ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಇದು ಇಸ್ರೇಲಿ ಜಲವಿಜ್ಞಾನಿಗಳ ಕಣ್ಣಿಗೆ ಕಾಣದ ಅಣೆಕಟ್ಟಿನ ವಿಸ್ಮಯ !

ಈ ಸಮಸ್ಯೆಗೆ ಪರಿಹಾರವಾಗಿ ಹುಟ್ಟಿದ್ದೇ ಶೈಜಾಫ್ ಡ್ಯಾಮ್. ಏನಿದು ‘ನದಿ ಪಾತ್ರದೊಳಗಿನ ಅಣೆಕಟ್ಟು’?‌ ಶೈಜಾಫ್ ಅಣೆಕಟ್ಟಿನ ವಿಶೇಷವೆಂದರೆ, ಇದು ನದಿಯ ಮೇಲೆ ಕಟ್ಟಿದ ಗೋಡೆ‌ ಯಲ್ಲ, ಬದಲಾಗಿ ನದಿಯ ‘ಒಳಗೆ’ ಅಥವಾ ನದಿಯ ಪಾತ್ರದ ಮರಳಿನ ಪದರದ ಕೆಳಗೆ ಕಟ್ಟಿದ ಗೋಡೆ.

ಇದು ಇಸ್ರೇಲಿ ಜಲವಿಜ್ಞಾನಿಗಳ ಕಣ್ಣಿಗೆ ಕಾಣದ ಅಣೆಕಟ್ಟಿನ ವಿಸ್ಮಯ !

-

ಇದೇ ಅಂತರಂಗ ಸುದ್ದಿ

ಶೈಜಾಫ್‌ ಅಣೆಕಟ್ಟಿನ ವಿಶೇಷವೆಂದರೆ, ಇದು ನದಿಯ ಮೇಲೆ ಕಟ್ಟಿದ ಗೋಡೆಯಲ್ಲ, ಬದಲಾಗಿ ನದಿಯ ‘ಒಳಗೆ’ ಅಥವಾ ನದಿಯ ಪಾತ್ರದ ಮರಳಿನ ಪದರದ ಕೆಳಗೆ ಕಟ್ಟಿದ ಗೋಡೆ. ಇದನ್ನು ತಾಂತ್ರಿಕವಾಗಿ ಸಬ್-ಸರ್ಫೇಸ್ ಡ್ಯಾಮ ಅಥವಾ ಅಂತರ್ಜಲ ಅಣೆಕಟ್ಟು ಎಂದು ಕರೆಯುತ್ತಾರೆ. ಇಲ್ಲಿ ನೀರು ಭೂಮಿಯ ಮೇಲ್ಮೈ ಗಿಂತ ಕೆಳಗೆ, ಮರಳಿನ ಪದರಗಳ ನಡುವೆ ಸಂಗ್ರಹವಾಗಿರುತ್ತದೆ.

ಸಾಮಾನ್ಯವಾಗಿ ‘ಅಣೆಕಟ್ಟು’ ಅಥವಾ ‘ಡ್ಯಾಮ್’ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಬೃಹದಾಕಾರದ ಕಾಂಕ್ರೀಟ್ ಗೋಡೆಗಳು, ಅದರ ಹಿಂದೆ ನಿಂತಿರುವ ವಿಶಾಲ ವಾದ ನೀಲಿ ನೀರಿನ ಚಾಪೆ ಮತ್ತು ಕ್ರೆಸ್ಟ್ ಗೇಟ್‌ಗಳಿಂದ ಧುಮ್ಮಿಕ್ಕುವ ಜಲಧಾರೆ. ಕನ್ನಂ ಬಾಡಿ (ಕೆಆರ್ ಎಸ್) ಅಥವಾ ಆಲಮಟ್ಟಿ ಅಣೆಕಟ್ಟುಗಳನ್ನು ನೋಡಿದ ನಮಗೆ, ಅಣೆಕಟ್ಟು ಎಂದರೆ ನೀರನ್ನು ತಡೆದು ನಿಲ್ಲಿಸುವ ಒಂದು ಭೌತಿಕ ರಚನೆ ಅಥವಾ ಬೃಹತ್ ಗೋಡೆ ಎಂದೇ ತಿಳಿದಿದೆ. ‌

ಇಂಥ ತೆರೆದ ಅಣೆಕಟ್ಟುಗಳಲ್ಲಿ ಎರಡು ಪ್ರಮುಖ ಸಮಸ್ಯೆಗಳಿವೆ. ಒಂದು, ಬಿಸಿಲ ತಾಪಕ್ಕೆ ಅಪಾರ ಪ್ರಮಾಣದ ನೀರು ಆವಿಯಾಗಿ ಹೋಗುತ್ತದೆ. ಎರಡು, ನೆಲದ ಅಡಿಯಲ್ಲಿ ನೀರು ಇಂಗಿ ಹೋಗಿ ನಷ್ಟವಾಗುತ್ತದೆ.

