ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kiran Upadhyay Column: ಅಲ್ಲಿ ಖರೀದಿಸದಿದ್ದರೆ ಅವರಿಗೆ ಏನೂ ನಷ್ಟವಿಲ್ಲ !

ವಿಮಾನ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಅಂಗಡಿಯಲ್ಲಿ 10-20 ರೂಪಾಯಿಗೆ ಸಿಗುವ ಚಹಾ-ಕಾಫಿ, ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ 10-20 ರೂಪಾಯಿಯಾಗುತ್ತದೆ. ಆಚೆ 20-30 ರೂಪಾಯಿಗೆ ಸಿಗುವ ಸಮೋಸಾ, ಇಡ್ಲಿ, ವಡೆ, ಏರ್ ಪೋರ್ಟ್ ಒಳಗೆ ತಲುಪುತ್ತಿದ್ದಂತೆ 350-400 ರೂಪಾಯಿ ಆಗುತ್ತದೆ.

ಅಲ್ಲಿ ಖರೀದಿಸದಿದ್ದರೆ ಅವರಿಗೆ ಏನೂ ನಷ್ಟವಿಲ್ಲ !

-

ವಿದೇಶವಾಸಿ

ವಿಮಾನ ನಿಲ್ದಾಣದ ಒಳಗೆ ಇರುವ ಸ್ಥಳ ಭೂಮಿಯ ಮೇಲಿರುವ ಎಲ್ಲಾ ಸ್ಥಳ ಗಳಿಗಿಂತ ಅತ್ಯಂತ ದುಬಾರಿಯ ಸ್ಥಳ ಎಂದರೂ ತಪ್ಪಲ್ಲ. ಶಹರ, ನಗರಗಳಲ್ಲಿರುವ ಎಲ್ಲ ರಿಯಲ್‌ ಎಸ್ಟೇಟ್ ಗಳಿಗಿಂತಲೂ ದುಬಾರಿ ರಿಯಲ್ ಎಸ್ಟೇಟ್ ಅಂದರೂ ಸರಿಯೇ. ಅಲ್ಲಿಯ ಬಾಡಿಗೆ ಅಷ್ಟು ಹೆಚ್ಚಾಗಿರುತ್ತದೆ. ಅದನ್ನು ತಿಳಿಯುವುದಕ್ಕೂ ಮೊದಲು ವಿಮಾನ ನಿಲ್ದಾಣದ ಆದಾಯ ಹೇಗೆ ಎಂದು ತಿಳಿದುಕೊಳ್ಳಬೇಕು.

ರಾಘವ್ ಛಡ್ಡಾ ಆಮ್ ಆದ್ಮಿ ಪಕ್ಷವನ್ನು ಬಿಟ್ಟು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಗೊಂಡರಂತೆ. ಇದು ಎರಡು ವಾರದ ಹಿಂದಿನ ಸುದ್ದಿ. ನನಗೆ ರಾಘವ ಛಡ್ಡಾ ಹೆಸರಿ ನೊಂದಿಗೆ ನೆನಪಾಗುವುದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಹಾರದ ಬೆಲೆಯ ಕುರಿತು ರಾಜ್ಯಸಭೆಯಲ್ಲಿ ಮಾಡಿದ ಭಾಷಣ.

‘ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಿಂಡಿ-ತಿನಿಸುಗಳ, ಚಹಾ-ಕಾಫಿಯ ಬೆಲೆ ತುಂಬಾ ಹೆಚ್ಚಾಗಿರುತ್ತದೆ, ಅದು ಸಾಮಾನ್ಯ ಪ್ರಯಾಣಿಕರ ಕೈಗೆಟುಕುವಂತಾಗಬೇಕು’ ಎನ್ನುವುದು ಅವರ ಕಳಕಳಿಯಾಗಿತ್ತು. ಅದು ವಾಸ್ತವ ಹೌದಾದರೂ, ಅವರ ಕಾಳಜಿ ಪ್ರಾಮಾಣಿಕವಾದರೂ, ವಿಮಾನ ನಿಲ್ದಾಣದ ಒಳಗೆ ಬಿಡಿ, ಹೊರಗಿನ ಆವರಣದಲ್ಲಿಯೂ ಕಮ್ಮಿ ಬೆಲೆಗೆ ಆಹಾರ ಪೂರೈಕೆ ಸಾಧ್ಯವಿಲ್ಲ. ಅದಕ್ಕೆ ಕಾರಣ ಹೇಳುವುದಕ್ಕಿಂತ ಮೊದಲು ಇತ್ತೀಚಿನ ಬದಲಾವಣೆಯನ್ನು ತಿಳಿದುಕೊಳ್ಳಬೇಕು.

