ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಸಚಿವರನ್ನು ಸಚಿವರಾಗಿ ನೋಡಲು ಸಮಸ್ಯೆಯೇನು ?

ಮೊನ್ನೆಯಷ್ಟೆ ಮುಕ್ತಾಯಗೊಂಡ ನಾಡಹಬ್ಬ ದಸರಾದ ಕೊನೆಯ ದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಂದಿಧ್ವಜ ಪೂಜೆ ನೆರವೇರಿಸಬೇಕಿತ್ತು. ಪೂಜಾ ಸ್ಥಳಕ್ಕೆ ಡಿಕೆಶಿ ಅವರೊಂದಿಗೆ ಸಚಿವರಾದ ಶಿವರಾಜ್ ತಂಗಡಗಿ, ಪಿ.ಎಂ. ನರೇಂದ್ರಸ್ವಾಮಿ ಹಾಗೂ ಬಸವಂತಪ್ಪ ಆಗಮಿಸಿದರು. ಆದರೆ ಅಲ್ಲಿ ಭದ್ರತಾ ಕಾರ್ಯದಲ್ಲಿದ್ದ ಐಪಿಎಸ್ ಅಧಿಕಾರಿ ರಿಷ್ಯಾಂತ್ ಮುಖ್ಯಮಂತ್ರಿಗಳನ್ನು ಒಳಬಿಟ್ಟು, ಇನ್ನುಳಿದ ಮೂರು ಸಚಿವರನ್ನು ತಡೆಯಲು ಪ್ರಯತ್ನಿಸಿದರು.

ಸಚಿವರನ್ನು ಸಚಿವರಾಗಿ ನೋಡಲು ಸಮಸ್ಯೆಯೇನು ?

-

ಅಶ್ವತ್ಥಕಟ್ಟೆ

ಪ್ರತಿಯೊಂದು ದೇಶಕ್ಕೂ ಅದರದ್ದೇಯಾದ ರೀತಿ-ರಿವಾಜುಗಳಿರುತ್ತದೆ. ಅದರಲ್ಲಿಯೂ ಜಾತಿ-ಧರ್ಮಗಳ ವಿಷಯದಲ್ಲಿ, ತಮ್ಮ ದೇಶದ ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡುವ ಅಥವಾ ನಿರ್ಬಂಧಿಸುವ ವಿಷಯದಲ್ಲಿ ವಿಶ್ವದ ಪ್ರತಿಯೊಂದು ದೇಶದ್ದೂ ತನ್ನದೇಯಾದ ನಿಲುವನ್ನು ಹೊಂದಿವೆ.

ವಿಶ್ವದ ಬಹುಪಾಲು ದೇಶಗಳು ಜಾತ್ಯತೀತ ತತ್ವದಲ್ಲಿಯೇ ಕಾರ್ಯನಿರ್ವಹಿಸಿದ್ದರೂ, ಕೆಲ ದೇಶಗಳು ನಿರ್ದಿಷ್ಟ ಧರ್ಮವನ್ನು ಪಾಲಿಸಬೇಕೆಂಬ ಕಟ್ಟಲೆಗಳನ್ನು ರೂಪಿಸಿಕೊಂಡಿದೆ. ಜಾತ್ಯತೀತ ರಾಷ್ಟ್ರ ವೆಂದು ಘೋಷಿಸಿಕೊಂಡಿರುವ ಸುಮಾರು 100ಕ್ಕೂ ಹೆಚ್ಚು ದೇಶಗಳ ಪೈಕಿ ವಿಶ್ವದ ಅತಿದೊಡ್ಡ ‘ಪ್ರಜಾಪ್ರಭುತ್ವ’ ದೇಶವೆನಿಸಿರುವ ಭಾರತವೂ ಒಂದು. ಇತರೆ ದೇಶಗಳಿಗೆ ಹೋಲಿಸಿದರೆ, ಭಾರತ ತನ್ನ ಸಂವಿಧಾನದ ಪೀಠಿಕೆಯಲ್ಲಿಯೇ ತನ್ನನ್ನು ತಾನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿಕೊಂಡಿದೆ.

ಭಾರತದಲ್ಲಿ ಆರಂಭದಿಂದಲೂ ಜಾತ್ಯತೀತ ಮನಸ್ಥಿತಿಯೇ ಇದ್ದರೂ ಅಧಿಕೃತವಾಗಿ ಸಂವಿಧಾನದ ಪೀಠಿಕೆಯಲ್ಲಿಯೇ ಜಾತ್ಯತೀತ ರಾಷ್ಟ್ರವೆಂದು ಪ್ರಸ್ತಾಪಿಸಲು ಮುಂದಾಗಿದ್ದು, 1976ರ ಡಿ.16ರಂದು. 1950ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ‘ಜಾತ್ಯತೀತ ರಾಷ್ಟ್ರ’ ಎನ್ನುವ ಪದವಿರಲಿಲ್ಲ. ಆದರೆ 1976ರಲ್ಲಿ ಜಾತ್ಯತೀತ ರಾಷ್ಟ್ರವೆನ್ನುವ ಪದವನ್ನು ಸೇರಿಸಲು ಸಾಂವಿಧಾನಿಕ 42ನೇ ತಿದ್ದುಪಡಿ ತರಲಾಯಿತ್ತು. ಈ ಸಾಂವಿಧಾನಿಕ ತಿದ್ದುಪಡಿಗೆ ಜ.೩ರಂದು ರಾಷ್ಟ್ರಪತಿಗಳಿಂದ ಒಪ್ಪಿಗೆ ಸಿಕ್ಕ ಬಳಿಕ ಅಧಿಕೃತವಾಗಿ ಭಾರತ ತನ್ನನ್ನು ತಾನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿಕೊಂಡಿತು.

ಇದನ್ನೂ ಓದಿ: Ranjith H Ashwath Column: ಬಿಜೆಪಿಯ ಮೌನ ಯಾರಿಗೆ ಲಾಭ ?

ಜಾತ್ಯತೀತ ರಾಷ್ಟ್ರವೆಂದರೆ, ಯಾವುದೇ ಒಂದು ನಿರ್ದಿಷ್ಟ ಜಾತಿ, ಧರ್ಮವನ್ನು ಮೇಲು-ಕೀಳೆಂದು ಮಾಡದೇ ದೇಶದಲ್ಲಿ ಜೀವಿಸುವ ಪ್ರತಿಯೊಬ್ಬನಿಗೂ ಉದ್ಯೋಗ, ಶಿಕ್ಷಣ, ಕಾನೂನು, ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸಮಾನತೆ ನೀಡುವುದಾಗಿದೆ. ಆದರೆ ಹಿಂದುಳಿದ- ಶೋಷಿತ ಸಮುದಾಯದವರು ಮೇಲೆ ಬರಲೆಂಬ ಕಾರಣಕ್ಕಾಗಿ, ಸಂವಿಧಾನದಲ್ಲಿ ಮೀಸಲು ಕಲ್ಪಿಸಲಾಗಿದೆ. ಆದರೆ ಯಾವ ಜಾತಿ ವ್ಯವಸ್ಥೆಯನ್ನು ತೆಗೆದು ಹಾಕಬೇಕೆಂಬ ಆಶಯದೊಂದಿಗೆ ಸಂವಿಧಾನವನ್ನು ರಚಿಸಲಾಯಿತೋ, ಒಂದಿಲ್ಲೊಂದು ರೀತಿ ಅದೇ ಜಾತಿ ವ್ಯವಸ್ಥೆ ಇಡೀ ದೇಶದ ವ್ಯವಸ್ಥೆಯನ್ನು ಆಳುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಸಂವಿಧಾನದ ಆಶಯವನ್ನು ಕಾಪಾಡುತ್ತೇವೆ ಎಂದು ಹೇಳಿಕೊಂಡು ಚುನಾವಣೆಗಳಿಗೆ ಹೋಗುವ ನಾಯಕರೇ, ಸಂವಿಧಾನದಲ್ಲಿರುವ ‘ಜಾತ್ಯತೀತ ದೇಶ’ವೆಂದು ಹೇಳಿಕೊಳ್ಳುತ್ತಲೇ ಪ್ರತಿಯೊಂದು ವಿಷಯ ದಲ್ಲಿಯೂ ಜಾತಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ, ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ಸಂಸದನಾಗುವ ತನಕ ಚುನಾವಣೆಗಳಲ್ಲಿ ಜಾತಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಈ ಜಾತಿ ಲೆಕ್ಕಾಚಾರದ ಆಚೆ ಯಾರೇ ಆಲೋಚಿಸಲು ಪ್ರಯತ್ನಿಸಿದರೂ, ಅದು ‘ಗಾಳಿಗೆ ಗುದ್ದಿದಂತೆ’ ಎನ್ನುವುದು ಇಂದಿನ ವಾಸ್ತವ.

