D G Lakshman Column: ದೀನದಯಾಳ್ʼಜೀ ಅಂದು ನೀಡಿದ ಎಚ್ಚರಿಕೆ ಇಂದೂ ಪ್ರಸ್ತುತ
ಇಂದಿನ ಪೀಳಿಗೆಯವರಿಗೆ ಅವರ ಹೆಸರು ಅಷ್ಟಾಗಿ ತಿಳಿದಿಲ್ಲ. ಅದೇನೂ ಅವರ ತಪ್ಪಲ್ಲ, ಬಿಡಿ. ಆದರೆ ಇದೆಲ್ಲಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ ಸ್ವತಃ ದೀನದಯಾಳಜೀ ಪ್ರಸಿದ್ಧಿ, ಪ್ರಚಾರ, ಕೀರ್ತಿ, ಬಿರುದು ಬಾವಲಿಗಳಿಂದ ಗಾವುದ ದೂರ ಉಳಿದಿದ್ದರು. ತನ್ನ ಹೆಸರು ಪತ್ರಿಕೆಯಲ್ಲಿ ಬರಬೇಕೆಂದೋ, ತನ್ನ ಹೇಳಿಕೆಗಳಿಗೆ ಪ್ರಚಾರ ಸಿಗಬೇಕೆಂದೋ, ತನ್ನನ್ನು ಬೇರೆಯವರು ಗೌರವಿಸಿ ಸನ್ಮಾನಿಸಬೇಕೆಂದೋ ಅವರು ಕನಸು ಮನಸ್ಸಿನಲ್ಲೂ ಆಲೋಚಿಸಿದವರಲ್ಲ. ಅಸಲಿಗೆ ಅದು ಅವರ ಸ್ವಭಾವವೇ ಆಗಿರಲಿಲ್ಲ.
-
ಮಹಾನೇತಾರ
ದು.ಗು.ಲಕ್ಷ್ಮಣ
ಪಂಡಿತ ದೀನದಯಾಳ ಉಪಾಧ್ಯಾಯರು ನಮ್ಮ ದೇಶ ಕಂಡ ಒಬ್ಬ ಅಪೂರ್ವ ಮುತ್ಸದ್ಧಿ, ಮುನ್ನೋಟದ ರಾಜಕಾರಣಿ. ಅವರ ಚಿಂತನೆಗಳು, ನುಡಿದ ಎಚ್ಚರಿಕೆಯ ಮಾತುಗಳು ಸದಾ ಕಾಲಕ್ಕೂ ಪ್ರಸ್ತುತ. ತೆರೆ ಮರೆಯ ಉಳಿದ ಅನುಪಮ ಚಿಂತಕ ದೀನದಯಾಳ್ ಉಪಾಧ್ಯಾಯರ ಜನ್ಮದಿನವಾದ ಇಂದು (ಸೆ.25) ಆ ಮಹಾನ್ ಚೇತನವನ್ನು ಸ್ಮರಿಸೋಣ.
ಜನ ಸಂಘ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕುರಿತು ಮಾತುಕತೆ, ಚರ್ಚೆ ನಡೆದಾಗಲೆಲ್ಲ ಅಲ್ಲಿ ಹೆಚ್ಚಾಗಿ ಪದೇ ಪದೆ ಸುಳಿಯುವ ಹೆಸರುಗಳೆಂದರೆ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿಯವರದೇ. ಜನಸಂಘದ ಸ್ಥಾಪಕ ಡಾ.ಶ್ಯಾಮ್ ಪ್ರಸಾದ ಮುಖರ್ಜಿ ಅವರ ಹೆಸರು ಒಮ್ಮೊಮ್ಮೆ ಕೇಳಿಬರುವುದುಂಟು. ಆದರೆ ಪಂಡಿತ್ ದೀನ ದಯಾಳ್ ಉಪಾಧ್ಯಾಯರು ಸುಳಿಯು ವುದೇ ವಿರಳ. ಅದಕ್ಕೆ ಕಾರಣವೂ ಇದೆ. ಹಿಂದಿನ ಪೀಳಿಗೆಯವರಿಗೆ ದೀನದಯಾಳರ ಹೆಸರು ತಿಳಿದಿತ್ತು.
