ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gindimane Mruntyunjaya Column: ಸದ್ದಿಲ್ಲದೇ ಯಕ್ಷಗಾನದ ಅಭಿರುಚಿಯನ್ನುಳಿಸಿದವರು

ದೇವಸ್ಥಾನದದರೂ ಅಷ್ಟೇ. ಪ್ರಸಂಗ ಬಹುಶಃ ಯಜಮಾನರ ಆಯ್ಕೆ. ಮನೆಯಲ್ಲಿ ಶುಭ ಕಾರ್ಯಗಳೋ ವ್ರತವೋ ಇದ್ದರೆ ರಾತ್ರೆ ಜಾಗರ ಇರುತ್ತಿತ್ತು. ಉಪನಯನ, ಎಳೆ ಅಷ್ಟಮಿ, ನವರಾತ್ರಿ. ಅನಂತನ ಚತುರ್ದಶಿ ಮುಂತಾದವು ಮನೆಯಲ್ಲಿ ಜಾಗರ ಮಾಡುವ ಸಂದರ್ಭ ಗಳಾದರೆ, ಪ್ರಥಮೈಕಾದಶಿ ಜಾಗರ ದೇವಸ್ಥಾನಗಳಲ್ಲಿ. ಅಂದಿನ ತಾಳಮದ್ದಳೆಗಳು ಇಂದಿನ ಮಾನದಲ್ಲಿ ಶ್ರೇಷ್ಠ ಗುಣಮಟ್ಟದವು ಎನ್ನುವಂತಿಲ್ಲ. ಎಲ್ಲ ಅರ್ಥಧಾರಿಗಳೂ ಶ್ರೇಷ್ಠ ಅರ್ಥಧಾರಿಗಳೆನ್ನುವಂತಿಲ್ಲ.

ಸದ್ದಿಲ್ಲದೇ ಯಕ್ಷಗಾನದ ಅಭಿರುಚಿಯನ್ನುಳಿಸಿದವರು

-

Ashok Nayak
Ashok Nayak Jan 7, 2026 7:38 AM

ತಾಳಮದ್ದಳೆ

ಗಿಂಡೀಮನೆ ಮೃತ್ಯುಂಜಯ

ತಾಳಮದ್ದಳೆಯಲ್ಲಿ ಉದ್ದಾಮ ಅರ್ಥಧಾರಿಗಳ ಬಗ್ಗೆ ಅನೇಕ ಜನರು ಅನೇಕ ವಿಚಾರ ಗಳನ್ನು ಹೇಳುತ್ತಾರೆ. ಪದೇಪದೇ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಆದರೆ ಯಾರದೋ ಮನೆಯ ಜಗುಲಿಯ, ಯಾವುದೋ ದೇವಸ್ಥಾನದ ಹಾಸಿದ ಹಂಡಗಂಬಳಿಯ ಮೇಲೆ ಕುಳಿತು ‘ಹಲಲಲ ಕೀಹ’ ಎಂದವರನ್ನೋ, ಅರ್ಥ ಹೇಳಿದವರನ್ನೋ, ಅವರಿಗೆ ಪದ ಹೇಳಿದವರನ್ನೋ, ಆ ಭಾಗವತರಿಗೆ ಸಾಥ್ ನೀಡಿದ ಮೃದಂಗವಾದಕರನ್ನೋ, ಅವರಿಗೆ ಸೋರೆ ಬುರುಡೆಯಲ್ಲಿ ತನ್ನ ಉಸಿರು ತುಂಬುತ್ತ ಬೆಳಗಿನವರೆಗೂ ಶ್ರುತಿಯನ್ನು ಒದಗಿಸಿದ ಶ್ರುತಿವಾದಕನನ್ನೋ ಇಂದು ನೆನಪು ಮಾಡಿಕೊಳ್ಳುವವರು ಇಲ್ಲ.

ಇಂದಿನ ಮಾನದಲ್ಲಿ ಅವರು ಹೇಳಿದ ಪದವಾಗಲೀ, ಹೇಳಿದ ಅರ್ಥವಾಗಲೀ ಬಾಲಿಶವಾಗಿ ಕಾಣಿಸಬಹುದು. ಆದರೆ ಅಂದು ಅದೇ ಘನವಾದ ಅರ್ಥವಾಗಿತ್ತು. ನಾನು ಹೇಳುತ್ತಿರುವ ವಿಚಾರ ಈಗ 60-65 ವರ್ಷಗಳಿಗೂ ಹಿಂದಿನ ಕಾಲದ್ದು.

