ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಶಾಂತಿಯಿಂದಲೇ ವರ್ಣಭೇದವನ್ನು ಮಣಿಸಿದ, ಶಿಕ್ಷಕಿ ಕ್ಲಾರಾ ಲೂಪರ್

ಕ್ಲಾರಾ ಲೂಪರ್ ಅಲ್ಲಿಗೆ ನಿಲ್ಲಿಸಲಿಲ್ಲ. ದಶಕಗಳ ಕಾಲ ಆಕೆ ಸಾವಿರಾರು ಯುವಕರಲ್ಲಿ ಧೈರ್ಯದ ಕಿಡಿಯನ್ನು ತುಂಬಿದಳು. ನಾಯಕತ್ವ ಎಂದರೆ ಮೈಕ್ರೋಫೋನ್ ಹಿಡಿದು ಕಿರುಚುವುದಲ್ಲ, ಜಗತ್ತೇ ನಿಮ್ಮನ್ನು ಇಲ್ಲವಾಗಿಸಲು ಬಯಸಿದಾಗಲೂ ಮೌನವಾಗಿ, ದೃಢವಾಗಿ ಕದಲದೇ ನಿಲ್ಲುವುದು ಎಂದು ತೋರಿಸಿಕೊಟ್ಟಳು. ಕ್ಲಾರಾ ಲೂಪರ್ ಸದ್ದನ್ನು ಮಾಡಲಿಲ್ಲ, ಆದರೆ ಇತಿಹಾಸವನ್ನೇ ಸೃಷ್ಟಿಸಿದಳು.

ಶಾಂತಿಯಿಂದಲೇ ವರ್ಣಭೇದವನ್ನು ಮಣಿಸಿದ, ಶಿಕ್ಷಕಿ ಕ್ಲಾರಾ ಲೂಪರ್

-

ಒಂದೊಳ್ಳೆ ಮಾತು

ಅದು ಅಮೆರಿಕದ ಒಕ್ಲಹೋಮ ನಗರ. ಆಕೆಯ ಹೆಸರು ಕ್ಲಾರಾ ಲೂಪರ್. ವೃತ್ತಿಯಿಂದ ಶಾಲಾ ಶಿಕ್ಷಕಿಯಾಗಿದ್ದ ಕ್ಲಾರಾಳಿಗೆ ಒಂದು ಸತ್ಯ ಚೆನ್ನಾಗಿ ಗೊತ್ತಿತ್ತು. ಮಕ್ಕಳನ್ನು ಅನ್ಯಾಯದಿಂದ ಮುಚ್ಚಿಟ್ಟು ರಕ್ಷಿಸಲು ಸಾಧ್ಯವಿಲ್ಲ. ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಆ ಕಪ್ಪು ವರ್ಣದ ಮಕ್ಕಳು ಅಮೆರಿಕದ ಇತಿಹಾಸ, ಸಂವಿಧಾನ, ‘ಸಮಾನತೆ’ ಮತ್ತು ‘ಸ್ವಾತಂತ್ರ್ಯ’ದ ಪಾಠಗಳನ್ನು ಕಂಠಪಾಠ ಮಾಡುತ್ತಿದ್ದರು. ದೇಶ ತಮಗೆ ನೀಡಿದ ಭರವಸೆಗಳ ಬಗ್ಗೆ ಹೆಮ್ಮೆಯಿಂದ ಓದುತ್ತಿದ್ದರು.

ಆದರೆ, ಶಾಲೆಯ ಗಂಟೆ ಬಾರಿಸಿ ಹೊರಗೆ ಬರುತ್ತಿದ್ದಂತೆ ಕ್ರೂರ ವಾಸ್ತವ ಅವರ ಮುಖಕ್ಕೆ ಅಪ್ಪಳಿಸು‌ ತ್ತಿತ್ತು. ಬೀದಿ ಬೀದಿಗಳಲ್ಲಿ ‘ಬಿಳಿಯರಿಗೆ ಮಾತ್ರ’ ಎಂಬ ಬೋರ್ಡುಗಳು ರಾರಾಜಿಸುತ್ತಿ ದ್ದವು. ಅವರ ಹೆತ್ತವರನ್ನು ಹೋಟೆಲ್‌ಗಳಿಂದ ಹೊರದೂಡಲಾಗುತ್ತಿತ್ತು. ನೀವು ಈ ದೇಶದ ಪ್ರಜೆ ಗಳಾಗಿದ್ದರೂ, ಇಲ್ಲಿಗೆ ಸೇರಬೇಕಾದವರಲ್ಲ ಎಂದು ಸಮಾಜ ಪ್ರತಿ ಹೆಜ್ಜೆಯಲ್ಲೂ ನೆನಪಿಸುತ್ತಿತ್ತು.

