ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka Mathapathy Column: ಕೃಷ್ಣೆಗೆ ಅಂಟಿದ ದುಷ್ಟ ರಾಜಕಾರಣದ ರೋಗ

ಕೃಷ್ಣಾ ನದಿ ಉತ್ತರ ಕರ್ನಾಟಕದ ಜನರ ಪಾಲಿನ ಜೀವನದಿ. ಆದರೆ ಈ ಭಾಗದ ರಾಜಕಾರಣಿಗಳ ರಾಜ ಕೀಯ ಲಾಭಕ್ಕೆ ಸಿಲುಕಿ ಕೃಷ್ಣಾನದಿ ಅಕ್ಷರಶಃ ನಲುಗಿಹೋಗಿದೆ. ಬತ್ತಿದ ನದಿ ನೋಡುತ್ತ ನೀರಿಗಾಗಿ ಜನ ಪರಿತಪಿಸುತ್ತಿದ್ದರೆ, ಇದೆಲ್ಲ ನಮಗೆ ಸಂಬಂಧವಿಲ್ಲ ಎಂಬಂತೆ ಈ ಭಾಗದ ರಾಜಕಾರಣಿಗಳು ವರ್ತಿಸು ತ್ತಾರೆ. ಚುನಾವಣೆ ಬಂತೆಂದರೆ ಸಾಕು ನಾಟಕಮಾಡುತ್ತಾ ಜನರಿಂದ ವೋಟು ಪಡೆಯುತ್ತಾರೆ.

ಕೃಷ್ಣೆಗೆ ಅಂಟಿದ ದುಷ್ಟ ರಾಜಕಾರಣದ ರೋಗ

Profile Ashok Nayak Apr 30, 2025 9:35 AM

ರಾಜಬೀದಿ

ವಿನಾಯಕ ಮಠಪತಿ

ಚುನಾವಣೆ ಸಮೀಪಿಸುತ್ತಿತ್ತು, ಇತ್ತ ಬೇಸಗೆ ಕಾವು ನಿಧಾನಕ್ಕೆ ಏರತೊಡಗಿತ್ತು. ನೋಡನೋಡು ತ್ತಿದ್ದಂತೆ ನದಿಯ ಒಡಲು ಬರಿದಾಗತೊಡಗಿತ್ತು. 40 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಜನ ಚಡಪಡಿಸುತ್ತಿದ್ದರು. ಆದರೆ ಜನರಿಗೆ ಈ ಬಾರಿ ಅಚ್ಚರಿ. ಪ್ರತಿಭಟನೆ ನಡೆಸುವ ಮೊದಲೇ ನದಿಗೆ ನೀರು. ಯುದ್ಧ ಗೆದ್ದು ನೀರು ತಂದವರಂತೆ ನದಿ ಹರಿದುಹೋಗುವ ಆಯಾ ತಾಲೂಕಿನ ರಾಜಕೀಯ ನಾಯಕರು ಹಾಳೆಯೊಂದನ್ನು ಹಿಡಿದು ಹಾದಿಗೆ ನಿಂತಿದ್ದರು. ತಮಗೆ ತಾವೇ ಬೆನ್ನು ತಟ್ಟಿಕೊಳ್ಳುವ ಈ ನಟನೆಯನ್ನು ಉತ್ತರ ಕರ್ನಾಟಕದ ಕೃಷ್ಣಾ ನದಿ ಪಾತ್ರದ ಜನ ಚುನಾವಣೆ ಸಂದರ್ಭದಲ್ಲಿ ನೋಡಿ ಆನಂದಿಸಿದ್ದು ಮಾತ್ರವಲ್ಲ ತಮ್ಮ ನಾಯಕರನ್ನು ಹೊತ್ತು ಮೆರೆಸಿದ್ದರು.

