Kiran Upadhyay Column: ಶೌಚಾಲಯಕ್ಕೂ ಬೇಕು ತಂತ್ರಜ್ಞಾನ
ಮೂತ್ರ ವಿಸರ್ಜನೆಯ ನಂತರ ಕೈ ತೊಳೆಯುವುದಕ್ಕಿಂತಲೂ ಕಾಲು ತೊಳೆಯುವ ಅವಶ್ಯಕತೆಯೇ ಹೆಚ್ಚು ಇದೆ ಎಂದು ನನಗೆ ಎಷ್ಟೋ ಬಾರಿ ಅನಿಸಿದ್ದಿದೆ. ಗಂಡಸರು ಕೂಡ ಕುಳಿತು ಮೂತ್ರ ವಿಸರ್ಜನೆ ಮಾಡಬೇಕು ಎಂಬ ಪದ್ಧತಿಯನ್ನು ನಮ್ಮ ಹಿರಿಯರು ಮಾಡಿಟ್ಟಿದ್ದು ಇದರ ಸಲುವಾಗಿಯೇ ಹೊರತು ಬೇರೆ ಯಾವ ಕಾರಣಕ್ಕಾಗಿಯೂ ಅಲ್ಲ ಎಂದು ಮನವರಿಕೆಯಾಗುತ್ತದೆ.
-
ವಿದೇಶವಾಸಿ
ಸಾಮಾನ್ಯವಾಗಿ ವಿದೇಶ ಪ್ರವಾಸಕ್ಕೆ ಹೋದಾಗ ಅಲ್ಲಿಯ ಪ್ರವಾಸಿ ತಾಣಗಳನ್ನು ನೋಡಿ ಖುಷಿ ಪಡುವುದು ಒಂದು ಕಡೆಯಾದರೆ, ಅಲ್ಲಿ ಹೊಸತು ಏನಾದರೂ ಇದೆಯೇ ಎಂದು ಹುಡುಕುವುದು ಇನ್ನೊಂದು. ಇತ್ತೀಚೆಗೆ ನಾನು ಇಂಡೋನೇಷ್ಯಾದ ಬಾಲಿಗೆ ಹೋದಾಗ ಕಂಡದ್ದನ್ನು ನಿಮಗೆ ಹೇಳಬೇಕು. ಇದು ಈಗಾಗಲೇ ಬಹಳ ಕಡೆಗಳಲ್ಲಿ ಇದ್ದಿರಬಹುದು, ಆದರೆ ನಾನು ಮೊದಲು ನೋಡಿದ್ದು ಬಾಲಿಯಲ್ಲಿ. ಇಂಡೋನೇಷ್ಯಾದ ಬಾಲಿ ಹೆಚ್ಚು ಕಮ್ಮಿ ಭಾರತದ ಗೋವಾ ಇದ್ದಂತೆಯೇ ಇದೆ. ವ್ಯತ್ಯಾಸವೆಂದರೆ, ಗೋವಾಕ್ಕೆ ಹೋಲಿಸಿದರೆ ಬಾಲಿ ಶಿಸ್ತುಬದ್ಧವಾಗಿಯೂ, ಶ್ರೀಮಂತವಾಗಿಯೂ ಕಾಣುತ್ತದೆ. ಅದರೊಂದಿಗೆ ಅಲ್ಲಿಯ ಪ್ರವಾಸಿ ತಾಣಗಳು, ಸಂಸ್ಕೃತಿ, ಊಟ-ತಿಂಡಿ, ಇತ್ಯಾದಿಗಳು ಗಮನ ಸೆಳೆಯುತ್ತವೆ.
