Dr Sadhanashree Column: ಆಹಾರ ಸೇವನೆ ಎಂಬ ಯಜ್ಞದ ಹತ್ತು ನಿಯಮಗಳು
ಹೋಮದ ಸಂಪೂರ್ಣ ಫಲ ಪ್ರಾಪ್ತಿಯಾಗಲು ಕಟ್ಟುನಿಟ್ಟಾದ ನಿಯಮ-ನಿಷ್ಠೆಗಳನ್ನು ಹೇಗೆ ಪಾಲಿಸಬೇಕೋ, ಹಾಗೆಯೇ ನಾವು ಸೇವಿಸುವ ಆಹಾರದಿಂದ ಸಂಪೂರ್ಣ ಸ್ವಾಸ್ಥ್ಯದ ಸುಖ ವನ್ನು ಸವಿಯಬೇಕಾದರೆ ಆಹಾರ ಸೇವನೆಯ ನಿಯಮಗಳನ್ನು ಪಾಲಿಸಲೇಬೇಕು. ಹಾಗಾದರೆ ನಾವು ಸೇವಿಸುವ ಆಹಾರಕ್ಕೆ ಮತ್ತು ನಮ್ಮ ಜಠರಾಗ್ನಿಗೆ ಏಕೆ ಇಷ್ಟೊಂದು ಮಹತ್ವ ಗೊತ್ತೇ? ಚರಕಾಚಾರ್ಯರು ಹೇಳುವಂತೆ, ಶರೀರಬಲ, ಆರೋಗ್ಯ ಹಾಗೂ ಆಯಸ್ಸು ನಮ್ಮ ದೇಹದಲ್ಲಿ ರುವ ಅಗ್ನಿಯನ್ನೇ ಅವಲಂಬಿಸಿದೆ

ಅಂಕಣಗಾರ್ತಿ ಡಾ.ಸಾಧನಶ್ರೀ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಉಪನಿಷತ್ತು ಹೀಗೆನ್ನುತ್ತದೆ: ‘ಅನ್ನಾದ್ವೈ ಖಲ್ವಿಮಾನಿ ಭೂತಾನಿ ಜಾಯಂತೆ, ಅನ್ನೇನ ಭೂತಾನಿ ಜೀವಂತಿ ಅನ್ನೇನ ಪ್ರಯಂತ್ಯಭಿಸಂವಿಶಂತಿ||’- ಅಂದರೆ, ಅನ್ನದಿಂದಲೇ ಸೃಷ್ಟಿ, ಅನ್ನದಿಂದಲೇ ಬದುಕು ಮತ್ತು ಅನ್ನದಿಂದಲೇ ಮರಣ ಎಂದರ್ಥ. ಆಯುರ್ವೇದವಂತೂ ಹೀಗೆ ಉದ್ಗರಿಸಿದೆ: ‘ಆಹಿತಾಗ್ನಿಃ ಸದಾ ಪಥ್ಯಾನ್ಯಂತರಗ್ನೌ ಜುಹೋತಿ ಯಃ ದಿವಸೇ ದಿವಸೇ ಬ್ರಹ್ಮಜಪತ್ಯಥ ದದಾತಿ ಚ | ನರಂ ನಿಃಶ್ರೇಯಸೇಯುಕ್ತಂ ಸಾತ್ಮ್ಯಜ್ಞಂ ಪಾನ ಭೋಜನೇ ಭಜಂತೇ ನಾಮಯಾಃ ಕೇಚಿದ್ಭಾವಿ ನೋಪ್ಯಂತರಾದೃತೇ ||’- ಅಂದರೆ, ಶ್ರದ್ಧೆಯಿಂದ ಅಗ್ನಿಯಲ್ಲಿ (ಅಗ್ನಿಹೋತ್ರ) ಸಾಯಂಪ್ರಾತಃ ಹೋಮ ಮಾಡುವಂತೆ, ನಾವು ಹಿತಕರವಾದ ಸಮಿತ್ತುಗಳಿಂದ ಅಂತರಗ್ನಿಯಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆಯೆಂಬ ಹೋಮವನ್ನು ಮಾಡಬೇಕು.
