Narayana Yaji Column: ಕರ್ಕಿ ಪ್ರಭಾಕರ ಭಂಡಾರಿಯವರ ನಾದ ಮೌನ
ಯಕ್ಷಗಾನದಲ್ಲಿ ರಸಭಾವ ತುಂಬುವಲ್ಲಿ ಹಿಮ್ಮೇಳದ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಯಕ್ಷಗಾನ ರಂಗಭೂಮಿಯಲ್ಲಿ ಮದ್ದಳೆ ವಾದ್ಯಕ್ಕೆ ಗೌರವ, ಸಂಯಮ ಮತ್ತು ಅರ್ಥ ಪೂರ್ಣತೆ ಯನ್ನು ನೀಡಿದ ಹಿರಿಯ ಕಲಾವಿದರಲ್ಲಿ ಪ್ರಭಾಕರ ಭಂಡಾರಿಯವರು ಅಪರೂಪದ ಸ್ಥಾನ ಪಡೆದವರು.
-
ನುಡಿನಮನ
ನಾರಾಯಣ ಯಾಜಿ
ಯಕ್ಷಗಾನ ರಂಗಭೂಮಿಯಲ್ಲಿ ಪ್ರಭಾಕರ ಭಂಡಾರಿಯವರು ಕೇವಲ ಒಬ್ಬ ಮದ್ದಳೆ ನುಡಿಸುವ ಕಲಾವಿದರಾಗಿ ಅಲ್ಲ, ನಾಟ್ಯಶಾಸದ ಮೌಲ್ಯಗಳನ್ನು ಬದುಕಿನಲ್ಲಿ ಹಾಗೂ ವಾದನದಲ್ಲಿ ಅನುಷ್ಠಾನಗೊಳಿಸಿದ ಅಪರೂಪದ ಕಲಾವಿದರಾಗಿ ಕಾಣಿಸಿ ಕೊಂಡವರು. ಅವರ ಮದ್ದಳೆ ನಾದವು ಎಂದಿಗೂ ಆಡಂಬರದ ಘೋಷವಾಗಿರಲಿಲ್ಲ. ಅದು ನರ್ತಕನ ಅಂಗಾಭಿನಯ, ಮುಖಾಭಿನಯ ಮತ್ತು ಪಾದಚಲನಗಳಿಗೆ ಸೂಕ್ಷ್ಮ ವಾಗಿ ಸ್ಪಂದಿಸುವ ಸಂವೇದನಾಶೀಲ ಶಕ್ತಿಯಾಗಿತ್ತು. ಹಾಗಾಗಿ ಅವರ ನಿಧನವು ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಕೆರೆಮನೆ ಯಕ್ಷಗಾನದ ಮೇಳದ ಹಿಮ್ಮೇಳದ ನೆಬ್ಬೂರು ನಾರಾಯಣ ಭಾಗವತರ ಭಾಗ ವತಿಕೆ, ಸತ್ಯನಾರಾಯಣ ಭಂಡಾರಿಯವರ ಚಂಡೆಯ ನಡುವೆ ಮದ್ದಳೆಯ ನಾದವನ್ನು ಸಮ್ಮಿಳಿತಗೊಳಿಸಿ ಮುಮ್ಮೇಳದ ಕಲಾವಿದರಲ್ಲಿ ಸ್ಪೂರ್ತಿ ತುಂಬಿದವರು ಪ್ರಭಾಕರ ಭಂಡಾರಿಯವರು.
ಯಕ್ಷಗಾನದಲ್ಲಿ ರಸಭಾವ ತುಂಬುವಲ್ಲಿ ಹಿಮ್ಮೇಳದ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಯಕ್ಷಗಾನ ರಂಗಭೂಮಿಯಲ್ಲಿ ಮದ್ದಳೆ ವಾದ್ಯಕ್ಕೆ ಗೌರವ, ಸಂಯಮ ಮತ್ತು ಅರ್ಥ ಪೂರ್ಣತೆಯನ್ನು ನೀಡಿದ ಹಿರಿಯ ಕಲಾವಿದರಲ್ಲಿ ಪ್ರಭಾಕರ ಭಂಡಾರಿಯವರು ಅಪರೂಪದ ಸ್ಥಾನ ಪಡೆದವರು.
