Naveen Sagar Column: 94ರ ಈ ಯುವ ನಿರ್ದೇಶಕನ ಹೆಸರು ಸಿಂಗೀತಂ !
ಇಂದು ಸಿಂಗೀತಂ ಶ್ರೀನಿವಾಸರಾವ್ ಅವರನ್ನು ನೆನಪಿಸಿಕೊಳ್ಳಲು ಘನವಾದ ಕಾರಣವಿದೆ. ಬರುವ ಶುಕ್ರವಾರ ಅಂದರೆ ಇದೇ ಜೂನ್ ಹನ್ನೊಂದಕ್ಕೆ ಸಿಂಗೀತಂ ನಿರ್ದೇಶನದ ಅರವತ್ತೊಂದನೇ ಚಿತ್ರ ತೆರೆ ಕಾಣಲಿದೆ. ಅರವತ್ತೊಂದನೇ ಚಿತ್ರ ಎಂಬುದರನು ವಿಶೇಷ ಅಂತೀರಾ? ಇದನ್ನು ಅವರು ನಿರ್ದೇಶಿಸಿ ರೋದು ತಮ್ಮ 94ನೆಯ ವಯಸ್ಸಿನಲ್ಲಿ! ಹೌದು.
-
ಪದಸಾಗರ
ಸಿಂಗೀತಂ ಶ್ರೀನಿವಾಸ ರಾವ್. ಈ ಹೆಸರು ಮೊದಲ ಬಾರಿ ನೋಡಿದ್ದು ಹಾಲು ಜೇನು ಚಿತ್ರದ ಪೋಸ್ಟರ್‌ನಲ್ಲಿ. ಇದೇನಿದು ಹಿಂಗಿದೆ ಹೆಸರು.. ಪತ್ರಿಕೆಯಲ್ಲಿ ತಪ್ಪಾಗಿ ಪ್ರಿಂಟಾಗಿದೆಯಾ ಅಂತ ತಲೆ ಕೆರೆದುಕೊಂಡಿದ್ದೆ. ಆದರೆ ಸಿನಿಮಾ ಪರದೆಯ ಮೇಲೂ ಹೆಸರು ಹಾಗೆಯೇ ಮೂಡಿತ್ತು. ನನಗಿನ್ನೂ ಆಗ ಐದು ವರ್ಷವಷ್ಟೇ.
ಸಿನಿಮಾಗೆ ನನ್ನನ್ನು ಕರೆದುಕೊಂಡು ಹೋಗಿದ್ದವರಿಗೆ ಬಹುಶಃ ನಿರ್ದೇಶಕರ ಹೆಸರೆಲ್ಲ ಗಮನಿಸುವ ಆಲೋಚನೆಯೂ ಬಂದಿರಲಿಕ್ಕಿಲ್ಲ. ಅವರಿಗದು ರಾಜಕುಮಾರನ ಸಿನಿಮಾ ಅಷ್ಟೆ. ನಾನೊಂದು ವಿಚಿತ್ರ ತಳಿ. ಆ ವಯಸ್ಸಿನ ಹೆಸರುಗಳು, ಪದಗಳು ನನ್ನಲ್ಲಿ ಯೋಚನೆಗಳನ್ನು ಹುಟ್ಟಿಸುತ್ತಿದ್ದವು. ಕಾಗುಣಿತ ವ್ಯಾಕರಣಗಳನ್ನೆಲ್ಲ ಶಾಸ್ತ್ರೀಯವಾಗಿ ಕಲಿಯುವ ವಯಸ್ಸೇ ಮುಟ್ಟಿಲ್ಲದಿದ್ದರೂ ದೋಷ ಗಳು ಗೊತ್ತಾಗುತ್ತಿದ್ದವು. ಸಂಗೀತಂ ಬರೆಯೋಕೆ ಸಿಂಗೀತಂ ಬರೆದು ಬಿಟ್ಟಿದ್ದಾರೆ ಎಂದು ಮನದೊಳಗೆ ಮೂಕರೋಧನೆ ಶುರುವಾಗಿಬಿಟ್ಟಿತ್ತು. ಆ ಹೆಸರಿರೋದೇ ಹಾಗೆಂದು ಒಪ್ಪಿಕೊಳ್ಳಲು ಐದಾರು ವರ್ಷಗಳೇ ಹಿಡಿದವು.