ಬಾಲಿಯಲ್ಲಿ ಇವೆಲ್ಲದರ ಸಂತೋಷವನ್ನು ನಾನು ಸವಿದಿದ್ದೇನೆ. ಇದರೊಂದಿಗೆ ನಾನು ಕಂಡ ಹೊಸದೊಂದು ವಿಷಯವನ್ನು ನಿಮಗೆ ಹೇಳಬೇಕು. ಏನೋ ಒಂದು ಮಹತ್ತರವಾದ ವಿಷಯವನ್ನು ಹೇಳುತ್ತೇನೆ, ಯಾರೂ ನೋಡದಂಥದ್ದನ್ನು ನಾನು ನೋಡಿಕೊಂಡು ಬಂದಿದ್ದೇನೆ, ಇದು ಬಾಲಿಯಲ್ಲಿ ನೋಡಲೇಬೇಕಾದ ಸ್ಥಳ ಎಂದು ಖಂಡಿತವಾಗಿಯೂ ಹೇಳುವುದಿಲ್ಲ. ಆದರೆ ನಾನು ಕಂಡದ್ದನ್ನು ಹೇಳದೆಯೇ ಇರುವಂತೆಯೂ ಇಲ್ಲ. ಆ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಸಾಮಾನ್ಯವಾಗಿ ಸಾರ್ವಜನಿಕ ಮೂತ್ರಖಾನೆಗಳು ಎಂದರೆ ಜನ ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಇರುತ್ತದೆ. ಅದರಲ್ಲೂ ಗಂಡಸರ ಮೂತ್ರಖಾನೆಯಂತೂ ಕೇಳುವುದೇ ಬೇಡ.
ಯಾವುದೋ ಸುಸಜ್ಜಿತವಾದ ಆಸ್ಪತ್ರೆಯಲ್ಲಿ, ಹೋಟೆಲ್ನಲ್ಲಿ ಅಥವಾ ಏರ್ಪೋರ್ಟ್ನಂತಹ ಜಾಗಗಳಲ್ಲಿ ತಾಸಿಗೊಮ್ಮೆಯೋ, ಘಳಿಗೆಗೊಮ್ಮೆಯೋ ಸ್ವಚ್ಛ ಮಾಡಲು ಜನ ಇರುತ್ತಾರೆ. ಅದೇ ಒಂದು ಸಾಮಾನ್ಯ ಪಟ್ಟಣದ ಬಸ್ ನಿಲ್ದಾಣದ ಮೂತ್ರಖಾನೆಯನ್ನು ಒಮ್ಮೆ ನೋಡಿಕೊಂಡು ಬರಬೇಕು ಅಥವಾ ಊಹಿಸಿಕೊಂಡರೂ ಸಾಕು. ಅಲ್ಲಿಯ ಗಲೀಜು, ಗಬ್ಬು ವಾಸನೆ, ನರಕ ಬೇರೆ ಎ ಇದೆ ಎಂದು ಅನ್ನಿಸುವುದೆ ಇಲ್ಲ. ನರಕ ಎಲ್ಲಿದೆ ಎಂದರೆ, ನಮ್ಮ ಕಾಲ ಬುಡದಲ್ಲಿಯೇ! ಕೆಲವು ಸಾರ್ವಜನಿಕ ಮೂತ್ರಖಾನೆಗಳಲ್ಲಿ ಇವತ್ತಿಗೂ ಮೂತ್ರ ಹಿಡಿದುಕೊಳ್ಳುವ ಬಟ್ಟಲು (ಯುರಿನಲ್ ಬೌಲ) ಇಲ್ಲ.
ಇದನ್ನೂ ಓದಿ: Kiran Upadhyay Column: ಎಲ್ಲ ಕಳೆದುಕೊಂಡರೂ ಬದುಕನ್ನು ಗೆದ್ದ
ಮೂತ್ರಖಾನೆ ಎಂಬ ಹೆಸರಿನಲ್ಲಿ ಕಟ್ಟಿದ ಒಂದು ಸಣ್ಣ ಕಟ್ಟಡದ ಒಳಗೆ, ಮಧ್ಯದಲ್ಲಿ ಆಚೆ ಈಚೆ ಕಾಣದಂತೆ ಹಾಕಿದ ಸಣ್ಣ ಗೋಡೆ ಮತ್ತು ಮುಂದಿರುವ ಗೋಡೆಗೆ ಅಂಟಿಸಿದಂತಿರುವ, ನೀರು ಹರಿಸುವ ನಳದಂತಹ ವ್ಯವಸ್ಥೆ. ಅದೂ ಕೂಡ ಹಳೆಯದಾಗಿ, ತುಕ್ಕು ಹಿಡಿದು, ಮೂತ್ರದಂತೆಯೇ ಸಣ್ಣದಾಗಿ ನೀರು ಸುರಿಸುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಗಂಡಸರು ಮೂತ್ರ ವಿಸರ್ಜಿಸಿದಾಗ, ಕೆಳಗೆ ಇರುವ ಸಣ್ಣ ಕಾಲುವೆಯಲ್ಲಿ ಹರಿದು ಹೋಗುವುದಕ್ಕಿಂತಲೂ ಗೋಡೆಗೆ ತಾಗಿ ಕಾಲಿಗೆ ಸಿಡಿಯುವುದೇ ಹೆಚ್ಚು.