ಆದರೆ, ಇಸ್ರೇಲ್ ಎಂಬ ಮರುಭೂಮಿಯ ದೇಶ ಈ ಎರಡೂ ಸಮಸ್ಯೆಗಳಿಗೆ ಸೆಡ್ಡು ಹೊಡೆದು, ವಿಜ್ಞಾನವನ್ನೇ ಬೆರಗುಗೊಳಿಸುವಂಥ ಒಂದು ವಿನೂತನ ಪ್ರಯೋಗವನ್ನು ಮಾಡಿದೆ. ಅದೇ ‘ಅರವಾ’ ಮರುಭೂಮಿ ಪ್ರದೇಶದಲ್ಲಿ, ‘ನೆಕಾರಟ್’ ನದಿಗೆ ನಿರ್ಮಿಸಲಾದ ‘ಶೈಜಾಫ್ ಅಣೆಕಟ್ಟು’. ಇದೊಂದು ‘ನದಿ ಪಾತ್ರದೊಳಗಿನ ಅಣೆಕಟ್ಟು’ ಅಂದರೆ Under ground Dam. ಇಲ್ಲಿ ನೀರು ಹರಿಯುವುದೂ ಕಾಣುವುದಿಲ್ಲ, ನಿಂತಿರುವುದೂ ಕಾಣುವು‌ ದಿಲ್ಲ. ಆದರೂ ಇಲ್ಲಿ ನೀರು ಆವಿಯಾಗುವುದಿಲ್ಲ, ಹನಿ ನೀರೂ ವ್ಯರ್ಥವಾಗಿ ಇಂಗಿ ಹೋಗುವುದಿಲ್ಲ!

ಇದನ್ನೂ ಓದಿ: Vishweshwar Bhat Column: ಕಿಬೂತ್: ಇಸ್ರೇಲಿನ ಮರುಭೂಮಿಯಲ್ಲಿ ಹುಟ್ಟಿದ ಸಮಾಜದ ಮಾದರಿ

ಇಸ್ರೇಲಿನ ದಕ್ಷಿಣ ಭಾಗದಲ್ಲಿರುವ ‘ಅರಾ’ ಕಣಿವೆ ಒಂದು ಅತ್ಯಂತ ಶುಷ್ಕ ಪ್ರದೇಶ. ಇಲ್ಲಿ ಮಳೆ ಬರುವುದು ತೀರಾ ಅಪರೂಪ. ಆದರೆ ಯಾವಾಗಲಾದರೂ ಮಳೆ ಬಂದರೆ, ಅದು ಪ್ರವಾಹದ ರೂಪದಲ್ಲಿ ಬರುತ್ತದೆ. ಇಲ್ಲಿರುವ ‘ನೆಕಾರಟ್’ ನದಿ ಒಂದು ಹಂಗಾಮಿ ನದಿ (ವಾಡಿ). ಅಂದರೆ ವರ್ಷದ ಬಹುಕಾಲ ಇದು ಒಣಗಿರುತ್ತದೆ.

ಮಳೆ ಬಂದಾಗ ಮಾತ್ರ ಇಲ್ಲಿ ಭೋರ್ಗರೆದು ನೀರು ಹರಿಯುತ್ತದೆ. ಹಿಂದೆ ಈ ಪ್ರವಾಹದ ನೀರು ಮರುಭೂಮಿಯ ಮರಳಿನಲ್ಲಿ ಸುಮ್ಮನೆ ಹರಿದು, ಕೊನೆಗೆ ಉಪ್ಪು ನೀರಿನ ಸರೋವರವಾದ ‘ಮೃತ ಸಮುದ್ರ’ (Dead Sea) ಸೇರಿ ವ್ಯರ್ಥವಾಗುತ್ತಿತ್ತು. ಈ ನೀರನ್ನು ಸಾಂಪ್ರದಾಯಿಕ ಅಣೆಕಟ್ಟು ಕಟ್ಟಿ ನಿಲ್ಲಿಸಿದರೆ, ಅಲ್ಲಿನ 40-45 ಡಿಗ್ರಿ ಉಷ್ಣಾಂಶಕ್ಕೆ ಅರ್ಧ ದಷ್ಟು ನೀರು ಆವಿಯಾಗಿ ಹೋಗುತ್ತಿತ್ತು.

ಈ ಸಮಸ್ಯೆಗೆ ಪರಿಹಾರವಾಗಿ ಹುಟ್ಟಿದ್ದೇ ಶೈಜಾಫ್ ಡ್ಯಾಮ್. ಏನಿದು ‘ನದಿ ಪಾತ್ರದೊಳಗಿನ ಅಣೆಕಟ್ಟು’?‌ ಶೈಜಾಫ್ ಅಣೆಕಟ್ಟಿನ ವಿಶೇಷವೆಂದರೆ, ಇದು ನದಿಯ ಮೇಲೆ ಕಟ್ಟಿದ ಗೋಡೆ ಯಲ್ಲ, ಬದಲಾಗಿ ನದಿಯ ‘ಒಳಗೆ’ ಅಥವಾ ನದಿಯ ಪಾತ್ರದ ಮರಳಿನ ಪದರದ ಕೆಳಗೆ ಕಟ್ಟಿದ ಗೋಡೆ. ಇದನ್ನು ತಾಂತ್ರಿಕವಾಗಿ ಸಬ್-ಸರ್ಫೇಸ್ ಡ್ಯಾಮ್ (Sub surface Dam ) ಅಥವಾ ಅಂತರ್ಜಲ ಅಣೆಕಟ್ಟು ಎಂದು ಕರೆಯುತ್ತಾರೆ.‌

Screenshot_1 R

ಇದರ ನಿರ್ಮಾಣ ಮತ್ತು ಕಾರ್ಯವೈಖರಿ ಹೇಗಿದೆ? ಎಂಜಿನಿಯರ್‌ಗಳು ನೆಕಾರಟ್ ನದಿಯ ಪಾತ್ರದಲ್ಲಿ ಅಡ್ಡಲಾಗಿ ಆಳವಾದ ಕಂದಕವನ್ನು ತೋಡಿದರು. ಎಲ್ಲಿಯವರೆಗೆ ಎಂದರೆ, ನೀರು ಇಂಗದ ಕಠಿಣ ಬಂಡೆ (Bedrock) ಸಿಗುವವರೆಗೆ. ನಂತರ ಆ ಕಂದಕದಲ್ಲಿ ಮಣ್ಣು ಅಥವಾ ಕಾಂಕ್ರೀಟ್ ಅಥವಾ ಪ್ಲಾಸ್ಟಿಕ್ ಲೈನಿಂಗ್ ಬಳಸಿ ಒಂದು ಗೋಡೆಯನ್ನು ನಿರ್ಮಿಸಿ ದರು.

