ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghav Sharma Nidle Column: ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

ಪ್ರಕರಣಕ್ಕೆ ಸಂಬಂಧಿಸಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಜೂನ್ 18-19ರಂದು ಉತ್ತರಾಖಂಡದ ಹರಿದ್ವಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ನ ಉನ್ನತ ಮುಖಂಡರು ಮಹತ್ವದ ಸಭೆ ನಡೆಸಿ, ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ತೀರ್ಮಾನ ಮಾಡಿದ್ದರು

ರಾಮಭಕ್ತರ ಹೃದಯ ಕಲಕಿದ ಹುಂಡಿ ಕಳವು

-

ಜನಪಥ

ಕೋಟ್ಯಂತರ ಹಿಂದೂ ಶ್ರದ್ಧಾಳುಗಳ ಭಕ್ತಿಕೇಂದ್ರ ಅಯೋಧ್ಯೆಯ ರಾಮಮಂದಿರ ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಹುಂಡಿ ಹಣ ಕಳವು ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಾ ಸಾರ್ಹತೆಗೆ ಹಾನಿ ಮಾಡಿರುವ ಜತೆಗೆ ಟ್ರಸ್ಟ್ ರಚನೆ ಮಾಡಿದ ಕೇಂದ್ರ ಸರಕಾರವನ್ನೂ ಮುಜುಗರ ಕ್ಕೀಡು ಮಾಡಿದೆ.

ರಾಮನ ಹೆಸರಲ್ಲಿ ರಾಜಕೀಯ ಮಾಡಿ ಚುನಾವಣಾ ಲಾಭ ಪಡೆದುಕೊಂಡವರು ಈಗ ಅದೇ ಶ್ರೀರಾಮನ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪ ಬಲಗೊಳ್ಳುತ್ತಿದೆ. ಕಳವಿಗೆ ಸಂಬಂಧಿಸಿ ಸಾರ್ವಜನಿಕರ ಸಂಶಯಗಳಿಗೆ ಉತ್ತರ ನೀಡಬೇಕಾಗಿರುವವರು ಕೇಂದ್ರ ಸರಕಾರ, ರಾಮಮಂದಿರ ಟ್ರಸ್ಟ್, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ತೇ ವಿನಃ ವಿಪಕ್ಷಗಳೇನಲ್ಲ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸನಿಹದಲ್ಲಿರುವುದರಿಂದ ಸಮಾಜವಾದಿ ಪಾರ್ಟಿ ಸೇರಿ ಹಲವರಿಗೆ ಹೊಸ ಅಸ್ತ್ರವೊಂದು ಸಿಕ್ಕಿದೆ. ‌

ಪ್ರಕರಣಕ್ಕೆ ಸಂಬಂಧಿಸಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಜೂನ್ 18-19ರಂದು ಉತ್ತರಾಖಂಡದ ಹರಿದ್ವಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್‌ನ ಉನ್ನತ ಮುಖಂಡರು ಮಹತ್ವದ ಸಭೆ ನಡೆಸಿ, ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ರಾಜೀನಾಮೆ ನೀಡಬೇಕು ಎಂಬ ತೀರ್ಮಾನ ಮಾಡಿದ್ದರು. ಸಭೆಯಲ್ಲಿ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರೂ ಚಂಪತ್ ರಾಯ್ ಮತ್ತು ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ ನಾಗರಕಟ್ಟೆ ಅವರಿಂದ ಪ್ರಕರಣದ ಬಗ್ಗೆ ವಿಸ್ತೃತ ಮಾಹಿತಿ ಪಡೆದುಕೊಂಡಿದ್ದರು.

ಪ್ರಕರಣದಲ್ಲಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಪಾತ್ರವಿದೆಯೇ ಇಲ್ಲವೇ ಎಂಬ ಬಗ್ಗೆ ಸದ್ಯಕ್ಕೆ ಖಚಿತತೆ ಇಲ್ಲ. ಆದರೆ, ಮುಜುಗರದ ತೀವ್ರತೆ ಕಡಿಮೆ ಮಾಡಲು ಹಾಗೂ ಆರ್‌ಎಸ್‌ಎಸ್- ವಿಶ್ವ ಹಿಂದೂ ಪರಿಷತ್ ಮೇಲೆ ನೇರ ಆಪಾದನೆ ಬರಬಾರದು ಎಂದು ಇಬ್ಬರ ರಾಜೀನಾಮೆ ಪಡೆದು ಕೊಳ್ಳಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಇದನ್ನೂ ಓದಿ: Raghava Sharma Nidle Column: ವಿಜಯೇಂದ್ರರೊಬ್ಬರನ್ನೇ ಹೊಣೆ ಮಾಡುವುದೇಕೆ ?

ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ರಾಮ್‌ಶಂಕರ್ ಯಾದವ್ ಅಲಿಯಾಸ್ ಟಿನ್ನು ಚಂಪತ್ ರಾಯ್ ಆಪ್ತ ಮತ್ತು ಅವರ ಕಾರು ಚಾಲಕನಾಗಿದ್ದ. ಮತ್ತೋರ್ವ ಆರೋಪಿ ಮನೀಶ್ ಯಾದವ್ ಎಂಬಾತ ರಾಮ್‌ಶಂಕರ್ ಯಾದವ್‌ನ ಸೋದರಳಿಯ. ಮತ್ತಿಬ್ಬರು ಆರೋಪಿಗಳಾದ ಅನುಕಲ್ಪ ಮಿಶ್ರಾ ಮತ್ತು ಲವಕುಶ್ ಮಿಶ್ರಾ ಇಬ್ಬರೂ ಡಾ.ಅನಿಲ್ ಮಿಶ್ರಾ ಅವರ ಆಪ್ತ ಸಂಬಂಧಿಕರು.

ಆರೋಪಿ ಸ್ಥಾನದಲ್ಲಿರುವ ಯುವಕರು ತಪ್ಪು ಮಾಡುತ್ತಿದ್ದಾರೆ ಎನ್ನುವುದು ಚಂಪತ್ ರಾಯ್ ಮತ್ತು ಡಾ.ಅನಿಲ್ ಮಿಶ್ರಾರ ಗಮನಕ್ಕೆ ಬಂದಿರಲಿಲ್ಲವೇ ಅಥವಾ ಗೊತ್ತಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲವೇ ಎಂಬೆಲ್ಲಾ ಪ್ರಶ್ನೆಗಳು ಭಕ್ತರನ್ನು ಕಾಡುತ್ತಿವೆ. ಹಣ ಕಳವಿನಲ್ಲಿ ಈ ಇಬ್ಬರು ಹಿರಿಯರ ಪಾತ್ರ ಖಂಡಿತ ಇಲ್ಲ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಹೌದು, ಅವರದ್ದು ಕ್ಲೀನ್ ಇಮೇಜ್ ವ್ಯಕ್ತಿತ್ವ ಎಂದೇ ಭಾವಿಸೋಣ. ಆದರೆ, ರಾಮ ಮಂದಿರದಂತಹ ಬೃಹತ್ ಧಾರ್ಮಿಕ ಸಂಸ್ಥೆಯೊಂದರ ಆಡಳಿತ ನಿರ್ವಹಿಸುವ ಗುರುತರ ಜವಾಬ್ದಾರಿಯಿದ್ದಾಗ ಕ್ಲೀನ್ ಇಲ್ಲದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ದಿಟ್ಟತನ ಪ್ರದರ್ಶಿಸಬಹುದಿತ್ತಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಂತಹ ಪ್ರಶ್ನೆಗಳ ಪಟ್ಟಿ ಮತ್ತಷ್ಟು ಉದ್ದವಾಗುವುದು ಬೇಡ ಎಂಬ ಕಾರಣಕ್ಕಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಪಡೆಯಲಾಗಿದೆ.

