Raghava Sharma Nidle Column: ಕಟ್ರ ಈದ್ಗಾ ಎನ್ನುವುದನ್ನು ಬ್ರಿಟಿಷ್ ಆಡಳಿತವೇ ಒಪ್ಪಿರಲಿಲ್ಲ !
ಒಪ್ಪಂದದ ಪ್ರಕಾರ ದೇವಾಲಯದ ಭೂಮಿಯನ್ನು ಟ್ರಸ್ಟ್‌ಗೆ ಮತ್ತು ಪಕ್ಕದ ಶಾಹಿ ಈದ್ಗಾ ಮಸೀದಿಯ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ಹಂಚಿಕೆ ಮಾಡಲಾಗುತ್ತದೆ. ಆ ಸಮಯ ದಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾಸಂಘದ ಅಧ್ಯಕ್ಷರಾಗಿದ್ದ ಗಣೇಶ ವಾಸುದೇವ್ ಮಾವಲಂಕರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು.
-
ಜನಪಥ
ಮಂಗಳೂರು ಲಿಟ್-ಫೆಸ್ಟ್ʼನಲ್ಲಿ ದೇಶದ ಹಿರಿಯ ಇತಿಹಾಸ ಶಾಸ್ತ್ರಜ್ಞೆ ಡಾ.ಮೀನಾಕ್ಷಿ ಜೈನ್ ಅವರು ಕಾಶಿ, ಮಥುರಾದ ಹಿಂದೂ ದೇವಾಲಯಗಳ ಸಂಘರ್ಷಮಯ ಚರಿತ್ರೆ ಕುರಿತ ಕುತೂಹಲಕಾರಿ ಅಂಶಗಳತ್ತ ಬೆಳಕು ಚೆಲ್ಲಿದರು. ಮಥುರಾದ ಕಟ್ರ ಕೇಶವದೇವರ ಜಮೀನನ್ನು ‘ಕಟ್ರ ಈದ್ಗಾ’ ಎಂದಿದ್ದನ್ನು ಬ್ರಿಟಿಷ್ ಆಡಳಿತ ಕೂಡ ಒಪ್ಪಿರಲಿಲ್ಲ ಎನ್ನುವುದು ಅವರ ಅಧ್ಯಯನದಲ್ಲೂ ದಾಖಲಾಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯಂತೆ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರಗಳಾದ ಕಾಶಿ ಮತ್ತು ಮಥುರಾದಲ್ಲೂ ದೇಗುಲ ಸಂಕೀರ್ಣವು ಹಿಂದೂಗಳ ಪಾಲಾಗಬೇಕು ಎಂಬ ಚರ್ಚೆಗಳಾಗುತ್ತಿರುವ ಮಧ್ಯೆ, ಈ ಎರಡೂ ಧಾರ್ಮಿಕ ಸ್ಥಳಗಳ ಕುರಿತ ಪ್ರಕರಣಗಳು ನ್ಯಾಯಾಲಯದ ಅಂಗಳದಲ್ಲಿರುವುದನ್ನು ನಾವು ನೋಡಿದ್ದೇವೆ.
ಕಾಶಿ ವಿಶ್ವನಾಥ ದೇಗುಲ ಆವರಣದಲ್ಲಿರುವ ಜ್ಞಾನವಾಪಿ ಮಸೀದಿ ಮತ್ತು ಮಥುರಾ ಶ್ರೀಕೃಷ್ಣ ಜನ್ಮಸ್ಥಾನದ ದೇಗುಲದೊಂದಿಗೆ ಜೋಡಿಸಿಕೊಂಡು ನಿರ್ಮಾಣ ಮಾಡಿರುವ ಶಾಹಿ ಈದ್ಗಾ ಮಸೀದಿಗಳನ್ನು ಆ ಸ್ಥಳಗಳಿಂದ ತೆರವುಗೊಳಿಸಬೇಕು ಎಂದು ಕೋರಿ ಸಲ್ಲಿಸ ಲಾಗಿರುವ ಅರ್ಜಿಗಳ ಬಗ್ಗೆ ಸ್ಥಳೀಯ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆಯುತ್ತಿವೆ.