ಜಾತಿ ಲೆಕ್ಕಾಚಾರವಿಲ್ಲದೇ ಸಾರ್ವಜನಿಕ ಜೀವನದಲ್ಲಿರುತ್ತೇವೆ. ರಾಜಕೀಯ ಲೆಕ್ಕಾಚಾರದಲ್ಲಿ ಈ ಜಾತಿಯ ಲೆಕ್ಕಾಚಾರವನ್ನು ಸೇರಿಸುವುದಿಲ್ಲ ಎಂದು ಹೇಳುವ ಧೈರ್ಯವನ್ನು ಯಾವುದೇ ಪಕ್ಷ ಮಾಡಲು ಹೋಗುವುದಿಲ್ಲ. ಇನ್ನು ಈ ಜಾತಿ ಲೆಕ್ಕಾಚಾರ ಕೇವಲ ರಾಜಕೀಯಕ್ಕೆ ಸೀಮಿತವಾಗಿ ಉಳಿಯದೇ, ಆಡಳಿತ ವರ್ಗ, ಅಧಿಕಾರಿಗಳ ವರ್ಗಾವಣೆಯಿಂದ ಹಿಡಿದು ಪ್ರತಿ ಹಂತದಲ್ಲಿಯೂ ಜಾತಿ ವ್ಯವಸ್ಥೆ ತಲೆದೋರಿ ರುವುದನ್ನು ಬಿಡಿಸಿ ಹೇಳಬೇಕಿಲ್ಲ. ಅದು ಈಗ ಯಾವ ಹಂತಕ್ಕೆ ಬಂದು ನಿಂತಿದೆ ಎಂದರೆ, ಮೊನ್ನೆ ದಸರಾ ಹಬ್ಬದಲ್ಲಿ ನಂದಿಧ್ವಜ ಪೂಜೆ ಸಮಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮೂರು ಸಚಿವರನ್ನು ತಡೆಹಿಡಿದರು ಎನ್ನುವುದು ದೊಡ್ಡ ಸುದ್ದಿಯಾಗಲಿಲ್ಲ. ಆದರೆ ಆ ಮೂರು ಸಚಿವರು ‘ದಲಿತ’ರಾಗಿದ್ದರು ಎನ್ನುವ ಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು.

