ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಭಯಮುಕ್ತ ಚುನಾವಣೆಗೆ ದೀದಿ ಥ್ಯಾಂಕ್ಸ್‌ ಹೇಳಬೇಡವೇ ?

ಚುನಾವಣೆ ಆರಂಭಕ್ಕೆ ಮುನ್ನವೇ ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿ ಹಿರಿಯ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಯಿತು. ಈ ಅಧಿಕಾರಿಗಳು ಸಿಎಂ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರಕಾರದ ಪ್ರಭಾವದಲ್ಲಿದ್ದುದರಿಂದಲೇ ಆಯೋಗ ಈ ಕ್ರಮ ಕೈಗೊಂಡು, ಇಲ್ಲಿ ಮೇಜರ್ ಸರ್ಜರಿಯ ಸುಳಿವು ನೀಡಿತ್ತು.

ಭಯಮುಕ್ತ ಚುನಾವಣೆಗೆ ದೀದಿ ಥ್ಯಾಂಕ್ಸ್‌ ಹೇಳಬೇಡವೇ ?

-

ಜನಪಥ

ವಾಸ್ತವದಲ್ಲಿ ಸೇನಾ ನಿಯೋಜನೆ ಮೂಲಕ ಗೂಂಡಾಗಿರಿಗೆ ಕಡಿವಾಣ ಬಿದ್ದಿದೆ. ಇದರಿಂದ ಸ್ಥಳೀಯ ಟಿಎಂಸಿ ಮುಖಂಡರು, ಕಾರ್ಯಕರ್ತರು ಹತಾಶರಾಗಿದ್ದಾರೆ. ಹಾಗಾಗಿ, ಚುನಾವಣಾ ಆಯೋಗ ಮತ್ತು ಸೇನೆ ಅಪರಾಧಿಗಳಂತೆ ಭಾಸವಾಗುವುದು ಸಹಜವೇ.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಂತೆಂದರೆ ಸಾಕು ಜನರಲ್ಲಿ ಭಯ ಆವರಿಸಿ ಬಿಡುತ್ತದೆ. ಸಾಮಾನ್ಯ ಮತದಾರನಂತೂ ಸುಮಾರು ಆರೇಳು ತಿಂಗಳು ಕಣ್ಣು, ಕಿವಿ, ಬಾಯಿ ಎಲ್ಲವನ್ನೂ ಮುಚ್ಚಿಕೊಂಡು, ತನಗೇನೂ ಗೊತ್ತೇ ಇಲ್ಲ ಮತ್ತು ಇಲ್ಲಿ ಎಲ್ಲವೂ ಚೆನ್ನಾಗಿದೆ ಎಂಬಂತೆ ತೋರ್ಪಡಿಸಿಕೊಂಡು ಜೀವನ ಸಾಗಿಸುವುದು ಅನಿವಾರ್ಯವಾಗಿ ಬಿಡುತ್ತದೆ.