ಇಂದಿನ ಪೀಳಿಗೆಯವರಿಗೆ ಅವರ ಹೆಸರು ಅಷ್ಟಾಗಿ ತಿಳಿದಿಲ್ಲ. ಅದೇನೂ ಅವರ ತಪ್ಪಲ್ಲ, ಬಿಡಿ. ಆದರೆ ಇದೆಲ್ಲಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ ಸ್ವತಃ ದೀನದಯಾಳಜೀ ಪ್ರಸಿದ್ಧಿ, ಪ್ರಚಾರ, ಕೀರ್ತಿ, ಬಿರುದು ಬಾವಲಿಗಳಿಂದ ಗಾವುದ ದೂರ ಉಳಿದಿದ್ದರು. ತನ್ನ ಹೆಸರು ಪತ್ರಿಕೆಯಲ್ಲಿ ಬರಬೇಕೆಂದೋ, ತನ್ನ ಹೇಳಿಕೆಗಳಿಗೆ ಪ್ರಚಾರ ಸಿಗಬೇಕೆಂದೋ, ತನ್ನನ್ನು ಬೇರೆಯವರು ಗೌರವಿಸಿ ಸನ್ಮಾನಿಸಬೇಕೆಂದೋ ಅವರು ಕನಸು ಮನಸ್ಸಿನಲ್ಲೂ ಆಲೋಚಿಸಿದವರಲ್ಲ. ಅಸಲಿಗೆ ಅದು ಅವರ ಸ್ವಭಾವವೇ ಆಗಿರಲಿಲ್ಲ.
ಇದನ್ನೂ ಓದಿ: Du Gu Laxmana Column: ತುರ್ತು ಪರಿಸ್ಥಿತಿಯಲ್ಲಿ ಹೇಗಿತ್ತು ಪತ್ರಿಕಾ ಪ್ರಪಂಚ ?
ಹೀಗಾಗಿ ಭಾರತದ ರಾಜಕಾರಣದಲ್ಲಿ ದೀನದಯಾಳ ಉಪಾಧ್ಯಾಯರೆಂಬ ಅನುಪಮ ಚಿಂತಕ ತೆರೆ ಮರೆಯ ಉಳಿದರು. ಜನಸಂಘದ ಹೊಸ ಅವತಾರವಾದ ಬಿಜೆಪಿಯ ಭಿತ್ತಿ ಪತ್ರ, ಬ್ಯಾನರ್, ಫ್ಲೆಕ್ಸ್ʼಗಳಲ್ಲೂ ಅವರು ಕಾಣೆಯಾದರು. ಆದರೆ ಅವರ ಚಿಂತನೆ, ವೈಚಾರಿಕತೆ ಮಾತ್ರ ಈಗಲೂ ಪ್ರಸ್ತುತವಾಗಿಯೇ ಇದೆ. ರಾಜಕೀಯ ಎಂಬ ಬಚ್ಚಲು ಮನೆಯಲ್ಲಿ ಕಾಲುಜಾರಿ ಹೇಗೆ ಬೀಳಬಾರ ದೆಂಬ ಅವರ ಎಚ್ಚರಿಕೆ ಮಾತುಗಳು ಸದಾ ಕಾಲ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿ ಉಳಿದಿವೆ.
ಅದು ವೈಚಾರಿಕರನ್ನು ಸೆಳೆಯುತ್ತಲೇ ಇದೆ. ಜಾಗತೀಕರಣ ಮತ್ತು ಉದಾರೀಕರಣದ ಪ್ರಬಲ ಸುನಾಮಿಗೆ ಅಪ್ಪಳಿಸಿ ಹೋಗದೆ ಭಾರತವು ವಿಶ್ವದಲ್ಲಿ ಇದೀಗ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ದೇಶದ ಸಂಸ್ಕೃತಿ ಮತ್ತು ಸಾಮಾಜಿಕ ರಚನೆಯಲ್ಲಿ ಅಂತರ್ಗತವಾಗಿರುವ ಏಕಾತ್ಮ ಮಾನವತಾವಾದ ಒಂದು ಕಾರಣವಾದರೆ, ಕೇಂದ್ರ ಸರ್ಕಾರದ ದಕ್ಷ ಆಡಳಿತ, ದೂರದೃಷ್ಟಿ ಇನ್ನೊಂದು ಕಾರಣವೆಂದು ಖ್ಯಾತ ಅಂಕಣಕಾರ ಹಾಗೂ ಆರ್ಥಿಕ ತಜ್ಞ ಎಸ್.ಗುರುಮೂರ್ತಿ ಹಿಂದೊಮ್ಮೆ ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದರು.