ಈ ಘಟನಾವಳಿಗಳ ಬಗ್ಗೆ ಮಾತನಾಡಲು ಆರ್‌ಎಸ್‌ಎಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡ ಹಿರಿಯ ವ್ಯಕ್ತಿಯೊಬ್ಬರಿಗೆ ಫೋನಾಯಿಸಿದೆ. ಅವರು ಕರೆ ಸ್ವೀಕರಿಸುತ್ತಲೇ ಜೈ ಶ್ರೀರಾಮ್ ರಾಘವ್ ಜೀ ಎಂದರು. ನೀವು ಜೈ ಶ್ರೀರಾಮ್ ಎನ್ನುತ್ತಿದ್ದೀರಿ, ಅಲ್ಲಿ ಅಯೋಧ್ಯೆಯಲ್ಲಿ ರಾಮನಿಗೆ ಅವಮಾನ ವಾಗುವಂತಹ ಕೃತ್ಯ ನಡೆಯಿತಲ್ಲ ಸರ್ ಎಂದು ಕೇಳಿದೆ. ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದರು. 2024ರ ಶ್ರೀರಾಮ ಪ್ರಾಣಪ್ರತಿಷ್ಠೆ ವೇಳೆ ಅಯೋಧ್ಯೆಯಲ್ಲಿ ಹಲವು ದಿನಗಳ ಕಾಲ ಸೇವೆ ಮಾಡಿದ್ದ ಮತ್ತೋರ್ವ ವ್ಯಕ್ತಿಯೊಬ್ಬರಿಗೆ ಫೋನಾಯಿಸಿದೆ. ಮಂದಿರಕ್ಕೆ ಕೋಟಿಗಟ್ಟಲೆ ಹಣ, ದಾನ-ಧರ್ಮ, ದೇಣಿಗೆ, ನೆರವಿನ ಮುಖಾಂತರ ಹರಿದು ಬಂದಾಗ ಪಾರದರ್ಶಕ ವ್ಯವಸ್ಥೆ ಜಾರಿ ಮಾಡಬೇಕಿತ್ತು. ಈ ವಿಚಾರಗಳು ಟ್ರಸ್ಟ್ ಸಭೆಗಳಲ್ಲಿ ಚರ್ಚೆಯಾಗುತ್ತಿತ್ತೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ಆಪ್ತರ ಮೇಲೆ ನಂಬಿಕೆ ಇಟ್ಟು ಸೂಕ್ಷ ಸ್ಥಳಗಳಿಗೆ ಅವರನ್ನು ಕೆಲಸಕ್ಕಾಗಿ ನಿಯೋಜಿಸಿದ್ದು ಮುಳುವಾಯ್ತು. ಸಮರ್ಥ ಆಡಳಿತಾಧಿಕಾರಿ, ಅಕೌಂಟೆಂಟ್, ಲೆಕ್ಕಾಧಿಕಾರಿಗಳು ಹಾಗೂ ತಂತ್ರಜ್ಞರನ್ನು ನೇಮಿಸುತ್ತಿದ್ದರೆ ಬಹುಶಃ ಹೀಗಾಗುತ್ತಿರಲಿಲ್ಲವೇನೋ ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ram Temple

ರಾಮ ಜನ್ಮ ತಳೆದ ಸ್ಥಳದ ಮಂದಿರ ನಿರ್ಮಾಣ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದ ಮತ್ತು ದೇಶದ ಕೋಟ್ಯಂತರ ಭಕ್ತರ ಆಶಯ ನಿಜಗೊಳಿಸಿದ ಹೆಗ್ಗಳಿಕೆ ನಮ್ಮದು ಎಂದು ಆರ್‌ಎಸ್‌ಎಸ್ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಮಾಡಿದ ಸಾಧನೆಯನ್ನು ಹೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಬಿಡಿ. ಆದರೆ, ಹಣ ಕಳವು ಪ್ರಕರಣವೂ ಸಂಘದ ಜತೆಗೆ ಗುರುತಿಸಿಕೊಂಡಿದ್ದವರ ಕಣ್ಗಾವಲಿನ ನಡೆದಿರುವುದರಿಂದ ಯಾವುದೇ ಗುಂಪಿನಲ್ಲಿ ಕಾಣಿಸಿಕೊಳ್ಳದ ತಟಸ್ಥ ರಾಮಭಕ್ತರು ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್‌ನಿಂದ ಸ್ಪಷ್ಟೀಕರಣ ಕೇಳುವುದು ಕೂಡ ಸಹಜವೇ.

