Sujaya R Kunnur Column: ನಿರಾತಂಕದ ಪಯಣವಿದು
ನಾನು ಮಾಗಡಿ ರಸ್ತೆಯಿಂದ ಇಲೆಕ್ಟ್ರಾನಿಕ್ ಸಿಟಿಗೆ ದಿನವೂ ಪಯಣಿಸುತ್ತಿದ್ದೆ. ಸಂಜೆ ಹೊತ್ತಿಗೆ, ಲಾರಿ, ಟೆಂಪೋ, ನೀರಿನ ಟ್ಯಾಂಕರ್ ಹೀಗೆ ಬಗೆಬಗೆಯ ವಾಹನಗಳಲ್ಲಿ ಪ್ರಯಾಣಿಸಿ ಮನೆಯನ್ನು ತಲುಪುತ್ತಿದ್ದೆ. ನೈಸ್ ರಸ್ತೆಯಲ್ಲಿನ ಪಯಣವೆಂದರೆ ಜೀವವನ್ನು ಮುಷ್ಟಿಯಲ್ಲಿ ಹಿಡಿದು ಕೂರಬೇಕಾದ ಅನುಭವ ವಾಗುತ್ತಿತ್ತು ಕೆಲವೊಮ್ಮೆ


ಕೃತಜ್ಞತೆ
ಸುಜಯ ಆರ್.ಕೊಣ್ಣೂರ್
ಆಗಿನ್ನೂ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ಸುಗಳ ಸಂಚಾರ ಶುರುವಾಗಿರಲಿಲ್ಲ. ನಾನು ಮಾಗಡಿ ರಸ್ತೆಯಿಂದ ಇಲೆಕ್ಟ್ರಾನಿಕ್ ಸಿಟಿಗೆ ದಿನವೂ ಪಯಣಿಸುತ್ತಿದ್ದೆ. ಸಂಜೆ ಹೊತ್ತಿಗೆ, ಲಾರಿ, ಟೆಂಪೋ, ನೀರಿನ ಟ್ಯಾಂಕರ್ ಹೀಗೆ ಬಗೆಬಗೆಯ ವಾಹನಗಳಲ್ಲಿ ಪ್ರಯಾಣಿಸಿ ಮನೆಯನ್ನು ತಲುಪುತ್ತಿದ್ದೆ. ನೈಸ್ ರಸ್ತೆಯಲ್ಲಿನ ಪಯಣವೆಂದರೆ ಜೀವವನ್ನು ಮುಷ್ಟಿಯಲ್ಲಿ ಹಿಡಿದು ಕೂರಬೇಕಾದ ಅನುಭವ ವಾಗುತ್ತಿತ್ತು ಕೆಲವೊಮ್ಮೆ.
ಹೀಗೊಂದು ಶನಿವಾರ ಮಧ್ಯಾಹ್ನ ಆಫೀಸಿನಿಂದ ಹೊರಟು ವಾಹನಕ್ಕಾಗಿ ಕಾಯುತ್ತಿರುವಾಗ ಮಾಗಡಿ ರಸ್ತೆಗೆ ಹೋಗುವ ಟೆಂಪೋ ಬಂತು. ನಾನು ಹತ್ತಿಕೊಂಡು ಒಂದು ಪೇಪರ್ ಹಾಸಿ ಹಿಂದು ಗಡೆ ಕುಳಿತೆ. ಕೆಲ ಹೊತ್ತಿಗೆ ಸಗಣಿ ವಾಸನೆ ಬಂತು.