ಪುಸ್ತಕದ ಪಾಠಕ್ಕೂ, ಬದುಕಿನ ಕಹಿ ಸತ್ಯಕ್ಕೂ ಇರುವ ಈ ದೊಡ್ಡ ಕಂದಕವನ್ನು ಕ್ಲಾರಾ ಗಮನಿಸಿ ದಳು. ಆ ಕಂದಕವನ್ನೇ ತನ್ನ ಮುಂದಿನ ಪಾಠವನ್ನಾಗಿ ಮಾಡಲು ನಿರ್ಧರಿಸಿದಳು. ಅನುಮತಿಗಾಗಿ ಕಾಯಬೇಡಿ, ಬದಲಾವಣೆ ಯನ್ನು ನೀವೇ ತನ್ನಿ ಎಂದು ತನ್ನ ವಿದ್ಯಾರ್ಥಿಗಳಿಗೆ ಕರೆ ನೀಡಿದಳು.

NAACP (National Association for the Advancement of Colored People) ಇದು ಅಮೆರಿಕದಲ್ಲಿ ಕಪ್ಪು ವರ್ಣೀಯರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳಿ ಗಾಗಿ, ನಾಗರಿಕ ಸಮಾನತೆಗಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಅತ್ಯಂತ ಹಳೆಯ ಮತ್ತು ಪ್ರಮುಖ ನಾಗರಿಕ ಹಕ್ಕುಗಳ ಸಂಸ್ಥೆಯ ಯುವ ಮಂಡಳಿಯ ಸಲಹೆಗಾರ್ತಿಯಾಗಿ, ಆಕೆ ತನ್ನ ಪ್ರೀತಿಯ ಮಕ್ಕಳನ್ನು ಈ ಹೋರಾಟಕ್ಕೆ ಸಜ್ಜುಗೊಳಿಸಿದಳು.

ಇದನ್ನೂ ಓದಿ: Roopa Gururaj Column: ಭಗವಂತನೊಡನೆ ಹೋರಾಡಿದ ಭಕ್ತ ಪ್ರಹ್ಲಾದನ ಕಥೆ

ಅದು ಸಾಮಾನ್ಯ ಸಿದ್ಧತೆಯಾಗಿರಲಿಲ್ಲ. ಸಿಟ್ಟು ನೆತ್ತಿಗೇರಿದಾಗಲೂ ಹೇಗೆ ಶಾಂತವಾಗಿರಬೇಕು, ಅವಮಾನಗಳು ಮೈಮೇಲೆ ಎರಗಿದಾಗಲೂ ಹೇಗೆ ಧ್ವನಿ ಎತ್ತರಿಸದೆ ತಾಳ್ಮೆಯಿಂದಿರಬೇಕು, ಕಣ್ಣು ಗಳಲ್ಲಿ ಘನತೆಯನ್ನು ಕಾಪಾಡಿಕೊಂಡು ಹೇಗೆ ನೆಟ್ಟಗೆ ಕುಳಿತುಕೊಳ್ಳಬೇಕು ಎಂದು ಆಕೆ ಮಕ್ಕಳಿಗೆ ಅಹಿಂಸೆಯ ಕಠಿಣ ಪಾಠಗಳನ್ನು ಕಲಿಸಿದಳು. ಆ ಐತಿಹಾಸಿಕ ದಿನ ಬಂದೇ ಬಿಟ್ಟಿತು: 1958ರ ಒಂದು ದಿನ, ಕ್ಲಾರಾ ತನ್ನ ಮಕ್ಕಳನ್ನು ಕರೆದುಕೊಂಡು ಡೌನ್‌ಟೌನ್‌ನಲ್ಲಿದ್ದ ‘ಕಾಟ್ಜ್ ಡ್ರಗ್ ಸ್ಟೋರ್’ ಎಂಬ ಹೋಟೆಲ್‌ಗೆ ಹೋದಳು.

ಅಲ್ಲಿನ ಲಂಚ್ ಕೌಂಟರ್‌ನಲ್ಲಿ ಮಕ್ಕಳು ಸಾಲಾಗಿ ಕುಳಿತರು. ಅತ್ಯಂತ ವಿನಮ್ರವಾಗಿ ಕೇಳಿದರು: ನಮಗೂ ಸ್ವಲ್ಪ ಆಹಾರ ಬಡಿಸುತ್ತೀರಾ? ಅಲ್ಲಿಂದ ಬಂದ ಉತ್ತರ: ಇಲ್ಲ! ಕೆಲಸಗಾರರು ಮುಖ ತಿರುಗಿಸಿದರು. ಗ್ರಾಹಕರು ಕೆರಳಿ ಕೆಂಡವಾದರು. ನಮ್ಮ ಜಾಗದಲ್ಲಿ ಕುಳಿತುಕೊಳ್ಳಲು ಈ ಕಪ್ಪು ಮಕ್ಕಳಿಗೆ ಎಷ್ಟು ಧೈರ್ಯ? ಎಂದು ಕೆಲವರು ಜಿಗುಪ್ಸೆಯಿಂದ ಹಂಗಿಸಿದರು. ಆದರೆ, ಆ ಮಕ್ಕಳು ವಾದಿ ಸಲಿಲ್ಲ, ಕೂಗಾಡಲಿಲ್ಲ.

