Harish Kera Column: ಆಡು ಕನ್ನಡ ಸಾಲದು, ಬರಹ ಕನ್ನಡವೂ ಬೆಳೆಯಲಿ
ಚಿನ್ನಯ್ಯ ಮಾಸ್ಟ್ರು ಕೆದಂಬಾಡಿ ಜತ್ತಪ್ಪ ರೈಗಳ ಬೇಟೆಯ ಕತೆಗಳ ಪುಸ್ತಕಗಳನ್ನು ತೆಗೆದು ಕೊಂಡು ಬಂದು ಕ್ಲಾಸಿನಲ್ಲಿ ಓದುತ್ತಿದ್ದರು. ನಮ್ಮ ಅಕ್ಕಪಕ್ಕದ ಮಲೆಕಾಡುಗಳಲ್ಲಿ ಓಡಾಡು ತ್ತಿದ್ದ ಹುಲಿ ಚಿರತೆ ಕಾಡುಕೋಣಗಳೇ ಈ ಕತೆಯ ನಾಯಕರೂ ದುರಂತ ನಾಯಕರೂ ಆಗಿರುವುದನ್ನು ಕಂಡು ನಾವು ಚಕಿತರಾಗುತ್ತಿದ್ದೆವು.
-
ಹರೀಶ್ ಕೇರ
Nov 6, 2025 8:51 AM
ಕಾಡುದಾರಿ
ಮಧ್ಯಾಹ್ನ ಆಗುತ್ತಿದ್ದಂತೆ ರಾಮ ಅಜಿಲ ಮಾಸ್ಟ್ರು ಸ್ಟಾಫ್ ರೂಮಿನಲ್ಲಿದ್ದ ಮರದ ಪೆಠಾರಿಯನ್ನು ತೆರೆಯುತ್ತಿದ್ದರು. ನಾವು ಕುತೂಹಲಿ ಮಕ್ಕಳು ಅದರ ಸುತ್ತ ನೆರೆಯುತ್ತಿzವು. ಅದರೊಳಗಿಂದ ಚಂದಮಾಮ, ಬಾಲಮಿತ್ರ, ಅಮರಚಿತ್ರಕಥೆ ಪುಸ್ತಕಗಳೆಲ್ಲ ಹೊರ ಬರುತ್ತಿದ್ದವು. ಸಂಜೆ ಕ್ಲಾಸಿಗೆ ಈ ಕತೆಗಳದೇ ಜಾತ್ರೆ. ರಾಮ ಮಾಸ್ಟ್ರು ಕನ್ನಡ ಪಾಠ ಮಾಡು ತ್ತಿದ್ದುದಕ್ಕಿಂತಲೂ ಕತೆ ಹೇಳುತ್ತಿದ್ದುದೇ ಹೆಚ್ಚು.
ಹರಿಶ್ಚಂದ್ರನ ಕತೆ ಹೇಳುತ್ತಿದ್ದರೆ, ಹರಿಶ್ಚಂದ್ರ ಎಂದು ಬರೆಯಲು ಕಷ್ಟಪಡುತ್ತಿದ್ದ ಹುಡುಗ ನಿಗೆ ಸಲೀಸಾಗಿ ಅದು ಬಂದುಬಿಡುತ್ತಿತ್ತು. ಧೃತರಾಷ್ಟ್ರ ಎನ್ನುವುದೂ ಅಷ್ಟೆ. ಕರತಲಾ ಮಲಕ ಎಂದರೇನು ಎಂದು ತಿಳಿಯಲು ಕಷ್ಟಪಡಬೇಕಿರಲಿಲ್ಲ. ಅವರ ಬಳಿಯೋ ವೆಂಕಟರಮಣ ಮಾಸ್ಟ್ರ ಬಳಿಯೋ ಕೇಳಿದರೆ ಸಾಕಿತ್ತು.
