Vishweshwar Bhat Column: ಸಾಹಿತ್ಯ ಲೋಕದ ಪರನಿಂದಾ ಪುರಾಣವು!
ಬರಹಗಾರರೂ ರಕ್ತಮಾಂಸಗಳಿರುವ ಸಾಧಾರಣ ಜೀವಿಗಳು. ಅವರ ಈ ಸಣ್ಣಪುಟ್ಟ ದೌರ್ಬಲ್ಯಗಳು, ಮುನಿಸುಗಳು ಮತ್ತು ಹಠಗಳೇ ಅವರ ಬರಹಕ್ಕೆ ವಿಶಿಷ್ಟವಾದ ತೀವ್ರತೆಯನ್ನು ಕೊಡುತ್ತವೆ ಎಂಬುದೂ ಅಷ್ಟೇ ಸತ್ಯ. ಲೇಖಕರೊಳಗಿನ ಈ ಮನುಷ್ಯ ಸಹಜ ಗುಣಗಳೇ ಸಾಹಿತ್ಯ ಲೋಕವನ್ನು ಇಷ್ಟು ಸ್ವಾರಸ್ಯ ಕರವಾಗಿಸಿವೆ ಮತ್ತು ನಮ್ಮನ್ನು ಅವರ ಅಕ್ಷರಗಳಿಗೆ ಮತ್ತಷ್ಟು ಹತ್ತಿರವಾಗಿಸಿವೆ.
-
ನೂರೆಂಟು ವಿಶ್ವ
ಸಾಹಿತ್ಯ ಎನ್ನುವುದು ಕೇವಲ ಕಾಗದ ಮತ್ತು ಶಾಯಿಯ ಆಟವಲ್ಲ. ಅದು ಲೇಖಕನ ಒಳಗಿನ ಒಂಟಿತನ, ಹಠ, ಸಂಕಟ, ವಿಷಾದ ಹಾಗೂ ಮುನಿಸುಗಳ ಸಮ್ಮಿಶ್ರಣ. ಪ್ರತಿಯೊಬ್ಬ ಬರಹಗಾರನೂ ಬರೆಯಲು ಕೂತಾಗ ತನ್ನದೇ ಆದ ಒಂದು ಕಾಲ್ಪನಿಕ ದ್ವೀಪವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅಲ್ಲಿ ಆತನದ್ದೇ ಸಾಮ್ರಾಜ್ಯ, ಆತನದ್ದೇ ನಿಯಮಗಳು. ಆದರೆ, ಆತನ ಏಕಾಂತದ ದ್ವೀಪಕ್ಕೆ ಮತ್ತೊಬ್ಬ ಬರಹಗಾರ ತನ್ನದೇ ಸಿದ್ಧಾಂತ ಅಥವಾ ಶೈಲಿಯೊಂದಿಗೆ ಲಗ್ಗೆ ಇಟ್ಟಾಗ, ಅಲ್ಲಿ ಅಹಂಗಳು ಘರ್ಷಿಸಿ ಸಾಹಿತ್ಯಕ ಯುದ್ಧ ಆರಂಭವಾಗುತ್ತದೆ. ಮಾರ್ಕ್ ಟ್ವೇನ್, ಜೇನ್ ಆಸ್ಟನ್, ವಿಲಿಯಂ ಫಾಲ್ಕನರ್ ಅಥವಾ ಮಾರ್ಟಿನ್ ಅಮಿಸ್ ಅವರಂಥ ಜಗತ್ತಿನ ಮಹಾನ್ ಲೇಖಕರು ಎಂದು ಕರೆಯಿಸಿಕೊಂಡ ವರು ಸಾಮಾನ್ಯ ಲೇಖಕರಂತೆ ಪರಸ್ಪರ ಕಟುವಾಗಿ ನಿಂದಿಸಿಕೊಂಡಿದ್ದನ್ನು, ಕೆಸರೆರಚಾಟ ಮಾಡಿ ದ್ದನ್ನು, ಕೆಟ್ಟದಾಗಿ ಕಚ್ಚಾಡಿಕೊಂಡಿದ್ದನ್ನು ಇತಿಹಾಸದ ಪುಟಗಳಲ್ಲಿ ನೋಡಿದಾಗ ನಮಗೆ ಆಶ್ಚರ್ಯವಾಗುತ್ತದೆ.
ಆದರೆ, ಈ ಕಾರಣಕ್ಕೆ ಅವರ ಸಾಹಿತ್ಯದ ಮೇಲಿನ ಗೌರವವೇನೂ ಕಡಿಮೆಯಾಗುವುದಿಲ್ಲ. ಬದಲಿಗೆ, ‘ಅಯ್ಯೋ, ಇಷ್ಟೆಲ್ಲ ದೊಡ್ಡ ಪುಸ್ತಕ ಬರೆದ ಇವರೂ ನಮ್ಮಂತೆಯೇ ಮತ್ಸರ, ಸಿಟ್ಟು, ಅಸೂಯೆ ಇರುವ ಸಾಮಾನ್ಯ ಮನುಷ್ಯರೇ’ ಎಂಬ ವಿಷಣ್ಣ ಭಾವ ನಮ್ಮಲ್ಲಿ ಮೂಡುತ್ತದೆ. ಬರಹಗಾರರು ದೇವರಲ್ಲ. ಅವರೂ ರಕ್ತಮಾಂಸಗಳಿರುವ ಸಾಧಾರಣ ಜೀವಿಗಳು. ಅವರ ಈ ಸಣ್ಣಪುಟ್ಟ ದೌರ್ಬಲ್ಯ ಗಳು, ಮುನಿಸುಗಳು ಮತ್ತು ಹಠಗಳೇ ಅವರ ಬರಹಕ್ಕೆ ವಿಶಿಷ್ಟವಾದ ತೀವ್ರತೆಯನ್ನು ಕೊಡುತ್ತವೆ ಎಂಬುದೂ ಅಷ್ಟೇ ಸತ್ಯ. ಲೇಖಕರೊಳಗಿನ ಈ ಮನುಷ್ಯ ಸಹಜ ಗುಣಗಳೇ ಸಾಹಿತ್ಯ ಲೋಕವನ್ನು ಇಷ್ಟು ಸ್ವಾರಸ್ಯಕರವಾಗಿಸಿವೆ ಮತ್ತು ನಮ್ಮನ್ನು ಅವರ ಅಕ್ಷರಗಳಿಗೆ ಮತ್ತಷ್ಟು ಹತ್ತಿರವಾಗಿಸಿವೆ.
ನಾನು ಈ ಮಾತನ್ನು ಹೇಳುವಾಗ ನನಗೆ ಇಂಗ್ಲಿಷ್ ಕಾದಂಬರಿಕಾರ, ಪ್ರಬಂಧಕಾರ, ಆತ್ಮಚರಿತ್ರೆಕಾರ, ಚಿತ್ರಕಥೆಗಾರ ಮತ್ತು ವಿಮರ್ಶಕರಾಗಿದ್ದ ಸರ್ ಮಾರ್ಟಿನ್ ಲೂಯಿಸ್ ಆಮಿಸ್ (ಆಗ 25, 1949- ಮೇ 19, 2023) ನೆನಪಾಗುತ್ತಾರೆ. ಅವರು ತಮ್ಮ ಮನಿ, ಮತ್ತು ಲಂಡನ್ ಫೀಲ್ಡ್ಸ್ ಕಾದಂಬರಿಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರ ಆತ್ಮಚರಿತ್ರೆ ಅನುಭವಕ್ಕಾಗಿ ಎರಡು ಬಾರಿ ಬೂಕರ್ ಪ್ರಶಸ್ತಿ ಅವರನ್ನು ಸವರಿಕೊಂಡು ಹೋಗಿತ್ತು. 2008ರಲ್ಲಿ, ದಿ ಟೈಮ್ಸ್ ಅವರನ್ನು 1945ರಿಂದ 1950ರ ಅವಧಿಯ ಶ್ರೇಷ್ಠ ಬ್ರಿಟಿಷ್ ಬರಹಗಾರರಲ್ಲಿ ಒಬ್ಬರೆಂದು ಹೆಸರಿಸಿತ್ತು. ಕಳೆದ ಐವತ್ತು ವರ್ಷ ಗಳಲ್ಲಿ ಆಮಿಸ್ ಬ್ರಿಟಿಷ್ ಕಾದಂಬರಿಕಾರರ ಮೇಲೆ ಪ್ರಭಾವ ಬೀರಿದ ಲೇಖಕ ಎಂದು ಅವರನ್ನು ಇಂದಿಗೂ ಮನ್ನಿಸಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಸುರೇಶ್-ಸುಷ್ಮಾ ಪ್ರಕರಣ
ಆಮಿಸ್ ಬಿಬಿಸಿ ಕಾರ್ಯಕ್ರಮವೊಂದರಲ್ಲಿ ಮಕ್ಕಳ ಸಾಹಿತ್ಯದ ಕುರಿತು ಆಡಿದ ಮಾತುಗಳು ಸಾಹಿತ್ಯ ಲೋಕದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದವು. ‘ನನಗೆ ಮಿದುಳಿನ ಗಾಯವಾಗಿ ಬುದ್ಧಿಭ್ರಮಣೆಯಾದರೆ ಮಾತ್ರ ನಾನು ಮಕ್ಕಳಿಗಾಗಿ ಬರೆಯುತ್ತೇನೆ’ ಎಂದು ಅವರು ಹೇಳಿಬಿಟ್ಟರು. ಅದು ಅವರೊಳಗಿನ ತೀವ್ರವಾದ ಬೌದ್ಧಿಕ ಅಹಂ ಮತ್ತು ಸಾಹಿತ್ಯದ ಸ್ತರಗಳ ಬಗೆಗಿನ ಕಟು ನಿಲುವನ್ನು ಎತ್ತಿ ತೋರಿಸುತ್ತದೆ ಎಂದು ಇಡೀ ಸಾಹಿತ್ಯ ವಲಯ ಅವರ ಮೇಲೆ ಮುರುಕೊಂಡು ಬಿದ್ದಿತು. ತಮಗಿಂತ ಕೆಳಗಿನ ಸ್ತರದಲ್ಲಿ ಬರೆಯಲು ಯಾರೇ ಬಲವಂತ ಮಾಡಿದರೂ ತಾವು ಬರೆಯುವುದಿಲ್ಲ ಎಂಬ ಅವರ ಹಠ, ಬೌದ್ಧಿಕ ಬರಹಗಾರನೊಬ್ಬನ ಗರ್ವ ಎಂದು ಸಾಹಿತಿಗಳು ಜರೆದರು.
ಆಮಿಸ್ ಅವರ ಈ ವಾದದ ಹಿಂದೆ, ಮಕ್ಕಳ ಸಾಹಿತ್ಯ ಎಂದರೆ ಕೇವಲ ಸರಳ, ಗಂಭೀರವಲ್ಲದ ಮತ್ತು ಕಡಿಮೆ ಬುದ್ಧಿಶಕ್ತಿಯ ಕೆಲಸ ಎಂಬ ತಪ್ಪು ಕಲ್ಪನೆ ಇತ್ತು. ಸಂಕೀರ್ಣ ಪದಗಳ ಹಿಂದೆ ಅಡಗಿಕೊಳ್ಳುವುದು, ಆಧುನಿಕ ಸಮಾಜದ ಗಲಿಬಿಲಿಗಳನ್ನು ವ್ಯಂಗ್ಯವಾಗಿ ಚಿತ್ರಿಸುವುದು ವಯಸ್ಕರ ಸಾಹಿತ್ಯದಲ್ಲಿ ಸುಲಭವಾಗಿ ಒಲಿಯಬಹುದು. ಆದರೆ, ಜಗತ್ತಿನ ಯಾವುದೇ ಸಂಕೀರ್ಣ ಸತ್ಯವನ್ನು ಅತ್ಯಂತ ಸರಳವಾಗಿ, ಮಗುವಿನ ಮುಗ್ಧತೆಗೆ ಒಗ್ಗುವಂತೆ ದಾಟಿಸುವುದು ಜಗತ್ತಿನ ಅತ್ಯಂತ ಕಷ್ಟದ ಕಲೆ ಎಂಬುದನ್ನು ಅವರ ಬೌದ್ಧಿಕ ಅಹಂ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಮಕ್ಕಳಿಗಾಗಿ ಬರೆಯುವು ದೆಂದರೆ ಭಾಷೆಯನ್ನು ಕುಂಠಿತಗೊಳಿಸುವುದಲ್ಲ, ಬದಲಿಗೆ ಕಲ್ಪನೆಯ ರೆಕ್ಕೆಗಳನ್ನು ಮುಕ್ತವಾಗಿ ಬಿಡುವುದು ಎಂದು ಅನೇಕರು ಅವರೊಂದಿಗೆ ವಾದಿಸಿದರು.
ಮಾರ್ಟಿನ್ ಆಮಿಸ್ ಸೃಷ್ಟಿಸಿದ ಸಾಹಿತ್ಯ ಲೋಕವು ಹೆಚ್ಚಾಗಿ ಬುದ್ಧಿವಂತಿಕೆ, ಜಟಿಲ ಭಾಷೆ ಮತ್ತು ನಾಗರಿಕ ಸಮಾಜದ ಕಟು ವಿಮರ್ಶೆಯಿಂದ ಕೂಡಿದ್ದಿರಬಹುದು. ಹೀಗಾಗಿ ಅವರಿಗೆ ಮಕ್ಕಳ ಸಾಹಿತ್ಯ ಲಘುವಾಗಿ ಕಂಡಿರಬಹುದು. ಆದರೆ ಅವರ ಈ ಒಂದು ಹೇಳಿಕೆಯನ್ನು ಇಟ್ಟುಕೊಂಡು ‘ದಿ ಗಾರ್ಡಿಯನ್’ ಪತ್ರಿಕೆ ಒಂದು ತಿಂಗಳ ಕಾಲ ಬೇರೆ ಬೇರೆ ಲೇಖಕರಿಂದ ಅವರನ್ನು ತರಾಟೆಗೆ ತೆಗೆದು ಕೊಳ್ಳುವ ಲೇಖನಗಳನ್ನು ಪ್ರಕಟಿಸಿ, ಅಮಿಸ್ ಅವರ ಮಾನ ಹರಾಜು ಹಾಕಿತು. ಒಬ್ಬ ಲೇಖಕ ನಂತೂ, ‘ಆಮಿಸ್ ಬರೆದಿರುವುದನ್ನು ಯಾವ ದೊಡ್ಡವರಾದರೂ ಅರ್ಥ ಮಾಡಿಕೊಳ್ಳಬಲ್ಲರು. ಅದನ್ನು ಮಹಾನ್ ಎಂದು ಭಾವಿಸಬೇಕಿಲ್ಲ. ಆದರೆ ಚಿಕ್ಕ ಮಕ್ಕಳಿಗೆ ಅರ್ಥವಾಗುವ ಹಾಗೆ ಆಮಿಸ್ ಬರೆದು ತೋರಿಸಲಿ’ ಎಂದು ಸವಾಲು ಹಾಕಿದ. ‘ಅಮಿಸ್ ಅವರೇ, ಮಕ್ಕಳ ಲೋಕಕ್ಕೆ ಇಳಿಯಲು ಮಿದುಳಿಗೆ ಗಾಯವಾಗಬೇಕಿಲ್ಲ, ಬದಲಿಗೆ ಹಣ್ಣಾದ ಹೃದಯವಿರಬೇಕು. ನಮಗಿಂತ ಕೆಳಗಿನ ಸ್ತರ ದಲ್ಲಿ ಬರೆಯಲು ಇಷ್ಟವಿಲ್ಲ ಎನ್ನುವ ನಿಮ್ಮ ಹಠವಿದೆಯಲ್ಲ, ಅದು ಮಗುವಿನ ಮುಗ್ಧತೆಯ ಎದುರು ಸೋತು ಹೋಗುವ ಅಹಂಕಾರವಷ್ಟೇ. ಕೆಲವೊಮ್ಮೆ ಸರಳವಾಗಿ ಬರೆಯುವುದೇ ಜಗತ್ತಿನ ಅತ್ಯಂತ ಕಷ್ಟದ ಕೆಲಸ’ ಎಂದು ಆ ಪತ್ರಿಕೆ ಮುಖಪುಟದಲ್ಲಿ ಸಂಪಾದಕೀಯ ಬರೆದು ಖಂಡಿಸಿತು.
ನೀವು ಇಂಗ್ಲಿಷ್ ಬರಹಗಾರ್ತಿ ಜೇನ್ ಆಸ್ಟೆನ್ ಹೆಸರನ್ನು ಕೇಳಿರಬಹುದು. ಎರಡು ಮುಕ್ಕಾಲು ಶತಮಾನಗಳಾದರೂ ಜೇನ್ ಆಸ್ಟೆನ್ ಅವರ ‘ಪ್ರೈಡ್ ಆಂಡ್ ಪ್ರಿಜುಡಿಸ್’ ಇಂದಿಗೂ ಪ್ರೇಮಿಗಳ ನೆಚ್ಚಿನ ಪುಸ್ತಕ. ಆದರೆ ಅನೇಕರಿಗೆ ಅವರನ್ನು ಕಂಡರೆ ಆಗುತ್ತಿರಲಿಲ್ಲ. ಪ್ರಕೃತಿಯ ದಿವ್ಯ ಚೇತನ ವನ್ನು, ಬ್ರಹ್ಮಾಂಡದ ಅದೃಶ್ಯ ಶಕ್ತಿಯನ್ನು ಆರಾಧಿಸಿದ ಅಮೆರಿಕದ ಮಹಾನ್ ದಾರ್ಶನಿಕ ರಾಲ ವಾಲ್ಡೋ ಎಮರ್ಸನ್, ಜೇನ್ ಆಸ್ಟೆನ್ ಅವರ ಕಾದಂಬರಿಗಳ ಬಗ್ಗೆ ಅತ್ಯಂತ ಕಟು ಪದಗಳಲ್ಲಿ ಟೀಕಿಸುತ್ತಿದ್ದರು. ಕೇವಲ ಇಂಗ್ಲಿಷ್ ಕೆಳ ಮಧ್ಯಮ ವರ್ಗದ ಸಣ್ಣ ಚೌಕಟ್ಟಿನೊಳಗೆ ಬಂಧಿತವಾದ ಬರಹಗಾರ್ತಿ ಎಂದು ಅವರು ಅವರು ಆಕೆಯನ್ನು ಬಣ್ಣಿಸುತ್ತಿದ್ದರು. ತಮ್ಮ ದಿನಚರಿಯಲ್ಲಿ ಆಸ್ಟೆನ್ ಬರಹವನ್ನು ‘ಪ್ರತಿಭೆಯಾಗಲಿ, ಬುದ್ಧಿವಂತಿಕೆಯಾಗಲಿ ಇಲ್ಲದ ಶೂನ್ಯ’ ಎಂದು ಕಟುವಾಗಿ ವಿಮರ್ಶಿ ಸಿದ ಎಮರ್ಸನ್, ‘ಬಾಹ್ಯ ಪ್ರಕೃತಿಯ ಅತಿಮಾನುಷ ವಿಸ್ತಾರದಲ್ಲಿ ಮುಳುಗಿಹೋಗಿ ಮನುಷ್ಯ ಸ್ವಭಾವದ ಆಂತರಿಕ ಸೂಕ್ಷ ತೆಗಳನ್ನು ಕಡೆಗಣಿಸಿದ ಬರಹ’ ಎಂದು ಜರೆದಿದ್ದರು.
ಒಂದು ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಮರ್ಶಕನೊಬ್ಬ, ‘ಪ್ರೈಡ್ ಆಂಡ್ ಪ್ರಿಜುಡಿಸ್ ಕಾದಂಬರಿಯ ಎಲಿಜಬೆತ್ ಮತ್ತು ಡಾರ್ಸಿಯ ನಡುವಿನ ಘರ್ಷಣೆ ಕೇವಲ ಇಬ್ಬರು ವ್ಯಕ್ತಿಗಳ ಮುನಿಸಲ್ಲ, ಅದು ಇಂದಿಗೂ ಜಗತ್ತಿನ ಪ್ರತಿಯೊಬ್ಬ ಪ್ರೇಮಿಯ ಒಳಗೂ ನಡೆಯುವ ಅಹಂನ ಹೋರಾಟ. ದೊಡ್ಡ ಯುದ್ಧಗಳು ಬರದೇ ಇದ್ದರೂ, ಮನುಷ್ಯನ ಮನಸ್ಸಿನ ಒಳಗೆ ದಿನವೂ ನಡೆಯುವ ಸಣ್ಣ ಯುದ್ಧ ಗಳನ್ನು ಆಸ್ಟೆನ್ ಹೆಣೆದಷ್ಟು ಅದ್ಭುತವಾಗಿ ಮತ್ತೊಬ್ಬರು ಹೆಣೆಯಲಾರರು.
ನಿಮ್ಮ ತತ್ವಚಿಂತನೆಗಳು ಕಾಲದ ಓಟದಲ್ಲಿ ಗ್ರಂಥಾಲಯದ ಕಪಾಟುಗಳನ್ನು ಅಲಂಕರಿಸಿದರೆ, ಆಸ್ಟೆನ್ ಅವರ ಮುಗುಳ್ನಗೆಯ ವಿಡಂಬನೆ ಇಂದಿಗೂ ಪ್ರೇಮಿಗಳ ಎದೆಯ ಮೇಲೆ ಜೀವಂತವಾಗಿ ಕುಳಿತಿದೆ. ಆಕೆಯ ಈ ಸೃಜನಶೀಲ ಮುನಿಸುಗಳೇ ಸಾಹಿತ್ಯದ ಇತಿಹಾಸವನ್ನು ಇಷ್ಟು ಸ್ವಾರಸ್ಯಕರ ವಾಗಿಸಿವೆ’ ಎಂದು ಹೇಳಿದಾಗ, ಎಮರ್ಸನ್ ವಿಪರೀತ ಕೋಪಿಸಿಕೊಂಡ. ತಾನು ಕುಳಿತ ಕುರ್ಚಿ ಯನ್ನೇ ಹಾಗೆ ಹೇಳಿದ ವಿಮರ್ಶಕನತ್ತ ಎಸೆದು ಬಿಟ್ಟ.
ಶ್ರೇಷ್ಠ ಬ್ರಿಟಿಷ್ ಕಾದಂಬರಿಗಾರ್ತಿಯರಾದ ಷಾರ್ಲೆಟ್ ಬ್ರಾಂಟೆಗೆ ಕೂಡ ಜೇನ್ ಆಸ್ಟೆನ್ ಕಂಡರೆ ಆಗುತ್ತಿರಲಿಲ್ಲ. ‘ನನಗೆ ಆಸ್ಟೆನ್ ಪುಸ್ತಕಗಳನ್ನು ಹಿಡಿದರೆ ಸಾಕು, ಉಸಿರುಗಟ್ಟಿದಂತಾಗುತ್ತದೆ. ಯಾರಿಗಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸಿದರೆ ಆಸ್ಟೆನ್ ಕೃತಿಗಳನ್ನು ತಲೆದಿಂಬಿನ ಪಕ್ಕ ಇಟ್ಟು ಮಲಗಿದರೆ, ಬೆಳಗಾಗುವುದರೊಳಗೆ ಉಸಿರುಗಟ್ಟಿ ಸಾಯುವುದು ನಿಶ್ಚಿತ’ ಎಂದು ಹೇಳಿದ್ದಳು. ‘ಆಸ್ಟೆನ್ ಕೃತಿಗಳು ಕೇವಲ ಮೇಲ್ವರ್ಗದ ಜನರ ನಯನಾಜೂಕು, ತೋಟಗಳು ಮತ್ತು ಸುಂದರ ಮನೆಗಳ ಮೇಲ್ಮೆ ಯನ್ನು ಮಾತ್ರ ಚಿತ್ರಿಸುತ್ತವೆ. ಮಾನವನ ಹೃದಯದ ಆಳದಲ್ಲಿ ರುವ ನೋವು, ಹಸಿವು, ಕಾಡು ಮತ್ತು ಉನ್ಮಾದದಂಥ ನೈಜ ಮುಖಗಳನ್ನು ಅವು ಮುಚ್ಚಿಡುತ್ತವೆ’ ಎಂದು ಬ್ರಾಂಟೆ ಹೇಳಿದ್ದಳು. ‘ಜೇನ್ ಆಸ್ಟೆನ್ ಜಗತ್ತು ಸುಂದರವಾದ, ಅಚ್ಚುಕಟ್ಟಾದ ಗಾರ್ಡನ್ ಇದ್ದಂತೆ. ಆದರೆ ಅಲ್ಲಿ ಮುಕ್ತವಾದ ಗಾಳಿಯಾಗಲಿ, ವಿಶಾಲವಾದ ಆಕಾಶವಾಗಲಿ ಇಲ್ಲ’ ಎಂಬುದು ಆಕೆಯ ವಾದವಾಗಿತ್ತು.
ಜೇನ್ ಆಸ್ಟೆನ್ ಅವರನ್ನು ಇನ್ನಿಲ್ಲದ ಕಟು ಮಾತುಗಳಲ್ಲಿ ಟೀಕಿಸಿದವರು ಮಾರ್ಕ್ ಟ್ವೇನ್. ಇವರಿಬ್ಬರ ನಡುವಿನ ವೈಚಾರಿಕ ವೈರತ್ವ ಇತಿಹಾಸ ಪ್ರಸಿದ್ಧವಾದದ್ದು. ಟ್ವೇನ್ ಅವರಿಗೆ ಆಸ್ಟೆನ್ ಅವರ ಬರವಣಿಗೆ ಎಂದರೆ ಎಷ್ಟು ಸಿಟ್ಟು ಬರುತ್ತಿತ್ತೋ, ಅಷ್ಟೇ ಕ್ರೂರವಾದ ಮತ್ತು ವ್ಯಂಗ್ಯದ ಬಾಣಗಳನ್ನು ಅವರು ಆಕೆಯ ಕೃತಿಗಳ ಮೇಲೆ ಎಸೆಯುತ್ತಿದ್ದರು. ಒಮ್ಮೆ ಟ್ವೇನ್ ಬರೆದಿದ್ದರು- ‘ಯಾವುದೇ ಒಂದು ಗ್ರಂಥಾಲಯವು ಜೇನ್ ಆಸ್ಟಿನ್ ಅವರ ಒಂದೂ ಪುಸ್ತಕವನ್ನು ಹೊಂದಿಲ್ಲದೇ ಇದ್ದರೆ, ಅದು ಒಂದು ಅತ್ಯುತ್ತಮ ಗ್ರಂಥಾಲಯ ಎನಿಸಿಕೊಳ್ಳುತ್ತದೆ. ಆಕೆಯ ಪುಸ್ತಕಗಳು ಇಲ್ಲದೇ ಹೋದರೆ ಸಾಕು, ಬೇರೆ ಯಾವುದೇ ಒಳ್ಳೆಯ ಪುಸ್ತಕ ಇಲ್ಲದಿದ್ದರೂ ಆ ಗ್ರಂಥಾಲಯ ಶ್ರೇಷ್ಠವಾಗಿ ಕಾಣುತ್ತದೆ!’
ಅಷ್ಟಕ್ಕೆ ಸುಮ್ಮನಾಗದ ಟ್ವೇನ್, ಆಸ್ಟೆನ್ ಕೃತಿಗಳನ್ನು ಓದುವುದರ ಬಗ್ಗೆ ಹೇಳಿದ್ದರು- ‘ನಾನು ‘ಪ್ರೈಡ್ ಅಂಡ್ ಪ್ರಿಜುಡಿಸ್’ ಕಾದಂಬರಿಯನ್ನು ಓದಲು ತೊಡಗಿದಾಗಲೆಲ್ಲ ನನಗೆ ಆಕೆಯನ್ನು ಸಮಾಧಿಯಿಂದ ಹೊರಗೆ ತೆಗೆದು, ಆಕೆಯದೇ ಮಂಡೆಯ ಮೂಳೆಯಿಂದ ಆಕೆಗೆ ಹೊಡೆದು, ಮತ್ತೊಮ್ಮೆ ಸಾಯಿಸಬೇಕು ಎಂದು ಅನಿಸುತ್ತದೆ.’ ಒಂದು ಕಾರ್ಯಕ್ರಮದಲ್ಲಿ ಯಾರೋ ಜೇನ್ ಆಸ್ಟೆನ್ ಹೆಸರು ಪ್ರಸ್ತಾಪಿಸಿದಾಗ, ಹಠಾತ್ ಕ್ರುದ್ಧರಾದ ಟ್ವೇನ್, ‘ಆಕೆಯ ಪುಸ್ತಕಗಳನ್ನು ಓದುವುದು ಒಬ್ಬ ರೋಗಿಗೆ ಅತಿಯಾದ ಹಿಂಸೆ ನೀಡಿದಂತೆ. ನನಗೆ ಆಕೆಯ ಪುಸ್ತಕಗಳನ್ನು ಓದಲು ಧೈರ್ಯ ಸಾಲುವುದಿಲ್ಲ. ಓದಿದರೆ ಎಲ್ಲಿ ಹುಚ್ಚು ಹಿಡಿಯುತ್ತದೋ ಎಂಬ ಭಯ’ ಎಂದು ಅವರು ಲೇವಡಿ ಮಾಡಿದ್ದರು. ‘ಆಕೆಯ ಪಾತ್ರಗಳಿಗೆ ಕೊನೆಪಕ್ಷ ಒಂದು ಸಣ್ಣ ಅಪರಾಧ ಮಾಡುವ, ಪೋಲಿಯಾಗಿ ವರ್ತಿಸುವ ಅಥವಾ ಹಸಿ ಬಿಸಿಯಾಗಿ ಬದುಕುವ ಸ್ವಾತಂತ್ರ್ಯವೂ ಇರುವುದಿಲ್ಲ’ ಎಂದು ಟ್ವೇನ್ ವ್ಯಂಗ್ಯ ಮಾಡುತ್ತಿದ್ದರು. ಜೇನ್ ಆಸ್ಟೆನ್ ಸಾಹಿತ್ಯವನ್ನು ಟೀಕಿಸುವ ನೆಪದಲ್ಲಿ ಮಾರ್ಕ್ ಟ್ವೇನ್ ಸೃಷ್ಟಿಸಿದ ವಾಕ್ಯಗಳು, ಇಂದಿಗೂ ಸಾಹಿತ್ಯ ಲೋಕದ ಅತ್ಯಂತ ಚುರುಕಾದ ಮತ್ತು ತಮಾಷೆಯ ಬೈಗುಳಗಳಾಗಿ ನೆನಪಿನಲ್ಲಿ ಉಳಿದಿವೆ.
ಮಾರ್ಕ್ ಟ್ವೇನ್ ತಮ್ಮ ಸಮಕಾಲೀನರನ್ನು ಲೇವಡಿ ಮಾಡುವುದರಲ್ಲೂ ಅಷ್ಟೇ ನಿಪುಣರಾಗಿದ್ದರು. ಅವರ ವ್ಯಂಗ್ಯ ಮತ್ತು ಹಾಸ್ಯ ಪ್ರಜ್ಞೆಗೆ ಯಾವುದೇ ಗಡಿಯಿರಲಿಲ್ಲ. ಜೇನ್ ಆಸ್ಟೆನ್ ಅವರನ್ನಷ್ಟೇ ಅಲ್ಲ, ತಮ್ಮ ಕಾಲದ ಇತರ ಪ್ರಮುಖ ಬರಹಗಾರರನ್ನು ಹಾಗೂ ಇಡೀ ಜರ್ಮನ್ ಭಾಷೆಯನ್ನೂ ಅವರು ತಮ್ಮ ತೀಕ್ಷ ನುಡಿಗಳಿಂದ ಚುಚ್ಚಿ ಆನಂದಿಸುತ್ತಿದ್ದರು. ಹೆನ್ರಿ ಜೇಮ್ಸ ಅವರ ಕಾದಂಬರಿಗಳ ಸುದೀರ್ಘ, ಜಟಿಲ ಮತ್ತು ವಿವರಣಾತ್ಮಕ ಶೈಲಿಯನ್ನು ಹಂಗಿಸುತ್ತಾ ಟ್ವೇನ್, ‘ಕೆಲವರ ಕೃತಿಗಳನ್ನು ಕೆಳಗಿಡಲು ಮನಸ್ಸಾಗುವುದಿಲ್ಲ. ಆದರೆ ಹೆನ್ರಿ ಜೇಮ್ಸ್ ಕೃತಿಗಳನ್ನು ಒಮ್ಮೆ ಕೆಳಗಿಟ್ಟರೆ, ಮತ್ತೆ ಎತ್ತಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಹೇಳಿದ್ದರು.
ಇನ್ನು ಜರ್ಮನ್ ಭಾಷೆಯ ವ್ಯಾಕರಣ ನಿಯಮಗಳಂತೂ ಟ್ವೇನ್ ಅವರನ್ನು ಅಕ್ಷರಶಃ ಕೆರಳಿಸಿ ದ್ದವು. ಜರ್ಮನ್ ಭಾಷೆಯಲ್ಲಿ ಕ್ರಿಯಾಪದದ ಭಾಗಗಳನ್ನು ವಾಕ್ಯದ ಕೊನೆಗೆ ಸೀಳುವ (separable verbs) ಪದ್ಧತಿಯನ್ನು ಅವರು ‘ಅಮಾನುಷ’ ಎಂದು ಕರೆದರು. ವಾಕ್ಯದ ಕೊನೆಯವರೆಗೂ ಕ್ರಿಯಾ ಪದಕ್ಕಾಗಿ ಕಾಯಬೇಕಾದ ಓದುಗನ ಸ್ಥಿತಿಯನ್ನು ಕಂಡು ಅವರು ಮರುಗಿದ್ದರು. ತಮ್ಮದೇ ಗೆಳೆಯ ಮತ್ತು ದಾರ್ಶನಿಕ ಎಮರ್ಸನ್ ಅವರ ವ್ಯಾಕರಣದ ಬಗ್ಗೆ ಬರೆಯುತ್ತಾ, ಅದು ‘ರೊಟ್ಟಿಯಲ್ಲಿ ಸಿಗುವ ಜಲ್ಲಿಕಲ್ಲಿನಂತೆ ಜುಗುಪ್ಸೆ ತರಿಸುತ್ತದೆ’ ಎಂದಿದ್ದರು. ಅಂದರೆ, ಎಮರ್ಸನ್ ಅವರ ಗಂಭೀರ ಬರಹದ ಸುಗಮ ಹರಿವಿಗೆ ಅವರ ವ್ಯಾಕರಣದ ತಪ್ಪುಗಳು ತಡೆಯೊಡ್ಡುತ್ತವೆ ಎಂಬುದು ಟ್ವೇನ್ ಅವರ ವಾದವಾಗಿತ್ತು.
ಅಮೆರಿಕನ್ ಸಾಹಿತ್ಯ ಲೋಕದಲ್ಲಿ ಮಾರ್ಕ್ ಟ್ವೇನ್ ಮತ್ತು ವಿಲಿಯಂ ಫಾಲ್ಕನರ್ ನಡುವಿನ ಜಗಳ ಅಥವಾ ವೈರತ್ವವು ಮುಖಾಮುಖಿ ಜಗಳವಾಗಿರಲಿಲ್ಲ. ಏಕೆಂದರೆ, ಮಾರ್ಕ್ ಟ್ವೇನ್ 1910ರಲ್ಲಿ ನಿಧನರಾದಾಗ ವಿಲಿಯಂ ಫಾಲ್ಕನರ್ ಇನ್ನು ಕೇವಲ ಹನ್ನೆರಡು ವರ್ಷದ ಬಾಲಕ!
ಆದರೆ, ಫಾಲ್ಕನರ್ ಬೆಳೆದು ದೊಡ್ಡ ಕಾದಂಬರಿಗಾರನಾದ ಮೇಲೆ ಮಾರ್ಕ್ ಟ್ವೇನ್ ಸಾಹಿತ್ಯದ ಬಗ್ಗೆ ಆಡಿದ ಮಾತುಗಳು, ನಂತರದ ದಿನಗಳಲ್ಲಿ ಅದಕ್ಕೆ ಸಿಕ್ಕ ಪ್ರತಿಕ್ರಿಯೆಗಳು ಮತ್ತು ಇವರಿಬ್ಬರ ಸಾಹಿತ್ಯ ಶೈಲಿಯ ನಡುವಿನ ಬೃಹತ್ ಕಂದಕ ಸಾಹಿತ್ಯ ಲೋಕದಲ್ಲಿ ಒಂದು ದೊಡ್ಡ ವೈಚಾರಿಕ ಸಂಘರ್ಷ ಅಥವಾ ‘ಸೃಜನಶೀಲ ಜಗಳ’ವಾಗಿ ಪ್ರಸಿದ್ಧಿ ಪಡೆಯಿತು. ವಿಲಿಯಂ ಫಾಲ್ಕನರ್ ಒಮ್ಮೆ ಮಾರ್ಕ್ ಟ್ವೇನ್ ಬರವಣಿಗೆಯನ್ನು ತೀವ್ರವಾಗಿ ಲೇವಡಿ ಮಾಡುತ್ತಾ, ‘ಮಾರ್ಕ್ ಟ್ವೇನ್ ಕೇವಲ ಒಬ್ಬ ಹ್ಯಾಕ್ ರೈಟರ್ (ಹಣಕ್ಕಾಗಿ ಸಾಧಾರಣವಾಗಿ ಬರೆಯುವವನು). ಒಂದು ವೇಳೆ ಆತ ಯುರೋಪ್ ದೇಶ ದಲ್ಲಿದ್ದಿದ್ದರೆ ಆತನನ್ನು ಕನಿಷ್ಠ ನಾಲ್ಕನೇ ದರ್ಜೆಯ ಬರಹಗಾರ ಎಂದು ಸಹ ಯಾರೂ ಪರಿಗಣಿಸು ತ್ತಿರಲಿಲ್ಲ’ ಎಂದು ಕಟುವಾಗಿ ಟೀಕಿಸಿದ್ದರು. ಟ್ವೇನ್ ಅವರ ಸರಳ, ಆಡುಭಾಷೆಯ ಶೈಲಿ ಫಾಲ್ಕನರ್ ಗೆ ಅತಿ ಸಾಧಾರಣವಾಗಿ ಕಂಡಿತ್ತು.
ಈ ಜಗಳಕ್ಕೆ ಮತ್ತಷ್ಟು ತುಪ್ಪ ಸುರಿದದ್ದು ಫಾಲ್ಕನರ್ ಮತ್ತು ಅರ್ನೆ ಹೆಮಿಂಗ್ವೇ ನಡುವಿನ ಜಗಳ. ಹೆಮಿಂಗ್ವೇ ಮಾರ್ಕ್ ಟ್ವೇನ್‌ನ ಪರಮ ಭಕ್ತರಾಗಿದ್ದರು. ಫಾಲ್ಕನರ್ ಒಮ್ಮೆ ಹೆಮಿಂಗ್ವೇನ ಬರವಣಿಗೆ ಯನ್ನು ಟೀಕಿಸುತ್ತಾ, ‘ಆತ ಎಂದೂ ಡಿಕ್ಷನರಿ ನೋಡಿ ಅರ್ಥ ಹುಡುಕಬೇಕಾದ ಒಂದು ದೊಡ್ಡ ಪದವನ್ನೂ ಬಳಸಿಲ್ಲ’ ಎಂದರು. ಅದಕ್ಕೆ ಹೆಮಿಂಗ್ವೇ,
‘ಪಾಪ ಫಾಲ್ಕನರ್. ದೊಡ್ಡ ಭಾವನೆಗಳು ಮೂಡಬೇಕಾದರೆ ದೊಡ್ಡ ಪದಗಳೇ ಬೇಕು ಎಂದು ಆತ ನಿಜವಾಗಿಯೂ ಅಂದುಕೊಂಡಿದ್ದಾನಾ? ನಾನು ಅತ್ಯಂತ ಸರಳವಾದ, ಹಳೇ ಪದಗಳನ್ನು ಬಳಸಿಯೇ ತೀವ್ರವಾದ ಭಾವನೆಗಳನ್ನು ಸೃಷ್ಟಿಸಬ ಮತ್ತು ಅದನ್ನು ಓದುಗರು ನಂಬುವಂತೆ ಮಾಡಬ ಎಂದು ಆತನಿಗೆ ಗೊತ್ತಿಲ್ಲವೇ?’ ಎಂದು ತಿರುಗೇಟು ನೀಡಿದ್ದರು. ಈ ಮೂಲಕ ಹೆಮಿಂಗ್ವೇ ತನ್ನ ಗುರು ಮಾರ್ಕ್ ಟ್ವೇನ್‌ನ ಸರಳ ಬರವಣಿಗೆಯ ಪರಂಪರೆಯನ್ನು ಫಾಲ್ಕನರ್ ವಿರುದ್ಧ ಸಮರ್ಥಿಸಿಕೊಂಡಿದ್ದರು.