ಇದನ್ನೂ ಓದಿ: Dr Sadhanashree Column: ಬಿಸಿಲಿನ ಬೇಗೆಯಿಂದ ಬಚಾವಾಗುವ ಬಗೆ
ಹೀಗೆ ಪಥ್ಯಾಹಾರದಿಂದ ಹೋಮ ಮಾಡುವವನು, ಪಾನ ಭೋಜನಗಳಲ್ಲಿ ಸಾತ್ಮ್ಯತೆ ಯನ್ನು ಅರಿತವನು, ಜತೆಗೆ ಪ್ರತಿನಿತ್ಯ ಜಪ ಹಾಗೂ ದಾನ ಮಾಡುವವನಿಗೆ ಇಂದು ಮತ್ತು ಎಂದೆಂದಿಗೂ ರೋಗಗಳು ಭಾದಿಸವು ಎಂದರ್ಥ. ಇದು ಆರ್ಷವಾಕ್ಯ. ಆಹಾರ ಸೇವನೆ ಎಂಬುದು ಒಂದು ಪವಿತ್ರವಾದ ಹವನ ಮಾಡಿದಂತೆ ಎಂಬುದನ್ನು ನಮ್ಮ ಆಚಾರ್ಯರು ಯಾವತ್ತೋ ಸ್ಪಷ್ಟಪಡಿಸಿದ್ದಾರೆ.
ಹೋಮದ ಸಂಪೂರ್ಣ ಫಲ ಪ್ರಾಪ್ತಿಯಾಗಲು ಕಟ್ಟುನಿಟ್ಟಾದ ನಿಯಮ-ನಿಷ್ಠೆಗಳನ್ನು ಹೇಗೆ ಪಾಲಿಸಬೇಕೋ, ಹಾಗೆಯೇ ನಾವು ಸೇವಿಸುವ ಆಹಾರದಿಂದ ಸಂಪೂರ್ಣ ಸ್ವಾಸ್ಥ್ಯದ ಸುಖವನ್ನು ಸವಿಯಬೇಕಾದರೆ ಆಹಾರ ಸೇವನೆಯ ನಿಯಮಗಳನ್ನು ಪಾಲಿಸಲೇಬೇಕು. ಹಾಗಾದರೆ ನಾವು ಸೇವಿಸುವ ಆಹಾರಕ್ಕೆ ಮತ್ತು ನಮ್ಮ ಜಠರಾಗ್ನಿಗೆ ಏಕೆ ಇಷ್ಟೊಂದು ಮಹತ್ವ ಗೊತ್ತೇ? ಚರಕಾಚಾರ್ಯರು ಹೇಳುವಂತೆ, ಶರೀರಬಲ, ಆರೋಗ್ಯ ಹಾಗೂ ಆಯಸ್ಸು ನಮ್ಮ ದೇಹದಲ್ಲಿರುವ ಅಗ್ನಿಯನ್ನೇ ಅವಲಂಬಿಸಿದೆ.
ಈ ಅಗ್ನಿಯ ಉತ್ತಮವಾದ ಜ್ವಲನವು ಅನ್ನಪಾನಗಳೆಂಬ ಇಂಧನವನ್ನೇ ಅವಲಂಬಿಸಿದೆ. ಆಹಾರ ನಿಯಮಗಳನ್ನು ತಪ್ಪಿದರೆ ಅಗ್ನಿ ನಾಶವಾಗುವುದು, ಅಗ್ನಿನಾಶವಾದರೆ ಆರೋ ಗ್ಯವೇ ನಾಶವಾದಂತೆ. ಹಾಗಾಗಿ, ಆಹಾರವೆಂಬ ಯಜ್ಞ ಮಾಡಬೇಕಾದಾಗ ಪಾಲಿಸಬೇಕಾದ 10 ಆಹಾರ ಸೇವನಾ ವಿಧಾನಗಳ ಕುರಿತು ತಿಳಿಯೋಣ.
