ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Ravishankar Column: ಲಿಪಿಗಳ ರಾಣಿ ನಮ್ಮ ಕನ್ನಡ ಸುಂದರಿ

ಕನ್ನಡದ ವರ್ಣಮಾಲೆಯು ಜಗತ್ತಿನ ಅತ್ಯಂತ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ರೂಪುಗೊಂಡ ಲಿಪಿಗಳಲ್ಲಿ ಒಂದಾಗಿದೆ. ಆಧುನಿಕ ಭಾಷಾ ವಿಜ್ಞಾನಿಗಳು ಬೆರಗುಗೊಳ್ಳುವಂತಹ ಶಬ್ದಶಾಸ್ತೀಯ ವ್ಯವಸ್ಥೆ ಕನ್ನಡದಲ್ಲಿದೆ. ನಾವು ಉಚ್ಚರಿಸುವ ಪ್ರತಿಯೊಂದು ಧ್ವನಿಯೂ ನಮ್ಮ ಶರೀರದ ಅಂಗಗಳೊಂದಿಗೆ ನೇರವಾದ ವೈಜ್ಞಾನಿಕ ಸಂಬಂಧವನ್ನು ಹೊಂದಿದೆ.

ಲಿಪಿಗಳ ರಾಣಿ ನಮ್ಮ ಕನ್ನಡ ಸುಂದರಿ

-

Profile
Ashok Nayak Nov 4, 2026 12:11 AM

ನುಡಿಮಾಸ

ಡಾ.ರವಿಶಂಕರ್‌ ಎ.ಕೆ.

ಭಾಷೆ ಎನ್ನುವುದು ಸಂಸ್ಕೃತಿಯ ಜೀವನಾಡಿ, ಒಂದು ಪರಿಸರ ಮತ್ತು ಜನಾಂಗದ ಅಂತರಂಗದ ಧ್ವನಿ. ಜಗತ್ತಿನ ಪ್ರಾಚೀನ ಮತ್ತು ಅತ್ಯಂತ ಶ್ರೀಮಂತ ಭಾಷೆಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ನಮ್ಮ ಕನ್ನಡ ಭಾಷೆಯು ತನ್ನ ವೈಜ್ಞಾನಿಕ ರಚನೆ, ಧ್ವನಿಶಾಸ್ತ್ರದ ನಿಖರತೆ ಮತ್ತು ಸಾಹಿತ್ಯಿಕ ಶ್ರೀಮಂತಿಕೆಯಿಂದ ‘ಲಿಪಿಗಳ ರಾಣಿ’ ಎಂಬ ಬಿರುದಿಗೆ ಸಂಪೂರ್ಣವಾಗಿ ಅರ್ಹವಾಗಿದೆ. ಬರೆದಂತೆ ಓದುವ, ಪ್ರತಿ ಓದುವಿಗೂ ಗಂಭೀರವಾದ ಅರ್ಥವಿರುವ ಭಾಷೆಯಾಗಿದೆ. ಕನ್ನಡದ ಈ ವೈಭವ ವನ್ನು ಭಾಷಾಶಾಸ್ತ್ರದ ನೆಲೆಗಟ್ಟಿನಲ್ಲಿ, ಐತಿಹಾಸಿಕ ಹಿನ್ನೆಲೆಯಲ್ಲಿ ಮತ್ತು ಜಾಗತಿಕ ಮನ್ನಣೆಯ ಮೂಲಕ ವಿಸ್ತಾರವಾಗಿ ಅರ್ಥಮಾಡಿ ಕೊಳ್ಳಬಹುದು.

ಕನ್ನಡ ಭಾಷೆಯ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ: ಕನ್ನಡವು ಕರ್ನಾಟಕ ಮಣ್ಣಿನ ಭಾಷೆ ಯಾಗುವ ಜೊತೆಗೆ ಅದೊಂದು ಅಖಂಡ ಸಾಂಸ್ಕೃತಿಕ ಚರಿತ್ರೆಯಾಗಿದೆ. ಅಶೋಕನ ಬ್ರಹ್ಮಗಿರಿ ಶಾಸನದಿಂದ ಹಿಡಿದು ಕವಿರಾಜಮಾರ್ಗದವರೆಗೆ, ಪಂಪ-ರನ್ನರ ಕಾವ್ಯಗಳಿಂದ ವಚನ ಸಾಹಿತ್ಯ ದವರೆಗೆ ಕನ್ನಡ ತನ್ನ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಹಲ್ಮಿಡಿ ಶಾಸನವು ಕನ್ನಡದ ಪ್ರಾಚೀನತೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಪ್ರಾಕೃತ ಮತ್ತು ಸಂಸ್ಕೃತದ ಪ್ರಭಾವದ ಜೊತೆಜೊತೆಯೇ ತನ್ನದೇ ಆದ ಸ್ವಂತಿಕೆಯನ್ನು ಉಳಿಸಿಕೊಂಡು ಬೆಳೆದ ಏಕೈಕ ದ್ರಾವಿಡ ಭಾಷೆಗಳಲ್ಲಿ ಕನ್ನಡವೂ ಒಂದು. ಇದು ಕರ್ನಾಟಕದ ಗಡಿಗೆ ಮಾತ್ರ ಸೀಮಿತವಾಗದೆ, ಜಗತ್ತಿನಾದ್ಯಂತ ತನ್ನ ಸಾಹಿತ್ಯಿಕ ಸೊಬಗಿನಿಂದ ಹೆಸರು ಮಾಡಿದೆ.