ಕಾಶಿಯಲ್ಲಿ ವೈಜ್ಞಾನಿಕ ಸಮೀಕ್ಷೆಗಳು ನಡೆದು, ವರದಿಗಳು ವಾರಾಣಸಿ ಜಿಲ್ಲಾ ನ್ಯಾಯಾ ಲಯದ ಮುಂದಿವೆ. ಕಾಶಿ ದೇಗುಲದ ವ್ಯಾಪ್ತಿಯಲ್ಲಿರುವ ಸಂಪೂರ್ಣ ಜಮೀನು ಹಿಂದೂ ಗಳಿಗೆ ಸೇರುವ ವಿಶ್ವಾಸವನ್ನು ಅನೇಕ ಇತಿಹಾಸಕಾರರು ವ್ಯಕ್ತಪಡಿಸುತ್ತಿದ್ದರೂ, ಮಥುರಾ ದಲ್ಲಿ ಜನ್ಮಸ್ಥಾನಕ್ಕೆ ಸಂಬಂಧಿಸಿದ ಭೂ ವಿವಾದದಲ್ಲಿ ಹಿಂದೂ ಶ್ರದ್ಧಾಳುಗಳು ದೊಡ್ಡ ಸವಾಲನ್ನೇ ಎದುರಿಸುತ್ತಿದ್ದಾರೆ.
ಈ ಸವಾಲುಗಳ ಬಗ್ಗೆ, ಜನವರಿ 10-11ರಂದು ಮಂಗಳೂರಿನಲ್ಲಿ ದ.ಕ. ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಭಾರತ್ ಫೌಂಡೇಷನ್ ಮೂಲಕ ಆಯೋಜಿಸಲಾಗಿದ್ದ ಲಿಟರೇಚರ್ ಫೆಸ್ಟಿವಲ್‌ನಲ್ಲಿ (ಸಾಹಿತ್ಯೋತ್ಸವ) ರಾಜ್ಯಸಭೆ ಸದಸ್ಯೆ, ಖ್ಯಾತ ಇತಿಹಾಸಕಾರ್ತಿಯಾದ ಡಾ. ಮೀನಾಕ್ಷಿ ಜೈನ್ ಅವರು ಕೆಲ ಕುತೂಹಲಕಾರಿ ಅಂಶಗಳನ್ನು ವಿಚಾರಗೋಷ್ಠಿಯಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Raghava Sharma Nidle Column: ಬಾಂಗ್ಲಾ ಹಿಂದೂ ಹತ್ಯೆಗಳ ಕರಿನೆರಳಲ್ಲಿ ಬಂಗಾಳ ಕದನ
Vasudeva Krishna and Mathura (ವಾಸುದೇವ ಕೃಷ್ಣ ಮತ್ತು ಮಥುರಾ) ಎಂಬ ಪುಸ್ತಕ ಬರೆದಿರುವ ಡಾ.ಮೀನಾಕ್ಷಿ ಜೈನ್ ಅವರು, ಅಯೋಧ್ಯಾ, ಕಾಶಿ ಮತ್ತು ಮಥುರಾದ ಇತಿಹಾಸಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಕೆಲವೇ ಇತಿಹಾಸಕಾರರಲ್ಲಿ ಒಬ್ಬರು. ಅವರ ಸಾಧನೆ ಹಾಗೂ ಅಧ್ಯಯನಗಳನ್ನು ಪರಿಗಣಿಸಿಯೇ ಕೇಂದ್ರ ಸರಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿರುವುದಲ್ಲದೆ, ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯೆ ಯನ್ನಾಗಿಯೂ ನೇಮಕ ಮಾಡಿದೆ.
ಮಥುರಾದಲ್ಲಿ ಸವಾಲು ಹೆಚ್ಚಿದೆ ಎನ್ನುವುದಕ್ಕೆ ಡಾ.ಮೀನಾಕ್ಷಿ ಜೈನ್ ಕಾರಣಗಳನ್ನೂ ನೀಡಿದ್ದಾರೆ. ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿ 1968ರಲ್ಲಿ ಮಹತ್ವದ ಬೆಳವಣಿಗೆಯೊಂದು ಸಂಭವಿಸುತ್ತದೆ. ಶ್ರೀಕೃಷ್ಣ ಜನ್ಮಸ್ಥಾನ ಸೇವಾಸಂಘ ಮತ್ತು ಶಾಹಿ ಈದ್ಗಾ ಸಮಿತಿಯ ನಡುವೆ ಕೃಷ್ಣ ಜನ್ಮಸ್ಥಾನ ದೇವಾಲಯ ಸಂಕೀರ್ಣದ ವಿವಾದಿತ ಭೂಮಿಗೆ ಸಂಬಂಧಿಸಿ ರಾಜಿ ಒಪ್ಪಂದವೊಂದಕ್ಕೆ ಸಹಿ ಹಾಕಲಾಗುತ್ತದೆ.