ಯಕ್ಷಗಾನದ ಕ್ಷೇತ್ರ ಬಹಳ ದೊಡ್ಡದು. ಆಟ ಹಾಗೂ ತಾಳಮದ್ದಳೆ ಎರಡೂ ವಿಚಾರ ಗಳಲ್ಲಿ. ತಾಳಮದ್ದಳೆಗೆ ಜಾಗರ ಎಂಬ ಹೆಸರಿತ್ತು ನಮ್ಮ ಕಡೆ. ಅದು ಬಹಳ ಸರಳ. ಮೇಳ ಕಟ್ಟಬೇಕೆಂದಿಲ್ಲ.

ಹಿಮ್ಮೇಳ ಮುಮ್ಮೇಳಗಳ ಕಲಾವಿದರ ಮನೆ ಬಾಗಿಲಿಗೆ ಹೋಗಿ ಅವರನ್ನು ನಮ್ಮ ಮೇಳಕ್ಕೆ ಬನ್ನಿ ಎಂದು ಕರೆತರುವ ಗೋಜಿಲ್ಲ. ಊರಿಂದೂರಿಗೆ ಅಲೆದು ವೀಳ್ಯ ತೆಗೆದುಕೊಳ್ಳುವ ರಗಳೆಯಿಲ್ಲ. ತಮ್ಮ ಮನೆಯ ಜಗುಲಿಯಲ್ಲಿ ಕಂಬಳಿ ಹಾಸಿದರಾಯಿತು.

ಭಾಗವತರ ಎದುರು ಇಡಲಿಕ್ಕಾಗಿ ಒಂದು ಕಾಲುಮಣೆ. ಒಂದು ದೀಪದ ಗುಡ್ಡು. ಸಭೆಗೆ ಒಂದು ಲಾಟೀನು ಅಥವಾ ಅನುಕೂಲವಿದ್ದ ಪಕ್ಷದಲ್ಲಿ, ಗ್ಯಾಸ್ ಲೈಟು. ಒಂದು ಲೋಟ ದಲ್ಲಿ ಅಕ್ಕಿ ಅದರಲ್ಲಿ ಹುಗಿದ ಊದುಬತ್ತಿಗಳು.

ಇದನ್ನೂ ಓದಿ: Dr Ramakrishna Muddepala Column: ತಾಳಮದ್ದಳೆಯಲ್ಲಿ ಆತ್ಮಾವಲೋಕನ ಅಗತ್ಯ

ಮೃದಂಗಕಾರನಿಗೆ ಬೋನ ತಯಾರಿಸಿಕೊಳ್ಳಲು ಅನ್ನ, ವಿಭೂತಿ ಅಷ್ಟೇ. ಅರ್ಥಧಾರಿಗಳು ಸ್ಥಳವಂದಿಗರೇ. ಅಥವಾ ಪಕ್ಕದ ಶೀಮೆಯವರು. ಜಾಗರ ಶುರುವಾದ ನಂತರವೂ ಸಣ್ಣ ಪುಟ್ಟ ಅರ್ಥಗಳಿಗೆ ಕೂತವರಲ್ಲಿ ಒಬ್ಬರಿಗೆ ನೀನು ಇಂಥ ಅರ್ಥ ಹೇಳು ಎಂದರಾ ಯಿತು. ಅವರಿಗೆಲ್ಲ ಪ್ರಸಂಗದಲ್ಲಿ ಆ ಪಾತ್ರಕ್ಕಿರುವ ಪದಗಳ ಕರಾರುವಾಕ್ಕಾದ ಮಾಹಿತಿ ಹೇಗಿರು ತ್ತಿತ್ತು ಎಂಬುದು ನನಗೆ ಈಗಲೂ ಸೋಜಿಗದ ವಿಚಾರವೇ!