ಕನ್ನಡದ ವರ್ಣಮಾಲೆಯು ಜಗತ್ತಿನ ಅತ್ಯಂತ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ರೂಪು ಗೊಂಡ ಲಿಪಿಗಳಲ್ಲಿ ಒಂದಾಗಿದೆ. ಆಧುನಿಕ ಭಾಷಾ ವಿಜ್ಞಾನಿಗಳು ಬೆರಗುಗೊಳ್ಳುವಂತಹ ಶಬ್ದ ಶಾಸ್ತೀಯ ವ್ಯವಸ್ಥೆ ಕನ್ನಡದಲ್ಲಿದೆ. ನಾವು ಉಚ್ಚರಿಸುವ ಪ್ರತಿಯೊಂದು ಧ್ವನಿಯೂ ನಮ್ಮ ಶರೀರದ ಅಂಗಗಳೊಂದಿಗೆ ನೇರವಾದ ವೈಜ್ಞಾನಿಕ ಸಂಬಂಧವನ್ನು ಹೊಂದಿದೆ.

ಇದನ್ನೂ ಓದಿ: Ranjith H Ashwath Column: ಮೇಲ್ಮನೆಯ ಫಲಿತಾಂಶದ ಲಾಭ-ನಷ್ಟ !

ಕಂಠ್ಯ, ತಾಲವ್ಯ, ಮೂರ್ಧನ್ಯ, ದಂತ್ಯ, ಓಷ್ಠ್ಯಗಳೆಂಬ ಹೆಸರಿನ ಮೂಲಕ ಕನ್ನಡದ ಅಕ್ಷರಗಳ ಉತ್ಪತ್ತಿ ಯನ್ನು ನಮ್ಮ ದೇಹದಿಂದಲೇ ಗುರ್ತಿಸಬಹುದು. ಈ ರೀತಿಯಾಗಿ ಉಚ್ಚಾರಣಾಂಗಗಳ ನಿಖರತೆಯ ಆಧಾರದ ಮೇಲೆ ಅಕ್ಷರಗಳನ್ನು ವರ್ಗೀಕರಿಸಿರುವ ವಿಶ್ವದ ಕೆಲವೇ ಕೆಲವು ಭಾಷೆಗಳಲ್ಲಿ ಕನ್ನಡವೂ ಮುಂಚೂಣಿಯಲ್ಲಿದೆ. ಇಲ್ಲಿ ಬರೆಯುವ ಪ್ರತಿಯೊಂದು ಅಕ್ಷರಕ್ಕೂ ನಿಖರವಾದ ಉಚ್ಚಾರಣೆ ಇದೆ ಮತ್ತು ಉಚ್ಚರಿಸುವ ಪ್ರತಿಯೊಂದು ಧ್ವನಿಗೆ ನಿಖರವಾದ ಲಿಪಿಯಿದೆ.