ಒಪ್ಪಂದದ ಪ್ರಕಾರ ದೇವಾಲಯದ ಭೂಮಿಯನ್ನು ಟ್ರಸ್ಟ್‌ಗೆ ಮತ್ತು ಪಕ್ಕದ ಶಾಹಿ ಈದ್ಗಾ ಮಸೀದಿಯ ನಿರ್ವಹಣೆಯನ್ನು ಈದ್ಗಾ ಸಮಿತಿಗೆ ಹಂಚಿಕೆ ಮಾಡಲಾಗುತ್ತದೆ. ಆ ಸಮಯ ದಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾಸಂಘದ ಅಧ್ಯಕ್ಷರಾಗಿದ್ದ ಗಣೇಶ ವಾಸುದೇವ್ ಮಾವ ಲಂಕರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು.
ಅಂದಿನ ಒಪ್ಪಂದಕ್ಕೆ ಸಹಿ ಹಾಕುವ ಗಣೇಶ ವಾಸುದೇವ ಅವರ ಕಾನೂನಾತ್ಮಕ ಅಧಿಕಾರ ವನ್ನು ಈಗ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಅದೇ ರೀತಿ ಒಪ್ಪಂದದ ಸಿಂಧುತ್ವದ ಕುರಿತ ತಕರಾರು ಅರ್ಜಿಗಳು ಕೂಡ ನ್ಯಾಯಾಲಯಗಳಲ್ಲಿವೆ.
“1968ರಲ್ಲಿ ಕೇಂದ್ರದಲ್ಲಿದ್ದ ಸರಕಾರದ ಪ್ರಭಾವದಿಂದಾಗಿಯೇ ಈ ಒಪ್ಪಂದ ನಡೆದು, ಕಟ್ರ ಕೇಶವ ದೇಗುಲದ (ಶ್ರೀಕೃಷ್ಣ ಜನ್ಮಸ್ಥಾನ) 13 ಎಕರೆ ಭೂಮಿಯಲ್ಲಿ 3 ಎಕರೆ ಭೂಮಿ ಯನ್ನು ಈದ್ಗಾಕ್ಕೆ ಕಾನೂನಾತ್ಮಕವಾಗಿ ಹಸ್ತಾಂತರ ಮಾಡಲಾಗಿತ್ತು. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ರಾಷ್ಟ್ರೀಯ ಪಕ್ಷಕ್ಕೆ ಇತರೆ ಮಿತ್ರಪಕ್ಷಗಳ ಸಹಾಯ ಬೇಕಿದ್ದರಿಂದ ಮಥುರಾ ಜನ್ಮಸ್ಥಾನದ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಯಿತು.
ಕೇಂದ್ರದಲ್ಲಿದ್ದ ರಾಷ್ಟ್ರೀಯ ಪಕ್ಷವೊಂದರ ನೆರವಿನಿಂದಲೇ ಇಂಥದ್ದೊಂದು ಕೃತ್ಯ ನಡೆದಿತ್ತು. ಒಪ್ಪಂದವನ್ನು ಕಾನೂನಾತ್ಮಕವಾಗಿಯೇ ಮಾಡಿದ್ದರಿಂದ ಜನ್ಮಸ್ಥಾನದ ವಿಷಯದಲ್ಲಿ ಕಾನೂನಾತ್ಮಕ ಸವಾಲು ಜಾಸ್ತಿ" ಎನ್ನುವುದು ಡಾ. ಮೀನಾಕ್ಷಿ ಜೈನ್ ಅವರ ಅನಿಸಿಕೆ.
