ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr Chandrashekher Chaugala Column: ಯುದ್ಧದ ಜ್ವಾಲೆಯಲ್ಲಿ ಕರಗುತ್ತಿರುವ ಪರಿಸರ

ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ವಿಶ್ವದ ಎಲ್ಲ ರಾಷ್ಟ್ರಗಳು ಹಲವಾರು ಒಪ್ಪಂದ ಗಳನ್ನು ಮಾಡಿಕೊಂಡಿವೆ. ‘ಪ್ಯಾರಿಸ್ ಹವಾಮಾನ ಒಪ್ಪಂದ’ದಂಥ ಅಂತಾರಾಷ್ಟ್ರೀಯ ಪ್ರಯತ್ನವು, ಕಾರ್ಬನ್ ಡಯಾಕ್ಸೈಡ್ ಅನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಆಗಿರು ವಂಥದ್ದು. ಆದರೆ ಭಯಾನಕ ಯುದ್ಧಗಳನ್ನು ಮಾಡುವ ಮೂಲಕ ಆ ಘೋಷಣೆಗಳು ಕಾಗದದ ಮೇಲಿನ ಮಾತುಗಳಾಗಿಯೇ ಉಳಿಯುತ್ತಿವೆ.

ಯುದ್ಧದ ಜ್ವಾಲೆಯಲ್ಲಿ ಕರಗುತ್ತಿರುವ ಪರಿಸರ

-

Ashok Nayak
Ashok Nayak Mar 9, 2026 5:02 AM

ಕಳಕಳಿ

ಡಾ.ಚಂದ್ರಶೇಖರ ಚೌಗಲಾ

ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಸಮುದ್ರಮಟ್ಟದ ಏರಿಕೆ, ಅರಣ್ಯ ನಾಶ, ವಾಯುಮಾಲಿನ್ಯ ಮುಂತಾದ ಸಮಸ್ಯೆಗಳು ಮಾನವ ಸಮಾಜದ ಭವಿಷ್ಯವನ್ನು ಆತಂಕಕ್ಕೆ ದೂಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಎಲ್ಲ ನಾಯಕರು ಜಾಗತಿಕ ವೇದಿಕೆ ಗಳಲ್ಲಿಯೂ ಪರಿಸರ ರಕ್ಷಣೆಯ ಮಹತ್ವವನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಆದರೆ ಒಂದು ಕಡೆ ಪರಿಸರವನ್ನು ಉಳಿಸಬೇಕು ಎಂದು ಹೇಳುವ ಇದೇ ನಾಯಕರು, ಮತ್ತೊಂದೆಡೆ ಪರಸ್ಪರ ಯುದ್ಧ ನಡೆಸುವ ಮೂಲಕ ಮಾನವ ಜೀವಹಾನಿಯ ಜತೆಗೆ ಪ್ರಕೃತಿಗೂ ದೊಡ್ಡ ಹಾನಿ ಮಾಡುತ್ತಿದ್ದೇವೆ ಎಂಬುದನ್ನೇ ಮರೆತಂತಿದೆ.

ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ವಿಶ್ವದ ಎಲ್ಲ ರಾಷ್ಟ್ರಗಳು ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿವೆ. ‘ಪ್ಯಾರಿಸ್ ಹವಾಮಾನ ಒಪ್ಪಂದ’ದಂಥ ಅಂತಾರಾ ಷ್ಟ್ರೀಯ ಪ್ರಯತ್ನವು, ಕಾರ್ಬನ್ ಡಯಾಕ್ಸೈಡ್ ಅನ್ನು ಕಡಿಮೆ ಮಾಡುವ ಉದ್ದೇಶ ದಿಂದಲೇ ಆಗಿರುವಂಥದ್ದು. ಆದರೆ ಭಯಾನಕ ಯುದ್ಧಗಳನ್ನು ಮಾಡುವ ಮೂಲಕ ಆ ಘೋಷಣೆಗಳು ಕಾಗದದ ಮೇಲಿನ ಮಾತುಗಳಾಗಿಯೇ ಉಳಿಯುತ್ತಿವೆ.