ಸಂದರ್ಭ ಸಹಿತ ವಿವರಿಸುತ್ತಿದ್ದರು. ಪಿಯುಸಿಯಲ್ಲಿ ಅಮೃತ ಸೋಮೇಶ್ವರರು, ಕಾಯಕಲ್ಪ ಎಂದರೆ ಏನೆಂದೂ, ಅದರ ಕತೆಯೇನೆಂದೂ ವಿವರಿಸುತ್ತಿದ್ದರು. ಅದೇ ಹೆಸರಿನಲ್ಲಿ ತಾವು ಬರೆದ ಯಕ್ಷಗಾನ ಪ್ರಸಂಗದ ಪದ್ಯಗಳನ್ನು ಉದ್ಧರಿಸುತ್ತಿದ್ದರು. ಬಿ.ಎ ವಿವೇಕ ರೈಗಳು ಗಿಳಿಸೂವೆ ಎಂಬ ಕೃತಿ ಬರೆದು, ಆ ವಿಶಿಷ್ಟ ಕನ್ನಡ ಪದವನ್ನು ಅದರ ಅರ್ಥ- ಧ್ವನಿಗಳ ಸಹಿತ ವಿದ್ಯಾರ್ಥಿಗಳ ಎದೆಯಲ್ಲಿ ಅಚ್ಚು ಒತ್ತುತ್ತಿದ್ದರು.
ಚಿನ್ನಯ್ಯ ಮಾಸ್ಟ್ರು ಕೆದಂಬಾಡಿ ಜತ್ತಪ್ಪ ರೈಗಳ ಬೇಟೆಯ ಕತೆಗಳ ಪುಸ್ತಕಗಳನ್ನು ತೆಗೆದು ಕೊಂಡು ಬಂದು ಕ್ಲಾಸಿನಲ್ಲಿ ಓದುತ್ತಿದ್ದರು. ನಮ್ಮ ಅಕ್ಕಪಕ್ಕದ ಮಲೆಕಾಡುಗಳಲ್ಲಿ ಓಡಾಡುತ್ತಿದ್ದ ಹುಲಿ ಚಿರತೆ ಕಾಡುಕೋಣಗಳೇ ಈ ಕತೆಯ ನಾಯಕರೂ ದುರಂತ ನಾಯಕರೂ ಆಗಿರುವುದನ್ನು ಕಂಡು ನಾವು ಚಕಿತರಾಗುತ್ತಿದ್ದೆವು.
ಇದನ್ನೂ ಓದಿ: Harish Kera Column: ಸ್ಪರ್ಧೆಯಲ್ಲಿ ಸೋತ ಕತೆಗಾರನಿಗೆ ಒಂದು ಪತ್ರ
ಶ್ರೀಧರ ಮಾಸ್ಟ್ರು ಶ್ರೀರಾಮನು ನಾಲ್ಕು ತಿಂಗಳ ದಟ್ಟ ಕಾರ್ಗಾಲವನ್ನು ಮಲೆನಾಡಿನ ಕಾನನದ ಗುಹೆಯೊಂದರಲ್ಲಿ ಕಳೆಯುವ ಸನ್ನಿವೇಶವನ್ನು ವಿವರಿಸುತ್ತಿದ್ದರು. ಆ ಕಾವ್ಯ ದಲ್ಲಿ ಅವರು ಕಾಣಿಸಿದ ಮಿಂಚುಹುಳಗಳೇ ರಾತ್ರಿ ಮಿಂಚುವುದನ್ನು ಕಂಡು ಆನಂದ ತುಂದಿಲರಾಗುತ್ತಿದ್ದೆವು.
