ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಹಣ್ಣಿನಲ್ಲೂ ಇದೆ ಕೊಬ್ಬರಿ ಕಾಯಿ ರುಚಿ !

ಕಡಿಮೆ ಮಳೆ ಬರುವ ಬಯಲುಸೀಮೆಯ ಹಣ್ಣುಗಳ ರುಚಿ ಜಾಸ್ತಿ, ಸಿಹಿಯೂ ಜಾಸ್ತಿ- ಇದು ಅನುಭವ ಜನ್ಯ ಅಭಿಪ್ರಾಯ. ಹಲಸಿನ ಹಣ್ಣುಗಳ ಮಟ್ಟಿಗೆ ಹೇಳುವುದಾದರೆ, ಸಖರಾಯಪಟ್ಟಣದ ಸುತ್ತಮುತ್ತ ಲಿನ ಕೆಲವು ತಳಿಯ ಹಲಸಿನಲ್ಲಿ ವಿಶೇಷ ರುಚಿಯ ಹಣ್ಣುಗಳು ಸಿಗುತ್ತವೆ. ಅದೇ ರೀತಿ, ಹಾಸನ, ಚನ್ನರಾ ಯಪಟ್ಟಣದ ಸುತ್ತಮುತ್ತಲೂ ಉತ್ತಮ ರುಚಿಯ ಹಲಸು ದೊರೆಯುತ್ತದೆ. ಅರಕಲಗೂಡು ತಾಲೂಕಿ ನಲ್ಲಿ ‘ಮುತ್ತಿಗೆ’ ಎಂಬ ಹಳ್ಳಿಯಿದೆ. ಈ ಸುತ್ತಲೂ ಬೆಳೆಯುವ ಹಲಸಿನ ಹಣ್ಣುಗಳು ಮೈಸೂರು ಅರಸರ ಅರಮನೆಗೆ ಸರಬರಾಜು ಆಗುತ್ತಿದ್ದವಂತೆ!

ಹಣ್ಣಿನಲ್ಲೂ ಇದೆ ಕೊಬ್ಬರಿ ಕಾಯಿ ರುಚಿ !

ಶಶಿಧರ ಹಾಲಾಡಿ ಶಶಿಧರ ಹಾಲಾಡಿ May 16, 2025 9:23 AM

ಶಶಾಂಕಣ

ಬೇಸಗೆಯ ಬಿರುಬಿಸಿಲಿನ ದಿನಗಳಿಗೂ, ಜಾತ್ರೆಗಳಿಗೂ ಅಪೂರ್ವ ಮತ್ತು ಆಪ್ತ ಎನ್ನುವ ಸಂಬಂಧ ವೊಂದನ್ನು ಗುರುತಿಸಬಹುದು. ನಮ್ಮೂರಿನ ಜಾತ್ರೆ ನಡೆಯುವುದು ಬಿರುಬಿಸಿಲಿನ ಮೇ ತಿಂಗಳಿ ನಲ್ಲಿ; ಪ್ರತಿ ವರ್ಷ ನರಸಿಂಹ ಜಯಂತಿಯಂದು ನಡೆಯುವ ಆ ಜಾತ್ರೆಗೆ ಹೋಗಿ ಬರುವುದೆಂದರೆ, ಬಿಸಿಲಿನಲ್ಲಿ ಸ್ನಾನ ಮಾಡಿದಂತೆ. ಆ ಜಾತ್ರೆಯ ಅನುಭವಗಳಲ್ಲಿ, ಬೆವರು, ಬೆವರುಸಾಲೆ, ತುರಿಕೆ, ಸುಸ್ತು ಇವೆಲ್ಲವೂ ತೀರಾ ಸಾಮಾನ್ಯ. ಇವುಗಳ ನಡುವೆ, ಆ ಜಾತ್ರೆಯಲ್ಲೊಂದು ವಿಶೇಷವಿದೆ. ಅದೇನೆಂದರೆ, ಹಲಸಿನ ಹಣ್ಣುಗಳ ಮೇಳ! ನಿಜ, ಹಲವು ದಶಕಗಳ ಹಿಂದೆ ಆ ಜಾತ್ರೆಯಲ್ಲಿ ಹಲಸಿನ ಹಣ್ಣುಗಳನ್ನು ಸಾಲುಸಾಲಾಗಿ ಪೇರಿಸಿಟ್ಟುಕೊಂಡು ಮಾರುತ್ತಿದ್ದರು. ಅಂದು ವಾಣಿಜ್ಯಕವಾಗಿ ಹಲಸಿನ ಮೇಳಗಳು ಇನ್ನೂ ಆರಂಭ ವಾಗಿರಲಿಲ್ಲ. ನರಸಿಂಹ ಜಯಂತಿಯಂದು ನಡೆಯುವ ಜಾತ್ರೆಯೇ ಹಲಸಿನ ಹಣ್ಣಿನ ಹಬ್ಬವಾಗಿ ನಮ್ಮೂರಿನ ಜನರ ನಾಲಗೆಯನ್ನು ತಣಿಸುತ್ತಿತ್ತು.