ವಿಶೇಷವೆಂದರೆ, ಈ ಗೋಡೆಯ ಎತ್ತರ ನದಿಪಾತ್ರದ ಮರಳಿನ ಮಟ್ಟಕ್ಕಿಂತ ಕೆಳಗೇ ಇರು ತ್ತದೆ. ನಿರ್ಮಾಣದ ನಂತರ ಇದನ್ನು ಮತ್ತೆ ನೈಸರ್ಗಿಕ ಮರಳಿನಿಂದ ಮುಚ್ಚಲಾಯಿತು. ಈಗ ಅಲ್ಲಿ ಅಣೆಕಟ್ಟು ಇದೆ ಎಂಬುದಕ್ಕೆ ಯಾವ ಕುರುಹೂ ಸಿಗುವುದಿಲ್ಲ!

ಮಳೆ ಬಂದಾಗ ನೆಕಾರಟ್ ನದಿಯಲ್ಲಿ ಪ್ರವಾಹ ಉಂಟಾಗುತ್ತದೆ. ಈ ನೀರು ಮೇಲ್ಮೈಯಲ್ಲಿ ರಭಸವಾಗಿ ಹರಿಯುವುದರ ಜತೆಗೆ, ನದಿ ಪಾತ್ರದ ಮರಳಿನ ಮೂಲಕ ಕೆಳಗೂ ಇಳಿಯುತ್ತದೆ. ಹೀಗೆ ಮರಳಿನ ಪದರದ ಮೂಲಕ ಹರಿಯುವ ನೀರಿಗೆ ಈ ‘ಗುಪ್ತ ಗೋಡೆ’ ಅಡ್ಡಿಯಾಗುತ್ತದೆ. ಆಗ ನೀರು ಅಲ್ಲಿಯೇ ಮರಳಿನ ಕಣಗಳ ನಡುವೆ ಸಂಗ್ರಹವಾಗಲು ಪ್ರಾರಂಭಿಸುತ್ತದೆ.

ಇಲ್ಲಿ ನೀರು ಆವಿಯಾಗದಿರಲು ಮತ್ತು ಇಂಗದಿರಲು ಪ್ರಮುಖ ಕಾರಣಗಳಿವೆ. ಇಲ್ಲಿ ನೀರು ಭೂಮಿಯ ಮೇಲ್ಮೈಗಿಂತ ಕೆಳಗೆ, ಮರಳಿನ ಪದರಗಳ ನಡುವೆ ಸಂಗ್ರಹವಾಗಿರುತ್ತದೆ. ಸೂರ್ಯನ ಕಿರಣಗಳು ನೇರವಾಗಿ ನೀರನ್ನು ತಲುಪುವುದಿಲ್ಲ. ಮರುಭೂಮಿಯ ಸುಡುವ ಬಿಸಿಲು ಮೇಲಿನ ಮರಳನ್ನು ಕಾಯಿಸಬಹುದೇ ವಿನಾ, ಅಡಿಯಲ್ಲಿರುವ ನೀರನ್ನು ಆವಿ ಯಾಗಿಸಲು ಸಾಧ್ಯವಿಲ್ಲ. ಇದರಿಂದಾಗಿ ಶೇ.ನೂರರಷ್ಟು ನೀರು ಉಳಿತಾಯವಾಗುತ್ತದೆ.

ಸಾಮಾನ್ಯವಾಗಿ ಕೆರೆಗಳಲ್ಲಿ ನೀರು ಪಾತಾಳಕ್ಕೆ ಇಂಗಿ ಹೋಗುತ್ತದೆ. ಆದರೆ ಶೈಜಾಫ್ ಅಣೆಕಟ್ಟಿನಲ್ಲಿ, ಕೆಳಭಾಗದಲ್ಲಿ ನೈಸರ್ಗಿಕವಾದ ಕಠಿಣ ಬಂಡೆ ಇರುವುದರಿಂದ ನೀರು ಕೆಳಗೆ ಹೋಗಲಾರದು. ಹಾಗೆಯೇ, ಅಡ್ಡಲಾಗಿ ಕೃತಕ ಗೋಡೆ ಕಟ್ಟಿರುವುದರಿಂದ ನೀರು ಮುಂದೆ ಹರಿದು ಸಮುದ್ರ ಸೇರಲಾರದು.

ಹೀಗೆ ನೀರು ಒಂದು ಬೃಹತ್ ಭೂಗತ ಟ್ಯಾಂಕ್‌ನಲ್ಲಿ ಇದ್ದಂತೆ ಸುರಕ್ಷಿತವಾಗಿರುತ್ತದೆ. ಅರವಾ ಪ್ರದೇಶದ ರೈತರಿಗೆ ಈ ಅಣೆಕಟ್ಟು ವರದಾನವಾಗಿದೆ. ಕೃಷಿಗೆ ಸಂಜೀವಿನಿಯಾಗಿದೆ. ಮರಳಿನ ಪದರಗಳ ಮೂಲಕ ನೀರು ಇಳಿಯುವುದರಿಂದ, ಅದು ನೈಸರ್ಗಿಕವಾಗಿಯೇ ಶೋಧಿಸಲ್ಪಡುತ್ತದೆ. ಹೀಗಾಗಿ ಕೃಷಿಗೆ ಅತ್ಯಂತ ಶುದ್ಧ ನೀರು ಸಿಗುತ್ತದೆ. ಮೇಲ್ಮೈ ಅಣೆಕಟ್ಟು ಗಳು ಬೇಸಗೆಯಲ್ಲಿ ಒಣಗಬಹುದು.