ಉಷ್ಣಂ ಅಶ್ನೀಯಾತ್: ಆಯುರ್ವೇದದ ಮೊಟ್ಟ ಮೊದಲ ನಿಯಮವೆಂದರೆ ನಾವು ಸೇವಿಸುವ ಆಹಾರವು ತಾಜಾ ಮತ್ತು ಬಿಸಿಯಾಗಿರಬೇಕು. ಬಿಸಿಯಾದ ಆಹಾರ ಸೇವನೆ ಯಿಂದ ಒಂದಷ್ಟು ಲಾಭಗಳಿವೆ. ಅವೆಂದರೆ, ಬಿಸಿ ಆಹಾರವು ಸದಾ ರುಚಿರುಚಿಯಾಗಿರು ತ್ತದೆ, ಬೇಗ ಜೀರ್ಣವಾಗುತ್ತದೆ, ಅದು ಜೀರ್ಣಶಕ್ತಿಯನ್ನು ಹೆಚ್ಚಿಸಿ ಕರುಳಿನ ಚಲನೆಯು ಸರಿಯಾದ ರೀತಿಯಲ್ಲಿ ನಡೆಯಲು ಸಹಕರಿಸುತ್ತದೆ.
ಬಿಸಿ ಆಹಾರದಿಂದ ಕರುಳಿನಲ್ಲಿರುವ ವಾಯುವು ಸುಲಭವಾಗಿ ಹೊರಹೋಗುತ್ತದೆ, ಕಫದ ಅಂಶವು ಕರಗುತ್ತದೆ. ಆಹಾರದಲ್ಲಿರುವ ಉಷ್ಣತೆಯು ಮೈಯಲ್ಲಿನ ಆಲಸ್ಯವನ್ನು ನಿವಾರಿಸಿ ಉತ್ಸಾಹವನ್ನು ತುಂಬುತ್ತದೆ. ಅಂತೆಯೇ, ಒಂದು ಕಿವಿಮಾತನ್ನು ಇಲ್ಲಿ ಹೇಳಲೇಬೇಕು. ಸದಾ ಬಿಸಿ ಆಹಾರವನ್ನು ಸೇವಿಸಬೇಕೆಂದು, ತಣ್ಣಗಾದ ಆಹಾರವನ್ನು ಪದೇ ಪದೆ ಪುನರು ಷ್ಣೀಕರಿಸಿ ಸೇವಿಸುವುದು ಅಷ್ಟೇ ಅಹಿತಕರ.
ಫ್ರಿಜ್‌ನಿಂದ ತೆಗೆದು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ ತಟ್ಟೆಗೆ ಬಡಿಸುವಷ್ಟರಲ್ಲಿ ಅದು ವಿಷ ವಾಗಿ ಪರಿಣಮಿಸಿರುತ್ತದೆ. ಮೂರೂ ಹೊತ್ತು ಬಿಸಿ ಆಹಾರವನ್ನು ಸೇವಿಸಲು ಸಾಧ್ಯವಿಲ್ಲ ದವರಿಗೆ ಒಂದು ಉಪಾಯವಿದೆ. ಆಹಾರ ತಣ್ಣಗಾಗಿದ್ದರೂ ಸೇವಿಸುವಾಗ ಜತೆಯಲ್ಲಿ ಒಂದು ಲೋಟ ಬಿಸಿಬಿಸಿ ನೀರನ್ನು ಸವಿಯುತ್ತಾ ಭೋಜನ ಮಾಡಿದರೆ ಮೇಲೆ ಹೇಳಿದ ಸುಮಾರಷ್ಟು ಲಾಭಗಳನ್ನು ಪಡೆಯಬಹುದು.
ಸ್ನಿಗ್ಧಂ ಅಶ್ನೀಯಾತ್: ನಾವು ಸೇವಿಸುವ ಆಹಾರವು ಸದಾ ಒಳ್ಳೆಯ ಜಿಡ್ಡಿನಿಂದ ಕೂಡಿರ ಬೇಕು. ಪರಂಪರೆಯಿಂದ ಅಭ್ಯಾಸವಿರುವ ತುಪ /ಎಣೆ /ಮಾಂಸರಸ/ಮೂಳೆರಸಗಳನ್ನು ಆಹಾರದಲ್ಲಿ ನಿಯತವಾಗಿ ಬಳಸಬೇಕು. ಸಾಕಷ್ಟು ಜಿಡ್ಡಿರುವ ಆಹಾರವನ್ನು ಸೇವಿಸಿದಾಗ ಅದು ರುಚಿಯನ್ನು ಹೆಚ್ಚಿಸುತ್ತದೆ, ಅಗ್ನಿಯನ್ನು ವೃದ್ಧಿ ಮಾಡುತ್ತದೆ, ಆಹಾರವನ್ನು ಸುಲಭವಾಗಿ ಜೀರ್ಣ ಮಾಡಿ ವಾಯುವಿನ ಅನುಲೋಮನವನ್ನು ಸಹ ಮಾಡುತ್ತದೆ.