ಮಥುರಾ ಜಮೀನು ವಿವಾದದ ಕೇಸನ್ನು ತಿಳಿದುಕೊಳ್ಳಲು ವಾರಾಣಸಿಯ ರಾಜನಾಗಿದ್ದ ಪಟ್ನಿಮಲ್ ಎಂಬಾತ ಮಥುರಾದ ಕಟ್ರದಲ್ಲಿದ್ದ ಕೇಶವದೇವ ದೇವಾಲಯದ (ಶ್ರೀಕೃಷ್ಣ ಜನ್ಮಸ್ಥಾನ) ಇಡೀ 13.3 ಎಕರೆ ಭೂಮಿಯನ್ನು 1815ರಲ್ಲಿ ಖರೀದಿ ಮಾಡಿದ್ದ ಇತಿಹಾಸ ವನ್ನೂ ಗಮನಿಸಬೇಕು. ಆಗ ಈದ್ಗಾ ಮಸೀದಿಗೆ ಸಂಬಂಧಪಟ್ಟವರು, “ಇದು ಕಟ್ರ ಕೇಶವ ದೇವ ದೇಗುಲ ಅಲ್ಲ, ಇದು ಕಟ್ರ ಈದ್ಗಾ" ಎಂದು ಪ್ರತಿಪಾದಿಸಿದ್ದರು.
ಬ್ರಿಟಿಷರು ಭಾರತದಲ್ಲಿದ್ದ ಸಂದರ್ಭದಲ್ಲಿ ಈ ಪ್ರಕರಣ ಕೋರ್ಟುಗಳ ಮೆಟ್ಟಿಲೇರಿ, ಅಂದಿನ ಬ್ರಿಟಿಷ್ ಆಡಳಿತ ಹಾಗೂ ವಿವಿಧ ನ್ಯಾಯಾಧೀಶರೂ ಈದ್ಗಾ ಪಕ್ಷದವರ ವಾದ ಗಳನ್ನು ಸಾರಸಗಟಾಗಿ ತಳ್ಳಿಹಾಕಿದ್ದರು.
1944ರಲ್ಲಿ ರಾಜ ಪಟ್ನಿಮಲ್‌ನ ಉತ್ತರಾಧಿಕಾರಿ ರಾಯ್ ಕಿಶನ್ ದಾಸ್ ಈ ಇಡೀ ಜಮೀನ ನ್ನು ಜುಗಲ್ ಕಿಶೋರ್ ಬಿರ್ಲಾ ಅವರಿಗೆ ಹಸ್ತಾಂತರ ಮಾಡುವ ನಿರ್ಧಾರ ಮಾಡುತ್ತಾರೆ. ಇಲ್ಲಿ ಭವ್ಯವಾದ ಶ್ರೀಕೃಷ್ಣ ದೇವಸ್ಥಾನವನ್ನು ನಿರ್ಮಾಣ ಮಾಡಬೇಕೆಂಬ ಆಶಯ ನಮಗಿದ್ದರೂ, ಹಣದ ಕೊರತೆಯಿಂದ ಸಾಧ್ಯವಾಗುತ್ತಿಲ್ಲ.
ನಮಗೆ 13 ಸಾವಿರ ರು. ಸಾಲ ತೀರಿಸಬೇಕಿದೆ. ಹೀಗಾಗಿ, ಈ ಜಮೀನನ್ನು ಪಡೆದು, ನೀವು ನಮಗೆ 13 ಸಾವಿರ ರು. ನೀಡಬೇಕು ಎಂದು ರಾಯ್ ಕಿಶನ್ ದಾಸ್ ಮತ್ತು ಕುಟುಂಬಸ್ಥರು ಜುಗಲ್ ಕಿಶೋರ್ ಅವರ ಬಳಿ ಕೇಳುತ್ತಾರೆ. ಇದನ್ನು ಒಪ್ಪಿಕೊಂಡು ಜುಗಲ್ ಕಿಶೋರ್ ಅವರು ಜಮೀನನ್ನು ಪಡೆದು, ದೇಗುಲ ನಿರ್ಮಾಣ ಮಾಡುವ ಸಲುವಾಗಿ ಕೃಷ್ಣ ಜನ್ಮಸ್ಥಾನ ಟ್ರಸ್ಟ್ ರಚನೆ ಮಾಡುತ್ತಾರೆ.