ಆದರೆ ಮರಳಿನ ಅಡಿಯಲ್ಲಿ ರಕ್ಷಿತವಾಗಿರುವ ಈ ನೀರು ದೀರ್ಘಕಾಲದವರೆಗೆ ಲಭ್ಯ ವಿರುತ್ತದೆ. ಪಂಪ್‌ಗಳ ಮೂಲಕ ಈ ನೀರನ್ನು ಮೇಲೆತ್ತಿ, ಹನಿ ನೀರಾವರಿ (Drip Irrigation) ಪದ್ಧತಿಯ ಮೂಲಕ ಅಲ್ಲಿನ ಪ್ರಸಿದ್ಧ ದಪ್ಪ ಮೆಣಸಿನಕಾಯಿ (Bell Peppers), ಖರ್ಜೂರ ಮತ್ತು ಕಲ್ಲಂಗಡಿ ಬೆಳೆಗಳಿಗೆ ಬಳಸಲಾಗುತ್ತದೆ.

ಇಸ್ರೇಲ್ ಈ ಪ್ರದೇಶದಿಂದಲೇ ಯುರೋಪ್‌ಗೆ ಭಾರಿ ಪ್ರಮಾಣದ ತರಕಾರಿಗಳನ್ನು ರಫ್ತು ಮಾಡುತ್ತದೆ ಎಂದರೆ ಈ ಅಣೆಕಟ್ಟಿನ ಮಹತ್ವ ಅರಿವಾಗುತ್ತದೆ. ದೊಡ್ಡ ಅಣೆಕಟ್ಟುಗಳನ್ನು ಕಟ್ಟುವಾಗ ಕಾಡು ಮುಳುಗಡೆಯಾಗುತ್ತದೆ, ಪ್ರಾಣಿ ಸಂಕುಲಕ್ಕೆ ತೊಂದರೆಯಾಗುತ್ತದೆ. ಆದರೆ ಶೈಜಾಫ್ ಅಣೆಕಟ್ಟು ಪರಿಸರಸ್ನೇಹಿ. ಇದು ನದಿಯ ನೈಸರ್ಗಿಕ ಹರಿವಿನಂತೆ ಮೇಲ್ನೋಟಕ್ಕೆ ಕಾಣುವುದರಿಂದ, ಪ್ರಾಣಿಗಳು ಮುಕ್ತವಾಗಿ ಓಡಾಡಬಹುದು. ನೀರು ನಿಂತು ಸೊಳ್ಳೆಗಳ ಕಾಟ ಇರುವುದಿಲ್ಲ ಅಥವಾ ಪಾಚಿ ಕಟ್ಟುವುದಿಲ್ಲ. ಭೂಮಿಯ ಮೇಲ್ಮೈಯನ್ನು ಕೃಷಿಗೆ ಅಥವಾ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು.

‘ನದಿ ಪಾತ್ರದೊಳಗಿನ ಅಣೆಕಟ್ಟು’ ಎಂಬ ಪರಿಕಲ್ಪನೆ ಕೇವಲ ಎಂಜಿನಿಯರಿಂಗ್ ಕೌಶಲ ವಲ್ಲ, ಅದು ಪ್ರಕೃತಿಯನ್ನು ಅರ್ಥ ಮಾಡಿಕೊಂಡು ನಡೆಸಿದ ಜೀವನಕಲೆ. ನಮಗೆ ನೀರು ಕಾಣಬೇಕಿಲ್ಲ, ಅದು ಬಳಕೆಗೆ ಸಿಕ್ಕರೆ ಸಾಕು ಎಂಬ ಸರಳ ಸತ್ಯವನ್ನು ಇಸ್ರೇಲಿಗರು ಅರಿತಿದ್ದಾರೆ.

ಭಾರತದಂಥ ದೇಶಗಳಲ್ಲಿ, ಅದರಲ್ಲೂ ಉತ್ತರ ಕರ್ನಾಟಕದಂಥ ಬಿಸಿಲ ನಾಡಿನಲ್ಲಿ, ಕೆರೆಗಳ ನೀರು ಬೇಸಗೆಯಲ್ಲಿ ಆವಿಯಾಗಿ ಹೋಗುವುದನ್ನು ನಾವು ನೋಡುತ್ತೇವೆ. ಶೈಜಾಫ್ ಡ್ಯಾಮ್ ಮಾದರಿಯು, ನೀರನ್ನು ಹೇಗೆ ‘ಬಚ್ಚಿಟ್ಟು’ ಬಳಸಬಹುದು ಎಂಬುದಕ್ಕೆ ಜಗತ್ತಿಗೆ ಒಂದು ಮಾದರಿಯಾಗಿದೆ. ಅಲ್ಲಿ‌ ನೀರು ಮಣ್ಣಿನ ಪಾಲಾಗುವುದಿಲ್ಲ, ಬದಲಾಗಿ ಮಣ್ಣೇ ನೀರನ್ನು ಮಡಿಲಲ್ಲಿಟ್ಟು ಕಾಪಾಡುತ್ತದೆ. ಇದೇ ನಿಜವಾದ ಜಲಕ್ರಾಂತಿ!

