ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ನಿರ್ಬಂಧಗಳಿಗೆ ಅಂಜದೆ ಸದೃಢವಾಗಲಿ ಭಾರತ !

ಅಮೆರಿಕದ ನಿರ್ಬಂಧಗಳ ಭೀತಿ, ಹಲವಾರು ದೇಶಗಳು ಮಾಡುತ್ತಿರುವ ಹಡಗಿನ ಲೈವ್ ಟ್ರ್ಯಾಕಿಂಗ್ ಮತ್ತು ಸಮುದ್ರದಲ್ಲಿ 247 ಸಕ್ರಿಯವಾಗಿರುವ ಆಯಾ ದೇಶಗಳ ಛಾಯಾ ನೌಕಾಪಡೆ ಮುಂತಾದ ಸಂಕೀರ್ಣ ವ್ಯವಸ್ಥೆ ಮತ್ತು ಪರಿಶೀಲನೆಗಳು ರಷ್ಯಾದ ಕಚ್ಚಾತೈಲ ವಹಿವಾಟಿಗೆ ಕಠಿಣ ಸವಾಲು ಒಡ್ಡುತ್ತಿವೆ.

Ravi Sajangadde Column: ನಿರ್ಬಂಧಗಳಿಗೆ ಅಂಜದೆ ಸದೃಢವಾಗಲಿ ಭಾರತ !

-

Ashok Nayak
Ashok Nayak Nov 12, 2025 8:36 AM

ವಿಶ್ವಗುರು

ರವೀ ಸಜಂಗದ್ದೆ

ಭಾರತದ ತೈಲ ಕಂಪನಿಗಳು ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಸಂಪೂರ್ಣ ನಿಲ್ಲಿಸಲಾರವು ಎಂಬ ಗ್ರಹಿಕೆಯೂ ಕೆಲವರಲ್ಲಿದೆ. ಏಕೆಂದರೆ, ಅಮೆರಿಕ ವು ನಿರ್ಬಂಧವನ್ನು ಹೇರಿರುವುದು ರಾಸ್‌ನೆಫ್ಟ್‌ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ಮಾತ್ರ; ರಷ್ಯಾದ ಉಳಿದ ಕಂಪನಿಗಳಿಂದ ಕಚ್ಚಾತೈಲದ ಆಮದಿಗೆ ನಿರ್ಬಂಧ ಗಳಿಲ್ಲ. ಇದು ಭಾರತದ ತೈಲ ಸುರಕ್ಷತೆಗೆ ಮತ್ತು ಆರ್ಥಿಕತೆಗೆ ಅನುಕೂಲಕರ ವಾಗಲಿದೆ.

ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ರಾಷ್ಟ್ರಗಳನ್ನು ನಿಯಂತ್ರಿಸಲು ಅವನ್ನು ಬೆದರಿಸುವ ಅಥವಾ ಅವುಗಳ ಮೇಲೆ ಆರ್ಥಿಕ ನಿರ್ಬಂಧ ಹೇರುವ ಅದೇ ಚಾಳಿಯನ್ನು ಅಮೆರಿಕ ಮುಂದುವರಿಸುತ್ತಿದೆ. ಒಂದು ದೇಶವು ಯಾವೆಲ್ಲ ಸಂಪನ್ಮೂಲ/ಉತ್ಪನ್ನಗಳಿಂದ ಸಮೃದ್ಧ ವಾಗಿದ್ದು ವಿದೇಶಗಳಿಗೆ, ಅದರಲ್ಲೂ ಅಮೆರಿಕಕ್ಕೆ ಅವನ್ನು ರಫ್ತು ಮಾಡುತ್ತದೆಯೋ, ಅಂಥ ಉತ್ಪನ್ನಗಳ ಮೇಲೆ ಸುಂಕಾಸ ಪ್ರಯೋಗಿಸುವುದು ಮತ್ತು ಅಮೆರಿಕದ ಶತ್ರುರಾಷ್ಟ್ರ ಗಳಿಗೆ ಅವನ್ನು ರಫ್ತು ಮಾಡುತ್ತಿದ್ದರೆ ಅವುಗಳ ಮೇಲೆ ನಿರ್ಬಂಧ ವಿಧಿಸಿ ಇಕ್ಕಳದೊಳಗೆ ಸಿಲುಕಿಸುವುದು ಅಮೆರಿಕದ ನೀತಿ.

