Vinayak M Bhat Column: ಇಂಥಾ ಪವಾಡಗಳು ಜಗತ್ತಿನಲ್ಲಿ ನಡೆಯುತ್ತಿರಬೇಕು
ವಿಮಾನ ಮೇಲೇರುವಾಗ ಹಾಗೂ ಕೆಳಗಿಳಿಯುವಾಗ ಒಳಗಡೆ ಕುಳಿತಿರುವ ಪ್ರಯಾಣಿಕರತ್ತ ಒಮ್ಮೆ ಕಣ್ಣಾಯಿಸಬೇಕು, ಬಹಳ ಆಸಕ್ತಿದಾಯಕ ಚಿತ್ರಗಳು ನೋಡಲು ಸಿಗುತ್ತವೆ. ಬಹುತೇಕ ಜನ ಆತಂಕಿತರಾಗಿರುತ್ತಾರೆ, ಇನ್ನೂ ಕೆಲವರು ತಮ್ಮ ಜಪದ ಮಾಲೆಯನ್ನು ಹೊರತೆಗೆದು ನಾಮಜಪ ಮಾಡಲು ಶುರುವಿಟ್ಟುಕೊಳ್ಳುತ್ತಾರೆ, ಇನ್ನು ಕೆಲವರು ಹಾಗೇ ಕಣ್ಣುಮುಚ್ಚಿ ತಮ್ಮಿಷ್ಟದ ದೇವರ ಸ್ಮರಣೆ ಮಾಡುತ್ತಿರುತ್ತಾರೆ, ಅಂತೂ ಆ ಹೊತ್ತಿಗೆ ತಮ್ಮ ತಮ್ಮ ಜೀವವನ್ನು ಎಡಗೈಯ್ಯಲ್ಲಿ ಹಿಡಿದು ಕುಳಿತಿರುತ್ತಾರೆ.
-
ವಿದ್ಯಮಾನ
ವಿಮಾನ ಅಪಘಾತದ ಘಟನೆಯನ್ನು, ಅದರ ಭೀಕರತೆಯನ್ನು ನಾವು ಟಿವಿಯಲ್ಲಿ ನೋಡಿರುತ್ತೇವೆ, ಹಾಗೆ ಅಪಘಾತಗಳನ್ನು ನೋಡಿದ ಸ್ವಲ್ಪ ದಿನದಲ್ಲಿ ನಾವು ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭ ಬರುತ್ತೆ. ಆತಂಕದೊಂದಿಗೇ ನಾವು ವಿಮಾನ ಏರುತ್ತೇವೆ ಹಾಗೂ ಪ್ರಯಾಣದುದ್ದಕ್ಕೂ ಆತಂಕ ಇದ್ದೇ ಇರುತ್ತೆ. ‘ಪ್ರತಿಕೂಲ ವಾತಾವರಣವಿರುವುದರಿಂದ ವಿಮಾನ ನಡುಗುವ ಸಾಧ್ಯತೆ ಯಿದೆ, ಯಾತ್ರಿಕರು ಸೀಟ್ ಬೆಲ್ಟ್ ಹಾಕಿಕೊಂಡು ಕುಳಿತಿರಬೇಕು’ ಎನ್ನುವ ಅನೌನ್ಸ್‌ಮೆಂಟ್ ಬರುವಾಗ ಒಮ್ಮೆ ಜೀವ ಬಾಯಿಗೆ ಬಂದುಬಿಡುತ್ತೆ. ಅಷ್ಟು ಹೊತ್ತಿಗೆ ವಿಮಾನ ವೈಬ್ರೇಟ್ ಆಗಲು ಶುರುವಿಟ್ಟುಕೊಂಡರಂತೂ ನಮ್ಮ ಹೃದಯದ ಬಡಿತ ನೂರ್ಮಡಿ ಹೆಚ್ಚಾಗುತ್ತದೆ.
ಹತ್ತು ಅಡಿ ಎತ್ತರದಲ್ಲಿ ನಿಂತು ಕೆಲಸ ಮಾಡಬೇಕಾದರೇ ಜೀವ ಝಲ್ಲೆನ್ನುವಾಗ, ಮೂವತ್ತು ನಲವತ್ತು ಸಾವಿರ ಅಡಿಗಳ ಮೇಲಿನ ಮೋಡಗಳ ಸಾಮ್ರಾಜ್ಯದಲ್ಲಿ ತೇಲಾಡುತ್ತಿರುವಾಗ ಕೆಳಗೆ ಬೀಳುವ ಭಯ ಬಂದುಬಿಟ್ಟರೆ ಕೇಳಬೇಕೆ? ಮೂವತ್ತು ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿರುವ ಸುಮಾರು ಒಂದು ಲಕ್ಷದ ಐವತ್ತುಸಾವಿರ ಕೇಜಿ ತೂಕದ ವಸ್ತುವೊಂದು ಅನಾಮತ್ತಾಗಿ ಬಂದು ನೆಲಕ್ಕೆ ಅಪ್ಪಳಿಸಿದರೆ ಏನಾಗಬಹುದು ಎನ್ನುವುದನ್ನು ಚಿಂತಿಸಿದರೇ ನಿದ್ರೆ ಬರುವುದಿಲ್ಲ.