ಆದರೆ ಆ ಹೆಸರು ವರ್ಷಗಳು ಉರುಳಿದಂತೆ ಒಂದು ಆಕರ್ಷಣೆ ಮತ್ತು ಅಭಿಮಾನ ಮೂಡಿಸಿ ಬಿಟ್ಟಿತು. ಕಾರಣ ಆ ವ್ಯಕ್ತಿ ಕೊಟ್ಟ ಸಿನಿಮಾಗಳು. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಸಿನಿಮಾ ಅಂದರೆ ಹೊಸತನ ತುಂಬಿದ ಕಥೆ, ಸದಭಿರುಚಿಯ ತಿಳಿ ಹಾಸ್ಯ ಮತ್ತು ಗುಪ್ತಗಾಮಿನಿ ಯಂತೆ ಹರಿಯುವ ಒಂದು ಸಂದೇಶ ಇವೆಲ್ಲದರ ಜತೆಗೆ ಅತ್ಯುತ್ತಮ ಹಾಡುಗಳ ಒಂದು ಆಲ್ಬಂ ಖಚಿತ ಎಂದಾಗಿಬಿಟ್ಟಿತು.
ಇಂದು ಸಿಂಗೀತಂ ಶ್ರೀನಿವಾಸರಾವ್ ಅವರನ್ನು ನೆನಪಿಸಿಕೊಳ್ಳಲು ಘನವಾದ ಕಾರಣವಿದೆ. ಬರುವ ಶುಕ್ರವಾರ ಅಂದರೆ ಇದೇ ಜೂನ್ ಹನ್ನೊಂದಕ್ಕೆ ಸಿಂಗೀತಂ ನಿರ್ದೇಶನದ ಅರವತ್ತೊಂದನೇ ಚಿತ್ರ ತೆರೆ ಕಾಣಲಿದೆ. ಅರವತ್ತೊಂದನೇ ಚಿತ್ರ ಎಂಬುದರನು ವಿಶೇಷ ಅಂತೀರಾ? ಇದನ್ನು ಅವರು ನಿರ್ದೇಶಿಸಿರೋದು ತಮ್ಮ 94ನೆಯ ವಯಸ್ಸಿನಲ್ಲಿ! ಹೌದು.
ಇದನ್ನೂ ಓದಿ: Naveen Sagar Column: ಜೀವನಪಾಠ ಕಲಿಸುವ ಶಾಕ್ ಕೊಡುವ ಸ್ಟೋರಿಗಳು !
ಸಿಂಗೀತಂ ಅವರಿಗೀಗ 95 ವರ್ಷ. ಈ ವಯಸ್ಸಿನಲ್ಲಿ ಚಟುವಟಿಕೆಯಿಂದಿರುವ, ಆರೋಗ್ಯ ದಿಂದಿರುವ ಜೀವಗಳನ್ನು ನಾವು ಕಂಡಿರುವುದು ಬೆರಳೆಣಿಕೆಯಷ್ಟು ಮಾತ್ರ. ದೇವೇಗೌಡರು ತಮ್ಮ 93 ನೆಯ ವಯಸ್ಸಿನಲ್ಲೂ ತುಂಬಿದ ಸಭೆಯಲ್ಲಿ ಅಬ್ಬರಿಸುವುದನ್ನು, ರಾಜ್ಯಸಭೆಯಲ್ಲಿ ಅಂಕಿ ಅಂಶಗಳನ್ನು ಮುಂದಿಟ್ಟು ಮಾತಾಡುವುದನ್ನು, ದಶಕಗಳ ಹಿಂದಿನ ಇತಿಹಾಸವನ್ನು ಚೂರೂ ತಪ್ಪದಂತೆ ನೆನಪಿಸಿಕೊಳ್ಳುವುದನ್ನು ಕಂಡು ಅಚ್ಚರಿ ಪಟ್ಟಿದ್ದೇನೆ.
