ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: 7700 -7500 ಕೋಡ್‌ ಏನು ?

ಸ್ಕ್ವಾಕ್ ಕೋಡ್ 7500 ವಿಮಾನಯಾನ ಇತಿಹಾಸದ ಅತ್ಯಂತ ಗಂಭೀರ ಹಾಗೂ ಭೀಕರ ಸನ್ನಿವೇಶವನ್ನು ಸೂಚಿಸುವ ಸಂಕೇತವಾಗಿದೆ. ಯಾವುದೇ ದುಷ್ಕರ್ಮಿಗಳು, ಭಯೋತ್ಪಾದಕರು ಅಥವಾ ಅಪಹರಣ ಕಾರರು ವಿಮಾನವನ್ನು ಒತ್ತೆಯಾಳಾಗಿ ಇರಿಸಿಕೊಂಡಾಗ ಅಥವಾ ಕಾಕ್‌ಪಿಟ್ ಅನ್ನು ಅಕ್ರಮವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ ಈ ಕೋಡ್ ಬಳಸಲಾಗುತ್ತದೆ.

Vishweshwar Bhat Column: 7700 -7500 ಕೋಡ್‌ ಏನು ?

-

ಸಂಪಾದಕೀಯ ಸದ್ಯಶೋಧನೆ

ಮೊನ್ನೆ ದುಬೈ-ಟೆಲ್ ಅವಿವ್ ಫ್ಲೈ ದುಬೈ ವಿಮಾನದಲ್ಲಿ ಸಂಭವಿಸಿದ ಅಪಹರಣ ಪ್ರಕರಣದಲ್ಲಿ ಪೈಲಟ್ 7700 ಮತ್ತು 7500 ಕೋಡ್ ಗಳನ್ನು ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ (ಎಟಿಸಿ) ಕಳಿಸಿದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕೋಡ್ ಅಂದ್ರೆ ಏನು? ಇದರ ಮಹತ್ವ ವೇನು? ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆ ಮತ್ತು ಸಂವಹನಕ್ಕೆ ಅತ್ಯುನ್ನತ ಪ್ರಾಶಸ್ತ್ಯ. ಸಾವಿರಾರು ಅಡಿ ಎತ್ತರದಲ್ಲಿ ಹಾರಾಡುವ ವಿಮಾನ ನೆಲದಲ್ಲಿರುವ ಎಟಿಸಿ ಜತೆ ನಿರಂತರ ಸಂಪರ್ಕದಲ್ಲಿರುತ್ತದೆ. ಈ ಸಂವಹನಕ್ಕಾಗಿ ವಿಮಾನ ದಲ್ಲಿರುವ ‘ಟ್ರಾನ್ಸ್‌ಪಾಂಡರ್’ ಎಂಬ ಎಲೆಕ್ಟ್ರಾನಿಕ್ ಸಾಧನವನ್ನು ಬಳಸಲಾಗುತ್ತದೆ.

ಪೈಲಟ್‌ಗಳು ರೇಡಿಯೋ ಮೂಲಕ ಮಾತನಾಡುವುದರ ಜತೆಗೆ, ತುರ್ತು ಸಂದರ್ಭಗಳಲ್ಲಿ ಕೆಲವೇ ಕ್ಷಣಗಳಲ್ಲಿ ಸಂದೇಶ ರವಾನಿಸಲು ನಾಲ್ಕು ಅಂಕಿಗಳ ನಿರ್ದಿಷ್ಟ ಕೋಡ್‌ಗಳನ್ನು ಟ್ರಾನ್ಸ್‌ಪಾಂಡರ್‌ ನಲ್ಲಿ ನಮೂದಿಸುತ್ತಾರೆ. ಇವುಗಳನ್ನು ವೈಮಾನಿಕ ಭಾಷೆಯಲ್ಲಿ ಸ್ಕ್ವಾಕ್ ಕೋಡ್ ಗಳು (Squawk Codes) ಎಂದು ಕರೆಯಲಾಗುತ್ತದೆ.

ಇವುಗಳಲ್ಲಿ 7700 ಮತ್ತು 7500 ಅತ್ಯಂತ ಮಹತ್ವದ ಹಾಗೂ ಸೂಕ್ಷ್ಮ ಅಂತಾರಾಷ್ಟ್ರೀಯ ತುರ್ತು ಕೋಡ್‌ಗಳಾಗಿವೆ. ಟ್ರಾನ್ಸ್‌ಪಾಂಡರ್ ಕಾರ್ಯನಿರ್ವಹಿಸುವ ವಿಧಾನ ಕುತೂಹಲಕಾರಿ. ನೆಲದ ಮೇಲಿರುವ ರೇಡಾರ್ ವ್ಯವಸ್ಥೆಯು ವಿಮಾನವನ್ನು ಪತ್ತೆ ಹಚ್ಚಿದಾಗ, ವಿಮಾನದಲ್ಲಿರುವ ಟ್ರಾನ್ಸ್‌ ಪಾಂಡರ್ ನಾಲ್ಕು ಅಂಕಿಗಳ ಕೋಡ್, ವಿಮಾನದ ಗುರುತು, ವೇಗ ಮತ್ತು ಎತ್ತರದ ಮಾಹಿತಿಯನ್ನು ರೇಡಾರ್ ಪರದೆಗೆ ರವಾನಿಸುತ್ತದೆ.

ಇದನ್ನೂ ಓದಿ: Vishweshwar Bhat Column: ಯಾರು ಕುರ್ದಿಶ್‌ ಜನ ?

ಸಾಮಾನ್ಯ ಹಾರಾಟದ ಸಮಯದಲ್ಲಿ ಎಟಿಸಿ ನೀಡುವ ಸಾಮಾನ್ಯ ಕೋಡ್‌ಗಳನ್ನು ಬಳಸಲಾ ಗುತ್ತದೆ. ಆದರೆ ಅನಿರೀಕ್ಷಿತ ಅಪಾಯ, ತಾಂತ್ರಿಕ ವೈಫಲ್ಯ, ಭದ್ರತಾ ಬಿಕ್ಕಟ್ಟು ಎದುರಾದಾಗ, ಪೈಲಟ್‌ಗೆ ರೇಡಿಯೋ ಮೈಕ್ರೊ ಫೋನ್ ಹಿಡಿದು ಮಾತನಾಡಲು ಸಮಯವಿಲ್ಲದಿರಬಹುದು. ಅಂಥ ಸಂದರ್ಭಗಳಲ್ಲಿ ಕೇವಲ ಈ ನಾಲ್ಕು ಅಂಕಿಗಳ ತುರ್ತು ಕೋಡ್ ಡಯಲ್ ಮಾಡಿದರೆ ಸಾಕು, ಕ್ಷಣಾರ್ಧದಲ್ಲಿ ಎಟಿಸಿ ಪರದೆಯ ಮೇಲೆ ಎಚ್ಚರಿಕೆಯ ಸಂಕೇತ ಪ್ರದರ್ಶನಗೊಳ್ಳುತ್ತದೆ.

ಸ್ಕ್ವಾಕ್ ಕೋಡ್ 7700 ವಿಮಾನಯಾನದಲ್ಲಿ ಸಾರ್ವತ್ರಿಕ ತುರ್ತು ಪರಿಸ್ಥಿತಿಯನ್ನು ಸೂಚಿಸುತ್ತದೆ. ವಿಮಾನವು ಗಂಭೀರ ಸ್ವರೂಪದ ತಾಂತ್ರಿಕ ದೋಷವನ್ನು ಎದುರಿಸಿದಾಗ ಅಥವಾ ಪ್ರಯಾಣಿಕರ ಜೀವಕ್ಕೆ ತಕ್ಷಣದ ಅಪಾಯ ಉಂಟಾದಾಗ ಪೈಲಟ್‌ಗಳು ಈ ಕೋಡ್ ಅನ್ನು ಸಕ್ರಿಯಗೊಳಿಸುತ್ತಾರೆ. ಉದಾಹರಣೆಗೆ, ಎಂಜಿನ್ ವೈಫಲ್ಯ, ಕ್ಯಾಬಿನ್‌ನಲ್ಲಿ ಒತ್ತಡ ಕಡಿಮೆಯಾಗುವುದು, ವಿದ್ಯುತ್ ಅಥವಾ ಹೈಡ್ರಾಲಿಕ್ ವ್ಯವಸ್ಥೆಯ ಸ್ಥಗಿತ, ವಿಮಾನದೊಳಗೆ ಹೊಗೆ ಅಥವಾ ಬೆಂಕಿ, ಇಲ್ಲವೇ ಇಂಧನ ಖಾಲಿ ಯಾಗುವ ಸ್ಥಿತಿ ಬಂದಾಗ 7700 ಕೋಡ್ ಬಳಸಲಾಗುತ್ತದೆ.