ವಿಮಾನ ಮೇಲೇರುವಾಗ ಹಾಗೂ ಕೆಳಗಿಳಿಯುವಾಗ ಒಳಗಡೆ ಕುಳಿತಿರುವ ಪ್ರಯಾಣಿಕರತ್ತ ಒಮ್ಮೆ ಕಣ್ಣಾಯಿಸಬೇಕು, ಬಹಳ ಆಸಕ್ತಿದಾಯಕ ಚಿತ್ರಗಳು ನೋಡಲು ಸಿಗುತ್ತವೆ. ಬಹುತೇಕ ಜನ ಆತಂಕಿತರಾಗಿರುತ್ತಾರೆ, ಇನ್ನೂ ಕೆಲವರು ತಮ್ಮ ಜಪದ ಮಾಲೆಯನ್ನು ಹೊರತೆಗೆದು ನಾಮಜಪ ಮಾಡಲು ಶುರುವಿಟ್ಟುಕೊಳ್ಳುತ್ತಾರೆ, ಇನ್ನು ಕೆಲವರು ಹಾಗೇ ಕಣ್ಣುಮುಚ್ಚಿ ತಮ್ಮಿಷ್ಟದ ದೇವರ ಸ್ಮರಣೆ ಮಾಡುತ್ತಿರುತ್ತಾರೆ, ಅಂತೂ ಆ ಹೊತ್ತಿಗೆ ತಮ್ಮ ತಮ್ಮ ಜೀವವನ್ನು ಎಡಗೈಯ್ಯಲ್ಲಿ ಹಿಡಿದು ಕುಳಿತಿರುತ್ತಾರೆ. ಕೆಲವರು ತೋರಿಸಿಕೊಳ್ಳುತ್ತಾರೆ ಇನ್ನು ಕೆಲವರಿಗೆ ಒಳಗೊಳಗೇ ಭಯಾನುಭವ ವಾಗುತ್ತಿದ್ದರೂ ತೋರಗೊಡುವುದಿಲ್ಲ ಅಷ್ಟೇ.
ಇದನ್ನೂ ಓದಿ: Vinayaka M Bhat Column: ಜ್ಞಾನೇಶ್ ಕುಮಾರ್ ಪದಚ್ಯುತಿ ಅಷ್ಟು ಸುಲಭಸಾಧ್ಯವಲ್ಲ
ನನ್ನ ಪ್ರಕಾರ, ಎಷ್ಟೇ ಅನುಭವೀ ಪ್ರಯಾಣಿಕರಾಗಿದ್ದರೂ ವಿಮಾನ ಪ್ರಯಾಣದ ಅವಧಿಯಲ್ಲಿ ಒಂದು ಬಾರಿಯಾದರೂ ಅವರ ಮನೆದೇವರನ್ನು ನೆನೆಸಿಕೊಳ್ಳದೇ ಇರುವವರು ಯಾರೂ ಇಲ್ಲ. ಪೈಲಟ್ ವಿಮಾನವನ್ನು ತಂದು ಕುಕ್ಕಿಬಿಟ್ಟ, ತುಂಬಾ ಹಾರ್ಶ್ ಲ್ಯಾಂಡಿಂಗ್ ಆಯ್ತು, ಈತ ಟೇಕಾ- ಮಾಡುವಾಗ ನಿಜಕ್ಕೂ ಭಯವಾಯ್ತು, ಮಧ್ಯ ಮಧ್ಯ ಏನೋ ಅಸಹಜ ಸೌಂಡ್ ಬರ್ತಾ ಇತ್ತು ಅಂತೆಲ್ಲ ಸಹಪ್ರಯಾಣಿಕರು ಹೇಳುವುದನ್ನು ಬಹಳ ಕೇಳುತ್ತೇವೆ.
ವಿಮಾನದಲ್ಲಿ ಪ್ರಯಾಣ ಮಾಡುವಾಗ, ತಾಂತ್ರಿಕವಾಗಿ ವಿಮಾನಕ್ಕೆ ಏನಾಗಿದೆ ಎನ್ನುವುದು ಪ್ರಯಾಣಿಕರಿಗೆ ತಿಳಿದುಬರಲಿಕ್ಕಿಲ್ಲ, ಆದರೆ ಏನೋ ಎಡವಟ್ಟಾಗಿದೆ ಎನ್ನುವುದನ್ನು ತಿಳಿಯಲು ಬಹಳ ಜಾಣ್ಮೆಯೇನೂ ಬೇಕಾಗುವುದಿಲ್ಲ. ವಿಮಾನದೊಳಗೆ ಅಸಹಜ ಕ್ರಿಯೆಗಳು ನಡೆಯುತ್ತಿರುವಾಗ ನಾವು ಮೊದಲು ನೋಡುವುದು ಗಗನ ಸಖಿಯರ ಮುಖವನ್ನು. ಅವರುಗಳು ನಿರಾಳವಾಗಿದ್ದಾರೆ ಅಂತ ನಮಗನಿಸಿದರೆ ನಾವೂ ನಿರಾಳರಾಗಿಬಿಡುತ್ತೇವೆ, ಅವರ ಮುಖದಲ್ಲಿ ಆತಂಕ ಕಂಡರೆ, ಅವರ ನಡಿಗೆಯಲ್ಲಿ ವೇಗ ಕಂಡುಬಂದರೆ, ಕುಳಿತ ನಮ್ಮ ಕೈಕಾಲುಗಳೂ ನಡುಗಲು ಶುರುವಾಗುತ್ತವೆ. ಅದರಲ್ಲೂ ವಿಮಾನ ಕೆಳಗೆ ಕುಸಿಯುತ್ತಿರುವ ಅನುಭವ ನಿಜಕ್ಕೂ ಭಯ ಹುಟ್ಟಿಸುವಂಥದ್ದೇ ಆಗಿರುತ್ತೆ.