ಹಲಸಿನ ಹಣ್ಣಿನ ಕುರಿತಾಗಿ ಬರೆಯುವುದು ಸಾಕಷ್ಟಿದೆ. ನಮ್ಮ ಹಳ್ಳಿಯಲ್ಲಿ ಎಲ್ಲಿ ಕಂಡರೂ ಹಲಸಿನ ಮರಗಳಿದ್ದವು; ಈಗಲೂ ಸಾಕಷ್ಟು ಉಳಿದುಕೊಂಡಿವೆ. ಆದ್ದರಿಂದ, ಹಲಸು ಎಂದರೆ ನಮಗೆ ತೀರಾ ಸಾಮಾನ್ಯ ಎನಿಸುವ ಹಣ್ಣು ಮತ್ತು ಬಹೂಪಯೋಗಿ ತರಕಾರಿ! ಏನು, ತರಕಾರಿ ಹೇಗೆ ಎಂದು ಕೇಳಿದಿರಾ? ನಮ್ಮ ಹಳ್ಳಿಯವರು ಹಲಸಿನ ಮೇಲೆ ನಡೆಸುತ್ತಿದ್ದ ಪ್ರಯೋಗಗಳಿಗೆ ಲೆಕ್ಕವೇ ಇಲ್ಲ ಎನ್ನಬಹುದು. ಅದರ ಕುರಿತು ನಂತರ ಬರುತ್ತೇನೆ. ಹಲಸಿನ ಹಣ್ಣಿನ ರುಚಿಯ ಕುರಿತು, ನಾವು ಹಳ್ಳಿಯವರು ಒಂದು ರೀತಿಯಲ್ಲಿ ಕೂಪ ಮಂಡೂಕಗಳಾಗಿದ್ದೆವು ಎಂದು ನಾನು ತಪ್ಪೊಪ್ಪಿ ಕೊಳ್ಳಲೇಬೇಕು.

ನಮ್ಮ ಮನೆಯಿಂದ ಸುಮಾರು ಆರು ಕಿ.ಮೀ. ನಡಿಗೆ ದಾರಿಯಷ್ಟು ದೂರದಲ್ಲಿದ್ದ ಅಬ್ಲಿಕಟ್ಟೆ ಎಂಬಲ್ಲಿನ ನಮ್ಮ ದೊಡ್ಡಮ್ಮನ ಮನೆ ಹಿಂಭಾಗದಲ್ಲಿದ್ದ ‘ಬಿಳಿ ಬಕ್ಕೆ’ ಮರದಲ್ಲಿ ಪ್ರತಿವರ್ಷ ಹೇರಳ ವಾಗಿ ಆಗುವ ಹಲಸಿನ ಹಣ್ಣಿನ ರುಚಿ ಈ ಜಗತ್ತಿನಲ್ಲಿ ಶ್ರೇಷ್ಠ ಎಂಬ ಭಾವನೆ ನನ್ನಲ್ಲಿ ಬಹಳ ವರ್ಷದ ತನಕ ಇತ್ತು. ಮಿದುವಾದ ತೊಳೆ, ಬಿಳಿಯದಾದ ತುಸು ಗುಲಾಬಿ ಮಿಶ್ರಿತ ಬಣ್ಣ, ಹದವಾದ ಗಾತ್ರ, ಅಪರೂಪದ ರುಚಿ. ನನ್ನ ಬಾಲ್ಯದಿಂದಾರಂಭಿಸಿ, ಪ್ರತಿವರ್ಷ ಶಾಲೆಗಳಿಗೆ ಬೇಸಗೆ ರಜಗಳ ಸಮಯದಲ್ಲಿ ಆ ದೊಡ್ಡಮ್ಮನ ಮನೆಯಲ್ಲಿ ನನ್ನದು ಒಂದೆರಡು ವಾರ ಠಿಕಾಣಿ ಇದ್ದದ್ದೇ. ಕಾಲೇಜು ಅಧ್ಯಯನ ಮುಗಿಯುವ ತನಕ ಪ್ರತಿ ಬೇಸಗೆ ರಜೆಯಲ್ಲಿ ಅಲ್ಲಿ ನಾನು ತಿಂದ ಹಲಸಿನ ಹಣ್ಣುಗಳ ವೈವಿಧ್ಯ ಅಪಾರ.

ಇದನ್ನೂ ಓದಿ: Shashidhara Halady Column: ಇವರು ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ !

ಅತಿ ರುಚಿ ಎನಿಸುವ ಬಿಳಿ ಬಕ್ಕೆ ಹಣ್ಣಿನ ಜತೆಯಲ್ಲೇ, ಅಲ್ಲೇ ಬೆಳೆದಿದ್ದ ಇತರ ಹಲವು ಬಕ್ಕೆ ಹಣ್ಣು ಗಳು, ಇಂಬ ಹಣ್ಣುಗಳನ್ನೂ ಮೆದ್ದು, ಅವುಗಳಿಂದ ತಯಾರಿಸಿದ ವಿವಿಧ ತಿನಿಸುಗಳನ್ನು ತಿಂದದ್ದೇ ತಿಂದದ್ದು. ಜತೆಗೆ, ಮರಗಿಡಗಳ ನಡುವೆಯೇ ಇದ್ದ ನಮ್ಮ ಹಳ್ಳಿ ಮನೆಯ ಸುತ್ತಲೂ ಬೆಳೆದಿದ್ದ ಮರಗಳಲ್ಲಿ ಬಿಡುತ್ತಿದ್ದ ಹಲಸನ್ನೂ ತಿಂದಿದ್ದೆ.

ಏಪ್ರಿಲ್ ನಿಂದಾರಂಭಿಸಿ, ಜುಲೈ ತನಕ ಹಲಸಿನ ಹಣ್ಣನ್ನು ತಿನ್ನುವ ನಮ್ಮ ಚಟುವಟಿಕೆ ಅದೆಷ್ಟು ತೀವ್ರತರದ್ದೆಂದರೆ, ಕೊನೆ ಕೊನೆಗೆ ಹಲಸಿನ ಹಣ್ಣಿನ ವಾಸನೆ ಬಂದ ತಕ್ಷಣ, ಸಣ್ಣಗೆ ವಾಕರಿಕೆ ಬರುವಂತಾಗುವಷ್ಟು! ಇಷ್ಟರ ನಡುವೆಯೂ, ಅಬ್ಲಿಕಟ್ಟೆಯ ‘ಬಿಳಿ ಬಕ್ಕೆ’ ಹಣ್ಣನ್ನು ತರಿಸಿಕೊಂಡು ತಿನ್ನುತ್ತಿದ್ದೆವು. ಆ ಮರದ ಹಲಸು ಅಷ್ಟು ರುಚಿಕರ!

ಆದ್ದರಿಂದಲೇ, ಇಡೀ ಜಗತ್ತಿನಲ್ಲಿ ‘ಬಿಳಿ ಬಕ್ಕೆ’ಯ ಹಲಸಿನಷ್ಟು ರುಚಿಕರ ತೊಳೆಗಳು ಇನ್ನೆಲ್ಲೂ ಇಲ್ಲ ಎಂದು ನಮ್ಮ ಹಳ್ಳಿಯವರು ನಂಬಿಕೊಂಡು ಬಂದಿದ್ದೆವು. ಕಾಲೇಜು ಶಿಕ್ಷಣ ಮುಗಿಸಿ, ವೃತ್ತಿ ಯನ್ನರಸುತ್ತಾ ನಮ್ಮ ರಾಜ್ಯದ ಬಯಲುಸೀಮೆಯ ಹೃದಯಭಾಗದಲ್ಲಿರುವ ಒಂದು ಹಳ್ಳಿಯನ್ನು ಸೇರಿಕೊಂಡೆ. ವರ್ಷಕ್ಕೆ ನಾಲ್ಕಾರು ದಿನ ಮಾತ್ರ ಮಳೆಬರುವ ಪ್ರದೇಶವದು.

71 ಋ

ಮರಗಿಡಗಳೂ ಕಡಿಮೆ. ತೆಂಗಿನ ಸೀಮೆ. ಊರಿಂದಾಚೆಯ ತೋಟದ ನಡುವೆ ಅಲ್ಲಲ್ಲಿ ಒಂದೊಂದು ಹಲಸಿನ ಮರಗಳಿದ್ದವು. ಅಂಥ ಒಂದು ಮರದಲ್ಲಿ ಬಿಟ್ಟ ಹಲಸಿನ ಹಣ್ಣಿನ ಕೆಲವು ತೊಳೆಗಳನ್ನು ಹಳ್ಳಿಯ ಸ್ಥಳೀಯ ಗೆಳೆಯರು ತಂದುಕೊಟ್ಟರು. ಅದನ್ನು ತಿಂದ ತಕ್ಷಣ, ನಮ್ಮೂರಿನ ‘ಬಿಳಿ ಬಕ್ಕೆ’ ಹಣ್ಣು ನೆನಪಾಯಿತು!