ನೋಡಿದರೆ, ಅದು ದನಗಳನ್ನು ಒಯ್ಯುವ ಟೆಂಪೋ. ಇದು ನನ್ನೊಬ್ಬಳ ಕಥೆಯಾಗಿರಲಿಲ್ಲ, ಆನೇಕಲ್, ಚಂದಾಪುರ, ಅತ್ತಿಬೆಲೆ ಕಡೆಗೆ ಕಾರ್ಯನಿಮಿತ್ತವಾಗಿ ಹೋಗಬೇಕಾಗಿ ಬರುವ ನನ್ನಂಥ ಅನೇಕ ಹೆಣ್ಣುಮಕ್ಕಳ ಪಾಡಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ನಮ್ಮೆಲ್ಲರ ಕೋರಿಕೆಯನ್ನು ಪುರಸ್ಕ ರಿಸಿ, ನಾವು ಅನುಭವಿಸುತ್ತಿದ್ದ ಕಷ್ಟಗಳನ್ನು ಅರಿತ ಬಿಎಂಟಿಸಿಯವರು ಈ ಮಾರ್ಗದಲ್ಲಿ ಸಾಕಷ್ಟು ಬಸ್ಸುಗಳ ಸಂಚಾರವನ್ನು ಆರಂಭಿಸಿದ್ದಾರೆ. ಹಳೆಯ ಪರಿಸ್ಥಿತಿಗೆ ಹೋಲಿಸಿಕೊಂಡರೆ ನಮ್ಮದೀಗ ಸುಖಪ್ರಯಾಣ.
ಮಾದಾವರದಿಂದ ಇಲೆಕ್ಟ್ರಾನಿಕ್ ಸಿಟಿವರೆಗೆ, ಕುರುಬರ ಹಳ್ಳಿ, ಬಸವೇಶ್ವರ ನಗರ, ವಿಜಯನಗರ, ಚಿಕ್ಕಬಾಣಾವರ, ಗಂಗಮ್ಮ ವೃತ್ತ, ಮೈಸೂರು ರಸ್ತೆ ಹೀಗೆ ಸಾಕಷ್ಟು ಕಡೆಗಳಿಂದ ನೈಸ್ ರಸ್ತೆಯಲ್ಲಿ ಬಸ್ಸುಗಳು ಓಡಾಡುತ್ತಿವೆ. ಮೊದಲು ಬೆಳಗ್ಗೆ ಮತ್ತು ಸಂಜೆಯಷ್ಟೇ ಇದ್ದ ಬಸ್ಸುಗಳು ಈಗ ದಿನವಿಡೀ ಓಡಾಡುತ್ತಿವೆ.
ಅದೆಲ್ಲಿದ್ದರೋ ಇಷ್ಟೊಂದು ಜನ, ಎಲ್ಲಾ ಬಸ್ಸುಗಳೂ ತುಂಬುವಷ್ಟು ಪಯಣಿಗರು. ಶಾಲಾ ಕಾಲೇ ಜು ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಕಾರ್ಖಾನೆಗಳ ಕಾರ್ಮಿಕರು, ಕಂಪನಿಗಳ ಉದ್ಯೋಗಿಗಳು ಹೀಗೆ ನೈಸ್ ರಸ್ತೆಯಲ್ಲಿ ಸಂಚರಿಸುತ್ತಿರುವ ಬಸ್ಸುಗಳ ಪ್ರಯೋಜನ ಪಡೆಯು ತ್ತಿರುವವರಲ್ಲಿ ಸಮಾ ಜದ ಅನೇಕ ವರ್ಗದವರು ಸೇರಿದ್ದಾರೆ. ಪೆಟ್ರೋಲ್ ಸಾಕಷ್ಟು ಉಳಿತಾಯ ವಾಗುತ್ತದೆ ಎಂಬ ಕಾರಣ ದಿಂದ ಸ್ವಂತ ವಾಹನಗಳನ್ನು ಬಿಟ್ಟು ಈ ಮಾರ್ಗದ ಬಸ್ಸುಗಳಲ್ಲಿ ಸಂಚರಿಸುತ್ತಿರುವವರು ಕೂಡ ಸಾಕಷ್ಟಿದ್ದಾರೆ.