ಜಿಡ್ಡುಯುಕ್ತ ಆಹಾರ ಸೇವನಾ ಅಭ್ಯಾಸದಿಂದ ದೀರ್ಘಕಾಲದ ಲಾಭಗಳನ್ನು ಪಡೆಯ ಬಹುದು. ಇದರಿಂದ ಶರೀರ ವೃದ್ಧಿಯಾಗಿ, ಇಂದ್ರಿಯಗಳು ಪುಷ್ಟಿಗೊಳ್ಳುತ್ತವೆ. ಶರೀರದ ಬಲ ವರ್ಣಗಳು, ಆಯಸ್ಸು ಹೆಚ್ಚಾಗುತ್ತವೆ. ನಿತ್ಯಬಳಕೆಗೆ ಅತ್ಯಂತ ಶ್ರೇಷ್ಠವಾದ ಜಿಡ್ಡೆಂದರೆ ಅದು ಹಸುವಿನ ತುಪ್ಪ- ಗೋಘೃತ. ಇದನ್ನು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸೇವಿಸಲೇಬೇಕು. ಕನಿಷ್ಠ ಪಕ್ಷ ಪ್ರತಿ ಆಹಾರದಲ್ಲೂ ಒಂದು ಚಮಚವನ್ನಾದರೂ ಬಳಸುವುದು ಒಳ್ಳೆಯದು.
ಆದರೆ ಪ್ರಮಾಣದ ನಿರ್ಧಾರವನ್ನು ನಮ್ಮ ಅಗ್ನಿಯ ಕ್ಷಮತೆಯ ಮೇಲೆ ಮಾಡಿದಾಗ ಅದು ಸರಿಯಾಗುತ್ತದೆ. ‘ಅಯ್ಯೋ, ತುಪ್ಪ ತಿಂದರೆ ದಪ್ಪ ಆಗುತ್ತೇನೆ’ ಎನ್ನುವ ಭಯವಿದ್ದರೆ ಅಂಥ ಭಯವನ್ನು ಈಗಲೇ ಬಿಟ್ಟುಬಿಡಿ. ತುಪ್ಪವನ್ನು ಸರಿಯಾದ ಕ್ರಮದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ದೇಹದ ತೂಕ ಹೆಚ್ಚಾಗುವುದಿಲ್ಲ. ಬದಲಿಗೆ ತೂಕ ನಿರ್ವಹಣೆ ಮಾಡಲಿಕ್ಕೆ ಅದು ಸಹಾಯಕಾರಿ.
ಮಾತ್ರಾವತ್ ಅಶ್ನೀಯಾತ್: ಈ ನಿಯಮವು ನಾವು ಸೇವಿಸುವ ಆಹಾರದ ಪ್ರಮಾಣದ ಬಗ್ಗೆ ತಿಳಿಸುತ್ತದೆ. ಸದಾ ಹಿತ-ಮಿತವಾಗಿ ಸೇವಿಸತಕ್ಕದ್ದು. 2 ಅಥವಾ 3 ಆಹಾರ ಕಾಲಗಳ ಅಭ್ಯಾಸಕ್ಕೆ ತಕ್ಕಂತೆ ಸೇವಿಸಬೇಕು. ಮಧ್ಯೆ ಮಧ್ಯೆ ಏನನ್ನೂ ಸೇವಿಸಬಾರದು. ಆಹಾರ ಕಾಲದಲ್ಲಿ ಸೇವಿಸಿದ ಆಹಾರವು ತೃಪ್ತಿಕರವಾಗಿರಬೇಕು. ಜತೆಗೆ ಅತಿಯಾಗಿ ಗಂಟಲಿ ನವರೆಗೂ ತುಂಬುವಷ್ಟು ಇರಬಾರದು. ಅಥವಾ ಇನ್ನೂ ಬೇಕು ಇನ್ನೂ ಬೇಕು ಅನ್ನಿಸು ವಷ್ಟು ಕಮ್ಮಿ ಕೂಡ ಇರಬಾರದು. ನಾವು ಪ್ರತಿ ಆಹಾರ ಕಾಲದಲ್ಲೂ ಸೇವಿಸಬೇಕಾದ ಸರಿಯಾದ ಆಹಾರ ಪ್ರಮಾಣವೆಂದರೆ- ಅದು ಮುಂದಿನ ಆಹಾರ ಸೇವನೆಯ ಕಾಲದೊಳಗೆ ಸಂಪೂರ್ಣ ಜೀರ್ಣಗೊಂಡು, ಪುನಃ ಹಸಿವೆಯಾಗಿ, ಆಹಾರ ಸೇವಿಸುವ ಆಕಾಂಕ್ಷೆಯನ್ನು ನೀಡಬೇಕು- ಅದೇ ಸರಿಯಾದ ಪ್ರಮಾಣ. ನಮ್ಮ ಉದರವನ್ನು ಮೂರು ಭಾಗ ಮಾಡಿದರೆ, ಒಂದು ಭಾಗ ಘನ ಆಹಾರಕ್ಕೆ, ಒಂದು ಭಾಗ ದ್ರವ ಆಹಾರಕ್ಕೆ ಮತ್ತು ಒಂದು ಭಾಗವನ್ನು ಖಾಲಿ ಬಿಡುವುದು ಸೂಕ್ತ. ತುತ್ತು ಅಗಿಯುತ್ತಾ, ಬೆಚ್ಚಗಿರುವ ನೀರನ್ನು ಸ್ವಲ್ಪ ಸ್ವಲ್ಪ ಮಧ್ಯೆ ಹೀರುತ್ತಾ ಆಹಾರ ಸೇವಿಸುವುದು ಸರಿಯಾದ ಕ್ರಮ.
ಜೀರ್ಣೇ ಅಶ್ನೀಯಾತ್: ಹಿಂದೆ ತಿಂದ ಆಹಾರವು ಇನ್ನೂ ಜೀರ್ಣವಾಗುತ್ತಿರುವಾಗ ಮತ್ತೊಮ್ಮೆ ಆಹಾರವನ್ನು ಸೇವಿಸುವುದು ಅಥವಾ ಪದೇ ಪದೆ ಕಾಫಿ-ಟೀ/ಪಾನೀಯ ಗಳನ್ನು ಸೇವಿಸುವುದು ವಾತಾದಿ ದೋಷಗಳ ಏರುಪೇರಿಗೆ ಕಾರಣವಾಗುತ್ತದೆ. ಇದು ಕರುಳಿನ ಚಲನೆಯನ್ನು ವ್ಯತ್ಯಾಸ ಮಾಡಿ, ಧಾತುಗಳ ಪೋಷಣೆಗೆ ಅಡ್ಡಿ ಮಾಡಿ, ಜಠರಾಗ್ನಿ ಯನ್ನು ಸಹ ಹಾಳುಮಾಡುತ್ತದೆ.
ಜೀರ್ಣಾಹಾರ ಲಕ್ಷಣಗಳನ್ನು ನಾವು ಸದಾ ಗಮನಿಸಿ ಆಹಾರವನ್ನು ಸೇವಿಸಿದರೆ ಅದು ನಮ್ಮ ಆರೋಗ್ಯವನ್ನು, ರೋಗನಿರೋಧಕ ಶಕ್ತಿಯನ್ನು ಮತ್ತು ಆಯಸ್ಸನ್ನು ಹೆಚ್ಚಿಸುವು ದರಲ್ಲಿ ಸಂಶಯವಿಲ್ಲ. ಹಸಿವು-ಬಾಯಾರಿಕೆಯ ಅನುಭವ, ಪರಿಶುದ್ಧವಾದ ತೇಗು, ವಾತದ ಕೆಳಮುಖ ಚಲನೆ, ಎಲ್ಲಾ ಇಂದ್ರಿಯಗಳ ಚುರುಕುತನ, ಹಗುರವಾದ ದೇಹ, ಮಲ ಮೂತ್ರ ಗಳ ಸುಖ ವಿಸರ್ಜನೆ- ಇವಿಷ್ಟನ್ನು ನಾವು ಗಮನಿಸಿದ ನಂತರವೇ ಆಹಾರವನ್ನು ಸೇವಿಸ ಬೇಕು.