ಆಡಳಿತಾರೂಢ ಪಕ್ಷಗಳ ಬೆಂಬಲಿಗನಂತೆ ತೋರಿಸಿಕೊಳ್ಳದ ಜನರಂತೂ ಆರು ತಿಂಗಳು ರಾಜ್ಯದಲ್ಲಿ ಇರುವುದೇ ಸುರಕ್ಷಿತವಲ್ಲ ಎಂಬ ವಾತಾವರಣ ಸೃಷ್ಟಿಯಾಗುತ್ತದೆ. ಪೊಲೀಸ್ ಅಧಿಕಾರಿಗಳು ಆಡಳಿತ ಪಕ್ಷಗಳ ಜೀತದಾಳುಗಳಂತೆ ವರ್ತಿಸಿ, ಜನರ ನೋವಿಗೆ ಸ್ಪಂದಿಸ ದಿದ್ದಾಗ ಜನರು ಏನು ತಾನೇ ಮಾಡಿಯಾರು? ಇಂಥಾ ಪರಿಸ್ಥಿತಿಯಲ್ಲಿ ಬಂಗಾಳದಲ್ಲಿ ಭಯಮುಕ್ತ, ನ್ಯಾಯಸಮ್ಮತವಾದ, ಪಾರದರ್ಶಕವಾದ ಮತ್ತು ಪ್ರಜಾತಂತ್ರದ ಹಬ್ಬವನ್ನು ಮತದಾರರು ಸಂಭ್ರಮದಿಂದ ಆಚರಿಸಿ, ಮತದಾನ ಮಾಡಲು ಸಾಧ್ಯವಿದೆಯೇ? ಕಳೆದೊಂದೂವರೆ ದಶಕಗಳಿಂದ ವಿಪರೀತ ರಾಜಕೀಯ ಹಿಂಸಾಚಾರ, ಬೂತ್ ಮೇಲೆ ನಿಯಂತ್ರಣ, ನಕಲಿ ವೋಟರ್‌ಗಳ ಹಾವಳಿ, ಮತದಾನದ ದಿನ ನಿರ್ಮಾಣವಾಗುವ ಭಯ ಭೀತಿಯ ವಾತಾವರಣ, ಹೀಗೆ ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡೇ ಒಂದು ವರ್ಷದಿಂದ ಪೂರ್ಣ ಪರಿಶ್ರಮ ಹಾಕಿ ಬಂಗಾಳ ಚುನಾವಣೆ ನಡೆಸುತ್ತಿರುವ ಕೇಂದ್ರ ಚುನಾವಣಾ ಆಯೋಗ, ಮೊದಲ ಬಾರಿಗೆ ಬಂಗಾಳದ ಜನತೆ ಸುರಕ್ಷತೆಯ ಭಾವನೆಯಿಂದ, ಬಾಹ್ಯ ಪ್ರಭಾವ, ಒತ್ತಡ ಹಾಗೂ ಬೆದರಿಕೆಗಳಿಲ್ಲದೆ ಮತದಾನ ಮಾಡಲು ಪೂರಕ ವಾತಾವರಣ ರೂಪಿಸುವಲ್ಲಿ ಯಶಸ್ವಿಯಾಗಿದೆ.

ಬಹುಶಃ ಬಂಗಾಳದ ಇತ್ತೀಚಿನ ಇತಿಹಾಸದಲ್ಲಿ ಹಿಂಸಾಚಾರ ಮುಕ್ತ ಚುನಾವಣೆ ನಡೆಯುತ್ತಿರುವುದು ಇದೇ ಮೊದಲು ಎನಿಸುತ್ತದೆ. ಈ ಬಾರಿ ಹಿಂಸಾಚಾರ -ಬಡಿದಾಟ ಇಲ್ಲವೇ ಇಲ್ಲ ಎಂದೇನಲ್ಲ. ಆದರೆ, ಕಳೆದ ಹಲವು ಚುನಾವಣೆಗಳಿಗೆ ಹೋಲಿಸಿದರೆ ಬಂಗಾಳ ಬಹುತೇಕ ಶಾಂತವಾಗಿದೆ.

ಇದನ್ನೂ ಓದಿ: Raghava Sharma Nidle Column: ಬಂಗಾಳದ ಸಾಮಾನ್ಯರಲ್ಲೇಕೆ ಈ ಅವ್ಯಕ್ತ ಭಯ ?

ಅಷ್ಟರಮಟ್ಟಿಗೆ ಕೇಂದ್ರ ಚುನಾವಣಾ ಆಯೋಗ ಆಡಳಿತಾರೂಢ ಪಕ್ಷ ಟಿಎಂಸಿಯ ಪುಂಡ ಪೋಕರಿ, ಗೂಂಡಾಗಳಿಗೆ ಕಡಿವಾಣ ಹಾಕಿದೆ. ಏಪ್ರಿಲ್ 23ರ ಮೊದಲ ಹಂತದ ಮತದಾನ ಆರಂಭಕ್ಕೆ ಮುನ್ನ ಹಿಂಸಾಚಾರಕ್ಕೆ ಪ್ರಚೋದನೆ ನೀಡಬಲ್ಲ ಸುಮಾರು 800 ಸಂಶಯಾ ಸ್ಪದ ವ್ಯಕ್ತಿಗಳನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳುವಂತೆ ಮಾಡಿದ ಚುನಾವಣಾ ಆಯೋಗ, ಅತಿಹೆಚ್ಚು ಹಿಂಸಾಚಾರಕ್ಕೆ ತೆರೆದುಕೊಳ್ಳಬಲ್ಲ ಎರಡನೇ ಹಂತದ ವಿವಿಧ ಜಿಲ್ಲೆಗಳ ಸುಮಾರು 1543 ಶಂಕಾಸ್ಪದ ಕಿಡಿಗೇಡಿಗಳನ್ನು ಬಂಧಿಸಿದೆ.

ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ರಾಜಕೀಯ ಪ್ರಾಬಲ್ಯ ಹೊಂದಿದ ಮತ್ತು ಅತಿ ಹೆಚ್ಚು ಚುನಾವಣಾ ಅಕ್ರಮ, ಹಿಂಸಾತ್ಮಕ ರಾಜಕೀಯಕ್ಕೆ ಕುಖ್ಯಾತಿಯಾದ ಡೈಮಂಡ್ ಹಾರ್ಬರ್‌ ಜಿಲ್ಲೆಗೆ ಒಳಪಟ್ಟ ಐವರು ಪೊಲೀಸ್ ಅಧಿಕಾರಿ ಗಳನ್ನು ಸಸ್ಪೆಂಡ್ ಮಾಡಿರುವ ಆಯೋಗ, ಪಕ್ಷಪಾತಿ ಅಧಿಕಾರಿಗಳನ್ನು ಚುನಾವಣೆಯಿಂದ ದೂರ ಸರಿಸುವ ಮೂಲಕ ನ್ಯಾಯಸಮ್ಮತ ಚುನಾವಣೆ ನೈಜ ರೂಪದಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದೆ.

ಚುನಾವಣೆ ಆರಂಭಕ್ಕೆ ಮುನ್ನವೇ ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿ ಹಿರಿಯ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಯಿತು. ಈ ಅಧಿಕಾರಿಗಳು ಸಿಎಂ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರಕಾರದ ಪ್ರಭಾವದಲ್ಲಿದ್ದುದರಿಂದಲೇ ಆಯೋಗ ಈ ಕ್ರಮ ಕೈಗೊಂಡು, ಇಲ್ಲಿ ಮೇಜರ್ ಸರ್ಜರಿಯ ಸುಳಿವು ನೀಡಿತ್ತು. ಈಗ ಸಿಆರ್‌ಪಿಎಫ್, ಎಸ್ಎಸ್‌ಪಿ, ಸಿಐಎಸ್‌ಎಫ್, ಇಂಡೋ-ಟಿಬೆಟನ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಸೇರಿದಂತೆ ಐದು ಭದ್ರತಾ ಪಡೆಗಳ 2.5 ಲಕ್ಷದಷ್ಟು ಯೋಧರು ಎಲ್ಲ 294 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಗ್ರಾಮ, ಪಟ್ಟಣಗಳ ಜನತೆ, ಸಮುದಾಯಗಳನ್ನು ಭೇಟಿ ಮಾಡುತ್ತಾ ಅವರಲ್ಲಿ, ನೀವು ಯಾವುದೇ ಭಯ, ಆತಂಕ ಇಲ್ಲದೆ ಮತದಾನ ಮಾಡಬಹುದು. ನಾವು ನಿಮ್ಮ ಮಕ್ಕಳಂತೆ ಹಿಂದೆ ಇದ್ದು ರಕ್ಷಣೆ ನೀಡುತ್ತೇವೆ ಎಂದು ಭರವಸೆ ತುಂಬುತ್ತಿರುವ ಅಪರೂಪದ ದೃಶ್ಯಾ ವಳಿಗಳಿಗೆ ಬಂಗಾಳ ಸಾಕ್ಷಿಯಾಗುತ್ತಿದೆ. ವೋಟಿಂಗ್ ಬೂತ್ʼಗಳಲ್ಲಿ ಚುನಾವಣಾ ಅಧಿಕಾರಿ ಗಳು, ಭದ್ರತಾ ಸಿಬ್ಬಂದಿ ಮತ್ತು ಮತದಾರರನ್ನು ಮಾತ್ರ ಇರಲಿದ್ದು, ಬಾಹ್ಯ ವ್ಯಕ್ತಿಗಳು 100 ಮೀಟರ್ ಅಂತರ ಕಾಯ್ದುಕೊಳ್ಳುವ ನಿಯಮ ಜಾರಿಯಾಗಿದೆ.