ದೇವಸ್ಥಾನದದರೂ ಅಷ್ಟೇ. ಪ್ರಸಂಗ ಬಹುಶಃ ಯಜಮಾನರ ಆಯ್ಕೆ. ಮನೆಯಲ್ಲಿ ಶುಭ ಕಾರ್ಯಗಳೋ ವ್ರತವೋ ಇದ್ದರೆ ರಾತ್ರೆ ಜಾಗರ ಇರುತ್ತಿತ್ತು. ಉಪನಯನ, ಎಳೆ ಅಷ್ಟಮಿ, ನವರಾತ್ರಿ. ಅನಂತನ ಚತುರ್ದಶಿ ಮುಂತಾದವು ಮನೆಯಲ್ಲಿ ಜಾಗರ ಮಾಡುವ ಸಂದರ್ಭ ಗಳಾದರೆ, ಪ್ರಥಮೈಕಾದಶಿ ಜಾಗರ ದೇವಸ್ಥಾನಗಳಲ್ಲಿ. ಅಂದಿನ ತಾಳಮದ್ದಳೆಗಳು ಇಂದಿನ ಮಾನದಲ್ಲಿ ಶ್ರೇಷ್ಠ ಗುಣಮಟ್ಟದವು ಎನ್ನುವಂತಿಲ್ಲ. ಎಲ್ಲ ಅರ್ಥಧಾರಿಗಳೂ ಶ್ರೇಷ್ಠ ಅರ್ಥಧಾರಿಗಳೆನ್ನುವಂತಿಲ್ಲ.

ಆದರೆ, ವಾಗಾಡಂಬರವಿಲ್ಲದ ಅರ್ಥಗಳೇ ಆದರೂ ಭಾವಪೂರ್ಣ ಅರ್ಥಗಾರಿಕೆ ಅಂದಿ ನದು. ಕೃಷ್ಣಾರ್ಜುನರ ಕಾಳಗದ ‘ಏಳು ಏಳಯ್ಯ ಮುದ್ದು ಭಾವಯ್ಯ, ಏನಾಯಿತೆಂದು, ಹೇಳು ಹೇಳಯ್ಯ ಮುದ್ದು ಭಾವಯ್ಯ’ ಎಂಬ ಪದದ ಅರ್ಥ ಹೇಳುವಾಗ ಅರ್ಥಧಾರಿಯೂ ಗಳಗಳನೆ ಕಣ್ಣೀರು ಹರಿಸುತ್ತಿದ್ದುದೂ, ಜೊತೆಗೇ ಶ್ರೋತೃಗಳೂ ಕಣ್ಣೀರು ಹಾಕುತ್ತಿದ್ದುದೂ ಅಪರೂಪದ ದೃಶ್ಯವಾಗಿರಲಿಲ್ಲ.

ಕರ್ಣಾರ್ಜುನರ ಕಾಳಗದಲ್ಲಿ ಕರ್ಣನು ತಾನು ರಥವನ್ನು ಮೇಲೆತ್ತುವವರೆಗೆ ಬಾಣ ಪ್ರಯೋಗ ಮಾಡಬೇಡ ಎಂದು ಅರ್ಜುನನಲ್ಲಿ ಬೇಡಿಕೊಂಡಾಗ, ತಾನೂ ದುಃಖಿಸುತ್ತ, ‘ಅಷ್ಟೆಲ್ಲ ಬೇಡಿಕೊಳ್ಳುತ್ತಿದ್ದಾನೆ, ಸ್ವಲ್ಪ ತಡೆ’ ಎಂದು ಕರ್ಣನ ಪರ ವಕಾಲತ್ತು ವಹಿಸಿ ಮಾತಾಡಿದ ಸಭಿಕರೂ ಇದ್ದರು!

ಹಾಗೆಯೇ ಒಮ್ಮೆ ಪದ ಹೇಳಿದ ನಂತರ ‘ಸಮ ಆಗಲಿಲ್ಲ. ತಡೆ, ಮತ್ತೆ ಹೇಳುತ್ತೇನೆ’ ಎಂದು ಅದೇ ಪದವನ್ನೇ ಮತ್ತೆ ಹೇಳುತ್ತಿದ್ದ ಭಾಗವತರೂ ಇದ್ದರು. ಶ್ರುತಿ ಬಿಟ್ಟು ಪದ ಹೇಳುವ ಭಾಗವತರೂ ಇದ್ದರು. ‘ಪಂಚಪಂಚ ಉಷಃಕಾಲೇ ಸಪ್ತಪಂಚ ಅರುಣೋದಯಃ’ ಎಂದೇ ಪೀಠಿಕೆಯನ್ನು ಆರಂಭಿಸುತ್ತಿದ್ದ ಅರ್ಥಧಾರಿಗಳೂ ಇದ್ದರು.