ಇದನ್ನೂ ಓದಿ: Leena Joshi Column: ಸೈಕ್ಸ್-ಪಿಕೋಟ್‌ ಒಪ್ಪಂದ: ಮಧ್ಯಪ್ರಾಚ್ಯದ ದುರಂತದ ಮೂಲ

ಒಂದು ಕಡೆ ಪರಿಸರ ಉಳಿಸುವ ಘೋಷಣೆಗಳು, ಇನ್ನೊಂದು ಕಡೆ ಯುದ್ಧದ ರಾಜಕೀಯ- ಇಂಥದೊಂದು ವೈರುಧ್ಯವು ಇಂದಿನ ಜಾಗತಿಕ ರಾಜಕೀಯದ ದೊಡ್ಡ ಸಮಸ್ಯೆಯಾಗಿದೆ. ಯುದ್ಧ ಎಂದರೆ ಕೇವಲ ಸೇನಾ ಕಾರ್ಯಾಚರಣೆ ಮಾತ್ರವಲ್ಲ; ಅದು ಪರಿಸರ ವ್ಯವಸ್ಥೆಯ ಮೇಲೆ ಭೀಕರ ಪರಿಣಾಮ ಬೀರುವ ಮಾನವ ದುಷ್ಕೃತ್ಯ. ಇತ್ತೀಚಿನ ರಷ್ಯಾ-ಉಕ್ರೇನ್ ಯುದ್ಧವನ್ನು ಗಮನಿಸಿದರೆ, ಈ ಸಂಘರ್ಷವು ಪರಿಸರದ ಮೇಲೆ ಬೀರಿದ ಪರಿಣಾಮಗಳು ಅಚ್ಚರಿಗೊಳಿಸುವಂತಿವೆ.

ಕೆಲವು ಅಂತಾರಾಷ್ಟ್ರೀಯ ಅಧ್ಯಯನಗಳ ಪ್ರಕಾರ, ಈ ಯುದ್ಧದಿಂದ ಈಗಾಗಲೇ ಸುಮಾರು 100 ಮಿಲಿಯನ್ ಟನ್‌ಗಿಂತ ಹೆಚ್ಚು ಕಾರ್ಬನ್ ಡಯಾಕ್ಸೈಡ್ ಉತ್ಪಾದನೆ ಯಾಗಿದೆ. ಯುದ್ಧದಲ್ಲಿ ಬಳಸುವ ಬಾಂಬ, ಕ್ಷಿಪಣಿ ಹಾಗೂ ಇಂಧನ ದಹನದಿಂದ ವಾಯು ಮಂಡಲದಲ್ಲಿ ಅಪಾರ ಪ್ರಮಾಣದ ಮಾಲಿನ್ಯ ಉಂಟಾಗುತ್ತದೆ.

ಸಮರಪೀಡಿತ ಪ್ರದೇಶಗಳಲ್ಲಿ ಅರಣ್ಯ ನಾಶವೇನೂ ಕಡಿಮೆಯಾಗಿಲ್ಲ. ಉಕ್ರೇನ್ʼನಲ್ಲಿ ನಡೆದ ಯುದ್ಧದ ಪರಿಣಾಮವಾಗಿ ಸುಮಾರು 3 ಮಿಲಿಯನ್ ಹೆಕ್ಟೇರ್‌ಗಿಂತ ಹೆಚ್ಚು ಅರಣ್ಯ ಪ್ರದೇಶ ಹಾನಿಗೊಳಗಾಗಿದೆ ಎಂದು ಕೆಲವು ವರದಿಗಳು ತಿಳಿಸಿವೆ. ಬಾಂಬ್ ಸ್ಫೋಟಗಳಿಂದ ಅರಣ್ಯ ಪ್ರದೇಶಗಳು ಬೆಂಕಿಗಾಹುತಿಯಾಗುತ್ತಿವೆ. ಜೈವಿಕ ವೈವಿಧ್ಯ ನಾಶವಾಗುತ್ತಿವೆ, ವನ್ಯಜೀವಿಗಳು ತಮ್ಮ ಆವಾಸಸ್ಥಾನವನ್ನು ಕಳೆದುಕೊಳ್ಳುತ್ತಿವೆ.