ಎಂಟುನೂರು ಒಂಬೈನೂರು ಕಿಲೋಮೀಟರ ವೇಗದಲ್ಲಿ ಸಾಗುತ್ತಿರುವ ವಿಮಾನವನ್ನು ಲ್ಯಾಂಡಿಂಗ್ ಮಾಡುವಾಗ ನಿಧಾನಕ್ಕೆ ತಹಬಂದಿಗೆ ತಂದು ಬಹಳ ನಾಜೂಕಾಗಿ ಕೆಳಗಿಳಿಸುತ್ತಾರೆ. ವಿಮಾನವನ್ನು ಮೇಲೇರಿಸುವುದಕ್ಕಿಂತ ಕೆಳಗಿಳಿಸುವುದು ಕಷ್ಟ ಅಂತ ಹೇಳ್ತಾರೆ. ಅದಕ್ಕೇ ಇರಬೇಕು ‘ಹ್ಯಾಪಿ/ ಸೇಫ್ ಲ್ಯಾಂಡಿಂಗ್’ ಅಂತ ಶುಭ ಹಾರೈಸೋದು.
ಹ್ಯಾಪಿ ಟೇಕ್ ಆಫ್ ಅಂತ ಹೇಳೋದಿಲ್ಲ ನೋಡಿ! ವರ್ಷದಿಂದ ವರ್ಷಕ್ಕೆ ವಿಮಾನದ ತಂತ್ರಜ್ಞಾನ ದಲ್ಲಿ ಸುಧಾರಣೆಗಳಾಗುತ್ತಿದೆ, ಹಾಗಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಣಾಮಕಾರಿ ಸುರಕ್ಷತಾ ವ್ಯವಸ್ಥೆಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ವಿಮಾನ ಅಪಹರಣಗಳೂ ಕಡಿಮೆಯೇ, ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಆದರೂ ಅಪರೂಪಕ್ಕೊಮ್ಮೆಯಾದರೂ ನಡೆ ಯುವ ವಿಮಾನ ಅಪಘಾತ, ಅಪಹರಣಗಳಿಂದಾಗಿ ವಿಮಾನ ಪ್ರಯಾಣ ಎನ್ನುವುದು ಭಯದಾಯಕ ವಾಗಿಯೇ ಉಳಿದಿದೆ.
ವಿಮಾನ ಪ್ರಯಾಣದಲ್ಲಿ ಭಯಪಡಲು ಸಾಕಷ್ಟು ಕಾರಣಗಳಿವೆ, ಮೊನ್ನೆ ನಡೆದ ಘಟನೆಯ ನಂತರ ಭಯ ಪಡಲು ಪೈಲಟ್ ಕೂಡಾ ಕಾರಣವಾಗುವಂತಾಯ್ತು. ಜನ ಇನ್ನುಮುಂದೆ ಪೈಲಟ್ ಯಾರು? ಯಾವ ದೇಶದವನು? ಯಾವ ಧರ್ಮದವನು ಅಂತ ಕೇಳಿ ವಿಮಾನವೇರುವ ಕಾಲಬಂತು. ಸೆಪ್ಟೆಂಬರ್ 30ರಂದು ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ - ದುಬೈ ವಿಮಾನದ ಹೈಜಾಕ್ ಮತ್ತು ಪತನದ ಯತ್ನದ ಸಂದರ್ಭದಲ್ಲಿ ಭಾರತೀಯ ಸ್ಮಿತ್ ಮಚ್ಚರ್ ತೋರಿದ ಅಪ್ರತಿಮ ಸಾಹಸವನ್ನು ನೋಡಿದ ಮೇಲೆ ವಿಮಾನದಲ್ಲಿ ಭಾರತೀಯ ಸಿಬ್ಬಂದಿಗಳಿದ್ದರೆ ಪ್ರಯಾಣಿಕರು ಸುರಕ್ಷಿತ ಎನ್ನುವ ಮಾತುಗಳು ಬಹಳ ಕೇಳಿ ಬರುತ್ತಿವೆ. ಹಿಂದೆ ನೀರ್ಜಾ ಬಾನೋಟ್, ಈಗ ಸ್ಮಿತ್ ಥರದ ಭಾರತೀಯರು ತೋರಿದ ಸಾಹಸದಿಂದಾಗಿ ಭಾರತಕ್ಕೆ ಈ ಗೌರವ ಬಂತು.