ಈ ತಂತ್ರಜ್ಞಾನ ಸಂಪೂರ್ಣವಾಗಿ ಹೊಸದೇನಲ್ಲ. ರೋಮನ್ನರು ಮತ್ತು ಪುರಾತನ ಪರ್ಷಿಯನ್ನರು ಇರಾನ್‌ನಲ್ಲಿ ‘ಕಾನತ್’(Qanat) ಎಂಬ ಸುರಂಗ ವ್ಯವಸ್ಥೆಯ ಮೂಲಕ ಇಂಥದ್ದೇ ಪ್ರಯೋಗ ಮಾಡಿದ್ದರು. ಅವರು ಭೂಮಿಯ ಅಡಿಯಲ್ಲಿ ಸುರಂಗ ಕೊರೆದು ನೀರನ್ನು ಆವಿಯಾಗದಂತೆ ತಂದು ಕೃಷಿಗೆ ಬಳಸುತ್ತಿದ್ದರು. ಇಸ್ರೇಲ್ ಈ ಪ್ರಾಚೀನ ಬುದ್ಧಿ ವಂತಿಕೆಗೆ ಆಧುನಿಕ ಎಂಜಿನಿಯರಿಂಗ್ ಸ್ಪರ್ಶ ನೀಡಿ, ಪ್ಲಾಸ್ಟಿಕ್ ಶೀಟ್‌ಗಳು ಮತ್ತು ಕಾಂಕ್ರೀಟ್ ತಡೆಗೋಡೆಗಳನ್ನು ಬಳಸಿ ಇದನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ.

ಮರುಭೂಮಿಯ ಮಣ್ಣಿನಲ್ಲಿ ಸ್ವಾಭಾವಿಕವಾಗಿ ಉಪ್ಪಿನಂಶ ಹೆಚ್ಚಿರುತ್ತದೆ. ಸಾಮಾನ್ಯವಾಗಿ ನೀರನ್ನು ಒಂದೇ ಕಡೆ ನಿಲ್ಲಿಸಿದರೆ, ಅದು ಮಣ್ಣಿನಲ್ಲಿರುವ ಉಪ್ಪನ್ನು ಹೀರಿಕೊಂಡು ಕೃಷಿಗೆ ಯೋಗ್ಯವಿಲ್ಲದಂತಾಗುತ್ತದೆ. ಆದರೆ ಶೈಜಾಫ್ ಅಣೆಕಟ್ಟಿನಲ್ಲಿ ನೀರು ನಿಂತಿದ್ದರೂ, ಮರಳಿನ ಪದರಗಳ ನಡುವೆ ನಿಧಾನವಾಗಿ‌ ಚಲಿಸುತ್ತಲೇ ಇರುತ್ತದೆ.

ಹೀಗೆ ಚಲಿಸುವಾಗ ಅದು ನೈಸರ್ಗಿಕವಾಗಿ ಶುದ್ಧೀಕರಣಗೊಳ್ಳುತ್ತದೆ. ಇದರಿಂದ ನೀರಿನಲ್ಲಿ ಉಪ್ಪಿನಂಶ ಹೆಚ್ಚಾಗದಂತೆ ( Salinity ) ತಡೆದು, ಬೆಳೆಗೆ ಸಿಹಿನೀರನ್ನು ಒದಗಿಸಲು ಸಾಧ್ಯ ವಾಗುತ್ತದೆ. ಮರುಭೂಮಿಯಲ್ಲಿ ಮಳೆ ಬಂದರೆ ಅದು ರಾಕ್ಷಸ ಸ್ವರೂಪದಲ್ಲಿ ಬರುತ್ತದೆ. ಒಣಗಿದ ಭೂಮಿಗೆ ನೀರು ಹೀರುವ ಶಕ್ತಿ ಇರುವುದಿಲ್ಲ, ಹೀಗಾಗಿ ನೀರು ರಭಸ ವಾಗಿ ಹರಿದು ಸಿಕ್ಕಿದ್ದನ್ನೆಲ್ಲ ಕೊಚ್ಚಿಕೊಂಡು ಹೋಗುತ್ತದೆ.

ಶೈಜಾಫ್ ಅಣೆಕಟ್ಟು ಈ ರಭಸದ‌ ಪ್ರವಾಹಕ್ಕೆ ‘ಬ್ರೇಕ್’ ಹಾಕಿದಂತೆ ಕೆಲಸ ಮಾಡುತ್ತದೆ. ನದಿಪಾತ್ರದ ಅಡಿಯಲ್ಲಿರುವ ಈ ತಡೆಗೋಡೆ, ನೀರಿನ ವೇಗವನ್ನು ತಗ್ಗಿಸಿ, ಅದು ನಿಧಾನ ವಾಗಿ ಭೂಮಿಯೊಳಗೆ ಇಳಿಯುವಂತೆ ಮಾಡುತ್ತದೆ. ಇದರಿಂದ ಮಣ್ಣಿನ ಸವಕಳಿ ತಪ್ಪುತ್ತದೆ. ನಂಬಿದರೆ ನಂಬಿ, ಈ ಮರುಭೂಮಿಯ ಮಧ್ಯೆ ಈ ಅಣೆಕಟ್ಟಿನ ನೀರನ್ನು ಬಳಸಿ ಅಲಂಕಾರಿಕ ಮೀನುಗಳನ್ನು (Ornamental Fish) ಬೆಳೆಸಿ ಯುರೋಪ್‌ಗೆ ರಫ್ತು ಮಾಡ ಲಾಗುತ್ತದೆ.

ದೊಡ್ಡ ಅಣೆಕಟ್ಟುಗಳಿಗೆ ಹೂಳು ತೆಗೆಯಲು (Desilting) ಕೋಟ್ಯಂತರ ರುಪಾಯಿ ಖರ್ಚಾ‌ ಗುತ್ತದೆ. ಆದರೆ ಶೈಜಾಫ್ ಅಣೆಕಟ್ಟಿನಲ್ಲಿ ಹೂಳಿನ ಸಮಸ್ಯೆ ಇಲ್ಲ. ಏಕೆಂದರೆ ನದಿ ಪಾತ್ರದ ಮೇಲ್ಭಾಗದಲ್ಲಿ ನೀರು ಸಹಜವಾಗಿ ಹರಿಯುವುದರಿಂದ, ಹೂಳು ತಾನಾಗಿಯೇ ಮುಂದೆ ಸಾಗುತ್ತದೆ. ಕೇವಲ ಶುದ್ಧನೀರು ಮಾತ್ರ ಮರಳಿನ ಅಡಿಯಲ್ಲಿ ಶೇಖರಣೆ ಯಾಗುತ್ತದೆ.