ಈ ಟ್ರಸ್ಟ್‌ನಲ್ಲಿ ಪಂಡಿತ ಮದನ ಮೋಹನ ಮಾಲವೀಯ ಸೇರಿ ಅನೇಕರು ಟ್ರಸ್ಟಿಗಳಾಗಿರು ತ್ತಾರೆ ಮತ್ತು 1951ರಲ್ಲಿ ಎಲ್ಲಾ ಹಕ್ಕುಗಳನ್ನು ಟ್ರಸ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದರೆ, ವಿವಿಧ ಕಾರಣಗಳಿಗಾಗಿ ಭವ್ಯ ದೇಗುಲವನ್ನು ನಿರ್ಮಾಣ ಮಾಡಲು ಸಾಧ್ಯ ವಾಗುವುದಿಲ್ಲ.
ಹಿಂದು-ಮುಸ್ಲಿಂ ಸಂಘರ್ಷಗಳು ಮುಂದುವರಿದಂತೆ 1968ರಲ್ಲಿ ಈ ಸಂಘರ್ಷ ತಣಿಸ ಲೆಂದು ಒಪ್ಪಂದವೊಂದನ್ನು ಮಾಡಿ, ಮಸೀದಿ ಇರುವ 3 ಎಕರೆ ಜಮೀನನ್ನು ಮುಸ್ಲಿಂ ಧರ್ಮೀಯರಿಗೆ ನೀಡಲಾಗುತ್ತದೆ. ಈಗ ಅಯೋಧ್ಯೆ ಕೇಸಿನಲ್ಲಿ ಹಿಂದೂಗಳು ಗೆದ್ದು, ಮಂದಿರವೂ ನಿರ್ಮಾಣವಾದ್ದರಿಂದ ಕಾಶಿ, ಮಥುರಾದಲ್ಲೂ ಹಕ್ಕು ಸ್ಥಾಪನೆಗಾಗಿ ಕಾನೂನು ಹೋರಾಟಗಳಿಗೆ ಮರುಜೀವ ಬಂದಿದೆ.
ಶ್ರೀಕೃಷ್ಣ ಜನ್ಮಭೂಮಿಗೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದು ಹಾಕಬೇಕೆಂದು 2022ರಲ್ಲಿ ಲಖನೌ ನಿವಾಸಿ ರಂಜನಾ ಅಗ್ನಿಹೋತ್ರಿ ಎಂಬುವವರು ಅರ್ಜಿ ಸಲ್ಲಿಸುತ್ತಾರೆ ಮತ್ತು ಇದರ ವಿಚಾರಣೆಗೆ ಸ್ಥಳೀಯ ನ್ಯಾಯಾಲಯದ ನ್ಯಾ. ರಾಜೀವ್ ಭಾರತಿ ಒಪ್ಪಿಗೆ ಕೂಡ ಕೊಟ್ಟಿದ್ದಾರೆ.
ಕೃಷ್ಣ ಜನ್ಮಸ್ಥಾನ ಹಾಗೂ ಮಂದಿರದ ಭೂಮಿ ಅತಿಕ್ರಮಿಸಿಕೊಂಡು ಶಾಹಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವುದು ಅರ್ಜಿದಾರರ ತಕರಾರು. ಈದ್ಗಾ ಮಸೀದಿಯನ್ನು 1669-70ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೃಷ್ಣ ಜನ್ಮಭೂಮಿ ಯಲ್ಲಿ ನಿರ್ಮಿಸಲಾಗಿದೆ.
ಮಥುರಾದ ಕೇಶವ್ ದೇವ ದೇವಸ್ಥಾನದ ‘ಬಾಲ ಭಗವಾನ್ ಕೃಷ್ಣನ ಸ್ನೇಹಿತ’ ಎಂದು ಕೋರ್ಟಿನಲ್ಲಿರುವ ಅರ್ಜಿಯಲ್ಲಿ ದಾಖಲಾಗಿದೆ. ಶ್ರೀಕೃಷ್ಣನ ಆರಾಧಕರಾದ ನಮಗೆ ಅವರ ಆಸ್ತಿಯನ್ನು ಮರು ಸ್ಥಾಪಿಸುವಂತೆ ಕೋರಿ ಮೊಕದ್ದಮೆ ಹೂಡುವ ಹಕ್ಕಿದೆ.