ವಿಮಾನ ನಿಲ್ದಾಣದಿಂದ ಸ್ವಲ್ಪವೇ ದೂರದಲ್ಲಿರುವ ಅಂಗಡಿಯಲ್ಲಿ 10-20 ರೂಪಾಯಿಗೆ ಸಿಗುವ ಚಹಾ-ಕಾಫಿ, ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ 10-20 ರೂಪಾಯಿಯಾಗುತ್ತದೆ. ಆಚೆ 20-30 ರೂಪಾಯಿಗೆ ಸಿಗುವ ಸಮೋಸಾ, ಇಡ್ಲಿ, ವಡೆ, ಏರ್ ಪೋರ್ಟ್ ಒಳಗೆ ತಲುಪುತ್ತಿದ್ದಂತೆ 350-400 ರೂಪಾಯಿ ಆಗುತ್ತದೆ.

ಇದನ್ನೂ ಓದಿ: Kiran Upadhyay Column: ತನ್ನ ಹೆಸರನ್ನೇ ದ್ವೇಷಿಸಿದ್ದ ಫುಟ್ಬಾಲ್‌ ದಂತಕತೆ ಪೀಲೆ

ಅದೆಲ್ಲ ಹೋಗಲಿ, ಒಂದು ಚಿಕ್ಕ ನೀರಿನ ಬಾಟಲಿ ಬೇಕು ಎಂದರೂ ವಿಮಾನ ನಿಲ್ದಾಣದ ಒಳಗೆ ನೂರು ರೂಪಾಯಿ ತೆರಬೇಕಾಗುತ್ತದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಉಂಟಾಗುತ್ತದೆ. ಈ ದರಗಳಿಗೆ ಒಂದು ಕಡಿವಾಣ ಹಾಕಬೇಕು, ಕಡಿಮೆ ಬೆಲೆಗೂ ಹಸಿದ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಒಳಗೆ ತಿಂಡಿ ತಿನಿಸುಗಳು ಸಿಗುವಂತಾಗಬೇಕು ಎನ್ನುವುದು ವಿಮಾನದಲ್ಲಿ ಪ್ರಯಾಣಿಸುವ ಬಹುತೇಕ ಯಾತ್ರಿಗಳು ಅಳಲು, ಅಹವಾಲು. ಅದನ್ನೇ ಛಡ್ಡಾ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯೋ ಅಥವಾ ಕಾಕತಾಳೀಯವೋ ಎಂಬಂತೆ ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ರಾಮ್ ನಾಯ್ಡು ಗೋವಾ, ಲಖನೌ, ರಾಜಕೋಟ್, ಜಮ್ಮು, ಶ್ರೀನಗರ, ಪಾಟ್ನಾ, ಜೈಪುರ, ಇಂದೋರ್ ಸೇರಿದಂತೆ ಒಟ್ಟು ಹನ್ನೊಂದು ನಗರಗಳ ವಿಮಾನ ನಿಲ್ದಾಣಗಳಲ್ಲಿ ‘ಉಡಾನ್ ಯಾತ್ರಾ ಕೆಫೆ’ ಉದ್ಘಾಟಿಸಿದರು.

ಜತೆಗೆ, ದೇಶದಾದ್ಯಂತ 57 ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ವಾಗುವಂತಹ ಹಲವಾರು ಇತರೆ ಸೌಲಭ್ಯಗಳನ್ನೂ ಉದ್ಘಾಟಿಸಿದರು. ಈಗ ಉಡಾನ್ ಯಾತ್ರಾ ಕೆಫೆಗಳು ದೇಶದ ಬಹುತೇಕ ವಿಮಾನ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು ಇರುವುದಿಲ್ಲವಾದರೂ ಆಯಾ ಪ್ರದೇಶಕ್ಕೆ ತಕ್ಕಂತೆ ಅಲ್ಲಿನ ಜನಪ್ರಿಯ ಆಹಾರಗಳು ಕೈಗೆಟುಕುವ ಬೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಗುವಂತಾಗಿದೆ.

ವಿಮಾನ ನಿಲ್ದಾಣದ ಹೊರಗಿನ ಅಂಗಡಿಗಳಲ್ಲಿ ಸಿಗುವಂತೆಯೇ, ಹತ್ತು ರೂಪಾಯಿಗೆ ನೀರು, ಚಹಾ, ಇಪ್ಪತ್ತು ರೂಪಾಯಿಗೆ ಕಾಫಿ, ಪ್ರಾದೇಶಿಕ ತಿನಿಸು, ಸಿಹಿ ತಿಂಡಿ, ಇತ್ಯಾದಿಗಳು ಒಳಗೂ ದೊರಕುತ್ತಿವೆ. ಹಾಗಾದರೆ ವಿಮಾನ ನಿಲ್ದಾಣದಲ್ಲಿ ಆಹಾರ ಯಾಕೆ ಇಷ್ಟು ದುಬಾರಿ? ನಿಲ್ದಾಣದ ಒಳಗಿರುವ ವ್ಯಾಪಾರಿಗಳೆಲ್ಲ ಹೆಚ್ಚಿನ ಲಾಭಕ್ಕಾಗಿ ಬೆಲೆ ಏರಿಸಿರು ತ್ತಾರೆಯೇ? ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರೆಲ್ಲರೂ ಹೆಚ್ಚು ಹಣವುಳ್ಳವರು, ಅವರಿಂದ ದೋಚಿದಷ್ಟು ಬಂತು ಎಂದು ತಿಳಿದಿದ್ದಾರೆಯೇ? ಅಥವಾ ಅದು ಅವರಿಗೆ ಅನಿವಾರ್ಯವೇ? ಒಂದು ವಿಷಯ ತಿಳಿದಿರಲಿ, ಮ್ಯಾಕ್‌ಡೊನಾಲ್ಡ್ಸ್ , ಪಿಜ್ಜಾ ಹಟ್, ಕೋಸ್ಟ ಕೆ-, ಸ್ಟಾರ್‌ಬಕ್ಸ್ ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಅಥವಾ ನಮ್ಮ ಭಾರತದ ಸಿಸಿಡಿಯನ್ನೇ ತೆಗೆದುಕೊಳ್ಳಿ, ದೇಶದಾದ್ಯಂತ ಎಲ್ಲದಕ್ಕೂ ಒಂದೇ ಬೆಲೆ ಇದ್ದರೂ, ವಿಮಾನ ನಿಲ್ದಾಣದಲ್ಲಿ ಅದೇ ವಸ್ತುವಿಗೆ ಪ್ರಯಾಣಿಕ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.

Screenshot_1

ಅದರ ಕುರಿತಾಗಿ ಯಾರೂ ತಂಟೆ, ತಕರಾರು ಮಾಡುವಂತಿಲ್ಲ. ಬೇಕಾದರೆ ತೆಗೆದುಕೊಳ್ಳಿ, ಬೇಡವಾದರೆ ಬಿಡಿ, ಅಷ್ಟೇ. ಇನ್ನೊಂದು, ಒಮ್ಮೆ ವಿಮಾನ ನಿಲ್ದಾಣದ ಭದ್ರತೆಯನ್ನು ಮುಗಿಸಿ ಒಳಗೆ ಹೋದ ನಂತರ ಪ್ರಯಾಣಿಕರು ನಿಲ್ದಾಣದಿಂದ ಪುನಃ ಹೊರಗೆ ಬರು ವಂತಿಲ್ಲ.

ಅದೂ ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಒಮ್ಮೆ ಚೆಕ್‌ಇನ್ ಆದ ನಂತರ ಹೊರಗೆ ಬಂದು ತಿಂಡಿ ತಿಂದು ಹೋಗುವಷ್ಟು ಸಮಯವೂ ಇರುವುದಿಲ್ಲ. ಹೋಗಲಿ, ಸ್ವಿಗ್ಗಿ, ಝೊಮೇಟೋ ಮೂಲಕ ತಿಂಡಿ ತಿನಿಸುಗಳನ್ನು ತರಿಸಿಕೊಳ್ಳಲೂ ಸಾಧ್ಯವಿಲ್ಲ. ಬೇಕಾದರೆ ಮನೆಯಿಂದ ಸ್ವಲ್ಪ ತಿಂಡಿಯನ್ನು ಕಟ್ಟಿಕೊಂಡು ಬರಬಹುದು. ಆದರೆ ಬಿಯರ್, ವಿಸ್ಕಿ ಮುಂತಾದ ಮದ್ಯದ ಬಾಟಲಿಗಳನ್ನು ಒಳಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ.

ಬೇಕಾದರೆ ಡ್ಯೂಟಿ ಫ್ರೀ ಮಳಿಗೆಯಲ್ಲಿ ಖರೀದಿಸಬಹುದು ಅಥವಾ ನಿಲ್ದಾಣದ ಒಳಗೆ ಮದ್ಯ ಸರಬರಾಜು ಮಾಡುವ ಹೋಟೆಲ್ ಇದ್ದರೆ ಕುಂತು ಕುಡಿಯಬಹುದು. ಆದರೆ ನೀವು ಮದ್ಯವನ್ನು ಹೊರಗಿಂದ ಕೊಂಡುಹೋಗಿ ವಿಮಾನ ನಿಲ್ದಾಣದ ಒಳಗೆ ಕುಡಿಯುವಂತಿಲ್ಲ.