ಹೀಗಾಗಿ ಇದನ್ನು ನಿರ್ವಹಣೆ ಮಾಡುವುದು ತುಂಬಾ ಸುಲಭ ಮತ್ತು ಅಗ್ಗ. ನಮ್ಮ ದೇಶದ ರಾಜಸ್ಥಾನ, ಗುಜರಾತಿನ ಕಛ್ ಪ್ರದೇಶ ಮತ್ತು ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ (ರಾಯಚೂರು, ಕೊಪ್ಪಳ) ಬೇಸಿಗೆಯಲ್ಲಿ ಉಷ್ಣಾಂಶ 45 ಡಿಗ್ರಿ ದಾಟುತ್ತದೆ.

ನಮ್ಮಲ್ಲಿ ಕೆರೆಗಳಿಗೆ ನೀರು ತುಂಬಿಸಿದರೂ, ಏಪ್ರಿಲ್-ಮೇ ತಿಂಗಳಲ್ಲಿ ಅರ್ಧದಷ್ಟು ನೀರು ಆವಿಯಾಗಿ ಹೋಗುತ್ತದೆ.‌ ಇಸ್ರೇಲಿನ ಈ ‘ಸ್ಯಾಂಡ್ ಡ್ಯಾಮ’ ಅಥವಾ ‘ನೆಲದಡಿಯ ಅಣೆಕಟ್ಟು’ ಮಾದರಿಯನ್ನು ನಮ್ಮ ಹಳ್ಳ-ಕೊಳ್ಳಗಳಿಗೆ ಅಳವಡಿಸಿದರೆ, ಬೇಸಿಗೆಯಲ್ಲೂ ಬತ್ತದ ಅಂತರ್ಜಲವನ್ನು ನಾವು ಹೊಂದಬಹುದು.

ಈಗಾಗಲೇ ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಇಂಥ ಪ್ರಯೋಗಗಳು ನಡೆದಿವೆ. ಆದರೆ ಇಸ್ರೇಲ್ ಮಾದರಿಯ ಬೃಹತ್ ಯೋಜನೆಗಳು ಇನ್ನೂ ಬರಬೇಕಿದೆ. ಶೈಜಾಫ್ ಅಣೆಕಟ್ಟು ಮನುಷ್ಯನು ಪ್ರಕೃತಿಯ ವಿರುದ್ಧ‌ ಹೋರಾಡದೇ, ಪ್ರಕೃತಿಯ ನಿಯಮಗಳನ್ನೇ ಬಳಸಿಕೊಂಡು ಹೇಗೆ ಗೆಲ್ಲಬಹುದು ಎಂಬುದಕ್ಕೆ ಸಾಕ್ಷಿ.

ಇತಿಹಾಸ ಸಾರುವ ರಸ್ತೆಗಳು

ಯಾವುದೇ ನಗರದ ಇತಿಹಾಸ, ಪರಂಪರೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಮಾರ್ಗವೆಂದರೆ, ಆ ನಗರದ ಪ್ರಮುಖ ಬೀದಿ ಅಥವಾ ರಸ್ತೆಗಳಿಗೆ ಯಾರ ಹೆಸರನ್ನಿಟ್ಟಿದ್ದಾರೆ ಎಂಬುದನ್ನು ತಿಳಿಯುವುದು. ಯಾರ ಹೆಸರನ್ನಿಟ್ಟಿದ್ದಾರೋ ಅವರ ಬಗ್ಗೆ ತಿಳಿದುಕೊಂಡರೆ ಆ ನಗರ ಅಥವಾ ದೇಶದ ಇತಿಹಾಸ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ.

ಇಸ್ರೇಲಿನ ಟೆಲ್ ಅವಿವ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಇಳಿದರೆ, ‘ಬೆನ್ ಗುರಿಯನ್’ ಅವರ ಹೆಸರು ಕಾಣುತ್ತದೆ. ಯಾರು ಬೆನ್ ಗುರಿಯನ್? ದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರನ್ನಿಟ್ಟಿದ್ದಾರೆ ಅಂದ್ರೆ ಅವರು ಪ್ರಮುಖ ವ್ಯಕ್ತಿಯಾಗಿರಲೇಬೇಕು ತಾನೇ? ಬೆನ್ ಗುರಿಯನ್ ಇಸ್ರೇಲ್‌ನ ಸ್ಥಾಪಕರಲ್ಲಿ ಒಬ್ಬರು ಮತ್ತು ಅದರ ಮೊದಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು.

ಬ್ರಿಟಿಷರ ಅಧಿಕಾರ ಕೊನೆಗೊಂಡ ನಂತರ, ಮೇ ೧೪, 1948ರಂದು ಇಸ್ರೇಲ್ ರಾಜ್ಯದ ಸ್ವಾತಂತ್ರ್ಯವನ್ನು ಘೋಷಿಸಿದವರು ಅವರೇ ಮತ್ತು ಅವರೇ ಆ ಘೋಷಣೆಯ ದಾಖಲೆಗೆ ಸಹಿ ಮಾಡಿದ ಮೊದಲ ವ್ಯಕ್ತಿ. ಇಸ್ರೇಲ್‌ನ ಶುಷ್ಕವಾದ ದಕ್ಷಿಣ ಭಾಗದ ನೆಗೆವ್ ಮರುಭೂಮಿಯನ್ನು ಅಭಿವೃದ್ಧಿಪಡಿಸಿ ಅಲ್ಲಿ ಜನರು ವಾಸಿಸುವಂತಾಗಬೇಕು ಎಂದು ಅವರು ಕನಸು ಕಂಡಿದ್ದರು.