ಗ್ರಾಂಥಿಕ ಭಾಷೆಯ ಅರಿವಿಲ್ಲದೇ ಆಡುಭಾಷೆಯ ಶಬ್ದಗಳನ್ನೆ ಬಳಸಿ ಅರ್ಥ ಹೇಳುತ್ತಿದ್ದ ಅರ್ಥಧಾರಿಗಳೂ ಇದ್ದರು. ‘ಅದರ ಅರ್ಥ ಅದರ ಇದೆ. ಸೈ ಮುಂದಿನ ಪದ ಹೇಳಿ’ ಎಂದ ಅರ್ಥಧಾರಿಗಳೂ ಇದ್ದರು. ಆದರೆ ನಾನು ಹೇಳಬೇಕಾದ ಮುಖ್ಯವಿಚಾರಕ್ಕೆ ಈಗ ಬರುತ್ತಿದ್ದೇನೆ.

ಹಾಗೆ ಯಾವುದೋ ಮನೆಯ ಜಗುಲಿಯಲ್ಲೋ, ಯಾವುದೋ ದೇವಸ್ಥಾನದ ತಮಗೆ ಇದ್ದ ಶಬ್ದಭಂಡಾರವನ್ನೇ ಬಳಸಿಕೊಂಡು ಪದದ ಭಾವವನ್ನು ಬಿಡದೇ, ಇಂದಿನ ಶ್ರೋತೃಗಳಿಗೆ ನಗು ಬರುವ ಹಾಗೆ, ಅರ್ಥ ಹೇಳುತ್ತಿದ್ದ ಆ ಅರ್ಥಧಾರಿಗಳು, ಈಗಿನ ಭಾಗವತರಿಗೆ ಹೋಲಿಸಿ ದರೆ ಕೇವಲ ಬಾಲಿಶವೆನ್ನಿಸಬಹುದಾದ ರೀತಿಯಲ್ಲಿ ಪದ ಹೇಳುತ್ತಿದ್ದ ಭಾಗವತರೂ, ಮೃದಂಗವನ್ನು ನುಡಿಸುವ ಸಾಮರ್ಥ್ಯವಿಲ್ಲದಿದ್ದರೂ ಅದನ್ನು ಬಡಿಯುತ್ತಿದ್ದ ಮೃದಂಗ ಕಾರರೂ ತಮಗೇ ಗೊತ್ತಿಲ್ಲದೇ ಒಂದು ಅಮೋಘ ಸೇವೆಯನ್ನು ಯಕ್ಷಗಾನ ಲೋಕಕ್ಕೆ ಮಾಡುತ್ತಿದ್ದರು! ಅದೇ ಅಂದಿನ ಶ್ರೋತೃಗಳಲ್ಲಿ ಯಕ್ಷಗಾನದ ಅಭಿರುಚಿಯನ್ನು ಉಳಿಸಿದ್ದು! ಈ ತಾಳಮದ್ದಳೆಗಳ ಪ್ರಭಾವ ಎಷ್ಟಿತ್ತೆಂದರೆ ಅಂದು ಮಕ್ಕಳಾಗಿದ್ದ ನಾವೂ ಅಲ್ಲಿ ಇಲ್ಲಿ ಜಾಗರ ಮಾಡುತ್ತಿದ್ದೆವು! ಅದಕ್ಕೆ ವೀಳ್ಯವಾಗಿ 8-10 ರು. ಕೊಡುತ್ತಿದ್ದರು. ಅವರು ಕೊಟ್ಟ ಅವಲಕ್ಕಿ, ಕಾಯಿ, ಬೆಲ್ಲಗಳು ಹೊಳೆಯ ದಡದಲ್ಲಿ ನಮ್ಮ ಬೆಳಗಿನ ಉಪಾಹಾರ!