ಅಷ್ಟು ರುಚಿ. ‘ಇದೇನು ಮಹಾ, ನೀವು ಸಖರಾಯಪಟ್ಟಣದ ಹಲಸಿನ ಹಣ್ಣನ್ನು ತಿನ್ನಬೇಕು, ಅದಿನ್ನೂ ರುಚಿ’ ಎಂದರು ಆ ಹಳ್ಳಿಯ ಯುವಕರು. ನಮ್ಮ ಹಳ್ಳಿಯ ಹಲಸಿನ ಹಣ್ಣೇ ಶ್ರೇಷ್ಠ ಎಂದು ತಿಳಿದಿದ್ದ ನಾನು, ಬಯಲುಸೀಮೆಯ ಹಲಸನ್ನು ತಿಂದು, ಆ ಅಭಿಪ್ರಾಯವನ್ನು ಬದಲಿಸಿಕೊ ಳ್ಳಬೇಕಾಯಿತು. ಕಡಿಮೆ ಮಳೆ ಬರುವ ಬಯಲುಸೀಮೆಯ ಹಣ್ಣುಗಳ ರುಚಿ ಜಾಸ್ತಿ, ಸಿಹಿಯೂ ಜಾಸ್ತಿ- ಇದು ಅನುಭವಜನ್ಯ ಅಭಿಪ್ರಾಯ.

ಹಲಸಿನ ಹಣ್ಣುಗಳ ಮಟ್ಟಿಗೆ ಹೇಳುವುದಾದರೆ, ಸಖರಾಯಪಟ್ಟಣದ ಸುತ್ತಮುತ್ತಲಿನ ಕೆಲವು ತಳಿಯ ಹಲಸಿನಲ್ಲಿ ವಿಶೇಷ ರುಚಿಯ ಹಣ್ಣುಗಳು ಸಿಗುತ್ತವೆ. ಅದೇ ರೀತಿ, ಹಾಸನ, ಚನ್ನರಾಯ ಪಟ್ಟಣದ ಸುತ್ತಮುತ್ತಲೂ ಉತ್ತಮ ರುಚಿಯ ಹಲಸು ದೊರೆಯುತ್ತದೆ. ಅರಕಲಗೂಡು ತಾಲೂಕಿ ನಲ್ಲಿ ‘ಮುತ್ತಿಗೆ’ ಎಂಬ ಹಳ್ಳಿಯಿದೆ.

ಈ ಸುತ್ತಲೂ ಬೆಳೆಯುವ ಹಲಸಿನ ಹಣ್ಣುಗಳು ಮೈಸೂರು ಅರಸರ ಅರಮನೆಗೆ ಸರಬರಾಜು ಆಗುತ್ತಿದ್ದವಂತೆ! ಅಷ್ಟು ರುಚಿ. ಇತ್ತ ಕನಕಪುರ, ಚನ್ನಪಟ್ಟಣ ಮೊದಲಾದ ಕಡೆಯಲ್ಲೂ ವಿಶೇಷ ರುಚಿಯ ಹಲಸು ಲಭ್ಯ. ಕರಾವಳಿ ಮತ್ತು ಮಲೆನಾಡಿನಲ್ಲಿ, ಮಳೆ ಆರಂಭವಾದ ಕೂಡಲೆ, ವಿಪರೀತ ನೆನೆಯುವ ಹಲಸಿನ ಕಾಯಿಗಳು ರುಚಿಕಳೆದುಕೊಂಡು, ಹಣ್ಣಾದಾಗ ತುಸು ಸಪ್ಪೆಯಾಗುತ್ತವೆ.

ಅವು ಎಷ್ಟರ ಮಟ್ಟಿಗೆ ನೆನೆಯುತ್ತವೆಂದರೆ, ಮಳೆಗಾಲದಲ್ಲಿ ಹಲಸಿನ ಹಣ್ಣನ್ನು ಬಿಡಿಸಿದರೆ, ಕೆಲವು ತೊಳೆಗಳಲ್ಲಿ ಅದಾಗಲೇ ಬೇರುಗಳು ಮೂಡಿರುತ್ತವೆ! ಬಾಲ್ಯಕಾಲದಲ್ಲಿ ಅಂಥ ಹಣ್ಣುಗಳನ್ನು, ತೊಳೆಗಳನ್ನು ಚಪ್ಪರಿಸಿಕೊಂಡು ತಿಂದಿದ್ದೆನಾದರೂ, ಈಗ ಹಲಸಿನ ತೊಳೆಗಳ ಆಯ್ಕೆಯಲ್ಲಿ ವಿಶೇಷ ಕಾಳಜಿ ವಹಿಸುತ್ತೇನೆ. ಅದೇಕೋ, ಕೆಲವು ಹಣ್ಣಿನ ತೊಳೆಗಳನ್ನು ತಿಂದರೆ, ‘ಆಸಿಡಿಟಿ’ ಎಂಬ, ಸರಿಯಾಗಿ ವರ್ಣಿಸಲಾಗದ ಹೊಟ್ಟೆಯ ಸಮಸ್ಯೆ ತೋರುತ್ತದೆ!