ಸದ್ಯದ ಸ್ಥಿತಿಯಲ್ಲಿ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವನ್ನು ಮತ್ತು ತನ್ನ ಯತ್ನದ ನಡುವೆಯೂ ಮಾತು ಕೇಳದೆ ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ವನ್ನು, ಒಂದಷ್ಟು ಹದ್ದುಬಸ್ತಿಗೆ ತರುವ ಉದ್ದೇಶ ಅಮೆರಿಕದ್ದು. ಇದರನ್ವಯ, ಅಮೆರಿಕವು ರಷ್ಯಾದ ಎರಡು ತೈಲ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದೆ.

ಅಲ್ಲಿಗೆ ಜಾಗತಿಕ ತೈಲದ ವಿಚಾರದಲ್ಲಿನ ಚದುರಂಗದಾಟವು ಹೊಸ ರೂಪವನ್ನು ತಳೆಯುತ್ತಿದೆ. ತೈಲ ವ್ಯವಹಾರ, ರಫ್ತು ಮುಂತಾದವುಗಳ ಕುರಿತಾದ ನಡೆ- ನಿರ್ಣಯ-ನಿರ್ದೇಶನಗಳು ‘ಒಪೆಕ್ ಒಕ್ಕೂಟ’ ಅಥವಾ ಮಾಸ್ಕೋ ನಗರದಿಂದ ಬರುವುದು ವಾಡಿಕೆ; ಆದರೆ ಈ ಬಾರಿ ಅವು ಒಂದಿಷ್ಟು ಅನಿರೀಕ್ಷಿತತೆಯೊಂದಿಗೆ ವಾಷಿಂಗ್ಟನ್‌ನಿಂದ ಬಿತ್ತರ ಗೊಳ್ಳುತ್ತಿವೆ!

ಇದನ್ನೂ ಓದಿ: Ravi Sajangadde Column: ಹೆಣ್ಮಕ್ಳು ಗೆದ್ದರೋ ಗೆದ್ದರೋ ಕಪ್‌ ಗೆದ್ದರೋ...!

ಭಾರತ-ಚೀನಾ-ರಷ್ಯಾ ದೇಶಗಳು ಒಟ್ಟಾಗಿ, ಆ ಸ್ನೇಹದಿಂದ ವ್ಯಾಪಾರ ವರ್ಧಿಸಿ, ತನಗೆ ದೊಡ್ಡ ‘ಟಕ್ಕರ್’ ಅಪ್ಪಳಿಸುವ ಸೂಚನೆ ಸಿಕ್ಕಿದ್ದೇ ತಡ, ಅಮೆರಿಕವು ರಷ್ಯಾದ ರಾಸ್‌ನೆ- ಮತ್ತು ಲುಕಾಯಿಲ್ ಹೆಸರಿನ ಎರಡು ಬೃಹತ್ ತೈಲ ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ಹೇರಿದೆ.

ಇದರಿಂದಾಗಿ, ಕಳೆದ ಒಂದೆರಡು ವರ್ಷಗಳಿಂದ ಈ ಕಂಪನಿಗಳಿಂದ ಸ್ಪರ್ಧಾತ್ಮಕ ಬೆಲೆಗೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲವನ್ನು ಖರೀದಿಸುತ್ತಿದ್ದ ಭಾರತ ಮತ್ತು ಚೀನಾದ ಮೇಲೆ ಪ್ರತಿಕೂಲ ಪರಿಣಾಮವಾಗುವುದರ ಜತೆಗೆ, ರಷ್ಯಾದ ತೈಲ ರಫ್ತು ವ್ಯವಹಾರಕ್ಕೂ ಪೆಟ್ಟು ಬೀಳಲಿದೆ. ಖರೀದಿದಾರರಿಲ್ಲದೆ ರಷ್ಯಾದ ತೈಲ ರಫ್ತು ಉದ್ಯಮವು ಈಗಾಗಲೇ ಅಲುಗಾಡು ತ್ತಿದೆ!