ಈ ನಡುವೆ, ಹುಂಡಿ ಹಣ ಕಳವಿನ ಆರೋಪಿಗಳ ಪರ ವಕೀಲಿಕೆ ಮಾಡಿದರೆ ರೂ. 5 ಲಕ್ಷ ದಂಡ ವಿಧಿಸಲಾಗುವುದು ಎಂದು ಅಯೋಧ್ಯೆಯ -ಜಾಬಾದ್ ವಕೀಲರ ಪರಿಷತ್ ಹೇಳಿದೆ. ಉಗ್ರವಾದಿ ಗಳಿಗೂ ನ್ಯಾಯಯುತ ವಾದ ಮಂಡನೆಗೆ ಅವಕಾಶ ನೀಡುವ ವ್ಯವಸ್ಥೆ ನಮ್ಮಲ್ಲಿದೆ. ಅಂಥದ್ದರಲ್ಲಿ ಫೈಜಾಬಾದ್ ವಕೀಲರ ಸಂಘದ ನಿರ್ಧಾರ ಮೂರ್ಖತನದ್ದು. ಒಂದು ವೇಳೆ ಸ್ಥಳೀಯ ವಕೀಲರು ಹಿಂದೆ ಸರಿದರೆ, ಆರೋಪಿಗಳ ಪರ ವಕಾಲತ್ತಿಗೆ ಸರಕಾರವೇ ವಕೀಲರನ್ನು ನೇಮಿಸಬಹುದು.

ಅದಿರಲಿ, ಈ ವಕೀಲರ ಸಂಘದವರು ಚಂಪತ್ ರಾಯ, ಅನಿಲ್ ಮಿಶ್ರಾ ಜತೆಗೆ ಕರ್ನಾಟಕ ಮೂಲದ ಗೋಪಾಲ್ ನಾಗರಕಟ್ಟೆ ಅವರನ್ನೂ ಗುರಿ ಮಾಡುತ್ತಿದ್ದಾರೆ. ಈ ಮೂವರು 3 ದಿನಗಳಲ್ಲಿ ಅಯೋಧ್ಯೆ ಬಿಡದಿದ್ದರೆ ನಗರಕ್ಕೆ ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ಸಿದ್ಧಾಪುರದ ಹೊಸ್ತೋಟದವರು. ಅವರ ಮೂಲ ಹೆಸರು ಗೋಪಾಲ ಮಹಾಬಲೇಶ್ವರ ಭಟ್. ಗೋಪಾಲ ನಾಗರಕಟ್ಟೆ ಎಂದು ಗುರುತಿಸಿಕೊಂಡಿದ್ದರೂ, ಸ್ಥಳೀಯ ಮತ್ತು ಕೆಲ ರಾಷ್ಟ್ರೀಯ ಮಾಧ್ಯಮಗಳು ಅವರ ಹೆಸರನ್ನು ಗೋಪಾಲ್ ರಾವ್ ಎಂದು ಪ್ರಕಟಿಸುತ್ತಿವೆ.

ಗೋಪಾಲ್ ಅವರು 2020ರಿಂದ ಅಯೋಧ್ಯೆಯಲ್ಲಿದ್ದಾರೆ. ವಿಶ್ವಹಿಂದೂ ಪರಿಷತ್‌ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿದ್ದ ಅವರನ್ನು ರಾಮ ಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಯನ್ನಾಗಿ ಕಳುಹಿಸಿಕೊಡಲಾಗಿತ್ತು. ಹಾಗಂತ, ಅಲ್ಲಿ ಅವರಿಗೆ ಇಂಥದ್ದೇ ಎಂಬ ಅಧಿಕೃತ ಹುದ್ದೆ ನೀಡಲಾಗಿಲ್ಲ ಮತ್ತು ತಿಂಗಳ ವೇತನವೂ ಇಲ್ಲ. ಟ್ರಸ್ಟ್ ಸದಸ್ಯತ್ವವೂ ಇಲ್ಲ. ಟ್ರಸ್ಟ್ ಆಹ್ವಾನವಿದ್ದರೆ ಅವರು ಸಭೆಗಳಲ್ಲಿ ಭಾಗಿಯಾಗುತ್ತಾರೆ. ಅಯೋಧ್ಯೆಯ ಕರಸೇವಕ್ ಪುರಂನ ವಿಶ್ವಹಿಂದೂ ಪರಿಷತ್ ಕಚೇರಿಯ ಸಣ್ಣ ಕೋಣೆಯೊಂದರಲ್ಲಿ ಅವರ ವಾಸ್ತವ್ಯ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ನಾನು ಅವರನ್ನು ಈ ಹಿಂದೆ ಮೂರು ಬಾರಿ ಸಂದರ್ಶನ ಮಾಡಿದ್ದೆ ಮತ್ತು ಪ್ರಭಾವಿ ವ್ಯಕ್ತಿಯಾಗಿ ದ್ದರೂ, ಅವರ ಸರಳತೆ ನೋಡಿ ಅಚ್ಚರಿಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೆ.