ವಿನೋಬಾ ಭಾವೆಯವರ ಚಿಂತನೆ ಮತ್ತು ಕನ್ನಡ ಲಿಪಿಯ ಶ್ರೇಷ್ಠತೆ: ಭಾರತೀಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತಕರಾದ ಆಚಾರ್ಯ ವಿನೋಬಾ ಭಾವೆಯವರು ಭಾಷೆಗಳ ಕುರಿತು ಆಳವಾದ ಅಧ್ಯಯನ ನಡೆಸಿದ್ದರು. ಅವರು ವಿವಿಧ ಭಾರತೀಯ ಲಿಪಿಗಳನ್ನು ವಿಶ್ಲೇಷಿಸುತ್ತಾ ಕನ್ನಡ ಮತ್ತು ದೇವನಾಗರಿ ಲಿಪಿಗಳ ವೈಜ್ಞಾನಿಕತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ವಿನೋಬಾ ಭಾವೆಯವರ ದೃಷ್ಟಿಯಲ್ಲಿ ಕನ್ನಡ ಲಿಪಿಯು ಅತ್ಯಂತ ಸುಂದರ, ಸ್ಪಷ್ಟ ಮತ್ತು ವೈಜ್ಞಾನಿಕ ವಾಗಿ ಪರಿಪೂರ್ಣವಾದ ಲಿಪಿಯಾಗಿದೆ. ಅಕ್ಷರಗಳ ಗುಂಡಾಗಿರುವ ಆಕಾರ, ಬರೆಯಲು ತುಂಬಾ ಸುಲಭವಾಗಿರುವುದು ಮತ್ತು ಉಚ್ಚಾರಣೆಗೆ ತಕ್ಕಂತೆ ಬರೆಯುವ ಲಿಪಿ ವ್ಯವಸ್ಥೆ ಇರುವುದರಿಂದಲೇ ಅವರು ಕನ್ನಡ ಲಿಪಿಯನ್ನು ಮನಪೂರ್ವಕವಾಗಿ ಲಿಪಿಗಳ ರಾಣಿ ಎಂದು ಪ್ರಶಂಸಿಸಿದರು. ಪ್ರತಿ ಉಚ್ಚಾರವು ಹೊಸ ಅರ್ಥಗಳನ್ನು ಪಡೆಯುವುದು, ಗಂಭೀರವಾದ, ಹಿನ್ನಲೆಯುಳ್ಳ ಅರ್ಥದಿಂದ ಕನ್ನಡ ಭಾಷೆಯು ವಿಭಿನ್ನವಾಗಿ ಕಾಣಿಸುತ್ತದೆ.

ವಿಶ್ವದ ಭಾಷೆಗಳ ಕುರಿತು ಅಧ್ಯಯನ ನಡೆಸುವ ಅಮೆರಿಕದ ಪ್ರಮುಖ ಭಾಷಾವಿಜ್ಞಾನ ಸಂಸ್ಥೆ ಎಸ್‌ಐಎಲ್ ಎಂಬುದು ಜಗತ್ತಿನ ಸಾವಿರಾರು ಭಾಷೆಗಳ ವೈಜ್ಞಾನಿಕ ರಚನೆ, ಲಿಪಿಯ ಸ್ಪಷ್ಟತೆ, ವ್ಯಾಕರಣದ ದೃಢತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಆಧರಿಸಿ ನಡೆಸಿದ ಅಧಿಕೃತ ಸಮೀಕ್ಷೆ ಯಲ್ಲಿ ಕನ್ನಡ ಭಾಷೆಗೆ ಜಾಗತಿಕ ಮಟ್ಟದಲ್ಲಿ 24ನೇ ಸ್ಥಾನವನ್ನು ನೀಡಿ ಗೌರವಿಸಿದೆ.

ಇದು ಇಡೀ ಜಗತ್ತಿನ 7170 ಭಾಷೆಗಳಲ್ಲಿ ಕನ್ನಡವು ಹೊಂದಿರುವ ಮಹತ್ವದ ಸ್ಥಾನಮಾನವಾಗಿದೆ. ಲಿಪಿಯ ಸ್ಪಷ್ಟತೆ, ತಾರ್ಕಿಕತೆ ಮತ್ತು ಸಾಹಿತ್ಯದ ಆಳವನ್ನು ಗಮನಿಸಿ ನೀಡಲಾದ ಈ ಮನ್ನಣೆಯು ಕನ್ನಡಿಗರೆಲ್ಲರೂ ಹೆಮ್ಮೆಪಡುವಂತಹುದು. ಕನ್ನಡದ ಇತಿಹಾಸವು ಕರ್ನಾಟಕದ ಗಡಿಗೆ ಸೀಮಿತ ವಾಗಿ ಉಳಿಯದೆ ಪ್ರಾಚೀನ ಕಾಲದಿಂದಲೂ ಹೊರದೇಶಗಳೊಂದಿಗೆ ಕನ್ನಡವು ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಹೊಂದುತ್ತಾ ಬಂದಿದೆ.