ಬೆಂಗಳೂರಿನ ಕೆಲವು ಮಕ್ಕಳಿಗೆ ಹಲಸಿನ ಹಣ್ಣು ಆಗಿಬರುವುದಿಲ್ಲವಂತೆ. ‘ಹಲಸಿನ ತೊಳೆ ತಿಂದರೆ ನಮ್ಮ ಮಕ್ಕಳ ಹೊಟ್ಟೆಯಲ್ಲಿ ಅದು ಜೀರ್ಣವಾಗುವುದಿಲ್ಲ’ ಎಂದು ಅವರ ಅಮ್ಮಂದಿರು ಮೊದಲೇ ಘೋಷಿಸಿಬಿಡುವುದುಂಟು! ಕೆಲವು ಮರದ ಹಲಸಿನ ತೊಳೆಗಳು ನಾರು ಜಾಸ್ತಿ ಇರುವುದರಿಂದ ಲೋ, ಬೇರಾವುದೋ ಕಾರಣದಿಂದಲೋ ಅಂಥ ಹಣ್ಣುಗಳು ಹೊಟ್ಟೆ ಸಮಸ್ಯೆ ತರುವ ಸಾಧ್ಯತೆ ಯೂ ಇದೆ. ಆದರೆ, ಅತಿ ರುಚಿಕರ ಎನಿಸುವ, ಬೆಂಗಳೂರು ಸೀಮೆಯವರು ‘ಕೊಬ್ಬರಿ ಕಾಯಿ’ ಎಂದು ಕರೆಯುವ ಹಲಸಿನ ತೊಳೆಯನ್ನು ತಿನ್ನದವರು, ಅಂಥ ಒಂದು ಅಪರೂಪದ ರುಚಿಕರ ಹಣ್ಣನ್ನು ತಿನ್ನುವ ಭಾಗ್ಯದಿಂದ ವಂಚಿತರೆಂದೇ ಹೇಳಬಹುದು.

ಬೆಂಗಳೂರಿನ ಒಂದು ರಸ್ತೆಬದಿಯಲ್ಲಿ ಕಳೆದ ವಾರ, ಯುವಕನೊಬ್ಬ ಹಲಸಿನ ಹಣ್ಣನ್ನು ಮಾರುತ್ತಾ ನಿಂತಿದ್ದ. ‘ರುಚಿ ಹೇಗಿದೆ, ಕೊಂಡೊಯ್ದರೆ ಮೋಸ ಇಲ್ಲ ತಾನೆ?’ ಎಂದು ಕೇಳಿದೆ. ‘ಸಾರ್, ಇದು ಕೊಬ್ರಿ ಕಾಯಿ.. ತಿಂದು ನೋಡಿ. ಕಾಯಿ ತುಂಬಾ ತೊಳೆಗಳು’ ಎಂದು ವರ್ಣಿಸಿ, ಒಂದು ಹಲಸಿನ ಹಣ್ಣನ್ನು ಕೊಟ್ಟ. ‘ಕೊಬ್ರಿ ಕಾಯಿ’ ಎಂದು ಅವನು ಹಲಸಿನ ತೊಳೆಯನ್ನು ವರ್ಣಿಸಿದ ರೀತಿ ವಿಶೇಷ. ಕೊಬ್ಬರಿಯಂತೆ ಸಿಹಿ ಸಿಹಿಯಾಗಿರುತ್ತದೆ ಎಂದೋ, ಮಿದುವಾಗಿರುತ್ತದೆ ಎಂದೋ, ನೋಡಲು ಕೊಬ್ಬರಿಯಂತೆ ದಪ್ಪನೆಯ ತೊಳೆಗಳು ಎಂತಲೋ ಹೇಗೆ ಬೇಕಾದರೂ ತಿಳಿಯ ಬಹುದು.