ಭೈರಪ್ಪನವರು 90 ರಲ್ಲಿದ್ದಾಗ ಅವರ ಮೆಮೋರಿ ಪರ್ವ ಕಂಡು ಇವರು ಈ ವಯಸ್ಸಲ್ಲೂ ಬುಕ್ ಬರೆದರೆ ಅಚ್ಚರಿ ಇಲ್ಲ ಅಂದುಕೊಂಡಿದ್ದೆ. ಸಾಲುಮರದ ತಿಮ್ಮಕ್ಕ, ಶಿವಕುಮಾರ ಸ್ವಾಮಿಗಳು ನಮಗೆ ದೈವಸ್ವರೂಪಿಗಳಂತೆ ಕಂಡದ್ದಿದೆ. ಅಡ್ವಾಣಿಯವರು ಶತಕದತ್ತ ಸಾಗುತ್ತಿರುವುದನ್ನು ನೋಡಿದ್ದೇವೆ. ಆಶಾ ಭೋಂಸ್ಲೆ ತೊಂಬತ್ತರ ಹತ್ತಿರ ಬರುವವರೆಗೂ ಹಾಡಿದ್ದು ಕಂಡಿದ್ದೇವೆ. ಆದರೆ ನಿರ್ದೇಶಕರೊಬ್ಬರು ಈ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಾರೆ ಎಂದು ಊಹಿಸಲೂ ಅಸಾಧ್ಯ. ಅಂಥ ಅಸಾಧ್ಯವನ್ನು ಸಾಧ್ಯವಾಗಿಸಿರುವುದು ಸಿಂಗೀತಂ.
ನಿಜಕ್ಕೂ ಅವರೇ ನಿರ್ದೇಶಿಸಿದ್ದಾರಾ ಅಥವಾ ದಾಖಲೆಗಾಗಿ ಹೆಸರು ಹಾಕಿಕೊಂಡು ಇನ್ಯಾರೋ ಕೆಲಸ ಮಾಡಿದ್ದಾರಾ ಎಂಬ ಅನುಮಾನ ಹುಟ್ಟಿದ್ದಂತೂ ಹೌದು. ಆದರೆ ಅವರ ಸಂದರ್ಶನಗಳನ್ನು ನೋಡಿದ ನಂತರ ಅನುಮಾನ ಪರಿಹಾರವಾಗಿ ಅಭಿಮಾನ ನೂರ್ಮಡಿಯಾಯಿತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಅಷ್ಟು ಫಿಟ್ ಅಂಡ್ ಫೈನ್ ಇರುವ ಸಿಂಗೀತಂ ಶತಕ ಪೂರೈಸುವುದರೊಳಗೆ ಇನ್ನೆರಡು ಚಿತ್ರ ನಿರ್ದೇಶಿಸಿದರೂ ಆಶ್ಚರ್ಯವಿಲ್ಲ.
ಅಂದಹಾಗೆ ಸಿಂಗೀತಂ ಅವರ ಹೊಸ ಚಿತ್ರದ ಹೆಸರು ಸಿಂಗ್ ಗೀತಂ. ಭಾರತ ಚಿತ್ರರಂಗ ಕಂಡಿರೋ ಅತ್ಯುತ್ತಮ ನಿರ್ದೇಶಕರ ಪಟ್ಟಿತಯಾರಿಸಿದರೆ ಸಿಂಗೀತಂ ಅವರ ಹೆಸರು ಪ್ರಾರಂಭದ ಹತ್ತರಂದಾಗಿ ಬರಬಹುದು. ಮನೋರಂಜನೆ ಮತ್ತು ಕಮರ್ಷಿಯಲ್ ಪರಿಧಿಯಲ್ಲಿಯೇ ಇದ್ದು ಅವರಷ್ಟು ಪ್ರಯೋಗ ಮಾಡಿದ ಮತ್ತು ಹೊಸತನಕ್ಕಾಗಿ ತುಡಿದ ಮತ್ತೊಬ್ಬ ನಿರ್ದೇಶಕ ಇರಲಿಕ್ಕಿಲ್ಲ.