ನಿವೃತ್ತಿಯ ನಂತರ, ಅವರು ಪ್ರೇರಣೆಯಾಗಿ ಕಾರ್ಯನಿರ್ವಹಿಸಲು ಸ್ವತಃ ಅಲ್ಲಿನ ಸ್ಡೆ ಬೋರ್ಕ ಕಿಬೂತ್ಸ್ (ಸಮುದಾಯ ವಸಾಹತು) ಗೆ ತೆರಳಿದರು. ಅವರು ಅಧಿಕಾರದಲ್ಲಿದ್ದಾ ಗಲೂ ಬಹಳ ಸರಳ ಜೀವನ ನಡೆಸುತ್ತಿದ್ದರು. ರಾಜಕೀಯ ನಾಯಕರಾಗಿದ್ದರೂ, ಅವರಿಗೆ ಯೋಗಾಭ್ಯಾಸದಲ್ಲಿ ಆಸಕ್ತಿ ಇತ್ತು. ಅವರಿಗೆ ಮಹಾತ್ಮ ಗಾಂಧಿಯವರ ಜತೆ ಉತ್ತಮವಾದ ಗೆಳೆತನವಿತ್ತು.

ಜೆರುಸಲೆಮ್‌ನ ಬೀದಿಗಳ ಹೆಸರುಗಳು ಆ ನಗರದ ಇತಿಹಾಸವನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದನ್ನು ಗಮನಿಸಬೇಕು. ಜೆರುಸಲೆಮ್ ಒಂದು ಪುರಾತನ ನಗರ, ಅದರ ಪ್ರತಿ ಯೊಂದು ಮೂಲೆಯೂ ಸಾವಿರಾರು ವರ್ಷಗಳ ಇತಿಹಾಸವನ್ನು ಹೇಳುತ್ತದೆ. ಅಲ್ಲಿನ ಬೀದಿಗಳ ಹೆಸರುಗಳು ಆ ನಗರದ ವೈವಿಧ್ಯಮಯ ಮತ್ತು ಸಂಕೀರ್ಣ ಇತಿಹಾಸವನ್ನು ಬಿಚ್ಚಿಡುವ ನಕ್ಷೆಯಾಗಿವೆ.

ಈ ಹೆಸರುಗಳು ವಿವಿಧ ಸಾಮ್ರಾಜ್ಯಗಳು, ಧರ್ಮಗಳು ಮತ್ತು ಸಂಸ್ಕೃತಿಗಳು ನಗರದ ಮೇಲೆ ಬೀರಿದ ಪ್ರಭಾವವನ್ನು ಅನಾವರಣಗೊಳಿಸುತ್ತವೆ. ಅನೇಕ ಬೀದಿಗಳು ಬೈಬಲ್‌ನಲ್ಲಿ ಉಖಗೊಂಡಿರುವ ಪ್ರಮುಖ ವ್ಯಕ್ತಿಗಳು, ಘಟನೆಗಳು ಮತ್ತು ಸ್ಥಳಗಳ ಹೆಸರನ್ನು ಹೊಂದಿವೆ.

ಇದು ಜೆರುಸಲೆಮ್‌ಗೆ ಯಹೂದಿ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಇರುವ ಕೇಂದ್ರ ಸ್ಥಾನ ವನ್ನು ಎತ್ತಿ ತೋರಿಸುತ್ತದೆ. ಉದಾಹರಣೆಗೆ, ಕಿಂಗ್ ಡೇವಿಡ್ ಸ್ಟ್ರೀಟ್ (ರೆಹೋವ್ ಹಮೆಲೆಕ್ ಡೇವಿಡ್). ಇಸ್ರೇಲ್ ರಾಜಧಾನಿಯನ್ನಾಗಿ ಜೆರುಸಲೆಮ್ ಅನ್ನು ಸ್ಥಾಪಿಸಿದ ಬೈಬಲ್‌ನ ರಾಜ ಡೇವಿಡ್‌ನ ಹೆಸರನ್ನು ಈ ಬೀದಿಗೆ ಇಡಲಾಗಿದೆ.

ಹಾಗೆಯೇ ಮೌಂಟ್ ಝಿಯೋನ್ (ಹರ್ ಟ್ಸಿಯೋನ್). ಇದು ಕೇವಲ ಬೀದಿಯ ಹೆಸರಲ್ಲ, ಆದರೆ ಜೆರುಸಲೆಮ್‌ನ ಇತಿಹಾಸದಲ್ಲಿ ಒಂದು ಪ್ರಮುಖ ಭೌಗೋಳಿಕ ಮತ್ತು ಧಾರ್ಮಿಕ ಸ್ಥಳವಾಗಿದೆ. ಇದರ ಹೆಸರು ಸಾಮಾನ್ಯವಾಗಿ ಬೈಬಲ್‌ನಲ್ಲಿ ಜೆರುಸಲೆಮ್‌ಗೆ ಪರ್ಯಾಯ ಪದವಾಗಿ ಬಳಕೆಯಾಗುತ್ತದೆ. ಹಾಗೆ ಹೆಝೆಕಿಯಾಹ್ ಸ್ಟ್ರೀಟ್.