ಕ್ರಮೇಣ ಯೂರಿನಲ್ ಬೌಲ್ ಬಂತಾದರೂ ಅದೇ ಕಥೆ. ಮೂತ್ರ ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಅದು ಮಾಡುತ್ತದೆಯಾದರೂ, ಸಿಡಿಯದಂತೆ ತಡೆಹಿಡಿಯಲು ಅದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕಾಗಿ ಬೌಲ್ ಒಳಗೆ ಚಿಕ್ಕ ಚಿಕ್ಕ ರಂಧ್ರಗಳಿರುವ ಅಥವಾ ಸಣ್ಣ ಹುಲ್ಲಿನಂತೆ ಇರುವ ವೃತ್ತಾಕಾರದ ಪ್ಲಾಸ್ಟಿಕ್ ತುಂಡನ್ನು (ಯೂರಿನಲ್ ಮ್ಯಾಟ) ಇಡುತ್ತಿದ್ದರು, ಈಗಲೂ ಇಡುತ್ತಾರೆ. ಅದರಿಂದ ಶೇಕಡ ತೊಂಬತ್ತರಷ್ಟು ಸಿಡಿಯುವಿಕೆ ಕಡಿಮೆಯಾದರೂ ಸಂಪೂರ್ಣವಾಗಿ ನಿಲ್ಲಲಿಲ್ಲ.
ಮೂತ್ರ ವಿಸರ್ಜನೆಯ ನಂತರ ಕೈ ತೊಳೆಯುವುದಕ್ಕಿಂತಲೂ ಕಾಲು ತೊಳೆಯುವ ಅವಶ್ಯಕತೆಯೇ ಹೆಚ್ಚು ಇದೆ ಎಂದು ನನಗೆ ಎಷ್ಟೋ ಬಾರಿ ಅನಿಸಿದ್ದಿದೆ. ಗಂಡಸರು ಕೂಡ ಕುಳಿತು ಮೂತ್ರ ವಿಸರ್ಜನೆ ಮಾಡಬೇಕು ಎಂಬ ಪದ್ಧತಿಯನ್ನು ನಮ್ಮ ಹಿರಿಯರು ಮಾಡಿಟ್ಟಿದ್ದು ಇದರ ಸಲುವಾಗಿಯೇ ಹೊರತು ಬೇರೆ ಯಾವ ಕಾರಣಕ್ಕಾಗಿಯೂ ಅಲ್ಲ ಎಂದು ಮನವರಿಕೆಯಾಗುತ್ತದೆ. ಇದು ಮೂತ್ರಖಾನೆಯ ಕಥೆಯಾದರೆ, ಇನ್ನು ಶೌಚಾಲಯದ ಕಥೆ (ವ್ಯಥೆ)ಯನ್ನಂತೂ ಕೇಳುವುದೇ ಬೇಡ. ಅದೆಷ್ಟೋ ಸಾರ್ವಜನಿಕ ಶೌಚಾಲಯಗಳಲ್ಲಿ ನೀರೇ ಇರುವುದಿಲ್ಲ. ಇನ್ನು ಟಿಶ್ಯೂ ಪೇಪರ್ ಅಂತೂ ದೂರದ ಮಾತು. ಹಾಗಿರುವಾಗ ಶೌಚಾಲಯಗಳು ಸ್ವಚ್ಛವಾಗಿರಬೇಕು ಎಂದರೆ ಹೇಗೆ ಸಾಧ್ಯ? ಎಷ್ಟೋ ಶೌಚಾಲಯಗಳಿಗೆ ಬೋರ್ಡ್ ಇಲ್ಲದಿದ್ದರೂ, ದೂರದಲ್ಲಿದ್ದೂ ವಾಸನೆಯಿಂದಲೇ ಗುರುತಿಸಬಹುದು.