ಜಾಗದಿಂದ ಕದಲದೇ ಸೂರ್ಯ ಮುಳುಗುವವರೆಗೂ ಅ ಕುಳಿತರು. ಮರುದಿನವೂ ಬಂದರು. ಅದರ ಮರುದಿನವೂ ಬಂದರು. ವಾರಗಳೇ ಉರುಳಿದವು. ಅವರ ಈ ಮೌನ ಸಮಾಜದ ಆತ್ಮಸಾಕ್ಷಿಯನ್ನು ಚುಚ್ಚಲಾರಂಭಿಸಿತು. ಹಸಿದ ಮಗುವಿಗೆ ಒಂದು ಸ್ಯಾಂಡ್ವಿಚ್ ನಿರಾಕರಿಸುವ ವರ್ಣಭೇದ ನೀತಿ ಎಷ್ಟು ಕ್ರೂರ ಮತ್ತು ಅಮಾನವೀಯ ಎಂಬುದು ಇಡೀ ನಗರಕ್ಕೆ ಅರ್ಥವಾಗತೊಡಗಿತು.

ವ್ಯಾಪಾರಿಗಳು, ಗ್ರಾಹಕರು, ಇಡೀ ಒಕ್ಲಹೋಮ ನಗರವೇ ಆ ಮಕ್ಕಳ ಶಾಂತ ಕಣ್ಣುಗಳ ಎದುರು ಸೋಲೊಪ್ಪಿಕೊಂಡಿತು. ಕೊನೆಗೆ ಆ ಹೋಟೆಲ್ ಕಪ್ಪು ವರ್ಣದವರಿಗೂ ಬಾಗಿಲು ತೆರೆಯಿತು. ಇತಿಹಾಸದ ಪ್ರಸಿದ್ಧ ಹೋರಾಟಗಳಿಗಿಂತ ಮೊದಲೇ, ಒಕ್ಲ ಹೋಮದಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ಯಾವುದೇ ಹಿಂಸೆಯಿಲ್ಲದೆ, ಕೇವಲ ಮಕ್ಕಳು ಶಾಂತವಾಗಿ ಕುಳಿತುಕೊಳ್ಳುವ ಮೂಲಕ ಇತಿಹಾಸ ವನ್ನು ಬದಲಾಯಿಸಿದ್ದರು.

ಕ್ಲಾರಾ ಲೂಪರ್ ಅಲ್ಲಿಗೆ ನಿಲ್ಲಿಸಲಿಲ್ಲ. ದಶಕಗಳ ಕಾಲ ಆಕೆ ಸಾವಿರಾರು ಯುವಕರಲ್ಲಿ ಧೈರ್ಯದ ಕಿಡಿಯನ್ನು ತುಂಬಿದಳು. ನಾಯಕತ್ವ ಎಂದರೆ ಮೈಕ್ರೋಫೋನ್ ಹಿಡಿದು ಕಿರುಚುವುದಲ್ಲ, ಜಗತ್ತೇ ನಿಮ್ಮನ್ನು ಇಲ್ಲವಾಗಿಸಲು ಬಯಸಿದಾಗಲೂ ಮೌನವಾಗಿ, ದೃಢವಾಗಿ ಕದಲದೇ ನಿಲ್ಲುವುದು ಎಂದು ತೋರಿಸಿಕೊಟ್ಟಳು. ಕ್ಲಾರಾ ಲೂಪರ್ ಸದ್ದನ್ನು ಮಾಡಲಿಲ್ಲ, ಆದರೆ ಇತಿಹಾಸವನ್ನೇ ಸೃಷ್ಟಿಸಿದಳು.

ಬದುಕಿನಲ್ಲಿ ನಮ್ಮನ್ನು ಪರೀಕ್ಷಿಸುವ ಅನೇಕ ಘಟನೆಗಳು, ವ್ಯಕ್ತಿಗಳು ಎದುರಾಗುತ್ತಾರೆ. ಎಲ್ಲಕ್ಕೂ ಬಲಪ್ರಯೋಗದ ಅಗತ್ಯವಿರುವುದಿಲ್ಲ. ಶಾಂತಿ, ಸಮಾಧಾನ ದೃಢ ಮನಸ್ಸು ಕೆಲವೊಮ್ಮೆ ವಜ್ರಕ್ಕಿಂತ ಕಠಿಣವಾಗಿ ಪರಿಣಾಮ ಬೀರುತ್ತವೆ.