ಸಿಂಗೀತಂ ಸಿನಿ ಜರ್ನಿಯೇ ವಿಶಿಷ್ಟ. ನಮ್ಮಪ್ಪ ಅಮ್ಮ ಹದಿಹರೆಯದಲ್ಲಿದ್ದಾಗ ತೆರೆ ಕಂಡ ಮಾಯಾ ಬಜಾರ್ ಚಿತ್ರಕ್ಕೆ ಸಿಂಗೀತಂ ಅಸಿಸ್ಟೆಂಟ್ ಡೈರೆಕ್ಟರ್ ಆಗುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟರು. ಪೌರಾಣಿಕ ಚಿತ್ರಗಳ ಮಾಯಾಬಜಾರ್ ಇಂದಿಗೂ ನಂಬರ್ ಒನ್ ಎಂಟರ್ಟೇನರ್. ಹತ್ತು ವರ್ಷಗಳ ನಂತರ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದ ಅವರು ಮೊದಲ ಚಿತ್ರ ನಿರ್ದೇಶಿಸಿದ್ದು ತೆಲುಗಿನಲ್ಲಿ. ಅವರ ಬೇರುಗಳು ಕನ್ನಡದಲ್ಲಿದ್ದವು ಎಂದು ಕೆಲವು ಮೂಲಗಳು ಹೇಳುತ್ತವೆ ಯಾದರೂ, ಅವರು ತೆಲುಗರು. ತಮಿಳಿನಲ್ಲಿ ಅವರು ನಿರ್ದೇಶಿಸಿದ ಮೊದಲ ಚಿತ್ರಕ್ಕೇ ಪ್ರಶಸ್ತಿ ಬಂತು.
ಸಿಂಗೀತಂ ನಿರ್ದೇಶನದ ಚಿತ್ರಗಳ ಪಟ್ಟಿ ನೋಡ್ತಾ ಇದ್ರೇನೇ ಒಂದು ಮುಗುಳ್ನಗು ಮೂಡುತ್ತದೆ. ಈ ವ್ಯಕ್ತಿ ಕೈಹಾಕದ ಜಾನರ್ ಇಲ್ಲ. ಎಂಬತ್ತರ ದಶಕದ ಬಾಲಕೃಷ್ಣ ನಿರ್ದೇಶನದಲ್ಲಿ ಆದಿತ್ಯ 369 ಎಂಬ ಸೈಂಟಿಫಿಕ್ ಫಿಕ್ಷನ್ ನಿರ್ದೇಶಿಸಿ ಅದರಲ್ಲಿ ಟೈಮ್ ಟ್ರಾವೆಲ್ ಕಾನ್ಸೆ ತಂದವರು ಸಿಂಗೀತಂ. ಅದರ ಬೆನ್ನ ಭೈರವದ್ವೀಪಂ ಎಂಬ ಫ್ಯಾಂಟಸಿ ನಿರ್ದೇಶಿಸಿದರು.