ಕಳೆದ ಎರಡು ದಶಗಳ ಹಿಂದಿನವರೆಗೂ ಇವೆಲ್ಲ ಸಾಮಾನ್ಯವಾಗಿದ್ದವು. ಬಾಲಿಯಲ್ಲಿ ಒಂದು ಮೂತ್ರ ಖಾನೆಗೆ ಹೋದಾಗ ಹೊಸ ಆವಿಷ್ಕಾರವೊಂದನ್ನು ಕಂಡೆ. ಅದೇನೂ ರಾಕೆಟ್ ಸೈ ಅಲ್ಲ, ತೀರಾ ಸರಳವಾದ, ಸುಲಭವಾಗಿ ಅಳವಡಿಕೊಳ್ಳಬಹುದಾದ ವಿಷಯ. ಒಂದು ಮೂತ್ರಖಾನೆಯಲ್ಲಿ ಯೂರಿನಲ್ ಬೌಲ್ಗೆ ಸುಮಾರು ಆರರಿಂದ ಎಂಟು ಇಂಚು ಎತ್ತರದ ಪ್ಲಾಸ್ಟಿಕ್ ತಡೆಗೋಡೆ ಹಾಕಿದ್ದು ಕಂಡಿತು. ನಾವು ನಿಂತು ಮೂತ್ರ ಮಾಡುವ ಜಾಗದಲ್ಲಿ ಇದನ್ನು ಅಳವಡಿಸಿದ್ದರಿಂದ, ಇದು ಮೂತ್ರ ನಮಗೆ ಸಿಡಿಯದಂತೆ ತಡೆಯುತ್ತಿತ್ತು. ಆವತ್ತಿನ ಮಟ್ಟಿಗೆ ಅದೊಂದು ದೊಡ್ಡ ಆವಿಷ್ಕಾರವೇ ಹೌದು ಎಂದೆನಿಸಿತು.
ಇದನ್ನು ಕಂಡು ಹಿಡಿಯಲು ಇಷ್ಟು ವರ್ಷ ಬೇಕಾಗಿತ್ತೇ ಎಂದೆನಿಸಿತು. ಅಬ್ಬಬ್ಬಾ ಎಂದರೆ ನೂರು ಇನ್ನೂರು ರೂಪಾಯಿ ಖರ್ಚಾಗಬಹುದು. ಆದರೆ ಅದರಿಂದ ಆಗುವ ಪ್ರಯೋಜನ? ಮೂತ್ರವಾಗಲೀ, ಫ್ಲಶ್ನಿಂದ ಕೆಳಗೆ ಬೀಳುವ ನೀರಾಗಲೀ ಕಾಲಿಗೆ ಸಿಡಿಯುವುದಿಲ್ಲ, ನೆಲವನ್ನು ತೋಯಿಸುವುದಿಲ್ಲ. ಆದ್ದರಿಂದ ವಾಸನೆಯೂ ಇಲ್ಲ. ಇದರ ಜತೆಗೆ, ನೀರನ್ನೇ ಬಳಸದೆ ಮೂತ್ರದ ಬಟ್ಟಲನ್ನು ಸ್ವಚ್ಛಗೊಳಿಸುವ ತಂತ್ರಜ್ಞಾನವೂ ಇತ್ತೀಚಿನ ದಿನಗಳಲ್ಲಿ ಬಳಕೆಯಲ್ಲಿದೆ.
