Leena Joshi Column: ಇಸ್ರೇಲ್ ಹುಡುಕುತ್ತಿರುವ ಆ ಒಂದು ಶವ
ಶ್ರೀಮಂತ ಉದ್ಯಮಿ, ಪ್ರಭಾವಿ ವ್ಯಕ್ತಿ, ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳ ಆತ್ಮೀಯ ಸ್ನೇಹಿತ, ಕೆಲವೇ ತಿಂಗಳುಗಳ ಹಿಂದೆ ಸಿರಿಯಾದ ಉಪ ರಕ್ಷಣಾ ಮಂತ್ರಿಯಾಗಬೇಕಿದ್ದ ವ್ಯಕ್ತಿ. ಸಿರಿಯಾದಲ್ಲಿ ಇಸ್ರೇಲ್ ನ ಗೂಢಚರ. ನಾಲ್ಕು ವರ್ಷಗಳ ಕಾಲ ಸಿರಿಯಾದ ರಾಜಕೀಯ ಮತ್ತು ಮಿಲಿಟರಿ ವಲಯ ಗಳಲ್ಲಿ ಬೆರೆತು ಹೋಗಿದ್ದ ಆತ, ಶತ್ರುಗಳ ವಿಶ್ವಾಸ ಗಳಿಸಿದ್ದ. ಅವರೊಂದಿಗೆ ಊಟ ಮಾಡಿದ್ದ, ಪಾರ್ಟಿ ಮಾಡಿದ್ದ, ಅವರ ರಹಸ್ಯಗಳನ್ನು ತಿಳಿದುಕೊಂಡಿದ್ದ. ಅವನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸ ಲಾಯಿತು.
-
ಅಮೃತಕಾಲ
ಲೀನಾ ಜೋಶಿ
ಒಂದು ದೇಶವನ್ನು ಉಳಿಸಲು, ಮತ್ತೊಂದು ದೇಶದ ನಂಬಿಕೆಯನ್ನು ಗೆಲ್ಲಬೇಕು. ಆ ನಂಬಿಕೆಯನ್ನು ಗೆಲ್ಲಲು, ಒಬ್ಬ ಮನುಷ್ಯ ತನ್ನ ಅಸಲಿ ಗುರುತನ್ನೇ ಅಳಿಸಿಹಾಕಬೇಕು. ಒಂದು ದೇಶಕ್ಕಾಗಿ ತನ್ನ ಗುರುತನ್ನೇ ಬದಲಿಸಿಕೊಂಡಿದ್ದ ಮನುಷ್ಯನಿಗೆ, ಕೊನೆಯ ಕ್ಷಣದಲ್ಲಿ ಉಳಿದಿದ್ದದ್ದು ತನ್ನ ನಿಜವಾದ ಹೆಸರಷ್ಟೇ! ಮೇ ತಿಂಗಳ 18ನೇ ತಾರೀಕು, 1965, ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ಅಲ್-ಮರ್ಜೆ ಚೌಕದಲ್ಲಿ ಸಾವಿರಾರು ಜನರು ಸೇರಿದ್ದರು.
ಅಂದು ಅಲ್ಲಿ ನಡೆಯಲಿದ್ದದ್ದು ಸಾರ್ವಜನಿಕ ಕಾರ್ಯಕ್ರಮವಲ್ಲ. ಸಿರಿಯಾದ ಸೇನಾ ಮತ್ತು ರಾಜಕೀಯ ರಹಸ್ಯಗಳನ್ನು ಇಸ್ರೇಲ್ ಗೆ ತಲುಪಿಸುತ್ತಿದ್ದ ಗೂಢಚಾರನೊಬ್ಬನಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. ಆತನ ಅಸಲಿ ಹೆಸರು ಎಲಿ ಕೋಹೆನ್ (Eli Cohen). ಸಿರಿಯಾದಲ್ಲಿ ಆತ ಕಮಾಲ್ ಅಮೀನ್ ಥಾಬೆಟ್.