1991ರ ಗಲ ಯುದ್ಧದ ಸಂದರ್ಭದಲ್ಲಿ ಕುವೈತ್‌ನ 600ಕ್ಕೂ ಹೆಚ್ಚು ತೈಲ ಬಾವಿಗಳಿಗೆ ಬೆಂಕಿ ಹಚ್ಚಲಾಯಿತು. ಇದರ ಪರಿಣಾಮವಾಗಿ ಪ್ರತಿದಿನ ಸುಮಾರು 5 ರಿಂದ 6 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಸುಟ್ಟು ಹೋಯಿತು. ಅಪಾರ ಪ್ರಮಾಣದ ಹೊಗೆ ಹಾಗೂ ವಿಷಕಾರಿ ಅನಿಲಗಳು ಆಗ ಹರಡಿದ್ದವು. ಆ ಹೊಗೆ ಅನೇಕ ವಾರಗಳ ಕಾಲ ವಾಯು ಮಂಡಲವನ್ನು ಆವರಿಸಿಕೊಂಡಿತ್ತು. ಇದು ಕೇವಲ ಸ್ಥಳೀಯ ಪರಿಸರದ ಸಮಸ್ಯೆಯಾಗದೆ, ಜಾಗತಿಕ ಹವಾಮಾನ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರಿತ್ತು.

ಆ ಘಟನೆಯನ್ನು ಮಾನವನ ಇತಿಹಾಸದಲ್ಲಿನ ಅತಿ ದೊಡ್ಡ ಪರಿಸರ ದುರಂತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಯುದ್ಧಗಳು ಜಲಸಂಪನ್ಮೂಲಗಳ ಮೇಲೂ ತೀವ್ರ ದುಷ್ಪರಿ ಣಾಮ ಬೀರಿವೆ. ಬಾಂಬ್ ಸ್ಫೋಟಗಳಿಂದ ನದಿಗಳು, ಸರೋವರಗಳು ಮತ್ತು ಭೂಗರ್ಭ ಜಲ ಸಂಪನ್ಮೂಲಗಳು ಮಲಿನಗೊಂಡಿವೆ.

ಯುದ್ಧ ಪ್ರದೇಶಗಳಲ್ಲಿ ಕೈಗಾರಿಕೆಗಳು ಹಾನಿಗೊಳಗಾದಾಗ ರಾಸಾಯನಿಕಗಳು ಪರಿಸರಕ್ಕೆ ಹರಿದು ನೀರು ಮತ್ತು ಮಣ್ಣನ್ನು ವಿಷಗೊಳಿಸುತ್ತಿವೆ. ಕೆಲವು ವರದಿಗಳ ಪ್ರಕಾರ, ಉಕ್ರೇನ್ ಯುದ್ಧದ ವೇಳೆ ಸುಮಾರು 150ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಹಾನಿಗೊಂಡಿದ್ದು, ಇದರಿಂದ ರಾಸಾಯನಿಕ ಮಾಲಿನ್ಯ ಹೆಚ್ಚಾಗಿದೆ. ಅಲ್ಲದೆ, ಯುದ್ಧಗಳಿಂದ ಉಂಟಾಗುವ ಮಾನವೀಯ ಸಂಕಷ್ಟವೂ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ.