mamatha banerjee

ಮತ ಚೀಟಿ ಹಾಗೂ ದಾಖಲೆಗಳನ್ನು ಬಿಎಲ್ಒಗಳು 100 ಮೀಟರ್ ದೂರದಿಂದಲೇ ಪರಿಶೀಲನೆ ನಡೆಸುತ್ತಿದ್ದಾರೆ. ಮೈಕ್ರೋ ಅಬ್ಸರ್ವರ್‌ಗಳು, ಸಿಎಪಿಎಫ್ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಬಾಡಿ ಕ್ಯಾಮರಾಗಳನ್ನು ಹಾಕಿಕೊಂಡರೆ, ಅತಿಸೂಕ್ಷ್ಮ ಬೂತ್‌ʼಗಳಲ್ಲಿ 360 ಡಿಗ್ರಿ ವೀಕ್ಷಣೆ ಇರುವ ಮೂರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಕಂಟ್ರೋಲ್ ರೂಮ್‌ನಿಂದ ಎಲ್ಲ ಸಿಸಿ ಟಿವಿಗಳ ರಿಯಲ್ ಟೈಮ್ ಮಾನಿಟರಿಂಗ್ ವ್ಯವಸ್ಥೆಯೂ ಇದೆ. ಮತದಾನಕ್ಕೆ ಮುನ್ನ ಐದೂ ಭದ್ರತಾ ಪಡೆಗಳ ಮುಖ್ಯ ಅಧಿಕಾರಿಗಳ ಸಭೆಯನ್ನೂ ಕೊಲ್ಕತ್ತಾದಲ್ಲಿ ನಡೆಸಲಾಗಿದೆ. ಬಹುಶಃ ಬಂಗಾಳದ ಇತಿಹಾಸದಲ್ಲಿ ಚುನಾವಣೆ ವೇಳೆ ಇಂಥಾ ಸಭೆಗಳು ಕೊಲ್ಕತ್ತಾದಲ್ಲಿ ನಡೆದಿರುವ ಉದಾಹರಣೆ ಇಲ್ಲ.

ಹೀಗಿರುವಾಗ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕ್ರಮ ಕೈಗೊಂಡಿರುವುದಕ್ಕೆ ರಾಜ್ಯ ಸರಕಾರ ಅಭಿನಂದನೆ ತಿಳಿಸಬೇಕಿತ್ತು. ಆದರೆ ದೀದಿ ಮಾಡುತ್ತಿರುವುದೇನು? ದೊಡ್ಡ ಸಂಖ್ಯೆಯ ಸೇನಾನಿಗಳ ನಿಯೋಜನೆ, ಪಕ್ಷಪಾತಿಗಳಂತೆ ವರ್ತಿಸುತ್ತಿದ್ದ ರಾಜ್ಯದ ಅಧಿಕಾರಿ ಗಳ ಕೈ ಕಟ್ಟಿ ಹಾಕಿರುವಂತಹ ಕ್ರಮಗಳಿಂದ ಆಕ್ರೋಶಗೊಂಡಿರುವ ಸಿಎಂ ಮಮತಾ, ಇವುಗಳ ಅಗತ್ಯತೆಯನ್ನು ಪ್ರತಿ ಚುನಾವಣಾ ಸಭೆಯಲ್ಲಿ ಪ್ರಶ್ನಿಸುತ್ತಿದ್ದಾರೆ.

ಬಂಗಾಳಿಗರನ್ನು ಹತ್ತಿಕ್ಕುವುದೇ ಕೇಂದ್ರ ಸರಕಾರದ ಉದ್ದೇಶ ಎಂಬ ಬಂಗಾಳಿ ಅಸ್ಮಿತೆಯ ನರೇಟಿವ್‌ನ್ನು ಹಬ್ಬಿಸುತ್ತಿದ್ದಾರೆ. ಸೇನಾ ನಿಯೋಜನೆ ಏಕೆ ಮಾಡಲಾಗಿದೆ? ಅದರ ಅಗತ್ಯತೆ ಏಕೆ ಬಂತು ಎಂಬ ಸಾಮಾನ್ಯ ಅರಿವು ಮಮತಾ ಬ್ಯಾನರ್ಜಿಗೆ ಇಲ್ಲ ಎಂದಲ್ಲ. ಆದರೆ, ಬಂಗಾಳದ ಹಿಂಸಾ ರಾಜಕಾರಣದ ವಾಸ್ತವ ಒಪ್ಪಿಕೊಂಡರೆ ತನ್ನ ವೈಫಲ್ಯವನ್ನೂ ಒಪ್ಪಿ ಕೊಂಡಂತಾಗುವುದಲ್ಲವೇ? ಈ ಹಿಂದಿನ ಚುನಾವಣೆಗಳಲ್ಲಿ ರಾಜ್ಯದಲ್ಲಿ ಯಾವ ಮಟ್ಟಿಗೆ ಹಿಂಸಾಚಾರ ನಡೆದಿತ್ತು ಮತ್ತು ಅವುಗಳನ್ನು ತಡೆಯುವಲ್ಲಿ ರಾಜ್ಯ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿರುವ ಹೊರತಾಗಿ, ಕೇಂದ್ರ ಚುನಾವಣಾ ಆಯೋಗ ಸೇನಾ ನಿಯೋಜನೆಗೆ ಶಿಫಾರಸು ಮಾಡದಿರುತ್ತಿದ್ದರೆ ಏಪ್ರಿಲ್ 23ರಂದು ಹತ್ತಾರು ಹಿಂಸಾಚಾರ ಪ್ರಕರಣ, ಕೊಲೆ, ಹಲ್ಲೆ, ಬೆದರಿಕೆಯಂತಹ ಘಟನಾವಳಿಗಳಿಗೆ ರಾಜ್ಯ ಮತ್ತೆ ಸಾಕ್ಷಿಯಾಗಬೇಕಿತ್ತು.