ಪ್ರತಿ ವರ್ಷ ಬೇಸಗೆ ಆರಂಭವಾಗುತ್ತಿದ್ದಂತೆ ಕೃಷ್ಣಾ ನದಿ ತೀರದ ಜನ ಹನಿ ನೀರಿಗಾಗಿ ಮಹಾರಾಷ್ಟ್ರ ದತ್ತ ಮುಖ ಮಾಡಿ ನಿಲ್ಲಬೇಕು. ರಾಜಕೀಯ ನಾಯಕರಿಗೆ ಮನವಿಗಳ ಮೇಲೆ ಮನವಿ ಕೊಟ್ಟರೂ ಪ್ರಯೋಜನವಿಲ್ಲ. ಆದರೆ ಯಾವುದಾದರೂ ಚುನಾವಣೆ ಬಂದರೆ ಸಾಕು ಮಹಾರಾಷ್ಟ್ರ ನಾಯಕರ ಮನೆ ಬಾಗಿಲಿಗೆ ಅಡ್ಡಾಡಿ ನಮ್ಮ ರಾಜಕಾರಣಿಗಳು ನೀರು ಬಿಡಿಸುತ್ತಾರೆ.

ಬಿಟ್ಟ ನೀರನ್ನು ಹಿಡಿದುಕೊಂಡು ಗಂಗೆಯನ್ನೇ ಧರೆಗೆ ತಂದ ಭಗೀರಥ ಇವರೇ ಎಂಬಂತೆ ಆಡು ತ್ತಾರೆ. ರಾಜ್ಯದಲ್ಲಿ ಕೃಷ್ಣಾನದಿ ಹರಿದುಹೋಗುವ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ರಾಜಕೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ಆಡುವ ನಾಟಕ ಉಳಿದ ಸಮಯದಲ್ಲಿ ಕಾಣುವುದಿಲ್ಲ.

ಕೃಷ್ಣಾ ನದಿ ಉತ್ತರ ಕರ್ನಾಟಕದ ಜನರ ಪಾಲಿನ ಜೀವನದಿ. ದಕ್ಷಿಣದಲ್ಲಿ ಕಾವೇರಿ ಹೇಗೋ, ಉತ್ತರದಲ್ಲಿ ಕೃಷ್ಣೆಯೂ ಹಾಗೆಯೇ. ಆದರೆ ಉತ್ತರ ಕರ್ನಾಟಕದ ರಾಜಕಾರಣಿಗಳ ರಾಜಕೀಯ ಲಾಭಕ್ಕೆ ಸಿಲುಕಿ ಕೃಷ್ಣಾನದಿ ಅಕ್ಷರಶಃ ನಲುಗಿಹೋಗಿದೆ. ಬತ್ತಿದ ನದಿ ನೋಡುತ್ತ ನೀರಿಗಾಗಿ ಜನ ಪರಿತಪಿಸುತ್ತಿದ್ದರೆ, ಇದೆಲ್ಲ ನಮಗೆ ಸಂಬಂಧವಿಲ್ಲ ಎಂಬಂತೆ ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳು ವರ್ತಿಸುತ್ತಾರೆ.

ಇದನ್ನೂ ಓದಿ: Vinayaka Mathapathy Column: ಮಹಾ ಕುಂಭಮೇಳ: ಹೀಗೊಂದು ಫ್ಲ್ಯಾಷ್ ಬ್ಯಾಕ್!

ಆದರೆ ಅದೇ ಚುನಾವಣೆ ಬಂತೆಂದರೆ ಸಾಕು ನಿರಂತರ ನಾಟಕಮಾಡುತ್ತಾ ಜನರಿಂದ ವೋಟು ಪಡೆಯುತ್ತಾರೆ. ಹೌದು, ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಪಕ್ಕದ ರಾಜ್ಯ ಮಹಾರಾಷ್ಟ್ರವು ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿದೆ. ಉಭಯ ರಾಜ್ಯಗಳ ಮಧ್ಯೆ ನದಿ ನೀರು ಹಂಚಿಕೆ ಒಪ್ಪಂದ ಇದ್ದರೂ ಅದು ಈವರೆಗೂ ಜಾರಿಯಾಗಿಲ್ಲ. ಪ್ರತಿ ಬೇಸಗೆ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು.