ಆರ್ಥಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಕೌಟುಂಬಿಕ ವ್ಯವಸ್ಥೆಯಲ್ಲಿ ಸಾಮರಸ್ಯ, ಸಮನ್ವಯ ಭಾವ ಇರಬೇಕು. ಇದೇ ಏಕಾತ್ಮ ಮಾನವತಾವಾದದ ತಿರುಳು ಎಂದು ಪ್ರತಿಪಾದಿಸಿದವರು ಪಂಡಿತ್ ದೀನದಯಾಳಜೀ. ವ್ಯಕ್ತಿವಾದದ ಬೆನ್ನ ಹಿಂದೆ ಬಿದ್ದು ಅತಿ ದೊಡ್ಡ ಸಾಲಗಾರ ದೇಶವಾಗಿರುವ ಅಮೆರಿಕ ಈಗ ಜಾಗತಿಕ ಮಟ್ಟದಲ್ಲಿ ಸಾಲ ಎತ್ತುವ ಮೂಲಕ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ. ಅದರ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ.
ಅಮೆರಿಕ ಮುಖ್ಯವಾಗಿ ಕೌಟುಂಬಿಕ ವ್ಯವಸ್ಥೆಯಿಂದ ವಿಮುಖಗೊಂಡು ವ್ಯಕ್ತಿವಾದದ ಕಡೆಗೆ ವಾಲಿತು. ವ್ಯಕ್ತಿವಾದವು ಭೋಗ ಲೋಲುಪತೆ ಕಡೆ ದಾರಿ ಮಾಡಿಕೊಡುತ್ತದೆ. ಕರೋನಾ ಸಂದರ್ಭ ದಲ್ಲಿ ಅಮೆರಿಕ ತತ್ತರಿಸಿ ಹೋಗಿದ್ದರೆ, ಭಾರತವು ಹಾಗಾಗದೆ ಕರೋನಾ ಮಾರಿಯ ವಿರುದ್ಧ ಲಸಿಕೆ ತಯಾರಿಸಿ ತನ್ನ ದೇಶದ ಪ್ರಜೆಗಳಿಗೆ ಉಚಿತವಾಗಿ ಹಂಚಿದ್ದಲ್ಲದೆ, ಹಲವಾರು ಬಡದೇಶಗಳಿಗೂ ವಿತರಿಸಿದ್ದು ಇದಕ್ಕೊಂದು ನಿದರ್ಶನವಾಗಬಹುದು.
ಪಂ.ದೀನದಯಾಳಜೀ ಪ್ರತಿಪಾದಿಸಿದ ಅರ್ಥಶಾಸ್ತ್ರವು ಅಮೆರಿಕದ ಅರ್ಥಶಾಸ್ತ್ರಕ್ಕಿಂತ ಸಂಪೂರ್ಣ ಭಿನ್ನವಾದುದು. ಸ್ವದೇಶಿ ಮತ್ತು ಸ್ವಾವಲಂಬನೆಗಳು ನಮ್ಮ ಅರ್ಥ ನೀತಿಯ ಅಡಿಗಲ್ಲಾಗಬೇಕು.