ವೀರ್ಯಾವಿರುದ್ಧಂ ಅಶ್ನೀಯಾತ್: ಪರಸ್ಪರ ವಿರುದ್ಧ ಗುಣಗಳನ್ನು ಹೊಂದಿದ ಆಹಾರ ವನ್ನು/ ವಿರುದ್ಧಾಹಾರವನ್ನು ಸೇವಿಸುವುದರಿಂದ ಶರೀರದಲ್ಲಿ ದೋಷಗಳು ವಿಕೃತ ಗೊಂಡು, ಅದು ದೇಹದಿಂದ ಹೊರಗೂ ಹೋಗದೆ ತೊಂದರೆಯನ್ನು ಉಂಟುಮಾಡುತ್ತದೆ. ಚರ್ಮರೋಗ, ಶುಕ್ರ ದೋಷ, ಬಂಜೆತನ ಮುಂತಾದ ತೊಂದರೆಗಳನ್ನು ಹೆಚ್ಚಿಸುತ್ತದೆ. ವಿರುದ್ಧಾಹಾರಗಳ ಸೇವನೆಯನ್ನು ಮಾಡಲೇಬಾರದು- ಉದಾಹರಣೆಗೆ: ಹಾಲು+ಮೊಸರು/ಮಜ್ಜಿಗೆ, ಹಾಲಿನೊಂದಿಗೆ ಹುಳಿ ಹಣ್ಣುಗಳ ಸೇವನೆ, ಬಿಸಿ ನೀರಿನೊಂದಿಗೆ ಜೇನುತುಪ್ಪ, ಬಾಳೆಹಣ್ಣು ಮತ್ತು ಹಾಲಿನ ಸೇವನೆ ಇತ್ಯಾದಿ.
ಇಷ್ಟೇ ದೇಶೇ ಇಷ್ಟಸರ್ವೋಪಕರಣಂ ಅಶ್ನೀಯಾತ್: ನಾವು ಆಹಾರವನ್ನು ಸೇವಿಸಲು ಕುಳಿತುಕೊಂಡ ಜಾಗವು ಶುಚಿಯಾಗಿ, ಮನಸ್ಸಿಗೆ ಹಿಡಿಸುವಂಥದ್ದಾಗಿರಬೇಕು. ಸಮಾಧಾನ ವಾಗಿ ಕುಳಿತುಕೊಂಡು ಆಹಾರ ಸೇವಿಸುವುದು ಸರಿಯಾದ ಕ್ರಮ. ನಿಂತುಕೊಂಡು, ನಡೆದಾ ಡಿಕೊಂಡು/ಚಲಿಸುವ ವಾಹನದಲ್ಲಿ ಆಹಾರ ಸೇವನೆಯನ್ನು ತ್ಯಜಿಸಬೇಕು. ಆಹಾರವನ್ನು ಬಡಿಸಲು ಮತ್ತು ಸೇವಿಸಲು ಸಹ ಶುಚಿಯಾದ/ಸುಂದರವಾದ ಉಪಕರಣಗಳ ಸಹಯೋಗ ವಿರಲಿ.
ನಾತಿದ್ರುತಂ ಅಶ್ನೀಯಾತ್: ಗಡಿಬಿಡಿಯಾಗಿ ಆಹಾರವನ್ನು ಸೇವಿಸಿದರೆ ಅದರಿಂದ ತೊಂದರೆ ಹೆಚ್ಚು. ಅದರಿಂದ ಆಹಾರವು ಗಂಟಲು ಮತ್ತು ಅನ್ನನಾಳದ ಬದಲು ಶ್ವಾಸ ನಾಳ ಅಥವಾ ಶ್ವಾಸಕೋಶವನ್ನು ಸೇರಿ ಉಸಿರನ್ನೇ ನಿಲ್ಲಿಸಬಹುದು. ಕೆಮ್ಮನ್ನು ಸಹ ತರಬಹುದು. ಆದ್ದರಿಂದ ಸಾವಕಾಶವಾಗಿ ಊಟ ಮಾಡುವುದರಿಂದ ಆಹಾರದಲ್ಲಿರುವ ರುಚಿ ಸುಗಂಧಗಳನ್ನು ಅನುಭವಿಸುವುದರ ಜತೆಗೆ ಕರುಳಿಗೂ ಅನುಕೂಲವಾಗುತ್ತದೆ. ಆಹಾರದಲ್ಲಿ ಇರಬಹುದಾದ ಕಲ್ಲು, ಕಸ ಮತ್ತು ಕೂದಲುಗಳನ್ನು ಗಮನಿಸಲೂ ಸಾಧ್ಯ.