ಕಮಲ ಹಾಸನ್ ಜತೆಗಿನ ಅವರ ಜರ್ನಿಯಂತೂ ಬೇರೆಯದೇ ಅಧ್ಯಾಯ. ಕಮಲಹಾಸನ್ ನಾಲ್ಕು ಪಾತ್ರಗಳಲ್ಲಿ ನಟಿಸಿದ ಮೈಕೆಲ್ ಮದನ್ ಕಾಮರಾಜನ್ ಥರದ ಹಾಸ್ಯ ಚಿತ್ರ ಮತ್ತು ತಾಂತ್ರಿಕ ಉತ್ಕೃಷ್ಟತೆಯ ಚಿತ್ರ, ಆ ಕಾಲಕ್ಕೆ ಮಾತ್ರವಲ್ಲ ಇಂದಿಗೂ ಗ್ರೇಟ್ ಅನಿಸುತ್ತದೆ. ಕಮಲಹಾಸನ್‌ರನ್ನು ಮೂರಡಿಯ ಕುಬ್ಜನಂತೆ ತೋರಿಸಿದ್ದ ಅಪೂರ್ವ ಸಹೋದರರ್ಗಳ್ ಚಿತ್ರದ ಹಿಂದಿನ ಮೆದುಳು ಸಿಂಗೀತಂ ಅವರದ್ದೇ. ಆದರೆ ಕಮಲ್‌ಗೆ ಸಿಕ್ಕಷ್ಟು ಪ್ರಚಾರ ಸಿಂಗೀತಂಗೆ ಸಿಕ್ಕಿರಲಿಲ್ಲ. ಆದರೇನಂತೆ, ಅಂದಿನ ಪ್ರತಿ ನಟನೂ ಸಿಂಗೀತಂ ತಮಗೊಂದು ಚಿತ್ರ ನಿರ್ದೇಶಿಸಲಿ ಎಂದು ಹಂಬಲಿಸುವಂತಿರು ತ್ತಿತ್ತು ಅವರ ಕೈಚಳಕ. ಕಥೆಯೇ ಹೀರೋ ಎಂಬುದನ್ನು ಒಪ್ಪುವವರೆಲ್ಲರಿಗೂ ಸಿಂಗೀತಂ ಅಚ್ಚು ಮೆಚ್ಚೆನಿಸುತ್ತಿದ್ದರು.
ಅದೇ ಕಾರಣಕ್ಕೆ ರಾಜ್ ಕುಮಾರ್ ಅಷ್ಟು ಗಟ್ಟಿಯಾಗಿ ಸಿಂಗೀತಂ ಅವರನ್ನು ಹಿಡಿದು ಕೊಂಡು ಬಿಟ್ಟರು. ಅವರ ಕಾಂಬಿನೇಷನ್‌ನಲ್ಲಿ ಬಂದ ಪ್ರತಿ ಸಿನಿಮಾವೂ ವಿಭಿನ್ನ. ಕ್ಯಾನ್ಸರ್ ಪೀಡಿತ ಹೆಂಡತಿ ಜತೆಗಿನ ಟ್ರಾಜಿಕ್ ಲವ್ ಸ್ಟೋರಿ ಇರುವ ಹಾಲು ಜೇನು, ಪತ್ರಕರ್ತನ ಕಥೆ ಹೊಂದಿದ್ದ ಜ್ವಾಲಾ ಮುಖಿ, ಪುನರ್ಜನ್ಮದ ಕಥೆ ಹೊಂದಿದ್ದ ಶ್ರಾವಣ ಬಂತು, ಮರ್ಡರ್ ಮಿಸ್ಟರಿ ಕೋರ್ಟ್ ಡ್ರಾಮಾ ಹೊಂದಿದ್ದ ಚಲಿಸುವ ಮೋಡಗಳು, ಅವಳಿ ಸೋದರರ ಚಂದಾಮಾಮಾ ಕಥೆಯಂಥ ಎರಡು ನಕ್ಷತ್ರಗಳು, ನಿರುದ್ಯೋಗ ಸಮಸ್ಯೆಯ ಸುತ್ತ ಹೆಣೆದ ವಿಡಂಬನಾತ್ಮಕ ಚಿತ್ರ ಭಾಗ್ಯದಾ ಲಕ್ಷ್ಮಿ ಬಾರಮ್ಮ, ರಾಜ್ ಅವರ ಇನ್ನೂರನೆಯ ಚಿತ್ರ ದೇವತಾ ಮನುಷ್ಯ ಎಲ್ಲವೂ ಒಂದಕ್ಕಿಂತ ಒಂದು ಚೆಂದದ ಸಿನಿಮಾಗಳೇ.