ನೀರನ್ನೇ ಬಳಸದ ಮೂತ್ರದ ಬಟ್ಟಲು (Waterless Urinal Bowl) ಇತ್ತೀಚೆಗೆ ಜನಪ್ರಿಯವೂ ಆಗುತ್ತಿದೆ. ಇದೂ ಕೂಡ ಹೊಸ ಆವಿಷ್ಕಾರವಲ್ಲ. ಸುಮಾರು ಎರಡು ದಶಕದ ಹಿಂದೆಯೇ ‘ವಾಟರ್ಲೆಸ್’ ಹೆಸರಿನ ಸಂಸ್ಥೆ ಈ ಬದಲಾವಣೆ ತರಲು ಪ್ರಯತ್ನಿಸಿತು. ಇಂದು ಸ್ಯಾನಿಟರಿ ವೇರ್ ತಯಾರಿಸುವ ಬಹಳಷ್ಟು ಕಂಪನಿಗಳು ಇದನ್ನು ತಯಾರಿಸುತ್ತಿವೆ.
ಯುರೋಪ್ನ ಬಹುತೇಕ ರಾಷ್ಟ್ರಗಳು, ಅಮೆರಿಕಾ, ರಷ್ಯಾದಂತಹ ಅಭಿವೃದ್ಧಿ ಹೊಂದಿದ ದೇಶದ ಹೆಚ್ಚಿನ ಭಾಗದಲ್ಲಿ ಈಗಾಗಲೇ ಇದು ಚಾಲ್ತಿಯಲ್ಲಿದ್ದು, ಈಗ ಕೊಲ್ಲಿ ರಾಷ್ಟ್ರಗಳಿಗೂ ಲಗ್ಗೆ ಇಡುತ್ತಿದೆ. ಒಂದು ಹನಿ ನೀರನ್ನೂ ಬಳಸದೇ ಕಾರ್ಯ ನಿರ್ವಹಿಸುವ ಈ ಬಟ್ಟಲಿನಲ್ಲಿರುವುದು ಎರಡು ಪ್ರಮುಖ ವಸ್ತುಗಳು. ಒಂದು, ಇಕೋ ಟ್ರ್ಯಾಪ್. ಮತ್ತೊಂದು, ಜೆಲ್. ತಂತ್ರಜ್ಞಾನ ಬಹಳ ಸರಳ.
ಗುರುತ್ವಾಕರ್ಷಣೆಯಿಂದ ಮೂತ್ರ ಇಕೋ ಟ್ರ್ಯಾಪ್ ಮತ್ತು ಅದರ ಒಳಪದರದಲ್ಲಿರುವ ಜೆಲ್ನಲ್ಲಿ ಇಳಿದು, ಡ್ರೈನ್ ಪೈಪ್ ಮುಖಾಂತರ ಹರಿದು ಹೋಗುತ್ತದೆ. ಮೂತ್ರಕ್ಕಿಂತ ಹಗುರವಾಗಿರುವ ಜೆಲ್ ಮೇಲೆ ತೇಲುತ್ತಿದ್ದು, ವಾಸನೆ ಬರದಂತೆ ತಡೆಗಟ್ಟುತ್ತದೆ. ಮೇಲಿನ ಬೌಲ್ ಸ್ವಚ್ಛ ಮಾಡಲು ಬೇಕಾಗುವುದು ತಿಂಗಳಿಗೆ ಒಂದು ಬಕೆಟ್ ನೀರು. ಅದೂ ಇಲ್ಲವೆಂದರೆ, ಇದಕ್ಕಾಗಿಯೇ ತಯಾರಿಸಿದ ರಾಸಾಯನಿಕ ದ್ರವ್ಯಗಳನ್ನು ಬಳಸಬಹುದು.