ನಾತಿವಿಲಂಬಿತಂ ಅಶ್ನೀಯಾತ್: ಗಂಟೆಗಟ್ಟಲೆ, ನಿಧಾನವಾಗಿ ತಿನ್ನುವುದರಿಂದ ಆಹಾರದ ತಾಜಾತನ ಮತ್ತು ಬಿಸಿ ಹೋಗಿರುತ್ತದೆ . ಜೀರ್ಣಶಕ್ತಿಗೂ ಮೀರಿ ಅಗತ್ಯಕ್ಕೂ ಹೆಚ್ಚು ತಿನ್ನಬೇಕಾಗುತ್ತದೆ. ಆಹಾರದಲ್ಲಿ ತೃಪ್ತಿ ಅನಿಸುವುದಿಲ್ಲ. ಕರುಳಿನ ಚಲನೆಯ ವ್ಯತ್ಯಾಸವಾಗಿ ಪಚನ ಕ್ರಿಯೆ ತಡೆಯಾಗುತ್ತದೆ. ಇದರಿಂದ ಮಲಬದ್ಧತೆಯಾದಿ ತೊಂದರೆ ಗಳು ಉಲ್ಬಣಗೊಳ್ಳುತ್ತವೆ. ಒಟ್ಟಾರೆ, ಅತಿ ವೇಗವಾಗಿಯೂ ಅಲ್ಲದೆ ಅತಿ ನಿಧಾನವಾಗಿಯೂ ಅಲ್ಲದೆ ಮಧ್ಯಮ ಗತಿಯಲ್ಲಿ ಆಹಾರವನ್ನು ತಿನ್ನುವ ಅಭ್ಯಾಸ ಸದಾ ಆರೋಗ್ಯಕರ.
ಅಜಲ್ಪನ್ ಅಹಸನ್ ಭುಂಜೀತಾ: ಆಹಾರವನ್ನು ಸೇವಿಸುವಾಗ ಮಾತನಾಡುವುದು, ನಗುವುದು, ಬೇರೆ ಕೆಲಸದಲ್ಲಿ ತೊಡಗುವುದು, ಟಿವಿ-ಮೊಬೈಲ್ ವೀಕ್ಷಣೆಯಲ್ಲಿ ಮುಳುಗು ವುದು, ಆಹಾರದ ಹೊರತಾಗಿ ಬೇರೆ ಯೋಚನೆಗಳನ್ನು ಮಾಡುತ್ತಾ ಊಟ ಮಾಡುವುದು ಅಹಿತಕರ. ಇದರಿಂದ ನಮ್ಮ ಶರೀರಕ್ಕೆ ಬೇಕಾಗಿರುವ ಅಗತ್ಯಗಳು, ಆಹಾರದ ಪ್ರಮಾಣ ಮತ್ತು ತೃಪ್ತಿಯ ಲೆಕ್ಕ ತಪ್ಪುತ್ತದೆ. ಆಹಾರ ತೆಗೆದುಕೊಳ್ಳುವಾಗ ಅದು ನಮ್ಮ ಮಿದುಳಿಗೆ ಸಂಪೂರ್ಣ ಅನುಭವಕ್ಕೆ ಬಂದಾಗ ಮಾತ್ರ ಸೇವನೆಯ ತೃಪ್ತಿ ಸಿಗುತ್ತದೆ. ಮನಸ್ಸಿಗೆ ನಾಟದ ಆಹಾರ ಸೇವನೆಯು ದೇಹಕ್ಕೆ ಹೇಗೆ ಪೋಷಣೆಯನ್ನು ನೀಡಬಹುದು ಎಂಬುದನ್ನು ನೀವೇ ಯೋಚಿಸಿ .