ಹೀಗಾಗಿ, ನಮ್ಮಂಥ ದೈನಂದಿನ ಪಯಣಿಗರ ಕರೆಗೆ ಓಗೊಟ್ಟು, ಪ್ರಯಾಣದ ಸಮಯವನ್ನು ತಗ್ಗಿಸಿ ಸುಸೂತ್ರಗೊಳಿಸಿದ ಬಿಎಂಟಿಸಿಯ ಎಲ್ಲ ಅಧಿಕಾರಿ ವರ್ಗದವರಿಗೂ, ವಿವಿಧ ನೆಲೆಗಳಿಗೆ ಪ್ರಯಾ ಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಚಾಲಕರು-ನಿರ್ವಾಹಕರಿಗೂ ಗೌರವಪೂರ್ವಕ ನಮನಗಳು ಸಲ್ಲುತ್ತವೆ.
ಆಯಾ ಬಸ್ಸುಗಳಲ್ಲಿ ನಾವು ಪ್ರಯಾಣಿಕರು ಪರಸ್ಪರ ಸಹಾಯ ಹಸ್ತ ನೀಡಿ, ದಸರಾ ಹಾಗೂ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಬಸ್ಸುಗಳನ್ನು ಅಲಂಕರಿಸಿ ಪೂಜೆ ಮಾಡಿ, ಚಾಲಕರು ಮತ್ತು ನಿರ್ವಾಹಕರಿಗೆ ಪುಟ್ಟ ಉಡುಗೊರೆಯನ್ನು ನೀಡಿದಾಗ ಅವರ ಮುಖಗಳಲ್ಲಿ ಕಾಣಬರುವ ಸಂತಸ ವರ್ಣನಾತೀತ. ನಮ್ಮನ್ನು ಈ ರೀತಿ ನಡೆಸಿಕೊಳ್ಳುವ ಪ್ರಯಾಣಿಕರೂ ಇದ್ದಾರಲ್ಲಾ ಎಂದು ಅವರು ಉದ್ಗರಿಸಿದಾಗ ನಮಗೂ ಖುಷಿ. ನಮ್ಮಂಥ ಪ್ರಯಾಣಿಕರಿಗಾಗಿ ಅವಿರತವಾಗಿ ದುಡಿಯುವ ಬಿಎಂ ಟಿಸಿ ಸಿಬ್ಬಂದಿಯೊಂದಿಗೆ ಗೌರವಪೂರ್ವಕವಾಗಿ ನಡೆದುಕೊಂಡರೆ, ಅವರೂ ತಮ್ಮ ಪಾಲಿನ ಕರ್ತವ್ಯವನ್ನು ಖುಷಿಯಿಂದಲೇ ನಿರ್ವಹಿಸುತ್ತಾರೆ, ಅಲ್ಲವೇ? ಇದೇ ಸಂದರ್ಭದಲ್ಲಿ ಸರಕಾರಕ್ಕೆ ಒಂದು ಮನವಿ: ‘ಎಲ್ಲವೂ ಉಚಿತ’ ಎಂದು ಘೋಷಿಸಿ ಸರಕಾರಿ ಬೊಕ್ಕಸವನ್ನು ಬರಿದುಮಾಡಿ, ಅದನ್ನು ಮತ್ತೆ ತುಂಬಿಸಲೆಂದು ಜನತೆಯ ಮೇಲೆ ತೆರಿಗೆಯ ಹೊರೆ ಹೊರಿಸುವ ಬದಲು, ಹೆಣ್ಣು ಮಕ್ಕಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವೃದ್ಧರಿಗೆ ರಿಯಾಯಿತಿ ದರದಲ್ಲಿ ಪ್ರಯಾಣಿ ಸಲು ಅನುಕೂಲ ಮಾಡಿದಲ್ಲಿ, ಈ ಉಪಕ್ರಮದಿಂದ ಸರಕಾರಕ್ಕೆ ಹಣವೂ ಬರುತ್ತದೆ ಹಾಗೂ ಬಿಎಂಟಿಸಿಯ ನೌಕರರಿಗೆ ಸಂದಾಯವಾಗಬೇಕಿರುವ ಭತ್ಯೆ ಮುಂತಾದವನ್ನು ಸೂಕ್ತ ಸಮಯದಲ್ಲಿ ನೀಡಲೂ ಸಾಧ್ಯವಾಗುತ್ತದೆ.
(ಲೇಖಕಿ ಹವ್ಯಾಸಿ ಬರಹಗಾರ್ತಿ)