ಅವರ ನಿಧನವು ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ. ಮದ್ದಳೆ ಎಂಬ ವಾದ್ಯವನ್ನು ಕೇವಲ ತಾಳದ ಸಾಧನವಾಗಿ ಅಲ್ಲ, ರಂಗದ ಜೀವನಾಡಿಯಾಗಿ ರೂಪಿಸಿದ ಕಲಾವಿದನಾಗಿ ಅವರು ಸದಾ ನೆನಪಾಗುತ್ತಾರೆ.
ನಾಟ್ಯಶಾಸ್ತ್ರವು ಭಾರತೀಯ ರಂಗಕಲೆಯ ತತ್ವಶಾಸ್ತ್ರೀಯ ಆಧಾರ. ‘ನಾಟ್ಯಸ್ಯ ಆತ್ಮಾ ರಸಃ’ ಎಂಬ ಘೋಷಣೆಯ ಮೂಲಕ ಅದು ಕಲೆಯ ಪರಮ ಗುರಿ ರಸೋತ್ಪತ್ತಿಯೇ ಎಂದು ನಿರ್ಧರಿಸುತ್ತದೆ. ಈ ರಸೋತ್ಪತ್ತಿಗೆ ನಾಟ್ಯ, ಗಾನ ಮತ್ತು ವಾದ್ಯಗಳು ಪರಸ್ಪರ ಅನುಗತವಾಗಿ ಕಾರ್ಯನಿರ್ವಹಿಸಬೇಕೆಂಬುದು ನಾಟ್ಯಶಾಸ್ತ್ರದ ಮೂಲ ತತ್ವ. ಈ ದೃಷ್ಟಿಯಿಂದ ನೋಡಿ ದಾಗ ಯಕ್ಷಗಾನ ರಂಗಭೂಮಿಯಲ್ಲಿ ಪ್ರಭಾಕರ ಭಂಡಾರಿಯವರು ಕೇವಲ ಒಬ್ಬ ಮದ್ದಳೆ ನುಡಿಸುವ ಕಲಾವಿದರಾಗಿ ಅಲ್ಲ, ನಾಟ್ಯಶಾಸ್ತ್ರದ ಮೌಲ್ಯಗಳನ್ನು ಬದುಕಿನಲ್ಲಿ ಹಾಗೂ ವಾದನದಲ್ಲಿ ಅನುಷ್ಠಾನಗೊಳಿಸಿದ ಅಪರೂಪದ ಕಲಾವಿದರಾಗಿ ಕಾಣಿಸುತ್ತಾರೆ.
ಇದನ್ನೂ ಓದಿ: Narayana Yaaji Column: ಶ್ರಾವ್ಯಕಾವ್ಯದ ಅರ್ಥವಂತಿಕೆ ಉಳಿಯಬೇಕಾದ ಕ್ಷಣವಿದು...
ಅವರ ಮದ್ದಳೆ ನಾದವು ಎಂದಿಗೂ ಆಡಂಬರದ ಘೋಷವಾಗಿರಲಿಲ್ಲ. ಅದು ನರ್ತಕನ ಅಂಗಾಭಿನಯ, ಮುಖಾಭಿನಯ ಮತ್ತು ಪಾದಚಲನಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಸಂವೇದನಾಶೀಲ ಶಕ್ತಿಯಾಗಿತ್ತು. ಭಾಗವತರ ಗಾನದ ಅರ್ಥವನ್ನೂ, ಚಂಡೆಯ ಘನ ಧ್ವನಿಯ ಉತ್ಸಾಹವನ್ನೂ ಸಮತೋಲನಗೊಳಿಸಿ, ರಂಗದ ಅಭಿವ್ಯಕ್ತಿಗೆ ಅಗತ್ಯವಾದ ಲಯವನ್ನು ಅವರು ಸೃಷ್ಟಿಸುತ್ತಿದ್ದರು.