R A H

ಹೌದು, ಮೊನ್ನೆಯಷ್ಟೆ ಮುಕ್ತಾಯಗೊಂಡ ನಾಡಹಬ್ಬ ದಸರಾದ ಕೊನೆಯ ದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಂದಿಧ್ವಜ ಪೂಜೆ ನೆರವೇರಿಸಬೇಕಿತ್ತು. ಪೂಜಾ ಸ್ಥಳಕ್ಕೆ ಡಿಕೆಶಿ ಅವರೊಂದಿಗೆ ಸಚಿವರಾದ ಶಿವರಾಜ್ ತಂಗಡಗಿ, ಪಿ.ಎಂ. ನರೇಂದ್ರಸ್ವಾಮಿ ಹಾಗೂ ಬಸವಂತಪ್ಪ ಆಗಮಿಸಿದರು. ಆದರೆ ಅಲ್ಲಿ ಭದ್ರತಾ ಕಾರ್ಯದಲ್ಲಿದ್ದ ಐಪಿಎಸ್ ಅಧಿಕಾರಿ ರಿಷ್ಯಾಂತ್ ಮುಖ್ಯಮಂತ್ರಿಗಳನ್ನು ಒಳಬಿಟ್ಟು, ಇನ್ನುಳಿದ ಮೂರು ಸಚಿವರನ್ನು ತಡೆಯಲು ಪ್ರಯತ್ನಿಸಿದರು. ಆಗ ಸಚಿವ ಶಿವರಾಜ್ ತಂಗಡಗಿ ‘ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ’ ಎಂದು ಹೇಳಿಕೊಂಡು ರಿಷ್ಯಾಂತ್‌ ರನ್ನು ದಾಟಿದರು. ಆದರೆ ಬಸವಂತಪ್ಪ ಹಾಗೂ ನರೇಂದ್ರಸ್ವಾಮಿ ಅವರನ್ನು ಅಡ್ಡಹಾಕಿದ್ದು ಭಾರಿ ವಿವಾದಕ್ಕೆ ಕಾರಣವಾಯಿತು. ಏರುಧ್ವನಿಯಲ್ಲಿ ಸಚಿವರು ಹಾಗೂ ಅಧಿಕಾರಿಯ ನಡುವೆ ಮಾತಾಗುತ್ತಿದ್ದಂತೆ ಸ್ವತಃ ಸಿಎಂ ಡಿ.ಕೆ.ಶಿವಕುಮಾರ್ ಒಳಗೆ ಬಿಡಲು ಹೇಳಿದರು, ರಿಷ್ಯಾಂತ್ ಕೂಡಲೇ ಸಚಿವರನ್ನು ಒಳಬಿಟ್ಟರು. ಅಲ್ಲಿಂದ ಪೂಜಾ ಕಾರ್ಯಕ್ರಮಗಳೆಲ್ಲ ಸಾಂಗವಾಗಿ ನೆರವೇರಿತು ಎನ್ನುವುದು ಬೇರೆ ಮಾತು. ಈ ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಡೀ ಘಟನಾವಳಿಯ ಬಗ್ಗೆ ಸಮಗ್ರ ವರದಿ ಪಡೆಯಲು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದರು. ಇದಾದ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಾಂತ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಲಿನಿ ರಜನೀಶ್ ಅವರಿಗೆ ಭೇಟಿಯಾಗಿ ‘ವಿವರಣೆ’ ನೀಡಿದ್ದೂ ಆಯಿತು.

ನಂದಿಧ್ವಜ ಪೂಜೆಯ ವೇಳೆ ಜನಸಂದಣಿ ತಗ್ಗಿಸುವ ಉದ್ದೇಶದಿಂದ ‘ಹಿರಿಯ ಅಧಿಕಾರಿ’ಗಳು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಯಾರನ್ನೂ ಒಳಬಿಡಬಾರದು ಎನ್ನುವ ಸೂಚನೆಯನ್ನು ಮಾತ್ರ ಪಾಲಿಸಿದ್ದೇನೆ ಎನ್ನುವುದು ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿಯವರ ಮುಂದಿಟ್ಟ ವಾದವಾಗಿತ್ತು ಎನ್ನುವ ಸುದ್ದಿಯಿದೆ. ಮುಂದೆ ನಡೆಯುವುದೆಲ್ಲ ಕಾನೂನಾತ್ಮಕ ಪ್ರಕ್ರಿಯೆ ಅಷ್ಟೇ.

ಆದರೆ ಭಾರತದಲ್ಲಿ ಯಾವುದೇ ವಿಷಯ ಬಂದರೂ ಅದಕ್ಕೊಂದು ರಾಜಕೀಯ ತಿರುವು, ಜಾತಿಯ ಬಣ ಹಚ್ಚದೇ ಹೋದರೆ ಆ ವಿಷಯ ಇತ್ಯರ್ಥವಾಗುವುದಿಲ್ಲ. ಈ ದಸರಾ ಉದ್ಘಾಟನಾ ಕಾರ್ಯಕ್ರಮದ ವಿಷಯದಲ್ಲಿಯೂ ಇದೇ ಆಗಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ‘ಸಚಿವರನ್ನು’ ಒಳಬಿಟ್ಟಿಲ್ಲ ಎನ್ನುವ ವಿಷಯಕ್ಕಿಂತ ಈ ಮೂವರು ದಲಿತ ಸಚಿವರು ಎನ್ನುವ ಕಾರಣಕ್ಕೆ ಒಳಬಿಟ್ಟಿಲ್ಲ ಎಂದು ಕಿಡಿ ಹೊತ್ತಿಸಿದರು. ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ‘ಡಿ.ಕೆ.ಶಿವಕುಮಾರ್ ಹಿಂದೆ ಹೋಗುತ್ತಿದ್ದ ಮೂರು ಸಚಿವರು ದಲಿತರು. ಮುಖ್ಯಮಂತ್ರಿ ಮುಂದೆ ಹೋದ ತಕ್ಷಣ ಒಬ್ಬ ಪೊಲೀಸ್ ಅಧಿಕಾರಿ, ಮಂತ್ರಿಗಳನ್ನೇ ತಡೀತಾರೆ. ಅಂದರೆ ಸಚಿವರಿಗಿಂತ, ಸರಕಾರಕ್ಕಿಂತ ಅಧಿಕಾರಿ ದೊಡ್ಡವರಾ? ತಡೆದ ಮೇಲೆ ಇವರ ಕಿರುಚಾಟ ನೋಡಿ ಮುಖ್ಯಮಂತ್ರಿಯವರು ವಾಪಸ್ ಹಿಂದೆ ನೋಡಿದ್ದಾರೆ.