ಅವರ ಕೈ, ಕಾಲು ಹಿಡಿದು ಒಂದೆರಡು ಟಿಎಂಸಿ ನೀರು ಬಿಡಿಸಿಕೊಂಡು ಬಂದರಾಯ್ತು. ಆದರೆ ಈ ಕೆಲಸವನ್ನು ಉತ್ತರ ಕರ್ನಾಟಕದ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಅಚ್ಚು ಕಟ್ಟಾಗಿ ನಿರ್ವಹಿಸುತ್ತಾರೆ. ಉಳಿದ ಸಂದರ್ಭದಲ್ಲಿ ಕೃಷ್ಣಾ ನದಿ ಪಕ್ಕದಲ್ಲಿ ಸುಳಿಯುವ ಕೆಲಸ ವನ್ನೂ ಮಾಡುವುದಿಲ್ಲ. ಸಾಮಾನ್ಯವಾಗಿ ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೂ ಕೃಷ್ಣಾ ನದಿ ನೀರಿನ ಅಭಾವ ಕಾಡುತ್ತದೆ.

62 ಋ

ವರ್ಷಪೂರ್ತಿ ಬೆಳೆದ ಕಬ್ಬು ಈ ಮೂರು ತಿಂಗಳಲ್ಲಿ ನೀರಿಲ್ಲದೆ ಒಣಗಿ ನೆಲ ಕಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಕೋಯ್ನಾ ಜಲಾಶಯದಲ್ಲಿ ನೀರಿ ದ್ದರೂ ಅಲ್ಲಿನ ಸರಕಾರ ಒಂದೆರಡು ಟಿಎಂಸಿ ನೀರು ಬಿಡುವುದಿಲ್ಲ. ಮಹಾರಾಷ್ಟ್ರ ಸರಕಾರದ ಮೇಲೆ ರಾಜ್ಯ ಸರಕಾರವೂ ಒತ್ತಡ ಹೇರುವ ಪ್ರಯತ್ನ ನಡೆಸುವುದಿಲ್ಲ. ಆದರೆ ಜೂನ್ ಕಳೆದು ಜುಲೈ ಸಮೀಪಿಸುತ್ತಿದ್ದಂತೆ ಮಹಾರಾಷ್ಟ್ರ ಮಾಹಿತಿ ನೀಡದೆ ಕೃಷ್ಣೆಗೆ ನೀರು ಹರಿಸುತ್ತದೆ.

ಪ್ರವಾಹ ಉಂಟಾಗಿ ಕೃಷ್ಣಾ ನದೀಪಾತ್ರದ ಜನರ ಬದುಕು ಬೀದಿಗೆ ಬಿದ್ದರೂ ರಾಜಕಾರಣಿಗಳನ್ನು ಪ್ರಶ್ನೆ ಮಾಡದ ಪರಿಸ್ಥಿತಿ ಇಲ್ಲಿದೆ.

ಬೇಕು ಶಾಶ್ವತ ಪರಿಹಾರ

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರಕಾರ ಹಾಗೂ ದಕ್ಷಿಣ ಭಾಗದ ರಾಜಕೀಯ ನಾಯಕರು ನಡೆದುಕೊಳ್ಳುವ ರೀತಿ ಹಾಗೂ ಪ್ರತಿಭಟಿಸುವ ಪರಿ ಯಾವತ್ತೂ ಶ್ಲಾಘನೀಯ. ಆದರೆ ಉತ್ತರದ ಕೃಷ್ಣಾ ನದಿ ವಿಚಾರವಾಗಿ ಇಲ್ಲಿನ ರಾಜಕಾರಣಿಗಳು ಅಧಿವೇಶನ ಸಂದರ್ಭದಲ್ಲಿ ಅರಚಿಕೊಳ್ಳುವುದು ಬಿಟ್ಟರೆ ಹೋರಾಟಕ್ಕೆ ಇಳಿಯುವುದು ತೀರಾ ಕಡಿಮೆ. ಕೇವಲ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕುತ್ತ ದಿನಗಳೆಯುತ್ತಾರೆ.

ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಈ ಹಿಂದೆ 2004ರಿಂದ 2015ರವರೆಗೆ ರಾಜ್ಯದಿಂದ ಮಹಾರಾಷ್ಟ್ರಕ್ಕೆ, ಬರಗಾಲ ಸಂದರ್ಭದಲ್ಲಿ ಹಣ ಕೊಟ್ಟು ನೀರು ಬಿಡಿಸಿಕೊಳ್ಳುತ್ತಾ ಬರಲಾಗಿತ್ತು. ಆದರೆ ೨೦೧೬ಕ್ಕೆ ಮಹಾರಾಷ್ಟ್ರವು ನದಿ ನೀರು ವಿನಿಮಯ ಒಪ್ಪಂದಕ್ಕೆ ಬರುವಂತೆ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ವಿಜಯಪುರದ ಕೃಷ್ಣಾ ನದಿಯಿಂದ ಪ್ರಾರಂಭವಾಗುವ ತುಬಚಿ-ಬಬಲೇಶ್ವರ ಏತ ನೀರಾವರಿ ಮೂಲಕ ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನಾಲ್ಕು ಟಿಎಂಸಿ ನೀರು ಕೊಟ್ಟರೆ ಅತ್ತ ಮಹಾರಾಷ್ಟ್ರ ರಾಜ್ಯಕ್ಕೆ ನಾಲ್ಕು ಟಿಎಂಸಿ ನೀರು ಬಿಡುತ್ತೇವೆ ಎಂಬ ಒಪ್ಪಂದಕ್ಕೆ ಬಂದಿತ್ತು.

ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯ ತಿಕೋಟಾ ನೀರು ವಿತರಣಾ ಕೇಂದ್ರದಿಂದ ಸುಮಾರು 30 ಕಿ.ಮೀ. ಪೈಪ್‌ಲೈನ್ ಅಳವಡಿಕೆ ಮಾಡಿ ಜತ್ತ ತಾಲೂಕಿಗೆ ನೀರು ಹರಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕಾಗಿದೆ. 2016ರಲ್ಲಿ ಕಾಮಗಾರಿ ವೆಚ್ಚ ಕೇವಲ 300 ಕೋಟಿ ರು. ಇದ್ದಿದ್ದು ಸದ್ಯ ಈ ಯೋಜನೆ ಒಟ್ಟು ಮೊತ್ತ ಮೂರು ಪಟ್ಟು ಹೆಚ್ಚಾಗಿದೆ. ಒಂದು ವೇಳೆ ಕರ್ನಾಟಕ ಸರಕಾರ ಈ ಕಾಮಗಾರಿ ಮಾಡಿದ್ದೇ ಆದರೆ ಅತ್ತ ಮಹಾರಾಷ್ಟ್ರದಿಂದ ಪ್ರತಿ ಬೇಸಗೆ ಸಂದರ್ಭದಲ್ಲಿ ನಾಲ್ಕು ಟಿಎಂಸಿ ನೀರು ಪಡೆಯಬಹುದು.

ಇಲ್ಲವಾದರೆ ಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಬೇಡಿಕೊಂಡು ನೀರು ಹರಿಸು ವುದು ನಂತರದ ದಿನಗಳಲ್ಲಿ ಇತ್ತ ಕಡೆ ತಿರುಗಿ ನೋಡದ ರಾಜಕೀಯ ನಾಯಕರ ವಿರುದ್ಧ ಜನ ಹಿಡಿಶಾಪ ಹಾಕುತ್ತಲೇ ಇರುವ ಪರಿಸ್ಥಿತಿ ಮುಂದುವರಿಯಲಿದೆ.

ಇದೇ ಏಪ್ರಿಲ್ ಮೊದಲ ವಾರದಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಕೃಷ್ಣಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದು ಬಿಟ್ಟರೆ ರಾಜ್ಯದ ಯಾವೊಬ್ಬ ನಾಯಕರೂ ನಿಯೋಗದ ಜತೆ ಮಹಾರಾಷ್ಟ್ರ ಸರಕಾರಕ್ಕೆ ಒತ್ತಡ ಹೇರುವ ಪ್ರಯತ್ನ ಮಾಡಿಲ್ಲ. ಅಷ್ಟೇ ಅಲ್ಲದೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ರಾಜ್ಯದ ಯಾವೊಬ್ಬ ಜಿಲ್ಲಾ ನಾಯಕರೂ ನದಿ ನೀರು ಬಿಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.