ಚಹಾ, ಕಾಫಿ, ಜ್ಯೂಸ್ ಇತ್ಯಾದಿ ಪೇಯಗಳನ್ನೂ ಒಂದು ಹಂತದವರೆಗೆ ಮಾತ್ರಕೊಂಡು ಹೋಗಬಹುದು. ಭದ್ರತೆ, ತಪಾಸಣೆಯ ನಂತರ, ನೂರು ಮಿಲಿ ಲೀಟರ್‌ಗಿಂತ ಹೆಚ್ಚಿನ ಯಾವುದೇ ದ್ರವ್ಯವನ್ನೂ ಒಳಗೆ ಒಯ್ಯುವಂತಿಲ್ಲ. ತೀರಾ ಹಸಿದರೆ, ಲಾಂಜ್ ಪ್ರವೇಶ ಸಾಧ್ಯವಾಗದಿದ್ದರೆ, ನಿಲ್ದಾಣದ ಒಳಗಿರುವ ಅಂಗಡಿಗಳ ತಿನ್ನುವುದು, ಕುಡಿಯುವುದು ಅನಿವಾರ್ಯವಾಗುತ್ತದೆ. ಇದು ಒಳಗೆ ಅಂಗಡಿ ಇಟ್ಟವರಿಗೂ ಗೊತ್ತಿರುತ್ತದೆ.

ವಿಮಾನ ನಿಲ್ದಾಣದ ಒಳಗೆ ಇರುವ ಸ್ಥಳ ಭೂಮಿಯ ಮೇಲಿರುವ ಎಲ್ಲಾ ಸ್ಥಳಗಳಿಗಿಂತ ಅತ್ಯಂತ ದುಬಾರಿಯ ಸ್ಥಳ ಎಂದರೂ ತಪ್ಪಲ್ಲ. ಶಹರ, ನಗರಗಳಲ್ಲಿರುವ ಎಲ್ಲ ರಿಯಲ್‌ ಎಸ್ಟೇಟ್ ಗಳಿಗಿಂತಲೂ ದುಬಾರಿ ರಿಯಲ್ ಎಸ್ಟೇಟ್ ಅಂದರೂ ಸರಿಯೇ. ಅಲ್ಲಿಯ ಬಾಡಿಗೆ ಅಷ್ಟು ಹೆಚ್ಚಾಗಿರುತ್ತದೆ. ಅದನ್ನು ತಿಳಿಯುವುದಕ್ಕೂ ಮೊದಲು ವಿಮಾನ ನಿಲ್ದಾಣದ ಆದಾಯ ಹೇಗೆ ಎಂದು ತಿಳಿದುಕೊಳ್ಳಬೇಕು.

ಭಾರತದಲ್ಲಿ ವಿಮಾನ ನಿಲ್ದಾಣಗಳ ನಿರ್ವಹಣೆಗೆ ಎರಡು ವಿಧದಿಂದ ಆದಾಯ ಸಂಗ್ರಹಿಸ ಲಾಗುತ್ತದೆ. ಒಂದು, ವಿಮಾನ ಯಾನ (aeronautical) ಕ್ಕೆ ಸಂಬಂಧಪಟ್ಟ ಶುಲ್ಕಗಳಿಂದ ಬರುವ ಆದಾಯ. ಇನ್ನೊಂದು ವಿಮಾನಯಾನೇತರ (nonaeronautical) ಆದಾಯಗಳು. ವಿಮಾನಯಾನಕ್ಕೆ ಸಂಬಂಧಪಟ್ಟ ಶುಲ್ಕದಲ್ಲಿ, ವಿಮಾನದ ಲ್ಯಾಂಡಿಂಗ್, ಪಾರ್ಕಿಂಗ್, ಏರೋಬ್ರಿಜ್, ಪ್ರಯಾಣಿಕರ ಮತ್ತು ವಿಮಾನ ನಿಲ್ದಾಣದ ಭದ್ರತಾ ಶುಲ್ಕಗಳು ಸೇರಿಕೊಂಡಿರುತ್ತವೆ.

ಇವನ್ನೆಲ್ಲ ಪ್ರಯಾಣಿಕರಿಂದ ಸಂಗ್ರಹಿಸಲಾಗುತ್ತದೆ. ಈ ಶುಲ್ಕಗಳೆಲ್ಲ ವಿಮಾನದ ಟಿಕೆಟ್ ದರದಲ್ಲಿ ಸೇರಿಕೊಂಡಿರುತ್ತವೆ. ಇದನ್ನು ಬಳಕೆದಾರರ ಅಭಿವೃದ್ಧಿ ಶುಲ್ಕ ಎಂದು ಕರೆಯ ಲಾಗುತ್ತದೆ. ಈ ಶುಲ್ಕ ಸಾಮಾನ್ಯವಾಗಿ ನೂರ ಮೂವತ್ತು ರೂಪಾಯಿಗಳಿಂದ ಆರಂಭವಾಗಿ ಸಾವಿರದ ಐದುನೂರು ರೂಪಾಯಿಗಳ ಮಧ್ಯದಲ್ಲಿದ್ದು, ಬೇರೆ ಬೇರೆ ನಗರಗಳಿಗೆ ಅನುಗುಣ ವಾಗಿ, ಜತೆಗೆ ದೇಶಿಯ ವಿಮಾನ ನಿಲ್ದಾಣಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಎಕಾನಮಿ ಕ್ಲಾಸ್ ಮತ್ತು ಬಿಸಿನೆಸ್ ಕ್ಲಾಸ್, ಹೀಗೆ ಭಿನ್ನ ವಿಭಾಗಗಳಿಗೆ ತಕ್ಕಂತೆ ಬೇರೆ ಬೇರೆಯ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.