ಶ್ರೀಮಂತ ಉದ್ಯಮಿ, ಪ್ರಭಾವಿ ವ್ಯಕ್ತಿ, ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳ ಆತ್ಮೀಯ ಸ್ನೇಹಿತ, ಕೆಲವೇ ತಿಂಗಳುಗಳ ಹಿಂದೆ ಸಿರಿಯಾದ ಉಪ ರಕ್ಷಣಾ ಮಂತ್ರಿಯಾಗಬೇಕಿದ್ದ ವ್ಯಕ್ತಿ. ಸಿರಿಯಾದಲ್ಲಿ ಇಸ್ರೇಲ್ ನ ಗೂಢಚರ. ನಾಲ್ಕು ವರ್ಷಗಳ ಕಾಲ ಸಿರಿಯಾದ ರಾಜಕೀಯ ಮತ್ತು ಮಿಲಿಟರಿ ವಲಯಗಳಲ್ಲಿ ಬೆರೆತು ಹೋಗಿದ್ದ ಆತ, ಶತ್ರುಗಳ ವಿಶ್ವಾಸ ಗಳಿಸಿದ್ದ. ಅವರೊಂದಿಗೆ ಊಟ ಮಾಡಿದ್ದ, ಪಾರ್ಟಿ ಮಾಡಿದ್ದ, ಅವರ ರಹಸ್ಯಗಳನ್ನು ತಿಳಿದುಕೊಂಡಿದ್ದ. ಅವನನ್ನು ಸಾರ್ವಜನಿಕ ವಾಗಿ ಗಲ್ಲಿಗೇರಿಸಲಾಯಿತು.
ಇದನ್ನೂ ಓದಿ: Leena Joshi Column: ಮಧ್ಯವಯಸ್ಸಿನಲ್ಲಿ ಗಾಂಧಿಯನ್ನು ಕಾಡಿದವಳು
ಮೃತದೇಹ ಆರು ಗಂಟೆಗಳ ಕಾಲ ನೇತಾಡುತ್ತಿತ್ತು. ನೆಟ್ಫ್ಲಿಕ್ಸ್ನ The Spy ಸರಣಿಯ ಕೊನೆಯ ಭಾಗದಲ್ಲಿ ಎಲಿ ಕೋಹೆನ್ನ ಅಂತಿಮ ದಿನಗಳು, ನೋಡುಗರ ಮನಸ್ಸನ್ನು ಭಾರವಾಗಿಸುತ್ತವೆ. ಜೈಲಿನ ಗೋಡೆಗಳ ನಡುವೆ ಸಿಲುಕಿದ್ದ ಆತನಿಗೆ ಸ್ವಾತಂತ್ರ್ಯದ ಕನಸು ದೂರವಾಗಿತ್ತು. 16 ವಾರಗಳ ಕಾಲ ಚಿತ್ರಹಿಂಸೆಯಿಂದ ನಲವತ್ತು ವರ್ಷದ ದೇಹ ಬಸವಳಿದಿತ್ತು. ಹಲ್ಲು, ಉಗುರುಗಳನ್ನು ಕಿತ್ತು, ಕಣ್ಣಲ್ಲಿ ತಂಬಾಕು ತುರುಕಿ, ನಾಲಿಗೆ ಮತ್ತು ಮರ್ಮಾಂಗಗಳಿಗೆ ಎಲೆಕ್ಟ್ರಿಕ್ ಶಾಕ್ ನೀಡಲಾಗುತ್ತಿತ್ತು. ಕೊನೆಗೆ ಸಿರಿಯಾ ಅವನಿಗೆ ಮರಣದಂಡನೆ ವಿಧಿಸಿತು.