ಮತ್ತದೇ ಪಲಾಯನ, ನೋವು, ಸಂಕಟಗಳನ್ನು ಜನ ಅನುಭವಿಸಬೇಕಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಬದಲಾಗಿದೆ ಮತ್ತು ಅದು ಕಣ್ಣಿಗೆ ಕಾಣುತ್ತಿದೆ. ಆದರೆ, ಇವುಗಳನ್ನು ಒಪ್ಪದ ಸಿಎಂ ದೀದಿ, ರಾಜ್ಯದ ಜನರಲ್ಲಿ ಮತ್ತೆ ಬಂಗಾಳಿ ಅಸ್ಮಿತೆಯ ಬೀಜ ಬಿತ್ತುತ್ತಾ, ಬಂಗಾಳಿಗರ ದಮನ ಕ್ಕಾಗಿಯೇ ಬಿಜೆಪಿ ಇಂಥದ್ದನೆಲ್ಲಾ ಮಾಡುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಮಮತಾ ಪರ ಪ್ರಚಾರ ಮಾಡಲು ಬಂದ ದಿಲ್ಲಿ ಮಾಜಿ ಸಿಎಂ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಕೂಡ, ಸೇನಾ ನಿಯೋಜನೆ ಬಗ್ಗೆ ತಕರಾರು ತೆಗೆದು, ಬಂಗಾಳದ ಜನರು ಭಯೋತ್ಪಾದಕರೇ? ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟರು. ಇದೇ ಕೇಜ್ರಿವಾಲ, ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಬೂತ್‌ಗಳನ್ನು ವಶಪಡಿಸಿ ಕೊಳ್ಳುವುದು, ರಾಜಕೀಯ ಹಿಂಸಾಚಾರ ಮೂಲಕ ಜನರ ಹತ್ಯೆ ಮಾಡುವುದು, ಮನೆಗಳ ಮೇಲೆ ಬಾಂಬ್ ಎಸೆಯುವುದು, ಕಿಡಿಗೇಡಿಗಳಿಗೆ ಹೆದರಿ ಗ್ರಾಮಸ್ಥರು ಬೇರೆ ರಾಜ್ಯಕ್ಕೆ ಏಕೆ ಹೋಗುವ ಬಗ್ಗೆ ಮಾತನಾಡುವುದೇ ಇಲ್ಲ.

ಅಂದರೆ, ಸೇನಾ ನಿಯೋಜನೆ ಮಾಡಿ ಮುಕ್ತ, ನ್ಯಾಯಸಮ್ಮತ ಚುನಾವಣೆಯನ್ನು ಖಾತರಿ ಪಡಿಸಿಕೊಳ್ಳುವುದು ಕೇಜ್ರಿವಾಲ, ಮಮತಾ ಬ್ಯಾನರ್ಜಿ ಯಂತವರಿಗೆ ಅಸಹನೀಯ ವೆನಿಸಿ ಬಿಡುತ್ತದೆ. ಏಪ್ರಿಲ್ 8ರಂದು ಟಿಎಂಸಿ ನಾಯಕರ ನಿಯೋಗವೊಂದು ದಿಲ್ಲಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ತೆರಳಿತ್ತು.

