನಮ್ಮಂತೆ ಹಣ ನೀಡುವ ಸಂಪ್ರದಾಯ ಇಲ್ಲ.
ಇದರಿಂದ ಒಂದೇ ವಸ್ತುವನ್ನು ಹಲವರು ನೀಡುವುದು ತಪ್ಪುತ್ತದೆ. ಹಣವೂ ಸದುಪಯೋಗ ವಾಗುತ್ತದೆ. ಇದೊಂದು ಉತ್ತಮ ಪದ್ಧತಿ . ಭಾರತೀಯರು ಕೂಡ ಇದನ್ನ ಅಳವಡಿಸಿಕೊಂಡರೆ ಒಳ್ಳೆಯದು. ಹತ್ತಾರು ಫೋಟೋ ಫ್ರೇಮ್‌ಗಳು, ಗಡಿಯಾರ ಪುನರಾವರ್ತನೆಯಾಗುವುದು ತಪ್ಪುತ್ತದೆ.
ಇಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಿರುವುದರಿಂದ ಜನರಿಗೆ ವಸ್ತುವಿನ ಮೌಲ್ಯದ ಅರಿವಿದೆ. ಹೀಗಾಗಿ ಸಣ್ಣ ಪುಟ್ಟ ವಿಷಯಗಳನ್ನ ಸಹ ಜನತೆ ಬಹಳ ಕಕ್ಕುಲಾತಿಯಿಂದ ಕಾಣುತ್ತಾರೆ. ಇಲ್ಲಿ ಭಾರತದ ಮಧ್ಯಮವರ್ಗದ ಜನ ಅನುಭವಿಸುವ ಯಾವುದೇ ಸವಲತ್ತು ಅಥವಾ ಸೌಲಭ್ಯವನ್ನ ಹೊಂದಲು ಕಷ್ಟ ಸಾಧ್ಯ.
ಮನೆ ಕೆಲಸದವರನ್ನು ಹೊಂದುವುದು , ಬಟ್ಟೆಯನ್ನು ಇಸಿಗೆ ನೀಡುವುದು, ಮನೆಯ ಸುಣ್ಣ ಬಣ್ಣಕ್ಕೆ ಜನರನ್ನ ನೇಮಕ ಮಾಡುವುದು, ಮಕ್ಕಳನ್ನು ನೋಡಿಕೊಳ್ಳಲು ಆಯಾಳನ್ನು ಇಟ್ಟು ಕೊಳ್ಳುವುದು, ಕಾರಿಗೆ ಡ್ರೈವರ್ ನನ್ನು ನೇಮಿಸಿಕೊಳ್ಳುವುದು ಹೀಗೆ ಇವೆ ಇಲ್ಲಿ ಲಕ್ಸುರಿ ಪಟ್ಟಿಗೆ ಸೇರಿಕೊಳ್ಳುತ್ತವೆ.
ದಿನನಿತ್ಯದ ಮನೆ ಕಸ ಮುಸುರೆ, ಬಟ್ಟೆ, ಎಲ್ಲವು ಓಕೆ. ಆದರೆ ಮನೆಯನ್ನು ಎರಡು ವರ್ಷಕ್ಕೊಮ್ಮೆ ಪೈಂಟ್ ಮಾಡಲು ಕೂಡ ಜನ ಇಲ್ಲಿ ಬೇರೆಯವರನ್ನು ನೇಮಕ ಮಾಡಿಕೊಳ್ಳುವುದಿಲ್ಲ. ವಾರಾಂತ್ಯ ದಲ್ಲಿ ಮತ್ತು ಬಿಡುವಿನ ವೇಳೆಯಲ್ಲಿ ಅವರೇ ಈ ಕೆಲಸವನ್ನ ಕೂಡ ಮಾಡುತ್ತಾರೆ. ಮನೆಯಲ್ಲಿ ಆಗುವ ಸಣ್ಣ ಪುಟ್ಟ ರಿಪೇರಿ ಕೆಲಸವನ್ನು ಕೂಡ ಕಲಿತಿರುತ್ತಾರೆ.
ಆ ನಿಟ್ಟಿನಲ್ಲಿ ನೋಡುವುದಾದರೆ ಭಾರತೀಯ ಮಧ್ಯಮ ವರ್ಗದ ಜನ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು. ಇದೆಲ್ಲದರ ಜೊತೆಗೆ ವರ್ಷದ ಆರೆಂಟು ತಿಂಗಳು ಕಾಡುವ ಚಳಿ ಇವರನ್ನು ಇನ್ನಷ್ಟು ಮನುಷ್ಯರನ್ನಾಗಿ ಮಾಡಿದೆ. ಮೂಲದಲ್ಲಿ ನಾವೆ ಒಂದೇ ಎಂದಾದರೂ ಪರಿಸರ , ಸನ್ನಿವೇಶಗಳು ಮನುಷ್ಯ ಬದುಕುವ ರೀತಿಯನ್ನು ಬದಲಾಯಿ ಸುವ ರೀತಿ ಸೋಜಿಗ ಹುಟ್ಟಿಸುತ್ತದೆ.