ಜನ್ಮಭೂಮಿಯ ಮೇಲೆ ಮಸೀದಿ ನಿರ್ಮಿಸಿರುವುದು ತಪ್ಪು. ಆಸ್ತಿ ಹಂಚಿಕೆ ವಿಚಾರದಲ್ಲಿ ಹಲವು ವರ್ಷಗಳ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು, ಆದರೆ ಆ ಒಪ್ಪಂದ ಕಾನೂನುಬಾಹಿರ ಎಂದು ವಾದಿಸಲಾಗಿದೆ. ಐತಿಹಾಸಿಕ ಪುರಾವೆಗಳನ್ನು ಪರಿಶೀಲಿಸಲು ಅಲಹಾಬಾದ್ ಹೈಕೋರ್ಟ್ 2023ರಲ್ಲಿ ಮಸೀದಿ ಆವರಣದ ಸಮೀಕ್ಷೆಗೆ ಆದೇಶಿಸಿದ್ದು, ಈ ಪ್ರಕ್ರಿಯೆ ನಡೆಯುತ್ತಿದೆ.
ಮಥುರಾದ ಕೃಷ್ಣ ಮಂದಿರವಿರುವ ಸ್ಥಳ ಹಿಂದೂ ಧಾರ್ಮಿಕ ನೆಲೆ ಎನ್ನುವುದಕ್ಕೆ ತಮ್ಮ ಪುಸ್ತಕದಲ್ಲಿ ಹಲವು ಪುರಾವೆಗಳನ್ನು ಒದಗಿಸಿರುವ ಡಾ.ಮೀನಾಕ್ಷಿ ಜೈನ್, ಹಲವು ಶತಮಾನಗಳ ಹಿಂದೆ ಮಥುರಾಕ್ಕೆ ಪ್ರವಾಸ ಕೈಗೊಂಡಿದ್ದ ವಿದೇಶಿ ಪ್ರವಾಸಿಗರ ಗ್ರಂಥಗಳಲ್ಲಿ ಕೃಷ್ಣ ದೇಗುಲದ ಅಸ್ತಿತ್ವದ ಬಗ್ಗೆ ಉಲ್ಲೇಖಿಸಿರುವುದನ್ನೂ ದಾಖಲಿಸಿದ್ದಾರೆ.
1017ರಲ್ಲಿ ಮಹಮ್ಮದ್ ಘಜ್ನವಿ ಮಥುರಾವನ್ನು ಆಕ್ರಮಿಸಿ ಲೂಟಿ ಮಾಡಿದ್ದ. ದೇಗುಲ ವಿನಾಶ ಮಾಡಿದ್ದರ ಬಗ್ಗೆ ಅಲ್-ಉತ್ಬಿ ಎಂಬಾತ ದಾಖಲಿಸಿ, ಅಲ್ಲಿದ್ದ ಹಿಂದೂ ದೇವರ ವಿಗ್ರಹಗಳ ಬಗ್ಗೆ ತಿಳಿಸಿದ್ದ. ಮಹಮ್ಮದ್ ಘಜ್ನವಿ ದೇವಾಲಯಗಳನ್ನು ಸುಟ್ಟು ನೆಲಸಮ ಮಾಡಿದ್ದನ್ನು 11ನೇ ಶತಮಾನದಲ್ಲಿ ಪ್ರವಾಸ ಮಾಡಿದ್ದ ಇರಾನಿನ ಚರಿತ್ರಕಾರ ಅಲ್ಬೆರುನಿ ಬರೆದಿದ್ದಾನೆ.
ವಾಸುದೇವ ಇಲ್ಲಿ ಜನಿಸಿದ್ದ ಕಾರಣದಿಂದಾಗಿ ಮಥುರಾ ಪೂಜಾತಾಣವಾಗಿದೆ ಎಂದು ಆತ ಬರೆದಿದ್ದಾನೆ. ಅದೇ ರೀತಿ, “ಜಜ್ಜ ಎಂಬಾತನು ಮಥುರಾದ ಕೃಷ್ಣ ಜನ್ಮಸ್ಥಾನದಲ್ಲಿ ನಿರ್ಮಾಣ ಮಾಡಿದ್ದ ದೇಗುಲವನ್ನು ಮುಹಮ್ಮದ್ ಘೋರಿಯ ಸೇನಾಧಿಪತಿ ಕುತುಬು ದ್ದೀನ್ ಐಬಕ್ ನಾಶಪಡಿಸಿದ್ದ.