ಇದೇ ನಂಬಿಕೆಯಿಂದಲೇ ರಾಜ ಕುಮಾರ್ ತಮ್ಮ ಪುತ್ರರಿಬ್ಬರ ಚೊಚ್ಚಲ ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ಸಿಂಗೀತಂಗೇ ಒಪ್ಪಿಸಿದ್ದು. ಚಿರಂಜೀವಿ ಸುಧಾಕರ್ ಸೋತರೂ ಒಂದು ಉತ್ತಮ ಚಿತ್ರವೇ ಆಗಿತ್ತು. ಶಿವಣ್ಣನ ಆನಂದ್ ಇವತ್ತಿಗೂ ನೋಡಬಲ್ ಸಿನಿಮಾವೇ. ರಾಜ್ ಕುಟುಂಬದ ಎಲ್ಲ ನಾಲ್ವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ಬೆರಳೆಣಿಕೆಯಷ್ಟು ನಿರ್ದೇಶಕರಿಗೆ ಮಾತ್ರ. ಅವರಲ್ಲಿ ಪ್ರಮುಖರು ಸಿಂಗೀತಂ.
ಕುಮಾರ್ ಬಂಗಾರಪ್ಪ ನಟನೆಯ ಕ್ಷೀರಸಾಗರ ಎಂಬ ಕ್ಯೂಟ್ ಚಿತ್ರ ಕೊಟ್ಟವರು ಸಿಂಗೀತಂ. ಅವರದ್ದೇ ಬೆಳ್ಳಿಯಪ್ಪ ಬಂಗಾರಪ್ಪ ಚಿತ್ರಕ್ಕೆ ಕಥೆ ಕೊಟ್ಟಿದ್ದು ಅವರೇ. ಬಹುಶಃ ಕನ್ನಡದಲ್ಲಿ ಅವರು ಕೊಟ್ಟ ಏಕೈಕ ಕೆಟ್ಟ ಚಿತ್ರ ಅಂದರೆ ಅದು ಮೇಕಪ್. ಸಿಂಗೀತಂ ಅವರನ್ನು ಇಂಡಿಯನ್ ಸಿನಿಮಾ ನೆನಪಿಟ್ಟುಕೊಳ್ಳುವುದು ಪುಷ್ಪಕ ವಿಮಾನ ಚಿತ್ರದಿಂದ. ಇದನ್ನುಅವರು ಮೂಕಿ ಚಿತ್ರ ಅಂತ ಹೇಳುವುದಿಲ್ಲ. ಸಂಭಾಷಣೆರಹಿತ ಸಿನಿಮಾ ಅನ್ನುತ್ತಾರೆ. ಭಾರತೀಯ ಸಿನಿಮಾಗಳಲ್ಲಿ ಪುಷ್ಪಕ ವಿಮಾನಕ್ಕೊಂದು ವಿಶೇಷ ಸ್ಥಾನವಿದೆ. ಮಾತಿಲ್ಲದೆ ಸಿನಿಮಾನೇ ಇಲ್ಲ ಎಂಬಂತಾಗಿದ್ದ ಕಾಲದಲ್ಲಿ ಹೀಗೂ ಸಿನಿಮಾ ಮಾಡಬಹುದು ಎಂದು ತೋರಿಸಿ ಗೆದ್ದಿದ್ದು ಸಿಂಗೀತಂ ಅಗ್ಗಳಿಕೆ. ನನ್ನ ನೂರನೆಯ ಚಿತ್ರ ಸಿಂಗೀತಂ ಅವರೇ ನಿರ್ದೇಶಿಸಬೇಕು ಎಂದು ಹಟ ಹಿಡಿದು ಸಾಧಿಸಿದ್ದರು ಕಮಲ.
ಕಾಲಿಲ್ಲದ ಹೆಣ್ಮಗಳೊಬ್ಬಳು ನೃತ್ಯಗಾತಿಯಾಗಿ ಪ್ರೂವ್ ಮಾಡುವ ವಿಶೇಷ ಕಥೆಯ ಮಯೂರಿ ಚಿತ್ರ ಯಾರು ತಾನೇ ಮರೆಯೋಕೆ ಸಾಧ್ಯ? ಹದಿನಾಲ್ಕು ನಂದಿ ಪ್ರಶಸ್ತಿಗಳನ್ನು ದೋಚಿತ್ತು ಆ ಚಿತ್ರ. 1994 ರಲ್ಲಿ ತೆರೆಕಂಡ ಮ್ಯಾಗರ್ಳಿ ಮಟ್ಟಂ ಎಂಬ ಚಿತ್ರದಲ್ಲಿ ಮೀ ಟೂ ಕಾನ್ಸೆಪ್ಟನ್ನು ತಮ್ಮ ಚಿತ್ರದ ಕಥಾವಸ್ತು ಮಾಡಿದ್ದರು.
