Roopa Gururaj Column: ಶನೈಶ್ವರನ ವಾಹನ ಕಾಗೆ: ಶರಣಾಗತಿಯ ಕಥೆ
ವಿಷ್ಣುವಿನ ಕೋಪಕ್ಕೆ ಹೆದರಿದ ಕಾಕಾಸುರನು ಪ್ರಾಣಭಯದಿಂದ ಮುಕ್ಕಣ್ಣ ಶಿವನ ಬಳಿಗೆ ಓಡಿ ಹೋಗಿ ರಕ್ಷಿಸುವಂತೆ ಬೇಡಿಕೊಂಡನು. ಆದರೆ ಈಶ್ವರನು, ಲೋಕಮಾತೆಗೆ ಅಪಚಾರ ಮಾಡಿದ ನಿನಗೆ ಶಿಕ್ಷೆ ಖಂಡಿತ. ನಾರಾಯಣನ ಕೋಪದಿಂದ ನಿನ್ನನ್ನು ಉಳಿಸಲು ನನ್ನಿಂದಲೂ ಸಾಧ್ಯವಿಲ್ಲ. ನಿನಗೆ ಈಗ ದಾರಿ ತೋರಿಸಬಲ್ಲವನು ಶನೈಶ್ಚರ ಮಾತ್ರ. ಆತನ ಪಾದಕ್ಕೆ ಶರಣಾಗು ಎಂದು ಸಲಹೆ ನೀಡಿದನು.
-
ಒಂದೊಳ್ಳೆ ಮಾತು
ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬ ದೇವರಿಗೂ ಒಂದು ವಿಶಿಷ್ಟ ವಾಹನವಿದೆ. ನ್ಯಾಯದೇವನಾದ ಶನೈಶ್ಚರನಿಗೆ (ಶನಿ ದೇವ) ಕಾಗೆಯು ವಾಹನ. ಕಾಗೆಯನ್ನು ಸಾಮಾನ್ಯವಾಗಿ ಜನರು ಅಶುಭ ಎಂದು ಭಾವಿಸಿದರೂ, ಶನಿದೇವನ ವಾಹನವಾದ ಮೇಲೆ ಅದಕ್ಕೆ ಆಧ್ಯಾತ್ಮಿಕ ಮಹತ್ವ ಲಭಿಸಿದೆ. ಇದರ ಹಿಂದೆ ದೇವಲೋಕದ ಕುತೂಹಲಕಾರಿ ಕಥೆಯೊಂದಿದೆ.
ದೇವಲೋಕದಲ್ಲಿ ಕಾಕಾಸುರನೆಂಬ ರಾಕ್ಷಸನಿದ್ದನು. ಅವನಿಗೆ ಅಹಂಕಾರ ವಿಪರೀತ ವಾಗಿತ್ತು. ಒಮ್ಮೆ ಜಗನ್ಮಾತೆಯಾದ ಲಕ್ಷ್ಮೀ ದೇವಿಯು ಏಕಾಂತದಲ್ಲಿ ಸ್ನಾನ ಮಾಡುತ್ತಿದ್ದಾಗ, ಕಾಕಾಸುರನು ಮರೆಯಲ್ಲಿ ನಿಂತು ಕದ್ದು ನೋಡುವ ದುಸ್ಸಾಹಸ ಮಾಡಿದನು. ಇದನ್ನು ಗಮನಿಸಿದ ಮಾತೆ ಲಕ್ಷ್ಮಿಯು ಅತ್ಯಂತ ಅವಮಾನಿತಳಾಗಿ ಕಿರುಚಿಕೊಂಡಳು.
ದೇವಿಯ ಮೊರೆ ಕೇಳಿದ ಮಹಾವಿಷ್ಣುವು ತಕ್ಷಣ ಅಲ್ಲಿಗೆ ಧಾವಿಸಿ ಬಂದನು. ನಡೆದ ಘಟನೆಯನ್ನು ತಿಳಿದ ವಿಷ್ಣುವು ಅತ್ಯಂತ ಕ್ರೋಧಿತನಾಗಿ, ಧರ್ಮದ ಮರ್ಯಾದೆ ಮೀರಿದ ಕಾಕಾಸುರನನ್ನು ಸಂಹರಿಸಲು ಸುದರ್ಶನ ಚಕ್ರವನ್ನು ಪ್ರಯೋಗಿಸಿ ಬೆನ್ನಟ್ಟಿದನು.