12ನೇ ಶತಮಾನದಲ್ಲಿ ಹಿಂದೂ ಅರಸರ ಪ್ರಾಬಲ್ಯ ಕಡಿಮೆಯಾದ್ದರಿಂದ ಮಥುರಾ ಮತ್ತು ಸುತ್ತಮುತ್ತಲಿನ ಎಲ್ಲಾ ಬೌದ್ಧ, ಜೈನ ಮತ್ತು ಹಿಂದೂ ದೇವಾಲಯಗಳು ನಾಶವಾದವು. ಬೌದ್ಧಧರ್ಮವು ಈ ದಾಳಿಯಿಂದ ಚೇತರಿಸಿಕೊಳ್ಳಲಿಲ್ಲ... ನಂತರದ ನಾಲ್ಕು ಶತಮಾನ ಗಳವರೆಗೆ ಜೈನ, ಹಿಂದೂ ದೇವಾಲಯಗಳನ್ನು ನಾಶಮಾಡುತ್ತಲೇ ಇದ್ದರು" ಎನ್ನುತ್ತಾರೆ ಮೀನಾಕ್ಷಿಜೈನ್.
ಜಹಾಂಗೀರನ ಆಳ್ವಿಕೆಯಲ್ಲಿ (1605-1627) ಬೀರ್ಸಿಂಗ್ ದೇವ್ ಬುಂದೇಲಾ ಕೇಶವದೇವ ದೇವಾಲಯವನ್ನು ಪುನರ್‌ನಿರ್ಮಾಣ ಮಾಡಿದ್ದರು ಎಂದು ವೆನೆಷಿಯನ್ ಬರಹಗಾರ ಮತ್ತು ಪ್ರವಾಸಿಗ ನಿಕೊಲಾವ್ ಮನುಕ್ಕಿ ಹೇಳುತ್ತಾನೆ. ಅಲ್ಲದೆ ದೇವಾಲಯದ ಎತ್ತರ ಎಷ್ಟಿತ್ತೆಂದರೆ ಅದರ ಮೇಲ್ಭಾಗವನ್ನು ಆಗ್ರಾದಿಂದಲೂ ಕಾಣಬಹುದಿತ್ತು ಎಂದೂ ಆತ ದಾಖಲಿಸಿದ್ದಾನೆ.
ಮೊಘಲ್ ಅರಸ ಔರಂಗಜೇಬ್ (1658-1707) 1669ರಲ್ಲಿ ಹಿಂದೂ ಶಾಲೆಗಳು ಮತ್ತು ದೇವಾಲಯಗಳನ್ನು ಕೆಡವಲು ಆದೇಶ ಹೊರಡಿಸಿ 1670ರಲ್ಲಿ ಕಟ್ರ ಕೇಶವದೇವ ದೇವಾಲಯವನ್ನೂ ನಾಶಮಾಡಲು ಸೂಚಿಸುತ್ತಾನೆ. ಇದನ್ನು ಚರಿತ್ರಕಾರ ಸಾಕಿ ಮುಸ್ತೈದ್ ಖಾನ್ ದಾಖಲಿಸಿದ್ದು, ಅದೇ ಸ್ಥಳದಲ್ಲಿ ಎತ್ತರದ ಮಸೀದಿಯನ್ನು ನಿರ್ಮಿಸ ಲಾಗುತ್ತದೆ ಎಂದು ಹೇಳಿದ್ದಾನೆ.
ಇದಾಗಿ 1770ರಲ್ಲಿ ಮರಾಠ ಅರಸರು ಮಥುರಾ, ಆಗ್ರಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾಗ, ಮಥುರಾದ ಕಟ್ರ ಕೇಶವದೇವ ದೇಗುಲದ ಪೂರ್ಣ ಪ್ರದೇಶವನ್ನು ನಜುಲ್ (ಸರಕಾರಿ ಭೂಮಿ) ಎಂದು ಘೋಷಿಸುತ್ತಾರೆ. 1803ರಲ್ಲಿ ಮರಾಠರನ್ನು ಈ ಇಂಡಿಯಾ ಕಂಪನಿ ಸೋಲಿಸಿದ್ದಾಗಲೂ, ಇದನ್ನು ನಜುಲ್ ಭೂಮಿ ಎಂದು ಪರಿಗಣಿಸುವು ದನ್ನೇ ಮುಂದುವರಿಸಲಾಗುತ್ತದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸ್ಥಾಪಕ ಡೈರೆಕ್ಟರ್ ಜನರಲ್ ಆಗಿದ್ದ ಅಲೆಕ್ಸಾಂಡರ್ ಕನ್ನಿಂಗ್‌ಹ್ಯಾಮ್, ಮಥುರಾದ ಜಾಮಾ ಮಸೀದಿಯಲ್ಲಿ ಕೂಡ ಸಮೀಕ್ಷೆ ಗಳನ್ನು ನಡೆಸಿ ಅಲ್ಲಿ ನಾಗರಿ ಶಾಸನಗಳಿದ್ದದ್ದನ್ನು ಕಂಡುಕೊಂಡಿದ್ದ. ಔರಂಗಜೇಬ್ ಆಳ್ವಿಕೆಯ ಆರಂಭದಲ್ಲಿ ಹಿಂದೂ ದೇವಾಲಯ ಮಥುರಾದಲ್ಲಿತ್ತು ಎನ್ನುವುದು ಕನ್ನಿಂಗ್ ಹ್ಯಾಮ್‌ನ ಅಭಿಪ್ರಾಯವಾಗಿತ್ತು.