ಯುದ್ಧದಿಂದ ಜನರು ತಮ್ಮ ಮನೆಗಳನ್ನು ಬಿಟ್ಟು ವಲಸೆ ಹೋಗಿದ್ದಾರೆ. ಈಗಾಗಲೇ ವಿಶ್ವದಾದ್ಯಂತ 100 ಮಿಲಿಯನ್‌ಗಿಂತ ಹೆಚ್ಚು ಜನರು ಯುದ್ಧ ಮತ್ತು ಸಂಘರ್ಷಗಳ ಕಾರಣದಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಹೇಳುತ್ತವೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಜಗತ್ತಿನ ಎಲ್ಲ ಸೇನೆಗಳು ಒಟ್ಟಾರೆ ಜಾಗತಿಕ ಕಾರ್ಬನ್ ಉತ್ಪಾದನೆಯಲ್ಲಿ ಗಮನಾರ್ಹ ಪಾಲು ಹೊಂದಿವೆ.

ಕೆಲವು ಅಧ್ಯಯನಗಳ ಪ್ರಕಾರ, ವಿಶ್ವದ ಸೇನಾ ವ್ಯವಸ್ಥೆಗಳು ಒಟ್ಟಾರೆ ಜಾಗತಿಕ ಕಾರ್ಬನ್ ಉತ್ಪಾದನೆಯ ಸುಮಾರು ಶೇ.5ರಿಂದ 6ರವರೆಗೆ ಕಾರಣವಾಗುತ್ತವೆ ಎಂದು ಅಂದಾಜಿಸ ಲಾಗಿದೆ. ಇದು ಅನೇಕ ರಾಷ್ಟ್ರಗಳ ಒಟ್ಟು ಕಾರ್ಬನ್ ಡಯಾಕ್ಸೈಡ್ ಉತ್ಪಾದನೆಗೆ ಸಮಾನ ವಾಗಿದೆ.

“ದೊಡ್ಡ ಮಟ್ಟದ ಪರಮಾಣು ಯುದ್ಧ ನಡೆದರೆ ‘ನ್ಯೂಕ್ಲಿಯರ್ ವಿಂಟರ್’ ಎಂಬ ಸ್ಥಿತಿ ಉಂಟಾಗಿ ಸೂರ್ಯರಶ್ಮಿ ಭೂಮಿಗೆ ತಲುಪದೇ ಜಾಗತಿಕ ತಾಪಮಾನ ತೀವ್ರವಾಗಿ ಕುಸಿ ಯುವ ಸಾಧ್ಯತೆ ಇದೆ’ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈಗ ನಡೆಯು ತ್ತಿರುವ ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ.

ಮಧ್ಯಪ್ರಾಚ್ಯವು ಜಗತ್ತಿನ ಪ್ರಮುಖ ತೈಲ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶ ವಾಗಿರುವುದರಿಂದ ಇಲ್ಲಿ ನಡೆಯುವ ಯುದ್ಧಗಳು ತೈಲ ಉತ್ಪಾದನೆ, ಸಾರಿಗೆ ಮತ್ತು ಸಂಗ್ರಹಣೆಯ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತವೆ. ತೈಲ ಶುದ್ಧೀಕರಣ ಘಟಕಗಳು, ಪೈಪ್ ಲೈನ್‌ಗಳು ಮತ್ತು ಸಂಗ್ರಹಣೆ ಕೇಂದ್ರಗಳು ದಾಳಿಗೆ ಗುರಿಯಾಗುವ ಮೂಲಕ ಇಡೀ ಜಗತ್ತಿನ ಪರಿಸರಕ್ಕೆ ಅಪಾರ ಹಾನಿಯಾಗುವುದರಲ್ಲಿ ಸಂಶಯವೇ ಇಲ್ಲ.