ವಾರಿಜಾ ಮೇಡಂ ಹರಿಶ್ಚಂದ್ರ ಕಾವ್ಯದ ಲೋಹಿತಾಶ್ವನ ಸಾವಿನ ಚಂದ್ರಮತಿಯ ಪ್ರಲಾಪದ ಪ್ರಸಂಗವನ್ನು ಪಾಠ ಮಾಡುತ್ತ ತಾವೂ ಅಳುತ್ತ ನಮ್ಮನ್ನೂ ದುಃಖಿಸುವಂತೆ ಮಾಡುತ್ತಿದ್ದರು. ಹೀಗೆ ನಾವು ಕೇಳುತ್ತಿದ್ದುದು, ನೋಡುತ್ತಿದ್ದುದು ಬೇರೆಯಾಗಿರಲಿಲ್ಲ. ಬದುಕು ಮತ್ತು ಪಾಠವೆರಡೂ ಕನ್ನಡವೇ ಆಗಿರುತ್ತಿತ್ತು. ಆ ಕನ್ನಡ ಕೇವಲ ಭಾಷೆಯಾಗಿ ಅಲ್ಲದೆ, ಭಾವವಾಗಿ, ಬದುಕಾಗಿ ನಮ್ಮ ಜೊತೆಗಿರುತ್ತಿತ್ತು.
ಕನ್ನಡ ಉಳಿದು ಬೆಳೆದು ಬಂದುದು ಇಂಥ ಮೇಸ್ಟ್ರುಗಳು, ಉಪನ್ಯಾಸಕರು, ಪ್ರಾಧ್ಯಾಪಕ ರಿಂದ. ಇದಕ್ಕೂ ಹಿಂದಿನವರನ್ನೂ ಮುಂದಿನವರನ್ನೂ ನೂರಾರು ಸಂಖ್ಯೆಯಲ್ಲಿ ಉದಾ ಹರಿಸಬಹುದು. ಅದಲ್ಲ ಇಲ್ಲಿನ ಉದ್ದೇಶ. ಕನ್ನಡವನ್ನು ಇವರೆಲ್ಲ ಹೇಗೆ ನಮಗೆ ನಿಕಟ ವಾಗಿಸುತ್ತಿದ್ದರು ಎಂದು ಹೇಳುವುದಷ್ಟೇ ಆಶಯ.
ಇಂಥ ಮೇಸ್ಟ್ರುಗಳ ಶಿಷ್ಯತ್ಯದಲ್ಲಿ ಬೆಳೆದ ಕೆಲವು ತಲೆಮಾರುಗಳು ಕನ್ನಡವನ್ನು ಕಾಪಾಡಿ ಕೊಂಡು ಇಂದಿನವರೆಗೂ ತಂದಿವೆ. ಇದು ಸಂರಕ್ಷಿಸಿ ಮ್ಯೂಸಿಯಂನಲ್ಲಿ ಇಡುವ ಕ್ರಮ ದಂತಲ್ಲ. ಜೊತೆಜೊತೆಗೇ ಕೊಂಡೊಯ್ಯುವ, ಬೆಳೆಸುವ ರೂಢಿ. ಈ ನವೆಂಬರ್ ಮಾಸದಲ್ಲಿ ರೋಷಾವೇಶದಿಂದ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ಭಾಷಣ ಮಾಡು ವಾಗ ನಾವು ಇದನ್ನೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.
ಕನ್ನಡವನ್ನು ರಕ್ಷಿಸಿಕೊಳ್ಳಲು ಹಲವು ದಾರಿ. ಮೊದಲನೆಯದು ಮಕ್ಕಳಿಗೆ ಮನೆಯಲ್ಲಿ ಕನ್ನಡ ಓದಲು ಪ್ರೋತ್ಸಾಹಿಸುವುದು. ಮನೆಯ ಮಾತು ಯಾವುದೇ ಉಪಭಾಷೆ ಆಗಿರಲಿ. ಇಂಗ್ಲಿಷ್‌ನ ಸಮಾನವಾಗಿ ಕನ್ನಡ ಓದಿನ ಭಾಷೆ ಆಗಿದ್ದರೆ ಒಳ್ಳೆಯದು.