ನಮ್ಮಲ್ಲಿರುವ ವಿಪುಲ ಜನಶಕ್ತಿಯನ್ನು, ನಮ್ಮ ಸುತ್ತಲೂ ಇರುವ ಸಾಧನ ಸಲಕರಣೆಗಳನ್ನು ಬಳಸಿಕೊಂಡು ನಮ್ಮ ದೇಶದ ಪರಿಸ್ಥಿತಿಗೆ ಅನುಗುಣವಾಗಿ ತಂತ್ರಜ್ಞಾನವನ್ನು ರೂಪಿಸಬೇಕು. ಸಂಪನ್ಮೂಲಗಳು, ತಂತ್ರಜ್ಞರ ಆಧಾರದಿಂದ ಔದ್ಯೋಗೀಕರಣದ ಸಾಧನೆ, ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಶಾಂತಿ ಒದಗಿಸುವುದಕ್ಕಾಗಿ ಆದಾಯಗಳಲ್ಲಿನ ವಿಷಮತೆಗಳನ್ನು ಕಡಿಮೆ ಮಾಡುವುದು, ತೆರಿಗೆ ವಸೂಲಿಯಲ್ಲಿ ಹಣದ ಸೋರಿಕೆಯನ್ನು ತಡೆದು ಕರಭಾರ ಹೆಚ್ಚಿಸದೆ ಆದಾಯದ ವೃದ್ಧಿ... ಇದು ದೀನ ದಯಾಳಜಿ ಅವರ ಆರ್ಥಿಕ ಚಿಂತನೆ.
ಅಮೆರಿಕ ಅಥವಾ ಇನ್ನಾವುದೋ ಹೊರದೇಶದ ಆರ್ಥಿಕ ನೀತಿ ನಮ್ಮ ದೇಶದ್ದಾಗಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಅನುಗುಣವಾದ ಆರ್ಥಿಕ ನೀತಿ ಇರಬೇಕು ಎಂಬುದು ಅವರ ಖಚಿತ ನಿಲುವಾಗಿತ್ತು. ನಮ್ಮ ಆರ್ಥಿಕ ವಿಚಾರಗಳಿಗೆ ಭಾರತೀಯ ದೃಷ್ಟಿಕೋನ ನೀಡಿ ಅರ್ಥಶಾಸ್ತ್ರಕ್ಕೆ ಹೊಸ ಅರ್ಥವನ್ನೇ ಬರೆದ ಮಹಾನುಭಾವ ಅವರು. ಅತ್ಯಂತ ಬಡತನದ ಕುಟುಂಬದಲ್ಲಿ ಜನಿಸಿದ ದೀನದಯಾಳಜೀ ಆರ್ಥಿಕ ಸಂಕಷ್ಟಗಳ ಸಾಗರವನ್ನು ದಾಟಿ ಮೇಲೆದ್ದು ಬಂದವರು.
ಪರೀಕ್ಷೆಯಲ್ಲಿ ಅವರದು ಯಾವಾಗಲೂ ಪ್ರಥಮ ಸ್ಥಾನ. ಆದರೆ ತನ್ನ ಜೊತೆಗೆ ಪರೀಕ್ಷೆಗೆ ಕುಳಿತ ಗೆಳೆಯರು ಅನುತ್ತೀರ್ಣರಾದಾಗ ಅವರ ಶಿಕ್ಷಣ ಮಟ್ಟವನ್ನು ಎತ್ತರಿಸಲು ‘ಜೀರೋ ಅಸೋಸಿ ಯೇಷನ್’ (ಸೊನ್ನೆ ಸಂಘ) ಸ್ಥಾಪಿಸಿ ಕಡಿಮೆ ಅಂಕ ಪಡೆದವರಿಗೆ ಊರುಗೋಲಾದರು. ತನ್ನೊಂದಿಗೆ ಬೇರೆಯವರು ಉತ್ತಮ ಅಂಕ ಪಡೆದು ಉತ್ತಮ ಉದ್ಯೋಗ ಹಿಡಿಯಬೇಕೆಂಬ ತುಡಿತ ಅವರಲ್ಲಿತ್ತು. ಇಂತಹ ಉದಾರ ಚಿಂತನೆ ಎಷ್ಟು ಮಂದಿ ಮುಖಂಡರ ಬದುಕಿನಲ್ಲಿರಲು ಸಾಧ್ಯ? ತಾನು ಮುಖಂಡನಾಗಿ ಮೆರೆಯಬೇಕಾದರೆ ತನ್ನ ಕೈ ಕೆಳಗಿರುವ ಯಾವ ಕಾರ್ಯಕರ್ತರೂ ಬೆಳೆಯ ಕೂಡದು, ಅವರನ್ನು ಬೆಳೆಯದಂತೆ ತುಳಿದಿಡಬೇಕೆಂದು ಯೋಚಿಸುವವರೇ ಇಂದು ಹೆಚ್ಚಾಗಿರು ವಾಗ ದೀನದಯಾಳಜೀಯವರ ಇಂತಹ ವಿಶಿಷ್ಟ ಚಿಂತನೆ ಅಚ್ಚರಿ ಮೂಡಿಸುತ್ತದೆ.