ಅವರಿಗೆ ಅರಿವಿಲ್ಲದೆಯೇ ಆ ಪ್ರದೇಶದ ಜನಸಮೂಹದಲ್ಲಿ ಯಕ್ಷಗಾನದ ಅಭಿರುಚಿಯನ್ನು ಕಾಪಾಡಿ, ನೇಪಥ್ಯಕ್ಕೆ ಸರಿದು ಹೋಗಿರುವ ಆ ಕಲಾವಿದರಿಗೆ ನಮ್ಮ ದೀರ್ಘದಂಡ ನಮಸ್ಕಾರವನ್ನು ಮಾಡಬೇಕು. ಆಗಿನ ತಾಳಮದ್ದಳೆಗಳನ್ನು ನೆನಸಿಕೊಂಡು ನಗುವದಲ್ಲ. ಒಂದು ವೇಳೆ ಅವರು ತಮಗೆ ತಿಳಿದ ರೀತಿಯಲ್ಲಿ ತಾಳಮದ್ದಳೆಗಳನ್ನು ಮಾಡಿ ತೋರಿಸದೆ ನಮಗೆ ಇದು ಹೇಳಿಸಿದ್ದಲ್ಲ ಎಂದು ಹಾಗೇ ಕುಳಿತಿದ್ದರೆ ಆಗಿನ ಆ ಪ್ರಾಂತ್ಯದ ಜನಸಮೂಹ ಕ್ಕೆ ಯಕ್ಷಗಾನದ ಬಗ್ಗೆ ಅವಜ್ಞೆ ಬೆಳೆದು ಆ ಕುರಿತು ಅಜ್ಞಾನವೇ ಮುಸುಕುತ್ತಿತ್ತು.

ಮುಂದೊಂದು ದಿನ ಅವರ ಮಧ್ಯವೇ ಶ್ರೇಷ್ಠ ಕಲಾವಿದರು ಹುಟ್ಟಿ ಬರುವ ಸಾಧ್ಯತೆಯೇ ಇರದೇಹೋಗುತ್ತಿತ್ತು. ಶೇಣಿಯವರಂತಹ ಯಕ್ಷಗಾನ ಲೋಕದ ಘಟಾನುಘಟಿ ಅರ್ಥಧಾರಿ ಗಳು, ಶಿವರಾಮ ಹೆಗಡೆ, ಕುರಿಯ ವಿಟ್ಠಲಶಾಸ್ತ್ರಿಯವರಂತಹ ವೇಷಧಾರಿಗಳು ಆ ಪ್ರಾಂತ್ಯ ದಲ್ಲಿ ಸನಿಹದ ಬಂದರೂ ಸಹ ಅವರ ಅರ್ಥವನ್ನು ಕೇಳುವ, ಅವರ ವೇಷವನ್ನು ನೋಡುವ ಕುತೂಹಲವೇ ಮೂಡುತ್ತಿರಲಿಲ್ಲ.

ಆ ಒಂದು ಜ್ಞಾನ, ಆ ಒಂದು ರುಚಿ ಜನರಲ್ಲಿ ಉಳಿದು ಬರಲು ಆ ಮುಗ್ಧ ಕಲಾವಿದರೇ ಕಾರಣ. ಮಲೆನಾಡಿನಲ್ಲಿ, ಬೇಸಿಗೆಯಲ್ಲಿ ಅದೃಶ್ಯವಾಗಿರುವ ಉಂಬಳಗಳು ಒಂದು ಮಳೆ ಬಿzಡನೇ ಜೀವ ತಳೆದು ಬರುವಂತೆ, ಸುಪ್ತವಾಗಿದ್ದ ಯಕ್ಷಗಾನಾಭಿರುಚಿ, ಪ್ರೀತಿ ಗರಿಗೆದರಿ ಶ್ರೇಷ್ಠತೆಯ ಆರಾಧನೆಗೆ ಸನ್ನದ್ಧವಾಗುತ್ತದೆ ಆ ಜನಜೀವನ! ಇದಕ್ಕೆ ಕಾರಣ ಅವರು, ಯಕ್ಷಗಾನದ ಅಭಿರುಚಿಯನ್ನುಳಿಸಿದ ಆ ಮರೆಯಾದ ಕಲಾವಿದರು! ಅದಕ್ಕಾಗಿ ಅವರಿಗೆ ನಮೋ ನಮಃ!