ವಿಮಾನಯಾನದಲ್ಲಿ ನೀರ್ಜಾ ಬಾನೋಟ್ ಹಾಗೂ ಸ್ಮಿತ್ ಮಚ್ಚರ್ ಒಳಗೊಂಡ ಈ ಎರಡು ಘಟನೆ ಗಳು ಭಾರತೀಯರ ಮೇಲಿನ ವಿಶ್ವಾಸಾರ್ಹತೆಯನ್ನೇ ಜಾಗತಿಕವಾಗಿ ಹೆಚ್ಚಿಸಿವೆ ಅಂದರೆ ತಪ್ಪಾಗ ಲಿಕ್ಕಿಲ್ಲ. ಅದೇ ಓಮಾನಿನ ಪೈಲಟ್ ಹಮಾಮಿಯ ಕೃತ್ಯದಿಂದ ಕಳಂಕ ಕೇವಲ ಆತನ ಮೇಲೊಂದೇ ಬರಲಿಲ್ಲ. ಆತನ ಧರ್ಮ, ದೇಶ ಎಲ್ಲಕ್ಕೂ ಕಳಂಕವೇ ಆಯಿತು. ‘ಏಕಃ ಪಾಪಾನಿ ಕುರುತೇ ಫಲಂ ಭುಂಕ್ತೇ ಮಹಾಜನಾಃ’ ಎನ್ನುವಂತೆ ಒಬ್ಬ ಹಮಾಮಿಯ ಕಾರಣದಿಂದ ಇಡೀ ಸಮುದಾಯವನ್ನು ಸಂಶಯದಿಂದ ನೋಡುವಂತಾಯ್ತು. ಇನ್ನು ಮುಂದೆ ಓಮಾನಿನಿಂದ ಪೈಲಟ್‌ಗಳನ್ನು ನೇಮಕ ಮಾಡಿ ಕೊಳ್ಳುವಾಗ ಸಾವಿರ ಬಾರಿ ಆಲೋಚಿಸುವ ಹಾಗೆ ಮಾಡಿದ ಈತ. ಮೊನ್ನೆ ಮೊನ್ನೆ ನಡೆದ ಘಟನೆಯಲ್ಲಿ ಸ್ಮಿತ್ ಮಚ್ಚರ್ 170 ಪ್ರಯಾಣಿಕರನ್ನು ಬದುಕಿಸಿದರು, ನಲವತ್ತು ವರ್ಷಗಳ ಮೊದಲು ನಡೆದ ಇಂಥದ್ದೇ ಇನ್ನೊಂದು ಘಟನೆಯಲ್ಲಿ ನೀರಜಾ ಬಾನೋಟ್ ಎಂಬ ಭಾರತೀಯ ಮಹಿಳೆ ತೋರಿದ ಜಾಣ್ಮೆ ಬಹಾದುರಿ ಹಾಗೂ ಆತ್ಮಾರ್ಪಣೆಯಿಂದಾಗಿ ಸರಿಸುಮಾರು ಮುನ್ನೂರು ಪ್ರಯಾಣಿಕರು ಬದುಕುಳಿಯಲು ಕಾರಣವಾಗಿತ್ತು.
ಕಾಕತಾಳೀಯವೆಂಬಂತೆ, 1986ರಲ್ಲಿ ಆ ಘಟನೆ ನಡೆದಿದ್ದೂ ಸಪ್ಟೆಂಬರ್‌ನ ಆಗಿತ್ತು. ವಿಮಾನ ವೊಂದು ಮುಂಬೈನಿಂದ ನ್ಯೂಯಾರ್ಕಿಗೆ ಹಾರುವ ಮಾರ್ಗದಲ್ಲಿ ಕರಾಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಭದ್ರತಾ ಸಿಬ್ಬಂದಿಯ ವೇಷದಲ್ಲಿ ನಾಲ್ವರು ಶಸ್ತ್ರಸಜ್ಜಿತ ಪ್ಯಾಲೆಸ್ತೀನಿಯನ್ ಭಯೋತ್ಪಾದಕರು ಈ ವಿಮಾನದ ಮೇಲೆ ದಾಳಿ ನಡೆಸಿ ತಮ್ಮ ವಶಕ್ಕೆ ತೆಗೆದುಕೊಂಡರು. ನೀರಜಾ ಬಾನೋಟ್ ಆ ವಿಮಾನದಲ್ಲಿ ಮುಖ್ಯ ಮೇಲ್ವಿಚಾರಕಳಾಗಿ (Head purser) ಕೆಲಸ ನಿರ್ವಹಿಸುತ್ತಿದ್ದಳು.
ವಿಮಾನ ಭಯೋತ್ಪಾದಕರ ವಶವಾಗಿದೆ ಎನ್ನುವುದನ್ನು ತಿಳಿದ ತಕ್ಷಣ ಪೈಲಟ್‌ಗಳು ಹಾಗೂ ವಿಮಾನದ ಇಂಜಿನಿಯರ್‌ಗಳನ್ನು ವಿಮಾನ ಬಿಟ್ಟು ಓಡುವಂತೆ ನೀರಜಾ ಎಚ್ಚರಿಸುತ್ತಾಳೆ. ಅವರು ಕಾಕ್‌ಪಿಟ್ ಹ್ಯಾಚ್ ಮೂಲಕ ತಪ್ಪಿಸಿಕೊಂಡರು. ಆಕೆಯ ಈ ಬುದ್ಧಿವಂತಿಕೆಯ ನಿರ್ಧಾರದಿಂದಾಗಿ ಭಯೋತ್ಪಾದಕರು ವಿಮಾನವನ್ನು ಅಪಹರಿಸಿ ತಮಗೆ ಬೇಕಾದ ದೇಶಕ್ಕೆ ಕೊಂಡೊಯ್ಯಲು ಸಾಧ್ಯವಾಗದಂತಾಯ್ತು.