ಕೇಶವದೇವ ದೇವಾಲಯ ಭಾರತದಲ್ಲಿನ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿರ ಬೇಕು ಎಂದೇ ಆತ ಅಂದಾಜಿಸಿದ್ದಾನೆ. 1815ರಲ್ಲಿ ಕಟ್ರ ಕೇಶವದೇವ ದೇವಸ್ಥಾನದ ಭೂಮಿ ಯನ್ನು (13.37 ಎಕರೆ) ರಾಜ ಪಟ್ನಿಮಲ್‌ಗೆ ಹರಾಜಿನ ಮೂಲಕ ಮಾರಾಟ ಮಾಡಿದ್ದನ್ನು ಅಂದಿನ ಕಂದಾಯ ಮತ್ತು ಪುರಸಭೆಯ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಿಸಲಾಗಿದೆ. ಈ ಜಮೀನು ಮಾರಾಟದ ವಿರುದ್ಧ ಮುಸ್ಲಿಮರು ಸಲ್ಲಿಸಿದ್ದ ದೂರುಗಳನ್ನು ಅಂದಿನ ನ್ಯಾಯಾಲಯಗಳು ಮತ್ತು ಬ್ರಿಟಿಷ್ ಆಡಳಿತ ಹಲವು ಬಾರಿ ತಿರಸ್ಕರಿಸಿತ್ತು. ಈ ಭೂಮಿ ಮಸೀದಿಗೆ ಸೇರಿಲ್ಲ ಮತ್ತು ಮುಸ್ಲಿಂವಾದಿಗಳ ಸ್ವಾಧೀನದಲ್ಲಿಲ್ಲ.
ಕಟ್ರ ಕೇಶವದೇವರನ್ನು ಕಟ್ರ ಈದ್ಗಾ ಎಂದು ಎಲ್ಲಿಯೂ ಹೇಳಲಾಗಿಲ್ಲ ಎಂಬುದನ್ನೂ ಬ್ರಿಟಿಷರ ಕಾಲದ ಸ್ಪಷ್ಟಪಡಿಸಲಾಗಿತ್ತು. ಈ ವಿಚಾರಗಳ ಬಗ್ಗೆ ಡಾ.ಮೀನಾಕ್ಷಿ ಜೈನ್‌ರ ಪುಸ್ತಕದಲ್ಲಿ ಆಳವಾದ ವಿವರಣೆಯಿದೆ.
ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಸಮಯದ ಅಭಾವದ ನಡುವೆಯೂ ಡಾ.ಮೀನಾಕ್ಷಿ ಜೈನ್ ಅವರು ಕಾಶಿ, ಮಥುರಾದ ಕರುಣಾಜನಕ ಕಥೆಗಳನ್ನು ಕೇಳುಗರ ಮನಮುಟ್ಟುವಂತೆ ವಿವರಿಸಿದ್ದರು. ಆಯೋಜಕರು ಇಂಥ ವಿಷಯಗಳ ಬಗೆಗಿನ ಮಾತುಕತೆಗಳನ್ನು ಮತ್ತಷ್ಟು ಅವಧಿಗೆ ವಿಸ್ತರಿಸಬೇಕು ಎಂದು ಕೇಳುಗರಿಗೆ ಅನಿಸಿದ್ದು ಸುಳ್ಳಲ್ಲ.