ನಿಷ್ಪಕ್ಷಪಾತ ಚುನಾವಣೆ ನಡೆಯದು ಎಂಬ ಕಳವಳ ನಮ್ಮಲ್ಲಿದೆ ಎಂದು ಅವರು ಮನವಿ ನೀಡಿದರು. ಕೇವಲ ಏಳು ನಿಮಿಷಗಳಷ್ಟೇ ಸಭೆ ನಡೆದು, ಟಿಎಂಸಿ ನಾಯಕರು ಹೊರ ಬಂದರು. ನಮ್ಮ ಮಾತನ್ನು ಕೇಳದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು, ಕಚೇರಿಯಿಂದ ಹೊರ ನಡೆಯುವಂತೆ ಸೂಚಿಸಿದರು ಎಂದು ಮಾಧ್ಯಮದ ಮುಂದೆ ಮೊಸಳೆ ಕಣ್ಣೀರು ಹಾಕಿದರು.

ನಿಜವಾಗಿಯೂ ಜ್ಞಾನೇಶ್ ಕುಮಾರ್ ಅವರು ಟಿಎಂಸಿಯವರನ್ನು ಹೊರ ನಡೆಯಿರಿ ಎಂದಿದ್ದರೇ ಎಂಬ ಖಚಿತತೆ ಇಲ್ಲ. ಆಯೋಗದ ಕುರಿತ ಟಿಎಂಸಿಯ ಒಟ್ಟಾರೆ ವರ್ತನೆ ನೋಡಿದರೆ ಆಯೋಗದ ಮೇಲೆ ಗೂಬೆ ಕೂರಿಸಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸು ವುದೇ ಟಿಎಂಸಿ ಉದ್ದೇಶವಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಕಳೆದ ಆರೇಳು ತಿಂಗಳಲ್ಲಿ ಟಿಎಂಸಿ ಸೇರಿ ವಿಪಕ್ಷಗಳು ಮಾಡಿರುವುದು ಇದನ್ನೇ. ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸುತ್ತಿಲ್ಲ, ಕೇಂದ್ರ ಸರಕಾರದ ಆಣತಿಯಂತೆ ಆಯೋಗ ಕುಣಿಯುತ್ತಿದೆ ಎಂದು ಆಪಾದಿಸಿ ಜ್ಞಾನೇಶ್ ಕುಮಾರ್ ಅವರ ಪದಚ್ಯುತಿಗೆ ವಿಪಕ್ಷಗಳು ಸಂಸತ್ತಿನಲ್ಲಿ ವಾಗ್ದಂಡನೆಯ ನೊಟೀಸ್ ಅನ್ನು ನೀಡಿದವು.

ಕೆಲ ದಿನಗಳ ಹಿಂದೆ ಕೇಂದ್ರ ಚುನಾವಣಾ ಆಽನದಲ್ಲಿದ್ದ ಸೆಂಟ್ರಲ್ ಎಲೆಕ್ಷನ್ ಅಬ್ಸರ್ವರ್ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮ, ಅಭಿಷೇಕ್ ಬ್ಯಾನರ್ಜಿ ಲೋಕ ಸಭೆ ವ್ಯಾಪ್ತಿಯ ಕ್ಷೇತ್ರವೊಂದಕ್ಕೆ ತೆರಳಿ, ಟಿಎಂಸಿಯ ಗೂಂಡಾಗಳಿಗೆ ಎಚ್ಚರಿಕೆ ನೀಡಿ ಬಂದಿರುವುದು ಭಾರೀ ಸುದ್ದಿಯಾಗಿದೆ.

ಟಿಎಂಸಿ ಮುಖಂಡರು ಈ ಅಧಿಕಾರಿ ವಿರುದ್ಧವೇ ಪತ್ರಿಕಾಗೋಷ್ಠಿ ನಡೆಸಿ, ಈ ಅಧಿಕಾರಿ ಟಿಎಂಸಿ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಮತ್ತು ಬೆಂಬಲಿಗರಿಗೆ ಮತದಾನ ಮಾಡಲು ಬಿಡುತ್ತಿಲ್ಲ ಎಂಬೆಲ್ಲ ಆರೋಪಗಳನ್ನು ಮಾಡಿದ್ದಾರೆ.