ಎಲಿ ಕೋಹೆನ್ 1924ರಲ್ಲಿ ಈಜಿಪ್ತಿನ ಅಲೆಕ್ಸಾಂಡ್ರಿಯಾದಲ್ಲಿ ಜನಿಸಿದ ಯಹೂದಿ ಮೂಲದ ವ್ಯಕ್ತಿ. ತಂದೆ ಸಿರಿಯಾದಿಂದ ಈಜಿಪ್ತಿಗೆ ವಲಸೆ ಬಂದಿದ್ದರು. ಮನೆಯಲ್ಲಿ ಸಿರಿಯನ್ ಅರೇಬಿಕ್ ಭಾಷೆ ಮಾತನಾಡು ತ್ತಿದ್ದರು. ಶಾಲೆಯಲ್ಲಿ ಇಂಗ್ಲಿಷ್ ಮತ್ತು ಹೀಬ್ರೂ ಕಲಿತ ಎಲಿ ಕುಶಾಗ್ರಮತಿಯಾಗಿದ್ದ. 1948ರಲ್ಲಿ ಇಸ್ರೇಲಿನ ಸ್ಥಾಪನೆಯ ನಂತರ ಕುಟುಂಬ ಈಜಿಪ್ಟಿನಿಂದ ಇಸ್ರೇಲ್ಗೆ ಬಂದು ನೆಲೆಸಿತು. ಮುಂದೆ ಇಸ್ರೇಲ್ನ ಗುಪ್ತಚರ ಸಂಸ್ಥೆಯಾದ ಮೊಸಾದ್ ನೊಂದಿಗೆ ಸೇರಿಕೊಂಡ. ಅವನಿಗೆ ಕೊಟ್ಟಿದ್ದು ಸಿರಿಯಾದಲ್ಲಿ ನೆಲೆಸಿ ಗುಪ್ತವಾಗಿ ಮಾಹಿತಿ ತಲುಪಿಸುವ ಕೆಲಸ. ಆತನಿಗೆ ನೀಡಲಾದ ಸವಾಲು ಸಾಮಾನ್ಯವಾಗಿರಲಿಲ್ಲ, ಸಿರಿಯಾದ ರಾಜಕೀಯ ಮತ್ತು ಮಿಲಿಟರಿ ವ್ಯವಸ್ಥೆಯೊಳಗೆ ನುಸುಳಬೇಕು, ಅಲ್ಲಿನ ಪ್ರಭಾವಿ ವ್ಯಕ್ತಿಗಳ ವಿಶ್ವಾಸ ಗಳಿಸಬೇಕು, ಅವರಿಗೆ ಅನುಮಾನ ಬರದಂತೆ ಅವರ ನಡುವೆಯೇ ಬದುಕಬೇಕು ಮತ್ತು ರಹಸ್ಯವಾದ ಮಾಹಿತಿಯನ್ನು ಇಸ್ರೇಲ್ಗೆ ತಲುಪಿಸಬೇಕು. ಇದಕ್ಕಾಗಿ ಮೊಸಾದ್ ಕೊಟ್ಟ ಹೊಸ ಗುರುತು ಕಮಾಲ್ ಅಮೀನ್ ಥಾಬೆಟ್!
ಅರ್ಜೆಂಟೀನಾದಲ್ಲಿ ನೆಲೆಸಿದ್ದ ಶ್ರೀಮಂತ ಸಿರಿಯನ್ ಉದ್ಯಮಿ ಎಂಬ ಗುರುತಿನೊಂದಿಗೆ ಸಿರಿಯಾ ಪ್ರವೇಶಿಸಿದ. ಆತ ಕೇವಲ ಅಧಿಕಾರಿಗಳ ಪರಿಚಯ ಮಾಡಿಕೊಳ್ಳಲಿಲ್ಲ. ಅವರೊಂದಿಗೆ ಸ್ನೇಹ ಬೆಳೆಸಿದ, ದೊಡ್ಡ ಔತಣಕೂಟ ಆರ್ಗನೈಸ್ ಮಾಡುತ್ತಿದ್ದ, ದುಬಾರಿ ಮದ್ಯ, ಮಾನಿನಿ, ಉತ್ಕೃಷ್ಟ ಉಡುಗೊರೆಗಳನ್ನು ಹಂಚಿ ವ್ಯವಸ್ಥೆಯ ಒಳಗೆ ನುಸುಳಿದ. ಅಧಿಕಾರಿಗಳ ಸೆಕ್ರೆಟರಿಗಳ ಜೊತೆಗೆ ಅವನಿಗೆ ಗೆಳೆತನವಿತ್ತು.