ವಿಮಾನಯಾನೇತರ ಸುಂಕ ಸಂಗ್ರಹದ ಪಟ್ಟಿಯಲ್ಲಿ, ಡ್ಯೂಟಿ-ಫ್ರೀ ಮಳಿಗೆ, ರಿಟೇಲ್ ಮಳಿಗೆ ಗಳು, ಪಾರ್ಕಿಂಗ್, ಜಾಹೀರಾತು ಮತ್ತು ತಿಂಡಿ ತಿನಿಸುಗಳ ಮರಾಟ, ಇತ್ಯಾದಿಗಳಿಂದ ಶುಲ್ಕ ಸಂಗ್ರಹಿಸಲಾಗುತ್ತದೆ. ಭಾರತ ಸರಕಾರದ ನಿಯಮಗಳ ಪ್ರಕಾರ, ವಿಮಾನ ನಿಲ್ದಾಣ ಗಳು ವಿಮಾನಯಾನ ಸಂಸ್ಥೆಗಳಿಗೆ ಮತ್ತು ಪ್ರಯಾಣಿಕರಿಗೆ ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ.

ಅಂಕಿ-ಅಂಶಗಳ ಪ್ರಕಾರ ಮುಂಬೈ ಮತ್ತು ದಿಲ್ಲಿ ವಿಮಾನನಿಲ್ದಾಣದಿಂದ ತಲಾ 40 ಮತ್ತು 20 ಪ್ರತಿಶತ ಮಾತ್ರ ವಾಯುಯಾನದ ಶುಲ್ಕದಿಂದ ಸಂಗ್ರಹವಾಗುತ್ತದೆ. ಅಂದರೆ, ಉಳಿದ ಹಣವನ್ನು ಇತರೆ ಶುಲ್ಕದಿಂದಲೇ ಸಂಗ್ರಹಿಸಬೇಕಾಗುತ್ತದೆ. ಇತರೆ ಶುಲ್ಕಕ್ಕೆ ಸರಕಾರದ ಯಾವುದೇ ನಿರ್ಬಂಧಗಳಿಲ್ಲದ ಕಾರಣ ವಿಮಾನ ನಿಲ್ದಾಣಗಳು ಅವುಗಳಿಂದ ಹೆಚ್ಚಿನ ಶುಲ್ಕ ಸಂಗ್ರಹಿಸಲು ಪ್ರಯತ್ನಿಸುತ್ತವೆ.

ಅಷ್ಟಾದರೂ ದೇಶದ ಪ್ರಮುಖ ವಿಮಾನ ನಿಲ್ದಾಣಗಳು ನಷ್ಟದಲ್ಲಿರುವ ಸುದ್ದಿ ಓದುತ್ತೇವೆ. ಕಳೆದ ವರ್ಷ ಬೆಂಗಳೂರು ವಿಮಾನ ನಿಲ್ದಾಣ ಲಾಭ ಮಾಡಿದೆ. ಅದೂ ಹದಿನಾರು ವರ್ಷಗಳ ನಂತರ!

ನೀವು ವಿಮಾನ ನಿಲ್ದಾಣಕ್ಕೆ ಆಗಾಗ ಹೋಗುವವರಾಗಿದ್ದರೆ ಗಮನಿಸಿರುತ್ತೀರಿ. ಕೆಲವು ವಿಮಾನ ನಿಲ್ದಾಣಗಳ ಅಂಗಡಿ ಅಥವಾ ಮಳಿಗೆಗಳಲ್ಲಿ ಜನರೇ ಇರುವುದಿಲ್ಲ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಸುಮಾರು ಒಂದು ಲಕ್ಷ ಜನ ಪ್ರಯಾಣಿಕರು ಭೇಟಿ ನೀಡು ತ್ತಾರೆ. ಅದರಲ್ಲಿ ಬರುವವರ, ಹೋಗುವವರ ಸಂಖ್ಯೆ ಅರ್ಧ-ಅರ್ಧ ಎಂದು ಹಿಡಿದರೂ, ಐವತ್ತು ಸಾವಿರ ಜನ, ಒಂದು ಗಂಟೆಗೆ ಸರಾಸರಿ ಎರಡು ಸಾವಿರ ಜನ.