ಎಪ್ಪತ್ತರ ವಯಸ್ಸಿನಲ್ಲಿ ಅನಿಮೇಶನ್ ವಿದ್ಯೆ ಕಲಿತು ಸನ್ ಆಫ್ ಅದೀನ್ ಎಂಬ ಸಂಪೂರ್ಣ ಅನಿಮೇಷನ್ ಚಿತ್ರ ನಿರ್ದೇಶಿಸುತ್ತಾರೆ ಅಂದರೆ ಇವರ ಸಿನಿಮಾ ಹುಚ್ಚು, ಕಲಿಕೆಯ ಆಸಕ್ತಿ ಯಾವ ಮಟ್ಟದ್ದಿರಬಹುದು. ಕಂಟೆಂಟ್ ವಿಷಯದಲ್ಲಿ ಇವರು ಎಷ್ಟು ಮುಂದಿದ್ದರು ಅನ್ನೋದಕ್ಕೆ ಇವೆಲ್ಲ ಕೆಲವ ಉದಾಹರಣೆಗಳಷ್ಟೆ.
ತೀರಾ ಇತ್ತೀಚಿನ ಪ್ರಭಾಸ್ ಚಿತ್ರ ಕಲ್ಕಿ ೨೮೯೮ಎಡಿ ಮಾಡುವಾಗ ಇವರಿಂದ ಹಲವಾರು ಸಲಹೆ ಪಡೆದಿತ್ತು ಚಿತ್ರ ತಂಡ. ವಿದೇಶದ ಪ್ರತಿಷ್ಠಿತ ಸಿನಿಮಾ ಇನ್‌ಸ್ಟಿಟ್ಯೂಟ್ಸಿಂ ಗೀತಂ ಶ್ರೀನಿವಾಸ್ ರಾವ್ ಅವರ ಅನುಭವಗಳನ್ನು ಪಡೆಯುತ್ತದೆ ಅಂದ್ರೆ ಅವರ ಪ್ರತಿಭೆಯ ಅಗಾಧತೆ ಅರ್ಥವಾಗುತ್ತದೆ. ಸಿಂಗೀತಂ ಚಿತ್ರಗಳ ಶೈಲಿಯೇ ಭಿನ್ನ. ಪ್ರತಿ ಸನ್ನಿವೇಶದಲ್ಲೂ ಹಾಸ್ಯ ಭಾವುಕತೆ ಎಲ್ಲವನ್ನೂ ತುಂಬಿಸುತ್ತಾ ಅದಕ್ಕೆ ತಕ್ಕ ಸಂಗೀತ ಮಾಡಿಸುವ ಸೆನ್ಸ್ ಅವರಿಗಿತ್ತು. ಭಾಗ್ಯದಾ ಲಕ್ಷ್ಮಿ ಬಾರಮ್ಮ ಚಿತ್ರಕ್ಕೆ ಇವರೇ ಸಂಗೀತ ನಿರ್ದೇಶಕರು. ಆ ಲೆಕ್ಕದಲ್ಲಿ ಸಂಗೀತಂ ಶ್ರೀನಿವಾಸರಾವ್ ಅಂತಲೂ ಕರೆಯಬಹುದು. ಇಂದು ಐಟಿ ಫೀಲ್ಡಿಂದ ಸಿನಿಮಾಗೆ ಬರುವ ಟ್ರೆಂಡ್ ನಡೀತಾ ಇದೆ. ಆದರೆ ಇವರು ಆ ಕಾಲದ ಫಿಸಿಕ್ಸ್ ಕಲಿತು, ಸಿನಿಮಾ ನಿರ್ದೇಶಕರಾಗಲು ಬಂದಿದ್ದರು. ಇಂಥ ಮಹಾನ್ ನಿರ್ದೇಶಕನ ಲೇಟೆಸ್ಟ್ ಚಿತ್ರವೂ ಪ್ರಯೋಗವೇ. ಇಡೀ ಚಿತ್ರದ ಸಂಭಾಷಣೆಯನ್ನು ಹಾಡಿನ ರೂಪದಲ್ಲಿ ಒಪ್ಪಿಸುವ ಪ್ರಯೋಗ ಈ ಸಿಂಗ್ ಗೀತಂ ಚಿತ್ರದಲ್ಲಿ ಮಾಡಿದ್ದಾರಂತೆ.