ವೀರರಸದಲ್ಲಿ ಅವರ ಮದ್ದಳೆ ಗಂಭೀರ ಸ್ಥೈರ್ಯವನ್ನು ನೀಡುತ್ತಿತ್ತು, ಕರುಣರಸದಲ್ಲಿ ಅದೇ ವಾದ್ಯ ಮೃದು, ಸಂಯತ ಸ್ವರದಲ್ಲಿ ಹೃದಯಸ್ಪರ್ಶಿಯಾಗುತ್ತಿತ್ತು. ರೌದ್ರ ಅಥವಾ ಭಯಾನಕ ಸಂದರ್ಭಗಳಲ್ಲಿಯೂ ಅವರ ವಾದನ ಅತಿರೇಕಕ್ಕೆ ಹೋಗದೆ ರಸದ ಗಾಢತೆ ಯನ್ನು ಮಾತ್ರ ಹೆಚ್ಚಿಸುತ್ತಿತ್ತು.
ಇದು ತಂತ್ರಪ್ರದರ್ಶನದಿಂದ ಅಲ್ಲ, ರಂಗದ ಆಂತರಿಕ ಅರಿವಿನಿಂದ ಸಾಧ್ಯವಾದ ಗುಣ. ತಮ್ಮ ವೈಯಕ್ತಿಕ ಪ್ರತಿಭೆಯನ್ನು ಮುನ್ನೆಲೆಗೆ ತರುವ ಬದಲು, ಸಮಗ್ರ ಪ್ರದರ್ಶನದ ಶ್ರೇಯಸ್ಸಿಗೆ ತಮ್ಮನ್ನು ಅರ್ಪಿಸುವ ಮನೋಭಾವವೇ ಅವರ ವಾದನದ ಹಿರಿಮೆಯಾಗಿದೆ.
ಕೆರಮನೆ ಶಂಭುಹೆಗಡೆಯರ ಕರುಣ ರಸದ ಕುಣಿತ ತುಂಬಾ ಪ್ರಸಿದ್ಧ. ಕರ್ಣನಾಗಿ ಯುದ್ಧ ಭೂಮಿಯಲ್ಲಿ ರಥ ಹೂತು ಹೋದಾಗ ‘ಶಿವ ಶಿವಾ ಸಮರ ದೊಳು...’ ಪದ್ಯಕ್ಕೆ ಅರ್ಧ ಚಂದ್ರಾಕಾರದ ರಂಗವನ್ನು ಆವರಿಕೊಳ್ಳುವ ಅಭಿನಯಕ್ಕೆ ಜೀವ ತುಂಬುವಂತೆ ಭಂಡಾರಿಯವರು ನುಡಿಸುತ್ತಿದ್ದರು.
ಮೃದುವಾದ ವಿಲಂಬಿತ ಲಯದಲ್ಲಿ ಹೊರಳುವ ಬೆರಳಿನಿಂದ ಹೊರಡುವ ನಾದವು ಟೆಂಟಿನ ಮೂಲೆಯಲ್ಲಿ ಕುಳಿತ ಪ್ರೇಕ್ಷಕರಲ್ಲಿಯೂ ಕರ್ಣನ ಅಸಾಯಕತೆಗೆ ಮರುಗುವಂತೆ ಮಾಡುತ್ತಿತ್ತು. ಯಕ್ಷಗಾನವೆಂದರೆ ಅಬ್ಬರ ಎನ್ನುವ ರೂಢಿಯನ್ನು ಮೀರಿ, ಮೃದುವಾದ ಭಾವವನ್ನು ರಸಿಕರೆದೆಯಲ್ಲಿ ಸೃಷ್ಟಿಸುವ ಹಿಮ್ಮೇಳ ಕೆರಮನೆ ಮೇಳದಲ್ಲಿ ಕಾಣಬಹುದಿತ್ತು.