ಆದರೆ ಅಧಿವೇಶನ ಸಂದರ್ಭದಲ್ಲಿ ಉತ್ತರ ಕರ್ನಾಟಕ ನೀರಾವರಿ ಯೋಜನೆ ಕುರಿತು ಉದ್ದುದ್ದ ಭಾಷಣ ಮಾಡುವುದರಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ಸದ್ಯ ಕೃಷ್ಣಾ ನದಿ ಪಾತ್ರದ ಜನರ ಪರಿಸ್ಥಿತಿ ಯಾವ ಮಟ್ಟಿಗಿದೆ ಎಂದರೆ ಬಿಸಿಲು ಹೆಚ್ಚಾದಂತೆ ನೀರಿಗಾಗಿ ಹೋರಾಡಬೇಕು. ನಂತರ ಮಳೆಗಾಲ ದಲ್ಲಿ ಪ್ರವಾಹಕ್ಕೆ ಸಿಲುಕಿ ಊರು ಬಿಟ್ಟು ಹೋಗಬೇಕು. ಈ ಮಧ್ಯೆ ಪರಿಹಾರದ ರೂಪದಲ್ಲಿ ಸರಕಾರ ಗಳು ಕೊಡುವ ಅಲ್ಪ ಹಣ ಇತ್ತ ಬೆಳೆಗೆ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ.

ಇನ್ನು, ಅವಶ್ಯಕತೆ ಇದ್ದಾಗ ನೀರು ಬಿಡದ ಮಹಾರಾಷ್ಟ್ರ ಸರಕಾರ ಮಳೆಗಾಲದ ಸಂದರ್ಭದಲ್ಲಿ ವಿಪರೀತ ನೀರು ಹರಿಸಿ ರಾಜ್ಯದ ಕೃಷ್ಣಾ ನದಿ ಪಾತ್ರದ ಜನರ ಜೀವ ಹಿಂಡುವ ಕೆಲಸ ಮಾಡುತ್ತದೆ. ಇದರಿಂದ ಜನರಿಗೆ ಮುಕ್ತಿ ಬೇಕಿದೆ. ಈ ಕುರಿತು ಉತ್ತರ ಕರ್ನಾಟಕ ಭಾಗದ ನಾಯಕರು ಗಂಭೀರ ವಾಗಿ ಚಿಂತನೆ ಮಾಡುವ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಜವಾಬ್ದಾರಿ ಮರೆತ ಬಿಜೆಪಿ ನಾಯಕರು

ಮಹದಾಯಿ ಹಾಗೂ ಉತ್ತರ ಕರ್ನಾಟಕ ನೀರಾವರಿ ವಿಚಾರವಾಗಿ ಬಿಜೆಪಿ ನಾಯಕರು ಅಧಿಕಾರ ದಲ್ಲಿಲ್ಲದ ಸಂದರ್ಭದಲ್ಲಿ ತೋರುವ ಕಾಳಜಿ ಅಧಿಕಾರದಲ್ಲಿದ್ದಾಗ ತೋರಿದ್ದರೆ ಈವರೆಗೆ ಎಲ್ಲಾ ಯೋಜನೆಗಳು ಪೂರ್ಣಗೊಂಡು ಜನ ಸಂತೋಷದಿಂದ ಬದುಕು ನಡೆಸುತ್ತಿದ್ದರು. 2023ರ ವಿಧಾನಸಭಾ ಚುನಾವಣಾ ಹಿನ್ನೆಲೆ ಬಿಜೆಪಿ ನಾಯಕರು ಮಹಾರಾಷ್ಟ್ರದ ಅಂದಿನ ಸಿಎಂ ಏಕನಾಥ ಶಿಂಧೆ ಅವರ ಬೆನ್ನುಬಿದ್ದು ನೀರು ಹರಿಸಿದ್ದರು.