ನಮ್ಮ ಕೊಂಕಣಿ ತುಳು ಅರೆಭಾಷೆ ದಕ್ಖನಿ ಹಾಗೇ ಕನ್ನಡದ ಬೇರೆ ಬೇರೆ ಡಯಲೆಕ್ಟುಗಳನ್ನು ಕಳೆದುಕೊಳ್ಳಬಾರದೆಂಬ ಪ್ರe ಎಡೆ ವಿಸ್ತರಿಸುತ್ತಿದೆ. ಅದು ಸರಿ. ಆದರೆ ಇಂಗ್ಲಿಷ್‌ಗೆ ಹೋಲಿಸಿ ದರೆ ಕನ್ನಡವೇ ಇಂದು ಉಪಭಾಷೆ. ಮನೆಮಾತು ನಾಶವಾದರೆ ಮನೆ ಸಂಸ್ಕೃತಿಯೇ ನಾಶವಾಗುತ್ತದೆ ಎಂಬ ಭಾವ ಇದೆ. ಇದನ್ನೇ ಕನ್ನಡಕ್ಕೆ ವಿಸ್ತರಿಸಿದರೆ ಎಲ್ಲ ಸ್ಪಷ್ಟವಾಗು ತ್ತದೆ.
ಕನ್ನಡದ ನಾಶದೊಂದಿಗೆ, ನಮಗೆ ಪರಿಚಿತವಾದ, ನಮ್ಮ ಜೀವಾಳವಾಗಿದ್ದ ಎಲ್ಲವೂ ನಾಶದ ಹಾದಿ ಹಿಡಿಯುತ್ತವೆ. ಎರಡನೆಯದು ಕನ್ನಡದ ಮೇಲೆ ಪ್ರೀತಿ ಹುಟ್ಟಿಸಬಲ್ಲ ಮೇಸ್ಟ್ರುಗಳನ್ನು ಕಾಪಾಡಿಕೊಳ್ಳುವುದು. ಇದನ್ನು ಮುಖ್ಯವಾಗಿ ಸರಕಾರ, ಎರಡನೆಯದಾಗಿ ಸಮುದಾಯ ಮಾಡಿಕೊಳ್ಳಬೇಕು. ಕನ್ನಡ ಕಲಿಸುವ ವಿದ್ವಾಂಸರಿಗೆ ಇಲ್ಲಿ ಇಂಗ್ಲಿಷ್- ಹಿಂದಿ ಕಲಿಸುವವರ ಮನ್ನಣೆಯಿಲ್ಲ.
ಕನ್ನಡ ಮೇಸ್ಟ್ರುಗಳನ್ನು ಕಸಕ್ಕಿಂತ ಕಡೆಯಾಗಿ ಕಾಣುವ, ಅವರಿಗೆ ಕನ್ನಡವೊಂದು ಬಿಟ್ಟು ಮತ್ತೆಲ್ಲವನ್ನೂ ಕಲಿಸುವ ಕೆಲಸ ಹಚ್ಚುವ ರೂಢಿ ಇದೆ. ಬಹುಶಃ ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಸುವವರು ಅತಿಥಿ, ಹಂಗಾಮಿ ಉಪನ್ಯಾಸಕರು ಮಾತ್ರ. ಇವರಿಗೆ ಉದ್ಯೋಗ ಖಾತರಿ ಇಲ್ಲ. ಸರಕಾರಿ ಶಾಲೆಗಳಲ್ಲಿ ಕನ್ನಡವನ್ನೂ ಸೇರಿದಂತೆ ಯಾವುದೇ ವಿಷಯದ ಶಿಕ್ಷಕರಿಗೂ ಇಂದು ತರಕಾರಿ ಚೀಲ ಹೊರುವ, ಮೊಟ್ಟೆ ಎಣಿಸುವ, ದಿನಸಿ ತರುವ ಕೆಲಸಗಳ ನಡುವೆ ಪಾಠ ಮಾಡಲು ಎಡೆಯಾದರೂ ಇದೆಯೋ ಇಲ್ಲವೋ ತಿಳಿಯದು.