ವರ್ಷಕ್ಕೆ ಎರಡು ಬಾರಿ ಇಕೋ ಟ್ರ್ಯಾಪ್ನಲ್ಲಿರುವ ಕ್ಯಾಟ್ರಿಜ್ ಬದಲಾಯಿಸುವುದು, ತಿಂಗಳಿಗೆ ಒಂದೋ ಎರಡೋ ಸಲ (ಬಳಕೆಗೆ ತಕ್ಕಂತೆ) ಜೆಲ್ ಸೇರಿಸುವುದಷ್ಟೇ ಕೆಲಸ. ಇದೆಲ್ಲ ಮೂರರಿಂದ ನಾಲ್ಕು ನಿಮಿಷ ದಲ್ಲಿ ಮುಗಿದು ಹೋಗುತ್ತದೆ. ಇಪ್ಪತ್ತು ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಗೆ ದೊರಕುವ ಒಂದು ಬೌಲ, ಪ್ರತಿ ನಿತ್ಯ ನಾಲ್ಕು ನೂರರಂತೆ, ವರ್ಷಕ್ಕೆ ಒಂದೂವರೆ ಲಕ್ಷ ಲೀಟರ್ ನೀರು ಉಳಿಸುತ್ತದೆ. ವಾಸನೆ ರಹಿತವೂ, ಸೂಕ್ಷ್ಮಾಣು ಮುಕ್ತವೂ ಆಗಿರುವ, ಇದರ ನಿರ್ವಹಣೆಯ ವೆಚ್ಚ ಒಂದು ಬಳಕೆಗೆ ಏಳು ಪೈಸೆಗಿಂತಲೂ ಕಡಿಮೆ ಎಂದರೆ ಇನ್ನೇನು ಬೇಕು? ಇದರೊಂದಿಗೆ ಈಗ ನೀರನ್ನು ಬಳಸದ ಶೌಚಗಳೂ ಜನಪ್ರಿಯವಾಗುತ್ತಿವೆ.
ಎರಡು ಬಗೆಯ ನೀರನ್ನೇ ಬಳಸದ ಶೌಚಾಲಯಗಳು ಮಾರುಕಟ್ಟೆಗೆ ಬಂದಿವೆ. ಮೊದಲು ಬಯಲು ಶೌಚದ ಕಾಲದಲ್ಲಿ ಒಂದು ಬಿಂದಿಗೆ ನೀರಿನಲ್ಲಿ ಎಲ್ಲಾ ಕಾರ್ಯ ಮುಗಿಯುತ್ತಿತ್ತು. ಆ ಪದ್ಧತಿ ಒಳ್ಳೆಯದಲ್ಲ ಎನ್ನುವುದನ್ನು ಒಪ್ಪುವಂತದ್ದೇ. ಆದರೆ ಸೆಪ್ಟಿಕ್ ಶೌಚಾಲಯಗಳು ಬಂದ ನಂತರ ನೀರಿನ ಬಳಕೆಯೂ ಹೆಚ್ಚಾಯಿತು, ಜೊತೆಗೆ ನಿರ್ವಹಣೆ ಸರಿಯಾಗದಿದ್ದಾಗ ಅಂತರ್ಜಲ ಮಲಿನವಾಗತೊಡಗಿತು. ಆರಂಭದ ದಿನಗಳಲ್ಲಿ ಒಮ್ಮೆ ಫ್ಲಶ್ ಮಾಡಿದರೆ ಕಮ್ಮಿ ಎಂದರೂ ಹದಿನೈದರಿಂದ ಇಪ್ಪತ್ತು ಲೀಟರ್ ನೀರು ಹರಿದು ಹೋಗುತ್ತಿತ್ತು.
ಇತ್ತೀಚೆಗೆ ಬರುವ ಫ್ಲಶ್ ಟ್ಯಾಂಕ್ಗಳು ಆರು ಲೀಟರ್ ಸಾಮರ್ಥ್ಯವುಳ್ಳದ್ದು. ಅದೂ ಹೆಚ್ಚು ಎಂದೆನಿಸಿದಾಗ ಬದಲಿ ವ್ಯವಸ್ಥೆಗೆ ಹುಡುಕಾಟ ಆರಂಭವಾಯಿತು. ಇದರ ಪರಿಣಾಮವೇ ಕಾಂಪೋ ಶೌಚಾಲಯ. ಈ ಶೌಚಾಲಯದಲ್ಲಿ ತ್ಯಾಜ್ಯ ಸಂಗ್ರಹಿಸಲು ಕೆಳಗಡೆ ಕಪ್ಪು ಬಣ್ಣದ ಒಂದು ತೊಟ್ಟಿ ಇರುತ್ತದೆ.