2020ರಲ್ಲಿ ಬಂದ ಗೋಪಾಲ್ ನಾಗರಕಟ್ಟೆ ಅವರಿಗೂ ಈಗಿನ ಗೋಪಾಲ್ ನಾಗರಕಟ್ಟೆ ಅವರಿಗೂ ಏನಾದರೂ ವ್ಯತ್ಯಾಸವಿದೆಯೇ ಎಂದು ಅಯೋಧ್ಯೆಯಲ್ಲಿ ಅವರನ್ನು ಬಲ್ಲ ವ್ಯಕ್ತಿಯೊಬ್ಬರಲ್ಲಿ ಕೇಳಿದೆ. ಈಗಲೂ ಅವರದ್ದು ಅದೇ ಸಣ್ಣ ಕೋಣೆಯಲ್ಲಿ ವಾಸ್ತವ್ಯ. ಆಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಸಣ್ಣ ಜೋಳಿಗೆಯೊಂದರ ಜತೆಗೆ ಬಂದ ಅವರು, ಅದೇ ಜೋಳಿಗೆ ಜತೆ ಕರಸೇವಕಪುರಂನ ಕುಟೀರದಲ್ಲಿರುತ್ತಾರೆ. ಆದರೆ, ಸ್ಥಳೀಯ ಕೆಲ ಅತೃಪ್ತ ಆತ್ಮಗಳು ಅವರನ್ನು ಆರೋಪಿಯಂತೆ ಬಿಂಬಿಸುವ ಹುನ್ನಾರ ಮಾಡುತ್ತಿವೆ ಎಂದರು ಅವರು. ನೀವು ಇನ್ನೆಷ್ಟು ದಿನ ಇಲ್ಲಿರುತ್ತೀರಿ ಎಂದು ಈ ಹಿಂದೆ ಕೇಳಿದ್ದಾಗ, ಸಂಘ ನಮಗೆ ತಾಯಿ ಇದ್ದಂತೆ. ತಾಯಿ ಇಲ್ಲಿಂದ ಬೇರೆ ಕಡೆ ಹೋಗು ಎಂದು ಆದೇಶಿಸಿದರೆ, ಎರಡು ಮಾತನಾಡದೆ ನಮ್ಮ ಚೀಲ ಹಿಡಿದುಕೊಂಡು ಹೋಗುವುದಷ್ಟೇ ಕೆಲಸ ಎಂದಿದ್ದರು ಗೋಪಾಲ ನಾಗರಕಟ್ಟೆ. ಸದರಿ ಪ್ರಕರಣದ ಹಿನ್ನೆಲೆಯಲ್ಲಿ ನಾನು ಗೋಪಾಲ್ ನಾಗರಕಟ್ಟೆ ಅವರಿಗೆ ಕರೆ ಮಾಡಿ ಮಾತನಾಡಲು ಯತ್ನಿಸಿದಾಗ, ಸದ್ಯಕ್ಕೆ ನಾನು ಈಗ ಏನೂ ಮಾತನಾಡಲಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕಲಬುರಗಿ ಮೂಲದ ಸೋಮಶಂಕರ್ ಎಂಬ ಯುವಕ ಕೂಡ ನಾಲ್ಕೈದು ವರ್ಷಗಳ ಹಿಂದೆ ಅಯೋಧ್ಯೆಗೆ ಮಂದಿರ ಸೇವೆಗಾಗಿ ಬಂದಿದ್ದರು. ಯಾತ್ರಿ ಸೇವಾ ಕೇಂದ್ರ ಸೇರಿ ವಿವಿಧ ಕೆಲಸಗಳಲ್ಲಿ ಆತನ ನಿಷ್ಠೆ ಹಾಗೂ ಬದ್ಧತೆ ಗುರುತಿಸಿ ಟ್ರಸ್ಟ್‌ನವರು ಸೋಮಶಂಕರ್‌ಗೆ ನಂತರದಲ್ಲಿ ಯಾತ್ರಿಸೇವಾ ಕೇಂದ್ರದ ಇನ್‌ಚಾರ್ಜ್ ಹುದ್ದೆ ನೀಡಿದ್ದಾರೆ. ಇದು ಅಧಿಕೃತ ಹುದ್ದೆ ಮತ್ತು ನಿರ್ದಿಷ್ಟ ವೇತನವೂ ಇದೆ. ಅಯೋಧ್ಯೆಯ ರಾಮಮಂದಿರ ಯಾತ್ರಿ ಸೇವಾಕೇಂದ್ರದ ಬಳಿ ತೆರಳಿದರೆ ಈಗಲೂ ನೀವು ಕನ್ನಡಿಗ ಸೋಮಶಂಕರ್ ಭೇಟಿ ಮಾಡಬಹುದು.