ಇವರು ಕಿರುಚಲಿಲ್ಲ ಅಂದರೆ ಅವರು ಅದನ್ನು ನೋಡುತ್ತಿರಲಿಲ್ಲ. ಒಂದು ಸಚಿವರನ್ನು ಬಿಡಿ ಎಂದು ಮುಖ್ಯಮಂತ್ರಿ ಶಿಫಾರಸು ಮಾಡುವಷ್ಟು ಸರಕಾರ ದುರ್ಬಲವಾಯಿತೇ? ಅಥವಾ ಮುಖ್ಯಮಂತ್ರಿಗಳು ದುರ್ಬಲರೇ? ಅಥವಾ ಸಚಿವರು ದುರ್ಬಲರೇ? ಅಥವಾ ಅವರು ದಲಿತ ಸಚಿವರು. ಅವರನ್ನು ಬಿಡಬಾರದು ಎನ್ನುವುದು ಸರಕಾರದ ಉದ್ದೇಶವಾಗಿತ್ತೇ? ಈ ಅಧಿಕಾರಿಗೆ ಅವರು ದಲಿತರು ಬಿಡಬೇಡಿ ಅಂತೇನಾದರೂ ಯಾರಾದರೂ ಆದೇಶ ಮಾಡಿದ್ದರೇ? ಅಥವಾ ಮುಖ್ಯಮಂತ್ರಿಗಳು ಸೂಚಿಸಿದ್ದರೇ?’ ಎಂದು ಸರಣಿ ಪ್ರಶ್ನೆಗಳನ್ನು ಹಾಕಿದರು.

ಇನ್ನು ಜೆಡಿಎಸ್‌ನ ಕೆಲ ನಾಯಕರು, ‘ದೇಶಾದ್ಯಂತ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದುಕೊಂಡು ನಾವು ಜಾತ್ಯತೀತರು, ಸಮ ಸಮಾಜ ತತ್ವದಲ್ಲಿ ನಂಬಿಕೆ ಉಳ್ಳವರು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ಅವರದೇ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರದ ಆಡಳಿತದಲ್ಲಿ ಮೈಸೂರಿನ ದಸರಾ ಮತ್ತು ಜಂಬೂಸವಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ದಲಿತ ಮಂತ್ರಿಗಳನ್ನು ಅವಮಾನ ಮಾಡಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಈ ಘಟನೆಯ ಬಗ್ಗೆ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ಕೊಡಬೇಕು’ ಎಂದು ಪ್ರಿಯಾಂಕ್ ಖರ್ಗೆ ಕಡೆ ತಿರುಗಿಸಿ ‘ರಾಜೀನಾಮೆ’ಗೆ ಆಗ್ರಹಿಸಿದರು.