ಇದನ್ನೂ ಓದಿ: Roopa Gururaj Column: ಬೃಹದೀಶ್ವರ ದೇವಾಲಯದ ಮುಂದಿನ ಅಳಗಿ ಕೊಳ
ವಿಷ್ಣುವಿನ ಕೋಪಕ್ಕೆ ಹೆದರಿದ ಕಾಕಾಸುರನು ಪ್ರಾಣಭಯದಿಂದ ಮುಕ್ಕಣ್ಣ ಶಿವನ ಬಳಿಗೆ ಓಡಿ ಹೋಗಿ ರಕ್ಷಿಸುವಂತೆ ಬೇಡಿಕೊಂಡನು. ಆದರೆ ಈಶ್ವರನು, ಲೋಕಮಾತೆಗೆ ಅಪಚಾರ ಮಾಡಿದ ನಿನಗೆ ಶಿಕ್ಷೆ ಖಂಡಿತ. ನಾರಾಯಣನ ಕೋಪದಿಂದ ನಿನ್ನನ್ನು ಉಳಿಸಲು ನನ್ನಿಂದಲೂ ಸಾಧ್ಯವಿಲ್ಲ. ನಿನಗೆ ಈಗ ದಾರಿ ತೋರಿಸಬಲ್ಲವನು ಶನೈಶ್ಚರ ಮಾತ್ರ. ಆತನ ಪಾದಕ್ಕೆ ಶರಣಾಗು ಎಂದು ಸಲಹೆ ನೀಡಿದನು.
ಕೊನೆಗೆ ಕಾಕಾಸುರನು ಶನೈಶ್ಚರನ ಪಾದಗಳಿಗೆ ಬಿದ್ದು ಕ್ಷಮೆ ಯಾಚಿಸಿದನು. ಅಷ್ಟರಲ್ಲಿ ಅಲ್ಲಿಗೆ ಬಂದ ವಿಷ್ಣುವು ಅಪರಾಽಯನ್ನು ತನಗೆ ಒಪ್ಪಿಸುವಂತೆ ಕೇಳಿದನು. ಆಗ ಶನೈಶ್ಚರನು ಶಾಂತನಾಗಿ, “ಪ್ರಭು, ಶರಣು ಬಂದವರನ್ನು ರಕ್ಷಿಸುವುದು ಧರ್ಮ. ಇವನು ಮಾಡಿದ ತಪ್ಪಿಗೆ ತಕ್ಕ ಪ್ರಾಯಶ್ಚಿತ್ತ ವಾಗಲಿ" ಎಂದು ಹೇಳಿ, “ನಿನ್ನ ಒಂದು ಕಣ್ಣನ್ನು ಕಿತ್ತು ನಾರಾಯಣನ ಪಾದಕ್ಕೆ ಅರ್ಪಿಸು" ಎಂದು ಕಾಕಾಸುರನಿಗೆ ಸೂಚಿಸಿದನು.
ಕಾಕಾಸುರನು ಅದರಂತೆ ಮಾಡಿದನು. ಈ ಕಾರಣಕ್ಕಾಗಿಯೇ ಇಂದಿಗೂ ಕಾಗೆಗಳು ಒಂದು ಕಣ್ಣಿ ನಿಂದ ಮಾತ್ರ ನೇರವಾಗಿ ನೋಡಬಲ್ಲವು ಎಂಬ ನಂಬಿಕೆಯಿದೆ ನಾರಾಯಣನು ಶಾಂತನಾದರೂ, ಕಾಕಾಸುರನಿಗೆ ತನ್ನ ತಪ್ಪಿನ ಅರಿವಾಗಿತ್ತು. ಅವನು ಶನೈಶ್ಚರನ ನ್ಯಾಯಪರತೆಗೆ ಮನಸೋತು, “ಸ್ವಾಮಿ, ಇಂದಿನಿಂದ ನಾನು ನಿನ್ನನ್ನು ಬಿಟ್ಟಿರಲಾರೆ. ನನ್ನನ್ನು ನಿನ್ನ ವಾಹನವಾಗಿ ಸ್ವೀಕರಿಸಿ ಪಾವನಗೊಳಿಸು" ಎಂದು ಪ್ರಾರ್ಥಿಸಿದನು. ಶನೈಶ್ಚರನು ಅವನ ಪ್ರಾರ್ಥನೆಯನ್ನು ಮನ್ನಿಸಿ, ಅವನನ್ನು ಕಾಗೆಯ ರೂಪದಲ್ಲಿ ತನ್ನ ವಾಹನ ವನ್ನಾಗಿ ಮಾಡಿಕೊಂಡನು.