ಭಾಗವತರ ತಾಳದ ಪೆಟ್ಟು, ಚೆಂಡೆಯ ಕೇಳಿಯ ನಡುವೆಯೂ ಕಲಾವಿನ ಗಜ್ಜೆಯ ನಾದ ಸ್ಪಷ್ಟವಾಗಿ ಕೇಳುವಂತೆ ಮದ್ದಳೆಯನ್ನು ಪ್ರಭಾಕರ ಭಂಡಾರಿಯವರು ನುಡಿಸುತ್ತಿದ್ದರು. ವಿಷಮಪಟ್ಟು ಭಾರಿಸಿ ಯಾವ ಕಸರತ್ತು ಮಾಡುವ ಸ್ವಭಾವದವರಲ್ಲ.
ಯಕ್ಷಗಾನದಲ್ಲಿ ಹಿಮ್ಮೇಳದ ಪಾತ್ರವನ್ನು ಸಾಮಾನ್ಯವಾಗಿ ತಾಳ ಮತ್ತು ಶಬ್ದದ ನಿರ್ವಹಣೆಗೆ ಸೀಮಿತವಾಗಿ ನೋಡುವ ಪ್ರವೃತ್ತಿಯಿದೆ. ಆದರೆ ಪ್ರಭಾಕರ ಭಂಡಾರಿಯವರು ಈ ಸೀಮಿತ ದೃಷ್ಟಿಯನ್ನು ಮೀರಿಸಿದರು. ಅವರ ಅರಿವಿನಲ್ಲಿ ಮದ್ದಳೆ ಕೇವಲ ಲಯದ ಸಾಧನವಲ್ಲ, ಅದು ರಸದ ಸಂವೇದನಾಶೀಲ ಭಾಷೆ. ಭಾಗವತರ ಪದ್ಯದ ಅರ್ಥ, ಚಂಡೆಯ ಘನಧ್ವನಿಯ ಉತ್ಸಾಹ, ಮುಮ್ಮೇಳದ ಕಲಾವಿದರ ಅಂಗಾಭಿನಯ ಇವೆಲ್ಲಕ್ಕೂ ಸಮತೋಲನ ನೀಡುವ ಜವಾಬ್ದಾರಿಯನ್ನು ಅವರು ಅತ್ಯಂತ ಶಿಸ್ತಿನಿಂದ ನಿರ್ವಹಿಸು ತ್ತಿದ್ದರು.
ಇದು ನಾಟ್ಯಶಾಸ್ತ್ರದಲ್ಲಿ ಹೇಳುವ ‘ಅನುಗತತ್ವ’ದ ಜೀವಂತ ಉದಾಹರಣೆ. ಪ್ರಭಾಕರ ಭಂಡಾರಿಯವರು ಮದ್ದಳೆಗಾರನ ಸ್ಥಾನವನ್ನು ‘ಹಿಮ್ಮೇಳದ ಕಲಾವಿದ’ ಎಂಬ ಸೀಮಿತ ಅರ್ಥದಿಂದ ಮೇಲೆತ್ತಿದರು. ಅವರು ತೋರಿಸಿದ್ದು ಮದ್ದಳೆಗಾರನು ರಂಗದ ಕೇಂದ್ರದಲ್ಲಿ ಕಾಣಿಸದಿದ್ದರೂ, ರಂಗದ ಅರ್ಥವನ್ನು ಕಟ್ಟಿಕೊಡುವ ಶಕ್ತಿ ಹೊಂದಿರುತ್ತಾನೆ ಎಂಬ ಸತ್ಯ.