ಅಚ್ಚರಿ ಎಂದರೆ, ಈ ಸೋಮಶಂಕರ್, ಗೋಪಾಲ್ ನಾಗರಕಟ್ಟೆಯವರ ಅಣ್ಣನ ಮಗ ಮತ್ತು ಹತ್ತಾರು ಬಾರಿ ಕರ್ನಾಟಕಕ್ಕೆ ಹೋಗಿ ಬಂದಿದ್ದೇಕೆ ಎಂದು ಪ್ರಶ್ನಿಸಿ ಕೆಲ ಮಾಧ್ಯಮಗಳಲ್ಲಿ ವರದಿ ಯಾಗಿದೆ. ಸೋಮಶಂಕರ್ ನನಗೆ ಪರಿಚಯವಿದ್ದುದರಿಂದ ಆತನಿಗೆ ಫೋನ್ ಮಾಡಿ, ನಿಮ್ಮನ್ನೂ ಆರೋಪಿ ಎಂಬಂತೆ ಬಿಂಬಿಸುತ್ತಿದ್ದಾರ ಏಕೆ ಎಂದು ಕೇಳಿದೆ. ನೋಡಿ ಸರ್, ನಾನು ಊರಿಗೆ ಹೋಗದೆ ವರ್ಷವಾಗ್ತಾ ಬಂತು. ಏನೇನೋ ಸುಳ್ಳು ಆರೋಪ ಮಾಡ್ತಾ ಇದ್ದಾರೆ. ಕಳ್ಳತನ ಮಾಡಿದ್ರೆ, ಎಸ್‌ಐಟಿ ನನ್ನನ್ನೂ ವಿಚಾರಣೆ ಮಾಡ್ಬೇಕಿತ್ತಲ್ವಾ? ಇಲ್ಲಿರೋ ಬಯೋಮೆಟ್ರಿಕ್ ಸಿಸ್ಟಂ ನೋಡಿದರೆ ಗೊತ್ತಾಗುತ್ತದೆ- ನಾನು ಅಯೋಧ್ಯೆಯಲ್ಲಿ ಇರ್ತೀನೋ ಅಥವಾ ಆಗಾಗ ಕರ್ನಾಟಕಕ್ಕೆ ಹೋಗ್ತಾ ಇರ್ತೀನೋ. ಸಿಕ್ಕಿದ್ದೇ ಅವಕಾಶ ಅಂತ ಎಲ್ರೂ ಗಾಳೀಲಿ ಗುಂಡು ಹೊಡಿತೀದಾರೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತೆ ಎಂದು ತಿಳಿಸಿದರು.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪತ್ರಿಕಾಗೋಷ್ಠಿ ಮಾಡಿ, ಮಂದಿರ ದೇಣಿಗೆ ಕಳವು ಕರ್ನಾಟಕಕ್ಕೂ ವಿಸ್ತರಿಸಿದೆ ಎಂದು ಅಯೋಧ್ಯೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದ ಭೂಗತ ಮತ್ತು ನೋಂದಾಯಿಸಲ್ಪಡದ (ಅಂಡರ್‌ಗ್ರೌಂಡ್, ಅನ್‌ ರಿಜಿಸ್ಟರ್ಡ್) ಜನರು ಚುನಾವಣೆಗೆ ಸಂಬಂಧಿಸಿದ ಪಿತೂರಿಗಳಲ್ಲಿ ಭಾಗಿಯಾಗಿದ್ದಾರೆ. ಅವರ ಚಟುವಟಿಕೆಗಳು ಈಗ ಬಹಿರಂಗವಾಗಿವೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಖಿಲೇಶ್ ಯಾರ ಹೆಸರನ್ನೂ ಹೇಳದ ಕಾರಣ ಆ ವ್ಯಕ್ತಿಗಳು ಯಾರೆಂಬುದರ ಬಗ್ಗೆ ಖಚಿತತೆ ಇಲ್ಲ.