ಸಿರಿಯಾದ ಉನ್ನತ ಮಿಲಿಟರಿ ಅಧಿರಿಗಳ ದೌರ್ಬಲ್ಯಗಳನ್ನು ಸಂಪೂರ್ಣವಾಗಿ ಅರ್ಥಮಾಡಿ ಕೊಂಡಿದ್ದ. ರಾಜಕೀಯ ಚರ್ಚೆಗಳಲ್ಲಿ ಪಾಲ್ಗೊಂಡ, ಸಿರಿಯಾದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಯಂತೆ ವರ್ತಿಸಿದ. ಆತ ಸಂಗ್ರಹಿಸಿದ ಮಾಹಿತಿಯಿಂದ ಇಸ್ರೇಲ್ಗೆ ಮಹತ್ವದ ಗುಪ್ತಚರ ಪ್ರಯೋಜನ ದೊರೆಯಿತು. ಸಿರಿಯಾದ ಮಿಲಿಟರಿ ವಲಯಗಳೊಳಗೆ ನುಸುಳಿದ್ದ ಎಲಿ ಕೋಹೆನ್, ಅಲ್ಲಿನ ಸೇನಾ ನೆಲೆಗಳು, ರಕ್ಷಣಾ ವ್ಯವಸ್ಥೆಗಳು ಮತ್ತು ಗೋಲನ್ ಹೈಟ್ಸ್ನ ಕಾರ್ಯ ತಂತ್ರದ ಮಹತ್ವಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಸ್ರೇಲ್ಗೆ ತಲುಪಿಸಿದ್ದ. ಆ ಮಾಹಿತಿಯು ಸಿರಿಯಾದ ಮಿಲಿಟರಿ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ನೆರವಾಯಿತು.
ಇಸ್ರೇಲ್ ಮತ್ತು ಸಿರಿಯಾದ ನಡುವಿನ ಸಂಘರ್ಷದಲ್ಲಿ ಗೋಲನ್ ಹೈಟ್ಸ್ಗೆ ವಿಶೇಷ ಮಹತ್ವವಿತ್ತು. ಎತ್ತರದ ಭೂಪ್ರದೇಶದಿಂದ ಕೆಳಗಿರುವ ಇಸ್ರೇಲ್ನ ಕೃಷಿಭೂಮಿಗಳು, ವಸತಿಗಳು ಮತ್ತು ಪ್ರಮುಖ ಮಾರ್ಗಗಳ ಮೇಲೆ ನಿಗಾ ಇರಿಸಬಹುದಾಗಿತ್ತು. ಈ ಪ್ರದೇಶದಲ್ಲಿ ಸಿರಿಯಾದ ಸೇನೆ ಬಲಿಷ್ಠ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸಿತ್ತು. ಬಂಕರ್ಗಳು, ಆಳವಾದ ಕಂದಕಗಳು, ಫಿರಂಗಿ ನೆಲೆಗಳು, ಮೆಷಿನ್ ಗನ್ಗಳ ಸ್ಥಾನಗಳು ಮತ್ತು ಟ್ಯಾಂಕ್ಗಳ ಮುನ್ನಡೆಯನ್ನು ತಡೆಯಲು ರೂಪಿಸಿದ್ದ ಅಡೆತಡೆಗಳು ಇವೆಲ್ಲವೂ ಸಿರಿಯಾಗೆ ಅನುಕೂಲಕರವಾಗಿದ್ದವು.
ಎಲಿ ಕೋಹೆನ್, ಸಿರಿಯಾದ ಉನ್ನತ ಅಧಿಕಾರಿಗಳೊಂದಿಗೆ ಗೋಲನ್ ಹೈಟ್ಸ್ನ ಸೇನಾ ನೆಲೆಗಳಿಗೆ ಭೇಟಿ ನೀಡುವ ಅವಕಾಶ ಪಡೆದಿದ್ದ. ಅಲ್ಲಿ ಆತ ಕೇವಲ ಪ್ರವಾಸಿಗನಂತೆ ಸುತ್ತಾಡಲಿಲ್ಲ. ಸಿರಿಯಾದ ರಕ್ಷಣಾ ವ್ಯವಸ್ಥೆಯ ವಿವರಗಳನ್ನು ಗಮನಿಸಿದ. ಸೇನಾ ನೆಲೆಗಳ ಸ್ಥಳ, ಫಿರಂಗಿಗಳ ನಿಯೋಜನೆ ಮತ್ತು ಟ್ಯಾಂಕ್ಗಳನ್ನು ತಡೆಯಲು ನಿರ್ಮಿಸಿದ್ದ ಅಡೆತಡೆಗಳ ಕುರಿತು ಮಾಹಿತಿ ಸಂಗ್ರಹಿಸಿದ.