ಹೀಗಿರುವಾಗ ಇವರು ಮಕ್ಕಳ ಮನ ಮುಟ್ಟುವಂತೆ ಕನ್ನಡ ಪಾಠ ಮಾಡಬೇಕು, ಕನ್ನಡದ ಬಗ್ಗೆ ಆಸೆ ಪ್ರೀತಿ ಬೆಳೆಸಬೇಕೆಂದು ನಾವು ನಿರೀಕ್ಷಿಸುವುದು ದುಬಾರಿಯಾದೀತೋ ಏನೋ. ಸರಕಾರಿ ಯಂತ್ರ ಸರಿಯಾಗದೇ ಇದು ಸರಿಹೋಗದು. ಸರಕಾರ ಇದನ್ನು ವೆಚ್ಚದ ವಿಷಯ ಎಂದು ನೋಡದೆ ಕರ್ತವ್ಯ ಎಂಬಂತೆ ನೋಡಿದರೆ, ಮುರಿದು ಬೀಳುತ್ತಿರುವ ಶಾಲೆಗಳು, ಏಕೋಪಾಧ್ಯಾಯ - ಏಕ ವಿದ್ಯಾರ್ಥಿ ಶಾಲೆಗಳ ಸಮಸ್ಯೆಯ ಜೊತೆಗೆ ಇದನ್ನೂ ಒಂದು ಪರಿಹರಿಸಲೇಬೇಕಾದ ಆದ್ಯತೆ ಎಂಬಂತೆ ತಿಳಿದರೆ ಸರಿಯಾದೀತು.
ಮಾತಾಡುವ ಕನ್ನಡಕ್ಕೆ ಸದ್ಯದಲ್ಲಿ ಅಳಿವು ಇದೆ ಎಂದು ನಮಗೆ ಅನಿಸದು. ಯಾಕೆಂದರೆ ಕನ್ನಡ ರಾಷ್ಟ್ರೀಯತೆ ಇದೀಗ ಹೊಸ ರೂಪ ಪಡೆಯುತ್ತಿದೆ. ಕೆಲವೆಡೆ ಅದು ಉಗ್ರ ಸ್ವರೂಪ ದಲ್ಲಿಯೂ ಅಭಿವ್ಯಕ್ತಗೊಳ್ಳುತ್ತಿದೆ. ಧರ್ಮರಾಯನಿದ್ದಲ್ಲಿ ಭೀಮನಿದ್ದಂತೆ ಅದು ಎಂದು ಹೇಳುವವರು ಇದ್ದಾರೆ. ಅನ್ಯ ಭಾಷಿಕರಿಗೆ ಇದರ ಬಗ್ಗೆ ಆಕ್ಷೇಪ ಇರಬಹುದು.
ಆದರೆ ಇಲ್ಲಿ ಬಂದು ನೆಲೆಯಾದವರು ಕನ್ನಡ ಕಲಿತು ಮಾತಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವುದಂತೂ ಅಗತ್ಯವಿದೆ. ಆಗ ಮಾತ್ರ ಬೆಂಗಳೂರಿನಂಥ ಪ್ರದೇಶದಲ್ಲಿ ಕನ್ನಡ ಉಳಿಯಲು ಸಾಧ್ಯ. ಇಂದು ಬೆಂಗಳೂರಿನ ಜವಳಿ ಅಂಗಡಿಗಳು ಗುಜರಾತಿಗರಿಂದ, ಬೇಕರಿಗಳು ಮಲೆಯಾಳಿಗಳಿಂದ, ಸೆಲೂನ್‌ಗಳು ಉತ್ತರ ಪ್ರದೇಶ- ಬಿಹಾರಗಳಿಂದ ನಿರ್ವಹಿಸಲ್ಪಡುತ್ತಿವೆ.
ಕನ್ನಡಿಗರು ಪಟ್ಟು ಹಿಡಿದು ಕನ್ನಡದಲ್ಲಿಯೇ ವ್ಯವಹರಿಸಿದರೆ ಇವರೂ ಕಲಿಯುತ್ತಾರೆ, ಇಲ್ಲದಿದ್ದರೆ, ಹತ್ತು ವರ್ಷ ಇಲ್ಲಿದ್ದರೂ ಒಂದಕ್ಷರ ಕನ್ನಡ ಕಲಿಯದೆ ಬದುಕುತ್ತಾರೆ. ಆಡುವ ಕನ್ನಡವನ್ನು ಗಟ್ಟಿಯಾಗಿಸುವಲ್ಲಿ ದೊಡ್ಡ ಪಾತ್ರ ವಹಿಸುವುದು ಸೋಶಿಯಲ್ ಮೀಡಿಯಾ ಗಳು. ನಾವು ಇವುಗಳನ್ನು ಎಷ್ಟೇ ದೂರಿದರೂ, ಈ ಒಂದು ವಿಷಯದಲ್ಲಿ ಮಾತ್ರ ಇವುಗಳಿಗೆ ಕೈ ಮುಗಿಯಲೇಬೇಕು.