ಅಮೆರಿಕದ ನಿರ್ಬಂಧ ಭೀತಿಯ ಮೊದಲ ಹೊಡೆತವಾಗಿ, ಇತ್ತೀಚೆಗೆ ರಷ್ಯಾದಿಂದ ಸುಮಾರು 7,30,000 ಬ್ಯಾರೆಲ್ ಕಚ್ಚಾತೈಲದೊಂದಿಗೆ ಗುಜರಾತ್‌ನ ಸಿಕ್ಕಾ ಬಂದರಿಗೆ ತಲುಪಬೇಕಿದ್ದ ನೌಕೆಯು, ಡೆನ್ಮಾರ್ಕ್-ಜರ್ಮನಿ ನಡುವಿನ ಬಾಲ್ಟಿಕ್ ಸಮುದ್ರದ ಫೆಹ್ಮರ್ನ್ ಪ್ರದೇಶ ತಲುಪುತ್ತಿದ್ದಂತೆ ದಿಕ್ಕು ಬದಲಿಸಿ, ಈಜಿಪ್ಟ್ ದೇಶದ ಸೆಡ್ ಬಂದರಿನೆಡೆಗೆ ತಿರುಗು ವಂತಾಯಿತು!

Screenshot_10 ಋ

ಅಮೆರಿಕದ ನಿರ್ಬಂಧಗಳ ಭೀತಿ, ಹಲವಾರು ದೇಶಗಳು ಮಾಡುತ್ತಿರುವ ಹಡಗಿನ ಲೈವ್ ಟ್ರ್ಯಾಕಿಂಗ್ ಮತ್ತು ಸಮುದ್ರದಲ್ಲಿ 247 ಸಕ್ರಿಯವಾಗಿರುವ ಆಯಾ ದೇಶಗಳ ಛಾಯಾ ನೌಕಾಪಡೆ ಮುಂತಾದ ಸಂಕೀರ್ಣ ವ್ಯವಸ್ಥೆ ಮತ್ತು ಪರಿಶೀಲನೆಗಳು ರಷ್ಯಾದ ಕಚ್ಚಾತೈಲ ವಹಿವಾಟಿಗೆ ಕಠಿಣ ಸವಾಲು ಒಡ್ಡುತ್ತಿವೆ. ನಿರ್ಬಂಧಗಳು ಜಾರಿಯಾದ ದಿನಗಳಲ್ಲಿ ಇದು ಇನ್ನಷ್ಟು ತೊಡಕಾಗಿ, ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವುದು ಭಾರತಕ್ಕೆ ಸವಾಲಿನ ವಿಷಯವಾಗಲಿದೆ.

ಸದ್ಯದ ಮಾಹಿತಿಗಳ ಪ್ರಕಾರ, ನವೆಂಬರ್ ಕೊನೆಯ ವಾರದಿಂದ ಭಾರತದ ತೈಲ ಕಂಪನಿ ಗಳು ರಷ್ಯಾದ ಆ ಎರಡು ಕಂಪನಿಗಳಿಂದ ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲಿವೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಿಲಯನ್ಸ್ ಕಂಪನಿ ಮತ್ತು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಕೂಡ, ಅಲ್ಲಿಂದ ಖರೀದಿ ನಿಲ್ಲಿಸಲಿರುವ ಮಾಹಿತಿಯಿದೆ.

ಜತೆಗೆ, ಎಂಆರ್‌ಪಿಎಲ್ ಮತ್ತು ಎಚ್‌ಪಿಸಿಎಲ್-ಮಿತ್ತಲ್ ಕಂಪನಿಗಳು ರಷ್ಯಾದೊಂದಿಗಿನ ಮುಂದಿನ ದಿನಗಳ ಆಮದು ವಹಿವಾಟನ್ನು ಅಮಾನತಿನಲ್ಲಿಟ್ಟಿವೆ. ಇದರಿಂದಾಗಿ ನವೆಂ ಬರ್-ಡಿಸೆಂಬರ್‌ನಲ್ಲಿ ರಷ್ಯಾದಿಂದ ಭಾರತಕ್ಕೆ ಬರುವ ಕಚ್ಚಾತೈಲದ ಪ್ರಮಾಣ ಗಣನೀಯ ವಾಗಿ ತಗ್ಗಲಿದೆ. 2026ರಲ್ಲಿ, ಈಗಿನ ಪರಿಸ್ಥಿತಿ ನೋಡಿಕೊಂಡು ಇತರೆ ತೈಲ ಮಧ್ಯವರ್ತಿಗಳು ಮತ್ತು ಪರ್ಯಾಯ ತೈಲ ವ್ಯಾಪಾರ ವಿಧಾನಗಳ ಮೂಲಕ ರಷ್ಯಾದಿಂದ ಮತ್ತೆ ಕಚ್ಚಾ ತೈಲವು ಆಮದಾಗುವ ನಿರೀಕ್ಷೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ನಮ್ಮ ಮೇಲೆ ಒತ್ತಡ ಹೇರು ತ್ತಲೇ ಬಂದಿದೆ. ಈ ಖರೀದಿಯು, ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾಕ್ಕೆ ನೇರ ಹಣಕಾ ಸಿನ ನೆರವು ನೀಡುತ್ತದೆ ಎಂಬುದು ಅಮೆರಿಕದ ವಾದ. ಹೀಗಿದ್ದೂ ಭಾರತ ತನ್ನ ತೈಲ ನೀತಿ ಯಲ್ಲಿ ಬದಲಾವಣೆ ಮಾಡಿಕೊಳ್ಳಲು ಇದುವರೆಗೂ ಒಪ್ಪಿಲ್ಲ.