ಅಸ್ಸಿರಿಯನ್ ಬೆದರಿಕೆಯ ಸಮಯದಲ್ಲಿ ಯಹೂದಿಯ ರಾಜನಾಗಿದ್ದ ಹೆಝೆಕಿಯಾಹ್‌ನ ಹೆಸರನ್ನು ಈ ಬೀದಿಗೆ ಇಡಲಾಗಿದೆ. ಆತ ನಗರದ ನೀರು ಸರಬರಾಜನ್ನು ಸುಭದ್ರಗೊಳಿ‌ ಸಲು ಸೈಲೋಂಸುರಂಗವನ್ನು ನಿರ್ಮಿಸಿದ.

ಆಟೋಮನ್ ಸಾಮ್ರಾಜ್ಯವು 400 ವರ್ಷಗಳ ಕಾಲ (1517-1917) ಜೆರುಸಲೆಮ್ ಅನ್ನು ಆಳಿತು. ಅವರ ಪ್ರಭಾವವು ಇಂದಿಗೂ ಪೂರ್ವ ಜೆರುಸಲೆಮ್ ಮತ್ತು ಹಳೆಯ ನಗರದ ಕೆಲವು ಬೀದಿಗಳಲ್ಲಿ ಕಾಣಸಿಗುತ್ತದೆ. ಉದಾಹರಣೆಗೆ, ಸುಲ್ತಾನ್ ಸುಲೈಮಾನ್ ಸ್ಟ್ರೀಟ್ (ಶರಿಯಾ ಅಲ್-ಸುಲ್ತಾನ್ ಸುಲೈಮಾನ್). ೧೬ನೇ ಶತಮಾನದಲ್ಲಿ ನಗರದ ಕೋಟೆ ಗೋಡೆಗಳನ್ನು ಪುನರ್‌ ನಿರ್ಮಿಸಿದ ಆಟೋಮನ್ ಸುಲ್ತಾನ್ ಸುಲೈಮಾನ್ ದಿ ಮ್ಯಾಗ್ನಿಫಿ‌ ಸೆಂಟ್‌ನ ಹೆಸರನ್ನು ಈ ಬೀದಿಗೆ ಇಡಲಾಗಿದೆ. ಇದು ಪೂರ್ವ ಜೆರುಸಲೆಮ್‌ನ ಪ್ರಮುಖ ರಸ್ತೆ ಯಾಗಿದ್ದು, ಡಮಾಸ್ಕಸ್ ಗೇಟ್‌ಗೆ ಹೋಗುತ್ತದೆ.

ಆಟೋಮನ್ ಸಾಮ್ರಾಜ್ಯದ ನಂತರ, ಬ್ರಿಟಿಷರು 1917ರಿಂದ 1948ರವರೆಗೆ ಜೆರುಸಲೆಮ್ ಅನ್ನು ನಿಯಂತ್ರಿಸಿದರು. ಈ ಅವಧಿಯ ಬೀದಿ ಹೆಸರುಗಳು ಅವರ ಆಡಳಿತ ಮತ್ತು ಪ್ರಭಾವವನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ, ಜಾಫ್ಟಾ ರೋಡ್ (ಡೆರೆಚ್ ಯಾಫೊ). ಇದು ಜೆರುಸಲೆಮ್ ಅನ್ನು ಜಾಮ್ ಬಂದ‌ರಿಗೆ ಸಂಪರ್ಕಿಸುವ ಐತಿಹಾಸಿಕ ರಸ್ತೆಯಾಗಿದೆ.

ಬ್ರಿಟಿಷರು ಇದನ್ನು ಆಧುನೀಕರಿಸಿ, ನಗರದ ಪ್ರಮುಖ ವಾಣಿಜ್ಯ ರಸ್ತೆಯನ್ನಾಗಿ ಮಾಡಿದರು. ಹಾಗೇ ಕಿಂಗ್ ಜಾರ್ಜ್ ಸ್ಟ್ರೀಟ್ (ರೆಹೋವ್ ಹಮೆಲೆಕ್ ಜಾರ್ಜ್). ಯುನೈಟೆಡ್ ಕಿಂಗ್‌ ಡಮ್‌ನ ರಾಜ ಐದನೇ ಜಾರ್ಜ್‌ನ ಹೆಸರನ್ನು ಈ ಬೀದಿಗೆ ಇಡಲಾಗಿದೆ. ಇದು ಜೆರುಸಲೆಮ್‌ ನ ಪ್ರಮುಖ ವಾಣಿಜ್ಯ ಬೀದಿಗಳಲ್ಲಿ ಒಂದಾಗಿದೆ.

1948ರಲ್ಲಿ ಇಸ್ರೇಲ್ ರಾಷ್ಟ್ರದ ಸ್ಥಾಪನೆಯ ನಂತರ, ಸಯೋನಿಸಂ ಮತ್ತು ಆಧುನಿಕ ಇಸ್ರೇಲ್ ಇತಿಹಾಸಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಘಟನೆಗಳ ಹೆಸರನ್ನು ಹಲವು ಹೊಸ ಬೀದಿಗಳಿಗೆ ಇಡಲಾಗಿದೆ. ಉದಾಹರಣೆಗೆ, ಹೆರ್ಝಲ್ ಬೌಲೆವಾರ್ಡ್ (ಸ್ಡೆರೋಟ್ ಹೆರ್ಝಲ). ಆಧುನಿಕ ರಾಜಕೀಯ ಸಯೋನಿಸಂನ ದಾರ್ಶನಿಕ ಥಿಯೋಡೋರ್ ಹೆರ್ಝಲ್‌ನ ಹೆಸರನ್ನು ಈ ಪ್ರಮುಖ ಬೌಲೆವಾರ್ಡ್‌ಗೆ ಇಡಲಾಗಿದೆ. ಇದು ಹೆರ್ಝಲ್ ಪರ್ವತಕ್ಕೆ ದಾರಿ ಮಾಡಿಕೊಡುತ್ತದೆ.