ಈ ಮೀಡಿಯಾಗಳ ಒಡೆಯರು ಹತ್ತಾರು ವರ್ಷಗಳ ಹಿಂದೆಯೇ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿರುವ ವ್ಯಾಪಾರದ ಸಾಧ್ಯತೆಯನ್ನು ಕಂಡುಕೊಂಡರು. ಮಾಲಿಕರು, ಬಳಸುವವರು, ಡೆವಲಪರ್ಸ್ ಸೇರಿದಂತೆ ಎಲ್ಲರೂ ಇಲ್ಲಿ ಕನ್ನಡವನ್ನು ಬೆಳೆಸುತ್ತ ಹೋದರು.
ಇಂದು ಇಂಗ್ಲಿಷ್‌ನ ಹಂಗೇ ಇಲ್ಲದವನು ಕೂಡ ಸೋಶಿಯಲ್ ಮೀಡಿಯಾ ಬಳಸಲು ಸಾಧ್ಯ. ಅದು ಅನ್ನ ಗಳಿಕೆಯ ಎಷ್ಟೋ ಮಾರ್ಗಗಳನ್ನು ತೆರೆದಿದೆ. ಯುಟ್ಯೂಬ್, ಇನ್ ಸ್ಟಗ್ರಾಂ ಮತ್ತಿತರ ಕಡೆ ಕನ್ನಡ ಕಂಟೆಂಟ್ ಕ್ರಿಯೇಶನ್‌ನಿಂದಲೇ ಬದುಕು ಕಟ್ಟಿಕೊಂಡವರು ಅಸಂಖ್ಯ. ಅದು ದಿಗಂತದ ಮಿರುಗುವ ಭರವಸೆಯ ಗೆರೆ.
’ಕನ್ನಡ ಅನ್ನದ ಭಾಷೆಯಾಗಬೇಕು’ ಎಂಬ ಕ್ಲೀಷೆಯ ಮಾತು ಇಲ್ಲಿ ಹೀಗೆ ಸಾಕಾರವಾಗಿದೆ. ಇತ್ತೀಚೆಗೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿರುವ ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್, ಯುಟ್ಯೂಬ್ ಟ್ಯುಟೋರಿಯಲ್ ಮೂಲಕ ಆರೇ ತಿಂಗಳಲ್ಲಿ ಸಲೀಸಾಗಿ ಕನ್ನಡ ಮಾತಾಡುವುದನ್ನು ಕಲಿತಿದ್ದು ಇಲ್ಲಿ ನೆನಪಾಗುತ್ತಿದೆ.
ಆದರೆ ಆಡುವ ಕನ್ನಡದಂತೆಯೇ, ಕನ್ನಡ ಬರಹ, ಅದರ ಓದುವಿಕೆ ಬೆಳೆದಿದೆಯೇ ಎಂದು ನೋಡಿದರೆ ನಿರಾಶೆಯಾಗುತ್ತದೆ. ಜೆನ್ ಜಿ ಮಕ್ಕಳಿಗೆ ಕನ್ನಡ ಓದುವುದಕ್ಕಿಂತ ಇಂಗ್ಲಿಷ್ ಓದೇ ಸುಲಭವಾಗಿದೆ. ಅದಕ್ಕೆ ಕಾರಣ ಬಹು ಸುಲಭವಾಗಿ ಸಿಕ್ಕಿದ ಇಂಗ್ಲಿಷ್ ಚಿತ್ರಪುಸ್ತಕ ಗಳು, ಹೆತ್ತವರ ಇಂಗ್ಲಿಷ್ ಮೋಹ ಇತ್ಯಾದಿ ಪಟ್ಟಿ ಮಾಡಬಹುದು.