ಗೋಲನ್ ಹೈಟ್ಸ್ನ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿರಿಯಾದ ಸೈನಿಕರಿಗೆ ನೆರಳು ಒದಗಿಸಲು ಸೇನಾ ನೆಲೆಗಳ ಬಳಿ ನೀಲಗಿರಿ ಮರಗಳನ್ನು ನೆಡುವಂತೆ ಕೋಹೆನ್ ಸಲಹೆ ನೀಡಿ, ಗಿಡಗಳನ್ನು ವಿತರಿಸಿದ. ಮರಗಳು ಬೆಳೆದರೆ ಬಿಸಿಲಿನಿಂದ ರಕ್ಷಣೆ ಸಿಗುತ್ತದೆ; ಸೈನಿಕರು ವಿಶ್ರಾಂತಿ ಪಡೆಯಲು ನೆರವಾಗುತ್ತದೆ ಎಂದು ನಂಬುವಂತೆ ಬಿಂಬಿಸಿದ. ವಿಶಾಲವಾದ, ಬಯಲು ಪ್ರದೇಶದಲ್ಲಿ ಎದ್ದು ಕಾಣುವ ಮರಗಳ ಸಾಲುಗಳು ನಿರ್ದಿಷ್ಟ ಸೇನಾ ನೆಲೆಗಳನ್ನು ಗುರುತಿಸಲು ನೆರವಾಯಿತು.
ಸೈನಿಕರಿಗೆ ನೆರಳು ನೀಡಲೆಂದು ನೆಡಲಾದ ಮರಗಳೇ ನಂತರ ಆ ನೆಲೆಗಳನ್ನು ಗುರುತಿಸುವ ಗುರುತು ಗಳಾದವು. ಎಲಿ ಕೋಹೆನ್ ಸಂಗ್ರಹಿಸಿದ ಮತ್ತೊಂದು ಮಹತ್ವದ ಮಾಹಿತಿ- ನೀರು ತಿರುಗಿಸುವ ಯೋಜನೆ. 1964ರಲ್ಲಿ ಅರಬ್ ಲೀಗ್, ಜೋರ್ಡನ್ ನದಿಯ ಉಪನದಿಗಳಾದ ಹಸ್ಬಾನಿ ಮತ್ತು ಬನಿಯಾಸ್ನ ನೀರನ್ನು ಬೇರೆ ಮಾರ್ಗಗಳಿಗೆ ತಿರುಗಿಸಿ, ಇಸ್ರೇಲ್ಗೆ ಹರಿಯುವ ನೀರಿನ ಪ್ರಮಾಣ ವನ್ನು ಕಡಿಮೆ ಮಾಡುವ ಯೋಜನೆ ರೂಪಿಸಿತು. ಈ ಯೋಜನೆಯ ಭಾಗವಾಗಿ ಸಿರಿಯಾ ಬನಿಯಾಸ್ ನದಿಯ ನೀರನ್ನು ಯರ್ಮೂಕ್ ನದಿಯ ಕಡೆಗೆ ಹರಿಸಲು ಕಾಲುವೆ ನಿರ್ಮಾಣ ಆರಂಭಿಸಿತು.
ನೀರಿನ ಹರಿವನ್ನು ಬದಲಿಸುವ ಈ ಪ್ರಯತ್ನ ಇಸ್ರೇಲ್ ನ ಕೃಷಿ ಮತ್ತು ಜಲಕ್ಕೆ ದೊಡ್ಡ ಕಂಟಕ ವಾಗುತ್ತಿತ್ತು. ಈ ಯೋಜನೆಯ ವಿವರಗಳನ್ನು ಎಲಿ ಕೋಹೆನ್ ಇಸ್ರೇಲ್ ಗೆ ತಲುಪಿಸಿದ. ಕರಾರು ವಕ್ಕಾದ ಮಾಹಿತಿಯ ಮೇರೆಗೆ, ಇಸ್ರೇಲ್ ಸಿರಿಯಾದಲ್ಲಿನ ನಿರ್ಮಾಣ ಕಾಮಗಾರಿಗಳ ವಿರುದ್ಧ 1965ರಲ್ಲಿ ಟ್ಯಾಂಕ್ ದಾಳಿಗಳನ್ನು ನಡೆಸಿತು. 1966ರಲ್ಲಿ ನಡೆದ ಇಸ್ರೇಲಿ ಸೇನಾ ದಾಳಿಗಳಿಂದಲೂ ಕಾಮಗಾರಿಗೆ ಅಡ್ಡಿಯಾಯಿತು.