ತೊಟ್ಟಿಯೊಳಕ್ಕೆ ಗಾಳಿ ಬರಲು ಒಂದು, ಆವಿ ಹೊರಗೆ ಹೋಗಲು ಒಂದು, ಹೀಗೆ ಎರಡು ಕೊಳವೆ ಗಳಿರುತ್ತವೆ. ಕಪ್ಪು ಬಣ್ಣದ ತೊಟ್ಟಿ ಸೂರ್ಯನ ಶಾಖ ಎಳೆದುಕೊಂಡು ತೊಟ್ಟಿಯೊಳಗಿನ ಗಾಳಿಯ ಉಷ್ಣತೆ ಹೆಚ್ಚಿಸುತ್ತದೆ. ಇದರಿಂದ ಶೇಕಡಾ ತೊಂಬತ್ತರಷ್ಟು ತ್ಯಾಜ್ಯ ಆವಿಯಾಗಿ ಹೋಗುತ್ತದೆ. ಈ ಕ್ರಿಯೆಯಲ್ಲಿ ವಾಸನೆ, ರೋಗಕಾರಕ ಬ್ಯಾಕ್ಟೀರಿಯಾಗಳೆಲ್ಲ ನಶಿಸಿಹೋಗುತ್ತವೆ. ಉಳಿದ ತ್ಯಾಜ್ಯ ಗೊಬ್ಬರಕ್ಕೆ! ಅಯ್ಯೋ, ಇದೇನು ಅನ್ನಬೇಡಿ. ಇದಕ್ಕೆ ಅಯ್ಯೋ ಎನ್ನುವುದಾದರೆ ವಿಮಾನ ಪ್ರಯಾಣ ಮಾಡುವಂತಿಲ್ಲ.
ಏಕೆಂದರೆ ವಿಮಾನದಲ್ಲಿರುವ ಶೌಚಾಲಯ ಹೆಚ್ಚು ಕಮ್ಮಿ ಇದೇ ಮಾದರಿಯದ್ದು, ಸ್ವಲ್ಪ ವ್ಯತ್ಯಾಸ ಅಷ್ಟೆ. ರೈಲಿನಲ್ಲಿರುವ ಶೌಚಾಲಯಕ್ಕಿಂತ ಇದು ಒಳ್ಳೆಯದಲ್ಲವೇ? ಇನ್ನೊಂದು ಮಾದರಿಯ ಶೌಚಾಲಯ ತ್ಯಾಜ್ಯವನ್ನು ಸುಡುವಂಥದ್ದು. ಇದು ವಿದ್ಯುತ್ ಚಾಲಿತ. ಕಮೋಡಿಗೆ ಒಂದು ಸ್ವಿಚ್ ಇರುತ್ತದೆ. ಶೌಚ ಮುಗಿಸಿ ಫ್ಲಶ್ ಮಾಡುವ ಬದಲು ಸ್ವಿಚ್ ಅಮುಕಿದರೆ ಆಯಿತು. ಕೆಳಗಿನ ತೊಟ್ಟಿಯಲ್ಲಿ ಶೇಖರಗೊಂಡ ತ್ಯಾಜ್ಯ ಹತ್ತರಿಂದ ಹದಿನೈದು ನಿಮಿಷದಲ್ಲಿ ಸುಟ್ಟು ಬೂದಿಯಾಗುತ್ತದೆ. ಹೊಗೆ ಹೋಗಲು ಹೊರಗಡೆ ಕೊಳವೆ ಅಳವಡಿಸಿರುವುದರಿಂದ ಮನೆಯ ಒಳಗೆ ವಾಸನೆಯಾಗಲೀ ಹೊಗೆಯಾಗಲೀ ಬರುವುದಿಲ್ಲ.