ಆಡಂಬರವಿಲ್ಲದೆ, ಆದರೆ ಅನಿವಾರ್ಯವಾಗಿ ರಂಗದಲ್ಲಿ ತಮ್ಮ ಉಪಸ್ಥಿತಿಯನ್ನು ಅನುಭವಿಸಿಸುವುದೇ ಅವರ ಸಾಧನೆ. ಇದುವೇ ನಾಟ್ಯಶಾಸ್ತ್ರ ಹೇಳುವ ಶ್ರೇಷ್ಠ ಕಲಾವಿದನ ಲಕ್ಷಣ. ಶಾಸ್ತ್ರೀಯ ನೃತ್ಯಗಳಾದ ಭರತನೃತ್ಯ, ಕಥಕ್ ಮೊದಲಾದ ಕಲಾಪ್ರಕಾರಗಳಲ್ಲಿ ಹಿಮ್ಮೇಳದ ಕಲಾವಿದರು ನರ್ತಕರನ್ನು ಉದ್ದೇಪಿಸಿ ರಸಸೃಷ್ಟಿಗೆ ಕಾರಣವಾಗಿತ್ತಾರೆ. ಈ ಗುಣ ಪ್ರಭಾಕರ ಭಂಡಾರಿಯವರಲ್ಲಿತ್ತು.
ಶಾಸ್ತ್ರೀಯ ನೃತರೂಪಗಳಲ್ಲಿ ಹಿಮ್ಮೇಳದ ಕಲಾವಿದರು ನರ್ತಕರ ಉಸಿರಿನಂತೆ ಕೆಲಸ ಮಾಡುತ್ತಾರೆ. ಇದೇ ಗುಣ ಯಕ್ಷಗಾನದಲ್ಲಿ ಅಪರೂಪವಾಗಿದ್ದರೂ ಪ್ರಭಾಕರ ಭಂಡಾರಿ ಯವರಲ್ಲಿ ಅದು ಸ್ಪಷ್ಟವಾಗಿ ಕಂಡುಬರುತ್ತಿತ್ತು. ನರ್ತಕನ ಪಾದಚಲನೆಯ ಸಣ್ಣ ಬದಲಾವಣೆಗೂ, ಮುಖಾಭಿನಯದ ಸೂಕ್ಷ್ಮತೆಗೂ ಅವರ ಮದ್ದಳೆ ಸ್ಪಂದಿಸುತ್ತಿತ್ತು, ಇದು ನಾಟ್ಯಶಾಸ್ತ್ರದ ಸಾತ್ತಿ ಕ ತತ್ವದ ಅನುಸಂಧಾನವೇ ಆಗಿದೆ.
ಇಂದು ಪ್ರಭಾಕರ ಭಂಡಾರಿಯವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ವ್ಯಕ್ತಿತ್ವ ಮತ್ತು ವಾದನ ಶೈಲಿ ಯಕ್ಷಗಾನ ಪರಂಪರೆಯಲ್ಲಿ ಜೀವಂತವಾಗಿದೆ. ಮದ್ದಳೆಗಾರ ನು ಹಿಮ್ಮೇಳದ ಅಡಕಸ್ಥಾನದಲ್ಲಿದ್ದರೂ ರಂಗದ ಅರ್ಥವನ್ನು ಕಟ್ಟಿಕೊಡುವ ಶಕ್ತಿ ಹೊಂದಿರುತ್ತಾನೆ ಎಂಬ ಸತ್ಯವನ್ನು ಅವರು ತಮ್ಮ ಜೀವನದ ಮೂಲಕ ತೋರಿಸಿದರು.
ನಾಟ್ಯಶಾಸ್ತ್ರ ಹೇಳುವ ಹಿತವಾದ ನುಡಿತಕ್ಕೆ ಅವರ ವಾದನವೇ ಸಾಕ್ಷಿ. ಆದ್ದರಿಂದ ಪ್ರಭಾಕರ ಭಂಡಾರಿಯವರನ್ನು ನೆನಪಿಸಿಕೊಳ್ಳುವುದು ಕೇವಲ ಒಬ್ಬ ಕಲಾವಿದನ ಸ್ಮರಣೆ ಅಲ್ಲ, ಅದು ನಾಟ್ಯಶಾಸದ ಮೌಲ್ಯಗಳನ್ನು ಯಕ್ಷಗಾನ ರಂಗದಲ್ಲಿ ಜೀವಂತಗೊಳಿಸಿದ ವ್ಯಕ್ತಿತ್ವಕ್ಕೆ ಸಲ್ಲಿಸುವ ಗೌರವವಾಗಿದೆ.