ಪರಿಣಾಮವಾಗಿ, ಜೋರ್ಡನ್ ನದಿಯ ನೀರನ್ನು ತಿರುಗಿಸುವ ಯೋಜನೆ ವಿಫಲವಾಯಿತು. 1965ರ ಜನವರಿಯಲ್ಲಿ ಎಲಿ ಕೋಹೆನ್ ಸಿರಿಯಾದಲ್ಲಿ ಬಂಧಿತನಾದ ನಂತರ ಆತನನ್ನು ಬಿಡುಗಡೆ ಮಾಡಿಸಲು ಸಾಧ್ಯವಿರುವ ಪ್ರಯತ್ನಗಳನ್ನು ಇಸ್ರೇಲ್ ಮಾಡಿತು. ರಾಜತಾಂತ್ರಿಕ ಸಂಪರ್ಕಗಳು ಮತ್ತು ಮಧ್ಯವರ್ತಿಗಳ ಮೂಲಕ ಸಿರಿಯಾದ ಅಧಿಕಾರಿಗಳನ್ನು ಮನವೊಲಿಸಲು ಪ್ರಯತ್ನಿಸ ಲಾಯಿತು. ಇಸ್ರೇಲ್ ತನ್ನ ವಶದಲ್ಲಿದ್ದ ಸಿರಿಯಾದ ಕೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಕೋಹೆನ್ನ ಮರಣದಂಡನೆಯನ್ನು ರದ್ದುಗೊಳಿಸಲು ನಿವೇದಿಸಿತು.
ಇಸ್ರೇಲ್ ವಶದಲ್ಲಿದ್ದ ಸಿರಿಯಾದ ಗೂಢಚರರನ್ನು ವಿನಿಮಯ ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಸಿರಿಯಾ ತಿರಸ್ಕರಿಸಿತು. ಸಿರಿಯಾದ ಅಧಿಕಾರಿಗಳಿಗೆ ದೊಡ್ಡ ಮೊತ್ತದ ಹಣ (ಐದೂವರೆ ಕೋಟಿ ಡಾಲರ್, ಅಂದರೆ 21 ಕೋಟಿ ರೂಪಾಯಿಗಳು, 1965ರಲ್ಲಿ) ನೀಡುವ ಪ್ರಸ್ತಾಪವನ್ನೂ ಇಸ್ರೇಲ್ ಮುಂದಿಟ್ಟಿತ್ತು. ಯುರೋಪಿನ ರಾಷ್ಟ್ರಗಳ ನಾಯಕರು, ರಾಜತಾಂತ್ರಿಕರು ಮತ್ತು ಪೋಪ್ ಆರನೇ ಪೌಲ್ ಸೇರಿದಂತೆ ಅಂತಾರಾಷ್ಟ್ರೀಯ ಗಣ್ಯರು ಕೋಹೆನ್ಗೆ ಕ್ಷಮಾದಾನ ನೀಡುವಂತೆ ಸಿರಿಯಾವನ್ನು ಒತ್ತಾಯಿಸಿದರು.
ಆದರೂ ಸಿರಿಯಾದ ಆಡಳಿತ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. 1967ರ ಜೂನ್ನಲ್ಲಿ ಮಧ್ಯಪ್ರಾಚ್ಯದ ಇತಿಹಾಸವನ್ನೇ ಬದಲಿಸಿದ ಆರು ದಿನಗಳ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಗೋಲನ್ ಹೈಟ್ಸ ಅತ್ಯಂತ ಆಯಕಟ್ಟಿನ ಪ್ರದೇಶವಾಗಿತ್ತು. ಈ ಯುದ್ಧ ಆರಂಭವಾಗುವ ಎರಡು ವರ್ಷಗಳ ಮೊದಲೇ ಎಲಿ ಕೋಹೆನ್ನ ಬದುಕು ದುರಂತ ಅಂತ್ಯ ಕಂಡಿತ್ತು. ಎಲಿ ಕೋಹೆನ್ ಸತ್ತಿದ್ದರೂ, ಆತ ಸಂಗ್ರಹಿಸಿದ್ದ ರಹಸ್ಯ ಮಾಹಿತಿ ಸತ್ತಿರಲಿಲ್ಲ!