ಮನೆಗೆ ಬಂದು, ವಿಶೇಷ ಪರಿಶ್ರಮವಹಿಸಿ ಆ ಹಣ್ಣನ್ನು ಕತ್ತರಿಸಿ, ತೊಳೆಗಳನ್ನು ಬೇರ್ಪಡಿಸಿ ತಿಂದಾಗ ತೃಪ್ತಿಯಾಯಿತು. ‘ಕೊಬ್ಬರಿ ಕಾಯಿ’ ಅಲ್ಲದೇ ಇದ್ದರೂ, ಸಾಕಷ್ಟು ರುಚಿಯಿತ್ತು. ಕೊಬ್ಬರಿ ಕಾಯಿ ಎಂದು ವರ್ಣಿಸಿಕೊಳ್ಳುವ ಹಲಸಿನ ತೊಳೆಯ ರುಚಿಯನ್ನು ಸವಿಯುವ ಅವಕಾಶವೂ ಇತ್ತೀಚೆಗೆ ದೊರಕಿತು. ಬೆಂಗಳೂರಿನ ಸರಹದ್ದಿನ ಹಳ್ಳಿಯೊಂದರಲ್ಲಿ ಬೆಳೆದ ಹಲಸಿನ ತೊಳೆಗಳನ್ನು ಸಹೋ ದ್ಯೋಗಿಯೊಬ್ಬರು ತಂದಿದ್ದರು. ಮೊದಲಿಗೆ ಒಂದೆರಡು ತೊಳೆ ಸಾಕು ಎಂದು ತಿನ್ನಲು ಆರಂಭಿಸಿ, ಕೊನೆಗೆ ನಾಲ್ಕಾರು ತೊಳೆ ತಿಂದರೂ ಬೇಸರವಿಲ್ಲ!

ಬಂಗಾರದ ಬಣ್ಣ, ಹದವಾದ ಗಾತ್ರ, ಮಿದುವಾದ ತೊಳೆ, ರುಚಿಯಂತೂ ಅದ್ಭುತ! ಕಳೆದ ಹತ್ತಾರು ವರ್ಷಗಳಲ್ಲಿ ನಾನು ಅಷ್ಟು ರುಚಿಯ ಹಲಸಿನ ತೊಳೆಯನ್ನೇ ತಿಂದಿರಲಿಲ್ಲ! ಒಂದು ತೊಳೆ ತಿಂದರೆ, ಇನ್ನೊಂದು ಬೇಕು ಎನಿಸುವ ರುಚಿ. ಹಲಸಿನ ತೊಳೆಯನ್ನು ‘ಕೊಬ್ಬರಿ ಕಾಯಿ’ಯಂತಿದೆ ಎಂದು ವರ್ಣಿಸಲು ಪರಿಪೂರ್ಣ ಎನಿಸುವ ಹಲಸಿನ ಹಣ್ಣು ಅದು. ಆ ಹಲಸಿನ ರುಚಿ ಅದೆಷ್ಟು ಮಧುರ ಎನಿಸಿತು ಎಂದರೆ, ಅದೇ ಮರದ ಇನ್ನಷ್ಟು ತೊಳೆಗಳನ್ನು ಇನ್ನೊಮ್ಮೆ ತಂದುಕೊಡಿ ಎಂದು ಆ ಸಹೋದ್ಯೋಗಿ ಯವರನ್ನು ವಿನಂತಿಸಬೇಕು ಎಂದುಕೊಂಡಿರುವೆ!

ಹಲಸಿನ ಹಣ್ಣಿನ ರುಚಿಯಲ್ಲಿ ಬಯಲುಸೀಮೆಯ ಹಲಸಿನ ಮರಗಳಿಗೆ ಸಾಟಿ ಇಲ್ಲ ಎಂದು ಹೇಳಿದೆ ನಷ್ಟೇ. ಆದರೆ, ಹಲಸಿನ ಕಾಯಿ ಮತ್ತು ಹಣ್ಣುಗಳನ್ನು ವಿವಿಧ ಪಾಕಪ್ರಯೋಗಗಳಿಗೆ ಒಳಪಡಿಸು ವಲ್ಲಿ, ಮಲೆನಾಡು ಮತ್ತು ಕರಾವಳಿಯ ಗೃಹಿಣಿಯರನ್ನು ಮೀರಿಸುವವರು ಯಾರೂ ಇಲ್ಲ. ಅದೇಕೆ ಬಯಲುಸೀಮೆಯವರು ಹಲಸಿನ ಕಾಯಿಯನ್ನು, ಹಣ್ಣನ್ನು ಜಾಸ್ತಿ ಅಡುಗೆಮನೆಯೊಳಗೆ ಸೇರಿಸಿಲ್ಲ ಎಂದು ಇಂದಿಗೂ ನನಗೆ ಅಚ್ಚರಿ.

ಏಕೆಂದರೆ, ಅತಿ ಕಡಿಮೆ ಬೆಲೆಯ ತರಕಾರಿಯ ರೂಪದಲ್ಲಿ ಸಿಗುವ ಹಲಸಿನ ಕಾಯಿಯನ್ನು ಕರಾವಳಿಯವರು, ಮಲೆನಾಡಿನವರು ಬಳಸುವ ರೀತಿಯನ್ನು ಕಂಡು ಯಾರೇ ಆದರೂ ನಿಬ್ಬೆರ ಗಾಗಲೇಬೇಕು. ನಮ್ಮ ಹಳ್ಳಿಯಲ್ಲಿ ಹಲಸಿನ ಕಾಯಿಯನ್ನು ದೀರ್ಘಕಾಲ ಉಳಿಸಿಕೊಳ್ಳುವ ಹಲವು ವಿಧಾನಗಳಿವೆ. ಅವುಗಳಲ್ಲಿ, ಹಲಸಿನ ಕಾಯಿಯ ಹಪ್ಪಳವೂ ಒಂದು!