ಇದು ಒಂದು ರೀತಿಯಲ್ಲಿ ವಿದ್ಯುತ್ ಚಿತಾಗಾರದಲ್ಲಿ ಶವ ಸುಟ್ಟಂತೆಯೇ. ಈ ಎರಡೂ ಮಾದರಿ ನಮ್ಮ ಮನಸ್ಥಿತಿಗೆ ಒಗ್ಗಲಿಕ್ಕಿಲ್ಲ. ಪಶ್ಚಿಮದ ಮತ್ತು ದೂರದ ಪೂರ್ವ ದೇಶಗಳಲ್ಲಿ ಮೊದಲಿನಿಂದಲೂ ಶೌಚಾಲಯದಲ್ಲಿ ನೀರಿನ್ನು ಬಳಸುವ ಪರಿಪಾಠ ಬಹುತೇಕ ಇಲ್ಲವಾದ್ದರಿಂದ, ಅಲ್ಲಿ ಹೆಚ್ಚೇನೂ ಫರಕ್ ಬೀಳುವುದಿಲ್ಲ. ಎಷ್ಟೋ ಕಡೆ ನಲ್ಲಿ ನೀರಿಗೆ ತೆರಿಗೆ ಕಟ್ಟುವಂತೆ ಒಳಚರಂಡಿಯ ನೀರಿಗೂ ತೆರಿಗೆ ಕಟ್ಟಬೇಕಾಗುತ್ತದೆ. ಒಳಚರಂಡಿಯ ನೀರನ್ನು ಸಂಸ್ಕರಿಸಿ, ಶುದ್ಧಗೊಳಿಸುವುದಕ್ಕೂ ಅಷ್ಟೇ ಖರ್ಚಿದೆ.
ಆದ್ದರಿಂದ ಇದನ್ನು ಭವಿಷ್ಯದ ಶೌಚಾಲಯ ಎಂದು ಹೇಳುವುದಿದೆ. ಜಲರಹಿತ ಶೌಚಾಲಯ ತಯಾರಿಸಿ, ನೀರಿಲ್ಲದ ಪ್ರದೇಶಗಳಲ್ಲಿ ವಿತರಿಸುವುದಕ್ಕೆ ಬಿಲ್ ಗೇಟ್ಸ್ ಫೌಂಡೇಶನ್ ಕಳೆದ ಮೂರು-ನಾಲ್ಕು ವರ್ಷ ಗಳಿಂದ ಪ್ರತಿ ವರ್ಷ ಸುಮಾರು ಐದರಿಂದ ಆರು ಲಕ್ಷ ಡಾಲರ್ ದೇಣಿಗೆಯಾಗಿ ನೀಡುತ್ತಿದೆ. ನನ್ನ ದೃಷ್ಟಿಯಲ್ಲಿ, ಶೌಚಾಲಯ, ಮೂತ್ರಾಲಯದ ವಿಷಯದಲ್ಲಿ ಆದ ಸಣ್ಣ ಸಣ್ಣ ಸುಧಾರಣೆಗಳೂ ಯಾವ ತಂತ್ರಜ್ಞಾನಕ್ಕೂ ಕಡಿಮೆಯೇನೂ ಅಲ್ಲ. ಆದರೂ ಇನ್ನಷ್ಟು ಸುಧಾರಣೆ ಬೇಕಿದೆ.
ರಸ್ತೆ, ನೀರು, ವಿದ್ಯುತ್ತು ಇತ್ಯಾದಿಗಳಂತೆ ಶೌಚಾಲಯ ಮತ್ತು ಮೂತ್ರಖಾನೆಗಳ ಅಭಿವೃದ್ಧಿಯ ಕಡೆಗೂ ಸರಕಾರ ಗಮನ ಹರಿಸಬೇಕಿದೆ. ಸ್ವಚ್ಛ ಭಾರತದ ಅಡಿಯಲ್ಲಿ ತಕ್ಕಮಟ್ಟಿಗೆ ಬದಲಾವಣೆಗಳು ಆಗಿವೆಯಾದರೂ, ಸಾಲದು, ಸಾಲದು.