ವಿಮಾನದ ಸಂಪೂರ್ಣ ಜವಾಬ್ದಾರಿ ಈಗ 22 ವರ್ಷದ ನೀರಜಾ ಹೆಗಲಿಗೆ ಬಿತ್ತು. ಚಾಲಕರು ವಿಮಾನವನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನುವುದನ್ನರಿತ ಭಯೋತ್ಪಾದಕರು, ಸ್ವಲ್ಪ ಸಮಯದ ನಂತರ ಒಬ್ಬ ಪ್ರಯಾಣಿಕನನ್ನು ಗುಂಡಿಕ್ಕಿ ಕೊಂದು, ಪೈಲಟ್ ಗಳನ್ನು ವಾಪಸು ಕಳುಹಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದರು.
ಮುಂದುವರಿದು, ಅಮೇರಿಕಾ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಭಯೋತ್ಪಾದ ಕರು, ವಿಮಾನದಲ್ಲಿರುವವರಲ್ಲಿ ಅಮೇರಿಕದವರು ಯಾರು ಎನ್ನುವುದನ್ನು ತಿಳಿಯಬಯಸಿ ಪಾಸ್‌ಪೋರ್ಟ್‌ಗಳನ್ನು ತಪಾಸಣೆಗೊಳಪಡಿಸುವ ಆಲೋಚನೆ ಮಾಡುತ್ತಿದ್ದರು. ಈ ಹುನ್ನಾರ ವನ್ನರಿತ ನೀರಜಾ ಮತ್ತು ಅವಳ ಸಹೋದ್ಯೋಗಿಗಳು ಪ್ರಯಾಣಿಕರ ಪಾಸ್‌ಪೋರ್ಟ್‌ಗಳನ್ನು ಆಸನಗಳ ಕೆಳಗೆ ಬಚ್ಚಿಡುವ ವ್ಯವಸ್ಥೆ ಮಾಡಿದರು. ಹೀಗೆ ಸತತವಾಗಿ 17 ಗಂಟೆಗಳ ಕಾಲ ವಿಮಾನ ದೊಳಗಣ ಉದ್ವಿಗ್ನತೆಯ ವಾತಾವರಣದಲ್ಲಿಯೂ, ಪ್ರಯಾಣಿಕರನ್ನು ಶಾಂತವಾಗಿರಿಸಲು ಏನೇನು ಮಾಡಬೇಕೋ ಅವನ್ನೆಲ್ಲ ನೀರಜಾ ಮಾಡುತ್ತಿದ್ದರು. ಭಯಭೀತರಾದ ಮಕ್ಕಳನ್ನು ‘ಏನಾಗಿಲ್ಲ, ಸ್ವಲ್ಪ ಸಮಯದಲ್ಲಿ ಎಲ್ಲವೂ ಸರಿಹೋಗುತ್ತೆ’ ಎನ್ನುತ್ತಾ ಸಂತೈಸುತ್ತಿದ್ದರು. ಈ ಮಧ್ಯದಲ್ಲಿ ಇದ್ದಕ್ಕಿದ್ದಹಾಗೆ ವಿದ್ಯುತ್ ಸರಬರಾಜು ನಿಂತು ಹೋಗಿ ಪೂರ್ತಿ ಕ್ಯಾಬಿನ್ ಕತ್ತಲೆಯಲ್ಲಿ ಮುಳುಗಿತು.
ಭಯಭೀತರಾದ ಪ್ರಯಾಣಿಕರು ಅತ್ತಿಂದಿತ್ತ ಓಡಾಡುವಾಗ ಭಯೋತ್ಪಾದಕರು ಅನಿಯಂತ್ರಿತವಾಗಿ ಗುಂಡು ಹಾರಿಸಿ ಸ್ಫೋಟಕಗಳನ್ನು ಸಿಡಿಸಲು ಪ್ರಾರಂಭ ಮಾಡಿದರು. ಬುದ್ಧಿವಂತೆ ನೀರಜಾ ತಕ್ಷಣ ತುರ್ತು ನಿರ್ಗಮನ ಬಾಗಿಲುಗಳನ್ನು ತೆರೆದು ಪ್ರಯಾಣಿಕರಿಗೆ ಹೊರಹೋಗಲು ಸಹಾಯ ಮಾಡಿದಳು.
ಅಂತಿಮವಾಗಿ, ಮೂವರು ಮಕ್ಕಳನ್ನು ಬದುಕಿಸಲು ಆ ಮಕ್ಕಳಿಗೆ ರಕ್ಷಾಕವಚವಾಗಿ ತಾನು ಎದುರು ಬಂದಿದ್ದರಿಂದ ಭಯೋತ್ಪಾದಕರ ಗುಂಡು ಆಕೆಗೆ ತಗುಲಿ ಪ್ರಾಣತ್ಯಾಗ ಮಾಡಿದಳು. ತಾನು ಪ್ರಾಣತ್ಯಾಗ ಮಾಡುವುದಕ್ಕೆ ಮುಂಚೆ 20 ಜನರನ್ನು ಹೊರತು ಪಡಿಸಿ 359 ಪ್ರಯಾಣಿಕರು ಬದುಕುಳಿಯುವಂತೆ ಮಾಡಿದ್ದಳು. ಇಡೀ ವಿಶ್ವ ಅವರನ್ನು ಕೊಂಡಾಡಿತು.