ಮಳೆಗಾಲದಲ್ಲಿ ಬೆಳಗಿನ ಉಪಾಹಾರದ ರೂಪದಲ್ಲಿ ಒಂದೆರಡು ಹಲಸಿನ ಹಪ್ಪಳಗಳನ್ನು ಸುಟ್ಟು ತಿನ್ನುವ ಪರಿಪಾಠವಿತ್ತು! ಬೇಸಗೆ ಆರಂಭವಾಗುತ್ತಿದ್ದಂತೆಯೇ, ಮನೆ ಸುತ್ತಲಿನ ಯಾವ ಹಲಸಿನ ಮರದಲ್ಲಿ ಬಲಿತ ಹಲಸಿನಕಾಯಿ ಇದೆ ಎಂದು ಹುಡುಕಿ, ಅದರ ತೊಳೆಗಳನ್ನು ಬೇರ್ಪಡಿಸಿ, ಅಟ್ಟದಲ್ಲಿ ಬೇಯಿಸಿ, ಒನಕೆ ಬಳಸಿ ಒರಳಿನಲ್ಲಿ ಕುಟ್ಟಿ ಹಿಟ್ಟು ಮಾಡುವುದು ಮೊದಲ ಹಂತ.

ಎರಡು ಮಣೆಗಳ ಮಧ್ಯೆ, ಬಾಳೆಲೆ ಅಥವಾ ಪ್ಲಾಸ್ಟಿಕ್ ಹಾಳೆಗಳ ನಡುವೆ, ಬೇಯಿಸಿದ ಹಿಟ್ಟನ್ನು ಉಂಡೆ ಮಾಡಿಟ್ಟು, ಒತ್ತಿ ಹಪ್ಪಳ ಮಾಡಿ, ಚೆನ್ನಾಗಿ ಒಣಗಿಸಿ ಇಟ್ಟುಕೊಂಡರೆ, ಹಲಸಿನ ಹಪ್ಪಳವು ತಿನಿಸಾಗಿಯೂ ಹಲವು ತಿಂಗಳುಗಳ ಕಾಲ ಬಾಳಿಕೆ ಬರಬಲ್ಲದು, ತುರ್ತು ಸಂದರ್ಭದಲ್ಲಿ ಬೆಳಗಿನ ಉಪಾಹಾರಕ್ಕೂ ಒದಗಿಬರಬಲ್ಲದು.

ಆದರೆ, ಇತ್ತೀಚೆಗಿನ ದಿನಗಳಲ್ಲಿ ನಮ್ಮ ಹಳ್ಳಿಯವರು ಮನೆಯಲ್ಲಿ ಹಲಸಿನ ಹಪ್ಪಳ ಮಾಡುವ ಸಂಪ್ರದಾಯವನ್ನು ಬಹುತೇಕ ತ್ಯಜಿಸಿದ್ದಾರೆ! ಎಲ್ಲೋ ಕೆಲವು ಮನೆಯವರು ಮಾತ್ರ ಮಾಡುತ್ತಾರೆ. ಮೊದಲು ಮನೆ ತುಂಬಾ ಜನ, ಮಕ್ಕಳು ಇದ್ದರು, ಎಲ್ಲರೂ ಸೇರಿ ಹಪ್ಪಳ ಮಾಡುತ್ತಿದ್ದರು. ಇಂದು ನಮ್ಮ ಹಳ್ಳಿಯ ಹೆಚ್ಚಿನ ಮನೆಗಳಲ್ಲಿ ಜನ ಕಡಿಮೆಯಾಗಿದ್ದಾರೆ, ಮಕ್ಕಳ ಸಂಖ್ಯೆಯೂ ಕಡಿಮೆ ಯಾಗಿದೆ; ಮನೆಯಲ್ಲಿರುವವರಿಗೆ, ಭಾರಿ ಶ್ರಮ ಬೇಡುವ ಹಲಸಿನ ಹಪ್ಪಳದ ತಯಾರಿಕೆಯಲ್ಲಿ ಆಸಕ್ತಿ ಇಲ್ಲ! ಆಧುನಿಕತೆಯ ಬಿರುಗಾಳಿಗೆ ಕೊಚ್ಚಿ ಹೋಗುತ್ತಿರುವ ಹಲವು ರುಚಿಕರ ತಿನಿಸುಗಳಲ್ಲಿ, ಮನೆಯಲ್ಲೇ ತಯಾರಿಸುವ ಹಲಸಿನ ಹಪ್ಪಳವೂ ಒಂದು!