ದೀನದಯಾಳಜೀ ಅವರು ಒಬ್ಬ ದ್ರಷ್ಟಾರ ಎಂದು ಇಡೀ ನಾಡು ಕೊಂಡಾಡುವುದು ಅವರ ಇಂತಹ ಅಪೂರ್ವ ಗುಣಕ್ಕಾಗಿ. ದೀನದಯಾಳಜೀ ಪತ್ರಕರ್ತರಾಗಿದ್ದರು. ಹಲವು ಗ್ರಂಥಗಳನ್ನು ರಚಿಸಿದರು. ಕುಶಲ ಸಂಘಟಕರಾಗಿದ್ದರು. ಕಾರ್ಯಕರ್ತರ ಬೆಳವಣಿಗೆಯ ಬಗ್ಗೆ ಸದಾ ಎಚ್ಚರ ವಹಿಸುತ್ತಿದ್ದರು. ಅಧ್ಯಯನ, ಬರವಣಿಗೆ, ಚಿಂತನೆ, ಪ್ರವಾಸ ಎಲ್ಲದರಲ್ಲೂ ಪ್ರಬುದ್ಧತೆ ಮೆರೆದ ವಿರಳ ರಾಜಕಾರಣಿ.
ಬೆಳಗಿನಿಂದ ರಾತ್ರಿವರೆಗೆ ಒಂದೇ ಸಮನೆ ಕುಳಿತು ‘ಯವನ ವಿಜೇತ ಚಂದ್ರಗುಪ್ತ’ ಎಂಬ ಸ್ಪೂರ್ತಿ ದಾಯಕ ಕೃತಿಯನ್ನು ಒಂದೇ ದಿನದಲ್ಲಿ ಬರೆದು ಮುಗಿಸಿದ್ದರು. ಶಂಕರಾಚಾರ್ಯರಿಗೆ ಇದ್ದ ಸಮಗ್ರ ರಾಷ್ಟ್ರೀಯ ದೃಷ್ಟಿ, ಪಂಚವಾರ್ಷಿಕ ಯೋಜನೆ ಕುರಿತು ಗ್ರಂಥ, ಡಾಕ್ಟರ್ ಹೆಡಗೇವಾರರ ಜೀವನ ಕುರಿತ ಮರಾಠಿ ಕೃತಿಯ ಹಿಂದಿ ಅನುವಾದ, ನಮ್ಮ ಕಾಶ್ಮೀರ, ಪೊಲಿಟಿಕಲ್ ಡೈರಿ... ಹೀಗೆ ಹಲವು ಅಮೂಲ್ಯ ಕೃತಿಗಳು ಅವರ ಲೇಖನಿಯಿಂದ ಹೊರಹೊಮ್ಮಿದವು.
‘ಏಕಾತ್ಮ ಮಾನವತಾವಾದ’ (Integral Humanism) ಕೃತಿಯು ವಿಶ್ವ ರಾಜಕೀಯ ರಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ. ಸಂಘದ ಸೂಚನೆಯಂತೆ ರಾಜಕೀಯ ರಂಗಕ್ಕೆ ಪ್ರವೇಶಿಸಿದ ಅವರು ರಾಜಕೀಯ ರಂಗದ ಕೆಸರನ್ನು ಎಂದೂ ಅಂಟಿಸಿಕೊಳ್ಳಲಿಲ್ಲ. ತಮ್ಮ ಜೊತೆಗಿದ್ದವರಿಗೂ ಆ ಕೆಸರು ಅಂಟದಂತೆ ಸದಾ ಎಚ್ಚರವಹಿಸಿದ್ದರು. ತಮ್ಮ ‘ಪೊಲಿಟಿಕಲ್ ಡೈರಿ’ ಕೃತಿಯಲ್ಲಿ ಅವರು ಎಲ್ಲ ರಾಜಕೀಯ ಪಕ್ಷಗಳಿಗೂ ಹಾಗೂ ರಾಜಕೀಯ ನಾಯಕರಿಗೂ ನೀಡಿದ್ದ ಎಚ್ಚರಿಕೆಯ ಮಾತುಗಳು ಅತ್ಯಂತ ಮಾರ್ಮಿಕ ಮತ್ತು ಈಗಲೂ ಪ್ರಸ್ತುತ.