ಭಾರತದ ಒಟ್ಟು ಕಚ್ಚಾತೈಲದ ಆಮದಿನಲ್ಲಿ ಶೇ.40ರಷ್ಟು ಪಾಲನ್ನು ರಷ್ಯಾ ಹೊಂದಿತ್ತು. ಲಭ್ಯ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್ 27ಕ್ಕೆ ಕೊನೆಗೊಂಡ ವಾರದಲ್ಲಿ, ರಷ್ಯಾದಿಂದ ಭಾರತಕ್ಕೆ ಬರುತ್ತಿದ್ದ ತೈಲದ ಪ್ರಮಾಣವು ದಿನಕ್ಕೆ ಸರಾಸರಿ 1.19 ಮಿಲಿಯನ್ ಬ್ಯಾರೆಲ್‌ ನಷ್ಟಿತ್ತು. ಅದಕ್ಕೂ ಮೊದಲಿನ ವಾರಗಳಲ್ಲಿ ಈ ಪ್ರಮಾಣ 1.95 ಮಿಲಿಯನ್ ಬ್ಯಾರೆಲ್‌ ನಷ್ಟಿತ್ತು. ಈ ಇಳಿಕೆಯು ಅಮೆರಿಕದ ನಿರ್ಬಂಧದ ನೇರ ಪರಿಣಾಮ.

ರಷ್ಯಾದಿಂದ ಬರುವ ಕಡಿಮೆ ದರದ ತೈಲವನ್ನು ನಿಲ್ಲಿಸಿದರೆ, ಭಾರತದ ಇಂಧನದ ಬಜೆಟ್‌ ನ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈಗ ಹೊಸ ತೈಲ ಆಮದು ಮತ್ತು ಸಂಗ್ರಹಣಾ ತಂತ್ರವನ್ನು ರೂಪಿಸುತ್ತಿದೆ.

ರಷ್ಯಾದ ತೈಲ ಸರಬರಾಜು ಕಡಿಮೆಯಾದಾಗ, ದೇಶದ ಇಂಧನ ಮಾರುಕಟ್ಟೆಯು ಒಂದಷ್ಟು ಸಣ್ಣಪುಟ್ಟ ತೊಂದರೆಗಳನ್ನು ಎದುರಿಸಬಹುದು. ಹಾಗಾಗಿ ಈಗ ಎಲ್ಲರ ಗಮನವೂ ಕೇಂದ್ರ ಸರಕಾರದ ನಿರ್ಧಾರಗಳತ್ತ ಇದೆ.

ಭಾರತವು ತನ್ನ ಕಚ್ಚಾತೈಲ ಆಮದು ನೀತಿಯಲ್ಲಿ ಬದಲಾವಣೆ ಮಾಡಿ, ಹೊಸ ಮಾರ್ಗೋ ಪಾಯಗಳನ್ನು ಹುಡುಕಲಿದೆಯೇ ಎನ್ನುವುದು ಸದ್ಯದ ಕುತೂಹಲ. ಭಾರತವು ಅಮೆರಿಕ ಮತ್ತು ಅರಬ್ ದೇಶಗಳಿಂದ ಮತ್ತಷ್ಟು ಕಚ್ಚಾತೈಲದ ಆಮದನ್ನು ಮುಂದುವರಿಸುವ ಸಾಧ್ಯತೆ ಹೆಚ್ಚು.