ವಾಸ್ತವದಲ್ಲಿ, ಸೇನಾ ನಿಯೋಜನೆ ಮೂಲಕ ಗೂಂಡಾಗಿರಿಗೆ ಕಡಿವಾಣ ಬಿದ್ದಿದೆ. ಇದರಿಂದ ಸ್ಥಳೀಯ ಟಿಎಂಸಿ ಮುಖಂಡರು, ಕಾರ‍್ಯಕರ್ತರು ಹತಾಶರಾಗಿದ್ದಾರೆ. ಹಾಗಾಗಿ, ಚುನಾವಣೆ ಆಯೋಗ ಮತ್ತು ಸೇನೆ ಅಪರಾಧಿಗಳಂತೆ ಭಾಸವಾಗುವುದು ಸಹಜವೇ. ವಿಚಿತ್ರ ಎಂದರೆ, ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಹತ್ತಿಕ್ಕಲಾಗುತ್ತಿದೆ, ಸಂವಿಧಾನಕ್ಕೆ ಚ್ಯುತಿ ತರಲಾಗು ತ್ತಿದೆ, ಬಡ, ದೀನ-ದಲಿತರನ್ನು ಶೋಷಿಸಲಾಗುತ್ತಿದೆ ಎಂದೆಲ್ಲ ಸಂವಿಧಾನದ ಪುಸ್ತಕ ಹಿಡಿದು ಮಾತನಾಡುವ ಮಂದಿ ಬಂಗಾಳದಲ್ಲಿನ ಹಿಂಸೆ, ಚುನಾವಣಾ ಅಕ್ರಮ, ಆಡಳಿತಾರೂಢ ಪಕ್ಷದ ಗೂಂಡಾಗಿರಿ, ಮತದಾರರನ್ನು ಬೆದರಿಸುವ ಬಗ್ಗೆ ಮಾತನಾಡು ವುದೇ ಇಲ್ಲ.

1977ರಿಂದ ಎಡಪಕ್ಷಗಳ ಆಡಳಿತದ ಕಾಲದಿಂದ ಹಿಡಿದು ಈಗಿನ ಟಿಎಂಸಿವರೆಗೆ ಇದು ನಡೆಯುತ್ತಿದ್ದರೂ, ಬಂಗಾಳದ ಬುದ್ಧಿಜೀವಿ ವರ್ಗ ಇದನ್ನು ಖಂಡಿಸುವುದೇ ಇಲ್ಲ. ದೇಶ ದಲ್ಲಿ ಸಂವಿಧಾನದ ಕಗ್ಗೊಲೆಯಾಗುತ್ತದೆ ಎಂದು ಪೋಸ್ಟರ್ ಹಿಡಿದು, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ, ಧರಣಿ ಕೂರುವ ಮಂದಿ ಬಂಗಾಳದ ರಾಜಕೀಯ ಹತ್ಯಾಕಾಂಡ ಗಳು, ಬಡ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರಗಳ ಬಗ್ಗೆ ಮೌನ ವಾಗಿಯೇ ಇರುತ್ತಾರೆ.

1979ರಲ್ಲಿ ಬಂಗಾಳದ ಸುಂದರ ಬನ್ ಮ್ಯಾಂಗ್ರೂವ್ ಕಾಡುಗಳ ಮಧ್ಯೆ ನೆಲೆಸಿದ್ದ ದಲಿತ ನಿರಾಶ್ರಿತರನ್ನು ಅಲ್ಲಿಂದ ಬಡಿದಟ್ಟಿದ್ದ ಮತ್ತು 10 ಸಾವಿರಕ್ಕಿಂತಲೂ ಹೆಚ್ಚು ಮಂದಿ ಯನ್ನು ಕೊಂದು ಹಾಕಿದ್ದ ಮರಿಚ್ ಜನ್ಪಿ ಸಾಮೂಹಿಕ ಹತ್ಯಾಕಾಂಡಕ್ಕೆ ಕಾರಣವಾಗಿದ್ದ ಆಗಿನ ಸಿಪಿಐ-ಎಂ ಸರಕಾರದ ದುರ್ನಡತೆ ಬಗ್ಗೆ ಎಷ್ಟು ಮಂದಿ ಮಾತನಾಡಿದ್ದಾರೆ? ದಕ್ಷಿಣ 24 ಪರಗಣದ ಗೊಸಾಬಾ ವಿಧಾನಸಭೆ ವ್ಯಾಪ್ತಿಯಲ್ಲಿ ಬರುವ ಈ ಮರಿಚ್‌ಜನ್ಪಿ ಗ್ರಾಮದ ಮಂದಿಗೆ ಅಂದಿನ ಕರಾಳ ದಿನಗಳ ಬಗ್ಗೆ ಕೇಳಿದಾಗ ಈಗಲೂ ಮೈ ನಡುಕ ಬರುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಟೆರರ್ ಆವರಿಸಿತ್ತು. ಈಗಲೂ ಅಂಥದ್ದೇ ಮಾದರಿಯ ಪೊಲಿಟಿಕಲ್ ಟೆರರ್ ಕಾಣುತ್ತದೆ. ಅದರಿಲಿ, 2024ರ ಸಂದೇಶ್‌ಖಲಿ ದೌರ್ಜನ್ಯ ಖಂಡಿಸಿ ಮಾನವ ಹಕ್ಕು ಹೋರಾಟಗಾರರು ಪರೇಡ್ ನಡೆಸಿದರೇ? ಮುರ್ಷಿದಾಬಾದ್‌ನ ಶಂಶೇರ್‌ಗಂಜ್‌ನಲ್ಲಿ ಕಿಡಿಗೇಡಿಗಳು ಇಬ್ಬರು ಬಡವರನ್ನು ಹತ್ಯೆ ಮಾಡಿ, ಹಿಂದು ಕುಟುಂಬಗಳ ಮನೆ ಮೇಲೆ ದಾಳಿ ಮಾಡಿ, ಅವರು ಅಲ್ಲಿಂದ ಪಲಾಯನ ಮಾಡಿದಾಗ ಇವರೆಲ್ಲ ಎಲ್ಲಿ ಹೋಗಿದ್ದರು? ಇವು ಕೆಲ ಉದಾಹರಣೆಗಳಷ್ಟೇ.