ನಿಲ್ದಾಣದ ಒಳಗೆ ತಿನಿಸು ಪೂರೈಸುವ ಹತ್ತು ಸ್ಥಳಗಳಿವೆ ಅಂದುಕೊಳ್ಳಿ, ಒಂದೊಂದಕ್ಕೂ ಇನ್ನೂರು ಜನ, ಅದರಲ್ಲಿ ಶೇಕಡಾ ಹತ್ತು ಪ್ರತಿಶತ ಮಾತ್ರವೇ ವಿಮಾನ ನಿಲ್ದಾಣದಲ್ಲಿ ತಿನ್ನುತ್ತಾರೆ ಎಂದರೂ ಇಪ್ಪತ್ತು ಜನ ಇರಬೇಕಿತ್ತು. ಆದರೆ, ಡ್ಯೂಟಿ ಫ್ರೀ ಹೊರತುಪಡಿಸಿ, ಅಂದು-ಇಂದು ಬಿಟ್ಟರೆ, ಎಲ್ಲಿಯೂ ನಿಮಗೆ ಅಷ್ಟು ಜನ ಕಾಣಿಸುವುದಿಲ್ಲ. ಇನ್ನು ಬಟ್ಟೆ, ಅಲಂಕಾರ ಸಾಮಗ್ರಿಗಳು, ಡ್ರೈಫ್ರೂಟ್ಸ್ , ವಗೈರೆಗಳ ಮಳಿಗೆಗಳದ್ದೂ ಇದೇ ಹಣೆಬರಹ.

ಇಷ್ಟು ಜನ ಬಂದರೂ, ವಿಮಾನ ನಿಲ್ದಾಣಗಳು ಇಷ್ಟು ಹಣ ಸಂಗ್ರಹಿಸಿದರೂ ಲಾಭ ಮಾಡಲಾಗುತ್ತಿಲ್ಲ ಯಾಕೆ? ವಿಮಾನ ನಿಲ್ದಾಣಗಳಲ್ಲಿ ಬಂದ ಆದಾಯದಲ್ಲಿ ಸುಮಾರು ನಲವತ್ತು ಪ್ರತಿಶತ ಸರಕಾರದ ಬೊಕ್ಕಸಕ್ಕೆ ಸೇರುತ್ತದೆ. ಅದರೊಂದಿಗೆ ಪ್ರಯಾಣಿಕರ ಸಂಖ್ಯೆ ಆಧರಿಸಿ, ಕನಿಷ್ಠ ವಾರ್ಷಿಕ ಮೊತ್ತವನ್ನು ಸರಕಾರಕ್ಕೆ ನೀಡಬೇಕಾಗುತ್ತದೆ.

ಶೇ.20ರಷ್ಟು ವಿದ್ಯುತ್, ನೀರು, ಭದ್ರತೆ, ಸ್ವಚ್ಛತೆ ಇತ್ಯಾದಿಗಳ ನಿರ್ವಹಣೆಗೆ ಸಲ್ಲುತ್ತದೆ. ಅದರೊಂದಿಗೆ ಡಿಪ್ರಿಸಿಯೇಷನ್, ಎಬಿಡ್ಟಾ ಇತ್ಯಾದಿ. ಅಲ್ಲಿಗೆ ವಿಮಾನ ನಿಲ್ದಾಣದ ನಿರ್ವಹಣೆಗೆ ಹೆಣಗಾಡುವಂತಾಗುತ್ತದೆ. ಇದು ನಿಲ್ದಾಣ ನಿರ್ವಹಣೆಯ ಕಥೆಯಾದರೆ, ಮಳಿಗೆ, ಅಂಗಡಿಯವರ ಕಥೆ ಇನ್ನೊಂದು ರೀತಿ.

ತಮ್ಮ ಖರ್ಚು ತೂಗಿಸಲು ವಿಮಾನ ನಿಲ್ದಾಣ ನಿರ್ವಹಿಸುವವರು ಅಂಗಡಿಯ ಸ್ಥಳವನ್ನು ಹೆಚ್ಚಿನ ಮೊತ್ತಕ್ಕೆ ಬಾಡಿಗೆಗೆ ನೀಡುತ್ತಾರೆ. ಆಗಲೇ ಹೇಳಿದಂತೆ, ಈ ಮೊತ್ತ ಅದೇ ನಗರದ ಪ್ರಮುಖ ಸ್ಥಳದಲ್ಲಿರುವ ಬಾಡಿಗೆಗಿಂತಲೂ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ನಿಲ್ದಾಣಗಳು ಊರ ಹೊರಗೆ ಇರುವುದರಿಂದ ಕೆಲಸಗಾರರಿಗೆ ಹೋಗಿ ಬರುವ ಸೌಕರ್ಯ ಮಾಡಿಕೊಡ ಬೇಕಾಗುತ್ತದೆ.