ಇಡೀ ಪ್ರಕರಣದಲ್ಲಿ ಸಚಿವರುಗಳೊಂದಿಗೆ ಎಸ್‌ಪಿ ರಿಷ್ಯಾಂತ್ ನಡೆದುಕೊಂಡ ರೀತಿಯನ್ನು ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ. ಈ ರೀತಿ ಸಚಿವರನ್ನು ಹೋಮ್ ಗಾಡ್ ಗಳೋ, ಪೇದೆಗಳೋ ಅಥವಾ ಇದೀಗ ತಾನೆ ಬಂದ ಕೆಳಹಂತದ ಅಧಿಕಾರಿಗಳು ತಡೆದಿದ್ದರೆ ಅಥವಾ ನಡೆದುಕೊಂಡಿದ್ದರೆ ಸಚಿವರ ಮುಖಪರಿಚಯವಿಲ್ಲ ಎನ್ನಬಹುದಾಗಿತ್ತು. ಅಥವಾ ಯಾವುದೋ ಕ್ಷೇತ್ರದ ಶಾಸಕರೊಬ್ಬರನ್ನು ಎಸ್‌ಪಿ ಹಂತದ ಅಧಿಕಾರಿಯೇ ತಡೆದಿದ್ದರೂ, ಅಚಾನಕ್ ಆಗಿ ಆಗಿರಬಹುದು ಎಂದು ಹೇಳಬಹುದಾಗಿತ್ತು. ಆದರೆ ಮೇಲಾಧಿಕಾರಿಗಳ ‘ಮೌಖಿಕ’ ಸೂಚನೆಯ ಹೊರತಾಗಿಯೂ ಎಸ್‌ಪಿ ಹಂತದ ಅಧಿಕಾರಿಗೆ ಯಾರನ್ನು ತಡೆಯಬೇಕು, ತಡೆಯಬಾರದು ಎನ್ನುವ ತೀರ್ಮಾನವನ್ನು ಸ್ಥಳದಲ್ಲಿಯೇ ತೆಗೆದುಕೊಳ್ಳುವ ಸಾಮರ್ಥ್ಯ ವಿರುತ್ತದೆ. ಈ ವಿಷಯದಲ್ಲಿ ಎಸ್‌ಪಿ ನಡೆದುಕೊಂಡ ರೀತಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

ಆದರೆ ಅಧಿಕಾರಿ ಸಚಿವರ ವಿರುದ್ಧ ನಡೆದುಕೊಂಡಿರುವುದನ್ನು ‘ದಲಿತ’ ಸಮುದಾಯಕ್ಕೆ ಲಿಂಕ್ ಮಾಡುತ್ತಿರುವುದಕ್ಕೆ ಬಹುತೇಕರ ಆಕ್ಷೇಪವಿದೆ. ಈ ವಿಷಯದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ ಅವರ ಮಾತಿಗೆ ಕೊಂಚ ತೂಕವಿತ್ತು. ಅವರು ಇಡೀ ಪ್ರಕರಣವನ್ನು ದಲಿತ ಸಮುದಾಯಕ್ಕೆ ಅಂಟಿಸುವ ಬದಲು, ಸಚಿವರನ್ನು ಸಚಿವರನ್ನಾಗಿ ನೋಡಿ ಎನ್ನುವುದಾಗಿತ್ತು. ‘ಮುಖ್ಯಮಂತ್ರಿಗಳಿಗೆ ಅವರದೇ ಆದ ಶಿಷ್ಟಾಚಾರವಿರುತ್ತದೆ. ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂಬ ಸೂಚನೆ ಪೊಲೀಸರಿಗೆ ಇದ್ದಿರಬಹುದು. ಮೇಲಾಧಿಕಾರಿಗಳಿಂದ ಬಂದ ಸೂಚನೆಗಳನ್ನು ಪೊಲೀಸರು ಪಾಲಿಸಿರುವುದರಲ್ಲಿ ತಪ್ಪೇನಿದೆ? ಸಚಿವರನ್ನು ಪೊಲೀಸರು ತಡೆದಿದ್ದರೂ, ನಂತರ ಮುಖ್ಯಮಂತ್ರಿ ಗಳೇ ಹಿಂದಿರುಗಿ ಅವರನ್ನು ಕರೆದುಕೊಂಡು ಹೋಗಿದ್ದಾರೆ.

ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ. ಈ ಘಟನೆಯನ್ನು ಮುಂದಿಟ್ಟುಕೊಂಡು ‘ದಲಿತ ಸಚಿವರು’ ಎಂಬ ಪದವನ್ನು ಪದೇಪದೆ ಬಳಸುತ್ತಿರುವುದು ಸರಿಯಲ್ಲ. ಸಚಿವರು ಎಂದು ಕರೆದರೆ ಸಾಕಲ್ಲವೇ? ಪ್ರತಿಯೊಬ್ಬರನ್ನೂ ಅವರ ಜಾತಿಯ ಹೆಸರಿನಿಂದಲೇ ಗುರುತಿಸಬೇಕೇ? ಬೇರೆ ಸಚಿವರನ್ನು ಅವರ ಜಾತಿಯ ಹೆಸರಿನಿಂದ ಕರೆಯಲಾಗುತ್ತದೆಯೇ?’ ಎಂದು ಪ್ರಶ್ನಿಸಿದ್ದರು.