ಭಾರತ ಸರಕಾರ ಅವರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನು ನೀಡಿ ಗೌರವಿಸಿತು. ಮುಂದೆ ಅವರ ಸ್ಪೂರ್ತಿದಾಯಕ ಜೀವನ ಕಥೆಯನ್ನು ನೀರಜಾ ಎನ್ನುವ ಹೆಸರಿನಡಿಯಲ್ಲಿ ಸಿನೆಮಾ ಕೂಡಾ ಮಾಡಲಾಗಿತ್ತು. ಸೋನಮ್ ಕಪೂರ್ ನೀರಜಾ ಪಾತ್ರ ನಿರ್ವಹಿಸಿದ್ದರು. ಒಮ್ಮೆ ಈ ಸಿನೆಮಾ ನೋಡಬೇಕು, ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಸಿನೆಮಾದಲ್ಲಿ ನೀರಜಾ ಸತ್ತಾಗ ನಮ್ಮ ಕಣ್ಣಾಲಿಗಳಲ್ಲೂ ನೀರುಕ್ಕತ್ತವೆ.
ಮೊನ್ನೆಯೂ ಅಷ್ಟೇ, ಎಲ್ಲವೂ ಸುಖವಾಗಿ ಸಾಗಿತ್ತು. ಬಹಳ ಜನರಿಗೆ ಕಾಕ್‌ಪಿಟ್ ಒಳಗೇನಾಗುತ್ತಿದೆ ಎನ್ನುವುದೂ ಸ್ವಾಭಾವಿಕವಾಗಿ ಗೊತ್ತಾಗುತ್ತಿರಲಿಲ್ಲ. ಅವರವರ ಕೆಲಸದಲ್ಲಿ ಅವರವರಿದ್ದರು. ವಿಮಾನ ಏಕಾಏಕಿ ಹದಿನೇಳು ಸಾವಿರ ಅಡಿ ಕುಸಿದಾಗ, ಏನೋ ಎಡವಟ್ಟಾಗುತ್ತಿದೆ ಎನ್ನುವುದು ತಿಳಿಯಲಾರಂಭವಾಯಿತು. ಆದರೆ, ಒಳಗಿರುವವರು ಬಾಗಿಲು ತೆರೆಯದ ಹೊರತು ಯಾರೂ ಒಳಗೆ ಹೋಗುವ ಹಾಗಂತೂ ಇಲ್ಲ. ಅಷ್ಟಾಗಿ ಸಾಮಾನ್ಯ ಪ್ರಯಾಣಿಕರು ಒಳಗೆ ಹೋದರೂ ಏನೂ ಮಾಡಲಾಗುತ್ತಿರಲಿಲ್ಲ ಬಿಡಿ. ಅಂದು ಪ್ರಯಾಣಿಸುತ್ತಿದ್ದವರಿಗೆ ಅದೃಷ್ಟ ಅಷ್ಟಿತ್ತು ಅಂತ ಕಾಣುತ್ತೆ.
ಪ್ರಯಾಣಿಕರ ಇಬ್ಬರು ವಿಮಾನ ಚಾಲಕರಿದ್ದರು. ಹಾಗಾಗಿ ಅವರು ಕುಸಿಯುತ್ತಿದ್ದ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ನೆಲ ಮುಟ್ಟಿಸಿದರು. ಅದಲ್ಲದಿದ್ದರೆ, ಸ್ಮಿತ್ ಮಚ್ಚರ್ ಅವರ ಸಾಹಸವೆಲ್ಲ ವ್ಯರ್ಥವಾಗಿ ಬಿಡುತ್ತಿತ್ತು. ಇಂಥಾ ಸಂದರ್ಭಗಳಲ್ಲಿ ಸಾಮಾನ್ಯರಾದರೆ ಮೊದಲು ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಏನೆಲ್ಲ ಮಾಡಬಹುದಾಗಿತ್ತೋ ಅವನ್ನೆಲ್ಲ ಮಾಡುತ್ತಾರೆ. ಅದು ಸಾಧ್ಯವಿಲ್ಲ ಎನ್ನುವುದು ಗೊತ್ತಾದಾಗ, ಮಾನಸಿಕ ಗೊಂದಲಕ್ಕೆ ಸಿಲುಕಿ ಏನು ಮಾಡುವುದೆಂದು ತೋಚದೆ ಪರಿಸ್ಥಿತಿಯ ಶಿಶುವಾಗಿ ಆಗಿದ್ದನ್ನು ಎದುರಿಸುತ್ತಾರೆ. ಆದರೆ ಬಹಾದುರನಾದವನು, ಪರಿಸ್ಥಿತಿಯನ್ನು ಅನುಕೂಲವಾಗಿ ಪರಿವರ್ತಿಸಲು ಸದಾ ಪ್ರಯತ್ನಶೀಲನಾಗುತ್ತಾನೆ.