ಒಳಗೆ ಬರುವುದಕ್ಕಿಂತ ಮೊದಲು ಭದ್ರತೆ, ತಪಾಸಣೆಯ ಕಾರಣ ಕೆಲಸದವರ ಸಮಯ ಪೋಲಾಗುತ್ತದೆ. ಅದರೊಂದಿಗೆ ಐಡಿ ಕಾರ್ಡ್, ತಪಾಸಣೆ ವೆಚ್ಚ ಇತ್ಯಾದಿಗಳಿಗೆ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ ಇಂತಿಷ್ಟು ಎಂದು ಹಣ ಕಟ್ಟಬೇಕಾಗುತ್ತದೆ. ಅಗ್ನಿ ಅವಘಡ, ನೆರೆ ಇತ್ಯಾದಿ ಸುರಕ್ಷತೆಯ ಕಾರಣಕ್ಕಾಗಿ ಇಲ್ಲಿ ವಸ್ತುಗಳನ್ನು ಹೆಚ್ಚು ದಾಸ್ತಾನು ಮಾಡಿಕೊಳ್ಳುವಂತಿಲ್ಲ.

ತ್ಯಾಜ್ಯ ವಿಲೇವಾರಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸಾಮಾನ್ಯ ವಾಗಿ ವಿಮಾನಗಳ ಹಾರಾಟ ರಾತ್ರಿ ವೇಳೆ ಹೆಚ್ಚಾಗಿರುವುದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ವೇತನ ನೀಡಬೇಕಾಗುತ್ತದೆ.

ವಿಮಾನ ನಿಲ್ದಾಣವಾದದ್ದರಿಂದ ವಿಭಿನ್ನವಾಗಿ, ಆಕರ್ಷಕವಾಗಿ ಕಾಣುವಂತೆ ವಸ್ತುಗಳನ್ನು ಜೋಡಿಸಲು ತಗಲುವ ವೆಚ್ಚ.. ಈ ಪಟ್ಟಿ ಹೀಗೇ ಬೆಳೆಯುತ್ತಾ ಹೋಗುತ್ತದೆ. ಅದರೊಂದಿಗೆ ತಿಂಡಿ ತಿನಿಸು ಮಾರುವವರಾದರಂತೂ ಮುಗಿದೇ ಹೋಯಿತು.

ಕೆಲವು ಕಡೆ ಒಲೆ ಹಚ್ಚಲು ಅವಕಾಶ ಇರುವುದಿಲ್ಲ. ಇದ್ದರೂ ಸಾಕಷ್ಟು ಕಡಿವಾಣ. ಆದ್ದರಿಂದ ಆಹಾರ ಹೊರಗೆ ತಯಾರಿಸಿ, ಒಳಗೆ ತಂದು ಬಿಸಿ ಮಾಡಿಕೊಡುವವರೇ ಹೆಚ್ಚು. ಆದ್ದರಿಂದ ವಿಮಾನ ನಿಲ್ದಾಣದಲ್ಲಿ ಸಿಗುವ ಆಹಾರ ಹೊರಗಿನಷ್ಟು ರುಚಿ ಅನ್ನಿಸುವುದಿಲ್ಲ. ಈಗಂತೂ ಲಾಂಜ್ ಕಾರ್ಡ್ ಹೊಂದಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರೆಲ್ಲ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಲಾಂಜ್ ಮೊರೆ ಹೋಗುತ್ತಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ಒಳಗೆ ಅಂಗಡಿ ಇಟ್ಟವ ಲಾಭ ಮಾಡಬೇಕು ಎಂದರೆ ಎಷ್ಟು ಪಟ್ಟು ಬೆಲೆ ಹೆಚ್ಚಿಸಬೇಕು ಯೋಚಿಸಿ. ಆದರೂ ವಿಮಾನನಿಲ್ದಾಣಗಳಲ್ಲಿ ಮಳಿಗೆಗಳು ಎಷ್ಟೋ ವರ್ಷದಿಂದ ಅಲ್ಲಿಯೇ ಬೀಡು ಬಿಟ್ಟಿರಲು ಕಾರಣ, ಬಹುತೇಕ ಮಳಿಗೆಗಳು ಐದು ವರ್ಷಗಳ ಒಪ್ಪಂದದಲ್ಲಿರುತ್ತವೆ.

ಆದ್ದರಿಂದ ಅದಕ್ಕಿಂತ ಮೊದಲೇ ಮುಚ್ಚಿಕೊಂಡು ಹೋದರೂ ಅಷ್ಟು ಹಣ ತೆರಬೇಕಾಗು ತ್ತದೆ. ಆದರೆ ವಿಮಾನನಿಲ್ದಾಣದಲ್ಲಿ ಸಿಗುವ ಪ್ರಚಾರ ಅವರಿಗೆ ಬೇರೆ ಎಲ್ಲೂ ಸಿಗುವುದಿಲ್ಲ. ಅಲ್ಲಿಯ ಮಳಿಗೆಗಳು, ಬ್ರ್ಯಾಂಡ್‌ಗಳು ಪ್ರತಿನಿತ್ಯ ಸಾವಿರಾರು ಜನರನ್ನು ತಲುಪುತ್ತವೆ.

ಜಾಹೀರಾತು ಇಂದು ವ್ಯಾಪಾರದ ಪ್ರಮುಖ ಅಂಗ. ಬೀದಿ ಬದಿಯಲ್ಲಿರುವ ಒಂದು ಹೋರ್ಡಿಂಗ್, ಪೋಸ್ಟರ್ ಮೇಲೆ ದಾರಿಹೋಕರು ಕೆಲವು ಸೆಕೆಂಡು ಮಾತ್ರ ಕಣ್ಣಾಡಿಸು ತ್ತಾರೆ. ದೂರದರ್ಶನದಲ್ಲಿ, ಚಿತ್ರಮಂದಿರದಲ್ಲಿ ಬರುವ ಜಾಹೀರಾತು ಕೆಲವು ನಿಮಿಷಗಳು ಮಾತ್ರ ನೆನಪಿನಲ್ಲಿರುತ್ತವೆ. ಅದೇ ನೀವು ಬಸ್ ನಿಲ್ದಾಣದಲ್ಲಿ ಕಾಯುತ್ತಿರು ವಾಗ ನಿಮ್ಮ ಮುಂದೆ ಜಾಹೀರಾತು ಇದ್ದರೆ ಬಸ್ ಬರುವವರೆಗೂ ಅದು ಕಣ್ಣ ಮುಂದಿರುತ್ತದೆ.

ವಿಮಾನ ನಿಲ್ದಾಣದಲ್ಲಿಯೂ ಅಷ್ಟೇ, ಒಂದು ಗಂಟೆ ಮೊದಲೇ ಚೆಕ್-ಇನ್ ಆಗಿ ಗೇಟಿನ ಬಳಿ ಕುಳಿತರೆ, ವಿಮಾನದ ಒಳಗೆ ಕುಳಿತುಕೊಳ್ಳುವವರೆಗೂ ಅಂಗಡಿ ಅಥವಾ ಮಳಿಗೆ ನಮ್ಮ ಕಣ್ಣ ಮುಂದೆಯೇ ಇರುತ್ತದೆ. ಆ ಮಳಿಗೆಯ ಲೋಗೋ, ಹೆಸರು ಎಲ್ಲವೂ ನಮ್ಮ ಮನದೊಳಗೆ ಇಳಿದುಬಿಡುತ್ತದೆ.

ವಿಮಾನ ಯಾನ ಮಾಡುವ ಯಾತ್ರಿಗಳು ಆಟೋ ಅಥವಾ ಬಸ್ಸಿಗೆ ಕಾಯುವ ದರ್ಜೆಯ ಜನರಲ್ಲ, ಆರ್ಥಿಕವಾಗಿ ಅವರಿಗಿಂತ ಗಟ್ಟಿಗರಾಗಿರುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಯಾತ್ರಿಗಳು ತಮ್ಮ ಮಳಿಗೆಯಲ್ಲಿ ವಸ್ತುಗಳನ್ನು, ತಿನಿಸುಗಳನ್ನು ಖರೀದಿಸಿದರೆ ಒಳ್ಳೆಯದು, ಖರೀದಿಸದಿದ್ದರೆ ಅವರಿಗೆ ಯಾವ ಬೇಸರವೂ ಇಲ್ಲ. ಅವರಿಗೆ ಬೇಕಾದದ್ದು, ತಮ್ಮ ಬ್ರ್ಯಾಂಡನ್ನು ಜನರ ತಲೆಯ ಒಳಗೆ ಸ್ಥಿರವಾಗಿಸುವುದು. ಆ ಮೂಲಕ ನಗರದಲ್ಲಿ ರುವ ತಮ್ಮ ಮಳಿಗೆಗಳಿಗೆ ಮುಂದೊಂದು ದಿನ ಈ ಯಾತ್ರಿಗಳು ಬರುವಂತೆ ಮಾಡುವುದು. ಆದ್ದರಿಂದ ವಿಮಾನ ನಿಲ್ದಾಣದಲ್ಲಿರುವ ಅಂಗಡಿಗಳಾಗಲಿ, ಮಳಿಗೆಗಳಾಗಲಿ ಲಾಭ ಗಳಿಸುತ್ತಿಲ್ಲವಾದರೂ, ನಷ್ಟದಲ್ಲಿವೆ ಎಂದು ಭಾವಿಸಬಾರದು.