ಜಾತಿಯ ಹೆಸರಿನಿಂದಲೇ ಗುರುತಿಸಬೇಕೇ? ಎನ್ನುವ ಪರಮೇಶ್ವರ್ ಅವರ ಪ್ರಶ್ನೆ ಕೇವಲ ಈ ಘಟನೆ ಸೀಮಿತವಾಗದೇ ಪ್ರತಿ ವಿಷಯದಲ್ಲಿ ವ್ಯಕ್ತಿಯನ್ನು ಜಾತಿ ಆಧಾರದಲ್ಲಿ ನೋಡದೇ ವ್ಯಕ್ತಿಯಾಗಿ ನೋಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಅವರೇ ಉತ್ತರಿಸಬೇಕು. ದಸರಾ ಕಾರ್ಯಕ್ರಮದಲ್ಲಿ ನಡೆದ ಈ ಘಟನೆ ರಾಜಕೀಯವಾಗಿ, ಆಡಳಿತಾತ್ಮಕವಾಗಿ ಒಂದೊಂದು ಆಯಾಮದಲ್ಲಿ ಕಾಣಿಸಬಹುದು. ಆದರೆ ಈ ಘಟನೆಯ ಬಳಿಕ ರಾಜ್ಯಮಟ್ಟದ ಕಾರ್ಯಕ್ರಮಗಳಿಗೆ, ಮುಖ್ಯಮಂತ್ರಿಗಳು ಭಾಗವಹಿಸು ವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಈಗಿರುವ ಶಿಷ್ಟಾಚಾರವನ್ನು ಇನ್ನಷ್ಟು ಗಟ್ಟಿಗೊಳಿಸ ಬೇಕಿದೆ. ಪ್ರಧಾನಮಂತ್ರಿ, ರಾಷ್ಟ್ರಪತಿ, ರಾಜ್ಯಪಾಲರ ಕಾರ್ಯಕ್ರಮಗಳಿಗೆ ಅಥವಾ ಅವರು ಭಾಗವಹಿಸುವ ವೇದಿಕೆಯಲ್ಲಿ ಸ್ಪಷ್ಟ ಶಿಷ್ಟಾಚಾರಗಳಿವೆ.

ಅವರೊಂದಿಗೆ ಯಾರು ವೇದಿಕೆ ಹಂಚಿಕೊಳ್ಳಬೇಕು? ಎನ್ನುವ ಸ್ಪಷ್ಟ ನಿರ್ದೇಶನಗಳು ಇರುವು ದರಿಂದ ಸಾಮಾನ್ಯವಾಗಿ ಗೊಂದಲಗಳು ಸೃಷ್ಟಿಯಾಗುವುದಿಲ್ಲ. ಆದರೆ ಮುಖ್ಯಮಂತ್ರಿಗಳ ಶಿಷ್ಟಾಚಾರದ ವಿಷಯದಲ್ಲಿ ಈ ರೀತಿಯ ಸ್ಪಷ್ಟನೆ ಇಲ್ಲ. ಇದ್ದರೂ ಅದನ್ನು ಸ್ಥಳೀಯ ನಾಯಕರ ಒತ್ತಡಕ್ಕೆ ಅಥವಾ ರಾಜಕೀಯ ಲೆಕ್ಕಾಚಾರಗಳಿಗೆ ಪಾಲನೆಯಾಗುವುದಿಲ್ಲ. ಆದ್ದರಿಂದ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರ ಕಾರ್ಯಕ್ರಮದಂತೆ ಮುಖ್ಯಮಂತ್ರಿಗಳ ಕಾರ್ಯಕ್ರಮಗಳಿಗೂ ನಿರ್ದಿಷ್ಟ ಶಿಷ್ಟಾಚಾರಗಳನ್ನು ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದರೆ ಇಂತಹ ಇಕ್ಕಟ್ಟಿಗೆ ಅಧಿಕಾರಿಗಳೂ ಸಿಲುಕುವುದಿಲ್ಲ. ನಮ್ಮನ್ನೇ ತಡೆದರು ಎನ್ನುವ ಬೇಸರ ಸಚಿವರುಗಳಿಗೂ ಇರುವುದಿಲ್ಲ.