ನಮ್ಮ ಹಳ್ಳಿಯವರು ಹಲಸಿನ ಕಾಯಿಯನ್ನು ಕೊಚ್ಚಿ, ಪಲ್ಯ ತಯಾರಿಸುವುದು ಮಾಮೂಲು. ಇದು ಇಂದಿಗೂ ಜನಪ್ರಿಯ. ಹಲಸಿನ ತೊಳೆಯ ಸಾಂಬಾರು, ಸಾರೆ ಸೇರಿಸಿ ಸಾಂಬಾರು, ಪಲ್ಯ ಉಳಿದು ಕೊಂಡು ಬಂದಿವೆ. ಆದರೆ, ಹಲಸಿನಕಾಯಿಯ ಉಪ್ಪಿನಕಾಯಿ ಮಾಡುವ ಪದ್ಧತಿ ಮರೆಯಾಗಿದೆ. ಮಾವಿನಕಾಯಿ ಬೆರೆಸಿ ತಯಾರಿಸುವ ಎಳೆ ಹಲಸಿನಕಾಯಿಯ ಉಪ್ಪಿನಕಾಯಿಯ ರುಚಿಯನ್ನು ಬಲ್ಲವರು, ಮತ್ತೊಮ್ಮೆ ಹಾಕಿಸಿಕೊಂಡು ತಿನ್ನುವುದಂತೂ ಖಚಿತ.

ಈ ಉಪ್ಪಿನಕಾಯಿಯ ಒಂದು ಕೊರತೆ ಎಂದರೆ, ಇದು ಬಹುಕಾಲ ಬಾಳಿಕೆ ಬರದು. ತಯಾರಿಸಿದ ಒಂದೆರಡು ತಿಂಗಳಿನಲ್ಲೇ ಖಾಲಿ ಮಾಡಬೇಕು. ಹಲಸಿನ ತೊಳೆಯ ಚಿಪ್ಸ್ ಮಾಡುವ ಪದ್ಧತಿ ಈಚಿನ ವರ್ಷಗಳಲ್ಲಿ ವಾಣಿಜ್ಯಕವಾಗಿ ಹೆಚ್ಚು ಪ್ರಚಾರ ಪಡೆದಿದ್ದು, ಅಂಗಡಿಗಳಲ್ಲಿ ಅಂಥ ಚಿಪ್ಸ್‌ನ ಪ್ಯಾಕೆಟ್‌ಗಳು ಕಾಣಸಿಗುತ್ತಿವೆ.

ಹಲಸಿನ ಹಣ್ಣಿನಿಂದ ಪಾಯಸ, ಕಡುಬು, ಮುಳುಕ ತಯಾರಿಸುವುದು ಇಂದಿಗೂ ಕರಾವಳಿ ಮತ್ತು ಮಲೆನಾಡಿನಲ್ಲಿ ಜನಪ್ರಿಯ. ಮುಳುಕ (ಬೋಂಡ) ತಯಾರಿಸಿದರೆ, ಅದರ ಜತೆ ಜೇನುತುಪ್ಪ ಬೆರೆಸಿ ಸೇವಿಸುವುದುಂಟು. ಹಲಸಿನ ಕಾಯಿಯ ತೊಳೆಗಳನ್ನು ಉಪ್ಪು ನೀರಿಗೆ ಬೆರೆಸಿಟ್ಟರೆ, ಹಲವು ತಿಂಗಳು ಗಳ ಕಾಲ ಕಾಪಿಡಬಹುದು.

ಇವೆಲ್ಲವನ್ನೂ ಈಗೇಕೆ ವರ್ಣಿಸಿದೆನೆಂದರೆ, ‘ಕೊಬ್ಬರಿ ಕಾಯಿ’ಯ ರುಚಿ ಇದೆ ಎಂದು ಹಲಸಿನ ಹಣ್ಣಿನ ತೊಳೆಗಳನ್ನು ಚಪ್ಪರಿಸಿ ತಿನ್ನುವ ನಮ್ಮ ರಾಜ್ಯದ ಬಯಲುಸೀಮೆಯ ಜನಪದರು, ಅದೇಕೆ ಹಲಸಿನ ಕಾಯಿ ಮತ್ತು ಹಣ್ಣುಗಳನ್ನು ಅಡುಗೆ ಮನೆಯ ಪ್ರಯೋಗಗಳಿಗೆ ಒಳಪಡಿಸಿಲ್ಲ? ಈ ಒಂದು ಪ್ರಶ್ನೆ ನನ್ನನ್ನು ಸದಾ ಕಾಡುತ್ತಿದೆ!