If there is devotion and discipline, there will not be any groups and factions in the party. When party interests are subordinated to self- interest, factionalism begins. It is a social manifestation of an egoistic and perverse mind. A faction- ridden party becomes ineffective and losses all capacity for doing good (ಪಕ್ಷದ ಧ್ಯೇಯದಲ್ಲಿ ಶ್ರದ್ಧೆ ಮತ್ತು ಅನುಶಾಸನ ಇದ್ದಲ್ಲಿ ಗುಂಪುಗಾರಿಕೆ ಇರುವುದಿಲ್ಲ. ಆದರೆ ಯಾವಾಗ ವೈಯಕ್ತಿಕ ಹಿತಕ್ಕೆ ಪಕ್ಷದ ಹಿತವನ್ನು ಬಲಿಕೊಡಲಾಗುವುದೋ ಆಗ ಗುಂಪುಗಾರಿಕೆ ಪ್ರಾರಂಭವಾಗುತ್ತದೆ. ಹೀಗಾಗುವುದು ವೈಯಕ್ತಿಕ ಅಹಂಕಾರ ಮತ್ತು ವಿಕೃತ ಬುದ್ಧಿಯ ಪುರಾವೆಯಾಗಿರುತ್ತದೆ.
ಗುಂಪುಗಾರಿಕೆಗಳಿಂದ ಪೀಡಿತವಾದ ಪಕ್ಷ ಯಾವುದೇ ಒಳ್ಳೆಯದನ್ನು ಸಾಧಿಸಲು ಅಸಮರ್ಥ ವಾಗುತ್ತದೆ). ವರ್ತಮಾನದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ದೀನದಯಾಳಜೀ ಅಂದೇ ನುಡಿದ ಭವಿಷ್ಯ ಎಷ್ಟು ನಿಜವಾಗಿದೆ ಎಂದು ಪ್ರಜ್ಞಾವಂತರಿಗೆ ಅನಿಸುವುದು ಸಹಜ.
ಇಂತಹ ದ್ರಷ್ಟಾರರು ದೀನದಯಾಳಜೀ ಆಗಿದ್ದರೆಂದೇ ಅವರು ತೀರಿಕೊಂಡಾಗ (11 ಫೆಬ್ರವರಿ 1968)ವಾಜಪೇಯಿ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ್ದರು: ಸೂರ್ಯ ಮುಳುಗಿ ಹೋದನು. ಈಗ ನಾವು ನಕ್ಷತ್ರಗಳ ಬೆಳಕಿನಲ್ಲಿ ನಮ್ಮ ಮಾರ್ಗ ಹುಡುಕಿಕೊಳ್ಳಬೇಕಾಗಿದೆ. ದೀನದಯಾಳರು ದೇಶ ಕಂಡ ಒಬ್ಬ ಅಪೂರ್ವ ರಾಜಕಾರಣಿ. ಅವರ ಚಿಂತನೆಗಳು, ನುಡಿದ ಎಚ್ಚರಿಕೆಯ ಮಾತುಗಳು ಸದಾಕಾಲ ಕ್ಕೂ ಪ್ರಸ್ತುತ.
ಬಿಜೆಪಿಯ ಈಗಿನ ನಾಯಕರು, ಕಾರ್ಯಕರ್ತರು ಅವರಿಂದ ಕಲಿಯಬೇಕಾದದ್ದು ಬೆಟ್ಟದಷ್ಟು. ದೀನದಯಾಳ್ ಉಪಾಧ್ಯಾಯರ ಜನ್ಮದಿನವಾದ ಇಂದು (ಸೆ.25) ಒಂದು ಕ್ಷಣದ ಮಟ್ಟಿಗಾದರೂ ಆ ಮಹಾನ್ ಚೇತನವನ್ನು ಸ್ಮರಿಸೋಣ. ಅವರಂತಹ ಧೀಮಂತರು ಮತ್ತೆ ಹುಟ್ಟಿ ಬರಲೆಂದು ಆಶಿಸೋಣ.