ಈ ಮಧ್ಯೆ, ಭಾರತದ ತೈಲ ಕಂಪನಿಗಳು ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಸಂಪೂರ್ಣ ನಿಲ್ಲಿಸಲಾರವು ಎಂಬ ಗ್ರಹಿಕೆಯೂ ಕೆಲವರಲ್ಲಿದೆ. ಏಕೆಂದರೆ, ಅಮೆರಿಕವು ನಿರ್ಬಂಧವನ್ನು ಹೇರಿರುವುದು ರಾಸ್‌ನೆಫ್ಟ್ ಮತ್ತು ಲುಕಾಯಿಲ್ ಕಂಪನಿಗಳ ಮೇಲೆ ಮಾತ್ರ; ರಷ್ಯಾದ ಉಳಿದ ಕಂಪನಿಗಳಿಂದ ಕಚ್ಚಾತೈಲದ ಆಮದಿಗೆ ಯಾವುದೇ ನಿರ್ಬಂಧ ಗಳಿಲ್ಲ. ‌

ಇದು ಭಾರತದ ತೈಲ ಸುರಕ್ಷತೆಗೆ ಮತ್ತು ಆರ್ಥಿಕತೆಗೆ ಅನುಕೂಲಕರವಾಗಲಿದೆ ಎಂಬುದು ಈ ಗ್ರಹಿಕೆಯ ಸಾರ. ಹಿಂದಿನ ಕೆಲ ವರ್ಷಗಳಿಗೆ ಹೋಲಿಸಿದರೆ, ಅಮೆರಿಕದಿಂದ ಭಾರತವು ಖರೀದಿಸುತ್ತಿರುವ ತೈಲದ ಪ್ರಮಾಣವು ಕಳೆದ ಕೆಲವು ತಿಂಗಳಲ್ಲಿ ೨ ಪಟ್ಟು ಹೆಚ್ಚಾಗಿದೆ ಎಂದರೆ ನಂಬಲೇಬೇಕು!

2022ಕ್ಕೆ ಹೋಲಿಸಿದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಕಚ್ಚಾತೈಲದ ಬೆಲೆ ಕಡಿಮೆಯಾಗಿದ್ದು, ಅಲ್ಲಿಂದ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಳ್ಳುವ ಮೂಲಕ ಭಾರತವು ಎರಡು ಪ್ರಮುಖ ಗುರಿಗಳನ್ನು ಸಾಧಿಸಲು ಹೊರಟಂತಿದೆ.

ಮೊದಲನೆಯದು, ಭಾರತದ ಒಟ್ಟಾರೆ ತೈಲ ಆಮದಿನಲ್ಲಿ ಅತಿಹೆಚ್ಚು ಇದ್ದ ರಷ್ಯಾದ ಪಾಲನ್ನು ತಗ್ಗಿಸುವುದು ಮತ್ತು ಆಮದು ಮೂಲಗಳನ್ನು ವಿಸ್ತರಿಸುವುದು. ಎರಡನೆಯದು, ಭಾರತದ ರಫ್ತು ವಹಿವಾಟಿನ ಮೇಲೆ ಅತಿರೇಕದ ಸುಂಕವನ್ನು ಹೇರಿರುವ ಡೊನಾಲ್ಡ್ ಟ್ರಂಪ್‌ರನ್ನು ಸಮಾಧಾನಗೊಳಿಸುವುದು.

ಅಮೆರಿಕದಿಂದ ತೈಲದ ಖರೀದಿಯನ್ನು ಭಾರತ ಹೆಚ್ಚಿಸುತ್ತಿದೆಯಾದರೂ, ರಷ್ಯಾದಿಂದ ತರಿಸಿಕೊಳ್ಳುವುದನ್ನು ತೀರಾ ತಗ್ಗಿಸಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಈ ಎಲ್ಲಾ ನೀತಿ ಗಳಿಂದ ಭಾರತದ ತೈಲ ಕಂಪನಿಗಳಿಗೆ ತಮ್ಮ ಕಚ್ಚಾತೈಲ ಮೂಲಗಳನ್ನು ವಿಸ್ತರಿಸಿ ಕೊಳ್ಳುವ ಒಳ್ಳೆಯ ಅವಕಾಶ ಸಿಕ್ಕಂತಾಗಿದೆ.