ಅದೇನೇ ಇರಲಿ, ರಾಮಮಂದಿರ ಬರೀ ದೇಗುಲವಲ್ಲ. ಅದೊಂದು ಬೃಹತ್ ಧಾರ್ಮಿಕ ಸಂಸ್ಥೆ. ರಾಮನ ದರ್ಶನಕ್ಕೆ ನಿತ್ಯವೂ 70-80 ಸಾವಿರ ಮಂದಿ ಬರುತ್ತಿರುತ್ತಾರೆ. ಹೀಗಾಗಿ, ಕೆಲ ಕಟ್ಟುನಿಟ್ಟಿನ ಪಾರದರ್ಶಕ ಕ್ರಮಗಳು ಮೊದಲೇ ಜಾರಿಯಲ್ಲಿರಬೇಕಿತ್ತು ಮತ್ತು ನಿವೃತ್ತ ಐಎಎಸ್ ಅಥವಾ ದಕ್ಷ ಆಡಳಿತಗಾರ ಅತ್ಯಗತ್ಯವಾಗಿ ಬೇಕಿತ್ತು. ರಾಮ ಮಂದಿರ ನಿರ್ಮಾಣವಾಗಿ, ಮಂದಿರದ ವ್ಯಾಪ್ತಿಯಲ್ಲಿ ಎಷ್ಟೋ ಯುವಕರಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಉದ್ಯೋಗ ಸಿಕ್ಕಿದೆ. ಆದರೆ, ಕೆಲ ದುರುಳರ ಕುಕೃತ್ಯ ದಿಂದಾಗಿ ಎಲ್ಲರನ್ನೂ ಅನುಮಾನದಿಂದ ನೋಡುವಂತಾಗಿದೆ.

ಕೇಂದ್ರದ ಮೋದಿ ಮತ್ತು ಸ್ಥಳೀಯ ಯೋಗಿ ಸರಕಾರಕ್ಕೂ ಇಕ್ಕಟ್ಟಿನ ಸ್ಥಿತಿ. ಸರಕಾರ ಕಳವಾದ ಹಣದ ಪ್ರಮಾಣ ಗೊತ್ತಾಗಿ, ಮುಂದೆ ಅಪರಾಧಿಗಳಿಗೆ ಶಿಕ್ಷೆಯಾದರೂ, ರಾಮನ ಹುಂಡಿ ಹಣ ಕಳವು ಹಿಂದೂ ಶ್ರದ್ಧಾಳುಗಳ ಮನಸ್ಸಿನ ಮೇಲೆ ಶಾಶ್ವತವಾದ ಗಾಯ ಮಾಡಿದೆ. ಮುಂದಿನ ಸಲ ಯಾರಾದರೂ ದೇವಾಲಯ ನಿರ್ಮಾಣಕ್ಕೆ ಅಥವಾ ಇತರ ಧಾರ್ಮಿಕ ಉದ್ದೇಶಕ್ಕಾಗಿ ದೇಣಿಗೆ ಕೇಳಿದರೆ ಅವರನ್ನೂ ಸಂಶಯದಿಂದ ನೋಡಬಹುದು. ಅಲ್ಲವೇ?