ಗ್ರೀಕ್ ನಾಟಕಕಾರರ ಕೃತಿಗಳಲ್ಲಿ (ಒಕ್ಸಿರಿಂಚಸ್ ಪಪೈರಿ) ಕ್ರಿಸ್ತ ಶಕೆಯ ಆರಂಭದಲ್ಲೇ ಕನ್ನಡ ಪದಗಳು ಬಳಕೆಯಾಗಿರುವುದು ಇದಕ್ಕೆ ಐತಿಹಾಸಿಕ ಸಾಕ್ಷಿಯಾಗಿದೆ. ಟಾಲೆಮಿಯ ಭೂಪಟದಲ್ಲೂ ಕನ್ನಡ ನೆಲದ ಸ್ಥಳನಾಮಗಳು ದಾಖಲಾಗಿವೆ. ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಕರಾವಳಿಯ ಕನ್ನಡಿಗರು ನಡೆಸಿದ ವ್ಯಾಪಾರ ಸಂಪರ್ಕದಿಂದಾಗಿ ಕನ್ನಡದ ಕೆಲವು ಪದಗಳು ಮತ್ತು ಸಾಂಸ್ಕೃತಿಕ ಪ್ರಭಾವಗಳು ಪರಭಾಷೆಗಳ ಮೇಲೆ ಬೀರಿವೆ.

ತಮಿಳು, ತೆಲುಗು, ಮಲಯಾಳಂ ಮುಂತಾದ ದ್ರಾವಿಡ ಭಾಷೆಗಳೊಂದಿಗೆ ಆಳವಾದ ಬೇರುಗಳನ್ನು ಹಂಚಿಕೊಂಡಿರುವ ಕನ್ನಡ, ತನ್ನದೇ ಆದ ಸ್ವತಂತ್ರ ಅಸ್ತಿತ್ವವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಈ ಭಾಷೆಗಳ ಕೃತಿಗಳಲ್ಲಿ ಕನ್ನಡ ಪದಗಳ, ಕೃತಿಗಳ ಹಲವು ಉಲ್ಲೇಖಗಳಿವೆ. ಇದು ಕನ್ನಡದ ಹೊರನೋಟವಾಗಿದೆ.

ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ, ಇಲ್ಲಿನವರು ಮಾತ್ರವಲ್ಲದೆ ಹೊರದೇಶಗಳಿಂದ ಬಂದ ಕ್ರಿಶ್ಚಿಯನ್ ಪಾದ್ರಿಗಳು, ಮಿಷನರಿಗಳು ಮತ್ತು ಬ್ರಿಟಿಷ್ ಆಡಳಿತಾಧಿಕಾರಿಗಳು ಕನ್ನಡ ಭಾಷೆ, ಲಿಪಿ, ಸಾಹಿತ್ಯ ಹಾಗೂ ಶಾಸನಶಾಸ್ತ್ರಕ್ಕೆ ನೀಡಿದ ಕೊಡುಗೆಯು ಚಿರಸ್ಮರಣೀಯ. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಮುದ್ರಣ ಯಂತ್ರದ ಆಗಮನ, ಬೈಬಲ್ ಅನುವಾದ, ನಿಘಂಟುಗಳ ರಚನೆ ಹಾಗೂ ಕಣ್ಮರೆಯಾಗುತ್ತಿದ್ದ ಪ್ರಾಚೀನ ಕಾವ್ಯಗಳ ಮರುಸಂಪಾದನೆಯಲ್ಲಿ ಈ ಹೊರಗಿನ ವಿದ್ವಾಂಸರು ವಹಿಸಿದ ಪಾತ್ರ ಕನ್ನಡಿಗರು ಸದಾ ಸ್ಮರಿಸಬೇಕಾದದ್ದು.

ಮಂಗಳೂರು, ಧಾರವಾಡ, ಹುಬ್ಬಳ್ಳಿ ಮತ್ತು ಉಡುಪಿ ಭಾಗದಲ್ಲಿ ನೆಲೆಸಿದ ಜರ್ಮನ್ ಮೂಲದ ಬಾಸೆಲ್ ಮಿಷನ್ ಪಾದ್ರಿಗಳು ಕನ್ನಡ ಮುದ್ರಣಾಲಯಗಳನ್ನು ಸ್ಥಾಪಿಸಿದರು. ಮಂಗಳೂರಿನಲ್ಲಿ 1841ರಲ್ಲಿ ಆರಂಭವಾದ ಮುದ್ರಣಾಲಯವು ಕನ್ನಡ ಮುದ್ರಣ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಕನ್ನಡ ಲಿಪಿಗೆ ಒಂದು ಸುಂದರ ಮುದ್ರಣ ಸ್ವರೂಪವನ್ನು ನೀಡಿದ್ದೇ ಈ ಬಾಸೆಲ್ ಮಿಷನ್. ರೆ. ಹರ್ಮನ್ ಮೊಗ್ಲಿಂಗ್ ಅವರು 1843ರ ಜುಲೈನಲ್ಲಿ ಮಂಗಳೂರಿನಿಂದ ‘ಮಂಗಳೂರು ಸಮಾಚಾರ’ ಎಂಬ ಹೆಸರಿನ ಪ್ರಥಮ ಕನ್ನಡ ವಾರಪತ್ರಿಕೆಯನ್ನು ಹೊರತಂದರು.