ಈ ಹಿಂದಿನ ಬಹುತೇಕ ಸಂದರ್ಭಗಳಲ್ಲೂ ಅಮೆರಿಕ, ಚೀನಾ ಅಥವಾ ರಷ್ಯಾ ದೇಶಗಳ ನಿಯಮಗಳು ಮತ್ತು ಮರ್ಜಿಗಳಿಗೆ ಅನುಸಾರವಾಗಿ ಭಾರತವು ತನ್ನ ಆಮದು-ರಫ್ತು ನೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಸಾಗಬೇಕಿತ್ತು; ನಮ್ಮ ಅಭಿಪ್ರಾಯಗಳಿಗೆ ಕಿಮ್ಮತ್ತು ಕಮ್ಮಿಯಿತ್ತು. ಆದರೆ, ಬದಲಾದ ಭೂರಾಜಕೀಯ ಪರಿಸ್ಥಿತಿ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿನ ಪೂರಕ ಹಿಡಿತದಿಂದಾಗಿ ಭಾರತವು ತನ್ನ ಆಮದು-ರಫ್ತು ನೀತಿಯನ್ನು ತಾನೇ ನಿರ್ಣಯಿಸಿ ಕಾರ್ಯರೂಪಕ್ಕೆ ತರುವಷ್ಟು ಪ್ರಬಲ ಶಕ್ತಿಯಾಗಿ ರೂಪು ಗೊಂಡಿದೆ. ಹಾಗಿದ್ದೂ ಈ ಮೂರು ಬಲಿಷ್ಠ ದೇಶಗಳು ವಿಶ್ವವನ್ನು ತಮ್ಮ ಹಿಡಿತದಲ್ಲಿಟ್ಟು ಕೊಳ್ಳಲು ಹೊಂಚು ಹಾಕುತ್ತಲೇ ಇವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೊಮ್ಮೆ ಒಂದಿಷ್ಟು ನೀತಿ-ನಿರ್ಣಯ-ನಿರ್ಬಂಧಗಳು ನಮ್ಮ ಹಿತಾಸಕ್ತಿಗೆ ಪೂರಕವಾಗಿಲ್ಲದಿದ್ದರೂ, ವಿಧಿಯಿಲ್ಲದೆ ಒಪ್ಪಿ ಮುಂದುವರಿಯವುದು ಅನಿವಾರ್ಯವಾಗುತ್ತದೆ. ರಷ್ಯಾದಿಂದ ಕಚ್ಚಾತೈಲವನ್ನು ತರಿಸಿಕೊಳ್ಳುವ ವಿಷಯದಲ್ಲಿ ಭಾರತವು ಸದ್ಯ ಅಂಥ ಸಂದಿಗ್ಧತೆಯನ್ನು ಎದುರಿಸುತ್ತಿದೆ.

ಹಾಗಂತ ‘ಇದು ಸಂಪೂರ್ಣವಾಗಿ ಅಮೆರಿಕದ ಗೆಲುವು, ಭಾರತದ ಸೋಲು’ ಎಂದೇನಲ್ಲ; ಸದ್ಯದ ಪರಿಸ್ಥಿತಿಯಲ್ಲಿ ಒಂದಷ್ಟು ಹಿನ್ನಡೆಯಾಗಿದೆಯಷ್ಟೇ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಭಾರತವು ರಾಜತಾಂತ್ರಿಕವಾಗಿ ನಿಭಾಯಿಸಿ, ದೇಶಕ್ಕೆ ಒಳಿತಾಗಬಲ್ಲ ನಿರ್ಣಯವನ್ನು ಖಂಡಿತ ತೆಗೆದುಕೊಳ್ಳಲಿದೆ ಮತ್ತು ನಿರ್ಬಂಧ ನೀತಿಯು ಅಮೆರಿಕಕ್ಕೆ ಮುಳ್ಳಾಗಲಿದೆ.

ವಿಶ್ವದ ಕೆಲ ‘ಬಲಿಷ್ಠ’ ದೇಶಗಳ ತಂತ್ರ ಮತ್ತು ನೀತಿಗಳನ್ನು ಮೀರಿ ನಿಲ್ಲುವಂಥ ಸದೃಢ ಭಾರತದ ನಿರ್ಮಾಣಕ್ಕೆ ಇಂಥ ಕಠಿಣ ಸನ್ನಿವೇಶಗಳು ಪರೋಕ್ಷವಾಗಿ ಪೋಷಿಸುವಂತಾಗಲಿ!

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)