ದಾಖಲೆ ತೆಗೆದು ನೋಡಿದರೆ, ಪೋರ್ಚುಗೀಸ್ ನಿರ್ದೇಶಕನೊಬ್ಬ 103ನೆಯ ವಯಸ್ಸಿನಲ್ಲಿ ಚಿತ್ರ ನಿರ್ದೇಶನ ಮಾಡಿದ್ದ ಎಂಬ ಉಲ್ಲೇಖ ಸಿಗುತ್ತದೆ. ಅಮೆರಿಕದ ಕ್ಲೆಂಟ್ ಈವುಡ್ 94ನೆಯ ವಯಸ್ಸಿ ನಲ್ಲಿ ತನ್ನ ಕೊನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ. ಆ ಪ್ರಕಾರ ಸಿಂಗೀತಂ ಜಗತ್ತಿನ ಎರಡನೆಯ ಅತಿ ಹಿರಿಯ ಸಕ್ರಿಯ ನಿರ್ದೇಶಕ ಎಂಬ ದಾಖಲೆಯನ್ನು ಈ ವುಡ್ ಜತೆಗೆ ಹಂಚಿಕೊಂಡಿzರೆ.
ಇದೇ ವಾರ ತೆರೆ ಕಾಣಲಿರುವ ಸಿಂಗ್ ಗೀತಂ ಹೇಗಿರಬಹುದು ಎಂಬ ಕುತೂಹಲವಿದೆ. ಅದಕ್ಕಿಂತ ಹೆಚ್ಚಾಗಿ ಸಿಂಗೀತಂ ಅವರ ಸಂದರ್ಶನಗಳನ್ನು ನೋಡುವ ಕುತೂಹಲವಿದೆ. ಸಿಂಗೀತಂ ಚಿತ್ರಗಳ ಕ್ಲೈಮ್ಯಾಕ್ಸ್ ಗಳಿಗೇ ಒಂದು ಸ್ಪೆಷಲ್ ಫ್ಯಾನ್ ಬೇಸ್ ಇದೆ. ಹಾಸ್ಯವನ್ನು ಉತ್ತುಂಗಕ್ಕೊಯ್ಯುವ ಆ ಶೈಲಿ ಹಲವರು ಅನುಕರಿಸಲು ಹೋಗಿ ಸೋತಿದ್ದಾರೆ.
64 ವರ್ಷಗಳ ಅವರ ಸಿನಿಜರ್ನಿಯಲ್ಲಿ ಮಾಡಿದ್ದು 61 ಚಿತ್ರಗಳು ಮಾತ್ರ ಇರಬಹುದು. ಆದರೆ ಅದರಲ್ಲಿ ಗಟ್ಟಿ ಕಾಳುಗಳೇ ಅಧಿಕ ಎಂಬುದು ಗಮನಾರ್ಹ. ಸಿಂಗೀತಂ ಶತಕ ಬಾರಿಸಲಿ. ಬದುಕಿರು ವವರೆಗೂ ಸಿನಿಮಾ ಮಾಡುತ್ತಲೇ ಇರಲಿ. ಅಷ್ಟು ಆರೋಗ್ಯ ಅವರದಾಗಲಿ.