ತನ್ನ ಜೀವವೇ ಕಷ್ಟದಲ್ಲಿರುವಾಗ, ಹಿಂತಲೆಯ ಮೇಲೆ ಬಿದ್ದ ಮಾರಣಾಂತಿಕ ಪೆಟ್ಟಿನಿಂದ ಕಣ್ಣು ಮಂಜಾದಾಗ, ಎಲ್ಲವೂ ಮುಗಿದು ಹೋಯಿತು ಎನಿಸುವಾಗ ಎದ್ದು ಬಾಗಿಲ ಕುಣಿಕೆ ಕಳಚಲು ಯಶಸ್ವಿಯಾಗುತ್ತಾನೆ ಅಂತಾದರೆ ಇದನ್ನು ಪವಾಡವೆನ್ನದೇ ಮತ್ತೇನೆನ್ನೋಣ! ಇಂಥಾ ಪವಾಡಗಳು ಅಪರೂಪಕ್ಕೊಮ್ಮೆಯಾದರೂ ನಡೆಯುತ್ತಿದ್ದರೆ, ಅನಿಶ್ಚಿತತೆಯ ಜೀವನಕ್ಕೆ ಒಂದಷ್ಟು ಭರವಸೆ ಸಿಕ್ಕಂತಾಗುತ್ತದೆ. ದೇವರಿದ್ದಾನೆ ಎನ್ನುವ ನಂಬಿಕೆ ಇನ್ನೂ ಬಲವಾಗುತ್ತೆ. ಸ್ಮಿತ್, ಬಜರಂಗಬಲಿಗೆ ತನ್ನ ವಿಕ್ರಮದ ಶ್ರೇಯಸ್ಸನ್ನು ನೀಡಿ ನಿರುಮ್ಮಳರಾದರು. ಆಂಜನೇಯನ ಭಕ್ತರುಗಳು ತಮ್ಮ ಕಲ್ಪನೆಗಳಿಗೆ ರೆಕ್ಕೆ ಹಚ್ಚಿ ಆಂಜನೇಯ ಸ್ವಾಮಿಯು ಪತನವಾಗುತ್ತಿದ್ದ ವಿಮಾನವನ್ನು ಎತ್ತಿಹಿಡಿದಿರುವಂತೆ ಚಿತ್ರಿಸಿ ಸಂಭ್ರಮಿಸಿದರು. ವಾಸ್ತವಿಕವಾಗಿ, ಕಲಿಯುಗದಲ್ಲಿ ದೇವರು ಪ್ರತ್ಯಕ್ಷನಾಗಿ ಬಂದು ಯಾರಿಗೂ ಸಹಾಯ ಮಾಡುವುದಿಲ್ಲವಂತೆ. ತನ್ನ ಭಕ್ತಜನರ ಬುದ್ಧಿಗೆ ಪ್ರೇರೇಪಣೆ ನೀಡಿ ಆಗಬೇಕಾದ ಕೆಲಸವನ್ನು ಅವರಿಂದ ಮಾಡಿಸುತ್ತಾನಂತೆ. ಮೊನ್ನೆ ನಡೆದಿದ್ದು ಕೂಡಾ ಅಂಥಾ ಅತಿಮಾನುಷೀಯ ದೈವದ ಕೌತುಕದ ಕಾರ್ಯವೇ ಆಗಿತ್ತು.
It was purely an act of God. ಈ ಘಟನೆಯಾದ ಮೇಲೆ ಏನಾಯಿತು, ಯಾರೆ ಏನೆಲ್ಲ ಮಾತನಾಡಿದರು, ವಿಶ್ವದ ಗಣ್ಯರೆಲ್ಲ ಯಾವ ರೀತಿಯಿಂದ ಭಾರತೀಯ ಚಾಲಕನನ್ನು ಮುಕ್ತಕಂಠದಿಂದ ಹೊಗಳಿದರು, ಯಾರೆಲ್ಲರ ಬಾಯಿಂದ ಒಂದು ಶಬ್ದ ಈಚೆ ಬರಲಿಲ್ಲ, ಏನೆಲ್ಲ ವಿಶ್ಲೇಷಣೆಗಳು ಮಾಡಲ್ಪಟ್ಟವು ಎನ್ನುವುದನ್ನೆಲ್ಲ ನೀವೂ ಓದಿರುತ್ತೀರಿ, ನೋಡಿರುತ್ತೀರಿ. ಪ್ರಾಣವನ್ನು ಪಣಕ್ಕಿಟ್ಟು ಪವಾಡ ಸೃಷ್ಟಿಸಿದರೂ, ಭಾರತೀಯ ಚಾಲಕ ಹಿಂದು ಧರ್ಮದವನಾಗಿದ್ದರಿಂದ, ಗುಜರಾತಿನವನಾಗಿದ್ದರಿಂದ, ಪ್ರಧಾನಿ ಮೋದಿ ಮತ್ತು ನೆತನ್ಯಾಹು ವೈಯಕ್ತಿಕವಾಗಿ ಆತನ ಜೊತೆ ಮಾತನಾಡಿದ್ದರಿಂದ, ತಾನು ಹನುಮಂತನ ಭಕ್ತ, ಆ ಕೊನೇಕ್ಷಣದ ಹೋರಾಟಕ್ಕೆ ನನಗೆ ಬಲ ಸಿಕ್ಕಿದ್ದು ಹನುಮಾನ್ ಚಾಲೀಸಾದಿಂದಲೇ ಅಂತ ಆತ ಹೇಳಿದ್ದರಿಂದ ಕೆಲವರು ಆತನಿಗೆ ಧನ್ಯವಾದ ಹೇಳಲೂ ಮನಸ್ಸು ಮಾಡಲಿಲ್ಲ. ಅಂಥವರು ನೈತಿಕವಾಗಿ ಯಾವ ಮಟ್ಟಕ್ಕೆ ಕುಸಿದಿದ್ದಾರೆ ಎನ್ನುವುದನ್ನು ಸಮಾಜ ನೋಡಿತು.