ಇನ್ನು ಜೆನ್ ಆಲ್ಫಾ ಮಕ್ಕಳನ್ನಂತೂ ಕನ್ನಡದ ವಿಷಯದಲ್ಲಿ ಮಾತಾಡಿಸುವಂತೆಯೇ ಇಲ್ಲ. ಇವು ಕನ್ನಡದಿಂದ ಬಹುದೂರ ಹೋಗಿವೆ. ಆಡು ಕನ್ನಡವನ್ನೇನೋ ಅಲ್ಪಸ್ವಲ್ಪ ವಾತಾವರಣದಿಂದ, ಮೊಬೈಲ್‌ನಲ್ಲಿ ಸಿಗುವ ಕನ್ನಡ ಮನರಂಜನೆಯ ಮೂಲಕ ಪಡೆದಿರ ಬಹುದು ಆದರೆ ಓದುಕನ್ನಡ ಅವರಲ್ಲಿ ಇಲ್ಲ.
ಅವರ ಹೆತ್ತವರು ಓದುತ್ತಾರೋ ಎಂದು ಕೇಳಿದರೆ, ಅದಕ್ಕೂ ಉತ್ತರ ನಿರಾಶಾದಾಯಕ. ಹೆತ್ತವರು ಮನೆಯಲ್ಲಿ ಓದಿನ ವಾತಾವರಣ ತಂದಿದ್ದರೆ ಮಕ್ಕಳೇಕೆ ಓದುವೈರಿಗಳಾಗು ತ್ತಿದ್ದರು? ಹಾಗಂತ ಇವರು ಏನೂ ಓದುವುದಿಲ್ಲ ಎಂದಲ್ಲ. ಇಂಗ್ಲಿಷ್‌ನ ಯಂಗ್ ಅಡಲ್ಟ್ ಫಿಕ್ಷನ್ ಪುಸ್ತಕಗಳನ್ನು ಓದುತ್ತಾರೆ. ನಂತರ ಶೇಕ್ಸ್‌ಪೀಯರ್ ಕಡೆಗೆ ಹೋಗಲೂ ಬಹುದು. ಆದರೆ ಕುವೆಂಪು, ಬೇಂದ್ರೆ, ದೇವನೂರು ಕಡೆಗೆ ಬರುವುದಿಲ್ಲ.
ಓದು ಕನ್ನಡ ಯಾಕೆ ಬೇಕು? ಆಡು ಕನ್ನಡ ಸಾಲದೇ? ಅದರಿಂದ ಕನ್ನಡ ಉಳಿದುಕೊಳ್ಳುವು ದಿಲ್ಲವೇ? ಹಾಗಂತ ವಾದ ಮಾಡುವವರು ಇರಬಹುದು. ಒಂದು ಮಟ್ಟಿಗೆ ಇದು ಸಮಂಜಸ ವಾಗಿಯೇ ಕಾಣಬಹುದು. ಆದರೆ ಇದು ಆಂಶಿಕ ಬೆಳವಣಿಗೆ. ಬರಹ ಮತ್ತು ಮಾತು ಎರಡೂ ಕೈಗೂಡಿಸಿ ಬೆಳೆದರೆ ಮಾತ್ರವೇ ಒಂದು ಭಾಷೆ ಬೆಳೆದುಕೊಳ್ಳುತ್ತದೆ ಎನ್ನುವುದಕ್ಕೆ ಇಂಗ್ಲಿಷ್ ಉದಾಹರಣೆ.