ಏಕೆಂದರೆ, ಪ್ರಕೃತಿಯು ಮಾನವ ನಿರ್ಮಿತ ಗಡಿಗಳನ್ನು ಅರಿಯದು. ಒಂದು ದೇಶದಲ್ಲಿ ನಡೆದ ಯುದ್ಧದಿಂದ ಉಂಟಾಗುವ ಮಾಲಿನ್ಯವು ಜಾಗತಿಕ ಹವಾಮಾನ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯ ನಾಗರಿಕರಿಗೆ ಪರಿಸರದ ಹೊಣೆಗಾರಿಕೆಯನ್ನು ಬೋಧಿಸುವ ವಿಶ್ವ ನಾಯಕರು ಯುದ್ಧಗಳನ್ನು ತಡೆಯುವಲ್ಲಿ ಏಕೆ ವಿಫಲರಾಗುತ್ತಿದ್ದಾರೆ? ಶಾಂತಿ ಮತ್ತು ಪರಿಸರ ಪರಸ್ಪರ ಸಂಬಂಧ ಹೊಂದಿರುವ ವಿಷಯಗಳು, ಯುದ್ಧವಿರುವ ಜಗತ್ತಿನಲ್ಲಿ ಸ್ಥಿರವಾದ ಪರಿಸರವನ್ನು ನಿರ್ಮಿಸುವುದು ಕಷ್ಟಸಾಧ್ಯ ಎಂಬುದು ಏಕೆ ಇವರಿಗೆ ಅರ್ಥವಾಗುತ್ತಿಲ್ಲ? ಪರಿಸರ ಸಂರಕ್ಷಣೆ ಒಂದು ಜಾಗತಿಕ ಜವಾಬ್ದಾರಿ ಎಂಬುದು ಏಕೆ ತಿಳಿಯುತ್ತಿಲ್ಲ? ಯುದ್ಧಗಳ ಮೂಲಕ ಪ್ರಕೃತಿಯನ್ನು ಹಾಳು ಮಾಡುವ ರಾಷ್ಟ್ರಗಳು, ಮತ್ತೊಂದೆಡೆ ಪರಿಸರ ರಕ್ಷಣೆಯ ಬಗ್ಗೆ ಮಾತನಾಡುವುದು ಎಷ್ಟು ಸರಿ? ವಿಶ್ವ ನಾಯಕರು ಪರಿಸರ ರಕ್ಷಣೆಯ ಬಗ್ಗೆ ಮಾತನಾಡಿದರೆ ಸಾಲದು, ಜತೆಗೆ ಶಾಂತಿಮಂತ್ರವನ್ನೂ ಅಳವಡಿಸಿ ಕೊಳ್ಳಬೇಕಾಗಿದೆ.

ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಸಂವಾದದ ಮೂಲಕ ಪರಿಹರಿಸುವ ಪ್ರಯತ್ನಗಳು ಹೆಚ್ಚಾಗಬೇಕು. ಪರಿಸರ ಸಂರಕ್ಷಣೆ ಮತ್ತು ಶಾಂತಿ ಸ್ಥಾಪನೆ ಎರಡೂ ಪರಸ್ಪರ ಸಂಬಂಧ ಹೊಂದಿರುವ ಅಂಶಗಳೆಂಬ ಅರಿವು ಜಾಗತಿಕ ನಾಯಕರಲ್ಲಿ ಮೂಡಬೇಕು. ಮನುಕುಲ ವನ್ನು ಉಳಿಸಬೇಕಾದರೆ, ಯುದ್ಧವನ್ನು ಬಿಟ್ಟು ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳ ಬೇಕು.

ಇಲ್ಲವಾದರೆ ನಾವು ಉಳಿಸಬೇಕೆಂದು ಹೇಳುತ್ತಿರುವ ಈ ಭೂಮಿಯೇ ನಮ್ಮ ಕೈಗಳಿಂದ ನಿಧಾನವಾಗಿ ನಾಶವಾಗುವ ಅಪಾಯವಿದೆ. ಯುದ್ಧದ ಜ್ವಾಲೆಯಲ್ಲಿ ಕರಗುತ್ತಿರುವ ಪರಿಸರವನ್ನು ಉಳಿಸುವ ಹೊಣೆಗಾರಿಕೆ ಇಡೀ ಮಾನವಕುಲದ ಮೇಲಿದೆ.

(ಲೇಖಕರು ಪತ್ರಕರ್ತರು)