ಇದಾದ ನಂತರ 2024ರ ಲೋಕಸಭಾ ಚುನಾವಣೆ ವೇಳೆಗೂ ಕೊಂಚ ನದಿ ನೀರಿನ ಅಭಾವ ಉಂಟಾಗಿತ್ತಾದರೂ ಮುಂದೆ ನಿಂತು ನೀರು ಬಿಡಿಸಿದ್ದರು. ಆದರೆ ಈ ವರ್ಷ ಯಾವೊಬ್ಬ ನಾಯಕರೂ ತಮ್ಮದೇ ಬಿಜೆಪಿ ಸರಕಾರ ಇರುವ ಮಹಾರಾಷ್ಟ್ರದ ಜತೆ ಮಾತನಾಡಿ ಕೃಷ್ಣಾ ನದಿಗೆ ನೀರು ಹರಿಸುವ ಪ್ರಯತ್ನ ಮಾಡಿಲ್ಲ.

ಸಿಎಂ ಸಿದ್ದರಾಮಯ್ಯ ಪತ್ರ ಬರೆಯುವ ಮುಂಚಿತವಾಗಿ ಖುದ್ದು ಬಿಜೆಪಿ ನಾಯಕರ ನಿಯೋಗವು ಮಹಾರಾಷ್ಟ್ರ ಸರಕಾರದ ಜತೆ ಮಾತನಾಡಿ ಕೃಷ್ಣಾ ನದಿಗೆ ನೀರು ಹರಿಸುವ ಪ್ರಯತ್ನ ಮಾಡ ಬಹುದಿತ್ತು. ಈ ಹಿಂದೆ 2018ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್ ಯಡಿಯೂರಪ್ಪ ಸರಕಾರವನ್ನು ಎಚ್ಚರಿಸುತ್ತಾ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಡ ಹೇರಿದ್ದರು.

ಆದರೆ ಇಲ್ಲಿಯವರೆಗೆ ಯಾವೊಬ್ಬ ಬಿಜೆಪಿ ನಾಯಕರೂ ಮಹಾರಾಷ್ಟ್ರ ಸರಕಾರಕ್ಕೆ ಒತ್ತಡ ಹೇರುವ ಪ್ರಯತ್ನ ಮಾಡದಿರುವುದು ಜನರ ಬಗೆಗಿನ ಇವರ ಕಾಳಜಿ ಎಷ್ಟು ಎಂಬುದನ್ನು ತೋರ್ಪಡಿ ಸುತ್ತದೆ. ಇನ್ನು ಆಡಳಿತ ಪಕ್ಷ ಕಾಂಗ್ರೆಸ್ ಸರ್ವಪಕ್ಷಗಳ ನಿಯೋಗವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿ ಒತ್ತಡ ಹೇರುವ ಪ್ರಯತ್ನ ಮಾಡದೆ ಕೇವಲ ಪತ್ರ ವ್ಯವಹಾರ ಮಾಡುತ್ತಿರುವುದು ವಿಪರ್ಯಾಸ.

ಸದ್ಯ ಕೇಂದ್ರ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರದ ನಾಯಕರ ಜತೆ ಮಾತನಾಡಿ ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಬೇಕು. 17 ಜನ ಬಿಜೆಪಿ ಸಂಸದರು ಸೇರಿಕೊಂಡು ಪ್ರಧಾನಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ರಾಜ್ಯದ ವಸ್ತುಸ್ಥಿತಿ ಏನು ಎಂಬುದನ್ನು ಅವರ ಗಮನಕ್ಕೆ ತರುವ ಮೂಲಕ ಮಹಾ ರಾಷ್ಟ್ರ ಸರಕಾರದ ಮೇಲೆ ಒತ್ತಡ ಹೇರುವ ಅವಕಾಶ ಇದೆ.

ಕಾವೇರಿ ವಿಚಾರವಾಗಿ ತಮಿಳುನಾಡಿನ ರಾಜಕೀಯ ನಾಯಕರು ತೋರುವ ಧೈರ್ಯದ ಅರ್ಧ ದಷ್ಟಾದರೂ ರಾಜ್ಯದ ನಾಯಕರು ತೋರಿಸಿದರೆ ಉತ್ತರ ಕರ್ನಾಟಕ ಭಾಗದ ಜನ ನೆಮ್ಮದಿಯಿಂದ ಬದುಕು ಸಾಗಿಸುತ್ತಾರೆ. ಇಲ್ಲವಾದರೆ ಅದೇ ರಾಗ, ಅದೇ ತಾಳ.

(ಲೇಖಕರು ಪತ್ರಕರ್ತರು)