1967ರ ಜೂನ್ನಲ್ಲಿ ಇಸ್ರೇಲಿ ಸೇನೆ ಗೋಲನ್ ಮಧ್ಯಪ್ರಾಚ್ಯದ ಇತಿಹಾಸವನ್ನೇ ಬದಲಿಸಿದ ಆರು ದಿನಗಳ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಗೋಲನ್ ಹೈಟ್ಸ್ʼನಲ್ಲಿ ಸಿರಿಯಾದ ಪಡೆಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಆ ಪ್ರದೇಶದ ಬಹುಭಾಗವನ್ನು ವಶಪಡಿಸಿ ಕೊಂಡಿತು. ಗಲ್ಲಿಗೇರಿಸುವ ಮೊದಲು ಎಲಿ ಕೋಹೆನ್ ತನ್ನ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದು ರಬ್ಬಿಯನ್ನು ನೋಡಬೇಕೆಂದು. ಯಹೂದಿಗಳು ಧರ್ಮಗುರುಗಳಿಗೆ ರಬ್ಬಿ ಅನ್ನುತ್ತಾರೆ. ಅವನ ಆಸೆಯಂತೆ ರಬ್ಬಿಯೊಬ್ಬರನ್ನು ಕರೆತರಲಾಯಿತು.
ತನ್ನ ಪತ್ನಿ ನಾಡಿಯಾ ಮತ್ತು ಮಕ್ಕಳಿಗೆ ಕೊನೆಯ ವಿದಾಯದ ಪತ್ರವನ್ನು ರಬ್ಬಿಯ ಎದುರು ಕುಳಿತು ಎಲಿ ಬರೆದಿದ್ದಾನೆ. ಕಳೆದ ವಿಷಯಗಳ ಕಳೆದುಹೋದ ಸಂಗತಿಗಳ ಬಗ್ಗೆ ಚಿಂತೆ ಮಾಡುತ್ತಾ ಅಳುತ್ತಾ ಕುಳಿತುಕೊಳ್ಳಬೇಡಿ; ಬದಲಿಗೆ ಭವಿಷ್ಯದ ಬಗ್ಗೆ ಗಮನಹರಿಸಿ, ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ- ಅಂತ ಅರೇಬಿಕ್ ಭಾಷೆಯಲ್ಲಿ ಬರೆದ ಪತ್ರವಿದೆ. ಆ ಪತ್ರದ ಜೆರಾಕ್ಸ್ ಕಾಪಿಯನ್ನು ಸಿರಿಯಾ ಇಸ್ರೇಲಿಗೆ ನೀಡಿತು. ಗಲ್ಲಿಗೇರಿಸಿದ ನಂತರ ಅವನ ಶವವನ್ನು ಇಸ್ರೇಲಿಗೆ ಹಸ್ತಾಂತರಿಸಲಿಲ್ಲ. ಕಳೆದ 60 ವರ್ಷಗಳಿಂದ ಎಲಿ ಕೋಹೆನ್ನ ಶವ ಎಲ್ಲಿದೆ ಅಂತ ಯಾರಿಗೂ ಗೊತ್ತಿಲ್ಲ. ಇಸ್ರೇಲ್ನಿಂದ ಮೃತದೇಹವನ್ನು ಬಚ್ಚಿಡಲು ಸಿರಿಯನ್ ಮಿಲಿಟರಿ ಎಲಿ ಕೊಹೆನ್ ಶವವನ್ನು ಬೇರೆ ಬೇರೆ ರಹಸ್ಯ ಜಾಗಗಳಿಗೆ ಮೂರು ಬಾರಿ ಸ್ಥಳಾಂತರಿಸಿದೆ.
ಇಸ್ರೇಲ್ ತನ್ನ ಏಜೆಂಟನ ಶವವನ್ನು ತರಲು ಶತಾಯಗತಾಯ ಪ್ರಯತ್ನ 60 ವರ್ಷಗಳಿಂದ ಮಾಡುತ್ತಿದೆ. ಎಲಿಯ ಪತ್ನಿ ನಾಡಿಯಾ, ಮೂರು ಮಕ್ಕಳು ಮೃತದೇಹವನ್ನು ಪಡೆಯಲು ಮಾಡುತ್ತಿರುವ ಪ್ರಯತ್ನ ಇನ್ನೂ ಸಫಲವಾಗಿಲ್ಲ.