ಬಿಡಿ, ಅವರಿರುವುದೇ ಹಾಗೆ, ಅದೇನೂ ವಿಶೇಷವಲ್ಲ. ನನಗೆ ಅತ್ಯಂತ ಪ್ರಮುಖ ಹಾಗೂ ಪ್ರಸ್ತುತ ಅಂತ ಅನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಬ್ಬ ಹಿರಿಯ ಮುಸಲ್ಮಾನ ವ್ಯಕ್ತಿಯ ಹೇಳಿಕೆ. ಆತ ಹೇಳಿದ್ದಿಷ್ಟು. ನೋಡಿ ಮೊನ್ನೆ ದುಬೈನಿಂದ ಇಸ್ರೇಲಿನತ್ತ ಹೊರಟ ವಿಮಾನದ ಕಾಕ್‌ಪಿಟ್‌ನಲ್ಲಿ, ಒಬ್ಬ ತನ್ನ ದೇವರಲ್ಲಿ, ನೂರಾ ಅರವತ್ತೆಂಟು ಜನರನ್ನು ಬದುಕಿಸುವ ಪ್ರಯತ್ನಕ್ಕೆ ಬಲ ನೀಡುವಂತೆ ಪ್ರಾರ್ಥಿಸುತ್ತಿದ್ದ.
ಇನ್ನೊಬ್ಬ ನೂರಾ ಅರವತ್ತೆಂಟು ಜನರ ಪ್ರಾಣ ತೆಗೆಯಲು ಬೇಕಾದ ಸಹಾಯಕ್ಕಾಗಿ ತನ್ನ ದೇವರಲ್ಲಿ ಪ್ರಾರ್ಥಿಸಲು ಹೋಗಿದ್ದ ಎನ್ನುವ ವಿಷಯ ಪ್ರಪಂಚಕ್ಕೆ ಈಗ ಗೊತ್ತಾಗಿಹೋಗಿದೆ. ಈಗ ಜನ ಯಾವ ಧರ್ಮವನ್ನು ಗೌರವಿಸುತ್ತಾರೆ, ಯಾವ ಧರ್ಮವನ್ನು ತಿರಸ್ಕರಿಸುತ್ತಾರೆ ಎನ್ನುವುದನ್ನು ಊಹಿಸಿದಾಗ ನಾನೊಬ್ಬ ಮುಸ್ಲಿಮನಾಗಿ ಬಹಳ ಹಿಂಸೆಯಾಗುತ್ತಿದೆ. ವಾಸ್ತವಿಕವಾಗಿ ನನ್ನ ದೇವರೂ ಈ ಥರದ ಕುಕೃತ್ಯಗಳಿಗೆ ಸಹಾಯ ಮಾಡುವವನಲ್ಲ. ಅವನೂ ಕಾಯುವ ದೇವರೇ ಹೊರತು ಕೊಲ್ಲುವ ದೇವರಲ್ಲ. ಇಂಥಾ ದುರುಳ ಜನರಿಂದಾಗಿ ನನ್ನ ದೇವರು, ಧರ್ಮಕ್ಕೆ ಕೆಟ್ಟ ಹೆಸರು ಬಂದಂತಾಯ್ತು ಅಂತ ಬೇಸರಪಟ್ಟು ಹೇಳಿಕೊಂಡಿದ್ದ. ಎಂಥಾ ಅದ್ಭುತ ಚಿಂತನೆ ಆತನದ್ದು.
ಅಷ್ಟು ಗಂಭೀರವಾದ ವಿಷಯವನ್ನು ಇಷ್ಟು ಸರಳವಾಗಿ ನಾಲ್ಕೈದು ವಾಕ್ಯಗಳಲ್ಲಿ ಆತ ಹೇಳಿ ಮುಗಿಸಿದ್ದ. ಇಸ್ಲಾಂ ಧರ್ಮವು ಜಾಗತಿಕ ಶಾಂತಿಗೆ ಪೂರಕವಲ್ಲ ಎಂದು ಪರಿಗಣಿಸಲ್ಪಡುತ್ತಿರುವ ಈ ಹೊತ್ತಿನಲ್ಲಿ, ಆ ಧರ್ಮದ ಹಿರಿಯ ಚಿಂತಕರು ಯುವಕರಿಗೆ ಧರ್ಮದ ಬಗ್ಗೆ ಸರಿಯಾದ ತಿಳುವಳಿಕೆ ನೀಡಲು ಕಟಿಬದ್ಧರಾಗಬೇಕಿದೆ. ನಮ್ಮ ದೇವರು ಕೊಲ್ಲುವ ದೇವರಲ್ಲ, ಕಾಯುವ ದೇವರೇ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಿದೆ. ಈ ಧಾರ್ಮಿಕ ಸುಧಾರಣೆ ಎನ್ನುವುದು ರಾತ್ರಿಬೆಳಗಾಗುವುದರಲ್ಲಿ ಆಗುವ ಕೆಲಸವಲ್ಲ ಎನ್ನುವುದು ನನಗೂ ಗೊತ್ತು, ಆದರೆ ಪ್ರಾರಂಭಕ್ಕೆ ಇದಕ್ಕಿಂತ ಸಕಾಲ ಇನ್ನೊಂದಿರಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ.