ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Rakesh Kumar Kammaje Column: ನೇಪಥ್ಯಕ್ಕೆ ಸರಿಯುತ್ತಿರುವ ಪತ್ರಿಕೋದ್ಯಮ ದಿಗಂತದ ʼಭಾಸ್ಕರʼ

ಭಾಸ್ಕರ ಹೆಗಡೆ ಅವರಲ್ಲಿ ಓರ್ವ ಅತ್ಯುತ್ತಮ ಸಾರ್ವಜನಿಕ ಸಂಪರ್ಕಾಧಿಕಾರಿಯ ಗುಣಗಳೂ ಇವೆ ಎಂಬುದು ಗುರುತಿಸಲೇಬೇಕಾದ ಸಂಗತಿ. ಮತ್ತೊಬ್ಬರನ್ನು ಹೇಗೆ ತಮ್ಮ ದಾರಿಗೆ ತರಬೇಕೆಂಬ ಅಷ್ಟೂ ಚಾಕಚಕ್ಯತೆ ಅವರಲ್ಲಿದೆ. ಅತ್ಯಂತ ಸರಳವಾದ ವಿಷಯವನ್ನು ಅಮೋಘ ರೋಚಕತೆ ಯೊಂದಿಗೆ ಹೇಗೆ ಪ್ರಸ್ತುತಪಡಿಸಬೇಕೆಂಬ ಕಲೆಯೂ ಅವರಿಗೆ ಸಿದ್ಧಿಸಿದೆ.

ನೇಪಥ್ಯಕ್ಕೆ ಸರಿಯುತ್ತಿರುವ ಪತ್ರಿಕೋದ್ಯಮ ದಿಗಂತದ ʼಭಾಸ್ಕರʼ

-

Ashok Nayak
Ashok Nayak Jan 31, 2026 7:49 AM

ತನ್ನಿಮಿತ್ತ

ರಾಕೇಶ್‌ ಕುಮಾರ ಕಮ್ಮಜೆ

ಇಂದು ಮಾಧ್ಯಮ ಪ್ರಪಂಚದಲ್ಲಿ ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅನ್ನುವಾಗ ಹುಟ್ಟಿ ಕೊಳ್ಳುವ ಸಂಪಾದಕರ ಆಸಕ್ತಿ ಹಾಗೂ ದೊರಕುವ ಗೌರವ, ಭಾಸ್ಕರ ಹೆಗಡೆ ಅವರ ಬೆವರಿನ ಪರಿಶ್ರಮ ಅನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಉಜಿರೆಯ ಪತ್ರಿಕೋ ದ್ಯಮವನ್ನು ಭಾಸ್ಕರ ಹೆಗಡೆ ಅವರನ್ನು ಹೊರತುಪಡಿಸಿ ಪ್ರತ್ಯೇಕ ನೆಲೆಯಲ್ಲಿ ಗುರುತಿಸುವು ದಕ್ಕೆ ಸಾಧ್ಯವಾಗದು. ಪತ್ರಿಕೋದ್ಯಮ ಶಿಕ್ಷಣ ಹೀಗೆಯೇ ಇರಬೇಕೆಂಬ ವಿನೂತನ ಸಾಧ್ಯತೆಯನ್ನು ಅನಾವರಣ ಗೊಳಿಸಿದವರು ಭಾಸ್ಕರ ಹೆಗಡೆ. ಅವರ ತರಗತಿಗಳಲ್ಲಿ ಪಾಠ ಕೇವಲ ಒಂದು ಭಾಗವಾಗಿತ್ತು ಅಷ್ಟೆ.

ನಗರಗಳ ಥಳಕು-ಬಳುಕಿನಿಂದ ಗಾವುದ ದೂರವಿರುವ ಉಜಿರೆಯೆಂಬ ಪುಟ್ಟ ಪ್ರದೇಶದಲ್ಲಿ ಕುಳಿತು ರಾಜ್ಯ-ರಾಷ್ಟ್ರದ ಸುದ್ದಿಮನೆಗಳಿಗೆ ಹಾಗೂ ಮನರಂಜನಾ ಮಾಧ್ಯಮಗಳಿಗೆ ಭರಪೂರ ಸಂಖ್ಯೆಯ ಪತ್ರಕರ್ತರನ್ನೊದಗಿಸುವ ಕಾಯಕವನ್ನು ಕಳೆದ 3 ದಶಕಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆತ್ಮ-ಪರಮಾತ್ಮ ಎರಡೂ ಆಗಿರುವ ಭಾಸ್ಕರ ಹೆಗಡೆ ಇಂದು (ಜನವರಿ 31) ನಿವೃತ್ತಿ ಹೊಂದುತ್ತಿದ್ದಾರೆ!

ಒಬ್ಬ ಉಪನ್ಯಾಸಕರು ವಿದ್ಯಾರ್ಥಿ ಸಮುದಾಯದ ನಡುವೆ ಇಷ್ಟು ಖ್ಯಾತರಾಗಬಹುದೇ ಅನ್ನು ವಷ್ಟರ ಮಟ್ಟಿಗೆ ಭಾಸ್ಕರ ಹೆಗಡೆ ಬೆರಗು ಮೂಡಿಸಿದವರು. ಕಳೆದ ಹಲವು ವರ್ಷಗಳಲ್ಲಿ ಉಜಿರೆಯ ಪರಿಸರದಿಂದ ರಾಜ್ಯದಾಚೆಗೂ ಪಸರಿಸಿದ ಅವರ ಪ್ರಭಾವಳಿ ಊಹೆಗೂ ನಿಲುಕದ್ದು. ಪತ್ರಿಕೋ ದ್ಯಮ ಶಿಕ್ಷಣವು ರಾಜ್ಯದಲ್ಲಿ ವಿಸ್ತಾರವಾಗುವಂತೆ ಮಾಡುವಲ್ಲಿಯೂ ಅವರ ಪ್ರತ್ಯಕ್ಷ ಹಾಗೂ ಪರೋಕ್ಷ ಕೊಡುಗೆ ಇರುವುದನ್ನು ಗಮನಿಸದೇ ಇರುವುದಕ್ಕಾಗುವುದಿಲ್ಲ. ಅದರಲ್ಲೂ ದಕ್ಷಿಣ ಕನ್ನಡದ ಮಣ್ಣಿನಲ್ಲಿ ಕ್ಲಾಸ್‌ರೂಂ ಮೂಲಕ ಅವರು ಪತ್ರಿಕೋದ್ಯಮದ ಹುಲುಸಾದ ಬೆಳೆಯನ್ನು ತೆಗೆದ ಪರಿ ವಿಸ್ಮಯಕಾರಿ!

ನಮ್ಮ ನಡುವೆ, ಸಾಕಷ್ಟು ಪ್ರಸಿದ್ಧಿ ಪಡೆದ ಅವೆಷ್ಟೋ ಮಂದಿ ಪ್ರಾಧ್ಯಾಪಕರಿದ್ದಾರೆ. ಉಪನ್ಯಾಸಕ ರಾಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡ ಅನೇಕ ಮಂದಿ ಕಾಣಸಿಗಬಹುದು. ಆದರೆ ಈ ಕ್ಷೇತ್ರದಲ್ಲಿ ತೊಡಗಿಕೊಂಡು ವಿದ್ಯಾರ್ಥಿಗಳನ್ನು ಬೆಳೆಸಿದವರ ಸಂಖ್ಯೆ ಕಡಿಮೆಯೇ!

ಇದನ್ನೂ ಓದಿ: Roopa Gururaj Column: ಕನ್ನಡಿಗರ ಬದುಕಿಗೆ ಜೀವ ತುಂಬಿದ ರಾಜರ್ಷಿಯ ತ್ಯಾಗ

ಯಾಕೆಂದರೆ ಕೇವಲ ಪಾಠ ಮಾಡುವುದಷ್ಟನ್ನೇ ‘ವಿದ್ಯಾರ್ಥಿಗಳನ್ನು ಬೆಳೆಸುವುದು’ ಎಂದು ಪರಿಗಣಿಸಲಾಗುವುದಿಲ್ಲ. ಪಾಠದಾಚೆಗೂ ವಿದ್ಯಾರ್ಥಿಯ ಜತೆಗೇ ನಿಂತು, ಆತನ ಗುಣಮಟ್ಟದ ವಿಸ್ತೃತತೆಗೆ ತಮ್ಮ ಸಮಯವನ್ನು ನೀಡುವ ವ್ಯಕ್ತಿಯಷ್ಟೇ ‘ಗುರು’ ಎನಿಸಿಕೊಳ್ಳುವುದಕ್ಕೆ ಸಾಧ್ಯ.

ಭಾಸ್ಕರ ಹೆಗಡೆ ಅವರು ಹಲವರ ಅಂತರಂಗದಲ್ಲಿ ಆವರಿಸಿಕೊಳ್ಳುವುದಕ್ಕಿರುವ ಕಾರಣವೇ ಇದು. ಆಧುನಿಕ ಜಗತ್ತಿನ ಶಿಕ್ಷಣದ ಪರಿಕಲ್ಪನೆ, ವ್ಯಾಖ್ಯೆಗಳು ಬದಲಾಗುತ್ತಾ ಸಾಗುವ ಈ ಹೊತ್ತಿನಲಿ, ಉಪನ್ಯಾಸಕತ್ವವೂ ಇತರ ವೃತ್ತಿಯಂತೆ ಒಂದು ಉದ್ಯೋಗವಷ್ಟೇ ಆಗಿರುವುದು ಅಚ್ಚರಿಯೇನೂ ಅಲ್ಲ.

ಆದರೆ ಇಂಥ ಸಂದರ್ಭದಲ್ಲೂ ಗುರುತರವಾದ ಅರ್ಥ ಈ ವೃತ್ತಿಗಿದೆ ಎಂಬುದನ್ನು ಮನಗಂಡು ಗುರು ಸ್ಥಾನಕ್ಕೆ ಏರಿದವರು ಬಹು ವಿರಳ. ಅಂಥ ಕಡಿಮೆ ಜನರಲ್ಲಿ ಒಬ್ಬರಾಗಿರುವುದರಿಂದಲೇ ಭಾಸ್ಕರ ಹೆಗಡೆ ಆಪ್ತರೆನಿಸುವುದು.

ಉಜಿರೆಯ ಪತ್ರಿಕೋದ್ಯಮ ವಿಭಾಗಕ್ಕೆ ಬಹು ದೀರ್ಘ ಇತಿಹಾಸವೇ ಇದೆ. ದೊಡ್ಡ ಇತಿಹಾಸವಿರುವ ವಿಭಾಗದಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಹೊರಬಂದಿದ್ದರೆ ಅದು ಬಹುದೊಡ್ಡ ವಿಚಾರ ವೇನೂ ಅಲ್ಲ. ಆದರೆ ಹಾಗೆ ಹೊರಬಂದವರು ಹೇಗಿದ್ದಾರೆ ಅನ್ನುವುದೇ ಗುರುತಿಸಬೇಕಾದ ಅಂಶ. ಇಂದು ಮಾಧ್ಯಮ ಪ್ರಪಂಚದಲ್ಲಿ ಉಜಿರೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಅನ್ನುವಾಗ ಹುಟ್ಟಿ ಕೊಳ್ಳುವ ಸಂಪಾದಕರ ಆಸಕ್ತಿ ಹಾಗೂ ದೊರಕುವ ಗೌರವ, ಭಾಸ್ಕರ ಹೆಗಡೆ ಅವರ ಬೆವರಿನ ಪರಿಶ್ರಮ ಅನ್ನುವುದರಲ್ಲಿ ಅನುಮಾನವಿಲ್ಲ.

Screenshot_5 ಋ

ಹಾಗಾಗಿಯೇ ಉಜಿರೆಯ ಪತ್ರಿಕೋದ್ಯಮವನ್ನು ಭಾಸ್ಕರ ಹೆಗಡೆ ಅವರನ್ನು ಹೊರತುಪಡಿಸಿ ಪ್ರತ್ಯೇಕ ನೆಲೆಯಲ್ಲಿ ಗುರುತಿಸುವುದಕ್ಕೆ ಸಾಧ್ಯವಾಗದು. ತಮ್ಮ ವಿಭಾಗವನ್ನು ಮತ್ತೊಬ್ಬರು, ತಮ್ಮನ್ನು ಹೊರತುಪಡಿಸಿ ಕಲ್ಪಿಸಿಕೊಳ್ಳಲಾರದಷ್ಟು ಆವರಿಸಿಕೊಂಡಿರುವುದೇ ಭಾಸ್ಕರ ಹೆಗಡೆ ಯವರು ಏರಿದ ಎತ್ತರಕ್ಕೆ ಸಾಕ್ಷಿ ಮತ್ತು ಅವರ ಸಾಧನೆಗೆ ಹಿಡಿದ ಕೈಗನ್ನಡಿ.

ಭಾಸ್ಕರ ಹೆಗಡೆ ಅವರಲ್ಲಿ ಓರ್ವ ಅತ್ಯುತ್ತಮ ಸಾರ್ವಜನಿಕ ಸಂಪರ್ಕಾಧಿಕಾರಿಯ ಗುಣಗಳೂ ಇವೆ ಎಂಬುದು ಗುರುತಿಸಲೇಬೇಕಾದ ಸಂಗತಿ. ಮತ್ತೊಬ್ಬರನ್ನು ಹೇಗೆ ತಮ್ಮ ದಾರಿಗೆ ತರಬೇಕೆಂಬ ಅಷ್ಟೂ ಚಾಕಚಕ್ಯತೆ ಅವರಲ್ಲಿದೆ. ಅತ್ಯಂತ ಸರಳವಾದ ವಿಷಯವನ್ನು ಅಮೋಘ ರೋಚಕತೆ ಯೊಂದಿಗೆ ಹೇಗೆ ಪ್ರಸ್ತುತಪಡಿಸಬೇಕೆಂಬ ಕಲೆಯೂ ಅವರಿಗೆ ಸಿದ್ಧಿಸಿದೆ.

ಅವರು ಆಚೀಚೆ ಓಡಾಡುವಾಗ ಪ್ಯಾಂಟ್ ಕಿಸೆಯಿಂದ ಮೇಲೆದ್ದು ಬಂದ ಅರ್ಧ ಕರ್ಚೀಪ್ ಹೊರ ಜಗತ್ತನ್ನು ಇಣುಕುತ್ತಿದೆ ಎಂದರೆ ಇಂದು ಏನೋ ಒಂದು ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ಬರುತ್ತಾರೆಂದೇ ಅರ್ಥ!

ಪತ್ರಿಕೋದ್ಯಮ ಶಿಕ್ಷಣ ಹೀಗೆಯೇ ಇರಬೇಕೆಂಬ ವಿನೂತನ ಸಾಧ್ಯತೆಯನ್ನು ಅನಾವರಣ ಗೊಳಿಸಿದವರು ಭಾಸ್ಕರ ಹೆಗಡೆ. ಅವರ ತರಗತಿಗಳಲ್ಲಿ ಪಾಠ ಕೇವಲ ಒಂದು ಭಾಗವಾಗಿತ್ತು ಅಷ್ಟೆ! ಭಾಷಣ, ಚರ್ಚೆ, ಬರವಣಿಗೆ, ವಿಷಯ ಮಂಡನೆಯ ವೇದಿಕೆಯಾಗಿ ಇಡಿಯ ತರಗತಿಯನ್ನೇ ಅವರು ಬದಲಾವಣೆ ಮಾಡಿದ್ದರು. ಆ ಕಾರಣದಿಂದ ಪತ್ರಿಕೋದ್ಯಮ ಕೊಠಡಿಯೊಳಗೆ ಪ್ರವೇಶಿಸುವಾಗಲೇ ವಿದ್ಯಾರ್ಥಿಗೆ ಅದೇನೋ ಒಂದು ರೋಮಾಂಚನ.

ನಾವೆಲ್ಲಾ ವಿದ್ಯಾರ್ಥಿಗಳಾಗಿದ್ದಾಗ ವಿಜಯ ಕರ್ನಾಟಕದ ಆಗಿನ ಹಾಗೂ ಈಗ ವಿಶ್ವವಾಣಿಯ ಸಂಪಾದಕರಾದ ವಿಶ್ವೇಶ್ವರ ಭಟ್, ಹಾಯ್ ಬೆಂಗಳೂರಿನ ಸಂಪಾದಕ ರವಿ ಬೆಳಗೆರೆಯವರನ್ನೆಲ್ಲಾ ಎಡೆಬಿಡದೆ ‘ಕಾಡಿದ್ದೂ’ ಅಲ್ಲೇ ಆಗಿತ್ತು! ನಮ್ಮ ಉತ್ಸಾಹವನ್ನು ವಿಶ್ವೇಶ್ವರ ಭಟ್ ಎಷ್ಟು ಮೆಚ್ಚಿದ್ದ ರೆಂದರೆ ವಿಜಯ ಕರ್ನಾಟಕದ ತಮ್ಮ ‘ಜನಗಳ ಮನ’ ಅಂಕಣದಲ್ಲಿ ಉಜಿರೆಯ ಪತ್ರಿಕೋದ್ಯಮ ಹಾಗೂ ವಿದ್ಯಾರ್ಥಿಗಳ ಬಗೆಗೆ ಬರೆದಿದ್ದರು ಮತ್ತು ಅದೇ ಅಂಕಣದಲ್ಲಿ ಭಾಸ್ಕರ ಹೆಗಡೆ ಅವರ ಪರಿಶ್ರಮವನ್ನೂ ಗುರುತಿಸಿದ್ದರು! ಪತ್ರಿಕೋದ್ಯಮ ಪಾಠ-ಪ್ರಯೋಗ ಎರಡೂ ಮುಕ್ತ ವಾತಾವರಣ ದಲ್ಲಿದ್ದಾಗಲಷ್ಟೇ ಬೆಳೆಯುತ್ತದೆ. ಪತ್ರಿಕೋದ್ಯಮ ವಿಷಯದ ಈ ಸಹಜ ಸಂಗತಿಯನ್ನು ಭಾಸ್ಕರ ಹೆಗಡೆ ಬಹಳ ಚೆನ್ನಾಗಿ ಗುರುತಿಸಿದ್ದರು ಮತ್ತು ಪತ್ರಿಕೋದ್ಯಮ ವಿಷಯಕ್ಕೆ ಪ್ರತ್ಯೇಕ ‘ಶಿಸ್ತನ್ನು’ ಕಾಲೇಜಿನ ಶಿಸ್ತಿಗೆ ಧಕ್ಕೆ ಯಾಗದಂತೆ ರೂಪಿಸಿದ್ದರು!

ಇಂದು ರಾಜ್ಯದ ನಾನಾ ಭಾಗಗಳಲ್ಲಿ ಪತ್ರಿಕೋದ್ಯಮ ಬೋಧಿಸುತ್ತಿರುವವರಲ್ಲಿ ಒಂದಷ್ಟು ಮಂದಿ ಭಾಸ್ಕರ ಹೆಗಡೆ ಅವರ ವಿದ್ಯಾರ್ಥಿಗಳೇ. ಹಾಗೆ ಉಪನ್ಯಾಸಕರಾದವರು ಭಾಸ್ಕರ ಹೆಗಡೆ ಮಾಡಿಸು ತ್ತಿದ್ದ ಬಹುತೇಕ ಚಟುವಟಿಕೆಗಳನ್ನು ಇಂದು ತಮ್ಮ ತಮ್ಮ ತರಗತಿಗಳಲ್ಲಿ ಮುಂದುವರಿಸುತ್ತಲೇ ಇದ್ದಾರೆ (ಕೆಲವೊಂದು ಸಂಗತಿಗಳು ಹೊಸತಾಗಿ ಸೇರಿರಬಹುದು ಅಥವಾ ಕಡಿಮೆ ಇರಬಹುದು). ಹಾಗಾಗಿಯೇ ಪತ್ರಿಕೋದ್ಯಮದ ನಾನಾ ವಿಭಾಗಗಳಲ್ಲಿ ಪರೋಕ್ಷವಾಗಿ ಭಾಸ್ಕರ ಹೆಗಡೆ ಕಾಣಿಸಿ ಕೊಳ್ಳುತ್ತಲೇ ಇದ್ದಾರೆ!

ಅವರ ತರಗತಿಯೆಂದರೆ ಅದೊಂದು ಕೌಟುಂಬಿಕ ಸಮ್ಮಿಲನ ಇದ್ದಂತೆ. ಅಭಿಪ್ರಾಯ ಮಂಡನೆಗೆ ಪ್ರತಿಯೊಬ್ಬರಿಗೂ ಅಲ್ಲಿ ಅವಕಾಶವಿರುತ್ತದೆ. ಅಕಸ್ಮಾತ್ ಯಾರಾದರೂ ‘ಸರ್ ನನಗೆ ಈ ವಿಷಯದ ಬಗೆಗೆ ಮಾತಾಡುವುದಿದೆ’ ಅಂದರೆ ಡಯಾಸ್ ಸಿಕ್ಕೇ ಸಿಗುತ್ತದೆ. ಅವರು ಯಾರನ್ನಾದರೂ ತರಾಟೆಗೆ ತೆಗೆದುಕೊಳ್ಳುತ್ತಿದ್ದರೂ, ಬಹುತೇಕ ಉಪನ್ಯಾಸಕರಂತೆ ‘ಬಾಯಿ ಮುಚ್ಚು’ ಅನ್ನುವುದಾಗಲಿ ‘ನೀನೇನೂ ಹೇಳಬೇಕಿಲ್ಲ’ ಅಂತಾಗಲೀ ಹೇಳುವವರೇ ಅಲ್ಲ.

ಬದಲಾಗಿ ‘ಹೀಗೆ ಮಾಡಿದ್ದೀರಲ್ಲಾ, ಇದು ಸರಿ ಆಗ್ತದಾ, ಹೇಳಿ’ ಅಂತ ವಿದ್ಯಾರ್ಥಿ ತನ್ನ ಅಭಿಪ್ರಾಯ ಮಂಡಿಸುವುದಕ್ಕೆ ಸಮಯ ಕೊಡುತ್ತಾರೆ! ಅಷ್ಟಾಗುವಾಗಲೇ ಇವ ‘ಬೆಬ್ಬೆಬ್ಬೆ’ ಆಗಿರುತ್ತಾನೆ!! ಏತನ್ಮಧ್ಯೆ, ಪತ್ರಿಕೋದ್ಯಮವನ್ನು ಸರಳಸೂತ್ರದಂತೆ ವಿದ್ಯಾರ್ಥಿಗಳಿಗೆ ಒಲಿಸಿಕೊಡುವ ಅವರ ಬೋಧನಾಶಕ್ತಿಯೂ ಶ್ಲಾಘನಾರ್ಹ.

ಭಾಸ್ಕರ ಹೆಗಡೆ ಅವರ ತಾಳ್ಮೆ ಅಪಾರ. ಯಾವತ್ತೂ, ಯಾವ ಸಂದರ್ಭದಲ್ಲೂ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ವ್ಯಕ್ತಿಯೇ ಅವರಲ್ಲ. ಯಾವುದೇ ಸಂಸ್ಥೆಯಲ್ಲಾದರೂ ಪತ್ರಿಕೋದ್ಯಮ ವಿಭಾಗ ದಿಂದ ತುಸು ಹೆಚ್ಚೇ ನಿರೀಕ್ಷೆ ಇರುತ್ತದೆ. ಕೆಲವೊಂದು ಸಾಮಾನ್ಯಾತೀತ ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿದರೆ ಪತ್ರಿಕೋದ್ಯಮ ವಿಷಯವಿರುವ ಹೆಚ್ಚಿನ ಕಾಲೇಜುಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗವಾಗಿಯೂ ಅದೇ ವಿಭಾಗ ಕಾರ್ಯ ನಿರ್ವಹಿಸುತ್ತದೆ.

ಇನ್ನು, ಪತ್ರಿಕೋದ್ಯಮ ವಿಭಾಗವು ನಿಗದಿತ ಪಠ್ಯದ ಜತೆಗೆ ವಿದ್ಯಾರ್ಥಿಗಳಿಗೆ ಬರವಣಿಗೆ, ವರದಿಗಾರಿಕೆ, ಮಾತುಗಾರಿಕೆ, ಸಂದರ್ಶನ ಕಲೆ, ಭಾಷಾಂತರ, ವಿಡಿಯೋ ಎಡಿಟಿಂಗ್ ಹೀಗೆ ಹತ್ತಾರು ಸಂಗತಿಗಳನ್ನು ಹೇಳಿ ಕೊಡಲೇಬೇಕಿರುವುದರಿಂದ ವಿಭಾಗದ ಮೇಲಿನ ಒತ್ತಡ ಯಾವಾಗಲೂ ಬರೋಬ್ಬರಿಯಾಗಿಯೇ ಇರುತ್ತದೆ.

ವಿಭಾಗದ ಉಪನ್ಯಾಸಕರು ಸಂಜೆ ಆರು-ಏಳರ ಮೊದಲು ಮನೆ ಹಾದಿಯೆಡೆ ದೃಷ್ಟಿ ಹಾಯಿಸು ವುದು ಕಷ್ಟವೇ! (ಏನೂ ಮಾಡದೆ ಹಾಯಾಗಿರುವ ಪತ್ರಿಕೋದ್ಯಮ ಉಪನ್ಯಾಸಕರೂ ಕೆಲವು ಕಡೆಗಳಲ್ಲಿ ಇರಬಹುದು, ಅದು ಬೇರೆ ವಿಷಯ!). ಇಷ್ಟೆಲ್ಲ ನಿಬಿಡತೆಯ ಮಧ್ಯೆ ಸಹಜವಾಗಿಯೇ ಸುಸ್ತು, ಸಿಟ್ಟು, ಆಕ್ರೋಶಗಳು ಒಡಮೂಡುವುದಿದೆ. ಆದರೆ ಭಾಸ್ಕರ ಹೆಗಡೆ ಎಲ್ಲಾ ಒತ್ತಡಗಳನ್ನೂ ತಾಳ್ಮೆ ಕಳಕೊಳ್ಳದೆಯೇ ನಿಭಾಯಿಸುವ ವಿಶಿಷ್ಟ ವ್ಯಕ್ತಿ.

‘ಡೋಂಟ್ ಟೆಸ್ಟ್ ಮೈ ಪೇಶೆನ್ಸ್’ ಅನ್ನುವುದೇ ಅವರ ಬಹು ದೊಡ್ಡ ಬೈಗುಳ! ಕಾಲೇಜಿನ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸಿಕೊಳ್ಳುತ್ತಾ, ವಿದ್ಯಾರ್ಥಿಗಳ ಬೆಳವಣಿಗೆಗಳನ್ನು ಹತ್ತಿರದಿಂದ ಗುರುತಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬರುವ ತನ್ನ ಸಹಜಗುಣವನ್ನು ಅವರು ಕೊನೆಯವರೆಗೂ ಕಾಪಾಡಿಕೊಂಡೇ ಬಂದಿದ್ದಾರೆ.

ಅವರು ತುಸು ಸ್ವಾರ್ಥ ಯೋಚನೆ ಮಾಡಿದ್ದರೂ ಸಾಕಿತ್ತು, ಈ 3 ದಶಕಗಳಲ್ಲಿ ಸಾವಿರಾರು ಬೈಲೈನ್‌ ಗಳು ರಾಜ್ಯ-ರಾಷ್ಟ್ರದ ಮೂಲೆಮೂಲೆಗೂ ಅವರನ್ನು ಪರಿಚಯಿಸುತ್ತಿದ್ದವು. ಆದರೆ ಅವರು ತಮಗೆ ಕಂಡ ವಿಷಯವನ್ನೆಲ್ಲ ತಮ್ಮ ವಿದ್ಯಾರ್ಥಿಗಳಿಗೆ ನೀಡಿ ಅವರನ್ನು ಬರೆಯುವ ಬದುಕಿನೆಡೆ ಒಯ್ಯುವ ಯತ್ನಕ್ಕಿಳಿದರು.

ಪದವಿ ಪತ್ರಿಕೋದ್ಯಮಕ್ಕೆ ಬಂದ ಆರಂಭಿಕ ಕಾಲದಲ್ಲಿ, ಅದರಲ್ಲೂ ಬರವಣಿಗೆಗೆ ವಿಷಯ ಗುರುತಿಸುವ ಯೋಗ್ಯತೆ ಇನ್ನೂ ಪ್ರಾಪ್ತವಾಗದಿರುವ ಹೊತ್ತಿನಲ್ಲಿ, ಅವರು ನೀಡುವ ವಿಷಯ ಗಳಿಂದಲೇ ವಿದ್ಯಾರ್ಥಿಯೊಳಗಿನ ಬರಹಗಾರ ಹೊರ ಜಗತ್ತಿಗೆ ತೆರೆದುಕೊಳ್ಳಲಾರಂಭಿಸುತ್ತಾನೆ. ಅಕಸ್ಮಾತ್ ಅವರು ಹಾಗೆ ವಿಷಯ ಕೊಡದೆ ತಾವೇ ಬರೆಯಲು ಹೊರಟಿರುತ್ತಿದ್ದರೆ ಉಜಿರೆಯ ಪತ್ರಿಕೋದ್ಯಮ ಮಕ್ಕಳು ಈ ರೀತಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗುತ್ತಲೇ ಇರಲಿಲ್ಲ.

ದಿನವೂ ವಿವಿಧ ಪತ್ರಿಕೆಗಳಲ್ಲಿ ಬರುವ ತಮ್ಮ ವಿದ್ಯಾರ್ಥಿಗಳ ಬೈಲೈನ್ ಅನ್ನು ತಮ್ಮ ಹೆಸರಿಗಿಂತ ಹೆಚ್ಚು ಪ್ರೀತಿಸಿದ್ದು ಅವರ ಬಹುದೊಡ್ಡ ಆದರ್ಶ. ಎಸ್‌ಡಿಎಂ ಕಾಲೇಜಿನ ಖ್ಯಾತ ಪ್ರಾಚಾರ್ಯ ದಿ.ಡಾ.ಬಿ.ಯಶೋವರ್ಮ ಅವರು ‘ಕಾಲೇಜಿಗೆ ದೊರಕುತ್ತಿರುವ ಪ್ರಚಾರದಲ್ಲಿ ಶೇ.50ರಷ್ಟನ್ನು ಪತ್ರಿಕೋದ್ಯಮ ವಿಭಾಗವೊಂದೇ ಒದಗಿಸಿಕೊಡುತ್ತಿದೆ’ ಎಂದು ಹೆಮ್ಮೆ- ಖುಷಿ ವ್ಯಕ್ತಪಡಿಸಿದ್ದರು.

ನಿಜ, ತಮ್ಮ ವಿದ್ಯಾರ್ಥಿಗಳ ಮೂಲಕ ಕಾಲೇಜಿಗೆ ಭರಪೂರ ಪ್ರಚಾರ ಕೊಡುವ ಕಾಯಕವನ್ನು ಭಾಸ್ಕರ ಹೆಗಡೆ ತಪಸ್ಸಿನಂತೆ ನಡೆಸಿಕೊಂಡು ಬಂದಿದ್ದಾರೆ. ಕಾಲೇಜಿನ ಚಟುವಟಿಕೆಗಳ ಬಗೆಗೆ ವರದಿ, ವಿಶೇಷ ವರದಿ, ನುಡಿಚಿತ್ರ, ಲೇಖನ ಹೀಗೆ ಒಂದರ ಮೇಲೊಂದರಂತೆ ಬರೆಸಿ, ವಿಡಿಯೋ ಚಿತ್ರೀಕರಿಸಿ, ಅವುಗಳೆಲ್ಲ ಪ್ರಕಟವಾಗುವಂತೆ ನೋಡಿಕೊಂಡು, ‘ಎಸ್‌ಡಿಎಂ ಕಾಲೇಜು’ ಅನ್ನುವ ‘ಬ್ರಾಂಡ್ ನೇಮ್’ ಸ್ಥಾಯಿಯಾಗುವಂತೆ ಮಾಡುವಲ್ಲಿ ಭಾಸ್ಕರ ಹೆಗಡೆಯವರ ಕೊಡುಗೆ ಬಹುದೊಡ್ಡದು ಮತ್ತು ಇತಿಹಾಸದ ಪುಟದಲ್ಲಿ ದಾಖಲಾಗುವಂಥದ್ದು.

ಇಂಥ ಭಾಸ್ಕರ ಹೆಗಡೆ ಇದೀಗ ನಿವೃತ್ತಿಯಾಗುತ್ತಿದ್ದಾರೆ ಎಂಬುದು ವೇದನೆ ತರುವ ಸಂಗತಿ. ಅವರಿಲ್ಲದ ಉಜಿರೆಯ ಪತ್ರಿಕೋದ್ಯಮ ವಿಭಾಗವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಇಂದು ಉಜಿರೆಯ ಪತ್ರಿಕೋದ್ಯಮ ವಿಭಾಗ ಸ್ನಾತಕೋತ್ತರ ಶಿಕ್ಷಣದೆಡೆಗೂ ಮೈಚಾಚಿ, ಹತ್ತಾರು ಉಪನ್ಯಾಸಕರುಗಳನ್ನು ತನ್ನ ಬಗಲಲ್ಲಿಟ್ಟುಕೊಂಡು ಮುನ್ನಡೆಯುತ್ತಿದೆಯಾದರೆ ಅದರ ಹಿಂದಿರುವ ಅವರ ಸಮರ್ಪಣಾಭಾವ, ತ್ಯಾಗ ಮಾನದಂಡಕ್ಕೆ ನಿಲುಕದಂಥದ್ದು. ಹತ್ತಿರದಿಂದ ಕಂಡವರಿಗೆ ಮಾತ್ರ ತಿಳಿಯುವಂಥದ್ದು!

ಕಳೆದ 3 ದಶಕಗಳಲ್ಲಿ ಅವರು ಬಿತ್ತಿದ ಬೀಜಗಳೆಲ್ಲ, ಉಜಿರೆ ಪತ್ರಿಕೋದ್ಯಮದ ಪ್ರಾಯೋಗಿಕ ಪತ್ರಿಕೆಯ ಹೆಸರಿನಂತೆ ‘ಚಿಗುರು’ಗಳಾಗಿ ಮಿನುಗಿ ಹೆಮ್ಮರವಾಗಿ ಬೆಳೆಯಲಾರಂಭಿಸಿವೆ. ಧರ್ಮಸ್ಥಳ ದಿಂದ ತೊಡಗಿ ರಾಷ್ಟ್ರ ರಾಜಧಾನಿಯವರೆಗೂ ಉಜಿರೆಯ ಹೆಸರು ಪ್ರತಿಧ್ವನಿಸುತ್ತಿದೆ. ಸಾಗರ ದಾಚೆಗೂ ತಲಪಿದೆ.

ಆದರೆ ಪ್ರಾಧ್ಯಾಪಕರಾಗಿ, ಗುರುವಾಗಿ, ಪತ್ರಿಕೋದ್ಯಮ ತರಗತಿಗಳಿಗೆ ವಿನೂತನ ರೂಪ ಕೊಟ್ಟ ಆಚಾರ್ಯ ಪುರುಷರಾಗಿ, ಸಾರ್ವಜನಿಕ ಸಂಪರ್ಕ ತಜ್ಞರಾಗಿ, ಪ್ರೇರಕರಾಗಿ, ಮಾರ್ಗದರ್ಶಕರಾಗಿ, ಅತ್ಯುತ್ತಮ-ಮಾದರಿ ನಾಯಕರಾಗಿ, ವ್ಯಕ್ತಿಯಾಗಿ-ಶಕ್ತಿಯಾಗಿ, ಉಜಿರೆಯ ಪತ್ರಿಕೋದ್ಯಮ ದಿಗಂತ ದಲ್ಲಿ ಪ್ರಖರವಾಗಿ ಬೆಳಗಿದ, ಸಹಸ್ರಾರು ವಿದ್ಯಾರ್ಥಿಗಳಿಗೆ ‘ಬದುಕಿಗೊಬ್ಬ ಭಾಸ್ಕರ’ ಎನಿಸಿಕೊಂಡ ಭಾಸ್ಕರ ಹೆಗಡೆ ಇದೀಗ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಅವರ ವಿಶ್ರಾಂತ ಜೀವನ ವರ್ಣಮಯ ವಾಗಿರಲಿ...

(ಲೇಖಕರು ಪ್ರಾಂಶುಪಾಲರು, ಅಂಬಿಕಾ ಪದವಿ

ಮಹಾವಿದ್ಯಾಲಯ)