ಇಂಥಾ ಎಷ್ಟೋ ಪ್ರಕರಣಗಳ ನಿದರ್ಶನ ನೀಡಬಹುದು. ಆದರೆ, ಈ ಬಾರಿ ಚುನಾವಣೆ ಆಯೋಗ, ಭಾರತೀಯ ಸೇನೆ ಮತ್ತು ಕೇಂದ್ರ ಸರಕಾರ ಇಂಥದ್ದೊಂದು ಪೊಲಿಟಿಕಲ್ ಟೆರರ್‌ಗೆ ಬಂಗಾಳದಲ್ಲಿಕಡಿವಾಣ ಹಾಕಿದೆ. ಆ ಕಾರಣಕ್ಕಾಗಿಯಾದರೂ, ಚುನಾವಣಾ ಆಯೋಗ ಮತ್ತು ಸೇನೆಗೆ ವಿಶೇಷ ಅಭಿನಂದನೆ ಸಲ್ಲಿಸಲೇಬೇಕು.

ಎಸ್‌ಐಆರ್ ಪ್ರಕ್ರಿಯೆ ಮೂಲಕ ರಾಜ್ಯದ ಲಕ್ಷೋಪಲಕ್ಷ ನಕಲಿ ವೋಟರ್‌ಗಳ ಹೆಸರನ್ನು ಅಳಿಸಿ ಹಾಕಿಲಾಯಿತಾದರೂ, ವಿಚಾರಣೆ ಬಾಕಿ ಇರುವ ಕಾರಣಕ್ಕಾಗಿ ಸುಮಾರು 26 ಲಕ್ಷ ಮಂದಿಗೆ ಈ ಬಾರಿ ಮತದಾನ ಮಾಡಲು ಸಾಧ್ಯವಾಗುತ್ತಿಲ್ಲ. ವಿಪಕ್ಷಗಳು ಚುನಾವಣಾ ಆಯೋಗವನ್ನು ದೋಷಿಯನ್ನಾಗಿ ಮಾಡುತ್ತಿದ್ದರೂ, ರಾಜ್ಯ ಸರಕಾರ ಚುನಾವಣಾ ಆಯೋಗಕ್ಕೆ ಸಮಯೋಚಿತ ಸಹಕಾರ ನೀಡುತ್ತಿದ್ದರೆ, ಇಂಥಾ ಪರಿಸ್ಥಿತಿ ನಿರ್ಮಾಣ ವಾಗುತ್ತಿತ್ತಾ ಎನ್ನುವುದನ್ನೂ ಆಲೋಚಿಸಬೇಕಾಗುತ್ತದೆ.

ಈ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತೆ ಗೆಲ್ಲಬಹುದು ಅಥವಾ ಬಿಜೆಪಿ ವಿಜಯಮಾಲೆ ಧರಿಸಬಹುದು. ಜನರಿಂದ, ಜನರಿಗಾಗಿ ಮತ್ತು ಜನರಿಗೋ ಸ್ಕರ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಗೆಲ್ಲಬೇಕು. ಬಂಗಾಳದ ಸಾಮಾನ್ಯ ಜನ ಗೆದ್ದರೆ ಅದಕ್ಕಿಂದ ದೊಡ್ಡ ಸಂಭ್ರಮ ಮತ್ತೊಂದಿಲ್ಲ.