ಅದು ಕನ್ನಡದಿಂದ ಇಡ್ಲಿ ಚಟ್ನಿಯಂಥ ಪದಗಳನ್ನು ತನ್ನದಾಗಿಸಿ ಮಾತಿನಲ್ಲೂ ಬರಹ ದಲ್ಲೂ ಬಳಸಿಕೊಂಡಿದೆ. ಅಚ್ಚರಿ ಎಂಬ ಅಚ್ಚಕನ್ನಡದ ಪದವನ್ನು ಇಂದು ಯಾರೂ ಆಡುಕನ್ನಡದಲ್ಲಿ ಬಳಸುವುದಿಲ್ಲ. ಬರೆಯುವಾಗ ಬಳಸುತ್ತಾರೆ. ಹೊಸ ಕನ್ನಡ ಹುಡುಗರಿಗೆ ಆಶ್ಚರ್ಯ ಎಂಬುದಕ್ಕಿಂತ ಅಚ್ಚರಿ ಎಂಬ ಪದ ಸುಲಭವಾದೀತು.
ಹೀಗಾಗಿ ಬರಹಕನ್ನಡವನ್ನು ಆದಷ್ಟು ಸರಳಗೊಳಿಸಬೇಕು ಎಂಬ ಕೆಲವು ವಿದ್ವಾಂಸರ ಮಾತಿನಲ್ಲಿ ಹುರುಳು ಇದೆ. ಆದರೆ ಇದು ಬಲವಂತದಿಂದ ಆಗುವುದಲ್ಲ. ಸಹಜವಾಗಿ, ನಿಧಾನವಾಗಿ ಕನ್ನಡವನ್ನು ಹಾಗೆ ಬಳಸುವತ್ತ ಕೊಂಡೊಯ್ಯಬಹುದು. ಆದರೆ ಇದಕ್ಕೆಲ್ಲ ನಮ್ಮ ಕನ್ನಡ ಬರಹಗಾರರು, ಸಾಹಿತಿಗಳು ಎಷ್ಟು ಸಿದ್ಧರಾಗಿದ್ದಾರೆ ಎಂಬ ಪ್ರಶ್ನೆ ಉಳಿದು ಕೊಳ್ಳುತ್ತದೆ.
ಕತೆ ಕವಿತೆ ವೈಚಾರಿಕ ಬರಹಗಳನ್ನು ಬರೆಯುವ ನಮ್ಮ ಸಾಹಿತಿಗಳು ಮಕ್ಕಳ, ಯಂಗ್ ಅಡಲ್ಟ್ ಫಿಕ್ಷನ್ ಬಗ್ಗೆ ಯೋಚಿಸುತ್ತಿಲ್ಲ. ಮಕ್ಕಳ ಪುಸ್ತಕಗಳನ್ನು ತರುವ ಪ್ರಕಾಶಕರು ಅಪರೂಪ. ಊರೂರಲ್ಲಿ ಮಕ್ಕಳ ಕನ್ನಡ ಪುಸ್ತಕಗಳು ದಿನಸಿ ಅಂಗಡಿಯಲ್ಲೂ ಕಡಿಮೆ ಬೆಲೆಗೆ ಸಿಗುವಂತಾದರೆ ಮಾತ್ರ ಓದುಕನ್ನಡ ಉಳಿದುಕೊಳ್ಳುತ್ತದೆ.
ಮೊದಲಾಗಿ ಅದು ಬೆಂಗಳೂರ ಆಗಬೇಕು. ಗ್ರಾಮೀಣ ಭಾಗಗಳಲ್ಲಿ ಕನ್ನಡದ ಬಗ್ಗೆ ನಾವು ದೂರಬೇಕಿಲ್ಲ. ಕನ್ನಡದ ಅಳಿವಿನ ಸಮಸ್ಯೆ ನಮ್ಮ ಪಟ್ಟಣಗಳ ಸಮಸ್ಯೆ ಅಂತಲೂ ಕೆಲವೊಮ್ಮೆ ಅನಿಸುತ್ತದೆ. ನಮ್ಮ ನಗರಗಳು ಕನ್ನಡದ ನಗರಗಳಾಗುವಂತೆ ನಾವು ಮಾಡದಿದ್ದರೆ, ನವೆಂಬರ್ ಮಾತ್ರವಲ್ಲ, ಹನ್ನೆರಡು ತಿಂಗಳುಗಳನ್ನು ಕನ್ನಡ ಮಾಸವೆಂದು ಆಚರಿಸಿದರೂ ಫಲವಿಲ್ಲ.