ಪ್ರಯಾಣಿಕರಿಗೆ ಹೃದಯಾಘಾತದಂಥ ತೀವ್ರ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೂ ಪೈಲಟ್ ಇದೇ ಕೋಡ್ ಆಯ್ಕೆ ಮಾಡುತ್ತಾರೆ. ವಿಮಾನ 7700 ಕೋಡ್ ಸೆಟ್ ಮಾಡಿದ ತಕ್ಷಣವೇ ನೆಲದ ಮೇಲಿರುವ ವಾಯು ಸಂಚಾರ ನಿಯಂತ್ರಣ ಕೇಂದ್ರದಲ್ಲಿ ಕಟ್ಟೆಚ್ಚರ ಘೋಷಣೆಯಾಗುತ್ತದೆ. ಎಟಿಸಿ ರೇಡಾರ್ ಪರದೆಯ ಮೇಲೆ ಆ ವಿಮಾನದ ಗುರುತು ಕೆಂಪು ಬಣ್ಣದಲ್ಲಿ ಮಿನುಗಲು ಪ್ರಾರಂಭಿಸುತ್ತದೆ ಮತ್ತು ಶ್ರವ್ಯ ಅಲಾರಾಂ ಮೊಳಗುತ್ತದೆ. ತಕ್ಷಣ ನಿಯಂತ್ರಕರು ಆ ವಿಮಾನಕ್ಕೆ ಗರಿಷ್ಠ ಆದ್ಯತೆ ನೀಡುತ್ತಾರೆ.

ಆಕಾಶದಲ್ಲಿ ಸುತ್ತಮುತ್ತ ಹಾರಾಡುತ್ತಿರುವ ಇತರ ಎಲ್ಲ ವಿಮಾನಗಳಿಗೆ ಮಾರ್ಗ ಬದಲಿಸಲು ಸೂಚಿಸಲಾಗುತ್ತದೆ ಮತ್ತು ತುರ್ತು ಪರಿಸ್ಥಿತಿಯಲ್ಲಿರುವ ವಿಮಾನಕ್ಕೆ ನೇರವಾಗಿ ಹತ್ತಿರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಕ್ಲಿಯರೆ ನೀಡಲಾಗುತ್ತದೆ. ಜತೆಗೆ, ರನ್‌ವೇಯಲ್ಲಿ ಅಗ್ನಿಶಾ ಮಕ ವಾಹನಗಳು, ತುರ್ತು ರಕ್ಷಣಾ ಪಡೆಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧವಾಗಿ ಇರಿಸಲಾಗುತ್ತದೆ.

ಸ್ಕ್ವಾಕ್ ಕೋಡ್ 7500 ವಿಮಾನಯಾನ ಇತಿಹಾಸದ ಅತ್ಯಂತ ಗಂಭೀರ ಹಾಗೂ ಭೀಕರ ಸನ್ನಿವೇಶ ವನ್ನು ಸೂಚಿಸುವ ಸಂಕೇತವಾಗಿದೆ. ಯಾವುದೇ ದುಷ್ಕರ್ಮಿಗಳು, ಭಯೋತ್ಪಾದಕರು ಅಥವಾ ಅಪಹರಣ ಕಾರರು ವಿಮಾನವನ್ನು ಒತ್ತೆಯಾಳಾಗಿ ಇರಿಸಿಕೊಂಡಾಗ ಅಥವಾ ಕಾಕ್‌ಪಿಟ್ ಅನ್ನು ಅಕ್ರಮವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ ಈ ಕೋಡ್ ಬಳಸಲಾಗುತ್ತದೆ. ಹಾರಾಟದ ಮಧ್ಯೆ ವಿಮಾನ ಅಪಹರಣಕ್ಕೊಳಗಾದಾಗ, ಪೈಲಟ್‌ಗಳಿಗೆ ರೇಡಿಯೋ ಮೂಲಕ ನೆಲದ ನಿಯಂತ್ರಕರಿಗೆ ‘ನಮ್ಮ ವಿಮಾನ ಹೈಜಾಕ್ ಆಗಿದೆ’ ಎಂದು ಬಹಿರಂಗವಾಗಿ ಹೇಳಲು ಸಾಧ್ಯ ವಾಗುವುದಿಲ್ಲ.

ಏಕೆಂದರೆ ಹಾಗೆ ಮಾತನಾಡಿದರೆ ಅಪಹರಣಕಾರರು ಪೈಲಟ್‌ಗಳು ಅಥವಾ ಪ್ರಯಾಣಿಕರ ಮೇಲೆ ತಕ್ಷಣವೇ ಹಿಂಸಾಚಾರ ನಡೆಸುವ ಅಥವಾ ಹತ್ಯೆ ಮಾಡುವ ಅಪಾಯವಿರುತ್ತದೆ. ಅಪಹರಣಕಾರರ ಗಮನಕ್ಕೆ ಬಾರದಂತೆ ಅತ್ಯಂತ ರಹಸ್ಯವಾಗಿ ಎಟಿಸಿಗೆ ಎಚ್ಚರಿಕೆ ರವಾನಿಸುವುದೇ 7500 ಕೋಡ್‌ನ ಮುಖ್ಯ ಉದ್ದೇಶ.