ಇದು ಕನ್ನಡ ಪತ್ರಿಕೋದ್ಯಮದ ಇತಿಹಾಸದ ಮೈಲಿಗಲ್ಲು. ನಂತರದ ದಿನಗಳಲ್ಲಿ ಬಾಸೆಲ್ ಮಿಷನ್ ಸಂಸ್ಥೆಯು ಕನ್ನಡ ಜ್ಞಾನೋದಯ ಮುಂತಾದ ಪತ್ರಿಕೆಗಳನ್ನು ಆರಂಭಿಸಿ, ಜನಸಾಮಾನ್ಯರಲ್ಲಿ ಸಾಕ್ಷರತೆ ಮತ್ತು ಜ್ಞಾನವನ್ನು ಬಿತ್ತಿತು ಜರ್ಮನ್ ಮೂಲದ ಪಾದ್ರಿಯಾದ ರೆ. ಫರ್ಡಿನೆಂಡ್ ಕಿಟೆಲ್ ಅವರು ಕರ್ನಾಟಕದಲ್ಲೇ ದೀರ್ಘಕಾಲ ನೆಲೆಸಿ, ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸಿದರು. ಅವರು ಬರೆದ ಕನ್ನಡ-ಇಂಗ್ಲಿಷ್ ನಿಘಂಟು-1894 ಕನ್ನಡ ಭಾಷಾ ಲೋಕದ ವಿಶಿಷ್ಟ ಗ್ರಂಥವಾಗಿದೆ.

ಸುಮಾರು 70000ಕ್ಕೂ ಹೆಚ್ಚು ಪದಗಳನ್ನು ಸಂಗ್ರಹಿಸಿ, ಅವುಗಳ ಉತ್ಪತ್ತಿ ಮತ್ತು ಅರ್ಥವನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಿದ ಇವರ ಈ ಕೃತಿಯೇ ಕನ್ನಡ ನಿಘಂಟುಶಾಸ್ತ್ರದ ಬುನಾದಿ. ಅಷ್ಟೇ ಅಲ್ಲದೆ, ಕನ್ನಡ ಭಾಷೆಯ ವ್ಯಾಕರಣ ಗ್ರಂಥವನ್ನು ರಚಿಸಿ, ಕನ್ನಡದ ರಚನಾತ್ಮಕ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸಿದರು.

ಹರ್ಮನ್ ಮೊಗ್ಲಿಂಗ್, ಪ್ಲೀಟ್, ಬಿ.ಎಲ್ ರೈಸ್, ಇ.ಪಿ ರೈಸ್ ಇವರೆಲ್ಲ ನಮ್ಮ ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯನ್ನು ಪ್ರೀತಿಸಿ, ಸಂಪಾದಿಸಿ ಹಲವು ಮಾರ್ಗಗಳನ್ನು ಸೃಷ್ಟಿಸಿ ದಾರಿ ತೋರಿಸಿದರು. ವಿಮರ್ಶೆ, ಸಂಪಾದನೆ, ಸಂಶೋಧನೆಯ ನಿಜವಾದ ಅರ್ಥ ನಮ್ಮ ನಾಡಿಗೆ ಇವರಿಂದ ಪರಿಚಯವಾಯಿತು. ಹೀಗೆ ಕನ್ನಡ ಮತ್ತು ಕರ್ನಾಟಕವೆಂಬ ಹೆಸರಿನ ಹಿಂದೆ ಹಲವರ ಪರಿಶ್ರಮವಿದೆ. ಆ ಪರಿಶ್ರಮದ ಬೆಳಕೇ ಕನ್ನಡಕ್ಕೆ ದೊರೆತ ನುಡಿ ಭೂಷಣ ವಿಶ್ವ ಲಿಪಿಗಳ ರಾಣಿ ಎಂಬುದಾಗಿದೆ. ನಮ್ಮ ಭಾಷೆಯನ್ನು ಬರಿ ಪ್ರೀತಿಸುವುದಲ್ಲ, ನಮ್ಮ ಭಾಷೆಯಲ್ಲಿ ಜೀವಿಸುವುದು ಮುಖ್ಯ