ತನ್ಮನಾ ಭುಂಜೀತಾ: ಆಹಾರವನ್ನು ಏಕಾಗ್ರತೆಯಿಂದ ಸೇವಿಸುತ್ತಾ, ಪ್ರತಿ ತುತ್ತನ್ನೂ ಅನುಭವಿಸಿ, ಆ ಕ್ರಿಯೆಯಲ್ಲಿ ತನ್ಮಯರಾಗಿ ಸೇವಿಸುವುದು ಅತ್ಯಂತ ಹಿತಕರ. ಇದರ ಜತೆಗೆ, ಯಜ್ಞವನ್ನು ನಾವು ಹೇಗೆ ಶುಚಿಯಾಗಿ ಮಾಡುತ್ತೇವೆಯೋ, ಅದೇ ರೀತಿ ಆಹಾರ ಸೇವನೆ ಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶುಚಿತ್ವದಿಂದ ಮಾಡತಕ್ಕದ್ದು. ಆಹಾರ ವನ್ನು ಸೇವಿಸುವ ಮುನ್ನ ಸ್ನಾನವನ್ನು ಮಾಡಿಯೇ ಸೇವಿಸತಕ್ಕದ್ದು. ಸ್ನಾನವು ಕೇವಲ ದೈಹಿಕ ಶುಚಿತ್ವನ್ನು ಅಷ್ಟೇ ನೀಡದೆ ನಮ್ಮ ಜಠರಾಗ್ನಿಯನ್ನೂ ದೀಪನಗೊಳಿಸುತ್ತದೆ, ಹಸಿವನ್ನು ಚುರುಕುಮಾಡುತ್ತದೆ ಮತ್ತು ಆಹಾರದಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ. ತದ್ವಿರುದ್ಧವಾಗಿ, ಆಹಾರ ಸೇವನೆಯ ನಂತರ ಸ್ನಾನ ಮಾಡಿದರೆ ಅದು ಜೀರ್ಣಕ್ರಿಯೆ ಯನ್ನು ಹಾಳುಮಾಡಿ, ಅಜೀರ್ಣವನ್ನುಂಟುಮಾಡುತ್ತದೆ. ಆದ್ದರಿಂದ ಸ್ನಾನವಾದ ಮೇಲೆ ಯೇ ಆಹಾರ ಸೇವನೆಯ ಅಭ್ಯಾಸವಿರಲಿ.
ಸ್ನೇಹಿತರೇ, ಇವಿಷ್ಟು ಆಹಾರಸೇವನೆಯೆಂಬ ಹೋಮದ ನಿಯಮಗಳು. ಆದರೆ ಪ್ರತಿ ಹವನದ ಬಹುಮುಖ್ಯಭಾಗವೆಂದರೆ ಪೂರ್ಣಾಹುತಿ. ಹಾಗಾದರೆ ಈ ಆಹಾರ ಯಜ್ಞದ ಪೂರ್ಣಾಹುತಿ ಯಾವುದು? ಆಹಾರ ಸೇವಿಸುವಾಗ ಚಿಂತಾ, ಶೋಕ, ಭಯ, ಕ್ರೋಧಗಳನ್ನು ತ್ಯಜಿಸಿ, ಶಾಂತಿ ಮತ್ತು ಪ್ರೀತಿಯಿಂದ ಸೇವಿಸಿದಾಗ ಅದೇ ಈ ಯಜ್ಞದ ಪೂರ್ಣಾಹುತಿ ಯಾಗುತ್ತದೆ. ಬೇರೆ ಎಲ್ಲಾ ನಿಯಮಗಳನ್ನು ಪಾಲಿಸಿ, ಆಹಾರ ಸೇವಿಸುವಾಗ ಪ್ರೀತಿಯ ಬದಲು ಕ್ರೋಧಾದಿಗಳನ್ನು ತುಂಬಿಕೊಂಡಿದ್ದರೆ ಅದು ಆ ಪರಮಾತ್ಮನನ್ನು ಸೇರಲು ಹೇಗೆ ಸಾಧ್ಯ? ಪ್ರೀತಿ, ಭಕ್ತಿ ಮತ್ತು ಶ್ರದ್ಧೆಗಳೇ ಪ್ರತಿ ಆಹುತಿಯನ್ನು ಅವನಿಗೆ ತಲುಪಿಸುವ ವಾಹನ!