ಕಾಗೆಯು ಶನಿದೇವನ ವಾಹನವಾದ ನಂತರ, ಅದು ಪಿತೃದೇವತೆಗಳ ಸಂಕೇತವೂ ಆಯಿತು. ಕಾಗೆಗೆ ಅನ್ನ ಹಾಕಿದರೆ ಶನಿದೇವನು ಪ್ರಸನ್ನನಾಗುತ್ತಾನೆ ಮತ್ತು ಪಿತೃಗಳ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಸನಾತನ ಧರ್ಮದಲ್ಲಿ ಭದ್ರವಾಯಿತು.
ಕಾಗೆಗಳು ಪ್ರಕೃತಿಯ ‘ಸ್ವಚ್ಛತಾ ಕಾರ್ಮಿಕರು’. ಅವು ಸತ್ತ ಪ್ರಾಣಿಗಳನ್ನು ಅಥವಾ ಕೊಳೆತ ಆಹಾರ ವನ್ನು ತಿಂದು ಪರಿಸರವನ್ನು ಶುಚಿಯಾಗಿಡುತ್ತವೆ. ನಮ್ಮ ಹಿರಿಯರು ಇವುಗಳನ್ನು ದೈವಿಕ ಕೆಲಸಕ್ಕೆ ಜೋಡಿಸಿದ್ದರಿಂದ, ಜನರು ಈ ಪಕ್ಷಿಗಳನ್ನು ಸಂರಕ್ಷಿಸುವಂತಾಯಿತು.
ನಮ್ಮ ಸನಾತನ ಧರ್ಮದ ಎಲ್ಲ ಪುರಾಣ ಕಥೆಗಳಲ್ಲೂ ಮನುಷ್ಯ ಮತ್ತು ಪ್ರಕೃತಿಯ ನಡುವೆ, ವಿಶೇಷವಾಗಿ ಪ್ರಾಣಿ-ಪಕ್ಷಿಗಳ ಜತೆಗಿನ ಸೌಹಾರ್ದದ ಬದುಕನ್ನು ಬಿಂಬಿಸಲು ಅವುಗಳನ್ನು ನಮ್ಮ ದೇವತೆಗಳ ವಾಹನವನ್ನಾಗಿ, ಅಥವಾ ದೇವತೆಗಳಾಗಿ ಸ್ವೀಕರಿಸಲಾಗಿದೆ.
ಇದರಿಂದಾಗಿ ನಮಗೆ ಪ್ರಾಣಿ-ಪಕ್ಷಿಗಳ ಬಗ್ಗೆ ಇರುವಂಥ ಭಾವನೆಗಳು ದೈವಿಕವಾಗಿ ಒಳಗೊಳ್ಳುತ್ತಾ ಅವುಗಳನ್ನು ನೋಡುವ ಮತ್ತು ನಮ್ಮ ಜೀವನದ ಒಂದು ಭಾಗವಾಗಿಸಿ ಕೊಳ್ಳುವ ರೀತಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ.
ಇಂಥ ಕಥೆಗಳನ್ನ ನಮ್ಮ ಮಕ್ಕಳಿಗೂ ಹೇಳಿದಾಗ, ಪ್ರಕೃತಿಯೊಡನೆ, ಸಕಲ ಪ್ರಾಣಿ-ಪಕ್ಷಿಗಳ ಜತೆಗೆ ಸೌಹಾರ್ದನಿಂದ ಬದುಕುವ ಗುಣವನ್ನು ಅವರಲ್ಲಿ ಬೆಳೆಸಿದಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಮನುಷ್ಯರಾಗಿ ಈ ಭೂಮಿಯ ಒಂದು ಭಾಗ ಮಾತ್ರ. ಇಲ್ಲಿ ಸಕಲ ಜೀವಿಗಳಿಗೂ ಬದುಕುವ ಸಮಾನ ಹಕ್ಕಿದೆ. ಎಲ್ಲ ಜೀವಿಗಳನ್ನು ಅವುಗಳ ಬದುಕನ್ನು ಗೌರವಿಸುವ ಕೆಲಸ ನಮ್ಮಿಂದಾಗಬೇಕು. ಆಗ ಮಾತ್ರ ಭೂಮಿಯಲ್ಲಿ ಬದುಕಲು ನಾವು ಅರ್ಹರಾಗುತ್ತೇವೆ...